ಒಂದೇ ಮಾತರಂ ಬರೆದಿರೋದು ಗೋಳ್ವಾಲ್ಕರ್....ಗೊತ್ತಾಯಿತೇನೋ...

Update: 2016-02-28 05:47 GMT

ಟಿಯಾಲ ನ್ಯಾಯಾಲಯದಲ್ಲಿ ವಕೀಲರು ನಡೆಸಿದ ದಾಂಧಲೆ ಕಂಡ ಬಳಿಕ, ಪತ್ರಕರ್ತ ಎಂಜಲು ಕಾಸಿ ನ್ಯಾಯಾಲಯದ ಕಡೆಗೆ ತಲೆ ಹಾಕುವುದಕ್ಕೂ ಹೆದರುತ್ತಿದ್ದ. ಸಂಪಾದಕರು ಒಂದು ದಿನ ಕಾಸಿಯನ್ನು ಕರೆದೇ ಬಿಟ್ಟರು ‘‘ಏನ್ರೀ...ಪತ್ರಿಕೆಯಲ್ಲಿ ಕೋರ್ಟ್ ಸುದ್ದೀನೇ ಬರ್ತಾ ಇಲ್ಲ ಎಂದು ಕಂಪ್ಲೇಟ್ ಬಂದಿದೆ....’’

‘‘ಸಾರ್ ಕೋರ್ಟಿಗೆ ಹೋಗೋದಕ್ಕೆ ಭಯ ಆಗ್ತಾ ಇದೆ ಸಾರ್....’’
‘‘ಯಾಕ್ರೀ...ಅಲ್ಲಿ ಪೊಲೀಸರಿರ್ತಾರೆ ಅಂತಾನಾ?’’
‘‘ಇಲ್ಲ ಸಾರ್, ಅಲ್ಲಿ ವಕೀಲರಿರ್ತಾರೆ...ಪಟಿಯಾಲ ಕೋರ್ಟಿನಲ್ಲಿ ವಕೀಲರು ಮಾಡಿದ್ದು ನೋಡಿದ ಮೇಲೆ....’’
‘‘ನಿಮಗ್ಯಾಕ್ರೀ ಹೊಡೀತಾರೆ...ದೇಶದ್ರೋಹ ಮಾಡಿದವರಿಗೆ ಹೊಡೀತಾರೆ...’’
‘‘ಸಾರ್...ವಕೀಲರು ಕಾನೂನು ಕೈಗೆತ್ತಿಕೊಳ್ಳಬಹುದೇ ಸಾರ್?’’
‘‘ನೋಡ್ರಿ...ಪತ್ರಕರ್ತರು, ವಕೀಲರು, ಪೊಲೀಸರು ಕಾನೂನು ಕಾಪಾಡುವವರಾಗಿರುವುದರಿಂದ ಈ ಮೂವರು ಕಾನೂನನ್ನು ಕೈಗೆತ್ತಿಕೊಳ್ಳಬಹುದು. ಎತ್ತಿ ಕೊಳ್ಳದೇ ಕಾಪಾಡುವುದು ಹೇಗೆ...ಅದೆಲ್ಲ ಇಲ್ಲ...ನೇರವಾಗಿ ಕೋರ್ಟಿಗೆ ಹೋಗಿ, ವರದಿ ಮಾಡಿಕೊಂಡು ಬನ್ನಿ....’’

ಕಾಸಿ ಒಲ್ಲದ ಮನಸ್ಸಿನಿಂದ ಕೋರ್ಟಿನ ಕಡೆಗೆ ನಡೆದ. ಕೋರ್ಟ್ ಬಾಗಿಲಿನಲ್ಲೇ ದಡಿಯ ವಕೀಲನೊಬ್ಬ ಕಾಸಿಯನ್ನು ತಡೆದ. ‘‘ಸಾರ್...ನಾನು ಪತ್ರಕರ್ತ ಸಾರ್...’’


‘‘ದೇಸದ್ರೋಹಿ ಪತ್ರಕರ್ತನೋ, ದೇಸಪ್ರೇಮಿ ಪತ್ರಕರ್ತನೋ...?’’
‘‘ದೇಶ ಪ್ರೇಮಿ ಸಾರ್...’’ ಕಾಸಿ ಅಂಗಲಾಚಿದ.
‘‘ದೇಸವನ್ನು ದೇಸ ಎಂದು ಹೇಳಲು ಬರುವುದಿಲ್ಲ...ಸರಿಯಾದ ಕನ್ನಡದಲ್ಲಿ ಹೇಳು....’’
‘‘ದೇಸ ಪ್ರೇಮಿ ಸಾರ್...’’ ಕಾಸಿ ತನ್ನ ದೇಶವನ್ನು ದೇಸ ಎಂದು ತಿದ್ದಿದ.
‘‘ಒಂದೇ ಮಾತರಂ ಎಂದು ಜೋರಾಗಿ ಹೇಳು...’’ ವಕೀಲ ಆದೇಶಿಸಿದ.
‘‘ಅದು ಒಂದೇ ಮಾತರಂ ಅಲ್ಲ ಸಾರ್...ವಂದೇ ಮಾತರಂ...’’ ಕಾಸಿ ಸರಿಪಡಿಸಿದ.
‘‘ಅರೇ ನಮಗೇ ಒಂದೇ ಮಾತರಂ ಕಲಿಸಿಕೊಡ್ತೀಯಾ...ನೀವು ದೇಸದ್ರೋಹಿಯೇ ಇರಬೇಕು...ಬನ್ರೋ ಇಲ್ಲಿ....ಇಲ್ಲೊಬ್ಬ ದೇಸದ್ರೋಹಿ ಇದ್ದಾನೆ ಚಚ್ಚೋಣ...’’
ಎಲ್ಲರೂ ಕಾಸಿಯನ್ನು ಸುತ್ತುವರಿದರು.
‘‘ಸಾರ್ ಬಂಕಿಮ್ ಚಟರ್ಜಿ ಬರೆದಿರೋ ಗೀತೆಯಲ್ಲಿ ವಂದೇ ಮಾತರಂ ಅಂತ ಇದೆ ಸಾರ್...ಒಂದೇ ಮಾತರಂ ಅಲ್ಲ....’’ ಕಾಸಿ ವಿವರಿಸಿದ.
‘‘ಯಾರೋ ಅದು ಚಟರ್ಜಿ...’’ ತೆಳ್ಳಗಿನ ವಕೀಲ ಕೇಳಿದ.


‘‘ಬಹುಶಃ ಯಾವನೋ ಕಾಂಗ್ರೆಸ್ ಲೀಡರ್ ಇರಬೇಕು...’’ ಮತ್ತೊಬ್ಬ ದಪ್ಪಗಿನ ವಕೀಲ ಉತ್ತರಿಸಿದ.
 ‘‘ಹಾಗಾದ್ರೆ ಇವನು ಕಾಂಗ್ರೆಸ್ ಚೇಲಾನೇ ಇರಬೇಕು...ಅದಕ್ಕೆ ಒಂದೇ ಮಾತರಂ ಹೇಳೋದಕ್ಕೆ ಹಿಂದೇಟು ಹಾಕ್ತಾ ಇದ್ದಾನೆ...ಒಂದೇ ಮಾತರಂ ಬರೆದಿರೋದು ಗೋಳ್ವಾಲ್ಕರ್. ಗೊತ್ತಾಯಿತೇನೋ...ನಮಗೆ ಚಟರ್ಜಿ ಬರೆದಿರೋ ಒಂದೇ ಮಾತರಂ ಬೇಡ...ಗೋಳ್ವಾಲ್ಕರ್ ಬರೆದಿರೋ ಒಂದೇ ಮಾತರಂ ಹೇಳಿದರೆ ಸಾಕು...’’
‘‘ಆಯ್ತು ಸಾರ್...’’ ಕಾಸಿ ಒಪ್ಪಿಕೊಂಡ.
‘‘ಸರಿ ಹೇಳು...ಒಂದೇ....ಮಾತರಂ...’’
‘‘ಒಂದೇ...ಮಾತರಂ...’’ ಕಾಸಿ ಕೊನೆಗೂ ಘೋಷಿಸಿದ.

‘‘ಹಣೆಗೆ ನಾಮ ಯಾಕೆ ಹಾಕಿಲ್ಲ...’’ ನಾಮಧಾರಿ ವಕೀಲನೊಬ್ಬ ಕೇಳಿದ.
‘‘ಸಾರ್...ನಾನು ಹಣೆಗೆ ನಾಮ ಹಾಕಲ್ಲ ಸಾರ್...’’ ಕಾಸಿ ವಿನಂತಿ ಮಾಡಿದ.


‘‘ಯಾಕೆ ಹಾಕಲ್ಲ...ನಮ್ಮ ಸಂಸ್ಕೃತಿಗೆ ಅವಮಾನ ಮಾಡ್ತೀಯಾ...ನೀನು ದೇಸದ್ರೋಹಿಯೇ ಇರಬೇಕು....ಹಾಕ್ರೋ...ಚಚ್ರೋ...’’
‘‘ಕಾನೂನು ಕೈಗೆತ್ತಿಕೊಳ್ಳಬೇಡಿ ಸಾರ್...ನಾನು ಪ್ರತಿಭಟನೆ ಮಾಡಬೇಕಾಗತ್ತೆ...’’ ಕಾಸಿ ಬೆದರಿಸಲು ನೋಡಿದ.
‘‘ಏನೋ ಪ್ರತಿಭಟನೆ ಮಾಡ್ತೀಯಾ? ಏಯ್ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡ್ತಾನಂತೆ...ದೇಸವಿರೋಧಿಗೆ ಧಿಕ್ಕಾರ...ಹಾಕ್ರೋ...ಚಚ್ರೋ...’’ ಎಲ್ಲರೂ ಕೂಡಿ ಚಚ್ಚತೊಡಗಿದರು.
ಅಷ್ಟರಲ್ಲಿ ಅಲ್ಲಿಗೆ ಪೊಲೀಸನೊಬ್ಬ ಬಂದ. ‘‘ಏನದು ಗಲಾಟೆ...?’’ ಎನ್ನುತ್ತಾ ಲಾಠಿ ಬೀಸಿದ.

‘‘ದೇಸದ್ರೋಹಿ ಸಾರ್...ಪ್ರತಿಭಟನೆ ಮಾಡ್ತಾನಂತೆ...’’ ಧಡೂತಿ ವಕೀಲ ಹಾಗೆ ಹೇಳುತ್ತಾ ಕಾಸಿಯ ತಲೆಗೆ ಮೊಟಕಿದ. ‘‘ಜೆಎನ್‌ಯುಗೆ ಬೆಂಬಲ ಕೊಡ್ತಾನಂತೆ ಸಾರ್...’’ ತೆಳು ಕಾಯದ ವಕೀಲ ಕೆನ್ನೆಗೆ ಬಾರಿಸಿ ಹೇಳಿದ.
‘‘ಬಹುಶಃ ಜೆಎನ್‌ಯು ಮಾಜಿ ವಿದ್ಯಾರ್ಥಿ ಇರಬೇಕು...ಎನ್‌ಕೌಂಟರ್ ಮಾಡಿ ಬಿಡಿ ಸಾರ್’’ ನೀಳ ಕಾಯದ ವಕೀಲ ಕೂದಲು ಎಳೆದು ಹೇಳಿದ.
‘‘ಗೋಳ್ವಾಲ್ಕರ್ ಬರೆದ ಒಂದೇ ಮಾತರಂನ್ನು, ಚಟರ್ಜಿ ಬರೆದ ವಂದೇ ಮಾತರಂ ಎಂದು ಹೇಳುತ್ತಿದ್ದಾನೆ. ಇತಿಹಾಸವನ್ನು ತಿರುಚುತ್ತಿದ್ದಾನೆ....’’ ಕಾಸಿಯ ಮೂತಿಗೆ ಗುದ್ದಿ ವಕೀಲನೊಬ್ಬ ಹೇಳಿದ.

ಪೊಲೀಸ್ ಕಾಸಿಯನ್ನು ವಶಕ್ಕೆ ತೆಗೆದುಕೊಂಡ. ‘‘ಏನ್ರೀ ದೇಸದ್ರೋಹ ಕೆಲಸ ಮಾಡ್ತೀರಾ?’’ ಪೊಲೀಸಪ್ಪ ಕೇಳಿದ.
‘‘ಇಲ್ಲ ಸಾರ್...ಸುಳ್ಳು ಹೇಳ್ತಾ ಇದ್ದಾರೆ...ನನ್ನ ಮೇಲೆ ಕಾನೂನು ಕೈಗೆತ್ತಿಕೊಂಡರು ಸಾರ್...ಹೊಡೆದ್ರೂ ಸಾರ್...’’ ಕಾಸಿ ದೂರು ಹೇಳಿದ.
‘‘ವಕೀಲರ ಕೆಲಸವೇ ಕಾನೂನನ್ನು ಕೈಗೆತ್ತಿಕೊಳ್ಳೋದು ಅಲ್ವೇನ್ರಿ...ಒಂದೇ ಮಾತರಂ ಹಾಡನ್ನು ತಿರುಚೋದು ರಾಷ್ಟ್ರದ್ರೋಹ ಕಣ್ರೀ...ವಿಚಾರಣೆ ಮಾಡಿ...ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇನೆ....ಅಲ್ಲಿ ನಿಮ್ಮ ನಿರಪರಾಧಿತನವನ್ನು ಸಾಬೀತು ಮಾಡಿ...’’


***
 ಮರುದಿನ ಕಾಸಿಯ ಪತ್ರಿಕೆಯಲ್ಲೇ ಕಾಸಿಯ ಸುದ್ದಿ ವರದಿಯಾಯಿತು. ‘‘ಜೆಎನ್‌ಯು ವಿದ್ಯಾರ್ಥಿಗಳನ್ನು ಬೆಂಬಲಿಸಿದ, ವಂದೇಮಾತರಂ ಹಾಡಲು ನಿರಾಕರಿಸಿದ ದೇಶದ್ರೋಹಿ ಪತ್ರಕರ್ತನ ಬಂಧನ’’
ಅಲ್ಲಿಗೆ ಕಾಸಿಯ ಕೋರ್ಟಿನ ಸುದ್ದಿ ಜೈಲಿನಲ್ಲಿ ಅಂತ್ಯವಾಯಿತು.


chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News