ಲಾಸ್ಟ್ ಬಸ್: ಸೈಕಾಲಾಜಿಕಲ್ ಥ್ರಿಲ್ಲರ್

Update: 2016-01-16 17:24 GMT

ನಸ್ಸು, ಭಯ ಮತ್ತು ವೌಢ್ಯ ಇವು ಮೂರನ್ನು ಇಟ್ಟುಕೊಂಡು ‘ಲಾಸ್ಟ್ ಬಸ್’ ಹತ್ತಿದ್ದಾರೆ ನಿರ್ದೇಶಕ ಅರವಿಂದ್ ನರಸಿಂಹರಾಜು. ಗಾಂಧಿನಗರದಲ್ಲಿ ಇದು ಇವರ ಪಾಲಿಗೆ ಲಾಸ್ಟ್ ಬಸ್ ಪಯಣವಾಗದೆ, ಅವರನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಪಯಣವಾಗುವುದರಲ್ಲಿ ಈ ಚಿತ್ರ ಖಂಡಿತ ಸಹಾಯ ಮಾಡಲಿದೆ. ಈ ಚಿತ್ರದಲ್ಲಿ ದೆವ್ವ ಇದೆ ಎಂದು ಎಲ್ಲೂ ಹೇಳಲಾಗುವುದಿಲ್ಲ. ಅಂತೆಯೇ ಮನಸ್ಸು ಮತ್ತು ಭಯದ ಪರಿಣಾಮಗಳೂ ಹೇಗೆ ನಮ್ಮನ್ನು ಕಂಗೆಡಿಸಬಹುದು ಎನ್ನುವುದನ್ನು ವಸ್ತುವಾಗಿಟ್ಟುಕೊಂಡು ಚಿತ್ರ ಮಾಡಿದ್ದಾರೆ. ಒಂದು ರೀತಿಯಲ್ಲಿ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ ಎನ್ನುವುದಕ್ಕೆ ಅಡ್ಡಿಯಿಲ್ಲ. ಬೇರೆ ಬೇರೆ ಕಾರಣಗಳಿಂದ, ಬೇರೆ ಬೇರೆ ದಾರಿಗಳಿಂದ ಬಂದ ವ್ಯಕ್ತಿಗಳು, ಜೋಡಿಗಳು ಹತ್ತಿದ ಲಾಸ್ಟ್ ಬಸ್ ದಾರಿ ತಪ್ಪಿ ಕಾಡಿನ ಮಧ್ಯೆ ಸಿಲುಕಿಕೊಳ್ಳುವ ಕತೆಯೇ ಲಾಸ್ಟ್ ಬಸ್. ಒಂದು ಪಾಳುಬಂಗಲೆಯಲ್ಲಿ ಕೆಲವು ಪ್ರಯಾಣಿಕರು ಪಡೆಯುವ ವಿಚಿತ್ರ, ನಿಗೂಢ ಅನುಭವಗಳು ಮತ್ತು ಅದರಿಂದ ಹೊರ ಬರಲು ಅವರು ನಡೆಸುವ ಪ್ರಯತ್ನವೇ ಈ ಚಿತ್ರದ ವಸ್ತು. ಇಡೀ ಚಿತ್ರವನ್ನು ಒಂದು ಅನುಭವವಾಗಿ ಕಟ್ಟಿಕೊಡುವುದು ಅನಂತ ಅರಸ್ ಅವರ ಅದ್ಭುತ ಛಾಯಾಗ್ರಹಣ. ದೃಶ್ಯಾನುಭವವೇ ಚಿತ್ರದ ನಿಜವಾದ ಹೀರೋ. ಅವಿನಾಶ್ ನರಸಿಂಹರಾಜು, ಮಾನಸ, ಮೇಘನಾಶ್ರೀ ಅವರ ನಟನೆ ಚಿತ್ರದ ನಡೆಗೆ ಪೂರಕವಾಗಿದೆ. ವಾಹಿನಿ ಮುಖ್ಯಸ್ಥರಾಗಿ ಪ್ರಕಾಶ್ ಬೆಳವಾಡಿ ಅವರದು ಹೇಳಿ ಮಾಡಿಸಿದ ಪಾತ್ರ. ದೀಪಾ, ಲೋಕೇಶ್, ಸಮರ್ಥ್ ಅವರ ಅಭಿನಯವೂ ಪರವಾಗಿಲ್ಲ. ಚಿತ್ರದ ಗತಿಗೆ ಪೂರಕವಾಗಿದೆ ಸ್ಟೀಫನ್ ಪ್ರಯೋಗ್‌ರ ಸಂಗೀತ. ಚಿತ್ರವನ್ನು ಬಿಗಿ ಕಳೆದುಕೊಳ್ಳದಂತೆ ನೋಡಿಕೊಳ್ಳುವಲ್ಲಿ ನಿರ್ದೇಶಕ ಅರವಿಂದ್ ಯಶಸ್ವಿಯಾಗಿದ್ದಾರೆ. ಒಂದೇ ಒಂದು ಹಾಡನ್ನು ಈ ಚಿತ್ರ ಒಳಗೊಂಡಿದೆ. ಆ ಹಾಡು ನಮ್ಮಾಳಗೆ ಚಿತ್ರರಂಗದಿಂದ ಹೊರ ಬಂದ ಬಳಿಕವೂ ಉಳಿದುಕೊಳ್ಳುತ್ತದೆ. ರಂಗಿತರಂಗದ ಯಶಸ್ಸಿನ ಬಳಿಕ ಕನ್ನಡ ಚಿತ್ರೋದ್ಯಮ ಬೇರೆ ಬೇರೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಅಭಿನಂದನಾರ್ಹವಾಗಿದೆ. ಸಿದ್ಧಸೂತ್ರಗಳನ್ನು ಹರಿದು, ಹೊಸತನಕ್ಕೆ ತುಡಿಯುವ ನಿರ್ದೇಶಕರಿದ್ದರೆ ಕನ್ನಡ ಯಾವ ಡಬ್ಬಿಂಗ್‌ಗೂ ಹೆದರಬೇಕಾಗಿಲ್ಲ. ರಂಗಿತರಂಗ ವಿಭಿನ್ನವಾಗಿ ಮೂಡಿ ಬಂದು ಬಾಹುಬಲಿಯಂತಹ ಅದ್ದೂರಿ ಚಿತ್ರಕ್ಕೆ ಸೆಡ್ಡು ಹೊಡೆದಿರುವುದು ಉದಾಹರಣೆಯಾಗಿ ನಮ್ಮ ಮುಂದಿದೆ. ಲಾಸ್ಟ್ ಬಸ್ ಕೂಡ ಅದೇ ರೀತಿಯ ಭರವಸೆಯನ್ನು ನಮ್ಮಲ್ಲಿ ಹುಟ್ಟಿಸುತ್ತದೆ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News