ರಾಜಕೀಯ ಸನ್ಯಾಸತ್ವ ಯಾವಾಗ ತೆಗೆದುಕೊಳ್ಳುತ್ತೀರಿ?

Update: 2016-01-09 18:41 GMT

ವಿವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನಿಂದ ಪಕ್ಷದ ನಾಯಕರೆಲ್ಲ ಸಂತೋಷವಾಗಿ ನಳನಳಿಸುತ್ತಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿಗೆ ಅಚ್ಚರಿಯಾಯಿತು. ಅರೆ! ಬಿಜೆಪಿ ಸೋತಿದ್ದರೂ ಇವರೇಕೆ ಇಷ್ಟೊಂದು ಸಂತೋಷದಿಂದ ಇದ್ದಾರೆ?
ಕಾಸಿ ನೇರವಾಗಿ ಯಡಿಯೂರಪ್ಪ ಬಳಿಗೆ ತೆರಳಿದ. ಈವರೆಗೆ ಪತ್ರಿಕಾಗೋಷ್ಠಿಯಲ್ಲಿ ಒಂದು ಉಪ್ಪಿಟ್ಟು, ಶೀರ ಕೊಡಿಸಿದವರು ತಾವಾಗಿಯೇ ಸಂತೋಷದಿಂದ ಕಾಸಿಯ ಬಾಯಿಗೆ ಲಡ್ಡು ತಳ್ಳಿದರು. ಲಡ್ಡನ್ನು ಗಂಟಲಲ್ಲಿ ಇಳಿಸುತ್ತಲೇ ‘‘ಎಂತ ವಿಶೇಷ ಸಾರ್? ಬಿಜೆಪಿ ಸೋತದ್ದಕ್ಕೆ ಇಷ್ಟು ಸಂತೋಷಾನಾ....?’’
‘‘ಬಿಜೆಪಿ ಸೋತು ಗೆದ್ದಿದೆ ಕಣ್ರೀ...ಇಡೀ ಬಿಜೆಪಿ ಕಾರ್ಯಕರ್ತರು ತಳಮಟ್ಟದಲ್ಲಿ ಪಟಾಕಿ ಸಿಡಿಸಿ ಸಂತೋಷ ವ್ಯಕ್ತಪಡಿಸುತ್ತಾ ಇದ್ದಾರೆ...’’ ಯಡಿಯೂರಪ್ಪ ತಮ್ಮ ಬಿಳಿ ಮೀಸೆಯನ್ನು ಚೂಪು ಮಾಡಿಕೊಂಡರು.
‘‘ಯಾಕೆ ಸಾರ್? ಬಿಜೆಪಿ ಬಗ್ಗೆ ತಮ್ಮ ಕಾರ್ಯಕರ್ತರೂ ಭರವಸೆ ಕಳೆದುಕೊಂಡಿದ್ದಾರಾ?’’ ಕಾಸಿ ಅರ್ಥವಾಗದೇ ಕೇಳಿದ.
‘‘ಅಲ್ಲ ಕಣ್ರೀ...ಬಿಜೆಪಿ ಸೋತ್ರೂ ಗೆದ್ದ ಹಾಗೆಯೇ. ಈ ಫಲಿತಾಂಶ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಲಾಭ ತಂದು ಕೊಡಲಿದೆ...’’ ಯಡಿಯೂರಪ್ಪ ರಾಜಕೀಯ ವಿಶ್ಲೇಷಣೆ ಮಾಡತೊಡಗಿದರು.
 ‘‘ಅದು ಹೇಗೆ ವಿವರಿಸಿ ಸಾರ್’’ ಕಾಸಿ ಪೆನ್ನು, ನೋಟ್‌ಬುಕ್ ಕೈಗೆತ್ತಿಕೊಂಡ.
‘‘ನೋಡ್ರಿ...ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇತ್ತು. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎನ್ನುವ ಭರವಸೆ ಎಲ್ಲರಿಗೂ ಇತ್ತು....’’
‘‘ಆದರೆ ಬಿಜೆಪಿ ಸೋತಿತಲ್ಲ ಸಾರ್?’’ ಕಾಸಿ ಅಳುಮೋರೆ ಹಾಕಿಕೊಂಡು ಕೇಳಿದ.
‘‘ಬಿಜೆಪಿ ಗೆಲ್ಲುವುದರಲ್ಲಿತ್ತಾ? ಅಷ್ಟರಲ್ಲಿ ನಮ್ಮ ಶಿವಮೊಗ್ಗದ ಈಶ್ವರಪ್ಪನವರು ‘‘ಬಿಜೆಪಿ ಸೋತದ್ದೇ ಆದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ...’’ ಎಂದು ಘೋಷಿಸಿ ಬಿಟ್ಟರಲ್ಲ...ಅದರಿಂದ ಇಡೀ ಪಕ್ಷ ರೋಮಾಂಚನಗೊಂಡಿತು...’’ ಯಡಿಯೂರಪ್ಪ ವಿವರಿಸತೊಡಗಿದರು.

‘‘ಅಲ್ಲ ಸಾರ್...ಪಾಪ ಅವರು ಹಾಗೆ ಘೋಷಿಸಿಯೂ ಪಕ್ಷ ಗೆಲ್ಲಲಿಲ್ಲವಲ್ಲ?’’ ಅರ್ಥವಾಗದೇ ಮತ್ತೆ ಕೇಳಿದ. ‘‘ಯಾವಾಗ ಬಿಜೆಪಿ ಸೋತರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದು ಈಶ್ವರಪ್ಪ ಘೋಷಿಸಿದರೋ, ಆಗ ನಾವೆಲ್ಲರೂ ಜೊತೆಗೂಡಿ ಬಿಜೆಪಿ ಸೋಲಿಸುವುದಕ್ಕೆ ಶ್ರಮಿಸಿದೆವು. ತಳಮಟ್ಟದಲ್ಲಿ ಕಾರ್ಯಕರ್ತರೂ ಪಕ್ಷದ ಈ ಸೋಲಿಗಾಗಿ ಬಹಳಷ್ಟು ದುಡಿದಿದ್ದಾರೆ...’’ ಎನ್ನುತ್ತಾ ಯಡಿಯೂರಪ್ಪ ತುಂಟ ನಗು ನಕ್ಕು ಕಾಸಿಯನ್ನು ನೋಡಿದರು.
ಕಾಸಿಯೋ ಆ ತುಂಟ ನಗುವಿಗೆ ಶೋಭಾ ಕರಂದ್ಲಾಜೆಯಂತೆ ನಾಚಿ ಕೇಳಿದ ‘‘ಸಾರ್...ಅಂದರೆ ಈಶ್ವರಪ್ಪ ಅವರು ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಕ್ಕಾಗಿ ನೀವೆಲ್ಲ ಬಿಜೆಪಿಯನ್ನು ಸೋಲಿಸಿದಿರಾ?’’
‘‘ನೋಡ್ರಿ...ಇತ್ತೀಚಿನ ದಿನಗಳಲ್ಲಿ ಈ ಈಶ್ವರಪ್ಪ ಅವರ ನಾಲಗೆ, ಇಡೀ ಬಿಜೆಪಿಯನ್ನು ನೆಕ್ಕಿ ಹಾಕುತ್ತಿದೆ. ಪಕ್ಷವನ್ನು ಉಳಿಸಿಕೊಳ್ಳಬೇಕಾದರೆ ಒಂದೋ ಈಶ್ವರಪ್ಪರನ್ನು ಕಿತ್ತು ಹಾಕಬೇಕು ಅಥವಾ ಅವರ ನಾಲಗೆಯನ್ನು ಕಿತ್ತು ಹಾಕಬೇಕು ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಇದನ್ನು ಈಶ್ವರಪ್ಪ ಅವರಿಗೂ ಹೇಳಿ ನೋಡಿದ್ದೆವು. ಆದರೆ ಅವರು ‘ನನ್ನ ನಾಲಗೆ ತಂಟೆಗೆ ಬಂದರೆ, ಈ ನಾಲಗೆ ಘಟಸರ್ಪವಾಗಿ ಇಡೀ ಬಿಜೆಪಿಯನ್ನೇ ನುಗ್ಗಿ ಹಾಕುತ್ತದೆ ಎಚ್ಚರ’ ಎಂದು ಹೇಳಿದ್ದರು. ಅವರನ್ನು ಕಿತ್ತು ಹಾಕಿದರೆ ಸಿದ್ದರಾಮಯ್ಯ ಅವರು ‘ನೋಡ್ರಿ...ಬಿಜೆಪಿಯೋರು ಕುರುಬ ನಾಯಕನಿಗೆ ಎಂತಹ ಸ್ಥಿತಿ ತಂದು ಬಿಟ್ರೂ...’ ಎಂದು ಊರೂರು ಹೇಳಿಕೊಂಡು ತಿರುಗುತ್ತಾನೆ. ಬಿಜೆಪಿಯಲ್ಲಿ ಇಟ್ಟುಕೊಂಡರೆ ಅವರ ನಾಲಗೆಯ ಕೊಳಚೆಯಿಂದ ಕಮಲದಲ್ಲಿರುವ ಕ-ವನ್ನು ತೆಗೆದು ಹಾಕಿ ಬರೇ ಮಲವನ್ನಷ್ಟೇ ಉಳಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗಿರುವಾಗ, ಬಿಜೆಪಿ ಸೋತರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಈಶ್ವರಪ್ಪ ಘೋಷಿಸಿದಾಗ ನಾವು ಸುಮ್ಮನಿರಲಿಕ್ಕೆ ಆಗುತ್ತದೆಯೇನ್ರೀ?್ಫ’’
‘‘ಅಂದರೆ ರಾಜಕೀಯ ಸನ್ಯಾಸವೆನ್ನುವುದು ಈಶ್ವರಪ್ಪ ಬಿಜೆಪಿಗೆ ನೀಡಿದ ಕೊಡುಗೆ ಅನ್ನುತ್ತೀರಾ...?’’ ಕಾಸಿ ದಿಗ್ಭ್ರಾಂತನಾದ.
‘‘ಹೌದು ಮತ್ತೆ? ಅವರ ಈ ಕೊಡುಗೆಯನ್ನು ಬಿಜೆಪಿ ತಿರಸ್ಕರಿಸುವುದಾದರೂ ಹೇಗೆ? ಈಶ್ವರಪ್ಪ ಸನ್ಯಾಸ ಸ್ವೀಕರಿಸುವುದಿದ್ದರೆ ವಿಧಾನಪರಿಷತ್‌ನಲ್ಲಿ ಮಾತ್ರವಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ನಾವು ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸೋಣ ಎಂದು ಪಕ್ಷದೊಳಗೆ ಗುಟ್ಟಾಗಿ ನಿರ್ಣಯ ಮಾಡಿದೆವು. ಹಣಬಲ, ಜನಬಲ ಎಲ್ಲವನ್ನೂ ಸೇರಿಸಿ ಈ ಬಾರಿ ನಾವು ಬಿಜೆಪಿಯನ್ನು ಸೋಲಿಸಿದ್ದೇವೆ. ಇದು ಬಿಜೆಪಿಯ ಪಾಲಿಗೆ ಬಹುದೊಡ್ಡ ಸಾಧನೆ. ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಈ ಗೆಲುವು ಭಾರೀ ಪರಿಣಾಮವನ್ನು ಮಾಡಲಿದೆ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದೆ...’’
‘‘ಸಾರ್... ಈಗ ಬಿಜೆಪಿ ಸೋತಿದೆ. ಆದರೆ ಈಶ್ವರಪ್ಪ ರಾಜಕೀಯ ಸನ್ಯಾಸದ ಬಗ್ಗೆ ಮಾತೇ ಆಡುತ್ತಾ ಇಲ್ಲ. ಒಂದು ವೇಳೆ ಅವರು ಮಾತಿಗೆ ತಪ್ಪಿದರೆ...’’ ಕಾಸಿ ಅಂಜುತ್ತಾ ಕೇಳಿದ.
‘‘ಮಾತಿಗೆ ಹೇಗ್ರೀ ತಪ್ಪುತ್ತಾರೆ? ಅವರೂ ದೇವೇಗೌಡರ ಹಾಗೆ ವಚನ ಭ್ರಷ್ಟರಾಗುತ್ತಾರ? ಹೇಳಿದ ಮಾತಿಗೆ ತಪ್ಪಿದರೆ ಈ ಕರ್ನಾಟಕದ ಪರಂಪರೆಗೆ ಏನ್ರೀ ಬೆಲೆ ಇರತ್ತೆ? ನಾಳೆ ವಿದೇಶಕ್ಕೆ ಹೋದಾಗ ನಾವು ಏನು ಹೇಳಬೇಕು ‘‘ವಚನ ಭ್ರಷ್ಟರ ನಾಡಿನಿಂದ ಬಂದಿದ್ದೇವೆ’’ ಎಂದು ಹೇಳಬೇಕೇ? ನಮ್ಮದು ಪುಣ್ಯಕೋಟಿ ಜನಿಸಿದ ನಾಡು.., ಜೆಡಿಎಸ್‌ನ ಕುಮಾರಸ್ವಾಮಿ ವಚನಭ್ರಷ್ಟರಾಗಿ ನನಗೆ ಮುಖ್ಯಮಂತ್ರಿ ಸ್ಥಾನ ವಂಚಿಸಿದರು. ಇದೀಗ ಈಶ್ವರಪ್ಪ ಅವರು ಭರವಸೆ ಕೊಟ್ಟು ವಂಚಿಸಲು ನೋಡಿದರೆ, ಮತದಾರರು ಸುಮ್ಮನೆ ಬಿಡುವುದಿಲ್ಲ. ಅವರ ಶಾಪ ಈಶ್ವರಪ್ಪರಿಗೆ ತಾಗಿಯೇ ತಾಗುತ್ತದೆ...’’ ಎಂದು ಕೆಂಡದ ಮಳೆ ಸುರಿಸತೊಡಗಿದರು. ಅದರ ಶಾಖ ತಾಳಲಾರದೆ ಕಾಸಿ ಅಲ್ಲಿಂದ ಈಶ್ವರಪ್ಪ ಮನೆಗೆ ಓಡಿದ.
***
‘‘ಯಾವಾಗ ಸನ್ಯಾಸತ್ವ ಸ್ವೀಕರಿಸುತ್ತೀರಿ ಸಾರ್...ಇಡೀ ರಾಜ್ಯವೇ ನಿಮ್ಮ ರಾಜಕೀಯ ಸನ್ಯಾಸತ್ವಕ್ಕೆ ಕಾಯುತ್ತಾ ಇದೆ...’’ ಕಾಸಿ ಕೇಳಿದ.
ಈಶ್ವರಪ್ಪ ಸಿಟ್ಟಾದರು ‘‘ನೋಡ್ರೀ...ಬರೇ ಬಿಜೆಪಿಯವರಷ್ಟೇ ಕಾಯ್ತಾ ಇದ್ದಾರೆ. ನಾನು ರಾಜಕೀಯ ತೊರೆಯುವ ನಿರ್ಧಾರ ಮಾಡಿರುವ ದಿನಗಳಿಂದ ಸಿದ್ದರಾಮಯ್ಯ ಅನ್ನ ನೀರು ಮುಟ್ಟುತ್ತಿಲ್ಲ. ಇಂದು ಮೂರು ಬಾರಿ ಫೋನ್ ಮಾಡಿ ‘ನೋಡ್ರಿ...ಅದೇನೇ ಆದರೂ ನೀವು ಬಿಜೆಪಿಯನ್ನು ತೊರೆಯಬಾರದು....’ ಎಂದು ಕೇಳಿಕೊಂಡರು. ಈ ಕಾಂಗ್ರೆಸ್ ನಾಯಕರಿಗಿರುವಷ್ಟು ಮಾನವೀಯತೆ ನಮ್ಮ ರಾಜಕೀಯ ನಾಯಕರಿಗಿಲ್ಲವಾಯಿತಲ್ಲ...’’ ಎನ್ನುತ್ತಾ ಗಳಗಳನೆ ಅಳತೊಡಗಿದರು.
‘‘ಅದಿರಲಿ ಸಾರ್. ರಾಜಕೀಯ ಸನ್ಯಾಸತ್ವ ಯಾವಾಗ ತೆಗೆದುಕೊಳ್ಳುತ್ತೀರಿ?’’ ಕಾಸಿ ನಿಷ್ಠುರವಾಗಿ ಕೇಳಿದ.
‘‘ನಾನು ಈಗಲೇ ಸನ್ಯಾಸತ್ವ ತೆಗೆದುಕೊಳ್ಳಲು ತಯಾರಿದ್ದೇನೆ...ಆದರೆ ಪೇಜಾವರಶ್ರೀ... ಬಿಸಿಯಾಗಿದ್ದಾರೆ... ಈಗ ಪರ್ಯಾಯ ಅಲ್ವೇನ್ರಿ...’’ ಈಶ್ವರಪ್ಪ ಅಸಹಾಯಕರಾಗಿ ಹೇಳಿದರು.
‘‘ಹಾಗಾದರೆ ಪರ್ಯಾಯ ಮುಗಿದ ಬಳಿಕ ಸನ್ಯಾಸತ್ವ ತೆಗೆದುಕೊಳ್ಳುತ್ತೀರಾ?’’ ಕಾಸಿ ಆಸೆಯಿಂದ ಕೇಳಿದ.
‘‘ತೆಗೆದುಕೊಳ್ಳುತ್ತಿದ್ದೆ. ಆದರೆ ನಾನು ಶೂದ್ರ. ಪೇಜಾವರರು ನನ್ನನ್ನು ಮುಟ್ಟಿಸಿಕೊಳ್ಳಲು ಒಪ್ಪಿಕೊಳ್ಳುತ್ತಾರೇನ್ರೀ...?’’ ಈಶ್ವರಪ್ಪ ಧರ್ಮ ಸೂಕ್ಷ್ಮವನ್ನು ಮುಂದಿಟ್ಟರು.
ಕಾಸಿಗೆ ಗೊಂದಲವಾಯಿತು ‘‘ಅಂದರೆ, ನಿಮಗೆ ಸನ್ಯಾಸತ್ವ ನೀಡಲಾಗುವುದಿಲ್ಲ ಎಂದು ಪೇಜಾವರಶ್ರೀ ಹೇಳಿದರೆ?’’ ನಿರಾಸೆಯಿಂದ ಕೇಳಿದ.
‘‘ಮುಖ್ಯವಾಗಿ ನನ್ನ ನಾಲಗೆಯನ್ನು ಕತ್ತರಿಸಿ ಅವರ ಕೈಗೆ ಕೊಟ್ಟರೆ, ನಾನು ಸನ್ಯಾಸತ್ವ ಪಡೆಯಲು ಯೋಗ್ಯನಾಗುತ್ತೇನಂತೆ...ಇದು ಸಾಧ್ಯವಿರುವ ಮಾತೇ...?’’ ಈಶ್ವರಪ್ಪ ಗಳಗಳನೇ ಅಳತೊಡಗಿದರು.
‘‘ಹಾಗಾದರೆ ಉಮಾಭಾರತಿಯವರ ಕೈಯಲ್ಲಿ ಸನ್ಯಾಸತ್ವ ಸ್ವೀಕರಿಸಿ ಸಾರ್...’’ ಕಾಸಿ ಪುಕ್ಕಟೆ ಸಲಹೆ ನೀಡಿದ.
‘‘ಉಮಾಭಾರತಿ ಗಂಗಾ ನದಿ ಶುಚಿಗೊಳಿಸುವುದರಲ್ಲಿ ಬಿಸಿಯಾಗಿದ್ದಾರೆ ಕಣ್ರೀ...ಅದು ಶುಚಿಯಾದ ಬಳಿಕ ನನಗೆ ಸನ್ಯಾಸತ್ವ ಕೊಡುತ್ತಾರಂತೆ...ಅಲ್ಲಿಯವರೆಗೆ ನಾನು ರಾಜಕೀಯದಲ್ಲಿ ಮುಂದುವರಿಯಬೇಕು ಎಂದು ಸಲಹೆ ಕೊಟ್ಟರು’’ ಎನ್ನುತ್ತಾ ಈಶ್ವರಪ್ಪ ಒಮ್ಮೆಲೆ ಹಲ್ಲು ಕಿರಿದರು.
ಇದು ಯಡಿಯೂರಪ್ಪ ಅವರ ಕಿವಿಗೆ ಅದು ಹೇಗೆ ಬಿತ್ತೋ, ನಡು ಬೀದಿಯಲ್ಲಿ ನಿಂತು ‘‘ವಚನ ಭ್ರಷ್ಟರು ವಚನ ಭ್ರಷ್ಟರು...ಇದು ವಚನ ಭ್ರಷ್ಟ ನಾಡು...’’ ಎಂದು ಅರಚಾಡತೊಡಗಿದರು.

helayya@gmail.com

Writer - *ಚೇಳಯ್ಯ

contributor

Editor - *ಚೇಳಯ್ಯ

contributor

Similar News