ಮುಂಬೈಯಲ್ಲಿ ಕಾಯ್ಕಿಣಿ ಉಪನ್ಯಾಸ, ಬಿಜೆಪಿ-ಶಿವಸೇನೆ ಹೆಚ್ಚಿದ ಅಶಾಂತಿ

Update: 2016-01-25 18:11 GMT

ಮುಂಬೈಯಲ್ಲಿ ಡಾ. ಜಯಂತ್ ಕಾಯ್ಕಿಣಿ

ಮುಂಬೈಯಲ್ಲಿ ಬಹಳ ದಿನಗಳ ನಂತರ ಸಾಹಿತಿ, ಸಿನೆಮಾ ಕವಿ ಡಾ.ಜಯಂತ ಕಾಯ್ಕಿಣಿಯವರ ಉಪನ್ಯಾಸ ಕೇಳುವ ಅಪೂರ್ವ ಅವಕಾಶ ಮುಂಬೈ ಕನ್ನಡಿಗರಿಗೆ ಜನವರಿ 17ರಂದು ದೊರೆಯಿತು. ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾನಿಲಯ ಮತ್ತು ಮೈಸೂರು ಎಸೋಸಿಯೇಶನ್ ಜಂಟಿಯಾಗಿ ಅಂದು ಮೈಸೂರು ಎಸೋಸಿಯಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಹಮ್ಮಿಕೊಂಡಿತ್ತು.ಹಿಂದಿನ ದಿನ ಕುವೆಂಪು -ಕವಿ ನೆನಪಿನ ಸವಿಯಾನ ಉಪನ್ಯಾಸ ನೀಡಿದ್ದ ಡಾ.ಜಯಂತರು ಮರುದಿನ ‘ನಾನು ಮತ್ತು ನನ್ನ ಸಾಹಿತ್ಯ’ ವಿಷಯವಾಗಿ ಮಾತನಾಡಿದರು. ಅದೇ ದಿನ ಜಯಂತ ಕಾಯ್ಕಿಣಿಯವರಿಂದ ‘ಕಥನಾವರಣ’ ಎನ್ನುವ ಡಾ. ಮಮತಾ ರಾವ್ ಅವರ ಕೃತಿಯೂ ಬಿಡುಗಡೆಗೊಂಡಿತ್ತು.

ಹಳತು ಹೊಸತರ ನಡುವಿನ ಕೊಂಡಿಯಾಗಿ ಸದ್ಯದ ಬದುಕಿಗೆ ಸಾಹಿತ್ಯ ಸೇತುವೆಯಾಗಬೇಕು ಎಂಬ ಕಳಕಳಿಯಿಂದಲೇ ಜಯಂತರು ತಮ್ಮ ಮಾತುಗಳನ್ನು ಆರಂಭಿಸಿದರು.‘‘ಮುಕ್ತ ಓದುಗರಾಗಿ ಕೃತಿಗಳನ್ನು ಓದಬೇಕು.ಸಂಶೋಧಕರಾಗಿ ಕತೆಯನ್ನೋ ಇನ್ಯಾವುದನ್ನೋ ಓದಲು ಹೋಗಬಾರದು.ಮುಗ್ಧ ಓದುಗರು ನಾವಾಗಬೇಕು.’’

‘‘ನಾನು ಯಾವತ್ತೂ ಸೀರಿಯಸ್ಸಾಗಿ ಬರೆದಿಲ್ಲ ಯಾವುದನ್ನೂ.ಬರೆಯಬೇಕು ಎನ್ನುವುದೊಂದೇ ಮನಸ್ಸಲ್ಲಿತ್ತು. ನನ್ನ ಪ್ರಕಾರ ವಿಮರ್ಶೆ ಅಂದರೆ ಹೊಗಳಿಕೆ, ಮೆಚ್ಚುಗೆ ಅಲ್ಲ, ಹಾಗಿದ್ದರೂ ವಿಮರ್ಶೆ ಎನ್ನುವುದು ಲೇಖಕರ ಪ್ರಯತ್ನವನ್ನು ಇನ್ನಷ್ಟು ವಿಸ್ತಾರಗೊಳಿಸುತ್ತದೆ ಅಷ್ಟೆ.’’ ಎನ್ನುವ ಅಭಿಪ್ರಾಯವನ್ನು ಜಯಂತರು ವ್ಯಕ್ತಪಡಿಸಿದರು.

‘‘ನಾನು ಹಿಂದೆಯೂ ಹೇಳಿದ್ದೆ, ಬರವಣಿಗೆಯ 23 ವರ್ಷ ಮುಂಬೈಯಲ್ಲಿದ್ದೆ.ಇಲ್ಲಿ ಕಾಯಕವೇ ಕೈಲಾಸ.ಆದರೆ, ನನ್ನೂರು ಗೋಕರ್ಣದಲ್ಲಿ ಕೈಲಾಸವೇ ಕಾಯಕ.ನನ್ನ ತಂದೆಯವರಾದ ಗೌರೀಶರನ್ನು ಭೇಟಿಯಾಗಲು ಸಾಹಿತಿಗಳು-ವಿದ್ಯಾರ್ಥಿಗಳು ಪ್ರತಿದಿನ ಯಾರಾದರೂ ಬರುತ್ತಲೇ ಇದ್ದರು. ನಮ್ಮ ಮನೆಯಲ್ಲಿ ಕುರ್ಚಿಗಳ ಕೆಳಗಡೆ ಯಾವತ್ತೂ ಕಪ್ಪು-ಸಾಸರ್ ಇದ್ದೇ ಇರುತ್ತಿತ್ತು. ಅದರ ಲೆಕ್ಕದಲ್ಲೇ ಇವತ್ತು ಮನೆಗೆ ಎಷ್ಟು ಜನ ಬಂದಿದ್ದರು ಎಂದು ತಿಳಿಯುತ್ತಿತ್ತು’’ ಎಂದು ಆ ದಿನಗಳನ್ನು ಜಯಂತ್ ಅವರು ನೆನಪಿಸಿಕೊಂಡರು.

‘‘ಸಂಸ್ಕೃತಿ ಎನ್ನುವುದು ಜಂಗಮವೇ ಆಗಿರಬೇಕು ಎನ್ನುತ್ತಿದ್ದರು ಗೌರೀಶರು. ಅಂದಿನ ದಿನಗಳಲ್ಲಿ ಗೌರೀಶರು ತಮ್ಮ ಶಾಲಾ ವಾರ್ಷಿಕೋತ್ಸವದ ದಿನಗಳಲ್ಲಿ ಮುಖ್ಯ ಅತಿಥಿಯಾಗಿ ರೋಲ್ ಮಾಡೆಲ್ಸ್‌ಗಳನ್ನು ಕರೆಯುತ್ತಿದ್ದರು.ಅವರು ರೈತನೂ ಆಗಿದ್ದಿರಬಹುದು.ಆದರೆ ಇಂದೇನಾಗಿದೆ?ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಯಾರೋ ಬಿಲ್ಡರ್‌ಗಳನ್ನೋ ಇನ್ಯಾರನ್ನೋ ಕರೆಯುತ್ತಿದ್ದಾರೆ. ಮಕ್ಕಳಿಗೆ ನಾವಿಂದು ರೋಲ್ ಮಾಡೆಲ್ಸ್‌ಗಳನ್ನು ತೋರಿಸುತ್ತಿಲ್ಲ’’ ಎಂದು ವಿಷಾದಿಸಿದರು.

‘‘ಪುಸ್ತಕಗಳು ಅಂದರೆ ಲೇಖಕನ ಮನಸ್ಸು ಅಲ್ಲಿದೆ. ಓದು ಸಾಹಿತ್ಯ ನಮ್ಮ ಮನಸ್ಸಿಗೆ ಬಲಕೊಡುತ್ತದೆ. ನಾನು ಅಡಿಗರ ‘ಸಾಕ್ಷಿ’ ಪತ್ರಿಕೆಗೆ ಬದುಕಿನ ಬಗ್ಗೆ ಕೆಲವು ಕವನಗಳ ಜೊತೆಗೆ ‘ಬಸಳೆ ಸೊಪ್ಪು’ಎಂಬ ಕವಿತೆಯನ್ನೂ ಕಳುಹಿಸಿದ್ದೆ.ಆವಾಗ ಅಡಿಗರು ಆಯ್ಕೆ ಮಾಡಿದ್ದು ಬಸಳೆ ಸೊಪ್ಪು ಕವಿತೆಯನ್ನು ಎಂದೂ ಜಯಂತರು ನೆನಪಿಸಿಕೊಂಡರು.ಸಾಹಿತ್ಯವೆಂದರೆ ಮನುಷ್ಯನ ಯಾತನೆಯನ್ನು ಅರ್ಥ ಮಾಡುವುದು.ಬಹುಭಾಷಿಕ ಸಂವೇ ದನೆಯ ಈ ಮುಂಬೈಯಲ್ಲಿ ಮನುಷ್ಯ ಯಾತನೆಯ ಅರ್ಥ ಮಾಡಿಸುವ ಅನೇಕ ಕತೆಗಳನ್ನು ಹಿರಿಯ ಸಾಹಿತಿ ದಿ.ಯಶವಂತ ಚಿತ್ತಾಲರು ಬರೆದರು.ನನಗೆ ಆಸ್ಪತ್ರೆ ಇಷ್ಟದ ಜಾಗ. ಇದು ಮೋಸ್ಟ್ ಸ್ಪಿರಿಚ್ಯುವಲ್ ಪ್ಲೇಸ್. ಒಬ್ಬನ ಯಾತನೆಯನ್ನು ಕಡಿಮೆ ಮಾಡುವ ಜಾಗವಿದು. ನನ್ನ ಅನೇಕ ಕತೆಗಳಲ್ಲಿ ಈ ಕಾರಣಕ್ಕಾಗಿ ಆಸ್ಪತ್ರೆಗಳು ಬರುತ್ತವೆ ಎಂದರು ಜಯಂತ್.

‘‘ನಮ್ಮಲ್ಲಿ ಎರಡು ತರಹದ ಲೇಖಕರಿದ್ದಾರೆ.ಒಂದು-ಸಾಹಿತ್ಯ ಚರಿತ್ರೆಗೆ ಸೇರುವವರು, ಎರಡು-ಮನುಷ್ಯ ಚರಿತ್ರೆಗೆ ಸೇರುವವರು.’’ನಾನು ಮನುಷ್ಯ ಚರಿತ್ರೆಗೆ ಸೇರಿದವರನ್ನು ಇಷ್ಟ ಪಡುತ್ತೇನೆ. ಚಿತ್ತಾಲರು ಅಂತಹ ಲೇಖಕರಾಗಿದ್ದರು. ಓದು - ಸಿನೆಮಾ - ಸಂಗೀತ..... ಎಲ್ಲವೂ ಮನುಷ್ಯ ವಿನ್ಯಾಸಗಳನ್ನು ಕಾಣಿಸುತ್ತವೆ.ಎಲ್ಲೂ ಸಿಗಲಾರದ್ದು ಸಾಹಿತ್ಯದಲ್ಲಿ ಸಿಗಬಹುದು.ಬರೆಯುವಾಗ ಮಾತ್ರ ನಾನು ಸಾಹಿತಿ, ಉಳಿದ ಸಮಯ ನಾನೊಬ್ಬ ಜೀವಿ.ನಾವು ಕಣ್ತೆರೆದು ಬದುಕೋಣ.ಕಣ್ಣು ಮುಚ್ಚಿ ಬರೆಯೋಣ’’ ಎಂದು ಸಲಹೆ ಇತ್ತರು.

‘‘ನನ್ನ ಅನೇಕ ಕತೆಗಳ ಪಾತ್ರಗಳು ಮರಾಠಿ ಹೆಸರುಗಳಾಗಿವೆ.ಹಾಗಾಗಿ ಕನ್ನಡದ ವಿಮರ್ಶಕರಿಗೆ ಅದು ತಿಳಿದುಕೊಳ್ಳಲು ಕಷ್ಟವಾಗಬಹುದು.ಈ ಕಾರಣಕ್ಕೆ ಹೆಚ್ಚು ಚರ್ಚೆ ಆಗದೆ ಇರಬಹುದು. ಹಾಗಾಗಿ ಇಂತಹ ಕೃತಿಗಳು ಹಿಂದಿ ಅಥವಾ ಮರಾಠಿಗೆ ಅನುವಾದಗೊಂಡರೆ ಇಲ್ಲಿನವರಿಗೆ ಹೆಚ್ಚು ಅರ್ಥಪೂರ್ಣವಾಗಲು ಸಾಧ್ಯ. ಯಾಕೆಂದರೆ ದಗಡೂ ಅಥವಾ ಇನ್ಯಾವುದೋ ಹೆಸರು ಇಲ್ಲಿನವರಿಗೆ ತಮ್ಮದೇ ಎಂಬ ಭಾವನೆ ಬರಬಹುದು.ಹೀಗಾಗಿ ಅನುವಾದ ಕಾರ್ಯವೂ ಅಷ್ಟೇ ಮಹತ್ವ ಪಡೆಯುತ್ತದೆ.’’

‘ನನ್ನ ಕತೆಯೊಂದು ನನ್ನ - ಕೇಳಿದ - ಕಲ್ಪನೆಯ - ಎಲ್ಲೋ ನೋಡಿದ್ದ,,,.. ಹೀಗೆಲ್ಲಾ ನನ್ನನ್ನು ಮೀರಿ ಒಂದು ಕೃತಿ ಮೂಡಿರುತ್ತದೆ’’ ಎನ್ನುವ ಜಯಂತರು, ‘‘ತಾನು ಪ್ಲ್ಯಾನ್ ಮಾಡಿ ಬರೆಯೋದಿಲ್ಲ, ಕತೆಯನ್ನು ಆರಂಭ ಮಾಡುತ್ತೇನೆ. ಹೋಗ್ತಾ ಹೋಗ್ತಾ ಅರ್ಥ ಮಾಡ್ತಾ ಹೋಗುವುದು..... ಗೊತ್ತಿದ್ದ ಬಿಡಿ ಹಾಗೂ ಗೊತ್ತಿರದ ಇಡಿ ಹೀಗೆ ಸಣ್ಣ ಕತೆ ಬರೆಯುತ್ತಾ ಹೋಗುತ್ತೇನೆ. ನನಗಿನ್ನೂ ಕಾದಂಬರಿ ಬರೆಯೋಕೆ ಆಗಿಲ್ಲ.ನನಗೆ ತಾಳ್ಮೆ ಕಡಿಮೆ.ನನ್ನ ‘ಬಣ್ಣದ ಕಾಲು’ ಕಾದಂಬರಿಯ ಮೊದಲ ಭಾಗ ಆಗಿತ್ತು.ಆದರೆ ಮತ್ತೆ ಮುಂದುವರಿಸಲು ಆಗಲಿಲ್ಲ’’ ಎಂದರು.

‘‘ಲೇಖಕನಾದವ ಮನುಜ ಪಕ್ಷಪಾತಿ.ಯಾವ ರಾಜಕೀಯ ಪಕ್ಷಕ್ಕೂ ಆತ ಸೇರಲಾರ.ಮಾನವೀಯ ಸತ್ಯವನ್ನು ಮನಗಾಣುವುದೇ ಲೇಖಕನ ಧರ್ಮ’’ ಎಂದರಲ್ಲದೆ, ತಾನು ಸಿನೆಮಾಗಳಿಗೆ ಹಾಡು ರಚಿಸುವಾಗಿನ ಸಂದರ್ಭವನ್ನು ಇಲ್ಲಿ ನೆನಪಿಸಿಕೊಂಡರು.‘‘ನಮ್ಮ ಕನ್ನಡ ಸಿನೆಮಾಗಳಲ್ಲಿ ಶೇಕಡಾ 90 ಪ್ರೀತಿ ಹಾಡುಗಳು.ಇಲ್ಲಿ ನಮ್ಮ ಸಂಗಾತಿಗೆ ಹೇಳದೆ ಇರುವ ಶಬ್ದಗಳನ್ನು ನಾವು ಈ ಪ್ರೀತಿ ಹಾಡುಗಳಿಗೆ ಬರೆಯುವ ಸ್ಥಿತಿ ಇದೆ’’ ಎಂದು ಹಾಸ್ಯ ಚಟಾಕಿ ಹಾರಿಸಿದರು ಜಯಂತರು.

ಈ ಸಂದರ್ಭದಲ್ಲಿ ಅವರು ಮೊಬೈಲ್-ಮೆಸೇಜ್ ಕ್ರಾಂತಿಯನ್ನು ಉಲ್ಲೇಖಿಸುತ್ತಾ - ಬ್ಲಡ್‌ಬ್ಯಾಂಕ್‌ಗೆ ಇಂತಹ ಗ್ರೂಪ್‌ನ ಬ್ಲಡ್ ಅಗತ್ಯ ಬೇಕಾಗಿದೆ, ಅಥವಾ ನಮ್ಮ ಬಾಲ್ಕನಿಯಲ್ಲಿ ಗುಬ್ಬಿಗಳಿಗೆ ಒಂದು ತಟ್ಟೆಯಲ್ಲಿ ನೀರಿಡೋಣ ಇತ್ಯಾದಿ.... ಮೆಸೇಜ್‌ಗಳು ನಮಗೆ ಬರುತ್ತಲೇ ಇರುತ್ತದೆ. ಎಲ್ಲರೂ ಅದನ್ನು ಫಾರ್ವರ್ಡ್ ಮಾಡಿ ತಮ್ಮ ಕರ್ತವ್ಯ ಮುಗಿಯಿತು ಅಂತ ತಿಳಿಯುತ್ತಾರೆ.ಆದರೆ ಎಷ್ಟು ಜನ ಬ್ಲಡ್ ಬೇಕು ಅಂದಾಗ ಹೋಗಿ ಕೊಡುತ್ತಾರೆ?ಎಷ್ಟು ಜನ ಗುಬ್ಬಿಗಳಿಗೆ ಬಾಲ್ಕನಿಯಲ್ಲಿ ನೀರಿಡುತ್ತಾರೆ?ಎಲ್ಲರೂ ಇಂತಹ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡುವುದರಲ್ಲೇ ತಮ್ಮ ಕರ್ತವ್ಯ ಮುಗಿಸಿದ ಖುಷಿಯಲ್ಲಿರುವ ಪರಿಸ್ಥಿತಿಯನ್ನು ಇಂದು ನಾವು ಕಾಣುತ್ತಿದ್ದೇವೆ’’ ಎಂದರು. ‘‘ಇಂದು ಮೂಢ ನಂಬಿಕೆ, ಕೋಮುವಾದಿ...ಇತ್ಯಾದಿಗಳ ದೊಡ್ಡ ಹಾವು ಚ್ಯಾನೆಲ್‌ಗಳಲ್ಲಿ ಕೂತಿದೆ. ಭವಿಷ್ಯ ಹೇಳುವವರೂ ಚೆನ್ನಾಗಿ ಮೇಕಪ್ ಮಾಡಿ ಕೂತಿದ್ದಾರೆ’’ ಎಂದು ಎಚ್ಚರಿಸಿದ ಜಯಂತರು, ಆಧುನಿಕತೆಯ ಈ ದಿನಗಳಲ್ಲಿ ಮುಕ್ತವಾಗಿ ಸಮಾಜವನ್ನು ನೋಡಬೇಕು.ಮರ ಹಳತು ಚಿಗುರು ಹೊಸತು.ಇವತ್ತಿನ ಆಧುನಿಕ ಬೆಳಕಿಗೆ ನಾವು ಚಿಗುರಬೇಕಾಗಿದೆ. ವರ್ತಮಾನ ಲೋಕದ ಭಾವ ಪ್ರಪಂಚಕ್ಕೆ ನಾವು ತೆರೆದುಕೊಳ್ಳಬೇಕು. ನಮ್ಮ ಸಂಸ್ಕೃತಿ ಅದು ಮ್ಯೂಸಿಯಂ ಆಗದೆ ಗಾರ್ಡನ್ ಆಗಬೇಕು.ನೆಟ್ಟು ಬೆಳೆಸಿದ ಗಿಡ ಆಗಬೇಕು’’ ಎಂದು ಡಾ.ಜಯಂತರು ಆಶಿಸಿದರು.

ಈ ಕಾರ್ಯಕ್ರಮದ ಸ್ವಾಗತ ಪ್ರಸ್ತಾವನೆಯನ್ನು ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಮಾಡಿದರು. ಈ ಸಂದರ್ಭದಲ್ಲಿ ಜಯಂತರು ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಡಾ. ವ್ಯಾಸರಾವ್ ನಿಂಜೂರ್ ಅವರನ್ನು ಕಂಡಾಗ ‘‘ತನಗೆ ಬಾಟಲಿಯಲ್ಲಿನ ಹಳೆ ಜೇನಿನಂತೆ ಕಾಣುತ್ತಾರೆ’’ ಎಂದು ನಕ್ಕು ನುಡಿದರು.

ಜಯಂತ್ ಅವರ ಉಪನ್ಯಾಸ ಕೇಳಿದ ನನಗೆ ಗೆಳೆಯ ಬಿ.ಎಂ. ಬಶೀರ್ ಅವರು ಹಿಂದೊಮ್ಮೆ ವಾರ್ತಾ ಭಾರತಿಯಲ್ಲಿ ಬರೆದ ಮಾತುಗಳು ಮತ್ತೆ ನೆನಪಾಯಿತು.-‘‘ಚಿತ್ರರಂಗದಲ್ಲಿ ಜಯಂತ ಕಾಯ್ಕಿಣಿ ಸಂಪೂರ್ಣ ಯಶಸ್ಸೇನಾದರೂ ಪಡೆದರೆ ಅದು ಸಾಹಿತ್ಯ ಲೋಕಕ್ಕಾಗುವ ದೊಡ್ಡ ನಷ್ಟ. ಆದ್ದರಿಂದ ಸಣ್ಣ ಪುಟ್ಟ ಸೋಲುಗಳೂ ಜಯಂತ್ ಅವರಿಗೆ ಆಗುತ್ತಿರ ಬೇಕೆಂದು ಆಶಿಸೋಣ. ಈ ಕಾರಣದಿಂದಲಾದರೂ ಅವರು ಆಗಾಗ ಸಾಹಿತ್ಯ ಲೋಕದತ್ತ ಇಣುಕಿ ನೋಡುವಂತಾಗಲಿ’’

* * *

ಆಕ್ರಮಣಶೀಲರಾಗಿ ಪಾರ್ಟಿ ಕಾರ್ಯಕರ್ತರಿಗೆ ಉದ್ಧವ್ ಕರೆ

ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಪಕ್ಷದ ಪ್ರಮುಖ ನೇತಾರರು ಮತ್ತು ವಿಭಾಗ ಪ್ರಮುಖರಿಗೆ ಆಕ್ರಮಣಕಾರಿ ನಿಲುವು ತಳೆಯುವಂತೆ ಆದೇಶ ಜಾರಿಗೊಳಿಸಿದ್ದಾರೆ.ಮೊದಲಿಗೆ ರಸ್ತೆಗಿಳಿದು ಸ್ವಚ್ಛತಾ ಅಭಿಯಾನ ನಡೆಸಲು ಸೂಚಿಸಿದ್ದಾರೆ.ಠಾಕ್ರೆ ನಿವಾಸ್ ಮಾತೋಶ್ರೀಯಲ್ಲಿ ಆಯೋಜಿಸಲಾದ ಈ ಬೈಠಕ್‌ನಲ್ಲಿ ಬಿಜೆಪಿ ಸರಕಾರದ ತಪ್ಪುಗಳನ್ನು ಹೇಳಲು ಪಕ್ಷದ ನಾಯಕರು ಯಾರೂ ಹಿಂಜರಿಯಬಾರದು ಎಂದೂ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯು ಬಿಜೆಪಿ ಸರಕಾರದ ಜೊತೆಗಿದ್ದರೂ ಅದು ಬಿಜೆಪಿಯ ವಿರುದ್ಧ ತನ್ನ ಟೀಕೆಗಳನ್ನು ಮಾಡುತ್ತಲೇ ಬಂದಿದೆ. ಪ್ರಧಾನಿ ಮೋದಿಯವರ ಹಿಂದಿನ ಮುಂಬೈ ಕಾರ್ಯಕ್ರಮಗಳನ್ನೂ ಶಿವಸೇನಾ ನಾಯಕರು ಬಹಿಷ್ಕರಿಸಿದ್ದರು. ಇಂದು ಮಹಾರಾಷ್ಟ್ರ ಸರಕಾರದ ಹೊಸ ಓಪನ್ ಸ್ಪೇಸ್ ಪಾಲಿಸಿಯನ್ನು ಮುಂದಿಟ್ಟು ಶಿವಸೇನೆ ಮತ್ತು ಬಿಜೆಪಿಯ ನಡುವೆ ಅಶಾಂತಿ ಹೆಚ್ಚಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಪಾಲಿಸಿಯ ಡ್ರಾಫ್ಟ್ ತಯಾರಿಸಿದ್ದಾರೆ. ರಾಜ್ಯ ಸರಕಾರವು ನಿಯುಕ್ತಿಗೊಳಿಸಿದ ಕಮಿಷನರ್ ಮತ್ತು ಹೆಚ್ಚುವರಿ ಕಮಿಷನರ್ ಮನಪಾ ನಾಯಕರ ಬದಲು ಮಂತ್ರಾಲಯದಿಂದ ಮಂಜೂರು ಆದ ಆದೇಶಗಳನ್ನೇ ಪಾಲಿಸುತ್ತಿದ್ದಾರೆಂದು ಶಿವಸೇನೆಗೂ ಗೊತ್ತಿದೆ. ಹಾಗಿದ್ದೂ ಆಡಳಿತದ ಆ ಪಾಲಿಸಿ ಶಿವಸೇನೆ ಮತ್ತು ಬಿಜೆಪಿಯ ಬಹುಮತದ ಆಧಾರದಲ್ಲಿ ಮನಪಾ ಸದನದಲ್ಲಿ ಕೂಡಾ ಮಂಜೂರು ಆಗಿದೆ. ಆದರೆ, ನಂತರ ಬಿಜೆಪಿಯ ಒಂದು ಪ್ರತಿನಿಧಿ ಮಂಡಲ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮೈದಾನಗಳ ಜಮೀನು ಒಳಹಾಕುವ ಹೊಸ ಪಾಲಿಸಿ ರದ್ದುಗೊಳಿಸಲು ವಿನಂತಿಸಿದ್ದೂ ಇದೆ. ಬಿಜೆಪಿಯು ಮೈದಾನಗಳ ಜಮೀನು ನುಂಗುವಲ್ಲಿ ಶಿವಸೇನೆಯೇ ಈ ಪಾಲಿಸಿಗೆ ಜವಾಬ್ದಾರಿ ಎಂದಿತು. ಉದ್ಧವ್ ಠಾಕ್ರೆ ಈ ಆರೋಪದಿಂದ ಕೋಪಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News