ರಾಮಮಂದಿರಕ್ಕೆ ಬದಲಾಗಿ ಮಸೀದಿ ನಿರ್ಮಾಣಕ್ಕೆ ನೆರವು: ಸ್ವಾಮಿ

Update: 2016-02-23 18:06 GMT

ರಾಮಮಂದಿರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಧನಾತ್ಮಕ ತೀರ್ಪು ಬರುವ ವಿಶ್ವಾಸವನ್ನು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸುಬ್ರಹ್ಮಣ್ಯನ್‌ಸ್ವಾಮಿ ವ್ಯಕ್ತಪಡಿಸಿದ್ದಾರೆ. ವರ್ಷಾಂತ್ಯಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ನಿರೀಕ್ಷೆ ಹೊಂದಿದ್ದಾರೆ.
ಜಂಡೇವಾಲನ್ ದೀನದಯಾಳ್ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ನೀಡಿದ ವಿಶೇಷ ಸಂದರ್ಶನದಲ್ಲಿ, ಚಿಂತಕ-ರಾಜಕಾರಣಿ, ಹಿಂದೂ ರಾಷ್ಟ್ರೀಯವಾದದ ಪ್ರತಿಪಾದಕ ಸ್ವಾಮಿ, ಈ ವಿವಾದದಲ್ಲಿ ತಮ್ಮ ಕಾರ್ಯಯೋಜನೆ ಏನು? ದೇಶಕ್ಕೆ ಇದು ಏಕೆ ಮಹತ್ವದ್ದು ಎಂಬ ವಿಚಾರಗಳನ್ನು ಹಂಚಿಕೊಂಡರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.


    ರಾಮಮಂದಿರ ಹೇಗೆ ವಾಸ್ತವವಾಗುತ್ತದೆ ಎಂದು ನೀವು ನಂಬಿದ್ದೀರಿ?
    -ಸುಪ್ರೀಂಕೋರ್ಟ್ ತೀರ್ಪಿಗೆ ನಾವು ಕಾಯುತ್ತೇವೆ. ನಮಗೆ ಪರವಾದ ತೀರ್ಪು ಸುಪ್ರೀಂಕೋರ್ಟ್‌ನಲ್ಲಿ ಬರುತ್ತದೆ ಎಂಬ ವಿಶ್ವಾಸ ನಮಗಿದೆ. ತೀರ್ಪು ಬಂದರೆ, ವರ್ಷಾಂತ್ಯದ ಒಳಗಾಗಿ ಪರಸ್ಪರ ಒಪ್ಪಿಗೆಯಿಂದ ರಾಮಮಂದಿರ ನಿರ್ಮಾಣ ಆರಂಭವಾಗಲಿದೆ. ಸುಪ್ರೀಂಕೋರ್ಟ್‌ನಲ್ಲಿ ಈ ವಿಚಾರದ ಬಗ್ಗೆ ಪ್ರತಿದಿನ ವಿಚಾರಣೆ ನಡೆಸಿ ಬೇಗ ಇತ್ಯರ್ಥಪಡಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದೇನೆ. ಪ್ರಕರಣ ನಮ್ಮ ಪರವಾಗಿ ಇದೆ. ಅಲಹಾಬಾದ್ ಹೈಕೋರ್ಟ್ ಕೂಡಾ ನಾವು ನೀಡಿದ ಪುರಾವೆಗಳ ಹಿನ್ನೆಲೆಯಲ್ಲಿ ನಮ್ಮ ನಿಲುವನ್ನು ಬೆಂಬಲಿಸಿದೆ. ಐತಿಹಾಸಿಕ, ಪ್ರಾಚ್ಯಶಾಸ್ತ್ರ ಹಾಗೂ ಶಾಸನಶಾಸ್ತ್ರ ಆಧಾರಿತ ಪುರಾವೆಗಳು, ಬಾಬರಿ ಮಸೀದಿಗಿಂತ ಮುನ್ನ ಅಲ್ಲಿ ದೇವಾಲಯ ಇತ್ತು ಎನ್ನುವುದನ್ನು ಖಚಿತಪಡಿಸಿವೆ.
    ಹಿಂದೂ ಗ್ರಂಥ ಹಾಗೂ ಹಾಲಿ ಕಾನೂನಿನ ಪ್ರಕಾರವೂ ಪ್ರಾಣಪ್ರತಿಷ್ಠಿತ ವಿಗ್ರಹ (ದೇವರು) ಜೀವಂತ ಪರಿಕಲ್ಪನೆ. ಜತೆಗೆ ದೇವರು (ರಾಮಲಾಲ) ಆಸ್ತಿ ಹೊಂದಬಹುದಾಗಿದೆ. ಆದ್ದರಿಂದ ಎಲ್ಲ ಸ್ವತ್ತು ಕೂಡಾ ಪ್ರಧಾನ ದೇವರು ರಾಮನ ಹೆಸರಿನಲ್ಲಿದ್ದು, ಆತನೇ ಮಾಲಕ. ಬೇರೆ ಯಾರು ಕೂಡಾ ಅದನ್ನು ಸ್ವಾಧೀನಕ್ಕೆ ಪಡೆಯುವಂತಿಲ್ಲ. ಮುಸ್ಲಿಮ್ ಗ್ರಂಥ ಹಾಗೂ ಕಾನೂನಿನ ಪ್ರಕಾರ, ಇತರರ ಆಸ್ತಿಯಲ್ಲಿ ಯಾವ ವಕ್ಫ್ ಕೂಡಾ ಸೃಷ್ಟಿಸುವಂತಿಲ್ಲ. ಸುನ್ನಿ ವಕ್ಫ್‌ಮಂಡಳಿ ಇದನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದೆ. ಬಾಬರ್ ಚಕ್ರವರ್ತಿ ಯಾವ ಭೂಮಿಯನ್ನೂ ಹೊಂದಿರಲಿಲ್ಲ.
    ಇದಕ್ಕೆ ಮುಸ್ಲಿಮ್ ನಾಯಕರು ಒಪ್ಪುತ್ತಾರೆ ಎನಿಸುತ್ತದೆಯೇ?
    -ಮುಸ್ಲಿಮ್ ನಾಯಕರು ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪುವುದಾಗಿ ಹೇಳಿದ್ದಾರೆ. ಬಲಾತ್ಕಾರದಿಂದ ಅದನ್ನು ಮಾಡುವುದು ನಮಗೆ ಬೇಕಿಲ್ಲ. ಎಐಎಂಐಎಂ ಮುಖಂಡ ಅಸಾದುದ್ದೀನ್ ಉವೈಸಿ, ಸೈಯದ್ ಶಹಾಬುದ್ದೀನ್ ಹಾಗೂ ಇತರ ಮುಸ್ಲಿಮ್ ನಾಯಕರ ಜತೆಗೆ ಈ ಬಗ್ಗೆ ಚರ್ಚಿಸಿದ್ದೇನೆ. ಅವರು ಕೂಡಾ ಪ್ರತಿ ದಿನ ಸುಪ್ರೀಂಕೋರ್ಟ್ ನಲ್ಲಿ ಈ ವಿಚಾರಣೆ ನಡೆಯಬೇಕು ಎಂದು ಬಯಸಿದ್ದಾರೆ. ಈ ಮೊದಲು ಈ ವಿಷಯವನ್ನು ಸಂಧಾನಕ್ಕಾಗಿ ಮುಸ್ಲಿಮ್ ಸಮುದಾಯದ ನೇತೃತ್ವ ವಹಿಸಿರುವ ಶಹಾಬುದ್ದೀನ್ ಬಳಿಗೆ ಒಯ್ದಿದ್ದೆ. ಆದರೆ ಸರಕಾರ ಪತನವಾಯಿತು. ಆದ್ದರಿಂದ ಆ ಪ್ರಕ್ರಿಯೆ ಪೂರ್ಣಗೊಳಿಸುವುದು ಸಾಧ್ಯವಾಗಲಿಲ್ಲ.
    ನರಸಿಂಹರಾವ್ ಪ್ರಧಾನಿಯಾಗಿದ್ದ ಅವಧಿಯಲ್ಲಿ 1994ರಲ್ಲಿ, ರಾಮ ಜನ್ಮಭೂಮಿ ವಿಷಯದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ಕೇಳಿತ್ತು. ಮಸೀದಿಯ ಸ್ಥಳದಲ್ಲಿ ಅದಕ್ಕೂ ಮುನ್ನ ರಾಮದೇವಸ್ಥಾನ ಇತ್ತು ಎಂದಾದಲ್ಲಿ, ಹಿಂದೂಗಳು ದೇವಾಲಯ ನಿರ್ಮಾಣಕ್ಕಾಗಿ ಈ ಭೂಮಿಯನ್ನು ಇಟ್ಟುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಜತೆಗೆ ಸರಯೂ ನದಿಯ ಬದಿಯಲ್ಲಿ ಮುಸ್ಲಿಮರು ಮಸೀದಿ ಕಟ್ಟಿಕೊಳ್ಳಬಹುದು. ಆದರೆ ರಾಮ ಜನ್ಮಭೂಮಿಯಲ್ಲಿ ಯಾವುದೇ ಮಸೀದಿ ನಿರ್ಮಾಣಕ್ಕೆ ಅವಕಾಶವಿಲ್ಲ.
    ಸರಯೂ ನದಿಯ ಇನ್ನೊಂದು ತೀರದಲ್ಲಿ ಮಸೀದಿ ನಿರ್ಮಿಸಿಕೊಳ್ಳಲು ಅಥವಾ ಸ್ಥಳಾಂತರಿಸುವುದು ಕಾರ್ಯಸಾಧುವೇ?
    ಸೌದಿ ಅರೇಬಿಯಾದಂತಹ ಇಸ್ಲಾಮಿಕ್ ದೇಶಗಳಲ್ಲಿ ಕೂಡಾ ಒಂದು ಪ್ರಮುಖ ಹಾಗೂ ಪಾರಂಪರಿಕ ಮಸೀದಿಯನ್ನು ಒಂದು ನಿರ್ಮಾಣ ಯೋಜನೆ ಅನುಷ್ಠಾನದ ಸಲುವಾಗಿ ಒಡೆಯಲಾಗಿದೆ. ಅದಕ್ಕೆ ಪರ್ಯಾಯವಾಗಿ ಒಂದು ಜಾಗವನ್ನು ನೀಡಿ, ಬೇರೆ ಸ್ಥಳದಲ್ಲಿ ಅದನ್ನು ನಿರ್ಮಿಸಲಾಯಿತು. ಇಸ್ಲಾಂ ಧರ್ಮದ ಪ್ರಕಾರ, ಮಸೀದಿ ಎನ್ನುವುದು ನಮಾಝ್ ಸಲ್ಲಿಸಲು ಸೌಲಭ್ಯ ಕಲ್ಪಿಸುವ ಒಂದು ತಾಣ. ಅಲ್ಲಿ ಜನ ಸೇರಿ ಅಧ್ಯಯನ ಮಾಡುತ್ತಾರೆ. ದೇವಾಲಯಕ್ಕಿಂತ ಭಿನ್ನವಾಗಿ ಅದು ಒಂದು ಬಗೆಯ ಪ್ರಾರ್ಥನಾ ಮಂದಿರ. ಮುಸ್ಲಿಮರು ಅದಕ್ಕೆ ಒಪ್ಪಿಕೊಂಡರೆ ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಎಲ್ಲ ಸಹಕಾರವನ್ನೂ ನೀಡುತ್ತೇವೆ.
    ದೇಶದಲ್ಲಿ ಪ್ರಸ್ತುತ ಇರುವ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ, ರಾಮಮಂದಿರ ನಿರ್ಮಾಣ ಹಾಗೂ ಮಸೀದಿ ಸ್ಥಳಾಂತರ, ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗುತ್ತದೆ ಎನಿಸುವುದಿಲ್ಲವೇ?
    -ನಾನು ಈಗಾಗಲೇ ಹೇಳಿದಂತೆ ಎಲ್ಲ ಮುಸ್ಲಿಮ್ ನಾಯಕರು ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ತೀವ್ರಗಾಮಿ ಶಕ್ತಿಗಳಿಗೆ ಸಂಬಂಧಿಸಿದಂತೆ ಅದನ್ನು ಸಮರ್ಪಕವಾಗಿ ನಿರ್ವಹಿಸಲಾಗುವುದು.
    ಈ ವಿವಾದ ರಾಮಮಂದಿರಕ್ಕಷ್ಟೇ ಸೀಮಿತವೇ ಅಥವಾ ಅದನ್ನು ಮೀರಿ ಬೆಳೆಯುತ್ತದೆಯೇ?
    ಭಾರತದಲ್ಲಿ 800 ವರ್ಷಗಳ ಮುಸ್ಲಿಮ್ ಆಳ್ವಿಕೆಯಲ್ಲಿ 40 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ. ಆದರೆ ನಾವು ಕೇವಲ ಮೂರನ್ನು ಮಾತ್ರ ಕೇಳುತ್ತಿದ್ದೇವೆ. ಅಯೋಧ್ಯೆಯ ಶ್ರೀರಾಮ ಮಂದಿರ, ಮಥುರಾದ ಕೃಷ್ಣ ದೇವಸ್ಥಾನ ಹಾಗೂ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇಗುಲ. ಮುಸ್ಲಿಮರು ಈ ಮೂರು ದೇಗುಲಗಳನ್ನು ಬಿಟ್ಟುಕೊಟ್ಟರೆ, ಉಳಿದ 39,997 ಮಸೀದಿಗಳನ್ನು ಅವರು ತಮ್ಮಲ್ಲೇ ಉಳಿಸಿಕೊಳ್ಳಬಹುದು.
    ಪತ್ರಿಕಾ ವರದಿಗಳ ಪ್ರಕಾರ, ಇತರ ರಾಜ್ಯಗಳಿಂದ ಅಯೋಧ್ಯೆಗೆ ಬಂದ ಕಲ್ಲುಗಳು ಸ್ಥಳೀಯರಲ್ಲಿ ಅಸಹನೆ ಸೃಷ್ಟಿಸಿವೆ. ಸ್ಥಳೀಯವಾಗಿ ಅಂತಹ ಉದ್ವಿಗ್ನ ಪರಿಸ್ಥಿತಿ ಇದೆಯೇ?
    -ಇಲ್ಲ. ಅಲ್ಲಿ ಯಾವ ಉದ್ವಿಗ್ನತೆಯೂ ಇಲ್ಲ. ಬಂದ ಕಲ್ಲುಗಳು ಸ್ವಲ್ಪ ಸಮಯದ ವರೆಗೆ ಮಾತ್ರ ಅಲ್ಲಿರುತ್ತವೆ. ಸುಪ್ರೀಂಕೋರ್ಟ್ ತೀರ್ಪಿಗಿಂತ ಮೊದಲು ಅಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸುವಂತಿಲ್ಲ ಎನ್ನುವುದು ಜನರಿಗೆ ಗೊತ್ತಿದೆ.
    ಅಂತಿಮವಾಗಿ ಜನ ಇನ್ನು ಕೂಡಾ ರಾಮಮಂದಿರ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಅನಿಸುತ್ತದೆಯೇ?
    -ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ ಇದೆ. ಈ ಯೋಜನೆ ಬಗ್ಗೆ ಮಾತ್ರ ನಾನು ಒತ್ತಾಯ ಮಾಡುತ್ತಿಲ್ಲ. ಈ ಮುನ್ನ ನಾನು ಧಾರ್ಮಿಕ ಯೋಜನೆಗಳೂ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. ರಾಮಮಂದಿರ ವಿಚಾರದಲ್ಲಿ ಜನರು ಹೆಚ್ಚು ಉತ್ಸುಕರಾಗಿದ್ದಾರೆ. ಜನ ಬಂದು ನನಗೆ ಒತ್ತಡ ಹೇರಿ, ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಮನವೊಲಿಸುವಂತೆ ಕೇಳಿದ್ದಾರೆ. ನಾನು ರಾಮಸೇತು ವಿಚಾರದಲ್ಲೂ ನಡೆಸಿದ ಹೋರಾಟ ದೊಡ್ಡ ಯಶಸ್ಸು ಗಳಿಸಿದೆ. ರಾಮಮಂದಿರ ವಾಸ್ತವವಾಗಿ ನಿರ್ಮಾಣವಾಗಲಿದೆ.

Writer - ದೇವವ್ರತ ಘೋಷ್

contributor

Editor - ದೇವವ್ರತ ಘೋಷ್

contributor

Similar News