ಮುಂಬೆಯಲ್ಲಿ ಶೆರಿಫ್ ಸ್ಥಾನಕ್ಕೆ ಅರ್ಹರಿಲ್ಲವೇ?

Update: 2016-02-22 17:28 GMT

ಆರು ವರ್ಷಗಳಿಂದ ಯಾರೂ ಬಂದಿಲ್ಲ!

ಮುಂಬೈಯ ಮೇಯರ್ ಮತ್ತು ಮುಂಬೈಯ ಶೆರಿಫ್ ಎನ್ನಿಸಿಕೊಳ್ಳುವುದು ಪ್ರತಿಷ್ಠೆಯ ಸಂಗತಿ. ಆದರೆ 2016 ರ ಜನವರಿ ಕಳೆದರೂ ಮುಂಬೈಗರಿಗೆ ಶೆರಿಫ್ ಇನ್ನೂ ದೊರೆತಿಲ್ಲ! ಕಳೆದ ಐದಾರು ವರ್ಷಗಳಲ್ಲಿ ಇದೇ ದೃಶ್ಯವಿದೆ. ಈ ವರ್ಷವೂ ಶೆರಿಫ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುವರೆಂದು ರಹಸ್ಯ ಬಯ ಲಾಗಿಲ್ಲ. ಹಾಗೆ ನೋಡಿದರೆ ಇಂಗ್ಲೆಂಡ್‌ನಲ್ಲಿ ಜಾರಿ ಇರುವ ಶೆರಿಫ್ ಸ್ಥಾನವು ಭಾರತಕ್ಕೆ ಬಂದದ್ದು ಬ್ರಿಟಿಷರ ಕಾಲದಲ್ಲಿ. ಬ್ರಿಟಿಷರು ಚೆನ್ನೈ, ಮುಂಬೈ ಮತ್ತು ಕೊಲ್ಕತ್ತಾದಲ್ಲಿ 19ನೆ ಶತಾಬ್ದಿಯ ಸಮಯ (1855) ಇದನ್ನು ಜಾರಿಗೊಳಿಸಿ ದ್ದರು. ಈ ಶೆರಿಫ್ ಸ್ಥಾನವನ್ನು ಸ್ವಾತಂತ್ರ್ಯಾ ನಂತರವೂ ಮುಂಬೈ ಮತ್ತು ಕೊಲ್ಕತ್ತಾ ಗಳಲ್ಲಿ ರದ್ದು ಮಾಡಿಲ್ಲ. ಚೆನ್ನೈನಲ್ಲಿ ಇದು ರದ್ದುಗೊಂಡಿದೆ. ಈ ಸ್ಥಾನಕ್ಕೆ ಪ್ರತೀ ಜನವರಿಯಲ್ಲಿ ನೇಮಕ ಮಾಡಲಾಗುತ್ತಿದ್ದು ಇವರ ಕಾರ್ಯಾವಧಿ ಒಂದು ವರ್ಷಕ್ಕಾಗಿದೆ. ವಿಶೇಷವೆಂದರೆ ಕಳೆದ ಐದಾರು ವರ್ಷಗಳಿಂದ ಶೆರಿಫ್ ಸ್ಥಾನಕ್ಕೆ ಮುಂಬೈಯಲ್ಲಿ ಯಾರನ್ನೂ ನೇಮಕ ಮಾಡಲಾಗಿಲ್ಲ! ಆದರೂ ಈ ಗೌರವದ ಸ್ಥಾನ ಪಡೆಯಲು ತೆರೆಮರೆಯಲ್ಲಿ ಪೈಪೋಟಿ ನಡೆಯುತ್ತಿದೆ. ಬ್ರಿಟಿಷರ ಆಡಳಿತದ ನಂತರ ಶೆರಿಫ್ ಸ್ಥಾನವು ಮೇಯರ್‌ರ ನಂತರದ ಕ್ರಮಾಂಕದಲ್ಲಿರುತ್ತಿತ್ತು. (ಮೇಯರ್) ನಗರಪಿತ ಮತ್ತು (ಶೆರಿಫ್) ನಗರ ಪಾಲಕ್. ಆದರೆ ಶೆರಿಫ್ ಮತ್ತು ಮೇಯರ್ ಇಬ್ಬರಿಗೂ ಕಾರ್ಯಕಾರಿ ಅಧಿ ಕಾರ ಪ್ರಾಪ್ತವಾಗಿಲ್ಲ. ಹೀಗಾಗಿ ಇಬ್ಬರನ್ನೂ ಮುಂಬೈಯಲ್ಲಿ ಶೋಪೀಸ್ ತರಹ ಕಾಣುವುದಿದೆ. ಮುಂಬೈ ಶೆರಿಫ್‌ರಿಗೆ ವೇತನ - ಭತ್ತೆ ನೀಡುವ ಪರಂಪರೆ ಇಲ್ಲ. ಆದರೆ ಇವರ ಸ್ಥಾನದ ಗೌರವ ಗಮನಿಸಿ ಕೆಂಪು ದೀಪದ ವಾಹನವನ್ನುಬಳಸಬಹುದು. ಶೆರಿಫ್‌ರ ಆಫೀಸ್ ಮುಂಬೈ ಹೈಕೋರ್ಟ್ ಪರಿಸರದಲ್ಲಿರುವುದು. ವಿದೇಶಿ ರಾಜಕೀಯ ಗಣ್ಯರು - ಪ್ರಧಾನಿ - ರಾಷ್ಟ್ರಪತಿ ಮೊದಲಾದವರು ಮುಂಬೈಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಸ್ವಾಗತ, ಅಂತಾರಾಷ್ಟ್ರೀಯ ಸ್ತರದ ಗಣ್ಯರು ನಿಧನರಾದಾಗ ಮುಂಬೈ ವತಿಯಿಂದ ಶೋಕಸಭೆ ಆಯೋಜಿಸುವುದು.... ಇವೆಲ್ಲ ಕೆಲಸ ಶೆರಿಫ್‌ರದ್ದು. ಹೀಗಾಗಿ ಶೆರಿಫ್ ಸ್ಥಾನಕ್ಕೆ ನೇಮಕ ಮಾಡುವಾಗ ಅವರ ಯೋಗ್ಯತೆಯ ವಿಮರ್ಶೆ ಮಾಡಲಾಗುತ್ತದೆ. ಇಲ್ಲಿ ಶೆರಿಫ್ ಸ್ಥಾನಕ್ಕೆ ಡಾಕ್ಟರ್, ಶಿಕ್ಷಣ ತಜ್ಞರು, ಸಮಾಜ ಸೇವಕರು, ಉದ್ಯಮಿಗಳು...ಯಾರೂ ಇರಬಹುದು. ನಾನಾ ಚುಡಾಸಮ್, ಸುನೀಲ್ ಗವಾಸ್ಕರ್, ದಿಲೀಪ್ ಕುಮಾರ್, ಸುನೀಲ್ ದತ್ತ್... ಇವರೆಲ್ಲ ಈ ಹಿಂದೆ ಶೆರಿಫ್ ಸ್ಥಾನವನ್ನು ಅಲಂಕರಿಸಿದವರು. ಶೆರಿಫ್‌ರಿಗೆ ವೇತನ ಸಿಗದಿದ್ದರೂ ಅವರ ಕಚೇರಿ ಯಲ್ಲಿ ಕೆಲಸ ಮಾಡುವವರಿಗೆ ಮತ್ತು ಅಧಿಕಾರಿಗಳಿಗೆ ವೇತನ ದೊರೆಯು ವುದು. ಶೆರಿಫ್‌ರ ನಂತರ ಉಪ ಶೆರಿಫ್ ಕೂಡಾ ಇರುತ್ತಾರೆ. ಅಪರಾಧಿಗಳು ಕೋರ್ಟ್‌ಗೆ ದಂಡ ಕಟ್ಟುವ ಹಣದಲ್ಲೂ ಒಂದಿಷ್ಟು ಪಾಲು ಶೆರಿಫ್ ಕಚೆೇರಿಯ ಖರ್ಚಿಗೆ ಬಳಸುತ್ತಾರೆ.


ಇಸವಿ 2009ರ ನಂತರ ಶೆರಿಫ್ ಸ್ಥಾನಕ್ಕೆ ನೇಮಕವಾಗಿಲ್ಲ. 2008 ರಲ್ಲಿ ಪ್ರಾಚಾರ್ಯ ಡಾ. ಇಂದೂ ಸಾಹನಿ ಅವರು ಮುಂಬೈಯ 154 ನೆ ಶೆರಿಫ್ ಸ್ಥಾನ ಅಲಂಕರಿಸಿದ್ದರು. ಅನಂತರ ಮುಖ್ಯಮಂತ್ರಿ ಕಾರ್ಯಾಲಯದಿಂದ ಯಾರನ್ನೂ ನೇಮಕ ಮಾಡಿದ್ದಿಲ್ಲ. ವಕೀಲರಾದ ಹರ್ಷ ಲೋಕ್‌ಗಾಂವ್ಕರ್ ಇದರಿಂದ ಬೇಸರಗೊಂಡು ಮಂತ್ರಾಲಯಕ್ಕೆ ತೆರಳಿ ಮುಖ್ಯಮಂತ್ರಿ ಸಹಿತ ಅನ್ಯರ ಎದುರು ಶೆರಿಫ್ ಸ್ಥಾನಕ್ಕೆ ಅರ್ಹರನ್ನು ನೇಮಕ ಮಾಡುವಂತೆ ಒತ್ತಾಯಿ ಸಿದ್ದಿದೆ. ಏನೂ ಫಲ ನೀಡದಿದ್ದಾಗ 2013 ರಲ್ಲಿ ಅವರು ಕೋರ್ಟ್‌ಗೆ ಜನಹಿತ ಅರ್ಜಿ ದಾಖಲಿಸಿದ್ದರು. ಆಗಿನ ಮುಖ್ಯಮಂತ್ರಿ ಪ್ರಥ್ವಿರಾಜ್ ಚವ್ಹಾಣ್ ಮೂವರು ಸದಸ್ಯರ ಸಮಿತಿ ರಚಿಸಿದರೂ ಫಲಿತಾಂಶ ಬರಲಿಲ್ಲ. ಈಗ ಮಾಜಿ ಶೆರಿಫ್ ನಾನಾ ಚುಡಾಸಮ್ ಅವರ ಪುತ್ರಿ ಬಿಜೆಪಿಯ ಸಾಯ್ನಿ ಎನ್‌ಸಿಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಪತ್ರ ಬರೆದು ಶೆರಿಫ್ ಸ್ಥಾನಕ್ಕೆ ಅರ್ಹ ರನ್ನು ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ... ಪತ್ರದಲ್ಲಿ ಉಪ ಶೆರಿಫ್ ಎಪಿಕೇತ್ಕರ್ ಅವರೇ ಶೆರಿಫ್‌ರ ಪಾತ್ರವನ್ನು ಐದು ವರ್ಷದಿಂದ ನಿರ್ವಹಿಸು ತ್ತಿದ್ದಾರೆ ಎಂಬ ಉಲ್ಲೇಖವೂ ಇದೆ. ಶೆರಿಫ್ ಸ್ಥಾನ ಮಾತ್ರವಲ್ಲ, ಕಛೇರಿಯ 31 ಸಿಬ್ಬಂದಿಗಳ ಹುದ್ದೆಯೂ ಖಾಲಿ ಬಿದ್ದಿದೆ. ಈ ವರ್ಷವಾದರೂ ಶೆರಿಫ್ ಸ್ಥಾನಕ್ಕೆ ಯಾರನ್ನಾದರೂ ನೇಮಕ ಮಾಡುವರೋ....?

ಮುಂಬೈಯಲ್ಲಿ ಉತ್ತರ ಪ್ರದೇಶ ಸ್ಥಾಪನಾ ದಿನಾಚರಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ!


ಮುಂಬೈಯಲ್ಲಿ ಈ ವರ್ಷ ಉತ್ತರಪ್ರದೇಶ ಸ್ಥಾಪನಾ ದಿನವನ್ನು ಅದ್ದೂರಿಯಾಗಿ ಆಚರಿಸಿದರು. ಕೆಲ ವರ್ಷದ ಹಿಂದೆ ರಾಜ್‌ಠಾಕ್ರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯು ಉತ್ತರಪ್ರದೇಶ -ಬಿಹಾರದಿಂದ ಬಂದವರಿಗೆ ಭಯ ಹುಟ್ಟಿಸಿದ್ದಷ್ಟೇ ಅಲ್ಲ, ಮುಂಬೈಯಲ್ಲಿ ಉತ್ತರಪ್ರದೇಶ ಸ್ಥಾಪನಾ ದಿನ ಆಚರಿಸು ವುದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಿದೆ. ಆವಾಗ ನಾವು ಕನ್ನಡದವರು ಮುಂಬೈ ಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬಹುದೇ? ಎಂಬ ಬಗ್ಗೆ ನಾನೊಂದು ಲೇಖನ ಬರೆದದ್ದನ್ನೂ ಇಲ್ಲಿ ನೆನಪಿಸುತ್ತಿದ್ದೇನೆ. ಮಹಾರಾಷ್ಟ್ರ ದಿನಾಚರಣೆ ಮಾತ್ರ ಮುಂಬೈಯಲ್ಲಿ ಆಚರಿಸಬೇಕೇ ಹಾಗಾದರೆ?

ಈ ಬಾರಿ ಅಂತಹ ಭಯ ಯಾರಿಗೂ ಬರಲಿಲ್ಲ. ಶಿವಸೇನೆಯವರು ಕೂಡಾ ಅನೇಕ ವರ್ಷಗಳಿಂದ ಇಲ್ಲಿರುವ ಉತ್ತರ ಭಾರತೀಯರೆಲ್ಲ ಮಹಾರಾಷ್ಟ್ರದವರೇ ಎಂಬ ಮಾತನ್ನು ಹೇಳಿದ್ದಾರೆ. ಈ ಬಾರಿ ಅಭಿಯಾನ ಎಂಬ ಸಂಸ್ಥೆ ಉತ್ತರ ಪ್ರದೇಶ ಸ್ಥಾಪನಾ ದಿವಸವನ್ನು ಅದ್ದೂರಿಯಾಗಿ ಆಚರಿಸಿತು. ಈ ಸಂದರ್ಭದಲ್ಲಿ ಮುಂಬೈಯ 4,000 ಬಾವಿಗಳನ್ನು ಉಳಿಸಲು ಕುಂವಾ ಬಚಾವೋ ಪಾನಿ ಪಾವೋ ಎಂಬ ಅಭಿಯಾನ ಹಮ್ಮಿಕೊಂಡಿತು. ಈ ವೇದಿಕೆಯಲ್ಲಿ ಮುಖ್ಯ ಮಂತ್ರಿ ಫಡ್ನವೀಸ್ ಕೂಡಾ ಉಪಸ್ಥಿತರಿದ್ದರು. ರಾಜ್ಯದಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ನೀರಿನ ಸಂಕಟ ಎದುರಿಸಲು ಎಲ್ಲರ ಸಹಕಾರವನ್ನು ಅವರು ಕೋರಿದರು. ಕಳೆದ 28 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಉತ್ತರಪ್ರದೇಶ ಸ್ಥಾಪನಾದಿನ ಸಮಾರಂಭದಲ್ಲಿ ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯೊಬ್ಬರು ಪಾಲ್ಗೊಂಡಿದ್ದಾರೆ.

ಸಮುದ್ರದ ನೀರಿನಿಂದ ಕುಡಿಯುವ ನೀರು ಖರ್ಚಿನ ಸಂಗತಿ ಎಂದಿದೆ ಮನಪಾ
ಮುಂಬೈಯಲ್ಲಿ ಈ ಬಾರಿ ಕಡಿಮೆ ಮಳೆ ಬಿದ್ದ ಕಾರಣ ನೀರಿನ ಸಮಸ್ಯೆ ಬಗೆಹರಿಸಲು ಸಮುದ್ರದ ನೀರನ್ನು ಸಿಹಿಗೊಳಿಸುವ ಬೇಡಿಕೆ ಮತ್ತೊಮ್ಮೆ ಕಾಣಿಸಿಕೊಂಡಿದೆ. ಆದರೆ ಈ ಸಲವೂ ಮುಂಬೈ ಮಹಾನಗರ ಪಾಲಿಕೆ ಆಡಳಿತವು ಇಂತಹ ಬೇಡಿಕೆಯನ್ನು ತಳ್ಳಿ ಹಾಕಿದೆ. ಅಷ್ಟೇ ಅಲ್ಲ, ಸಮುದ್ರದ ನೀರನ್ನು ಸಿಹಿಗೊಳಿಸುವುದಕ್ಕಿಂತಲೂ ನದಿಯಿಂದ ನೀರು ತರುವುದು ಕಡಿಮೆ ಖರ್ಚಿನ ಸಂಗತಿ ಎಂದು ತಿಳಿಸಿದೆ.

ಸಮುದ್ರದ ಉಪ್ಪು ನೀರನ್ನು ಕುಡಿಯುವ ಸಿಹಿ ನೀರಾಗಿ ಪರಿವರ್ತಿಸುವಂತೆ ನಗರ ಸೇವಕ ಫೈಯಾಝ್ ಅಹ್ಮದ್ ಅವರು ಆಡಳಿತದ ಬಳಿ ಆಗ್ರಹಿಸಿದ್ದರು. ಆದರೆ ಇದು ಹೆಚ್ಚು ಖರ್ಚಿನ ಸಂಗತಿ ಆಗಿದೆ. ತಾಂತ್ರಿಕ ಕಾರಣಗಳಿಂದ ಇದು ಸದ್ಯ ಸಾಧ್ಯವಿಲ್ಲ. ಇದಕ್ಕಾಗಿ 25 ಹೆಕ್ಟೆರ್ ಸ್ಥಳದ ಆವಶ್ಯಕತೆ ಇದೆ. ಸಮುದ್ರ ತೀರದಲ್ಲಿ ಇಷ್ಟೊಂದು ದೊಡ್ಡ ಸ್ಥಳಾವಕಾಶ ಉಪಲಬ್ದವಿಲ್ಲವೆಂದು ಜಿಲ್ಲಾಧಿಕಾರಿ ಕಾರ್ಯಾಲಯ ಈ ಮೊದಲೇ ಹೇಳಿದೆ. ಇದರ ಬದಲು 100 (ನೂರು) ಮಿಲಿಯನ್ ಲೀಟರ್ ನೀರಿನ ಪ್ರಕ್ರಿಯೆಗೆ ಅಂದಾಜು ಒಂದು ಸಾವಿರ ಕೋಟಿರೂಪಾಯಿ ಖರ್ಚು ಬರುವುದು. ಇದಲ್ಲದೆ ಪ್ರತಿ ಲೀಟರ್ ನೀರನ್ನು ಸಿಹಿಗೊ ಳಿಸಲು 75 ರೂಪಾಯಿ ಖರ್ಚು ಬರಲಿದೆ. ಇದು ಸದ್ಯಕ್ಕೆ ಸಾಧ್ಯವಾಗದ ಮಾತು. ಹೀಗಾಗಿ ಮುಂಬೈಯಿಂದ 150 ಕಿ.ಮೀ. ದೂರದ ನದಿಯಿಂದ ನೀರು ತರುವುದು ಸುಲಭದ ಕೆಲಸ, ಕಡಿಮೆ ಖರ್ಚಿನ ಸಂಗತಿ ಎಂದಿದೆ ಮನಪಾ ಆಡಳಿತ.

ಸ್ಲಂ ಕ್ಷೇತ್ರ ಧಾರಾವಿಯಿಂದ ಮುಂಬೈ ಮನಪಾಗೆ 1,220 ಕೋಟಿ ರೂಪಾಯಿ

ಪ್ರಖ್ಯಾತ ಕೊಳಗೇರಿ ಮುಂಬೈಯ ಧಾರಾವಿಯಲ್ಲಿ ರಾಜ್ಯ ಸರಕಾರದ ಧಾರಾವಿ ಪುನರ್ವಿಕಾಸ ಯೋಜನೆಯಂತೆ ಸರಕಾರವು ಮುಂಬೈ ಮಹಾನಗರ ಪಾಲಿಕೆಯಜಮೀನನ್ನು ಬಳಸಿಕೊಳ್ಳಲಿದೆ. ಇದಕ್ಕಾಗಿ ಮಹಾನಗರ ಪಾಲಿಕೆಗೆ 1,220 ಕೋಟಿ ರೂಪಾಯಿ ದೊರೆಯಲಿದೆ. ಜೊತೆಗೆ ಯೋಜನೆಯಲ್ಲಿ 11,757 ಮನೆಗಳೂ ದೊರೆಯಲಿದೆ. ಈ ಯೋಜನೆಗಾಗಿ ಮುಂಬೈ ಮನಪಾ ಧಾರಾವಿಯ ಜಮೀನಿನ ಮಾಲಕತ್ವದ ಹಕ್ಕನ್ನು ರಾಜ್ಯ ಸರಕಾರಕ್ಕೆ ನೀಡಲಿದೆ. ಮನಪಾ ಸುಧಾರ್ ಸಮಿತಿಯ ಬೈಠಕ್‌ನಲ್ಲಿ ಈ ಪ್ರಸ್ತಾವ ಇಡಲಾಗಿದೆ.

ಸ್ಲಂ ಕ್ಷೇತ್ರ ಧಾರಾವಿಯಲ್ಲಿ ಮುಂಬೈ ಮನಪಾದ ಮಾಲಕತ್ವದ ಹಕ್ಕು ಇರುವ 147.77 ಹೆಕ್ಟೇರ್ ಜಮೀನು ಇದೆ. ಈ ಜಮೀನಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಕ್ರಮಣ ನಡೆದಿದೆ. ಧಾರಾವಿ ಪುನರ್ವಿಕಾಸ್ ಯೋಜನೆಯಲ್ಲಿ ಸುಮಾರು 70 ಸಾವಿರ ಮನೆಗ ಳನ್ನು ನಿರ್ಮಿಸಲಾಗುವುದು. ಧಾರಾವಿಯಲ್ಲಿ ಒಟ್ಟು ಪಾಸ್ ಆಗಿರುವ ಜೋಪಡಿಗಳ ಸಂಖ್ಯೆ 58,243 ಆಗಿದೆ. ಇಲ್ಲಿ ಯೋಜನೆಯ ಕಾರಣ ಪ್ರಭಾವ ಕ್ಕೊಳಗಾಗಿರುವ ಜನರಿಗೆ ಪುನರ್ವಸತಿಗಾಗಿ 11,757 ಮನೆಗಳು ದೊರೆಯು ವುದು. ಪುನರ್ವಿಕಾಸ ಯೋಜನೆಯ ಅನ್ವಯ ನಿರ್ಮಾಣವಾಗಲಿರುವ ಕಟ್ಟಡಗಳ ಎತ್ತರ 12 ಮಾಳಿಗೆಗಿಂತ ಅಧಿಕ ಇರುವುದಿಲ್ಲ.

ಮಹಿಳಾ ಕೈದಿಗಳ ಮಕ್ಕಳ ವಿವರ ಕೇಳಿದ ಹೈಕೋರ್ಟ್
ಮಹಾರಾಷ್ಟ್ರದ ಜೈಲುಗಳಲ್ಲಿರುವ ಮಹಿಳಾ ಕೈದಿಗಳ ಸಂಖ್ಯೆ ಮತ್ತು ಅವರ ಮಕ್ಕಳ ಭವಿಷ್ಯದ ಯೋಜನೆಗಳ ಕುರಿತಂತೆ ಮುಂಬೈ ಹೈಕೋರ್ಟ್ ಜೈಲ್ ಆಡಳಿತ ಮತ್ತು ಸರಕಾರಕ್ಕೆ ಈ ಬಗ್ಗೆ ವಿವರ ತಿಳಿಸಲು ಸೂಚಿಸಿದೆ. ಒಂದು ಜನಹಿತ ಅರ್ಜಿಯ ವಿಚಾರಣೆಯ ನಂತರ ಹೈಕೋರ್ಟ್ ಈ ಹೆಜ್ಜೆ ಇರಿಸಿದೆ.
ಇಸವಿ 2013 ರಲ್ಲಿ ಮಹಾರಾಷ್ಟ್ರದ ಜೈಲುಗಳಲ್ಲಿ 27,400 ಕೈದಿಗಳಿದ್ದರು. ಇವರಲ್ಲಿ 25,841 ಪುರುಷರು, 1559 ಮಹಿಯರು.
ಎನ್‌ಜಿಒ ಪ್ರಯಾಸ್‌ನ ಯೋಜನಾ ನಿರ್ದೇಶಕ ವಿಜಯ್ ರಾಘವನ್ ಅವರು ಮಹಿಳಾ ಕೈದಿಗಳ ಮಕ್ಕಳ ವಿಷಯವಾಗಿ 2014 ರಲ್ಲಿ ಮುಂಬೈ ಹೈಕೋರ್ಟ್‌ನಲ್ಲಿ ಕಿಶೋರ್ ನ್ಯಾಯ ಸಮಿತಿಯ ಅಧ್ಯಕ್ಷ ನ್ಯಾ.ವಿ.ಎಂ.ಕನಾಡೆ ಅವರ ಮುಂದೆ ಒಂದು ವರದಿ ದಾಖಲಿಸಿದ್ದರು. ರಾಘವನ್ ಟಾಟಾ ಇನ್ಸ್ಟಿಟ್ಯೂಟ್ ಅಫ್ ಸೋಶಲ್ ಸಯನ್ಸ್‌ಸ್‌ನ ಪ್ರಾಧ್ಯಾಪಕರು. ನ್ಯಾ. ಕನಾಡೆ ಅವರು ಈ ವರದಿಯನ್ನು ಜನಹಿತ ಅರ್ಜಿಯಾಗಿ ಸ್ವೀಕರಿಸಿದ್ದರು. ಜೈಲು ಸಜೆ ಅನುಭವಿಸುತ್ತಿರುವ ಮಹಿಳೆಯರ ಮಕ್ಕಳು ಹೊರಗಡೆ ಅನಾಥರಂತೆ ಬದುಕುತ್ತಿದ್ದಾರೆ. ಶಿಕ್ಷಣವನ್ನು ಅರ್ಧದಲ್ಲೇ ಕೈಬಿಡುತ್ತಿದ್ದಾರೆ. ಇಂತಹ ಮಕ್ಕಳಿಗೆ ನಿಯಮಿತವಾಗಿ ಜೈಲ್‌ನಲ್ಲಿ ತಾಯಿಯನ್ನು ಭೇಟಿಯಾಗುವ ಅವಕಾಶ ನೀಡಬೇಕಾಗಿದೆ.

ಆಟೋರಿಕ್ಷಾಗಳ ಮುಷ್ಕರದಿಂದ ಬೆಸ್ಟ್ ಬಸ್ಸುಗಳಿಗೆ ಒಂದು ದಿನದಲ್ಲಿ 72 ಲಕ್ಷ ರೂ. ಹೆಚ್ಚುವರಿ ಆದಾಯ
ಬಹಳ ದಿನಗಳ ನಂತರ ಮುಂಬೈಯಲ್ಲಿ ಫೆಬ್ರವರಿ ಮೂರನೆ ವಾರದ ಮೊದಲಿಗೆ ಆಟೋರಿಕ್ಷಾಗಳ ಮುಷ್ಕರದ ದೃಶ್ಯ ಕಾಣಿಸಿತು. ಉಪನಗರಗಳ ನಿವಾಸಿಗಳು ಆ ದಿನ ಬಹಳ ಪರದಾಟ ನಡೆಸಿದರು. ಸುಮಾರು ಒಂದು ಲಕ್ಷ ಆಟೋವಾಲಾರು ಖಾಸಗಿ ಟ್ಯಾಕ್ಸಿ ಕಂಪೆನಿಗಳ ಓಡಾಟ ಮತ್ತು ಸಾರಿಗೆ ವಿಭಾಗವು ರಿಕ್ಷಾಗಳ ಪರ್ಮಿಟ್ ಶುಲ್ಕ ವೃದ್ಧಿಸಿರುವುದನ್ನು ವಿರೋಧಿಸಿ ಅನಿಶ್ಚಿತ ಕಾಲದ ಮುಷ್ಕರ ಘೋಷಿಸಿದ್ದರು. ಆದರೆ ಸಂಜೆ ಆರು ಗಂಟೆಗೆ ಆಟೋರಿಕ್ಷಾ ಯೂನಿಯನ್‌ಗಳು ಮುಷ್ಕರ ಹಿಂದೆಗೆದುಕೊಂಡಿತು. ಹೀಗಾಗಿ ಸಂಜೆಗೆ ಮನೆಗೆ ಹಿಂದಿರುಗುವವರು ಸ್ವಲ್ಪ ಉಸಿರು ಬಿಡುವಂತಾಯಿತು.
ಬೆಸ್ಟ್‌ನ ಹೆಚ್ಚುವರಿ ಬಸ್ಸುಗಳನ್ನು ಓಡಿಸಿದ್ದರಿಂದ ನಷ್ಟದಲ್ಲಿ ಓಡಾಡುತ್ತಿರುವ ಬೆಸ್ಟ್ ಆಡಳಿತಕ್ಕೆ ಆ ದಿನ ಸುಗ್ಗಿ ಕಾಣಿಸಿತು. ರಿಕ್ಷಾಗಳಲ್ಲೇ ಓಡಾಡುತ್ತಿದ್ದವರು ಆ ದಿನ ಬೆಸ್ಟ್ ಬಸ್ಸುಗಳನ್ನು ಆಶ್ರಯಿಸಿದರು. ಮುಷ್ಕರದ ಕಾರಣ ಅಂದು ಎಂಟೂವರೆ ಲಕ್ಷ ಹೆಚ್ಚುವರಿ ಪ್ರಯಾಣಿಕರು ಬೆಸ್ಟ್ ಬಸ್ಸುಗಳಲ್ಲಿ ಓಡಾಡಿದರು. ಈ ಕಾರಣ ಅಂದು ಒಂದು ದಿನದಲ್ಲಿ ದೈನಂದಿನ ಆದಾಯದ ಹೊರತಾಗಿ ಹೆಚ್ಚುವರಿ ಪ್ರಯಾಣಿಕರಿಂದ ಬೆಸ್ಟ್‌ಗೆ 72 ಲಕ್ಷ ರೂಪಾಯಿಯ ಆದಾಯ ಪ್ರಾಪ್ತಿಯಾಗಿದೆ. ಆ ದಿನ ಬೆಸ್ಟ್ 129 ಹೆಚ್ಚುವರಿ ಬಸ್ಸುಗಳನ್ನು ಓಡಿಸಿತ್ತು. 274 ಬಸ್ಸುಗಳ ರೂಟ್‌ಗಳನ್ನು ಬದಲಿಸಿತ್ತು. ದಿನನಿತ್ಯದ ಪ್ರಯಾಣಿಕರಲ್ಲದೆ ಆ ದಿನ 8 ಲಕ್ಷ 65 ಸಾವಿರದ 968 ಹೆಚ್ಚುವರಿ ಪ್ರಯಾಣಿಕರು ಓಡಾಡಿದ್ದಾಗಿ ಬೆಸ್ಟ್‌ನ ಜನ ಸಂಪರ್ಕ ಅಧಿಕಾರಿ ಹನುಮಂತ್ ಗೋಫ್ನೆ ತಿಳಿಸಿದ್ದಾರೆ. ಮುಷ್ಕರದ ದಿನ 40,69,409 ಪ್ರಯಾಣಿಕರು ಬೆಸ್ಟ್ ಬಸ್ಸುಗಳಲ್ಲಿ ಓಡಾಡಿದ್ದರು ಎಂದಿದೆ ಬೆಸ್ಟ್.

ಕೊಯ್ನದಿಂದ ಮುಂಬೈಗೆ ನೀರು ಬರೋದಿಲ್ವಂತೆ
ಮುಂಬೈ ಮಹಾನಗರದ ನಿವಾಸಿಗಳಿಗೆ ಅವರ ಬೇಡಿಕೆಯ ಅನುಸಾರ ಪೇಯ ಜಲ ಪೂರೈಸುವುದಕ್ಕೆ ಕೊಯ್ನೆದಿಂದ ನೀರು ತರುವ ಮುಂಬೈ ಮಹಾನಗರ ಪಾಲಿಕೆ ಆಡಳಿತವು ಬಹಳ ಅಧ್ಯಯನ ನಡೆಸಿತ್ತು. ಈ ಅಧ್ಯಯನ ಫಲಿತಾಂಶ ಏನಾಯಿತೆಂದರೆ ಬಹಳಷ್ಟು ಖರ್ಚು ಬರುವುದರಿಂದ ಈ ವಿಚಾರವನ್ನು ಪೂರ್ಣರೂಪದಲ್ಲಿ ಕೈಬಿಟ್ಟಿದೆ. ಈ ಯೋಜನೆಗೆ ಸುಮಾರು 40 ಸಾವಿರ ಕೋಟಿ ರೂಪಾಯಿ ಖರ್ಚು ಬರಲಿದೆ. ಆರ್ಥಿಕ ದೃಷ್ಟಿಕೋನದಿಂದ ಇಷ್ಟೊಂದು ಖರ್ಚು ಮಾಡಲು ಮುಂಬೈ ಮನಪಾಕ್ಕೆ ಸಾಧ್ಯವಿಲ್ಲವಂತೆ. ಸ್ಥಾಯಿ ಸಮಿತಿಯಲ್ಲಿ ನಡೆದ ಅನೌಪಚಾರಿಕ ಚರ್ಚೆಯ ನಂತರ ಮನಪಾ ಉಪಾಯುಕ್ತ ರಮೇಶ್ ಬಾಂಬ್ಲೆ ಈ ವಿಷಯ ತಿಳಿಸಿದರು. ಹಾಗಿದ್ದೂ ಇಸವಿ 2041 ರೊಳಗೆ ಮುಂಬೈ ನಿವಾಸಿಗಳಿಗೆ ಭರ್ಜರಿ ನೀರು ಸಿಗಲಿದೆಯಂತೆ!


ಮುಂಬೈ ಮೇಯರ್ ಮೇಲೆ ತ್ಯಾಜ್ಯ ಎಸೆದ ಕಾರ್ಪೊರೇಟರ್
 ಮುಂಬೈ ಮಹಾನಗರ ಪಾಲಿಕೆಯ ಕಾಂಗ್ರೆಸ್ ನಗರ ಸೇವಕಿ ನಯನಾ ಸೇಠ್ ಅವರು ಮೇಯರ್‌ರ ಮೇಲೆ ತ್ಯಾಜ್ಯ ಎಸೆದ ಘಟನೆಯಿಂದ ಮನಪಾ ಸಭಾಗೃಹದಲ್ಲಿ ಗುರುವಾರ ಒಂದು ಕ್ಷಣ ಎಲ್ಲರೂ ಗಾಬರಿಯಾದರು. ಅನಂತರ ಮೇಯರ್ ಸ್ನೇಹಲ್ ಅಂಬೇಕರ್ ಒಂದು ದಿನಕ್ಕಾಗಿ ಅವರನ್ನು ಅಮಾನತುಗೊಳಿಸಿದರು. ಮನಪಾ ಸಭಾಗೃಹದಲ್ಲಿ ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ದೇವನಾರ್ ಡಂಪಿಂಗ್ ಗ್ರೌಂಡ್‌ನಲ್ಲಿ ಕಾಣಿಸಿಕೊಂಡ ಬೆಂಕಿಘಟನೆ, ಮತ್ತು ಸ್ವಚ್ಛತೆಯಲ್ಲಿ ಮುಂಬೈಗೆ ಹತ್ತನೆ ಸ್ಥಾನ ದೊರಕಿದ ಬಗ್ಗೆ ಚರ್ಚೆ ನಡೆಸಲು ಇಚ್ಛಿಸಿದ್ದರು. ಆದರೆ ಆಡಳಿತ ಪಕ್ಷ ಶಿವಸೇನೆ-ಬಿಜೆಪಿ ಅದಕ್ಕೆ ಅವಕಾಶ ಕೊಡಲಿಲ್ಲ. ಇದರಿಂದ ಕಾಂಗ್ರೆಸ್ ಮತ್ತು ಎಸಿಪಿ ಸದಸ್ಯರು ಸಿಟ್ಟುಗೊಂಡರು ಹಾಗೂ ಕಾಂಗ್ರೆಸ್ ನಗರ ಸೇವಕಿ ನಯನಾ ಸೇಠ್ ಮೇಯರ್‌ರ ಮೇಲೆ ತ್ಯಾಜ್ಯ ಎಸೆದರು. ಈ ತ್ಯಾಜ್ಯವನ್ನು ಅವರು ಪ್ಲ್ಯಾಸ್ಟಿಕ್ ಚೀಲದಲ್ಲಿ ಮೊದಲೇ ತಂದಿದ್ದರು. ಅನಂತರ ಕಾರ್ಪೊರೇಟರ್‌ಗೆ ಕ್ಷಮೆ ಬೇಡಲು ಬಿಜೆಪಿ ಒತ್ತಾಯಿಸಿತು. ಇತ್ತ ಮನಸೇ ಕಾರ್ಪೊರೇಟರ್‌ಗಳು ಚರ್ಚೆಗೆ ಅವಕಾಶ ನೀಡದ್ದು ತಪ್ಪು ಎಂದು ಕಾಂಗ್ರೆಸ್‌ನ್ನು ಬೆಂಬಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News