ಲಲಿತ್ ಮೋದಿ ತೋರಿಸಿದ ದಾರಿಯಲ್ಲಿ ವಿಜಯ ಮಲ್ಯ?

Update: 2016-03-17 18:19 GMT

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಬಾಕಿ ಇರಿಸಿಕೊಂಡಿರುವ ವಿಜಯ ಮಲ್ಯರ ಪಾಸ್ ಪೋರ್ಟ್ ವಶಪಡಿಸಿಕೊಳ್ಳಬೇಕು, ಅವರು ದೇಶ ಬಿಡದಂತೆ ತಡೆಯಬೇಕು ಮತ್ತು ಅವರು ತಮ್ಮ ಎಲ್ಲಾ ಆಸ್ತಿ ಪಾಸ್ತಿಗಳನ್ನು ಘೋಶಿಸಬೇಕು ಎಂದು ಅವರಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಅವರಿಗೆ ಸಾಲ ನೀಡಿದ ಬ್ಯಾಂಕುಗಳು ಮೊರೆ ಹೋಗಿ ವಿಚಾರಣೆ ಆಗುತ್ತಿರುವಂತೆ, ಅವರು ದೇಶ ಬಿಟ್ಟು ಹೋದ ಸುದ್ದಿ ಮಾಧ್ಯಮದಲ್ಲಿ ಬಂದಿದೆ. ನ್ಯಾಯಾಲಯ ಇನ್ನು ಹದಿನೈದು ದಿನಗಳೊಳಗಾಗಿ ಉತ್ತರಿಸುವಂತೆ ಮಲ್ಯರಿಗೆ ನೋಟಿಸು ನೀಡಿದೆ.
ಈ ಪ್ರಕರಣ ಐಪಿಎಲ್ ಟ್ವೆಂಟಿ- ಟ್ವೆಂಟಿ ಕ್ರಿಕೆಟ್‌ನ ಕಿಂಗಪಿನ್ ಲಲಿತ್ ಮೋದಿಯವರು ದೇಶ ಬಿಟ್ಟು ಇಂಗ್ಲೆಂಡ್‌ಗೆ ಪರಾರಿಯಾದ ಪ್ರಹಸನವನ್ನು ನೆನಪಿಗೆ ತರುತ್ತದೆ. ಅವರ ಪ್ರಕರಣದಲ್ಲಿ ನ್ಯಾಯಾಲಯ ಅವರ ಪಾಸ್ ಪೋರ್ಟ್‌ನ್ನು ಮುಕ್ತಿಗೊಳಿಸಿತ್ತಂತೆ. ಆದರೆ, ಮಲ್ಯ ಪ್ರಕರಣದಲ್ಲಿ ಬ್ಯಾಂಕುಗಳು ಪಾಸ್ ಪೋರ್ಟನ್ನು ತಡೆಹಿಡಿಯುವ ಭಯದಿಂದ ಅವರು ದೇಶ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಇವುಗಳ ಸತ್ಯಾಸತ್ಯತೆ ಏನೇ ಇರಲಿ ಈ ಪ್ರಕರಣ ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಮಹಾವಿವಾದವನ್ನು ಹುಟ್ಟುಹಾಕಿದೆ ಮತ್ತು ಗೂಬೆ ಕೂರಿಸುವ ಯತ್ನವೂ ಪೈಪೋಟಿಯಲ್ಲಿ ಸಾಗಿದೆ. ದೇಶಾದ್ಯಂತ ಆವೃತ್ತಿ ಹೊಂದಿರುವ ಇಂಗ್ಲಿಷ್ ದೈನಿಕ ಒಂದರ ಪ್ರಕಾರ ಇದೊಂದು ಮ್ಯಾರಥಾನ್ ಕಾನೂನು ಸಮರ ಅಗುವುದರಲ್ಲಿ ಸಂದೇಹವಿಲ್ಲ. ಹಾಗೆಯೇ ಅವರನ್ನು ಕಾನೂನು ರೀತಿ ಭಾರತಕ್ಕೆ ಕರೆತರುವುದೂ ಕಷ್ಟ. ಸಾಲಗಳಿಗಾಗಿ ಭದ್ರತೆ ನೀಡಿದ, ವಿದೇಶದಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕುವುದು ಮತ್ತು ಅದನ್ನು ಅವರ ಸಾಲಬಾಕಿಗೆ ಹೊಂದಿಸುವುದೂ ಸುಲಭವಲ್ಲ. ಈ ಪ್ರಕರಣ ಮರೆತುಹೋದ ಭೋಪೋರ್ಸ್ ಪ್ರಕರಣದಲ್ಲಿಯ ವಿನ್ ಛಡ್ಡಾ ಮತ್ತು ಕ್ವೊಟ್ರೋಚಿ ಯವರನ್ನು ನೆನಪಿಸುತ್ತದೆ.

ಇಂಥಹ ಪ್ರಕರಣದಲ್ಲಿ ತೀರಾ ಮಾಮೂಲಾದ ಆರೋಪ ಮತ್ತು ಪ್ರತ್ಯಾರೋಪಗಳು ಈಗ ತಾರಕಕ್ಕೇರಿದೆ. ಸಂಸತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಉಚ್ಚಸ್ವರದಲ್ಲಿ ದೂರುತ್ತಿವೆ. ನ್ಯೂಸ್ ಚಾನೆಲ್‌ಗಳು ಬ್ಯಾಂಕುಗಳ, ಸರಕಾರದ, ರಿಸರ್ವ್ ಬ್ಯಾಂಕ್‌ನ, ನಿಯಂತ್ರಕರ (regulator) ಮತ್ತು Investigating Agencyಗಳನ್ನು ಸ್ವಲ್ಪವೂ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಿವೆ. ಜನಸಾಮಾನ್ಯರು ಈ ದೇಶದಲ್ಲಿ ನಮಗೊಂದು ಉಳ್ಳವರಿಗೊಂದು ( rich and celebrities) ಗಳಿಗೊಂದು ಕಾಯ್ದೆ ಎಂದು ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಬ್ಯಾಂಕಿಂಗ್ ಪರಿಣಿತರು, ಕಾನೂನು ಪಂಡಿತರು, ವಿಶ್ಲೇಷಕರು ಸಾಲ ವಸೂಲಾತಿಯ ಸಾಧ್ಯಾ- ಸಾಧ್ಯತೆಯ ಬಗೆಗೆ ವಿಸ್ತೃತವಾಗಿ ಬರೆಯುತ್ತಿದ್ದಾರೆ. ಬ್ಯಾಂಕ್‌ಗಳು ಮತ್ತು ವಕೀಲರು ಎಷ್ಟೇ ವಿಶ್ವಾಸದಿಂದ ಭರವಸೆಕೊಟ್ಟರೂ, ಈ ದೇಶದಲ್ಲಿ ಸಾಕಷ್ಟು ಭದ್ರತೆಗಳಿಲ್ಲ ಮತ್ತು ಹೊರದೇಶದಲ್ಲಿರುವ ಸೆಕ್ಯುರಿಟಿಗಳನ್ನು ಸುಲಭವಾಗಿ ತರಲು ಸಾಧ್ಯವಿಲ್ಲ ಎನ್ನುವ ನಿಟ್ಟಿನಲ್ಲಿ, ಇದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಬ್ಯಾಂಕುಗಳು ಸಾಲಗಾರರೊಂದಿಗೆ ಸದಾ ಸಂಪರ್ಕದಲ್ಲಿ ಇರಬೇಕು. ಸಾಲವನ್ನು ಮತ್ತು ಅದರ ಅಂತಿಮ ಬಳಕೆಯನ್ನು ನಿರಂತರವಾಗಿ ಮಾನಿಟರ್‌ಮಾಡುತ್ತಿರಬೇಕು ಎನ್ನುವ ರಿಸರ್ವ್ ಬ್ಯಾಂಕ್‌ನ ಮಾಜಿ ಡೆಪ್ಯುಟಿ ಗವರ್ನರ್ ಒಬ್ಬರ ಮಾತು ಈಗ ಪ್ರಸ್ತುತವಿದೆ. ಇನ್ನು ಮೇಲೆ ತಾನು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಇಂಗ್ಲೆಂಡ್‌ನಲ್ಲಿ ನೆಮ್ಮದಿಯ ಜೀವನ ನಡೆಸುತ್ತೇನೆ ಎಂದು ಮಲ್ಯ ಜಿಯಾಜಿಯೋ ಕಂಪೆನಿಯ ಸಂಗಡ ಮಾಡಿಕೊಂಡ ಒಪ್ಪಂದದ ನಂತರ ನೀಡಿದ ಹೇಳಿಕೆಯನ್ನು ಬ್ಯಾಂಕ್‌ಗಳು ಸರಿಯಾಗಿ ಅರ್ಥೈಸಿಕೊಂಡಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅರ್ಥಮಾಡಿಕೊಳ್ಳುವ ಹೊತ್ತಿಗೆ ಅದು ‘‘ಗಿಳಿಯು ಪಂಜರದೊಳಗಿಲ್ಲ’’ ಎನ್ನುವ ಸ್ಥಿತಿಗೆ ಬಂದಿತ್ತು. ಬ್ಯಾಂಕ್‌ಗಳು ಇವೆರಡನ್ನೂ ನಿರ್ವಹಿಸುವಲ್ಲಿ ವಿಲವಾಗಿವೆ ಎಂದು ಹೇಳಲಾಗುತ್ತಿದೆ. ಸಾಲ ಮರುಪಾವತಿಯಲ್ಲಿ ತೊಂದರೆ ಕಾಣಿಸಿದಾಗ 2011ರಲ್ಲಿ ಸುಮಾರು 30% ಸಾಲವನ್ನು,ಶೇರ್ ಬೆಲೆ 39.90 ರೂಪಾಯಿ ಇರುವಾಗ 64.48 ರೂಪಾಯಿಯಲ್ಲಿ ಇಕ್ವಿಟಿಯಾಗಿ ಪರಿವರ್ತಿಸಲಾಯಿತು ಎಂದು ಮಾಧ್ಯಮಗಳು ಹೇಳುತ್ತಿವೆ. ಹಾಗೆಯೇ ಸಾಲದ ಮೇಲಿನ ಬಡ್ಡಿಯನ್ನ್ನು 11% ರಿಂದ 8% ಗೆ ಇಳಿಸಲಾಗಿತ್ತು ಎಂದೂ ಹೇಳಲಾಗುತ್ತಿದೆ.ಸಾಲ ಮರುಪಾವತಿಯಲ್ಲಿನ ವಿಳಂಬಕ್ಕೆ ಸಾಲಗಾರರನ್ನು ತೀವ್ರವಾಗಿ ಪ್ರಶ್ನಿಸದೇ ಅವರಿಗೆ ಸಹಾಯ ಮಾಡಲಾಯಿತು ಮತ್ತು ಅವರನ್ನು accommodate ಮಾಡಲಾಯಿತು ಎನ್ನುವ ಆರೋಪ ಕೂಡಾ ಕೇಳಿಬರುತ್ತಿದೆ.
 ಒಂದು ಸಾಲದ ಕಂತು ಮೂರು ತಿಂಗಳು ಬರದಿದ್ದರೆ, ಅಥವಾ ಮೂರು ಕಂತುಗಳು ಬರದಿದ್ದರೆ ಸಾಲವನ್ನು ಸುಸ್ತಿ ಎಂದು ಪರಿಗಣಿಸಿ, ಕೂಡಲೇ ವಸೂಲಿ ಕ್ರಮ ತಗೆದುಕೊಳ್ಳಬೇಕೆಂದು ಬ್ಯಾಂಕ್‌ಗಳ ಸಾಲ ವಸೂಲಾತಿ ನಿಯಮಾವಳಿ ಹೇಳುತ್ತಿದೆ. ಮಲ್ಯರಿಗೇಕೆ ಈ ನಿಯಮ ಅನ್ವಯವಾಗಿಲ್ಲ ಮತ್ತು ಅವರಿಗೇಕೆ ಇಷ್ಟು ವಿನಾಯಿತಿ (long rope) ಎಂದು ನ್ಯೂಸ್ ಚಾನೆಲ್‌ಗಳು ಗಂಟಲು ಹರಿಯುವಂತೆ ಕೂಗುತ್ತಿವೆ. ಹಾಗೆಯೇ ಆದಾಯಕರ ಮತ್ತು ಪ್ರೊೆಷನಲ್ ಟ್ಯಾಕ್ಸ್ ಇಲಾಖೆಗಳು ಕೂಡಾ ಈ ನಿಟ್ಟಿನಲ್ಲಿ ಎಡವಿದ್ದೇಕೆ ಎಂದು ಅವು ಪ್ರಶ್ನಿಸುತ್ತಿವೆ.

ಮಲ್ಯ ಮಹಾ ಚಾಣಾಕ್ಷ ಮತ್ತು ಬಿಝಿನೆಸ್ ಮೈಂಡೆಡ್ ರಾಜಕಾರಿಣಿ. ಅವರಿಗೆ ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ ಮತ್ತು ಎಲ್ಲರನ್ನೂ ಸರಿಯಾಗಿ ನೋಡಿಕೊಳ್ಳುತ್ತಾರೆ ಎನ್ನುವುದರಲ್ಲಿ ಅರ್ಥವಿಲ್ಲದಿಲ್ಲ. ಅವರ ಸಂಪರ್ಕ ಮತ್ತು ಸ್ನೇಹದ ಹಸ್ತವೇ ಅವರನ್ನು ಕಾಪಾಡಿದ್ದು ಎನ್ನುವುದರಲ್ಲಿ ತಥ್ಯವಿದೆ. ಕೇಂದ್ರ ವಿಚಕ್ಷಣ ದಳದ Look out ನೋಟಿಸು ಇದ್ದರೂ, ಅವರೂ ದೇಶದಿಂದ ಜಾರಿಕೊಂಡಿದ್ದು ಮಹತ್ಸಾಧನೆಯೇ ಸರಿ.

ಮಲ್ಯ ಪ್ರಕರಣ ದೇಶದಲ್ಲಿ ಕಾನೂನನ್ನು, ವ್ಯವಸ್ಥೆಯನ್ನು , ಸಂಬಂಧವನ್ನು ಸಂಪರ್ಕವನ್ನು ಮತ್ತು ವ್ಯಕ್ತಿಗಳನ್ನು ಹೇಗೆ ದುರ್ಬಳಕೆ ಮಾಡಿಕೊಂಡು ಸೆಲೆಬ್ರಿಟಿಯಾಗಿ ಮೆರೆಯಬಹುದು ಎನ್ನುವ ನಿಟ್ಟಿನಲ್ಲಿ ಇನ್ನೊಂದು ಉದಾಹರಣೆ. ತಮ್ಮದೇನು ತಪ್ಪಿಲ್ಲ. ಬ್ಯಾಂಕ್‌ಗಳದೇ ತಪ್ಪುಎಂದು ಅವರು ಘಂಟಾ ಘೋಷವಾಗಿ ಹೇಳುತ್ತಾರೆ. ತಾನು ಸಾಲಗಾರನೇ ಅಲ್ಲ ಎಂದು ಹೇಳುತ್ತಾರೆ. ತನ್ನಿಂದ ಬ್ಯಾಂಕ್ ನವರು ಸಾಲ ಮರುಪಾವತಿ ಕೇಳುತ್ತಿದ್ದಾರೆ (judgement defaulter)ಎಂದು ಹೇಳುತ್ತಾರೆ.

ಮೇಲ್ನೋಟಕ್ಕೆ ಇದರಲ್ಲಿ ಬ್ಯಾಂಕುಗಳ ತಪ್ಪು ಎದ್ದು ಕಾಣುತ್ತದೆ. ಆದರೆ, ಇದರಲ್ಲಿ ಸಂಬಂಧಪಟ್ಟ ಪ್ರತಿಯೊಬ್ಬರ ಪಾಲೂ ಇದೆ. ಅವರ ಮಧ್ಯ ಸಹಕಾರದ ಕೊರತೆ ಎದ್ದು ಕಾಣುತ್ತದೆ. ಸರಿಯಾಗಿ ವಿಚಾರಣೆಯಾಗಿ, ಈ ಪ್ರಕರಣ ಒಂದು ತಾರ್ಕಿಕ ಅಂತ್ಯ ಕಾಣುವಾಗ ಹಲವರ ಮುಖದ ಅನಾವರಣವಾಗಬಹುದು. ಈ ಪ್ರಕರಣ, ಬ್ಯಾಂಕಿಂಗ್ ಕಾಗುಣಿತ ತಿಳಿಯದ ಹಳ್ಳಿ ಹೈದನಿಗೂ ಮತ್ತು ಜನಸಾಮಾನ್ಯನಿಗೂ ತಿಳಿದಿದ್ದು, ಬ್ಯಾಂಕ್ ಸಿಬ್ಬಂದಿ ಇವರಿಂದ ಪ್ರತಿದಿನ ಅಳವಡಿಸಿಕೊಳ್ಳಬೇಕಾಗಿದೆ. ಸಾಲ ತೀರಿಸಲಿಲ್ಲವೆಂದು ಬಡಬೋರೇಗೌಡನ ಟ್ರಾಕ್ಟರ್‌ನ್ನು ಜಬರದಸ್ತಿಯಾಗಿ ಬ್ಯಾಂಕ್‌ನವರು ವಶಪಡಿಸಿಕೊಳ್ಳುವುದು ಮತ್ತು ಪೊಲೀಸರು ಆ ರೈತರನ್ನು ಅಮಾನವೀಯವಾಗಿ, ನಿರ್ದಯವಾಗಿ ದನ ಬಡಿದಂತೆ ಬಡಿಯುವುದನ್ನು ಹಾಗೂ ಇನ್ನೊಂದು ಕಡೆ ಮಲ್ಯರ ಜೀವನ ಶೈಲಿಯನ್ನು ನ್ಯೂಸ್ ಚಾನೆಲ್‌ನವರು ಅಕ್ಕಪಕ್ಕದಲ್ಲಿ ತೋರಿಸುವಾಗ, ಕರುಳು ಚುರ್ ಎನ್ನುತ್ತದೆ? ಇದೇನಾ ಮಹಾತ್ಮಾ ಕಂಡ ಭಾರತ ಎನಿಸುತ್ತದೆ. ಈ ಪ್ರಕರಣದಲ್ಲಿ ಹೊಣೆಗಾರರನ್ನು ಹುಡುಕುವ ಧಾವಂತದಲ್ಲಿ ಕೊನೆಗೊಮ್ಮೆ ನಿಜವಾದ issue  ನೇಪಥ್ಯಕ್ಕೆ ಜಾರಿದರೆ ಆಶ್ಚರ್ಯರ್ವಿಲ್ಲ. ಇದು ಭೊಫೊರ್ಸ್ ಹಾದಿಯಲ್ಲಿ ಹೋಗಬಾರದೆಂದು ಬಡ ತೆರಿಗೆದಾರರ ಆಶಯವಾಗಿದೆ.

Writer - ರಮಾನಂದ ಶರ್ಮಾ, ಬೆಂಗಳೂರು

contributor

Editor - ರಮಾನಂದ ಶರ್ಮಾ, ಬೆಂಗಳೂರು

contributor

Similar News