ಆಹಾರ ನುಂಗುವ ಸಮಸ್ಯೆ... !
ಭಾಗ-2
ಗಂಟಲುಕುಳಿಯ ಹಂತದಲ್ಲಿ ಪ್ರಕ್ರಿಯೆಗಳು ಅಂದರೆ, ಮೃದು ಅಂಗುಳು, ನಾಲಿಗೆಗಳ ಮೂಳೆಯ ಹಿಗ್ಗುವ ಹಾಗೂ ಧ್ವನಿಪೆಟ್ಟಿಗೆಯು ಮೇಲಕ್ಕೂ ಮುಂದಕ್ಕೂ ಚಲಿಸುವ ಪ್ರಕ್ರಿಯೆಗಳು ತೀವ್ರಗತಿಯಿಂದ ಪುನರಾವರ್ತನೆಯಾಗುತ್ತಿರುತ್ತವೆ. ಧ್ವನಿತಂತುಗಳು ಮಧ್ಯಕ್ಕೆ ಚಲಿಸಿದಂತೆಲ್ಲ, ಸಣ್ಣ ನಾಲಗೆಯು ಶ್ವಾಸಮಾರ್ಗವನ್ನು ರಕ್ಷಿಸಲು ಹಿಂದಕ್ಕೆ ಬಾಗುತ್ತದೆ. ಆಹಾರದ ತುತ್ತನ್ನು ಕೆಳಕ್ಕೆ ತಳ್ಳಲು ಗಂಟಲು ಹಿಂದಕ್ಕೂ ಹಾಗೂ ಕೆಳಕ್ಕೂ ಸರಿಯುತ್ತದೆ. ಬಹಳ ಸಂಕೀರ್ಣವಾದ ಈ ಗಂಟಲುಕುಳಿಯ ಹಂತದಲ್ಲಿ, ಧ್ವನಿ ಪೆಟ್ಟಿಗೆಯನ್ನು ಕಿರುನಾಲಿಗೆ ಹಾಗೂ ಧ್ವನಿತಂತುಗಳು ಅನೈಚ್ಛಿಕವಾಗಿ ಆವರಿಸಿ, ಉಸಿರಾಟಕ್ಕೆ ತಾತ್ಕಾಲಿಕ ತಡೆಯನ್ನು ನಿರ್ಮಿಸಿ, ಶ್ವಾಸನಾಳ ಹಾಗೂ ಶ್ವಾಸಕೋಶಗಳಿಗೆ ಆಹಾರವು ಪ್ರವೇಶಿಸದಂತೆ ತಡೆಯುತ್ತದೆ.
ಗಂಟಲ ಕುಹರದಲ್ಲಿ ಇಳಿದ ಆಹಾರವು, ಅನ್ನನಾಳವನ್ನು ಪ್ರವೇಶಿಸುವಲ್ಲಿ ಅನ್ನನಾಳದ ಹಂತವು ಆರಂಭವಾಗುತ್ತದೆ. ನಾಳಿಕೆಯಂತಹ ಸ್ನಾಯುಗಳ ರಚನೆಯ ಕ್ರಮವಾದ ಸಂಕುಚನಾ ಪ್ರಕ್ರಿಯೆಯ ಮೂಲಕ ಆಹಾರವು ಹೊಟ್ಟೆಗೆ ಸೇರುತ್ತದೆ. ಅನ್ನನಾಳದಲ್ಲಿ ಎರಡು ಪ್ರಮುಖ ಸಂಕುಚನಾ ಸ್ನಾಯುಗಳಿವೆ. ಇವುಗಳಿಗೆ ಮೇಲಿನ ಹಾಗೂ ಕೆಳಗಿನ ಅನ್ನನಾಳದ ಸಂಕುಚನಾ ಸ್ನಾಯುಗಳೆಂದು ಹೆಸರು. ಈ ಸಂಕುಚನಾ ಸ್ನಾಯುಗಳು ಉತ್ತಮ ಸ್ಥಿತಿಯಲ್ಲಿ ಇದ್ದರೆ, ಅವು ಲಾಲಾರಸ ಹಾಗೂ ಆಹಾರವು ಬಾಯಿಗೆ ಮತ್ತೆ ಹಿಮ್ಮುಖವಾಗಿ ಪ್ರವೇಶಿಸುವುದನ್ನು ತಡೆಯುತ್ತವೆ. ಈ ರೀತಿಯಲ್ಲಿ, ಈ ಸಂಕುಚನಾ ಸ್ನಾಯುಗಳು ದೇಹದಲ್ಲಿ ನಿರ್ಬಂಧಕಗಳ ಕಾರ್ಯವನ್ನು ನಿರ್ವಹಿಸುತ್ತವೆ.
ಆಹಾರ ನುಂಗುವಿಕೆಯಲ್ಲಿ ಅಸಹಜತೆಗಳು
ಒಬ್ಬ ವ್ಯಕ್ತಿಗೆ ಕೆಳಗೆ ತಿಳಿಸಿದ ಲಕ್ಷಣಗಳು ಇದ್ದರೆ, ಆತನಿಗೆ ನುಂಗುವಿಕೆಯ ತೊಂದರೆ ಇದೆ ಎಂದು ಹೇಳಬಹುದು.
*ಬಾಯಿಯಲ್ಲಿರುವ ಆಹಾರ ಅಥವಾ ದ್ರವವನ್ನು ನುಂಗುವುದಕ್ಕೆ ಕಷ್ಟವಾಗುವುದು.
* ಒಂದು ಸಲ ಆಹಾರವನ್ನು ನುಂಗಿದ ನಂತರ, ಅದು ಗಂಟಲು ಅಥವಾ ಎದೆಯಲ್ಲಿ ಸಿಕ್ಕಿಕೊಂಡಂತಾಗುವುದು.
*ಆಹಾರ ಸೇವನೆಯ ಸಂದರ್ಭದಲ್ಲಿ ಕೆಮ್ಮು ಅಥವಾ ಉಸಿರು ಹಿಡಿದುಕೊಂಡಂತಾಗುವುದು.
*ಆಹಾರ ಸೇವನೆಯ ಸಂದರ್ಭದಲ್ಲಿ ಗಂಟಲು ಒಣಗಿದಂತಹ ಅಥವಾ ಅಸಹಜ ರೀತಿಯ ಧ್ವನಿ ಹೊರಡುವುದು, ಗಂಟಲಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಅನಿಸುವುದು.
* ಆಹಾರ ಸೇವನೆಯ ಅನಂತರ ಸ್ವಲ್ಪ ಆಹಾರವು ಮತ್ತೆ ಹೊರಕ್ಕೆ ಬರುವುದು.
* ಹೆಚ್ಚಾಗಿ ಎದೆ ಉರಿಯುವುದು ಅಥವಾ ಬಾಯಿ ಕಹಿ ಎನಿಸುವುದು. ಯಾವ ಹಂತದಲ್ಲಿ ನುಂಗುವಿಕೆ ಕಠಿಣವಾಗುತ್ತದೆ ಎಂಬುದನ್ನು ಅವಲಂಬಿಸಿಕೊಂಡು, ನುಂಗುವಿಕೆಯ ಸಹಜತೆಯನ್ನು ವಿಂಗಡಿಸುತ್ತಾರೆ.
ಬಾಯಿಯ ನಾಲಗೆ ಹಾಗೂ ಹಲ್ಲುಗಳಲ್ಲಿರುವ ನ್ಯೂನತೆಗಳು ಆಹಾರವನ್ನು ಮುಂದೆ ನೂಕುವ ಅಥವಾ ಆಹಾರವನ್ನು ನುಂಗಲು ಸಂಸ್ಕರಿಸುವ ಚಟುವಟಿಕೆಯ ಮೇಲೆ ಬಹಳ ಪರಿಣಾಮ ಬೀರಬಲ್ಲವು. ಈ ರೀತಿಯ ನ್ಯೂನತೆಗಳಿದ್ದಾಗ, ಘನ ಆಹಾರವನ್ನು ಸೇವಿಸುವ ಸಂದರ್ಭದಲ್ಲಿ, ರೋಗಿಗೆ ಆಹಾರವನ್ನು ನುಂಗಲು ಹಾಗೂ ನುಂಗಲು ಸನ್ನದ್ಧವಾಗಲು ಕಷ್ಟವೆನಿಸಿದರೆ, ದ್ರವಾಹಾರದ ಸೇವನೆಯ ಸಂದರ್ಭದಲ್ಲಿ ನುಂಗುವುದಕ್ಕೆ ಮೊದಲು ದ್ರವವನ್ನು ಬಾಯಿಯ ಕುಳಿಯಲ್ಲಿ ಇರಿಸಿಕೊಳ್ಳಲು ಕಿರಿಕಿರಿಯೆನಿಸಬಹುದು. ಹೀಗಾದಾಗ, ಅವಧಿಗೆ ಮೊದಲೇ ಆಹಾರವು ಗಂಟಲಕುಳಿಯಲ್ಲಿ ಇಳಿದು, ಉಸಿರು ಹಿಡಿದುಕೊಂಡಂತಾಗುತ್ತದೆ.
ಗಂಟಲುಕುಳಿಯ ನುಂಗುವಿಕೆಯಲ್ಲಿ, ಗಂಟಲುಕುಳಿಯ ಹಂತದ ಅಸಹಜತೆಯಿಂದ ಅನ್ನನಾಳದಲ್ಲಿಳಿಯುವ ಆಹಾರದ ಚಲನೆಯೂ ಅಸಹಜಗೊಳ್ಳುತ್ತದೆ. ಹೀಗಾದಾಗ, ಆಹಾರವು ನುಂಗಿದ ಆನಂತರವೂ ಗಂಟಲಲ್ಲೇ ಉಳಿಯುತ್ತದೆ. ಸಾಮಾನ್ಯ ವ್ಯಕ್ತಿ ಆಹಾರವನ್ನು ನುಂಗಿದ ನಂತರವೂ ಸ್ವಲ್ಪ ಅಂಶ ಪಿರಿಫಾರ್ಮ್ ಸೈನಸ್‌ನಲ್ಲೇ ಉಳಿದುಕೊಳ್ಳುತ್ತದೆ. ಆದರೆ ಗಂಟಲಿನ ರಚನೆಯಲ್ಲಿನ ಅಡಚಣೆಯ ಕಾರಣದಿಂದ ಅಂದರೆ, ಜಾಲಗಳು, ಗಡ್ಡೆಗಳು, ದೌರ್ಬಲ್ಯ ಅಥವಾ ಗಂಟಲ ಕುಳಿಯ ಸ್ನಾಯುಗಳ ಸಂಯೋಜನೆಯ ನ್ಯೂನತೆಯ ಕಾರಣದಿಂದ ಅಥವಾ ಮೇಲಿನ ಅನ್ನನಾಳದ ಸಂಕುಚನಾ ಸ್ನಾಯುವಿನ ನ್ಯೂನತೆಯಿಂದ ನುಂಗುವಿಕೆಯ ತೊಂದರೆಯಾಗುತ್ತಿದ್ದರೆ, ಅಧಿಕ ಪ್ರಮಾಣದ ಆಹಾರವು ರೋಗಿಯ ಗಂಟಲಲ್ಲೇ ಉಳಿದುಬಿಡುತ್ತದೆ. ಹಾಗಾಗಿ ರೋಗಿಗೆ ನುಂಗುವ ಪ್ರಕ್ರಿಯೆಯ ಆನಂತರ ಉಸಿರು ಹಿಡಿದುಕೊಂಡರೆ ಅಥವಾ ಆಹಾರವು ಮೂಗಿನಲ್ಲಿ ಮತ್ತೆ ಹಿಂದಕ್ಕೆ ಬಂದಂತಹ ಅನುಭವವಾಗುತ್ತದೆ.
ಘನ ಆಹಾರವನ್ನು ಸೇವಿಸುವ ಸಂದರ್ಭದಲ್ಲಿ, ರೋಗಿಗೆ ಆಹಾರವನ್ನು ನುಂಗಲು ಹಾಗೂ ನುಂಗಲು ಸನ್ನದ್ಧವಾಗಲು ಕಷ್ಟವೆನಿಸಿದರೆ, ದ್ರವಾಹಾರದ ಸೇವನೆಯ ಸಂದರ್ಭದಲ್ಲಿ ನುಂಗುವುದಕ್ಕೆ ಮೊದಲು ದ್ರವವನ್ನು ಬಾಯಿಯ ಕುಳಿಯಲ್ಲಿ ಇರಿಸಿಕೊಳ್ಳಲು ಕಿರಿಕಿರಿಯೆನಿಸಬಹುದು. ಹೀಗಾದಾಗ, ಅವಧಿಗೆ ಮೊದಲೇ ಆಹಾರವು ಗಂಟಲಕುಳಿಯಲ್ಲಿ ಇಳಿದು, ಉಸಿರು ಹಿಡಿದುಕೊಂಡಂತಾಗುತ್ತದೆ.