ರಿಕ್ಕಿ: ಕಾಡಿನಲ್ಲಿ ಕಳೆದು ಹೋದ ಪ್ರೇಮ

Update: 2016-01-23 17:50 GMT

ನ ಕ್ಸಲರ ಪ್ರವೇಶದಿಂದಾಗಿ ದಟ್ಟ ಹಸಿರಾಗಿದ್ದ ಪಶ್ಚಿಮಘಟ್ಟ ಹೇಗೆ ರಕ್ತವರ್ಣವನ್ನು ತಾಳಿತು ಎನ್ನುವುದಕ್ಕೆ ಕರ್ನಾಟಕ ಈಗಾಗಲೇ ಸಾಕ್ಷಿಯಾಗಿದೆ. ನೂರಾರು ಜೀವಗಳು ಅದಕ್ಕೆ ಬಲಿಯಾಗಿವೆ. ದಕ್ಷಿಣ ಕನ್ನಡದ ಬೆಳ್ತಂಗಡಿ, ಕಾರ್ಕಳ ಆಸುಪಾಸಿನ ತರುಣರೂ ಈ ವ್ಯೆಹದೊಳಗೆ ಸಿಲುಕಿಕೊಂಡಿರುವುದು ಗೊತ್ತಿರುವ ವಿಷಯವೇ ಆಗಿದೆ. ನಕ್ಸಲರನ್ನು ಬ್ಲಾಕ್ ಎಂಡ್ ವೈಟ್ ಆಗಿ ನೋಡುವ ಹಲವು ಚಿತ್ರಗಳು ಬಂದಿವೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಮಾತಾಡು ಮಾತಾಡು ಮಲ್ಲಿಗೆ’ ಚಿತ್ರದಲ್ಲೂ ನಕ್ಸಲೀಯರು ಬರುತ್ತಾರೆ. ಆದರೆ ಪ್ರೇಮ-ಹಿಂಸೆ ಇವೆರಡನ್ನು ಮುಖ್ಯವಸ್ತುವಾಗಿಟ್ಟುಕೊಂಡು, ಕನ್ನಡದಲ್ಲಿ ಪೂರ್ಣ ಪ್ರಮಾಣದ ಚಿತ್ರವೊಂದು ಬಂದೇ ಇಲ್ಲ. ಆ ಕೊರತೆಯನ್ನು ರಿಷಬ್ ಶೆಟ್ಟಿ ಅವರ ‘ರಿಕ್ಕಿ’ ಚಿತ್ರ ಪೂರ್ತಿಗೊಳಿಸುತ್ತದೆ. ಮೇಲ್ನೋಟಕ್ಕೆ ನಕ್ಸಲೈಟ್ ಸಮಸ್ಯೆ ಕರ್ನಾಟಕಕ್ಕೆ ಸದ್ಯ ಅಪ್ರಸ್ತುತ ಎನ್ನಬಹುದು.ಆದರೆ ಎಸ್‌ಇಝಡ್, ಭೂ ಒತ್ತುವರಿ, ಸಮಕಾಲೀನ ಬದುಕನ್ನು ಅಲುಗಾಡಿಸು ತ್ತಿವೆ.ಕೆಲವು ವರ್ಷಗಳ ಹಿಂದೆ ಗ್ರೆಗರಿ ಪತ್ರಾವೋ ಅವರ ಮನೆಯ ಒತ್ತುವರಿ ಮತ್ತು ಸಾರ್ವಜನಿಕರ ಕಣ್ಮುಂದೆಯೇ ಅವರ ಮನೆ ಮತ್ತು ತೋಟಗಳ ಧ್ವಂಸ ಸಾಕಷ್ಟು ಸುದ್ದಿ ಮಾಡಿತ್ತು. ಈ ಎಲ್ಲ ಹಿನ್ನೆಲೆಗಳನ್ನು ಇಟ್ಟುಕೊಂಡು, ಒಂದು ಪ್ರೇಮಕತೆಯನ್ನು ಹೇಳುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ ರಿಷಬ್.
ರಿಷಬ್ ಮತ್ತು ರಕ್ಷಿತ್ ಶೆಟ್ಟಿ ತಂಡ ವಿಭಿನ್ನತೆಗಾಗಿ ಈಗಾಗಲೇ ಗುರುತಿಸಿಕೊಂಡಿದೆ. ‘ಉಳಿದವರು ಕಂಡಂತೆ’ ಚಿತ್ರ ಈ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗೊಳಗಾಗಿತ್ತು.ಇದೀಗ ಮತ್ತೊಂದು ಸಾಹಸಕ್ಕೆ ಇಳಿದಿದ್ದಾರೆ, ದಕ್ಷಿಣ ಕನ್ನಡದ ಈ ಹುಡುಗರು.ವರ್ತಮಾನದ ತಲ್ಲಣಗಳ ಮಧ್ಯೆ, ಪ್ರೇಮವನ್ನು ಉಳಿಸಿಕೊಳ್ಳುವ ಬಗೆಯನ್ನು ತಮ್ಮ ‘ರಿಕ್ಕಿ’ ಚಿತ್ರದಲ್ಲಿ ಹುಡುಕಾಡಿದ್ದಾರೆ.
ಇವಳು ರಾಧಾ. ಆತ ರಿಕ್ಕಿ.ಯಾರೂ ಬೇರ್ಪಡಿಸಲಾಗದ ಪ್ರೇಮಹಕ್ಕಿಗಳು ಇವರು. ರಿಕ್ಕಿ ಕಾರ್ಯ ನಿಮಿತ್ತ ಹೊರರಾಜ್ಯಕ್ಕೆ ತೆರಳುತ್ತಾನೆ. ಆದರೂ ಆಕೆಯ ಕನವರಿಕೆಯಲ್ಲೇ ಇರುತ್ತಾನೆ. ಇದೇ ಸಂದರ್ಭದಲ್ಲಿ ಜೋಡಿ ಹಕ್ಕಿಗಳನ್ನು ಬೇರ್ಪಡಿಸುವಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ. ಎಸ್‌ಇಝಡ್ ಹೆಸರಿನಲ್ಲಿ ಹಲವರು ತಮ್ಮ ಮನೆ ಮಠ ಕಳೆದುಕೊಳ್ಳುತ್ತಾರೆ.ನಾಯಕಿಯ ಕುಟುಂಬ ಸರ್ವನಾಶವಾಗುತ್ತದೆ. ಎಲ್ಲೂ ಸಹಾಯದ ನೆರವು ಸಿಗದೇ ಇದ್ದಾಗ ನಾಯಕಿ ನಕ್ಸಲೀಯರ ಜೊತೆ ಸೇರುತ್ತಾಳೆ.ಊರಿಗೆ ಬಂದ ನಾಯಕ, ತನ್ನ ನಾಯಕಿಯನ್ನು ಹುಡುಕುತ್ತಾ ಕಾಡಿಗೆ ತೆರಳುವುದು, ಮತ್ತು ಅವಳಲ್ಲಿ ಮತ್ತೆ ಪ್ರೀತಿಯನ್ನು ಬಿತ್ತಿ, ಮರಳಿ ಕರೆತರುವುದಕ್ಕೆ ಯತ್ನಿಸುವುದು ಒಟ್ಟು ಕತೆ.ಮಣಿರತ್ನಂ ಅವರು ಇಂತಹ ವಸ್ತುವುಳ್ಳ ಹಲವು ಚಿತ್ರಗಳನ್ನು ತಮಿಳಲ್ಲಿ ಮಾಡಿದ್ದಾರೆ.ಆದರೆ ಈ ಚಿತ್ರವನ್ನು ಈ ನೆಲಕ್ಕೆ ಪೂರಕವಾಗಿ ನಾವು ನೋಡಬೇಕು.
ಹರಿಪ್ರಿಯಾ ಅವರದು ಇಲ್ಲಿ ಪ್ರಧಾನ ಪಾತ್ರ. ನಾಯಕ ರಕ್ಷಿತ್‌ಗಿಂತಲೂ ನಾಯಕಿಯೇ ಮಿಂಚುತ್ತಾರೆ.ಒಂದೆಡೆ ಪ್ರೇಮಹಕ್ಕಿಯಾಗಿ, ಇನ್ನೊಂದೆಡೆ ಗಾಯಗೊಂಡ ಹೆಣ್ಣು ಹುಲಿಯಾಗಿ ಎರಡು ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ.ನಕ್ಸಲರನ್ನು ಇನ್ನಷ್ಟು ಅಧ್ಯಯನ ಮಾಡಿ, ಇನ್ನಷ್ಟು ವಾಸ್ತವ ನೆಲೆಯಲ್ಲಿ ಅದನ್ನು ಕಟ್ಟಿಕೊಡುವ ಸಾಧ್ಯತೆ ನಿರ್ದೇಶಕರಿಗಿತ್ತು.ಆದರೆ ಕಮರ್ಶಿಯಲ್ ದೃಷ್ಟಿಕೋನ ಚಿತ್ರದ ಕಲಾತ್ಮಕತೆಗೆ ಧಕ್ಕೆ ತರುತ್ತದೆ. ಸಂಗೀತ ಇನ್ನಷ್ಟು ಪರಿಣಾಮಕಾರಿಯಾಗಬೇಕಾಗಿತ್ತು.ಚಿತ್ರದಲ್ಲಿ ಸಾಧುಕೋಕಿಲಾ ಹಾಸ್ಯಗಳು ಓಘಕ್ಕೆ ಧಕ್ಕೆ ತರುತ್ತದೆ.
ಚಿತ್ರದಲ್ಲಿ ಪ್ರಾಮಾಣಿಕತೆಯಿದೆ. ಯುವಕರ ಹೊಸ ಹುಮ್ಮಸ್ಸು ಪ್ರತಿ ದೃಶ್ಯಗಳಲ್ಲೂ ಕಾಣುತ್ತದೆ. ಹೊಸ ತಾಜಾ ಕನಸುಗಳು ಈ ಚಿತ್ರದಲ್ಲಿ ಕೆಲಸ ಮಾಡಿವೆ.ಅದಕ್ಕಾಗಿ ಇಡೀ ತಂಡವನ್ನು ಅಭಿನಂದಿಸಬೇಕಾಗಿದೆ. ಚಿತ್ರವನ್ನು ಖಂಡಿತಾ ಒಮ್ಮೆ ನೋಡಬಹುದು.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News