ಸಾಲಾ ಖಡೂಸ್: ಮತ್ತೆ ಮತ್ತೆ ಬಾಕ್ಸಿಂಗ್

Update: 2016-01-30 19:00 GMT

ತಮಿಳು ಮತ್ತು ಬಾಲಿವುಡ್‌ನಲ್ಲಿ ಈಗಾಗಲೇ ಸಾಕಷ್ಟು ಕೆಲಸ ಮಾಡಿರುವ ಸುಧಾ ಕೊಂಗರಾ ಅವರ ಬಹು ನಿರೀಕ್ಷೆಯ ಚಿತ್ರ ‘ಸಾಲಾ ಖಡೂಸ್’. ಕ್ರೀಡೆಯನ್ನೇ ಕೇಂದ್ರವಸ್ತುವಾಗಿಟ್ಟುಕೊಂಡು ಈ ಚಿತ್ರವನ್ನು ನಿರೂಪಿಸಲಾಗಿದೆ. ‘ಲಗಾನ್’ ಚಿತ್ರದ ಭರ್ಜರಿ ಯಶಸ್ಸಿನ ಮನಸ್ಸಿನ ಬಳಿಕ, ಕ್ರೀಡೆಯಲ್ಲಿಯೂ ಸಿನೆಮಾದ ರೋಚಕತೆಗೆ ಪೂರಕವಾದ ಅಂಶಗಳನ್ನು ಗುರುತಿಸತೊಡಗಿದರು. ಆ ಬಳಿಕ ಕ್ರೀಡಾಳುಗಳನ್ನು ಹಿನ್ನೆಲೆಯಾಗಿಸಿಕೊಂಡು ಹತ್ತು ಹಲವು ಚಿತ್ರಗಳು ಬಂದವು. ಆದರೆ ಇದರಲ್ಲಿ ‘ಚಕ್ ದೇ’ ಮಾತ್ರ ಸಾಕಷ್ಟು ಸುದ್ದಿಯಾಯಿತು. ಅದು ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆಯಾಯಿತು. ಮಹಿಳಾ ಪ್ರಧಾನ ಚಿತ್ರವೆಂದೂ ಗುರುತಿಸಿಕೊಂಡಿತು. ಸಿನೆಮಾ ಮತ್ತು ಕ್ರೀಡೆ ಅಷ್ಟು ಅನ್ಯೋನ್ಯವಾಗಿ ಜೊತೆಯಾದದ್ದು ‘ಚಕ್ ದೇ’ ಚಿತ್ರದಲ್ಲೇ ಇರಬೇಕು. ಶಾರುಕ್ ಖಾನ್ ಕೂಡ ಅದರಲ್ಲಿ ಪ್ರಧಾನ ಆಕರ್ಷಣೆಯಾಗಿದ್ದರು.

ಬಾಕ್ಸಿಂಗ್ ಹಿನ್ನೆಲೆಯಾಗಿಟ್ಟುಕೊಂಡು ಬಾಲಿವುಡ್‌ನಲ್ಲಿ ಹಲವು ಚಿತ್ರಗಳು ಬಂದಿವೆ. ಇತ್ತೀಚೆಗಷ್ಟೇ ‘ಮೇರಿ ಕೋಮ್’ ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ ಸುದ್ದಿ ಮಾಡಿದ್ದರು. ಆದರೂ ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಪಡೆಯಲಿಲ್ಲ. ಇದರ ಬೆನ್ನಿಗೇ, ಇನ್ನೊಂದು ಬಾಕ್ಸಿಂಗ್ ಕೇಂದ್ರಿತವಾದ ಚಿತ್ರ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯಬಹುದು ಎನ್ನುವುದು ಕಾದು ನೋಡಬೇಕಷ್ಟೇ. ‘ಸಾಲಾ ಖಡೂಸ್’ ಬಾಕ್ಸಿಂಗ್ ಕತೆಯನ್ನು ಹೊಂದಿದೆಯೇನೋ ನಿಜ. ಆದರೆ ಇಲ್ಲಿ ಎರಡು ಪ್ರಧಾನ ಪಾತ್ರಗಳಿವೆ. ಒಂದು ಬಾಕ್ಸಿಂಗ್ ಕೋಚ್ ಆದಿ ತೋಮರ್(ಮಾಧವನ್) ಮತ್ತು ಇನ್ನೊಂದು ಮೀನುಗಾರ ತರುಣಿ, ವ್ಯಗ್ರ ಮನಸ್ಥಿತಿಯ ಮಧಿ(ರಿತಿಕಾ ಸಿಂಗ್). ಈಕೆಯನ್ನು ಅತ್ಯುತ್ತಮ ಕ್ರೀಡಾಳುವಾಗಿ ಪರಿವರ್ತಿಸುವ ಹೊಣೆಗಾರಿಕೆ ತೋಮರ್‌ನದ್ದು. ಹಾಗೆ ನೋಡಿದರೆ ಇಲ್ಲಿ ಚಿತ್ರದುದ್ದಕ್ಕೂ ಪರಸ್ಪರ ವೈರಿಗಳಾಗಿ ಗುದ್ದಾಡುತ್ತಲೇ, ಈ ಎರಡು ಪಾತ್ರಗಳು ನಮಗೆ ಆತ್ಮೀಯವಾಗುತ್ತವೆ.

ಆದಿ ತೋಮರ್‌ನ ಹಿನ್ನೆಲೆ, ಚಕ್ ದೇಯ ಕತೆಯನ್ನು ಒಂದಿಷ್ಟು ಹೋಲುತ್ತದೆ. ತಾನು ಕಳೆದುಕೊಂಡ ಪದಕವನ್ನು ತನ್ನ ಶಿಷ್ಯೆಯ ಮೂಲಕ ಪಡೆದುಕೊಳ್ಳುವ ಬಯಕೆ ಈತನದು. ಈತನ ಸ್ವಭಾವವೂ ಕಠೋರವಾದುದೇ ಆಗಿದೆ. ಈತ ಮಧಿಯನ್ನು ಪಳಗಿಸಿ, ಅತ್ಯುತ್ತಮ ಬಾಕ್ಸಿಂಗ್ ಪಟುವಾಗಿಸಿ ತನ್ನ ಕನಸನ್ನು ಈಡೇರಿಸುತ್ತಾನೆಯೇ ಎನ್ನುವುದು ಚಿತ್ರದ ಮುಖ್ಯ ಕತಾವಸ್ತು.

ಕತೆ ಪೂರ್ವನಿರ್ಧರಿತವಾಗಿರಬಹುದು. ಪ್ರೇಕ್ಷಕರು ಮೊದಲೇ ಊಹಿಸಬಹುದಾದ ನಡೆ ಚಿತ್ರದಲ್ಲಿದೆ. ಆದರೂ ಕೋಚ್ ಮತ್ತು ಕ್ರೀಡಾಳುಗಳಾಗಿ ಮಾಧವನ್ ಮತ್ತು ರಿತಿಕಾ ಸಿಂಗ್ ಅವರ ವ್ಯಕ್ತಿತ್ವವನ್ನು ನಿರ್ದೇಶಕರು ಗಟ್ಟಿಯಾಗಿ ಕಟ್ಟಿಕೊಟ್ಟಿದ್ದಾರೆ. ಇವರಿಬ್ಬರ ಅಭಿನಯವೇ ಚಿತ್ರದ ಜೀವಾಳ. ಹಾಗೆಯೇ ನಾಸೆರ್, ಮುಮ್ತಾಝ್ ಮತ್ತು ಝಾಕಿರ್ ಅವರ ಪಾತ್ರಗಳೂ ಕತಾ ನಾಯಕ, ನಾಯಕಿಯರಿಗೆ ಪೂರಕವಾಗಿದೆ. ಚಿತ್ರ ಕ್ರೀಡಾ ಕ್ಷೇತ್ರದೊಳಗಿರುವ ಬೇರೆ ಬೇರೆ ಸಮಸ್ಯೆಗಳ ಕಡೆಗೂ ಬೆಳಕು ಚೆಲ್ಲುತ್ತವೆ. ಇಲ್ಲಿ ಮಹಿಳಾ ಕ್ರೀಡಾಳುಗಳನ್ನು ಹೇಗೆ ಶೋಷಿಸಲಾಗುತ್ತದೆ ಎನ್ನುವುದನ್ನು ಹೇಳಲಾಗಿದೆ. ಹಾಗೆಯೇ ಬಡ ಕ್ರೀಡಾಳುಗಳು ಎದುರಿಸುವ ಮೂಲಭೂತ ಸಮಸ್ಯೆಗಳನ್ನು ತೆರೆದಿಡಲಾಗಿದೆ. ಇದರೊಳಗಿರುವ ರಾಜಕೀಯ, ಕ್ಷುದ್ರ ಮನಸ್ಸುಗಳ ಕಡೆಗೂ ಕ್ಯಾಮರಾವನ್ನು ಹರಿಸಲಾಗಿದೆ. ಒಂದಿಷ್ಟು ತೀರಾ ಹೆಚ್ಚೇ ಎನ್ನುವಷ್ಟು ಭಾವುಕ ಸನ್ನಿವೇಶಗಳನ್ನು ತುರುಕಿಸಲಾಗಿದೆ. ಹಲವೆಡೆ ಚಿತ್ರ ತುಸು ಸಡಿಲಾಗಿದೆಯಾದರೂ, ಮುಖ್ಯ ಪಾತ್ರಗಳಿಂದಾಗಿ ಚಿತ್ರ ಇಷ್ಟವಾಗುತ್ತದೆ. ಚಿತ್ರ ಒಮ್ಮೆ ನೋಡುವುದಕ್ಕೆ ಅಡ್ಡಿಯಿಲ್ಲ.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News