62ಶ್ರೀಮಂತರ ಸಂಪತ್ತು ಅರ್ಧ ಜನಸಂಖ್ಯೆಗೆ ಸಮ
ಜಗತ್ತಿನಲ್ಲಿ ಏರುತ್ತಿರುವ ವರಮಾನ ಅಸಮಾನತೆ: ಸಮೀಕ್ಷೆ ಕಳವಳ
ಡಾವೋಸ್, ಜ. 18: ಜಗತ್ತಿನ 62 ಮಂದಿ ಅತ್ಯಂತ ಶ್ರೀಮಂತರು ಹೊಂದಿರುವ ಸಂಪತ್ತು ಜಗತ್ತಿನ ಜನಸಂಖ್ಯೆಯ ಕೆಳಾರ್ಧದಲ್ಲಿರುವ ಬಡವರು ಹೊಂದಿರುವ ಸಂಪತ್ತಿಗೆ ಸಮವಾಗಿದೆ ಎಂದು ನೂತನ ಸಮೀಕ್ಷೆಯೊಂದು ಸೋಮವಾರ ಹೇಳಿದೆ.
ಇದು ಭಾರತ ಮತ್ತು ಇತರ ದೇಶಗಳಲ್ಲಿರುವ ಆದಾಯ ಅಸಮಾನತೆಯ ಭೀಕರತೆಯನ್ನು ಎತ್ತಿ ತೋರಿಸಿದೆ.
ಅದೂ ಅಲ್ಲದೆ, ಈ 62 ಅತ್ಯಂತ ಶ್ರೀಮಂತರ ಪೈಕಿ ಒಂಬತ್ತು ಮಂದಿ ಮಾತ್ರ ಮಹಿಳೆಯರು. 2010ರ ಬಳಿಕ ಈ 62 ಮಂದಿಯ ಒಟ್ಟು ಸಂಪತ್ತು 50 ಸಾವಿರ ಕೋಟಿ ಡಾಲರ್‌ನಷ್ಟು ಹೆಚ್ಚಾಗಿದ್ದು, 1.76 ಲಕ್ಷ ಕೋಟಿ ಡಾಲರ್‌ಗೆ ಏರಿದೆ.
ಅದೇ ವೇಳೆ, 2010ರ ಬಳಿಕ ಜಗತ್ತಿನ ಜನಸಂಖ್ಯೆಯ ಕೆಳಾರ್ಧದಲ್ಲಿರುವ ಬಡವರ ಸಂಪತ್ತು 1 ಲಕ್ಷ ಕೋಟಿ ಡಾಲರ್‌ನಷ್ಟು ಕುಸಿದಿದೆ. ಅಂದರೆ, ಅವರ ಒಟ್ಟು ಸಂಪತ್ತಿನಲ್ಲಿ 41 ಶೇಕಡ ಕುಸಿತವಾಗಿದೆ.
ಇದೇ ಅವಧಿಯಲ್ಲಿ ಜಾಗತಿಕ ಜನಸಂಖ್ಯೆ ಸುಮಾರು 40 ಕೋಟಿಯಷ್ಟು ಹೆಚ್ಚಾಗಿರುವ ಹೊರತಾಗಿಯೂ ಈ ಆದಾಯ ಕುಸಿತ ಸಂಭವಿಸಿದೆ ಎಂದು ಮಾನವಹಕ್ಕುಗಳ ಸಂಸ್ಥೆ ‘ಆಕ್ಸ್‌ಫಾಮ್’ ನಡೆಸಿರುವ ‘ಒಂದು ಶೇಕಡ ಮಂದಿಗಾಗಿ ಇರುವ ಆರ್ಥಿಕತೆ’ ಎಂಬ ಹೆಸರಿನ ಅಧ್ಯಯನ ತಿಳಿಸಿದೆ.
ವಿಶ್ವ ಆರ್ಥಿಕ ವೇದಿಕೆಯ ಐದು ದಿನಗಳ ವಾರ್ಷಿಕ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಸಮಾವೇಶವು ನಾಳೆ ಇಲ್ಲಿ ಆರಂಭಗೊಳ್ಳಲಿದೆ.
ಜಗತ್ತಿನ ಜನಸಂಖ್ಯೆಯ ಕೆಳಾರ್ಧದ ಬಡವರ ಸಂಪತ್ತಿಗೆ ಸಮಾನವಾದ ಸಂಪತ್ತನ್ನು 2010ರಲ್ಲಿ 388 ಮಂದಿ ಹೊಂದಿದ್ದರು ಎಂದು ಅಧ್ಯಯನ ತಿಳಿಸಿದೆ.
ಆ ಬಳಿಕ, ಅದು ನಿರಂತರವಾಗಿ ಕುಸಿದಿದ್ದು 2011ರಲ್ಲಿ 177, 2012ರಲ್ಲಿ 159, 2013ರಲ್ಲಿ 92 ಮತ್ತು 2014ರಲ್ಲಿ 80ಕ್ಕೆ ಇಳಿದಿತ್ತು.
ವಿವಿಧ ದೇಶಗಳಲ್ಲಿರುವ ಆದಾಯ ಅಸಮಾನತೆ ಬಗ್ಗೆ ಪ್ರಸ್ತಾಪಿಸಿರುವ ಅಧ್ಯಯನ, ಭಾರತದ ಅಗ್ರ ಐಟಿ ಕಂಪೆನಿಯೊಂದರ ಸಿಇಒ ಅಲ್ಲಿನ ಸಾಮಾನ್ಯ ಉದ್ಯೋಗಿಗಿಂತ 416 ಪಟ್ಟು ಹೆಚ್ಚು ವೇತನ ಪಡೆಯುತ್ತಾರೆ ಎಂದಿದೆ. ಅದೇ ವೇಳೆ, ಅತ್ಯಂತ ದೊಡ್ಡ ಸಿಗರೆಟ್ ತಯಾರಕ ಕಂಪೆನಿಯ ಸಿಇಒ ಅದೇ ಕಂಪೆನಿಯ ಇತರ ಸಿಬ್ಬಂದಿಯ ಸರಾಸರಿ ವೇತನದ 439 ಪಟ್ಟು ಹೆಚ್ಚು ವೇತನ ಪಡೆಯುತ್ತಾರೆ ಎಂದಿದೆ.
ಭಾರತದ 46 ಶೇಕಡ ಬಿಲಿಯಾಧಿಪತಿಗಳು ತಮ್ಮ ಸಂಪತ್ತನ್ನು ಮಾರುಕಟ್ಟೆ ಶಕ್ತಿ, ಅಥವಾ ಪ್ರಭಾವವನ್ನು ಅವಲಂಬಿಸಿರುವ ಕ್ಷೇತ್ರದಿಂದ ಪಡೆದುಕೊಂಡಿದ್ದಾರೆ ಎಂದು ಅದು ಹೇಳಿದೆ.