ಇಲ್ಲೊಂದು ರೋಟಿ ಬ್ಯಾಂಕ್

Update: 2016-02-15 17:57 GMT

 ಬ್ಯಾಂಕ್ ಅಂದರೆ ಸಾಮಾನ್ಯ ಜನರ ಮನಸ್ಸಿಗೆ ತಟ್ಟನೆ ಹೊಳೆಯುವುದು ಹಣಕಾಸಿನ ವ್ಯವಹಾರ ಮಾಡುವ ಸಂಸ್ಥೆ ಎಂದು. ಇದರ ಜತೆ ರಕ್ತ ಬ್ಯಾಂಕ್, ಕಿಡ್ನಿ ಬ್ಯಾಂಕ್, ಕಣ್ಣಿನ ಬ್ಯಾಂಕ್ ಹೀಗೆ ಮನುಷ್ಯ ಹಾಗೂ ಪ್ರಾಣಿಗಳ ಜೈವಿಕ ಅಂಶಗಳನ್ನು ಸಂಗ್ರಹಿಸಿ ಸಮಯ ಬಂದಾಗ ಉಪಯೋಗಕ್ಕೆ ಬರುವಂತೆ ಸ್ಥಾಪಿಸಲಾಗಿರುವ ವಿವಿಧ ಬ್ಯಾಂಕುಗಳೂ ಇಂದಿನ ವಿದ್ಯಮಾನ ಎಂಬುದು ಅಲ್ಲಗಳೆಯಲಾಗುವುದಿಲ್ಲ. ಆದರೆ ಸಮಾಜದ ಅಂಚಿನಲ್ಲಿರುವ ಬಡವರ ಹಸಿವನ್ನು ನೀಗಿಸಲು ಸಹಕಾರಿಯಾಗುವಂತೆ ಸ್ಥಾಪಿಸಲಾಗಿರುವ ರೋಟಿ ಬ್ಯಾಂಕ್ ಕಲ್ಪನೆ ತೀರಾ ಇತ್ತೀಚಿನದು. ದೇಶದಲ್ಲೇ ಪ್ರಪ್ರಥಮವಾಗಿ ಉತ್ತರಪ್ರದೇಶದ ಬುಂದೇಲಖಂಡದಲ್ಲಿ ನಂತರ ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ಎರಡನೆಯದಾಗಿ ಇಂಥದ್ದೊಂದು ಬ್ಯಾಂಕ್ ಸ್ಥಾಪನೆಯ ಹಿಂದೆ ಓರ್ವ ಮುಸ್ಲಿಮ್ ಸಹೃದಯಸ್ಥ ಯೂಸುಫ್ ಮುಕಾಟಿ ಅವರ ಸದಾಶಯವಿದೆ. ಇವರು ‘‘ಹಾರೂನ್ ಮುಕಾಟಿ ಇಸ್ಲಾಮಿಕ್ ಸೆಂಟರ್’’ ಎಂಬ ಸಂಘಟನೆಯ ಸ್ಥಾಪಕರೂ ಹೌದು. ಈ ಸಂಘಟನೆ ಮಹಿಳೆಯರಿಗೆ ಮುಖ್ಯವಾಗಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ವಾವಲಂಬಿಯಾಗಿ ಗೌರವಯುತ ಜೀವನ ನಡೆಸಲು ಸಹಾಯವಾಗುವಂತೆ ಕಾಲೇಜು ಶಿಕ್ಷಣದ ಜತೆ ವೃತ್ತಿಪರ ಶಿಕ್ಷಣವನ್ನೂ ನೀಡುವ ವ್ಯವಸ್ಥೆ ಮಾಡಿದೆ. ಇದರ ವಿವಿಧ ಕೋರ್ಸುಗಳಲ್ಲಿ ಇದುವರೆಗೆ ಒಟ್ಟಾರೆ ಸುಮಾರು 2,000 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಶಿಕ್ಷಣ ಪಡೆದಿದ್ದಾರೆ. ಹೆಚ್ಚಿನವರು ಮುಸ್ಲಿಮ್ ಸಮುದಾಯಕ್ಕೆ ಸೇರಿದ ವಿಚ್ಛೇದಿತ ಹೆಣ್ಣು ಮಕ್ಕಳು. ಇಂಥ ಅಸಹಾಯಕ ಹೆಣ್ಣು ಮಕ್ಕಳಿಗೆ. ಸ್ವಾಭಿಮಾನದ ಬದುಕು ನೀಡುವುದೇ ನಮ್ಮ ಗುರಿ ಎನ್ನುತ್ತಾರೆ ಮುಕಾಟಿ ಅವರು.. ಅಂದ ಹಾಗೆ ಮುಕಾಟಿಯವರಿಗೆ ರೋಟಿ ಬ್ಯಾಂಕ್ (ರೊಟ್ಟಿ ಬ್ಯಾಂಕ್) ನ ಕಲ್ಪನೆ ಬಂದದ್ದು ಹೇಗೆ? ಅಲ್ಲಲ್ಲಿ ಒಂದು ಹೊತ್ತು ಊಟಕ್ಕೂ ಪರದಾಟ ನಡೆಸುವಂಥ ಅನೇಕ ಕುಟುಂಬಗಳನ್ನು ಮುಖ್ಯವಾಗಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕುಟುಂಬಗಳನ್ನು ಅವರು ಗಮನಿಸುತ್ತಿದ್ದರು. ಅಂಥ ಕುಟುಂಬಗಳಲ್ಲಿ ಒಬ್ಬನ ದುಡಿಮೆಯಿಂದ ಆರೇಳು ಮಂದಿಯ ಹೊಟ್ಟೆ ತುಂಬಾ ಬೇಕು. ಕೆಲವೊಮ್ಮೆ ಒಂದೇ ಹೊತ್ತಿನ ಊಟ ಸಿಕ್ಕುವುದೂ ಕಷ್ಟವೆನಿಸುವ ಪರಿಸ್ಥಿತಿ. ಹೊಟ್ಟೆ ತುಂಬ ಊಟ ಎಲ್ಲರ ಮೂಲಭೂತ ಹಕ್ಕು. ಇದು ನೈಸರ್ಗಿಕ ನ್ಯಾಯ. ಇದಕ್ಕೆ ಜಾತಿ ಪಂಗಡಗಳ ಭೇದವಿಲ್ಲ. ಭೌಗೋಳಿಕ ಸೀಮೆಯಿಲ್ಲ. ಸಮಾಜದ ಇಂಥ ಕಟ್ಟಕಡೆಯ ಜನಸಮುದಾಯದ ಸಲುವಾಗಿಯೇ ರೂಪುತಳೆದದ್ದು ಈ ರೋಟಿ ಬ್ಯಾಂಕ್.

ಈ ಕುರಿತು ಮುಕಾಟಿಯವರು ತನ್ನ ಪತ್ನಿ ಕೌಸರ್ ಹಾಗೂ ಸಹೊದರಿಯರಾದ ಶಹನಾಝ್, ಮಮ್ತಾಝ್, ಸೀಮಾ ಮತ್ತು ಹೂಮಾರವರೊಂದಿಗೆ ಸಮಾಲೋಚನೆ ನಡೆಸಿದರು. ಅವರಿಂದ ದೊರೆತ ಪ್ರೇರಣೆ ಹಾಗೂ ಸಮಾನ ಮನಸ್ಕರ ಸಹಕಾರದಿಂದ ಒಟ್ಟು 250 ಮಂದಿ ಸದಸ್ಯರುನ್ನುಳ್ಳ ರೋಟಿ ಬ್ಯಾಂಕ್ ಕಳೆದ ಡಿಸೆಂಬರ್ 5 ರಂದು ಜನ್ಮ ಪಡೆದು ಸರಳ ರೀತಿಯಲ್ಲಿ ಕಾರ್ಯಾರಂಭ ಮಾಡತೊಡಗಿತು. ಸದಸ್ಯರಾಗುವವರು ಒಂದು ಅರ್ಜಿ ಫಾರಂ ಅನ್ನು ತುಂಬಿಸಿ ಕೊಟ್ಟರೆ ಅವರಿಗೊಂದು ಕೋಡ್ ನಂಬರ್ ನೀಡಲಾಗುತ್ತದೆ. ಸದಸ್ಯರಾದವರು ತಂತಮ್ಮ ಮನೆಗಳಿಂದ ಕನಿಷ್ಠ ತಲಾ ಎರಡೆರಡು ರೊಟ್ಟಿ ಹಾಗೂ ಪಲ್ಯ ಬ್ಯಾಂಕಿಗೆ ತಂದು ಕೊಡತಕ್ಕದ್ದು. ಜಾಸ್ತಿ ಕೊಟ್ಟರೂ ನಡೆಯುತ್ತದೆ. ಹೀಗೆ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿದ ಎಲ್ಲರ ರೊಟ್ಟಿ ಪಲ್ಯಗಳನ್ನು ಅನಂತರ ಫಲಾನುಭವಿಗಳಿಗೆ ಹಂಚಲಾಗುತ್ತದೆ. ಫಲಾನುಭವಿಗಳಲ್ಲಿ ಜಾತಿಕೋಮುಗಳ ತಾರತಮ್ಯವಿಲ್ಲ. ದಾನಿಗಳಲ್ಲೂ ಕೂಡಾ ಹಾಗೆ. ಈ ಸಾಕಷ್ಟು ಹಿಂದೂಗಳು ಈ ರೋಟಿ ಬ್ಯಾಂಕಿನ ದಾನಿಗಳಾಗಿದ್ದಾರೆ. ಜೊತೆಗೆ ಈ ಯೋಜನೆಯ ಸಂಘಟಕರು ದೊಡ್ಡ ದೊಡ್ಡ ಹೊಟೇಲು, ಮದುವೆ ಪಾರ್ಟಿಯ ಗುತ್ತಿಗೆದಾರರು ಕಾರ್ಖಾನೆಗಳ ಕ್ಯಾಂಟೀನ್‌ಗಳವರಿಂದ ಹಾಗೂ ವಿಮಾನಯಾನದ ಅಡುಗೆ ಕೋಣೆಗಳಲ್ಲಿ ಹೆಚ್ಚುವರಿಯಾದ ಉಳಿದ ಖಾದ್ಯಗಳನ್ನು ಕೂಡಾ ಸಂಗ್ರಹಿಸಿ ರೋಟಿ ಬ್ಯಾಂಕ್ ಮೂಲಕ ಹಂಚುವ ವ್ಯವಸ್ಥೆ ಮಾಡುತ್ತಾರೆ. ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಕಾಪಿಡಲು ಬ್ಯಾಂಕಿನಲ್ಲಿ ಕೋಲ್ಡ್ ಸ್ಟೋರೆಜ್ ವ್ಯವಸ್ಥೆಯೂ ಇದೆ. ಈ ಮೊದಲು ಮದುವೆ ಸಮಾರಂಭ ಹೊಟೇಲುಗಳ ಪಾರ್ಟಿ ಮುಂತಾದುವುಗಳಲ್ಲಿ ಮಿಕ್ಕಿ ಉಳಿದ ಆಹಾರ ಪದಾರ್ಥ ಚೆಲ್ಲುವ ಕಾರಣ ಆಗುವ ನಷ್ಟದ ಬಾಬತ್ತು ದಿನವೊಂದಕ್ಕೆ ಕೆಲವು ಕೋಟಿಗಳಷ್ಟು ಎಂಬುದು ಸಮೀಕ್ಷೆಯಿಂದ ತಿಳಿದುಬರುವ ವಿಚಾರ. ಈಗ ಹಾಗಲ್ಲ. ಹಾಗೆ ಪೋಲಾಗುವ ಆಹಾರ ಪದಾರ್ಥಗಳು ಹಸಿದವರ ಹೊಟ್ಟೆ ಸೇರುತ್ತಿದೆ ಎನ್ನುವುದೇ ಸಂತಸದ ವಿಚಾರ. ಈ ಚಿಂತನೆಯ ಹಿಂದೆ ಒಬ್ಬ ಸಾಮಾನ್ಯ ಸಿದ್ಧ ಉಡುಪು ಮಳಿಗೆಯ ಮಾಲಕರಾಗಿರುವ ಯೂಸುಫ್ ಮುಕಾಟಿಯವರ ಸದಾಶಯವಿದೆ ಎಂಬುದು ನಿಜವಾಗಿ ಮೆಚ್ಚತಕ್ಕ ವಿಚಾರ.
ಭಾರತದ ವಾಣಿಜ್ಯ ರಾಜಧಾನಿ ಮುಂಬಯಿ ಹಾಗೂ ರಾಜಧಾನಿ ದಿಲ್ಲಿಯಲ್ಲಿ ಬಹುಕೋಟಿ ಸಂಪತ್ತಿನ ಅನೇಕ ಮಂದಿ ಒಡೆಯರಿದ್ದು, ಇವರು ಏಷ್ಯಾ ಪೆಸಿಫಿಕ್ ಬಹುಕೋಟಿ ಸಂಪತ್ತಿನ ಒಡೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಅಗ್ರಗಣ್ಯರು. ನಂತರದ ಬಹುಕೋಟಿ ಒಡೆಯರ ಸ್ಥಾನಗಳಲ್ಲಿ ಕ್ರಮವಾಗಿ ಕೋಲ್ಕತಾ, ಹೈದರಾಬಾದ್, ಬೆಂಗಳೂರು, ಚೆನ್ನೈ, ಪುಣೆ, ಅಹಮ್ಮದಬಾದ್ ನಗರಗಳೂ ಸೇರಿವೆ. ಮುಕಾಟಿಯವರಂತೆ ಒಂದಿಷ್ಟಾದರೂ ಈ ಬಹುಕೋಟಿ ಸಂಪತ್ತಿನ ಒಡೆಯರು ಯೋಚಿಸುವಂತಾದರೆ ನಮ್ಮ ದೇಶದಲ್ಲಿ ಹಸಿದವರನ್ನು ಹುಡುಕಲು ಸೂಕ್ಷ್ಮದರ್ಶಕ ಬೇಕಾಗಬಹುದೇನೊ. ಆ ದಿನ ಬೇಗ ಬರಲಿ ಎಂದು ಹಾರೈಸೋಣ.

Writer - ಕೆ. ಶಾರದಾ ಭಟ್, ಉಡುಪಿ

contributor

Editor - ಕೆ. ಶಾರದಾ ಭಟ್, ಉಡುಪಿ

contributor

Similar News

ಸಂವಿಧಾನ -75