ಅಕ್ಷಯ ಕಾವ್ಯದ ತಿರುಮಲೇಶ್

Update: 2016-01-30 19:12 GMT

ನೇಸರ ನೋಡು
ಎಂಚಿನ ಮಾರಾಯ್ರ ನಮ್ಮ ತಿರುಮಲೇಶರಿಗೆ ಪ್ರಶಸ್ತಿ ಆಯಿತಂತೆ.......
ಡಿಸೆಂಬರ್ ಮಾಗಿ ಚಳಿಯಲ್ಲೂ ಟೆಲಿಫೋನ್ ಪುಳಕಗೊಂಡಿತ್ತು. ಅಷ್ಟೊಂದು ಉತ್ಸಾಹ ತುಂಬಿ ತುಳುಕುತಿತ್ತು ಸುದ್ದಿ ಅರುಹಿದ ದನಿಯಲ್ಲಿ.
‘‘ಕೀರ್ತಿ ಶನಿ ತೊಲಗಾಚೆ’’ ಎಂದರೂ ಅದು ಬೆನ್ನಟ್ಟಿ ಬಂದು ಬಾಗಿಲು ಬಡಿಯುವುದಂತೆ. ಈ ಪ್ರಶಸ್ತಿಗಳದೂ ಅದೇ ಜಾಯಮಾನ. ವಾಪಸು ಮಾಡಿದರೂ ನಿಲ್ಲುವುದಿಲ್ಲ. ಪ್ರಶಸ್ತಿ ಬರುತ್ತಲೇ ಇರುತ್ತದೆ. ಈಗ ನಮ್ಮ ಪ್ರಮುಖ ಕವಿಗಳಲ್ಲೊಬ್ಬರಾದ ಕೆ.ವಿ.ತಿರುಮಲೇಶರ ಸರದಿ.

ಪ್ರಶಸ್ತಿ ಬಂದಿರುವುದು ಕಾವ್ಯಕ್ಕೆ, ಕವಿಗಲ್ಲ ಎಂಬರ್ಥದಲ್ಲಿ ತಿರುಮಲೇಶರು, ಪ್ರಶಸ್ತಿ ಪ್ರಕಟವಾದ ಕೂಡಲೇ ಪ್ರತಿಕ್ರಿಯಿಸಿರುವುದುಂಟು. ಒಪ್ಪತಕ್ಕಂಥ ಮಾತೇ. ಹಾಗೆ ನೋಡಿದರೆ ಸತ್ವ ಉಳ್ಳ, ಪ್ರತಿಭಾನ್ವಿತನಾದ ಯಾವುದೇ ಒಬ್ಬ ಕವಿಸಾಹಿತಿಯೂ ಒಂದು ಭಾಷೆಗೆ ಪ್ರಕೃತಿಯಿಂದ ಸಂದ ಪ್ರಶಸ್ತಿಯಿದ್ದಂತೆ. ಹೀಗೆ ಕವಿ ತಿರುಮಲೇಶರು ಕನ್ನಡದ ಒಂದು ಹೆಮ್ಮೆ.

ತಿರುಮಲೇಶರ ಸೃಜನಶೀಲತೆಯ ಮೂಲಬಿಂದು ಕಾವ್ಯ. ಗದ್ಯದಲ್ಲೂ ಹಿಂದೆಬಿದ್ದವರಲ್ಲ. ಸಣ್ಣಕಥೆ, ವಿಮರ್ಶೆ, ಅನುವಾದಗಳಲ್ಲೂ ಗಣನೀಯ ಬರವಣಿಗೆ ಮಾಡಿದ್ದಾರೆ. ಅವರ ಕಾವ್ಯಕ್ಕೆ ಹೆಚ್ಚುಕಡಿಮೆ ಕನ್ನಡ ನವ್ಯಕಾವ್ಯದಷ್ಟೇ ಪ್ರಾಯ. ತಿರುಮಲೇಶರ ಮೊದಲ ಕವನ ಸಂಕಲನ ‘ಮುಖವಾಡಗಳು’ ಪ್ರಕಟವಾದದ್ದು ನವ್ಯ ಮಾರ್ಗ ಭರಾಟೆಯಲ್ಲಿ ಸಾಗಿದ್ದ ಕಾಲಘಟ್ಟದಲ್ಲೇ. ಮುಖವಾಡಗಳು, ವಠಾರ, ಮಹಾಪ್ರಸ್ಥಾನ, ಮುಖಾಮುಖಿ ತಿರುಮಲೇಶರ ಮುಖ್ಯ ಕವನ ಸಂಕಲನಗಳು. ನಾಯಕ ಮತ್ತು ಇತರರು, ಜಾಗುವಾ ಮತ್ತು ಇತರರು - ಕಥ ಸಂಕಲನಗಳು.

ಸಾಹಿತ್ಯ ಚರಿತ್ರೆ ಗುರುತಿಸಿರುವಂತೆ, ‘‘ಇತರ ಸಮಕಾಲೀನ ಕವಿಗಳಿಗಿಂತ ಭಿನ್ನವಾದ ವಸ್ತು ಶೈಲಿ ಲಯಗಳಲ್ಲಿ ಬರೆದ ತಿರುಮಲೇಶ್ ಆರಂಭದಿಂದಲೇ ಹಿರಿಯ ವಿಮರ್ಶಕರ ಗಮನ ಸೆಳೆದವರು.’’ ಅಡಿಗರ ಪ್ರಭಾವವನ್ನು ಜೀರ್ಣಿಸಿಕೂಂಡು ಶುರುವಿನಿಂದಲೇ ಕಾವ್ಯದ ಹೂಸ ಸಾಧ್ಯತೆಗಳ ಹುಡುಕಾಟದಲ್ಲೆ ತೂಡಗಿಕೂಂಡ ಈ ಕವಿ ‘ಮಹಾಪ್ರಸ್ಥಾನ’ ಸಂಕಲನದ ಪ್ರಕಟಣೆಯೂಂದಿಗೆ ‘ನವ್ಯ ಯುಗದ ಅತ್ಯಂತ ಸಮರ್ಥ ಕವಿ’ ಎಂಬ ಅಗ್ಗಳಿಕೆಗೆ ಪಾತ್ರರಾದರು. ಸಂಕಲನಕ್ಕೆ ನಾಮ, ಕವಿಗೆ ಅನ್ವರ್ಥನಾಮ ಎರಡೂ ಆಗಿರುವ ‘ಮಹಾಪ್ರಸ್ಥಾನ’ದ ವಸ್ತು ಉತ್ತರ ಮಹಾಭಾರತದ ಪಾಂಡವರ ಸ್ವರ್ಗಾರೋಹಣ ಪ್ರಸಂಗ. ‘‘ನನ್ನ ಪದ್ಯಗಳು ಹೂಸ ಸೀಮೆಗಳನ್ನು ಹುಡುಕುತ್ತಿವೆ’’ ಎನ್ನುವ ಕವಿಯ ಮಾತುಗಳಿಗೆ ಸಮರ್ಥನೆಯೆಂಬಂತೆ ‘ಮಹಾಪ್ರಸ್ಥಾನ’ದ ಹಿಂದಿನ ಉದ್ದೇಶವೂ ಅನ್ವೇಷಣೆಯೇ ಆಗಿದೆ. ಮೂರು ಭಾಗಗಳ ಈ ನೀಳ್ಗವನದಲ್ಲಿ ವಿಜಯಿ ಪಾಂಡವರಲ್ಲಿ ಯುದ್ಧಗೆದ್ದ ನಂತರ ಮೂಡುವ ಪಾಪಪ್ರಜ್ಞೆ, ವಿಷಾದ, ಏಕಾಕಿತನ, ಸ್ವಂತ ಸ್ವರ್ಗಕ್ಕಾಗಿ ಅವರು ಹಿಡಿಯುವ ಅನ್ವೇಷಣೆಯ ಹಾದಿ ತುಂಬ ಮಾರ್ಮಿಕವಾಗಿ ಮೂಡಿಬಂದಿದೆ. ಕವನದ ಮುಕ್ತಾಯಕ್ಕೆ ಬರುವ ವೇಳೆಗೆ ‘ಮಹಾಪ್ರಸ್ಥಾನ’ ಕೇವಲ ಯುಧಿಷ್ಠರನ ಸ್ವರ್ಗಾನ್ವೇಷಣೆಯ ನಿರೂಪಣೆಯಷ್ಟೇ ಆಗದೆ ಮನುಕುಲದ ಅನ್ವೇಷಣೆಯ ಕತೆಯೂ ಆಗುತ್ತದೆ.

ಈಗ ಪ್ರಶಸ್ತಿಗೆ ಪಾತ್ರವಾಗಿರುವ ತಿರುಮಲೇಶರ ‘ಅಕ್ಷಯ ಕಾವ್ಯ’ ಒಂದು ಮಹಾಪ್ರಸ್ಥಾನದಿಂದ ಇನ್ನೊಂದು ಮಹಾಯಾನದತ್ತ ಸಾಗಿ ಬಂದಿರುವ ಒಂದು ಪಯಣ. ಇದೊಂದು ವಿಶಿಷ್ಟ ಮಾದರಿ. ಸಾಹಿತ್ಯ ಸಂಭ್ರಮಗಳ ಚಹಾದ ಜೋಡಿ ಅಥವಾ ವೇದಿಕೆಯಲ್ಲಿ ಕೂಡಿ ನಡೆಯುತ್ತಿರುವ ಚರ್ಚೆಗಳ ಮಹಾಕಾವ್ಯದ ಜಾಡಿನದಲ್ಲ. ಇದು ಖಂಡವೂ ಅಲ್ಲ ಅಖಂಡವೂ ಅಲ್ಲ. ಇಲ್ಲಿ ಒಂದೊಂದು ಕವನವೂ ಪ್ರತ್ಯೇಕ ಘಟಕದಂತೆ ತೋರಿದರೂ ಅವುಗಳಿಗೆ ಸ್ವಂತಿಕೆ ಘೋಷಿಸುವ ಶೀರ್ಷಿಕೆ ಇಲ್ಲ. ಇವು ಬಿಡಿಬಿಡಿಯಾಗಿ ಮುಕ್ತಕಗಳೂ ಹೌದು, ಪೋಣಿಸಿದರೆ ಮಾಲೆಯೂ ಆದೀತು. ಇಲ್ಲಿ ಕಿರು ತೂರೆಯುಂಟು, ಉಪನದಿಯುಂಟು, ಎಲ್ಲವನ್ನೂ ಒಳಗೂಳ್ಳುವ ಮುಖ್ಯವಾಹಿನಿಯೂ ಕಂಡೀತು. ‘‘ಇದೊಂದು ಅನ್ವೇಷಣೆ ಯಾತ್ರೆ ಸ್ವಗತ ಎಂದು...’’ ಮುಂತಾಗಿ ಹೇಳಿಕೂಳ್ಳಲು ಕವಿ ಹಿಂಜರಿದಿದ್ದಾರಾದರೂ-

ಇಲ್ಲೆಲ್ಲೂ ಅಮಾನುಷ ಪ್ರಪಂಚವಿಲ್ಲ ಎಲ್ಲವೂ
ಮಾನುಷವೇ ಎಲ್ಲರೂ ಮನುಷ್ಯರೇ
ಕಾವ್ಯಕ್ರಿಯೆಯ ಒಳಹೊರಗಣ ಸೀಮೆಗಳ ಮಿತಿಗಳ
ಸ್ಪರ್ಶಿಸುತ್ತಲು ಹಿಂದೆಗೆಯುತ್ತಲು ಮುಗಿಯದ ಕ್ರಿಯೆ..

ಈ ಕಾವ್ಯ ಕ್ರಿಯಯೇ ಒಂದು ಹೊಸ ಪ್ರಯೋಗ. ವ್ಯಷ್ಟಿಯಾಗಿಯೂ ಸಮಷ್ಟಿಯಾಗಿಯೂ ಅವರವರ ದರುಶನಕೆ ತಕ್ಕಂತೆ ಸಲ್ಲುವ ಇದು, 478 ಪುಟಗಳ ಅಕ್ಷಯ ಕಾವ್ಯ. ದಕ್ಕಿತು ಎನ್ನುವಷ್ಟರಲ್ಲಿ ಕೈ ಜಾರಿದ್ದೇ ಹೆಚ್ಚು-

ಇಷ್ಟು ಸುದೀರ್ಘ ಪ್ರಯಾಣದ ದಾಖಲೆಗೆ
ಈ ಸಾಲುಗಳು ಸಾಲವು
ಆದರೂ ಹಿನ್ನೋಟ ಯಾವಾಗಲೂ
ಅಂತಃಕರಣದಿಂದ ಸಂಕೋಚಗೊಳ್ಳುತ್ತದೆ
ಕಣ್ಣುಗಳೂ ಈಗ ಮೊದಲಿನ ಬೆರಗನ್ನು
ತಾಳಲು ಅಸಮರ್ಥ
..............................
ಕೆಲವು ಸಲ ಖಾಲಿ ಜಾಗಗಳಲ್ಲಿ ನಿಂತಿರುತ್ತೇನೆ
ಈ ಸಾಲುಗಳ ನೋಡಿ:
ಶಬ್ದವ ಹುಡುಕಲು ಶಬ್ದವ ಕಳಿಸಿ
ಕಾದು ಕುಳಿತು ಕಾಲವೆಷ್ಟಾಯ್ತು
ಯಾರ ಕರೆಯುವುದಕ್ಕೆ ಯಾರ ಕಳಿಸಿದ್ದು
ಇರುವುದನ್ನ ಅಳಿಸಿಯಾಯ್ತು
ಹಾಗಿದ್ದಲ್ಲಿ ಮುಂದೆ-
ಲೋಕದ ಸಮಾಧಾನಕ್ಕೆ ಬರೆಯುವವರು
ಸಾವಿರ ಜನ ಇದ್ದಾರೆ
ಸಿದ್ಧರೂಪಗಳಲ್ಲಿ
ಶಬ್ದನಾಚಿಕೆಗೆ ನಾನು ತಲ್ಲಣಿಸುವುದರಿಂದ ಹೀಗೆ
ಸಾವಿರ ಜನ ಇರಬಹುದು ಆದರೆ-

ದೇಹ ಸಿಕ್ಕೀತು ಮನಸ್ಸು ಸಿಕ್ಕಿತೆ
  ಮಡಿಲು ಸಿಕ್ಕಿತು ಮಮತೆ ಸಿಕ್ಕಿತೆ
  ಕೈ ಸಿಕ್ಕಿತು ಸ್ಪರ್ಶ ಸಿಕ್ಕಿತೆ
  ನೋಟ ಸಿಕ್ಕಿತು ದೃಷ್ಟಿ ಸಿಕ್ಕಿತೆ
  ಮಾತು ಸಿಕ್ಕಿತು ಅರ್ಥ ಸಿಕ್ಕಿತೆ
  ಚೆನ್ನಮಲ್ಲಿಕಾರ್ಜುನ
ಸಿಕ್ಕಿತಂದು ಚರಿತ್ರೆಯಾದರೂ ದಾಖಲಿಸಿರಬಹುದೆ ಎಂದರೆ-
ಚರಿತ್ರೆ ಕೇವಲ ಒಂದು ಒಳಚಡ್ಡಿಯಾಗಿರುತ್ತಿದ್ದರೆ
ಒಳಹೊರ ಮಾಡಬಹುದಾಗಿತ್ತು
ಕೊಳಕು ಹಿಡಿದಾಗ ತೂಳೆದು ಝಾಡಿಸಬಹುದಿತ್ತು
ಸಂತ
ಕೊಳಕಿನ ಅರಿವ ಕಳಕೊಂಡವನೆ ಅದರಿಂದ
ಮುಕ್ತನಾದನೆ ಪರಮಹಂಸ
ಯಾವ ಅರಿವೆಯ
ತೊಡದಿದ್ದವ ಕಲ್ಲ ಪ್ರಶ್ನೆಗಳಿಂದ ರಿಕ್ತನಾದವ
ಇಲ್ಲಿ ಪ್ರತಿದಿನ ನಿಂತು ಕೇವಲದವ
 ಸುಮ್ಮನೆ ಖಯಾಲಿಗೆ ಸೊಪ್ಪುಮಾರುವ

ಇವು ಮನಸ್ವಿಯಾಗಿ ಬಂದ ಕೆಲವು ಸ್ಯಾಂಪಲುಗಳು. ಇವುಗಳ ನಡುವೆ ಕಂದಕಗಳಿರಬಹುದು, ಅವುಗಳಿಗೆ ಸಂಕಗಳೂ ಸಾಧ್ಯವಾದೀತು. ಸಂವೇದಿ ರಸಿಕರಿಗಿಲ್ಲುಂಟು ಅಕ್ಷಯ ಕಾವ್ಯದ ಅರವಂಟಿಗೆ.

ತಿರುಮಲೇಶ್ ಕನ್ನಡ ನೆಲ ಕಾಸರಗೋಡಿನವರು. ಉದ್ಯೋಗ ನಿಮಿತ್ತ ಹೊರನಾಡ ಕನ್ನಡಿಗರು. ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ಸಂಸ್ಥೆಯಲ್ಲಿ ಭಾಷಾ ಶಾಸ್ತ್ರದ ಪ್ರಾಧ್ಯಾಪಕರು. ಹೀಗೆ ಹೈದರಾಬಾದ್ ಕನ್ನಡಿಗ. ಕನ್ನಡಿಗರು ಹೊರನಾಡ ಕನ್ನಡಿಗರನ್ನು ಅಲಕ್ಷಿಸುತ್ತಿದ್ದಾರೆಂದು ತಿರುಮಲೇಶ್ ವ್ಯಗ್ರರಾದುದುಂಟು. ನಮ್ಮ ವ್ಯವಸ್ಥೆಯಲ್ಲಿ ಅನೇಕ ಸಲ ನಿಜದನಿಗಳು ಗಿರಿಯನ್ನು ಮುಟ್ಟುವುದಿಲ್ಲ. ಇರಲಿ. ಈ ಒಂದು ವಿನೂತನ ಕಾವ್ಯ ಪ್ರಯೋಗಕ್ಕಾಗಿ ಹಾಗೂ ಅದು ಗಳಿಸಿರುವ ಮಾನ್ಯತೆಗಾಗಿ ತಿರುಮಲೇಶರನ್ನು ಅಭಿನಂದಿಸೋಣ, ಹೇಳೋಣ:

ಸ್ವಸ್ತಿ ಸ್ವಸ್ತಿ ಸ್ವಸ್ತಿ

ಭರತ ವಾಕ್ಯ:
ಕವಿ ಈಗ ಪರಾಕು ಪಂಪನೊತ್ತುವುದಿಲ್ಲ,
ಹಾಡುವಾಗ
ಕೀರ್ತಿಯನ್ನು ಮಂದ್ರದಲ್ಲಿ ಆಲಾಪಿಸುವುದಿಲ್ಲ,
ಕೋಮಲಗಾಂಧಾರದಲ್ಲಿ ಪ್ರಶಸ್ತಿಯನ್ನು ಪಲುಕುವುದಿಲ್ಲ.

ಎಲ್ಲವನೂ ನೀಟಾಗಿ,
ಮುರಿಯದಂತೆ, ಮುಕ್ಕಾಗದಂತೆ
ಕಾಗದದಲ್ಲಿ ಸುತ್ತಿ
ಪಾರ್ಸೆಲಿಸಿ ಮರಳಿಸುತ್ತಾನೆ ಆಸ್ಥಾನದ ವಿಳಾಸಕ್ಕೆ:

‘‘ತೆಗೆದುಕೊ ನೀ ಕೊಟ್ಟ ಎಲ್ಲ ವಸ್ತ್ರವಿಲಾಸ’’
ಈ ಪ್ರಶಸ್ತಿ ಈ ಫಲಕ ಈ ಬಹುಮಾನಧನ
(ಬಿಡಲಾರೆ ನನ್ನ ಮಾನಧನ)
‘ಬತ್ತಲಾಗದೆ ಬಯಲು ಸಿಕ್ಕದಿಲ್ಲಿ’
ಸತ್ಯಂ ಭ್ರೂಯಾತ್.


ಪತ್ರಿಕೋದ್ಯಮ, ಸಾಹಿತ್ಯ, ವಿಮರ್ಶಾ ಕ್ಷೇತ್ರಗಳಲ್ಲಿ ಜಿ. ಎನ್. ರಂಗನಾಥ ರಾವ್ ಅವರದು ಚಿರಪರಿಚಿತ ಹೆಸರು. 1964ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ರಂಗನಾಥ ರಾವ್ ಅವರು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕಸ್ತೂರಿಗಳಲ್ಲಿ ಕಾರ್ಯನಿರ್ವಹಿಸಿದವರು. ಅಭಿವ್ಯಕ್ತಿ ಸ್ವಾತಂತ್ರ ದಮನ, ಅಸಹಿಷ್ಣುತೆಯನ್ನು ವಿರೋಧಿಸಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಮರಳಿಸುವ ಮೂಲಕ ಇತ್ತೀಚೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ, ಟಿಎಸ್ಸಾರ್ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ರಂಗನಾಥ್, ಜನಪರ, ಜೀವಪರ ನಿಲುವುಗಳಿಗೆ ಸ್ಪಂದಿಸುತ್ತಾ ಬಂದವರು. ಇಂದಿನಿಂದ ಪ್ರತಿ ರವಿವಾರ ರಂಗನಾಥ ರಾವ್ ಅವರು ಪತ್ರಿಕೆಯಲ್ಲಿ ‘ನೇಸರ ನೋಡು’ ಅಂಕಣದ ಮೂಲಕ ಓದುಗರನ್ನು ತಲುಪಲಿದ್ದಾರೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News