ನ್ಯೂಸ್ ಚಾನೆಲ್ ಚರ್ಚೆಯ ಸುತ್ತ ಮುತ್ತ...
ಸಮಕಾಲೀನ ಸಮಸ್ಯೆಗಳು, ಆ ದಿನಗಳ ಮಹತ್ವದ ಘಟನೆಗಳು, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ವ್ಯಾಪಾರ- ವಹಿವಾಟು, ಚಲನ ಚಿತ್ರರಂಗ, ನ್ಯಾಯಾಂಗದ ಮಹತ್ವದ ತೀರ್ಪುಗಳು ಮತ್ತು ಅಪರಾಧ ಜಗತ್ತಿನ ಬೆಳವಣಿಗೆಯ ಬಗೆಗೆ ರಾತ್ರಿ ಎಂಟರ ನಂತರ ನ್ಯೂಸ್ ಚಾನೆಲ್‌ಗಳು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಚರ್ಚೆಯನ್ನು ಏರ್ಪಡಿಸುತ್ತಿವೆ. ಈ ಚರ್ಚೆಯಲ್ಲಿ ಖ್ಯಾತ ನಾಮರು, ರಾಜಕೀಯ ಪಕ್ಷಗಳ ವಕ್ತಾರರು, ಬುದ್ಧ್ದಿಜೀವಿಗಳು ಎಂದು ಹಣೆ ಪಟ್ಟಿ ಹಾಕಿಕೊಂಡವರು, ಜನಪ್ರಿಯ ವಕೀಲರು, ನಿವೃತ್ತ ಹಿರಿಯ ಅಕಾರಿಗಳು, ಸೇನಾ ಪಡೆಯ ಮಾಜಿ ಉನ್ನತ ಅಕಾರಿಗಳು, ಕೆಲವು ಸೆಲೆಬ್ರಿಟಿಗಳು ಮತ್ತು ಮಾಧ್ಯಮ ಲೋಕದ ಮುತ್ಸದ್ಧಿಗಳು ಭಾಗ ವಹಿಸುತ್ತಾರೆ. ಮಹತ್ವದ ವಿಷಯಗಳು, ಘಟನೆಗಳು ಮತ್ತು ಬೆಳವಣಿಗೆ ಬಗೆಗೆ ವಿಭಿನ್ನ, ಪರ- ವಿರೋಧ ಆಭಿಪ್ರಾಯ ಮತ್ತು ವಿಸ್ತೃತವಾದ ಮಾಹಿತಿ ಕೊಡುವ ಈ ಕಾರ್ಯಕ್ರಮಗಳನ್ನು ವೀಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ ಮತ್ತು ವೀಕ್ಷಿಸುತ್ತಾರೆ. ಇಂತಹ ಕಾರ್ಯಕ್ರಮಗಳು ದೇಶದ ಪ್ರತಿಯೊಂದು ಭಾಷೆಯಲ್ಲೂ ಬರುತ್ತಿದ್ದು, ಅವುಗಳನ್ನು ಪ್ರಸ್ತುತ ಪಡಿಸುವ ವೈಖರಿಯಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ. ಕಾರ್ಯಕ್ರಮದ ಕೊನೆಯವರೆಗೂ ಅವು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಇಂಗ್ಲಿಷ್ ಚಾನೆಲ್‌ಗಳ ಟಿಅರ್‌ಪಿ (te
levision rating point) ಅಗ್ರಸ್ಥಾನದಲ್ಲಿದೆ.
ಅದರೆ, ಇತ್ತೀಚಿನ ದಿನಗಳಲ್ಲಿ ನ್ಯೂಸ್ ಚಾನೆಲ್‌ಗಳ ಚರ್ಚೆಯ ವೈಖರಿಯ ಬಗೆಗೆ ಭಿನ್ನ ರಾಗಗಳು ಕೇಳತೊಡಗಿವೆ. ಟಿವಿ ಜರ್ನಲಿಸ್ಟರ ಸಂಘದ ಉದ್ಘಾಟನೆಗೆ ಬೆಂಗಳೂರಿಗೆ ಬಂದ ಇಂಗ್ಲಿಷ್ ನ್ಯೂಸ್ ಚಾನೆಲ್ ನ ಜನಪ್ರಿಯ ನಿರೂಪಕ, ರಾಜದೀಪ್ ಸರ್ದೇಸಾಯಿಯವರು ಏಳೆಂಟು ಜನರನ್ನು ಸ್ಟುಡಿಯೋದಲ್ಲಿ ಕೂಡಿಹಾಕಿ ಉಚ್ಚಸ್ತರದಲ್ಲಿ ಕೂಗುವುದು ಮತ್ತು ಅವರ ಮಧ್ಯೆ ಒಂದು ರೀತಿಯ ವೈಮನಸ್ಸನ್ನು ಉಂಟುಮಾಡುವುದನ್ನು ಚಾನೆಲ್ ಹೆಸರನ್ನು ಹೇಳದೇ ಮಾರ್ಮಿಕವಾಗಿ ಟೀಕಿಸಿದ್ದಾರೆ. ಇವರು ಯಾರನ್ನು ಉದ್ದೇಶಿಸಿ ಮತ್ತು ಯಾವ ಚಾನೆಲ್ ಬಗ್ಗೆ ಹೀಗೆ ಮಾತನಾಡಿರಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಸ್ವತಃ ಸುದ್ದಿ ಚಾನೆಲ್‌ನ ನಿರೂಪಕರಾದ ಅವರ ಅಭಿಪ್ರಾಯದಲ್ಲಿ ತೂಕವಿಲ್ಲದಿಲ್ಲ.
ನ್ಯೂಸ್ ಚಾನೆಲ್‌ಗಳ ಮೊದಲ ಕರ್ತವ್ಯ ವೀಕ್ಷರಿಗೆ ಅಂದಿನ ಸುದ್ದಿಯನ್ನು ಅದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೊಡುವುದು, ಅದಷ್ಟು ಹೆಚ್ಚಿನ ಭೌಗೋಲಿಕ ಭಾಗದ ಸುದ್ದಿಯನ್ನು ಕೊಡುವುದು, ಸುದ್ದಿಯನ್ನು ಕೆಲವೇ ವ್ಯಕ್ತಿಗಳಿಗೆ ಮತ್ತು ಕೆಲವೇ ವಿಷಯಗಳಿಗೆ ಸೀಮಿತಗೊಳಿಸದಿರುವುದು, ಸುದ್ದಿಯನ್ನು ಸಂಕ್ಷಿಪ್ತವಾಗಿರಿಸುವುದು. ಅದರೆ, ಇಂದು ನ್ಯೂಸ್ ಚಾನೆಲ್ ಗಳಲ್ಲಿ ಈ ಮೂಲಭೂತ ಆದರ್ಶ ಮತ್ತು ವೈಖರಿ ಹಳಿ ತಪ್ಪುತ್ತಿದೆ. ಸುದ್ದಿ ನೇಪಥ್ಯಕ್ಕೆ ಸರಿದು, ಚರ್ಚೆ ಚಾನೆಲ್‌ಗಳನ್ನು ವ್ಯಾಪಿಸುತ್ತಿದೆ. ದೇಶದ opinion makers ಎಂದು ಕರೆಯಲ್ಪಡುವ ಕೆಲವು ಜನಪ್ರಿಯ ಇಂಗ್ಲಿಷ್ ಚಾನೆಲ್‌ಗಳು ಮೂರು- ನಾಲ್ಕು ಸುದ್ದಿಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಅ ದಿನದ ಸುದ್ದಿಗಳ ಸಮಗ್ರ ಸಂಗ್ರಹ ವೀಕ್ಷರಿಗೆ ದೊರೆಯುತ್ತಿಲ್ಲ. ಟಿವಿ ಪರದೆಯ ತಳದಲ್ಲಿ ಓಡುವ ಸುದ್ದಿಗಳಿಂದಲೇ ಅಂದಿನ ಸುದ್ದಿಗಳನ್ನು ತಿಳಿದುಕೊಳ್ಳುವ ಅನಿವಾರ್ಯತೆ ವೀಕ್ಷಕರಿಗೆ .
ಟಿವಿ ಚರ್ಚೆಯ ಮೊದಲು ಹತ್ತು ನಿಮಿಷ ಅರ್ಥ ಪೂರ್ಣ ವಾಗಿರುತ್ತದೆ. ಆ ಮೇಲೆ ಇದು ಮೀನು ಮಾರುಕಟ್ಟೆಯಂತೆ ಗೊಂದಲ ಮತ್ತು ಗದ್ದಲದ ಗೂಡಾಗುತ್ತದೆ. ಇಂಗ್ಲಿಷ್ ಭಾಷೆಯ free for all ದ ಅರ್ಥ ತಿಳಿಯದವರು ಇದನ್ನು ನೋಡಬೇಕು. ಇಲ್ಲಿ ಯಾರು ಏನು ಹೇಳುತ್ತಾರೆ?ಯಾರಿಗೆ ಹೇಳುತ್ತಾರೆ ಎನ್ನುವುದು ತಿಳಿಯುತ್ತಿಲ್ಲ. ಪ್ರತಿಯೊಬ್ಬರೂ ಏಕ ಕಾಲದದಲ್ಲಿ ತಮ್ಮ ವಾದವನ್ನು ಮಂಡಿಸುತ್ತಾರೆ, ಅಭಿಪ್ರಾಯವನ್ನು ವ್ಯಕ್ತಮಾಡುತ್ತಾರೆ, ವಿರೋಗಳನ್ನು ತರಾಟೆಗೆ ತಗೆದುಕೊಳ್ಳತ್ತಾರೆ. ಎಷ್ಟೋ ಬಾರಿ ನಿರೂಪಕರು ಚರ್ಚಾಪಟುಗಳನ್ನು ಸಂಭಾಳಿಸಲಾಗದೆ ಹತಾಶರಾಗುತ್ತಾರೆ. ಯಾರಿಗೂ ಇನ್ನೊಬ್ಬರು ತಮ್ಮ ಮಾತನ್ನು ಮುಗಿಸುವವರೆಗೆ ತಾಳ್ಮೆ ಇರುವುದಿಲ್ಲ. ಚರ್ಚೆಯ ವಿಷ ಯಾಂತರವಾಗಿ ಮೂಲ ವಿಷಯ ಹಳ್ಳ ಹಿಡಿಯುವ ಪ್ರಮೇಯಗಳೂ ಇಲ್ಲದಿಲ್ಲ. ವಿಷಯದ ವಸ್ತು ನಿಷ್ಠೆ ಚರ್ಚೆಯಾಗದೆ, ಚರ್ಚೆಯಲ್ಲಿ ಭಾಗವಹಿಸುವವರ ರಾಜಕೀಯ, ಸಾಂಸ್ಕೃತಿಕ, ಸೈದ್ಧಾಂತಿಕ, ಧರ್ಮ, ಜಾತಿ ಮತ್ತು ಭಾಷೆಗಳ ಹಿನ್ನೆಲೆಯಲ್ಲಿ ಮಂಥನಗಳು ನಡೆಯುವ ಸಂಭವಗಳೇ ಹೆಚ್ಚು. ಇವರ ಪೂರ್ವಗೃಹ ಪೀಡಿತ ಯೋಚನಾ ಲಹರಿಗೆ ವೇದಿಕೆಯಾಗುತ್ತಿದೆ. ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್‌ರ ದೇಶದ್ರೋಹಿ ಘೋಷಣೆ, ಹೈದರಾಬಾದ್ ವಿಶ್ವ ವಿದ್ಯಾನಿಲಯದ ರೋಹಿತ್ ವೇಮುಲಾರ ಆತ್ಮಹತ್ಯೆ ವಿವಾದದ ಮೇಲಿನ ಚರ್ಚೆ ಎರಡು ವಿಭಿನ್ನ ಚಿಂತನೆಗಳ ಮತ್ತು ಎರಡು ಪರಸ್ಪರ ವಿರೋ ರಾಜಕೀಯ ಪಕ್ಷಗಳ ಸಂಘರ್ಷಕ್ಕೆ ವೇದಿಕೆಯಾಯಿತೇ ವಿನಃ ಅರ್ಥಪೂರ್ಣ ಚಿಂತನ-ಮಂಥನ ಆಗಲಿಲ್ಲ. ಇಂತಹ ಸಮಸ್ಯೆಗಳಿಗೆ ಖಾಯಂ ಪರಿಹಾರ ಹುಡುಕುವ ನಿಟ್ಟಿನಲ್ಲಿ ಒಂದಿಂಚೂ ಪ್ರಗತಿ ಕಾಣಲಿಲ್ಲ. ಭಾಗವಹಿಸಿದವರನ್ನೆಲ್ಲಾ ತಮ್ಮ ಪುಪ್ಪುಸ ಶಕ್ತಿಯಿಂದ (lung power) ಹತ್ತಿಕ್ಕುವವರು ಇಲ್ಲಿ ಹೀರೋಗಳಾಗಿ ಮೆರೆಯತ್ತಾರೆ.
ಇಂತಹ ಚರ್ಚೆಗಳು ಹೆಚ್ಚು ಶಿಸ್ತು ಬದ್ಧವಾಗಿರಬೇಕಾದರೆ, ವೀಕ್ಷಕರು ಇವುಗಳನ್ನು ಮೆಚ್ಚಬೇಕಾದರೆ, ನಿರೂಪಕರು ಕೇವಲ ಮಾನಿಟರ್ ಮಾಡಬೇಕು. ಈ ಕಾರ್ಯಕ್ರಮವನ್ನು ಆಭಿಪ್ರಾಯ ಸಂಗ್ರಹಣೆಗೆ ಸೀಮಿತಮಾಡಬೇಕೇ ವಿನಃ ನ್ಯಾಯಾಲಯದಲ್ಲಿ ಪಾಟೀ ಸವಾಲು ಮಾಡಿದಂತೆ ಮಾಡಬಾರದು. ಭಾಗವಹಿಸುವವರಿಗೆ ಕಟ್ಟು ನಿಟ್ಟಾದ ಸಮಯ ಸಂಹಿತೆಯನ್ನು ನಿಧರ್ರಿಸಬೇಕು. ಭಾಗವಹಿಸುವವರನ್ನೆಲ್ಲಾ ಸಮಾನವಾಗಿ ಕಾಣಬೇಕು. ಈ ಕಾರ್ಯಕ್ರಮಗಳಲ್ಲಿ ನಿರೂಪಕರು ತಮ್ಮನ್ನು ತಾವು ತ್ರಿಲೋಕ ಜ್ಞಾನಿಗಳೆಂದು ಬಿಂಬಿಸಿಕೊಳ್ಳುವುದು ಮತ್ತು ತಮ್ಮ ಅಭಿಪ್ರಾಯವೇ ಕೊನೆಯ ಮಾತು ಎನ್ನುವುದು ಸರಿಯಲ್ಲ. ತಮ್ಮ ವಿಚಾರಧಾರೆಗೆ ಸ್ಪಂದಿಸದವರ ಮಾತನ್ನು ಚರ್ಚೆಯ ಹಾದಿಯನ್ನು ತಿರುಗಿಸುವ ನೆಪದಲ್ಲಿ ನಿರೂಪಕರು ಅರ್ಧದಲ್ಲಿಯೇ ನಿಲ್ಲಿಸಿ ಇನ್ನೊಬ್ಬರಿಗೆ ಅವಕಾಶ ಕೊಡುವುದನ್ನು ಆರೋಗ್ಯ ಪೂರ್ಣ ಚರ್ಚೆ ಎನ್ನಲಾಗದು.
ಈ ನ್ಯೂಸ್ ಚಾನೆಲ್‌ಗಳ ಮಹತ್ವದ ಅಂಶವೆಂದರೆ, ನಿರೂಪಕರು ಚರ್ಚೆಗೆ ಸಂಪೂರ್ಣವಾಗಿ ಸನ್ನದ್ಧರಾಗಿ ಬರುತ್ತಾರೆ. ಅವರು ದಾಖಲೆಗಳ ಸಹಿತ ತಮ್ಮ ವಾದವನ್ನು ಮಂಡಿಸುತ್ತಾರೆ. ಮರೆತು ಹೋದ ತೀರಾ ಹಿಂದಿನ ಘಟನಾವಳಿಗಳನ್ನೂ ಅವರು ನೆನಪಿಸುತ್ತಾರೆ. ಚರ್ಚೆಯಲ್ಲಿ ಭಾಗವಹಿಸಿದವರು ಕಾಟಾಚಾರಕ್ಕೆ ಏನೋ ಹೇಳದಂತೆ ತಮ್ಮ ಮಾತುಗಾರಿಕೆಯಿಂದ, ವಾಗ್ಝರಿಯಿಂದ, ಉದಾಹರಣೆಗಳಿಂದ, ಘಟನಾವಳಿಗಳಿಂದ ಕಟ್ಟಿಹಾಕುತ್ತಾರೆ ಮತ್ತು ಬಾಯಿ ಮುಚ್ಚಿಸುತ್ತಾರೆ. ಟೈಮ್ಸ್ ನೌ ವಾಹಿನಿಯಲ್ಲಿ ಚರ್ಚೆ ಗಲಾಟೆಮಯವಾದರೂ, ವೀಕ್ಷಕರು ಅದರ ನಿರೂಪಕ ಅರ್ನವ್ ಗೋಸ್ವಾಮಿಯವರ ವಾದ ವೈಖರಿ, ಅವರ ಇಂಗ್ಲಿಷ್ ಭಾಷಾ ಪಾಂಡಿತ್ಯ, ಅವರ ವಿಷಯ ಜ್ಞಾನ, ಅವರು ಚರ್ಚೆಯಲ್ಲಿ ಭಾಗವಹಿಸವವರನ್ನು ತರಾಟೆಗೆ ತೆಗೆದುಕೊಳ್ಳುವ ಪರಿ, ಕೆಲವರನ್ನು ಇರಿಸು ಮುರಿಸಾಗಿಸುವ ವೈಖರಿಯನ್ನು enjoy ಮಾಡಲು ವೀಕ್ಷಿಸುತ್ತಾರೆ. ಸ್ಪೋಕನ್ ಇಂಗ್ಲೀಷ್ ಕಲಿಸುವ ಇನ್‌ಸ್ಟಿಟ್ಯೂಟ್‌ನ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಅರ್ನವ್ ಗೋಸ್ವಾಮಿಯವರ ನ್ಯೂಸ್‌ನ್ನು ತಪ್ಪದೇ ನೋಡಲು ಹೇಳಿದ್ದಾರೆನ್ನುವ ಸಾಮಾಜಿಕ ಜಾಲತಾಣದ ಜೋಕ್‌ನಲ್ಲಿ ಅರ್ಥವಿಲ್ಲದಿಲ್ಲ.