ವಿಧ್ವಂಸಕರಿಂದ ದೂರವಾಗುವಿರಾ?

Update: 2016-02-08 05:36 GMT

ಪೇಜಾವರ ಶ್ರೀಗಳಿಗೆ ಒಂದು ಪ್ರಶ್ನೆ

ಉಡುಪಿಯ ಕೃಷ್ಣ ಮಠದ ಪರ್ಯಾಯ ಪೀಠವನ್ನೇರಿದ ಪೇಜಾವರ ಶ್ರೀಗಳು ಇತ್ತೀಚೆಗೆ ಅಯೋಧ್ಯೆಯ ಬಾಬರಿ ಮಸೀದಿ ಬಗ್ಗೆ ಪ್ರಸ್ತಾಪಿಸುತ್ತ ‘‘ಮಸೀದಿಯನ್ನು ಧ್ವಂಸಗೊಳಿಸಿ ರಾಮ ಮಂದಿರ ಕಟ್ಟುವುದನ್ನು ನಾನು ಕಟ್ಟ ಕಡೆಯವರೆಗೆ ವಿರೋಧಿಸಿದ್ದೆ. ಮಸೀದಿಯ ಪಕ್ಕದಲ್ಲೇ ರಾಮಮಂದಿರ ನಿರ್ಮಾಣ ನನ್ನ ನಿಲುವಾಗಿತ್ತು. ಆದರೆ, ನನ್ನ ಯೋಜನೆಯನ್ನು ವಿಫಲಗೊಳಿಸಲಾಯಿತು.’’ ಎಂದಿದ್ದಾರೆ. (ವಾರ್ತಾಭಾರತಿ 18.1.2016)


ಪೇಜಾವರರ ಈ ಪಶ್ಚಾತ್ತಾಪದ ನುಡಿಯ ಪ್ರಾಮಾಣಿಕತೆ ಬಗ್ಗೆ ಅನೇಕರು ಸಂದೇಹ ವ್ಯಕ್ತಪಡಿಸಿ ಲೇವಡಿ ಮಾಡಿದ್ದಾರೆ. ಪೇಜಾವರ ಶ್ರೀಗಳ ಪ್ರಾಮಾಣಿಕತೆಯನ್ನು ನಾನು ಪ್ರಶ್ನಿಸದಿರಬೇಕಾದರೆ ಈ ಪಶ್ಚಾತ್ತಾಪ ರೂಪದ ಮಾತುಗಳ ಹಿನ್ನೆಲೆಯಲ್ಲಿ ಕೆಲ ಸ್ಪಷ್ಟ ಉತ್ತರಗಳನ್ನು ಅವರಿಂದ ನಿರೀಕ್ಷಿಸುತ್ತೇನೆ. ಈ ಮಾತು ಪ್ರಾಮಾಣಿಕವಾಗಿದ್ದರೆ ಬಾಬರಿ ಮಸೀದಿಯಧ್ವಂಸವನ್ನು ಮೊದಲು ಬಹಿರಂಗವಾಗಿ ಖಂಡಿಸಲಿ ಹಾಗೂ ತಮ್ಮ ಯೋಜನೆ ಯನ್ನು ಯಾರು ವಿಫಲಗೊಳಿಸಿದರು ಎಂಬುದನ್ನು ಅವರು ಬಹಿರಂಗಪಡಿಸಲಿ. ಬರೀ ತಪ್ಪು ನನ್ನದಲ್ಲ ಎಂದು ಹೇಳಿದರೆ ಸಾಲದು. ತಪ್ಪು ಯಾರದು ಎಂಬು ದನ್ನು ಪೇಜಾವರರು ಸ್ಪಷ್ಟಪಡಿಸಬೇಕು. ಹಿಂದೆ ಆಗಿದ್ದು ಆಗಿ ಹೋಯಿತು. ತಮ್ಮ ಮಾತನ್ನು ಮೀರಿ ಈ ದುಷ್ಕೃತ್ಯ ಎಸಗಿದವರ ಜೊತೆ ಇನ್ನು ಮುಂದಾದರೂ ಸೇರುವುದಿಲ್ಲ ಎಂದು ಶ್ರೀಗಳು ಬಹಿರಂಗವಾಗಿ ಹೇಳುತ್ತಾರೆಯೇ? ಹಾಗೆ ಹೇಳಿದರೆ ಅವರ ಪ್ರಾಮಾಣಿಕತೆಯನ್ನು ನಾನು ಸಂದೇಹಿಸಬೇಕಾಗಿಲ್ಲ. ಮಸೀದಿಯ ಪಕ್ಕದಲ್ಲಿ ರಾಮ ಮಂದಿರ ನಿರ್ಮಿಸುವುದೇ ಪೇಜಾವರ ಶ್ರೀಗಳ ನೈಜ ಉದ್ದೇಶವಾಗಿದ್ದರೆ ಈಗಲೂ ಕಾಲ ಮಿಂಚಿಲ್ಲ. ಬಾಬರಿ ಮಸೀದಿ ಕೆಡವಿದ ಜಾಗದಲ್ಲಿ ಮತ್ತೆ ಮಸೀದಿ ನಿರ್ಮಿಸಿ ಪಕ್ಕದಲ್ಲಿ ರಾಮ ಮಂದಿರ ನಿರ್ಮಿಸಲು ತಾವು ಮಾರ್ಗದರ್ಶಕರಾಗಿರುವ ವಿಶ್ವಹಿಂದೂ ಪರಿಷತ್ತಿನ ಪದಾಧಿಕಾರಿಗಳನ್ನು ಶ್ರೀಗಳು ಒಪ್ಪಿಸುವರೇ. ಹಾಗಾದರೆ ಈಗಲೇ ಅವರು ಕಾರ್ಯಪ್ರವೃತ್ತರಾಗಲಿ. ಈ ಕೆಲಸ ಆಗದಿದ್ದರೆ ಮುಂದೇನು ಎಂಬುದಕ್ಕೆ ಅವರು ಉತ್ತರಿಸಲಿ.
ಪೇಜಾವರ ಸ್ವಾಮಿಗಳ ಮಾತನ್ನು ಮೀರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ನಿಜವಾಗಿದ್ದರೆ ತಮ್ಮ ಮಾತಿಗೆ ಬೆಲೆ ಕೊಡದ, ಮಾತನ್ನು ಕೇಳದ ಕೆಟ್ಟ ಜನರೊಟ್ಟಿಗೆ ಇರುವುದು ಸ್ವಾಮಿಗಳಿಗೆ ಶೋಭೆ ತರುವುದಿಲ್ಲ. ತಕ್ಷಣದಿಂದಲೇ ವಿಶ್ವಹಿಂದೂ ಪರಿಷತ್ ಸೇರಿದಂತೆ ಸಂಘಪರಿವಾರದ ಸಂಘಟನಾ ಜಾಲದಿಂದ ಸ್ವಾಮಿಗಳು ಹೊರಗೆ ಬರಲಿ. ಈ ಬಗ್ಗೆ ಬಹಿರಂಗವಾಗಿ ತಮ್ಮ ನಿಲುವನ್ನು ಅವರು ಪ್ರಕಟಿಸಲಿ.
ಆದರೆ, ತಮ್ಮ ಮಾತನ್ನು ಮೀರಿ ಬಾಬರಿ ಮಸೀದಿ ಕೆಡವಿದ ಸಂಘಟನೆ ಗಳೊಂದಿಗೆ, ಕೆಟ್ಟ ಜನರೊಂದಿಗೆ ಪೇಜಾವರ ಶ್ರೀಗಳ ಸಂಬಂಧ ಇಂದಿಗೂ ಮುಂದುವರಿದಿದೆ. ಮಸೀದಿ ಕೆಡವಿದ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಹೊರಟವರ ಜೊತೆ ಒಡನಾಟವನ್ನು ಇಟ್ಟುಕೊಂಡು ಮಸೀದಿ ಧ್ವಂಸದ ಬಗ್ಗೆ ವ್ಯಥೆ ವ್ಯಕ್ತಪಡಿಸುವುದು ಮೊಸಳೆ ಕಣ್ಣೀರಾಗುತ್ತದೆ. ಬರೀ ನಾಟಕವಾಗುತ್ತದೆ.

ಆದ್ದರಿಂದ ಪಶಾತ್ತಾಪಕ್ಕೆ ಪೂರಕವಾಗಿ ಪೇಜಾವರ ಶ್ರೀಗಳು ಮಸೀದಿ ಕೆಡವಿದ ಸಂಘಟನೆಗಳ ಜೊತೆಗಿನ ಸಂಬಂಧವನ್ನು ತಕ್ಷಣ ಕಡಿದುಕೊಂಡು ಪಾರಮಾರ್ಥಿಕ ಕಾರ್ಯಗಳಲ್ಲಿ, ಪೂಜೆ ಸಂಧ್ಯಾ ವಂದನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅವರ ಭಕ್ತರು ಶ್ರೀಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಕಳೆದು ಹೋದ ಸ್ವಾಮೀಜಿ ತಮಗೆ ಸಿಕ್ಕರೆಂದು ಸಂತೃಪ್ತರಾಗುತ್ತಾರೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸುವುದು ಮಾತ್ರ ಸಂಘಪರಿವಾರದ ಅಜೆಂಡಾ ಅಲ್ಲ. ಅದರ ನಿಜವಾದ ಗುರಿ ಈ ದೇಶದ ಸಂವಿಧಾನವನ್ನೂ ನಾಶಮಾಡಿ ಪ್ರಜಾಪ್ರಭುತ್ವದ ಸಮಾಧಿಯ ಮೇಲೆ ಹಿಂದೂರಾಷ್ಟ್ರ ನಿರ್ಮಾಣ ಮಾಡುವುದಾಗಿದೆ. ಅಂತಲೆ ಹಿಂದುಗಳನ್ನು ಉಳಿದವರಿಂದ ಪ್ರತ್ಯೇಕಿಸಿ ಅಲ್ಪಸಂಖ್ಯಾತರನ್ನು ಅಡಿಯಾಳನ್ನಾಗಿಸಿಕೊಳ್ಳುವುದು ಅದರ ಉದ್ದೇಶವಾಗಿದೆ.

ಅಯೋಧ್ಯೆಯ ರಾಮ ಮಂದಿರ ವಿವಾದ ಬಗೆಹರಿದರೂ ಸಂಘಪರಿವಾರ ಸುಮ್ಮನಿರುವುದಿಲ್ಲ. ಅಯೋಧ್ಯೆ ನಂತರ ಮಥುರೆ, ಕಾಶಿ ವಿವಾದಗಳನ್ನು ಅದು ಕೈಗೆತ್ತಿಕೊಳ್ಳುತ್ತದೆ. ಈ ಮೂರು ಮಾತ್ರವಲ್ಲ, ದೇಶದಲ್ಲಿ ಒಟ್ಟು ಮೂರು ಸಾವಿರ ಮಸೀದಿಗಳ ಪಟ್ಟಿಯನ್ನು ಅದು ಮಾಡಿದೆ. ಇದರರ್ಥ ದೇಶದಲ್ಲಿ ನಿರಂತರವಾಗಿ ಅಶಾಂತಿಯನ್ನು ಉಂಟುಮಾಡಿ ಹಿಂದು ಓಟುಗಳ ಧ್ರುವೀಕರಣ ಅದರ ಹುನ್ನಾರವಾಗಿದೆ. ಗಾಂಧಿ ಹತ್ಯೆ, ಗುಜರಾತ್ ಹತ್ಯಾಕಾಂಡ, ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ ಕಗ್ಗೊಲೆ ಈ ಹಿನ್ನೆಲೆಯಲ್ಲಿ ತಮ್ಮ ದುಷ್ಕೃತ್ಯಗಳಿಗೆಲ್ಲ ಕೋಮುವಾದಿಗಳು ಪೇಜಾವರ ಶ್ರೀಗಳಂತ ಯತಿಗಳನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಾ ಬಂದಿದ್ದಾರೆ. ತಮ್ಮನ್ನು ಗುರಾಣಿಯಾಗಿ ಬಳಸಿಕೊಳ್ಳಲಾಗಿದೆ ಎಂದು ಪೇಜಾವರ ಶ್ರೀಗಳಿಗೆ ಈಗ ಅರಿವಾದಂತೆ ಕಾಣುತ್ತದೆ. ಅಂತಲೆ ಅವರೀಗ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಈ ಪಶ್ಚಾತ್ತಾಪ ಪ್ರಾಮಾಣಿಕವಾಗಿದ್ದರೆ ಸ್ವಾಗತಾರ್ಹ.

ಪೇಜಾವರ ಶ್ರೀಗಳಿಗೆ ನಿಜಕ್ಕೂ ಪಶ್ಚಾತ್ತಾಪವಾಗಿದ್ದರೆ ದೇವರು ಮತ್ತು ಧರ್ಮಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಭಾರತೀಯರಲ್ಲಿ ಒಡಕಿನ ವಿಷಬೀಜ ಬಿತ್ತುತ್ತಿರುವ ಕೋಮುವಾದಿ ಸಂಘಟನೆಗಳ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡಲು ಶ್ರೀಗಳು ತಕ್ಷಣ ಮುಂದಾದರೆ ಎಲ್ಲ ಧರ್ಮಗಳ ಶಾಂತಿಪ್ರಿಯ ಜನ ಅವರ ಜೊತೆಗೆ ಇರುತ್ತಾರೆ. ಚುನಾವಣೆಗಳು ಬಂದಾಗಲೆಲ್ಲ ಸಂಘಪರಿವಾರದ ರಾಮನಾಮ ಸ್ಮರಣೆ ತೀವ್ರವಾಗುತ್ತದೆ. ಈಗ ಸಮೀಪದಲ್ಲೇ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಬಂದಿದೆ. ಅದಕ್ಕಾಗಿ ತುರ್ತಾಗಿ ಹಿಂದೂ ಓಟ್‌ಬ್ಯಾಂಕ್ ನಿರ್ಮಿಸುವುದು ಅದರ ಹಿಡನ್ ಅಜೆಂಡಾ ಆಗಿದೆ. ಅದಕ್ಕಾಗಿ ದೇಶವ್ಯಾಪಿ ಅದು ಉನ್ಮಾದವನ್ನು ಕೆರಳಿಸುತ್ತಿದೆ.
ಇಂಥ ಸನ್ನಿವೇಶದಲ್ಲಿ ಪೇಜಾವರ ಶ್ರೀಗಳ ನಿಲುವೇನು? ರಾಷ್ಟ್ರ ಮಂದಿರ ನಿರ್ಮಾಣಕ್ಕಿಂತ ರಾಮ ಮಂದಿರ ನಿರ್ಮಾಣ ಮುಖ್ಯವೇ? ಎಂಬುದನ್ನು ಶ್ರೀಗಳು ಸ್ಪಷ್ಟಪಡಿಸಬೇಕು/ ಎಂಭತ್ತೈದರ ಈ ಇಳಿ ವಯಸ್ಸಿನಲ್ಲಿ ಧ್ವಂಸ ಕಾರ್ಯಾಚರಣೆಯಲ್ಲಿ ತೊಡಗುವ ಗ್ಯಾಂಗುಗಳ ಬಳಿ ಸೇರುವುದು ಸರಿಯೇ? ಎಂಬುದನ್ನು ಈ ಪರ್ಯಾಯದ ಸಮಯದಲ್ಲಿ ಶ್ರೀಗಳು ಸಾವಧಾನ ಚಿತ್ತದಿಂದ ಯೋಚಿಸಬೇಕು.
ಆರೆಸ್ಸೆಸ್ ಒಂದು ಧಾರ್ಮಿಕ ಸಂಘಟನೆ ಅಲ್ಲ. ಸಾಂಸ್ಕೃತಿಕ ಸಂಘಟನೆಯೂ ಅಲ್ಲ. ಧರ್ಮದ ಮುಖವಾಡ ಹಾಕಿಕೊಂಡಿರುವ ಅದು ಉಳ್ಳವರ, ಶೋಷಕರ ಹಿತರಕ್ಷಿಸುವ ಫ್ಯಾಶಿಸ್ಟ್ ಸಂಘಟನೆ ಎಂಬುದು ಹಲವಾರು ಬಾರಿ ಸಾಬೀತಾಗಿದೆ.
ಸಂಘಪರಿವಾರದ ಗುರಿ ಅಸಮಾನತೆಯ ರಕ್ಷಣೆ. ಅದು ಕಾರ್ಪೊರೇಟ್ ಬಂಡವಾಳ ಶಾಹಿಯ ಹಿತ ರಕ್ಷಿಸುವ ಶೋಷಕರ ಆಯುಧ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳಂತ ತ್ರಿವಳಿ ಅಪಾಯಗಳ ವಿರುದ್ಧ ಭಾರತೀಯರು ಒಂದಾಗಿ ಹೋರಾಡಬಾರದೆಂದು ಹಣ ಚೆಲ್ಲಿ ಇಂಥ ವಿಭಜನಕಾರಿ ಸಂಘಟನೆಗಳನ್ನು ಅಮೆರಿಕನ್ ಸಾಮ್ರಾಜ್ಯಶಾಹಿ ಹಾಗೂ ದೇಶಿ ಬಂಡವಾಳ ಶಾಹಿಗಳು ಸ್ಥಾಪಿಸಿವೆ.
ಸ್ವಾತಂತ್ರಕ್ಕಿಂತ ಮುನ್ನ ಬ್ರಿಟಿಷರು ಸ್ವಾತಂತ್ರ ಚಳವಳಿಯನ್ನು ಹತ್ತಿಕ್ಕಲು ಆರೆಸ್ಸೆಸ್ ಅನ್ನು ಬಳಸಿಕೊಂಡರು. ಈಗ ಬಡ ಭಾರತೀಯರನ್ನು ವಿಭಜಿಸಲು ದೇಶ ವಿದೇಶದ ಶೋಷಕ ಬಂಡವಾಳಗಾರರು ಈ ಸಂಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕೊಟ್ಯಂತರ ರೂ. ನೀಡುತ್ತಾರೆ.
ಇಂಥ ದೇಶ ವಿರೋಧಿ, ಜನ ವಿಭಜಕ ಅಪಾಯಕಾರಿ ಸಂಘಟನೆಗಳ ಜೊತೆಗಿರುವುದು ಪೇಜಾವರ ಶ್ರೀಗಳಿಗೆ ಶೋಭೆ ತರುವುದಿಲ್ಲ. ಈ ಬಗ್ಗೆ ಅವರಿಗೆ ಅರಿವಾದಂತೆ ಕಾಣುತ್ತದೆ. ತಕ್ಷಣ ಈ ವಿಷ ವೃತ್ತದಿಂದ ಹೊರಗೆ ಬರಲಿ ಸೌಹಾರ್ದದ ಪದವಾಗಿರುವ ದೇಶದ ನಾಡಿನ ಉಳಿದ ಅನೇಕ ಸಂತರು, ಧರ್ಮಗುರುಗಳ ಜೊತೆಗೆ ಸೇರಲಿ.


ಪೇಜಾವರ ಶ್ರೀಗಳ ಪರ್ಯಾಯದ ಯಶಸ್ವಿಗೆ ಈ ಬಾರಿ ಹಿಂದು, ಮುಸ್ಲಿಮ್,ಕ್ರೈಸ್ತರು ಒಂದಾಗಿ ಶ್ರಮಿಸಿದ್ದಾರೆ. ಈ ಭಾವೈಕ್ಯತೆಯ ಕಂಪನ್ನು ರಾಷ್ಟ್ರ ವ್ಯಾಪಿ ಯಾಗಿ ಹರಡಲು ಪೇಜಾವರ ಶ್ರೀಗಳು ನೇತೃತ್ವ ವಹಿಸಲಿ. ಗಲಭೆಕೋರ ಸಂಘ ಪರಿವಾರದಿಂದ ದೂರ ಸರಿದಿರುವುದಾಗಿ ತಕ್ಷಣ ಅವರು ಪ್ರಕಟಿಸಲಿ.

Writer - ಸನತ್‌ ಕುಮಾರ ಬೆಳಗಲಿ

contributor

Editor - ಸನತ್‌ ಕುಮಾರ ಬೆಳಗಲಿ

contributor

Similar News

ಸಂವಿಧಾನ -75