ಕಾಶ್ಮೀರ ಕಣಿವೆಯೊಳಗಿನ ಕ್ಷುಲ್ಲಕ ರಾಜಕೀಯದಾಟ
ಸಿದ್ಧಾಂತಗಳ ಹಂಗಿಲ್ಲದ, ಅಧಿಕಾರವೇ ಮುಖ್ಯವಾಗಿ ಅದಕ್ಕಾಗಿ ಮಾಡಿಕೊಳ್ಳುವ ಒಂದು ಚುನಾವಣೋತ್ತರ ಮೈತ್ರಿಕೂಟ ಎಷ್ಟು ಮಾರಕವಾಗಬಹುದೆಂಬುದನ್ನು ಜಮ್ಮುಕಾಶ್ಮೀರದ ಎರಡು ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಪೀಪಲ್ಸ್ ಡೆಮೋಕ್ರಾಟಿಕ್ ಪಕ್ಷ(ಪಿಡಿಪಿ) ಸಾಬೀತು ಪಡಿಸಿವೆ.
ಹತ್ತು ತಿಂಗಳ ಹಿಂದೆ ನಡೆದ ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಗಳಲ್ಲಿ ಯಾವ ಪಕ್ಷವೂ ಸ್ಪಷ್ಟವಾಗಿ ಬಹುಮತ ಪಡೆಯದೇ ಇದ್ದಾಗ, ಎರಡು ತಿಂಗಳುಗಳ ಕಾಲ ಸರಕಾರ ರಚನೆಗಾಗಿ ಮೈತ್ರಿ ಮಾತುಕತೆ ನಡೆಸಿದ ಪಕ್ಷಗಳಲ್ಲಿ ಅಂತಿಮವಾಗಿ 28 ಸ್ಥಾನಗಳನ್ನು ಪಡೆದ ಪಿಡಿಪಿ ಮತ್ತು 25 ಸ್ಥಾನಗಳನ್ನು ಪಡೆದ ಬಿಜೆಪಿ ಮೈತ್ರಿಮಾಡಿಕೊಂಡು ಸರಕಾರ ರಚನೆಗೆ ಮುಂದಾಗಿದ್ದವು. ಪಿಡಿಪಿಯ ಮುಫ್ತಿ ಮುಹಮ್ಮದ್ ಸಯೀದ್‌ರವರು ಮುಖ್ಯಮಂತ್ರಿ ಸ್ಥಾನಕ್ಕೇರಿದರೆೆ ಬಿಜೆಪಿ ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡಿತು. ಸರಕಾರ ರಚನೆಗೆ ಮುನ್ನ ನಡೆದ ಮಾತುಕತೆಗಳ ಪ್ರಕಾರ ಎರಡೂ ಪಕ್ಷಗಳು ಕೆಲವೊಂದು ರಾಜಕೀಯ ಮತ್ತು ಆರ್ಥಿಕ ವಿಚಾರಗಳನ್ನೊಳಗೊಂಡ ಸಾಮಾನ್ಯ ಕಾರ್ಯಕ್ರಮಗಳ ಕರಡೊಂದನ್ನು ಅಂಗೀಕರಿಸಿ ಆಡಳಿತ ನಡೆಸಲು ಪ್ರಾರಂಭಿಸಿದವು.
ಆದರೆ ತತ್ವ ಸಿದ್ಧಾಂತಗಳ ವಿಚಾರದಲ್ಲಿ ಆಕಾಶ-ಭೂಮಿಯಷ್ಟು ಅಂತರವಿದ್ದ ಎರಡೂ ಪಕ್ಷಗಳ ಸಚಿವರು ಅನಗತ್ಯ ಹೇಳಿಕೆಗಳನ್ನು ನೀಡುತ್ತಾ ಮೈತ್ರಿಕೂಟದ ಆಯುಸ್ಸಿನ ಬಗ್ಗೆ ಅನುಮಾನ ಹುಟ್ಟುವಂತೆ ಮಾಡುತ್ತಾ ಹೋದರು. ಒಬ್ಬ ಮಂತ್ರಿ ಏಕರೂಪನಾಗರೀಕ ಸಂಹಿತೆಯ ಬಗ್ಗೆ ಮಾತನಾಡಿದರೆ, ಮತ್ತೊಬ್ಬ ಮಂತ್ರಿ ದನದ ಮಾಂಸ ನಿಷೇಧದ ಬಗ್ಗೆ ಮಾತಾಡಿ ಸರಕಾರದ ಪಾಲುದಾರ ಪಕ್ಷಗಳಿಗೆ ಮುಜುಗರವನ್ನುಂಟು ಮಾಡಿದರು. ಸರಕಾರ ತೆಗೆದುಕೊಳ್ಳಬೇಕಾದ ಪ್ರತಿಯೊಂದು ನಿರ್ಧಾರದ ಹಿಂದೆಯೂ ಪಿಡಿಪಿ ಮತ್ತು ಬಿಜೆಪಿಗಳ ಸ್ವಹಿತಾಸಕ್ತಿಗಳು ಕೆಲಸ ಮಾಡತೊಡಗಿ ರಾಜ್ಯದಲ್ಲಿ ಅಭಿವೃದ್ಧಿಯ ಕಾರ್ಯಕುಂಠಿತವಾಗ ತೊಡಗಿತು. ಬಿಜೆಪಿ ಜೊತೆ ಸೇರಿ ಸರಕಾರ ರಚಿಸಿದ ಬಗ್ಗೆ ಒಂದಿಷ್ಟು ಅಸಮಾಧಾನಗೊಂಡಿದ್ದ ಕಾಶ್ಮೀರಿ ಮುಸ್ಲಿಮ್ ಸಮುದಾಯಕ್ಕೆ ಈ ತೆರನಾದ ಆಮೆಗತಿಯ ಸರಕಾರದ ನಡೆ ಮತ್ತಷ್ಟು ಬೇಸರ ತಂದಿದ್ದು ನಿಜ. ಅದೇ ರೀತಿಸ್ವತಂತ್ರವಾಗಿ ಕಾರ್ಯನಿರ್ವಹಿಸಲಾಗದ ಬಗ್ಗೆ ಬಿಜೆಪಿಯ ಬೆಂಬಲಿಗ ಪಡೆಗೂ ನಿರಾಸೆಯಾಗತೊಡಗಿತ್ತು.
ಇದಕ್ಕೆ ಇಂಬು ಕೊಟ್ಟಂತೆ ಜಮ್ಮುಕಾಶ್ಮೀರ ಸರಕಾರದ ಮುಖ್ಯ ಕಾರ್ಯದರ್ಶಿ ಈ ಸರಕಾರಕ್ಕೆ ಕಾರ್ಯದರ್ಶಿಯ ಅಗತ್ಯವಿಲ್ಲ, ಒಬ್ಬ ಸಾಮಾನ್ಯ ಸ್ಟೆನೋಗ್ರಾಫರ್ ಸಾಕೆನಿಸುತ್ತದೆಯೆಂಬ ಹೇಳಿಕೆ ನೀಡುವುದರ ಮೂಲಕ ಸರಕಾರದ ಕಾರ್ಯ ವೈಖರಿಯನ್ನು ತೆರೆದಿಟ್ಟರು.ಹೇಗೊ ಕಾಶ್ಮೀರದಲ್ಲಿ ಸರಕಾರ ನಡೆಯುತ್ತಿದೆಯೆಂದು ಕೊಳ್ಳುತ್ತಿರುವಾಗಲೇ ದಿಲ್ಲಿಯಲ್ಲಿ ಕೇಂದ್ರೀಕರಣಗೊಂಡಿರುವ ಕೆಲ ನಾಯಕರು ಅನಗತ್ಯ ಹೇಳಿಕೆಗಳನ್ನು ನೀಡುತ್ತಾ ಪಿಡಿಪಿಯ ಅಸಮಾಧಾನಕ್ಕೆ ಕಾರಣವಾಗತೊಡಗಿದರು. ಇಂತಹ ಬೆಳವಣಿಗೆಗಳು ಎರಡೂ ಮೈತ್ರಿಪಕ್ಷಗಳಲ್ಲಿ ತೀವ್ರವಾದ ಭಿನ್ನಮತೀಯ ಬೀಜಗಳನ್ನು ಹುಟ್ಟು ಹಾಕಿದವು. ಆದರೆ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್‌ರವರ ಮುತ್ಸದ್ದಿತನದ ಕಾರಣ ಸರಕಾರ ನಿದಾನಗತಿಯಲ್ಲಾದರು ನಿರಾತಂಕವಾಗಿ ನಡೆಯತೊಡಗಿತು. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಎರಡೂಪಕ್ಷಗಳ ಸಚಿವರಲ್ಲಿ ಭಿನ್ನಮತ ಉಂಟಾಯಿತು. ಪರಿಹಾರ ಒದಗಿಸುವಲ್ಲಿ ಆದ ವಿಳಂಬದಿಂದ ಜನರಲ್ಲಿ ತಲೆದೋರಿದ ಆಕ್ರೋಶವನ್ನು ಹೋಗಲಾಡಿಸಲು ಸ್ವತಃ ಪ್ರಧಾನಿಯವರೇ ಪ್ರವಾಸ ಮಾಡಿ ಪರಿಹಾರ ಘೋಷಿಸಬೇಕಾಯಿತು. ಆದರೆ ಕಳೆದ ಏಳು ದಶಕಗಳಿಂದಲೂ ಕೇಂದ್ರ ಸರಕಾರಗಳ ಇಂತಹ ಕಣ್ಣೊರೆಸುವ ನಾಟಕಗಳನ್ನು ನೋಡುತ್ತಲೇ ಬಂದ ಕಾಶ್ಮೀರಿಯರಿಗೆ ಸಮಾಧಾನವಾಗಲಿಲ್ಲ. ದಿನೇ ದಿನೇ ಜನರಲ್ಲಿ ಸರಕಾರದ ಬಗ್ಗೆ ಭರವಸೆ ಕಡಿಮೆಯಾಗುತ್ತಾ ಬಂತು.
ಇಂತಹ ಸಮಯದಲ್ಲಿ ಜನವರಿಯ ಮೊದಲವಾರದಲ್ಲಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ನಿಧನರಾದಾಗ ಸಹಜವಾಗಿ ಪಿಡಿಪಿಯ ಅಧ್ಯಕ್ಷೆಯಾಗಿದ್ದ ಮೆಹಬೂಬ ಮುಖ್ಯಮಂತ್ರಿ ಗಾದಿಯನ್ನು ಏರಬೇಕಾಗಿತ್ತು. ಆದರೆ ಶೋಕಾಚರಣೆಯ ನೆಪವನ್ನೊಡ್ಡಿ ಅವರು ಅಧಿಕಾರ ಸ್ವೀಕರಿಸಲು ನಿರಾಕರಿಸಿದರು. ಆಗ ವಿಧಿಯಿಲ್ಲದೆ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಯಿತು. ಶೋಕದ ಅವಧಿ ಮುಗಿದ ನಂತರವೂ ಮೆಹಬೂಬ ಅಧಿಕಾರದ ಗದ್ದುಗೆಯೇರಲು ನಿರಾಕರಿಸಿ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದರು. ಈಗಾಗಲೇ ಪಿಡಿಪಿಯ ಜನಪ್ರಿಯತೆ ಕುಸಿಯುತ್ತಿರುವುದನ್ನು ಅರಿತಿದ್ದ ಮೆಹಬೂಬ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿ ಮೌನ ವಹಿಸಿಬಿಟ್ಟರು. ಈ ಮಧ್ಯೆ ಮೆಹಬೂಬಗೆ ಸಾಂತ್ವನ ಹೇಳುವ ಉದ್ದೇಶದಿಂದ ಅವರನ್ನು ಭೇಟಿಯಾದ ಕಾಂಗ್ರೆಸ್ ನಾಯಕರುಗಳು ಸಹ ಮೆಹಬಬಾರ ಮುಂದಿನ ರಾಜಕೀಯ ನಡೆಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗದೆ ಸುಮ್ಮನಾದರು. ಆದರೆ ರಾಜ್ಯ ಬಿಜೆಪಿ ನಾಯಕರು ಮೆಹಬೂಬರ ಮನವೊಲಿಕೆಗೆ ಮುಂದಾದಾಗಲೂ ಅವರು ಅದಕ್ಕೆ ಸ್ಪಂದಿಸದೆ ಇದ್ದಾಗ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತಾ ಹೋಯಿತು. ಈ ನಡುವೆ ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳಿಗೆ ಧಕ್ಕೆಯಾಗುತ್ತಿದೆಯೆಂದು ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪಕ್ಷಗಳು ಟೀಕಿಸತೊಡಗಿದವು. ಇದೀಗ ಬೇರೆ ದಾರಿಕಾಣದೆ ರಾಜ್ಯಪಾಲರು ಸ್ವತಃ ಬಿಜೆಪಿ ಮತ್ತು ಪಿಡಿಪಿಯ ನಾಯಕರನ್ನು ಕರೆದು ಮಾತುಕತೆಯಾಡಿ ಆದಷ್ಟು ಬೇಗ ಒಂದು ತೀರ್ಮಾನಕ್ಕೆ ಬಂದು ಸರಕಾರ ರಚನೆ ಮಾಡುವಂತೆ ಕೋರಿದ್ದಾರೆ.ಆದರೆ ಇದ್ಯಾವುದಕ್ಕೂ ಜಗ್ಗದ ಮೆಹಬೂಬ ಬಿಜೆಪಿಗೆ ಕೆಲವು ಷರತ್ತುಗಳನ್ನು ಹಾಕಿ ಇವುಗಳನ್ನು ಈಡೇರಿಸುವ ಬಗ್ಗೆೆ ಪ್ರಧಾನಿ ಅಥವಾ ಬಿಜೆಪಿ ಅಧ್ಯಕ್ಷರಾದ ಅಮಿತ್ ಶಾ ಅವರು ಲಿಖಿತಭರವಸೆ ನೀಡಿದರೆ ಮಾತ್ರ ತಾನು ಅಧಿಕಾರ ಸ್ವೀಕರಿಸುವುದಾಗಿ ಹೇಳಿಕೆ ನೀಡುವುದರ ಮೂಲಕ ತನ್ನ ಉದ್ದೇಶ ಸ್ಪಷ್ಟಪಡಿಸಿದ್ದಾರೆ. ಕಾಶ್ಮೀರದ ಆರ್ಥಿಕ ಪ್ರಗತಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳಬೇಕಾದ ನಡೆಗಳ ಬಗ್ಗೆ ಮೆಹಬೂಬ, ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಒತ್ತಡ ಹೇರಿದ್ದಾರೆ. ಇದೆಲ್ಲದರ ಜೊತೆಗೆ ಸಂವಿಧಾನದ 271 ಕಾಲಂಅನ್ನು ರದ್ದು ಪಡಿಸುವ ಮತ್ತು ಏಕರೂಪನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಬಗ್ಗೆ ಹಾಗೂ ದನದ ಮಾಂಸಸೇವನೆಯ ಬಗೆಗಿನ ನಿಷೇಧದ ಕುರಿತು ಕೇಂದ್ರವು ದ್ವಂದ್ವ ನಿಲುವನ್ನು ಪ್ರದರ್ಶಿಸುತ್ತಿದ್ದು. ಅದರ ಬಗ್ಗೆ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡುವಂತೆಯು ಬಿಜೆಪಿಯನ್ನು ಕೇಳುತ್ತಿದ್ದಾರೆ. ಇಷ್ಟಲ್ಲದೆ ಜಾಮೀನು ಇಲ್ಲದೆಯೂ ಶಂಕಿತ ವ್ಯಕ್ತಿಯನ್ನು ಬಂಧಿಸಬಹುದಾದ ಆಫ್ಸಾ ಕಾನೂನನ್ನು ಮರು ಪರಿಶೀಲನೆಗೆ ಒಳಪಡಿಸುವಂತೆ ಬಿಜೆಪಿಯನ್ನು ಒತ್ತಾಯಿಸುತ್ತಿದ್ದಾರೆ. ಜೊತೆಗೆ ರಾಜ್ಯದಲ್ಲಿನ ಮೈತ್ರಿಗೆ ಧಕ್ಕೆ ಬರುವಂತಹ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿಯ ನಾಯಕರು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಇದೀಗ ನಿರ್ಧಾರ ತೆಗೆದುಕೊಳ್ಳುವ ವಿಚಾರವನ್ನು ಬಿಜೆಪಿಯ ಮಡಿಲಿಗೆ ಹಾಕಿದ್ದಾರೆ. ಈ ವಿಷಯಗಳ ಬಗ್ಗೆ ಬಿಜೆಪಿ ಸ್ಥಳೀಯ ನಾಯಕರು ಜೊತೆ ಮಾತಾಡಲು ಮೆಹಬೂಬ ಇದೀಗ ಬಿಜೆಪಿಯ ದಿಲ್ಲಿಯ ನಾಯಕರುಗಳ ಜೊತೆ ಮಾತಾಡಲು ಕಾದು ಕೂತಿದ್ದಾರೆ. ಆದರೆ ಬಿಜೆಪಿಯ ಕೇಂದ್ರ ನಾಯಕತ್ವ ಈ ಬಗ್ಗೆ ಯಾವುದೇ ತೀರ್ಮಾನವನ್ನು ಪ್ರಕಟಿಸದೆ ವೌನವಾಗಿದೆ. ಈ ವಿಷಯವಾಗಿ ಮೆಹಬೂಬ ಜೊತೆ ಮಾತಾಡುವ ಯಾವ ಅವಸರವನ್ನೂ ಅದು ತೋರಿಸುತ್ತಿಲ್ಲ. ಹೀಗೆ ತದ್ವಿರುದ್ಧ ಸಿದ್ಧಾಂತಗಳನ್ನೊಳಗೊಂಡ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ಬಹತೇಕ ವಿಫಲವಾಗಿ ಕೈಚೆಲ್ಲಿ ಕೂತಿವೆ. ಮೆಹಬೂಬ ಮತ್ತು ಬಿಜೆಪಿ ತಮ್ಮ ಪೂರ್ವಾಗ್ರಹಪೀಡಿತ ನಿಲುವುಗಳನ್ನು ಬಿಟ್ಟು ಮುಕ್ತವಾಗಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವವರೆಗೂ ಜಮ್ಮುಕಾಶ್ಮೀರದ ಈ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ.
ಜಮ್ಮು ಮತ್ತು ಕಾಶ್ಮೀರ ಬೇರೆ ರಾಜ್ಯಗಳಂತಲ್ಲ. ಅದಕ್ಕೆ ಅದರದೇ ಆದ ವಿಶೇಷತೆಗಳಿವೆ. ಸದಾ ಪ್ರತ್ಯೇಕವಾದಿಗಳ ಉಗ್ರಗಾಮಿ ಚಟುವಟಿಕೆಗಳಿಂದ ನರಳುತ್ತಿರುವ ಸೂಕ್ಷ್ಮವಾದ ರಾಜ್ಯವೊಂದರ ಆಡಳಿತದ ವಿಚಾರದಲ್ಲಿ ರಾಜಕೀಯ ಮಾಡವುದು, ಕೇವಲ ಆ ರಾಜ್ಯದ ದೃಷ್ಟಿಯಿಂದ ಮಾತ್ರವಲ್ಲ, ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲದು. ಆದರೆ ಸದ್ಯದ ಸ್ಥಿತಿ ನೋಡಿದರೆ ಬಿಜೆಪಿ 370ನೆ ವಿಧಿ ರದ್ದು ಮತ್ತು ಏಕರೂಪನೀತಿಸಂಹಿತೆ ಜಾರಿ ಕುರಿತಾದ ತನ್ನ ಮೂಲಭೂತ ನಿಲುವುಗಳಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ. ಮೆಹಬೂಬ ಸಹ ತನ್ನ ಪಕ್ಷದ ಕುಸಿದಿರಬಹದಾದ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಮತ್ತು ತನ್ನ ಪಕ್ಷವು ಬಿಜೆಪಿಯ ಸಿದ್ಧಾಂತಗಳ ಜೊತೆ ರಾಜಿಮಾಡಿಕೊಂಡಿಲ್ಲವೆಂದು ಜನರಿಗೆ ಮನವರಿಕೆ ಮಾಡಲೆಂದೇ ಹಟ ಹಿಡಿದು ಕೂತಿದ್ದಾರೆ. ಜಮ್ಮು ಕಾಶ್ಮೀರದ ಹಿತ ಕಾಯುವ ಜೊತೆಗೆ ಭಾರತದ ಸಮಗ್ರತೆಗೆ ಭಂಗ ಬಾರದಂತೆ ನೋಡಿಕೊಳ್ಳಲಾದರೂ ಎರಡೂ ಪಕ್ಷಗಳು ಈ ವಿಷಯದಲ್ಲಿ ತಮ್ಮ ಜಿಗುಟುತನ ಬಿಟ್ಟು ಸರಕಾರ ರಚಿಸಿ ಉತ್ತಮ ಆಡಳಿತ ನೀಡುವತ್ತ ಗಮನಹರಿಸಬೇಕೆಂಬುದು ಕಾಶ್ಮೀರಿ ಜನತೆಯ ಮಾತ್ರವಲ್ಲ ಇಡೀ ಭಾರತದ ಜನತೆಯ ಆಶಯವಾಗಿದೆ.