ಖೈರ್ಲಾಂಜಿಯಿಂದ ಹೈದರಾಬಾದ್‌ವರೆ ಆಕ್ರೋಶದ ನಂತರ ಏನು?

Update: 2016-02-12 17:59 GMT
Editor : ಸಮರ್

ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ದಾಖಲೆಗಳಲ್ಲಿ ರೋಹಿತ್ ವೇಮುಲಾರ ಆತ್ಮಹತ್ಯೆ ಕೇವಲ ಇನ್ನೊಂದು ಆತ್ಮಹತ್ಯೆಯಾಗಿ ಉಳಿಯುವುದಿಲ್ಲ. 2006ರಲ್ಲಿ ಖೈರ್ಲಾಂಜಿಯಲ್ಲಿ ನಡೆದ ಹತ್ಯಾಕಾಂಡದಂತೆ ಇದು ಕೂಡಾ ಸಾಮಾನ್ಯ ಆತ್ಮಹತ್ಯೆ ಪ್ರಕರಣವಾಗಿ ಉಳಿಯುವುದಿಲ್ಲ. ಒಂದು ದಶಕದ ಅಂತರ ಹೊಂದಿರುವ ಈ ಎರಡು ಘಟನೆಗಳು, ಕೋಪದಿಂದ ಮಾಡಲ್ಪಟ್ಟ ಅಥವಾ ಯೋಜಿತ ಕೃತ್ಯದಂತೆ ಸಾಮಾನ್ಯವಾಗಿ ಲೆಕ್ಕಹಾಕುವ ಅಪರಾಧಗಳಿಗಿಂತ ಬಹಳ ಭಿನ್ನವಾಗಿದ್ದು ಗಣತಂತ್ರದ ರಾಜಕೀಯ ವ್ಯವಸ್ಥೆಯ ಮೇಲೆ ಮಾಡಿದ ಟೀಕೆಯಾಗಿವೆ. ಇವುಗಳು ಗಣತಂತ್ರವು ಪದೇಪದೇ ಹೇಳುವ, ಅದು ಅವರನ್ನು ನಂಬಲು ಆರಂಭಿಸಿದೆ ಎಂಬ ಸುಳ್ಳನ್ನು ಬಯಲು ಮಾಡುತ್ತದೆ. ಭಾರತವು ಸಮರ್ಪಕವಲ್ಲದಿದ್ದರೂ ತಾನು ನೀಡಿರುವ ಭರವಸೆಯನ್ನು ಈಡೇರಿಸಬಲ್ಲ ಸಕ್ರಿಯ ಕಾನೂನು ವ್ಯವಸ್ಥೆಯನ್ನು ಹೊಂದಿದೆ ಎಂಬ ಕಟ್ಟುಕತೆಯನ್ನು ಬಯಲು ಮಾಡುತ್ತದೆ. ಎಲ್ಲ ಭಾರತೀಯರೂ ಕಾನೂನಿನ ಮುಂದೆ ಸಮಾನರಲ್ಲ ಅದರಲ್ಲೂ ಜಾತಿ ವ್ಯವಸ್ಥೆಯಿಂದ ರಚಿಸಲ್ಪಟ್ಟ ಸಾಮಾಜಿಕ ಶ್ರೇಣಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳಹಂತದಲ್ಲಿ ವಾಸಿಸುತ್ತಿರುವವರಂತೂ ಖಂಡಿತವಾಗಿಯೂ ಅಲ್ಲ ಎಂಬ ವಾಸ್ತವಾಂಶವನ್ನು ಅವು ಮರೆಮಾಚುತ್ತವೆ. ಸಾರ್ವಜನಿಕವಾಗಿ ಗಮನಕ್ಕೆ ಬಾರದ ಪ್ರಕರಣಗಳ ಹಣೆಬರಹದ ಬಗ್ಗೆಯಂತೂ ಇವು ಯಾವುದೇ ಸಂಶಯ ಉಳಿಸುವುದಿಲ್ಲ, ಆದರೆ ಸಾರ್ವಜನಿಕರ ಗಮನವನ್ನು ಸೆಳೆದಂತಹ ಪ್ರಕರಣಗಳಲ್ಲೂ ನ್ಯಾಯವನ್ನು ಒದಗಿಸಲು ಸಾರ್ವಜನಿಕ ಆಕ್ರೋಶದ ಅಗತ್ಯವಿರುವ ಕಾನೂನು ವ್ಯವಸ್ಥೆಯನ್ನು ಇದು ಬಹಿರಂಗಗೊಳಿಸುತ್ತದೆ. ಖೈರ್ಲಾಂಜಿಯಲ್ಲಿ ಗ್ರಾಮಸ್ಥರ ಗುಂಪೊಂದು ಒಂದಿಡೀ ಕುಟುಂಬವನ್ನು ಹೊಡೆದು ಹತ್ಯೆಮಾಡಿತ್ತು, ಮಹಿಳೆಯರನ್ನು ಅತ್ಯಾಚಾರ ಮಾಡಿ ಅವರ ದೇಹಗಳನ್ನು ಕತ್ತರಿಸಿ ಹಾಕಿತ್ತು. ಈ ಕೃತ್ಯವನ್ನು ದಲಿತ ಸಮುದಾಯಕ್ಕೆ ಸೇರಿದ ಕುಟುಂಬವಾದರೂ ಉತ್ತಮ ಜೀವನನಿರ್ವಹಣೆ ಮಾಡುತ್ತಿದ್ದ ಕಾರಣಕ್ಕಾಗಿ ಎಸಗಲಾಗಿತ್ತು. ಈ ಹತ್ಯಾಕಾಂಡ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಅದರಲ್ಲೂ ದಶಕಗಳಲ್ಲಿ ಇಂಥಾ ಪ್ರತಿಭಟನೆಗಳನ್ನು ಕಾಣದ ಮಹಾರಾಷ್ಟ್ರದಲ್ಲೂ ಹಿಂಸಾಚಾರ ಭುಗಿಲೆದ್ದಿತು. ಇದು ರಾಜ್ಯ ಸರಕಾರ ಈ ಘಟನೆಯ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಒತ್ತಡ ಹೇರಿತು ಮತ್ತು 2010ರಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಯಿತು. ಈ ಬಗ್ಗೆ ಸ್ವಲ್ಪ ಹೆಚ್ಚು ತಿಳಿದಿರುವವರು, ಖೈರ್ಲಾಂಜಿ ಪ್ರಕರಣದ ಸ್ವಾಗತಾರ್ಹ ಆದರೂ ತೀವ್ರ ಅಸಮರ್ಪಕ ತೀರ್ಪಿನಲ್ಲಿ ನ್ಯಾಯದ ಅಣಕವನ್ನು ಕಾಣುತ್ತಾರೆ. ಈ ಪ್ರಕರಣದಲ್ಲೂ ನ್ಯಾಯಾಧೀಶರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ) ಕಾನೂನು, 1989ನ್ನು ಹೇರಲು ನಿರಾಕರಿಸಿದ್ದರು.


ಅಭಿಯೋಜಕರ ಸಾರವಿಲ್ಲದ ವಾದ ಮತ್ತು ಕಳಪೆ ತನಿಖೆ, ನ್ಯಾಯಾಧೀಶರು ಈ ಪ್ರಕರಣವನ್ನು ಜಾತಿಯಾಧಾರಿತ ದೌರ್ಜನ್ಯವೆಂದು ಪರಿಗಣಿಸದೆ ಕೇವಲ ‘ಪ್ರತೀಕಾರ ಹತ್ಯೆ’ ಯಾಗಿ ಕಾಣಲು ನೆರವಾಗಿತ್ತು. ನ್ಯಾಯಾಧೀಶರು, ಯಾವ ಕಾರಣಕ್ಕಾಗಿ ಕೊಲೆಗಾರರು ಪ್ರತೀಕಾರ ತೆಗೆದುಕೊಂಡರು? ಎಂಬ ಪ್ರಶ್ನೆಯನ್ನು ಕೇಳುವ ಗೋಜಿಗೆ ಹೋಗಲಿಲ್ಲ. ಎಸ್ಸಿ/ಎಸ್ಟಿ ಕಾಯ್ದೆಯನ್ನು ಪರಿಗಣಿಸಿದ ನಿರ್ಧಾರವು ಅಜಾಗರೂಕತೆಯಿಂದ ನಡೆದದ್ದಲ್ಲ. ಇದು ಜಾತಿ ಮತ್ತು ಅಪರಾಧದ ಮಧ್ಯೆಯಿರುವ ಕೊಂಡಿಯನ್ನು ಅಲ್ಲಗಳೆಯುವ ಜಾತೀಯತೆಯ ವ್ಯವಸ್ಥಿತ ಮತ್ತು ಸಾಂಸ್ಥಿಕ ಸ್ವಭಾವವನ್ನು ಬಿಂಬಿಸುತ್ತದೆ. ರೋಹಿತ್ ವೇಮುಲಾ ಪ್ರಕರಣವೂ ಇದೇ ರೀತಿ. ದಲಿತ ಸಮುದಾಯದಲ್ಲಿ ಜನಿಸುವ ‘ಭೀಕರ ಅಪಘಾತದ’ ಹೊರತಾಗಿಯೂ ಆತ ಜೀವನದಲ್ಲಿ ಉತ್ತಮ ಸಾಧನೆ ಮಾಡಿದ್ದ ಮತ್ತು ದೇಶದ ಶ್ರೇಷ್ಠ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಥೆಯನ್ನು ತಲುಪಿದ್ದ. ವ್ಯವಸ್ಥೆಯಲ್ಲಿರುವ ಜಾತೀಯ ಶಕ್ತಿಗಳಿಗೆ ಆತನನ್ನು ಸಾವಿನ ಹಂತಕ್ಕೆ ಪೀಡಿಸಲು ಇಷ್ಟು ಸಾಕಿತ್ತು. ಆತನ ಪ್ರಕರಣದಲ್ಲಿ ಒಂದು ವ್ಯತ್ಯಾಸ ನಡೆದಿದ್ದು ಏನೆಂದರೆ ಅದು ಉಂಟುಮಾಡಿದ ರಾಷ್ಟ್ರವ್ಯಾಪಿ ಆಕ್ರೋಶ. ಖೈರ್ಲಾಂಜಿ ಘಟನೆಯ ದಶಕಗಳ ನಂತರ ಆಕ್ರೋಶದ ಭಾವ ಅನುಭವಕ್ಕೆ ಬರುವಂತಿತ್ತು; ಇದು ಜನರನ್ನು ಬೀದಿಗಿಳಿಸುವಂತೆ ಪ್ರೇರೇಪಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ವ್ಯವಸ್ಥೆ ಇದನ್ನು ನಿರೀಕ್ಷಿಸಿರಲಿಲ್ಲ; ನಿಜವಾಗಿಯೂ ಸಾಮಾಜಿಕ ನ್ಯಾಯ ಚಳವಳಿಯಲ್ಲಿರುವ ಹಲವರು ಕೂಡಾ ಈ ಪ್ರತಿಭಟನೆಯ ತೀವ್ರತೆಯನ್ನು ಕಂಡು ಆಶ್ಚರ್ಯಗೊಂಡಿರಬಹುದು, ಈ ಇಡೀ ಹೊಲಸು ಕಥಾನಕದಲ್ಲಿ ಹೃದಯಕ್ಕೆ ನೆಮ್ಮದಿ ನೀಡುವ ವಿಷಯ ಇದೊಂದೆ. ಈ ಎಲ್ಲ ನೈಜ ಮತ್ತು ಅಗತ್ಯವಿದ್ದ ಆಕ್ರೋಶದ ಮಧ್ಯೆ ಮೂಲ ಪ್ರಶ್ನೆಗಳನ್ನು ಕೇಳದೆ ಬಾಕಿಯುಳಿದಿವೆ, ಇನ್ನು ಉತ್ತರಿಸುವುದು ದೂರದ ಮಾತು. ಕಾನೂನು ಆಧಾರಿತ ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯವನ್ನು ಒದಗಿಸಲು ಆಕ್ರೋಶದ ಅಗತ್ಯ ಯಾಕೆ ಬೀಳುತ್ತದೆ? ಹಾಗಾದರೆ ತಮ್ಮ ಬಿಕ್ಕಟ್ಟಿಗೆ ನ್ಯಾಯವನ್ನು ಪಡೆಯಲು ಆಕ್ರೋಶವನ್ನು ಸೃಷ್ಟಿಸಲು ಸಾಧ್ಯವಾಗದ ಜನರ ಪಾಡೇನು?

ವೇಮುಲಾ ಆತ್ಮಹತ್ಯೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಮೊದಲ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯಲ್ಲ. ವೇಮುಲಾರಿಗಿಂತ ಮೊದಲು ಕೂಡಾ ಬಹಳಷ್ಟು ಜನರನ್ನು ದಲಿತ ಎಂಬ ಕಾರಣಕ್ಕಾಗಿ ಪೀಡಿಸಲಾಗಿ ಇದೇ ರೀತಿ ಜೀವನಕ್ಕೆ ಅಂತ್ಯ ಹಾಡುವಂತೆ ಮಾಡಲಾಗಿತ್ತು; ಸಾಕ್ಷಚಿತ್ರಗಳು ಮತ್ತು ಮಾಧ್ಯಮ ವರದಿಗಳು 2007 ಮತ್ತು 2011ರ ಮಧ್ಯೆ 18 ಅಂಥ ಆತ್ಮಹತ್ಯೆಗಳನ್ನು ಲೆಕ್ಕಹಾಕಿದ್ದವು. ಹೌದು, ಅವುಗಳನ್ನು ಲೆಕ್ಕಹಾಕಲಾಗಿತ್ತು. ಆಗಲೂ ಕೂಡಾ ಆಕ್ರೋಶದ ಸುಳಿವೊಂದು ಇತ್ತು. ಆದರೆ ನಂತರ ವಿಚಾರಣೆ ತಣ್ಣಗಾಗಿತ್ತು. ಈ ಪ್ರಕರಣಗಳು ಏನಾಗಿವೆ ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಯಾರಾದರೂ ಒಬ್ಬ ಅಪರಾಧಿಗೆ ಶಿಕ್ಷೆಯಾಗಿದೆಯೇ ಎಂಬುದೂ ಹೆಚ್ಚಿನವರಿಗೆ ಗೊತ್ತಿಲ್ಲ, ಉದಾಹರಣೆಗೆ ಜಸ್‌ಪ್ರೀತ್ ಸಿಂಗ್ ಪ್ರಕರಣದಲ್ಲಿ. ಚಂಡಿಗಡ ವೈದ್ಯಕೀಯ ಕಾಲೇಜಿನಲ್ಲಿ ತನ್ನ ವಿಭಾಗದ ಮುಖ್ಯಸ್ಥರಿಂದ ಪದೇಪದೆ ಅನುತ್ತೀರ್ಣಗೊಳಿಸಲ್ಪಡುತ್ತಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ. ಆತನ ಸಾವಿಗೆ ಮತ್ತು ನಂತರ ತನ್ನ ಸಹೋದರನಿಗೆ ನ್ಯಾಯ ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಆತನ ಸಹೋದರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಉಂಟಾದ ಆಕ್ರೋಶದಿಂದಾಗಿ ಕೊನೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ (ಎನ್‌ಸಿಎಸ್ ಸಿ) ಮಧ್ಯಪ್ರವೇಶಿಸಬೇಕಾಯಿತು. ನಂತರ ಆಯೋಗವು ಕಂಡುಕೊಂಡಿದ್ದೇನೆಂದರೆ ಸಿಂಗ್ ನಿಜವಾಗಿ ತಮ್ಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆಮೇಲೆ ಆಯೋಗವು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ತಿಳಿಸಿತ್ತು. ಜಸ್‌ಪ್ರೀತ್ ತನ್ನ ಮರಣಪತ್ರದಲ್ಲಿ ಪ್ರೊಫೆಸರ್ ಹೆಸರನ್ನು ಉಲ್ಲೇಖಿಸಿದ್ದರೂ ಪೊಲೀಸರು ಮಾತ್ರ ಪ್ರಕರಣ ದಾಖಲಿಸಲು ನಿರಾಕರಿಸಿದ್ದರು. ಮುಂದೇನಾಯಿತು ಎಂಬುದನ್ನು ತಿಳಿಯಲು ಪ್ರಯತ್ನಿಸಿ ಮತ್ತು ನೀವು ಭಾರತೀಯ ನ್ಯಾಯ ವ್ಯವಸ್ಥೆ ಎಂಬ ಚಕ್ರವ್ಯೆಹದ ಮತ್ತೊಂದು ಗೋಡೆಗೆ ಬಡಿಯುತ್ತೀರಿ. ರೋಹಿತ್‌ರ ಆತ್ಮಹತ್ಯೆ-ಕೊಲೆಯ ಮೊದಲು ಅಂತಹ ಅದೆಷ್ಟೋ ಆತ್ಮಹತ್ಯೆ-ಕೊಲೆ ಪ್ರಕರಣಗಳು ನಡೆದಿವೆ ಮತ್ತು ಖೈರ್ಲಾಂಜಿ ಹತ್ಯಾಕಾಂಡದ ನಂತರ ಅದೆಷ್ಟೋ ಅಂತಹ ಹತ್ಯಾಕಾಂಡಗಳು ನಡೆದಿವೆ. ಉದಾಹರಣೆಗೆ, 2014ರ ಫೆಬ್ರವರಿಯಲ್ಲಿ ಮಹಾರಾಷ್ಟ್ರದ ಬಂಡಾರ ಜಿಲ್ಲೆಯಲ್ಲಿ ಮೂವರು ದಲಿತ ಯುವತಿಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು. ಮತ್ತು ಅದೇ ವರ್ಷ ಅಹ್ಮದ್‌ನಗರ್‌ನಲ್ಲಿ ದಲಿತ ಕುಟುಂಬದ ಮೂವರನ್ನು ಕೊಲೆ ಮಾಡಲಾಗಿತ್ತು. ಅಪ್ರಾಪ್ತ ವಯಸ್ಸಿನ ಬಾಲಕಿಯರ ಪ್ರಕರಣದಲ್ಲಿ ಶವಪರೀಕ್ಷೆಯ ಮೂಲಕ ಪೊಲೀಸರಿಗೆ ಅದೊಂದು ಅತ್ಯಾಚಾರ ಪ್ರಕರಣ ಎಂಬುದು ತಿಳಿದುಬಂದಿತ್ತು. ಆದರೆ ಶವಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಲಾಗಿದೆ ಎಂಬ ಸಬೂಬು ನೀಡಿ ಅದನ್ನು ‘ಆಕಸ್ಮಿಕವಾಗಿ ಮುಳುಗಿದ’ ಪ್ರಕರಣ ಎಂದು ಬದಲಿಸಲಾಗಿತ್ತು. ಮಹಾರಾಷ್ಟ್ರವು ದಲಿತರು ವಾಸಿಸಲು ಅಷ್ಟೊಂದು ಕೆಟ್ಟ ಸ್ಥಳವೇನೂ ಅಲ್ಲ ಎಂಬುದನ್ನು ನಾವು ಗಮನಿಸಬೇಕು. ವಾಸ್ತವದಲ್ಲಿ ಜಾತಿ ಆಧಾರಿತ ದೌರ್ಜನ್ಯದ ಶಾಪ ಭಾರತದ ಯಾವ ರಾಜ್ಯವನ್ನೂ ಬಿಟ್ಟಿಲ್ಲ. ಎಲ್ಲಾ ರಾಜ್ಯಗಳಲ್ಲೂ ಒಂದರ ಹಿಂದೆ ಒಂದರಂತೆ ನಡೆಯುವ ಪ್ರಕರಣಗಳನ್ನು ಲೆಕ್ಕಹಾಕಬಹುದು. ಹಾಗಾದರೆ ಯಾವುದೇ ಆಕ್ರೋಶವನ್ನು ಹುಟ್ಟುಹಾಕದ ಈ ಪ್ರಕಣಗಳಲ್ಲಿ ನ್ಯಾಯದ ಗತಿಯೇನು? ಇವುಗಳಿಗೂ ನ್ಯಾಯ ಸಿಗುತ್ತದೆಯೇ?

ಇಲ್ಲ, ಛತ್ತೀಸ್‌ಗಡದ ಬಿಲಾಯಿ ಪಟ್ಟಣದಲ್ಲಿ ನಡೆದ 21ರ ಹರೆಯದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಆತ್ಮಹತ್ಯೆ ಇದಕ್ಕೆ ಉದಾಹರಣೆಯಾಗಿದೆ. ಇಬ್ಬರು ಪೊಲೀಸ್ ಪೇದೆಯರು ಮತ್ತು ಓರ್ವ ವೈದ್ಯನಿಂದ ನಿರಂತರವಾಗಿ ಅತ್ಯಾಚಾರಕ್ಕೀಡಾಗಿದ್ದ ಆ ಯುವತಿ ಈ ವರ್ಷ ಜನವರಿ 28ರಂದು ತನ್ನ ಜೀವಕ್ಕೆ ಅಂತ್ಯ ಹಾಡಿದ್ದಳು. ಆಕೆಯ ಮರಣಪತ್ರದಲ್ಲಿ ಅಪರಾಧಿಗಳನ್ನು ಹೆಸರಿಸುವ ಜೊತೆಗೆ ನ್ಯಾಯ ವ್ಯವಸ್ಥೆಯನ್ನೂ ಸೇರಿಸಿದ್ದಳು; ಆಕೆ ತನ್ನ ವಕೀಲ ಮತ್ತು ನ್ಯಾಯಾಧೀಶರ ಮೇಲೂ ಶೋಷಣೆಯ ಆರೋಪ ಮಾಡಿದ್ದಳು. ನ್ಯಾಯಾಧೀಶರು ಅದುಹೇಗೆ ತನ್ನ ಪ್ರಕರಣದ ವಿಚಾರಣೆಯನ್ನು ಆಲಿಸಬೇಕಾದ ದಿನಾಂಕದಂದು ಹಾಜರಾಗದೆ ಮತ್ತೊಂದು ದಿನ ನಿಗದಿಪಡಿಸಿ ಆಕೆಯನ್ನು ನಿರರ್ಥಕವಾಗಿ ಪದೇಪದೇ ನ್ಯಾಯಾಲಯಕ್ಕೆ ಬರುವಂತೆ ಮಾಡಿದ್ದರು ಎಂಬುದನ್ನು ಆಕೆ ಉಲ್ಲೇಖಿಸಿದ್ದಳು. ನ್ಯಾಯಾಧೀಶರು ಮಾರಾಟವಾಗಿದ್ದಾರೆ ಎಂಬ ನೆಪವೊಡ್ಡಿ ತನ್ನ ವಕೀಲ ಖಾಲಿ ಹಾಳೆಯ ಮೇಲೆ ಅದುಹೇಗೆ ತನ್ನ ಸಹಿಯನ್ನು ಪಡೆದಿದ್ದರು ಎಂಬುದನ್ನು ಆಕೆ ವಿವರಿಸಿದ್ದಳು. ನಾನು ನ್ಯಾಯದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದೇನೆ, ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದಾಕೆ ಬರೆದಿದ್ದಳು. ಆಕೆ ನ್ಯಾಯ ವ್ಯವಸ್ಥೆಯ ಚಕ್ರವ್ಯೆಹದ ಒಳಗೆ ಎದುರಿಸಿದ ಸಂಕಷ್ಟಗಳು ಒಂದೇ ಮಾದರಿಯದ್ದಾಗಿರಲಿಲ್ಲವೇ? ಪ್ರಭಾವೀ ವ್ಯಕ್ತಿಗಳು ಎಲ್ಲ ಸಮಯಗಳಲ್ಲೂ ವಿಚಾರಣೆಯನ್ನು ರದ್ದುಗೊಳಿಸುವ ತಂತ್ರವನ್ನು ಉಪಯೋಗಿಸುವುದಿಲ್ಲವೇ? ಭಾರತೀಯ ನ್ಯಾಯಾಲಯಗಳು ತನಿಖಾ ಕಣ್ಣುಗಳ ಮತ್ತು ಅಪರಾಧಿಗಳ ಬದಲಾಗಿ ಸಂತ್ರಸ್ತರನ್ನು ಅವಮಾನಿಸುವ ಕೊಳಕು ಕೆಣಕುವ ಮಾತುಗಳ ಮಧ್ಯೆ ಪದೇಪದೇ ವಿಚಾರಣೆ ನಡೆಸುವ ಮೂಲಕ ಅತ್ಯಾಚಾರ ಸಂತ್ರಸ್ತರನ್ನು ಶೋಷಿಸುವ ತಾಣಗಳಲ್ಲವೇ? ಬಡಜನರು ಕೊನೆಯೇ ಇಲ್ಲದಂತೆ ಎಳೆಯಲ್ಪಡುವ ಪ್ರಕರಣಗಳಲ್ಲಿ ಸಾಯುವ ಹಂತಕ್ಕೆ ಉಪವಾಸ ಬೀಳದೆ ನ್ಯಾಯ ಪಡೆಯುವಂಥ ಯಾವುದೇ ಅವಕಾಶವಾದರೂ ಇದೆಯೇ? ನ್ಯಾಯಕ್ಕಾಗಿ ಆಕ್ರೋಶದ ಹಾದಿ ಒಂದು ಪ್ರಕರಣದಲ್ಲಿ ನೆರವಾಗಬಹುದು ಅಥವಾ ಹೆಚ್ಚೆಂದರೆ ಕೆಲವು ಪ್ರಕರಣಗಳಲ್ಲಿ. ಭಾರತದಲ್ಲಿ ಮೂರು ಕೋಟಿ ಪ್ರಕರಣಗಳು ಬಾಕಿಯಿವೆ. ಭಾರತಕ್ಕೆ ಅಗತ್ಯವಿರುವುದು ಸದ್ಯ ಆಚರಣೆಯಲ್ಲಿರುವ ಕಾನೂನಿನ ನೀತಿಯ ಚೌಕಟ್ಟಿನಲ್ಲಿ ಕಾರ್ಯಾಚರಿಸುವಂತೆ ಮತ್ತು ಸಾಂದರ್ಭಿಕ ಸಮಾಧಾನವನ್ನಲ್ಲದೆ ನ್ಯಾಯವನ್ನು ಒದಗಿಸುವಂತೆ ನ್ಯಾಯ ಸಂಸ್ಥೆಯನ್ನು ಮೂಲಭೂತವಾಗಿ ಮರುರಚಿಸುವುದು. ಒಂದು ಪ್ರಶ್ನೆ ನಮಗೆದುರಾಗುತ್ತದೆ. ರೋಹಿತ್ ವೇಮುಲಾ ಪ್ರತಿಭಟನೆಯ ಕಾವು ಆರಿದ ನಂತರ ಅಥವಾ ಸಾರ್ವಜನಿಕ ಆಕ್ರೋಶಕ್ಕೆ ಅರ್ಹವಾಗಿರುವ ಮತ್ತೊಂದು ಪ್ರಕರಣದ ಮುಖ್ಯ ಭೂಮಿಕೆಗೆ ಬಂದಾಗ ಏನಾಗುತ್ತದೆ? ಇಂತಹ ಜಾತಿಯಾಧಾರಿತ ತಾರತಮ್ಯಗಳನ್ನು ಪಡೆದು ಅಪರಾಧಿಗಳನ್ನು ಶಿಕ್ಷಿಸುವ ಸಲುವಾಗಿ ವಿಶ್ವವಿದ್ಯಾನಿಲಯಗಳ ಒಳಗಡೆಯೇ ಸಂಸ್ಥೆಯೊಂದನ್ನು ನಿರ್ಮಿಸಲು ಹೋರಾಟ ನಡೆಸುವುದು ಬೇಡವೇ?

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ,ರೋಹಿತ್ ವೇಮುಲಾರಿಗೆ ನ್ಯಾಯ ಸಿಕ್ಕರೆ ಕಾಲೇಜ್ ಆವರಣಗಳಲ್ಲಿ ಜಾತಿಯಾಧಾರಿತ ದೌರ್ಜನ್ಯಗಳು ಕೊನೆಗೊಳ್ಳುವುದೇ ಎಂಬುದನ್ನು ನಾವು ನಮ್ಮಲ್ಲೇ ಕೇಳಬೇಕು. ಹಾಗಾಗುವುದಿಲ್ಲವಾದರೆ ನಾವು ಮತ್ತೊಂದು ರೀತಿಯಲ್ಲಿ ಹೋರಾಟ ನಡೆಸಬೇಕು; ಅದು ಭಾರತದ ಕರ್ತವ್ಯಭ್ರಷ್ಟ ಅಪರಾಧಿ ನ್ಯಾಯ ವ್ಯವಸ್ಥೆಯ ಮರುರಚನೆ.

Writer - ಸಮರ್

contributor

Editor - ಸಮರ್

contributor

Similar News