ಪಟಾಕಿ: ಉತ್ಪಾದನಾ ದುರಂತಗಳಿಂದ, ಬೆಂಕಿ ಆಕಸ್ಮಿಕಗಳವರೆಗೆ...

Update: 2016-04-10 18:38 GMT

ರವಿವಾರ ಮುಂಜಾನೆ ಕೇರಳ ದೇಗುಲದಲ್ಲಿ ನಡೆದ ಬೆಂಕಿ ದುರಂತ ಮೈ ಜುಂ ಎನಿಸುವಂಥದ್ದು. 100ಕ್ಕೂ ಹೆಚ್ಚು ಮಂದಿಯ ಸಜೀವ ದಹನ; 380 ಮಂದಿಗೆ ಗಂಭೀರ ಸುಟ್ಟಗಾಯ. ದುರಂತ ನಡೆದದ್ದು ಕೊಲ್ಲಂ ಬಳಿಯಪುಟ್ಟಿಂಗಾಲ್ ದೇವಿ ದೇವಸ್ಥಾನದಲ್ಲಿ. ಸೌರಮಾನ ಯುಗಾದಿ (ವಿಷು) ಜಾತ್ರೆಗಾಗಿ ದೇವಸ್ಥಾನದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಸೇರಿದ್ದರು. ಒಂದು ಕಿ.ಮೀ.ವರೆಗೂ ಸ್ಫೋಟದ ಸದ್ದು ಕೇಳಿ ಭೀತಿ ಹುಟ್ಟಿಸಿದ್ದ ಇದು ಕೇವಲ ಒಂದು ವಿಪ್ಲವ ಮಾತ್ರವಲ್ಲ; ಸುಡುಮದ್ದಿನ ಪ್ರದರ್ಶನಕ್ಕೆ ಜಿಲ್ಲಾಡಳಿತ ಒಪ್ಪಿಗೆ ನೀಡಿಲ್ಲವಾದರೂ ಇದನ್ನು ತಡೆಯಲು ಎಲ್ಲ ಅವಕಾಶ ಇತ್ತು.

ಭಾರತದಲ್ಲಿ ಪಟಾಕಿ ದುರಂತದ ದೊಡ್ಡ ಕಥಾಸರಣಿಯೇ ಇದೆ.ಬಾಣಬಿರುಸುಗಳ ಮೇಲಾಟ ದೇಶಾದ್ಯಂತ ಎಲ್ಲ ಉತ್ಸವ- ಆಚರಣೆಗಳ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿದೆ. ಕ್ರೀಡಾ ಕೂಟ, ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಂದ ಹಿಡಿದು ದೇವಾಲಯಗಳ ಉತ್ಸವ-ಜಾತ್ರೆಗಳವರೆಗೆ ಸುಡುಮದ್ದಿನ ಆಟಾಟೋಪ ಕಂಡುಬರುತ್ತದೆ.

ಇದು ಪ್ರತಿಷ್ಠೆಯನ್ನು ಪಣಕ್ಕಿಡುವ ಪೈಪೋಟಿಯೂ ಆಗಿದೆ. ವಿವಾಹ ಆಯೋಜಕರು ಹಾಗೂ ಸಮಾರಂಭ ವ್ಯವಸ್ಥೆಗೊಳಿ ಸುವವರು ಒಬ್ಬರನ್ನೊಬ್ಬರು ಹಿಂದಿಕ್ಕಲು ಬಳಸುವ ಅನೌಪಚಾರಿಕ ತಂತ್ರ ಇದು. ಕೇರಳದಲ್ಲಿ ಹಿಂದೂ ಹಾಗೂ ಕ್ರೈಸ್ತರ ಧಾರ್ಮಿಕ ಸಂಘಟನೆಗಳು ಬಾಣ ಬಿರುಸುಗಳ ಪ್ರದರ್ಶನವನ್ನು ಜನಾಕರ್ಷಣೆಯ ಸ್ಪರ್ಧೆಯಾಗಿಯೇ ಪರಿಗಣಿಸುತ್ತವೆ. ಅಂದರೆ ಪಟಾಕಿ ಉತ್ಪಾದಕರು ಹಾಗೂ ಗುತ್ತಿಗೆದಾ ರರು ಅದ್ದೂರಿ, ಪರಿಣಾಮಕಾರಿ ಪ್ರದರ್ಶನಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಅಪರೂಪಕ್ಕೆ ಕಾನೂನುಬಾಹಿರ ಚಟುವಟಿಕೆಯಾ ಗಿಯೂ ಇದು ಮಾರ್ಪಡುತ್ತದೆ.

ಸಿಡಿಮದ್ದಿನ ಅಪಾಯಕಾರಿ ಸ್ವರೂಪ ಹಾಗೂ ದೊಡ್ಡ ಸದ್ದು ಮತ್ತು ಕಣ್ಣು ಕೋರೈಸುವ ಬೆಳಕು ಕಾಣಬೇಕು ಎಂಬ ಕಾರಣಕ್ಕೆ ಸುರಕ್ಷತಾ ಅಂಶಗಳಲ್ಲಿ ಉತ್ಪಾದನಾ ಪ್ರಕ್ರಿಯೆಯಿಂದಲೇ ರಾಜಿ ಮಾಡಿಕೊಳ್ಳಲಾಗುತ್ತದೆ. ಅಂದರೆ ಈ ಸಿಡಿಮದ್ದುಗಳು ಕೋಟ್ಯಂತರ ರೂಪಾಯಿಗಳನ್ನು ಮಾತ್ರ ಸುಡುವುದಲ್ಲ; ಪ್ರತಿ ಹಂತದಲ್ಲಿ ಹಲವು ಮಂದಿಯ ಸಾವಿಗೆ ಕಾರಣವಾಗಿ ಕುಟುಂಬಗಳ ಭವಿಷ್ಯವನ್ನೂ ಸುಟ್ಟುಹಾಕುತ್ತವೆ.

ಉತ್ಪಾದನಾ ದುರಂತ

ಪ್ರತೀ ವರ್ಷ ಪಟಾಕಿ ಉತ್ಪಾದನಾ ಘಟಕಗಳಲ್ಲಿ ನಡೆಯುವ ದುರಂತ ದಿಂದ ಕನಿಷ್ಠ 25 ಮಂದಿ ಕಾರ್ಮಿಕರು ಜೀವ ಕಳೆದು ಕೊಳ್ಳುತ್ತಾರೆ ಎಂದು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆಯ ಮೂಲ ಗಳು ಹೇಳುತ್ತವೆ. ಇದು ಪಟಾಕಿ ಉದ್ಯಮಗಳ ಮೇಲೆ ನಿಗಾ ವಹಿಸುವ ಅಧಿಕೃತ ಸರಕಾರಿ ಸಂಸ್ಥೆ. ಇಂಥ ಬಹುತೇಕ ದುರಂತ ಸಂಭವಿಸುವುದು ತಮಿಳುನಾಡಿದ ಶಿವಕಾಶಿಯಲ್ಲಿ. ದೇಶದ ಪಟಾಕಿ ತಯಾರಿಕಾ ಘಟಕ ಗಳ ಪೈಕಿ ಶೇ.90ರಷ್ಟು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂಥ ಬಹುತೇಕ ದುರಂತಗಳು ಸಂಭವಿಸಲು ಮುಖ್ಯ ಕಾರಣವೆಂದರೆ ಅಪಾ ಯಕಾರಿ ಕಚ್ಚಾ ವಸ್ತುಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು.
ತೀರಾ ಅಪಾಯಕಾರಿ ಪರಿಸ್ಥಿತಿಯಲ್ಲಿ ಯಾವ ಸುರಕ್ಷಾ ಕ್ರಮ ಗಳನ್ನೂ ಅನುಸರಿಸದೆ, ಸ್ಫೋಟಕ ಸಾಮಗ್ರಿಗಳನ್ನು ನಿರ್ವಹಿಸಲು ಕಾರ್ಮಿಕರ ಮೇಲೆ ಒತ್ತಡ ತರುವುದು ಸಾಮಾನ್ಯ. ಈ ಉದ್ಯಮ ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದರಲ್ಲೂ ಕುಖ್ಯಾತ.
ವಾಯುಮಾಲಿನ್ಯ

ಪ್ರತೀ ವರ್ಷ ದೇಶದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನ ಪಟಾಕಿಗಳನ್ನು ವ್ಯಾಪಕವಾಗಿ ಸಿಡಿಸುತ್ತಾರೆ. ದೇಶಾದ್ಯಂತ ದೀಪಾವಳಿ ದಿನ ಸಂಜೆಯಂತೂ ಪ್ರತಿ ಮನೆಗಳಲ್ಲಿ ಸಿಡಿಸುವ ಪಟಾಕಿಯಿಂದಾಗಿ ವಾಯು ಮಾಲಿನ್ಯ ಮಿತಿ ಮೀರುತ್ತದೆ. 2010 ರಿಂದೀಚೆಗೆ ದೀಪಾವಳಿ ಸಂದರ್ಭದಲ್ಲಿ ಗರಿಷ್ಠ ಮಾಲಿನ್ಯ ಮಟ್ಟ, ಸರಾಸರಿ ಮಾಲಿನ್ಯ ಮಟ್ಟದ ಹತ್ತು ಪಟ್ಟುಹೆಚ್ಚುತ್ತದೆ. ಇದು ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳನ್ನು ವ್ಯಾಪಕವಾಗಿ ಹರಡುವಂತೆ ಮಾಡುತ್ತದೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿಯನ್ನು ನಿಷೇಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಭಾರತೀಯರು ತಲೆತಲಾಂತರಗಳಿಂದ ಪಟಾಕಿ ಸಿಡಿಸುತ್ತಾ ಬಂದಿದ್ದು, ದಿಢೀರನೇ ನಿಷೇಧಿಸುವುದರಿಂದ ಸಮುದಾಯದ ಭಾವನೆಗಳನ್ನು ಧಿಕ್ಕರಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ. ದಾಗ್ಯೂ ಪಟಾಕಿ ಸಿಡಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಸುಪ್ರೀಂಕೋರ್ಟ್ ಪ್ರಕಟಿಸಿದೆ. ಇವೆಲ್ಲದರ ಮಧ್ಯೆ ಸಂತೋಷದ ಬೆಳವಣಿಗೆಯೆಂದರೆ, ಕನಿಷ್ಠ ದಿಲ್ಲಿಯಲ್ಲಾದರೂ ಪರಿಸರ ಪ್ರಜ್ಞೆಯ ಪರಿಣಾಮವಾಗಿ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಖರೀದಿಸುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಆದರೆ ಇತರ ಸಂದರ್ಭಗಳಲ್ಲಿ ಅವುಗಳ ಬಳಕೆ ಎಗ್ಗಿಲ್ಲದೇ ಸಾಗಿದೆ ಎನ್ನುವುದು ಗಮನಾರ್ಹ ಅಂಶ.
ಅಪಾಯಕಾರಿ ಸಾಧನ
ಇಂಥ ಬಾಣಬಿರುಸನ್ನು ಆಕರ್ಷಣೀಯವಾಗಿ ಮಾಡುವ ಪ್ರಯತ್ನದಲ್ಲಿ, ಪಟಾಕಿಗಳು ಸಿಡಿದಾಗ ಸದ್ದು ದೊಡ್ಡದಾಗಿ ಕೇಳುವಂತೆ ಮತ್ತು ಕಣ್ಣು ಕೋರೈಸುವಷ್ಟು ಪ್ರಖರ ಬೆಳಕು ಬರುವಂತೆ ಮಾಡುವ ಸಲುವಾಗಿ ನಿಷೇಧಿತ ಪರಿಕರಗಳನ್ನು ಪಟಾಕಿ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಸರಕಾರ ಈ ಹಿನ್ನೆಲೆಯಲ್ಲಿ ಚೀನಾದಿಂದ ಕಡಿಮೆ ಬೆಲೆಯ ಪಟಾಕಿಗಳ ಆಮದನ್ನು ನಿಷೇಧಿಸಿದೆ. ಸಾಮಾನ್ಯವಾಗಿ ಚೀನಾ ಪಟಾಕಿಗಳಲ್ಲಿ ಪೊಟ್ಯಾಶಿಯಂ ಕ್ಲೋರೇಟ್ ಎಂಬ ನಿಷೇಧಿತ ರಾಸಾಯನಿಕವನ್ನು ಬಳಸಲಾಗುತ್ತದೆ. ಇದರಿಂದ ಭಾರತದಲ್ಲಿ ಉತ್ಪಾದನೆಗೊಂಡ ಉತ್ಪನ್ನಗಳ ಮಾರಾಟ ಹೆಚ್ಚುತ್ತದೆ ಹಾಗೂ ಕೆಲ ಅತಿ ಅಪಾಯಕಾರಿ ವಸ್ತುಗಳ ಬಳಕೆಯನ್ನು ತಡೆಯಲಾಗಿದೆ.

ಆದರೆ ಉತ್ಪಾದನಾ ಪ್ರಕ್ರಿಯೆ ಯಲ್ಲಿ ಕೂಡಾ ತೀರಾ ಜಾಗರೂ ಕವಾಗಿ ಉಷ್ಣತೆ ಹಾಗೂ ತೇವಾಂಶ ವನ್ನು ಹೊಂದಾಣಿಕೆ ಮಾಡು ವುದು ಅನಿವಾರ್ಯ ವಾಗುತ್ತದೆ. ವರ್ಷವಿಡೀ ಸ್ಥಿರವಾದ ತೇವಾಂಶ ವಾತಾ ವರಣದಲ್ಲಿ ಇರುತ್ತದೆ ಎಂಬ ಕಾರಣ ಕ್ಕಾಗಿಯೇ ಶಿವಕಾಶಿ ಪಟಾಕಿ ಕಾಶಿಯಾಗಿ ಮಾರ್ಪಟ್ಟಿರುವುದು. ದೇಶದ ವಿವಿಧೆಡೆಗಳಲ್ಲಿ ಪಟಾಕಿಗಳನ್ನು ದಾಸ್ತಾನು ಮಾಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಬೇಸಿಗೆಯಲ್ಲಿ ಉಷ್ಣಾಂಶ ದಿಢೀರನೇ ಹೆಚ್ಚುವ ಪ್ರದೇಶಗಳಲ್ಲಿ ಇಂಥ ದಾಸ್ತಾನು ದುರದೃಷ್ಟಕರ ಆಕಸ್ಮಿಕಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ 2013ರಲ್ಲಿ ಪಾಲಕ್ಕಾಡ್ ಪಟಾಕಿ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ ಏಳು ಮಂದಿ ಮೃತಪಟ್ಟಿದ್ದರು.
ಕೇರಳ ಸರಕಾರ ನಿರಂತರವಾಗಿ ಇಂಥ ಘಟನೆಗಳನ್ನು ಪದೇ ಪದೇ ಎದುರಿಸುವ ಕಾರಣದಿಂದಾಗಿ, ಇಂಥ ಘಟಕಗಳು ಲೈಸನ್ಸ್ ಪಡೆಯುವ ಅವಧಿಯಲ್ಲೇ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಕಡ್ಡಾಯಗೊಳಿಸಿ, ಸಮರ್ಪಕವಾಗಿ ಘಟಕಗಳ ಮೇಲೆ ನಿಗಾ ವಹಿಸುವ ಅನಿವಾರ್ಯತೆ ಇದೆ. ಬಹುತೇಕ ಸಂದರ್ಭದಲ್ಲಿ ಇಂಥ ಕಾನೂನುಗಳು ಅನುಷ್ಠಾನಗೊಳ್ಳುವುದೇ ಅಪರೂಪವಾದ್ದರಿಂದ, ಕೇವಲ ಸಾರ್ವಜನಿಕ ಸುರಕ್ಷತೆಗೆ ಮಾತ್ರ ಅಪಾಯ ಎದುರಾ ಗುವುದಲ್ಲದೆ, ಇಂಥ ಸ್ಫೋಟಕಗಳು ಅಪಾಯಕಾರಿ ವ್ಯಕ್ತಿಗಳ ಕೈಗೆ ಸಿಗುವ ಸಾಧ್ಯತೆಯೂ ಇರುತ್ತದೆ.
ಪಟಾಕಿ ಪೈಪೋಟಿ

ಸುಮಾರು ಐವತ್ತು ವರ್ಷಗಳ ಹಿಂದೆ ಕೇರಳದ ಶಬರಿಮಲೆ ದೇಗುಲ ದಲ್ಲಿ ಬಾಣಬಿರುಸಿನ ಪ್ರದರ್ಶನ ಸಂಬಂಧಿ ಸ್ಫೋಟದಲ್ಲಿ 68 ಮಂದಿ ಬಲಿಯಾಗಿದ್ದರು. ತಕ್ಷಣ ದೇವಸ್ಥಾನ ಸುಡುಮದ್ದು ಪ್ರದರ್ಶನ ನಿಷೇಧಿಸಿತು. ಆದರೆ ಇದು ಶಬರಿಮಲೆಯಲ್ಲಿ ಮಾನವ ದುರಂತ ಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಕಾಲ್ತುಳಿತದಿಂದಾಗಿ ಜನ ಅಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಸಾಯುತ್ತಲೇ ಇದ್ದಾರೆ. ಆದರೆ ಕನಿಷ್ಠ ಪಕ್ಷ ದೊಡ್ಡಪ್ರಮಾಣದ ವಿಪ್ಲವಗಳನ್ನು ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಆದರೆ ಇದನ್ನು ರಾಜ್ಯದ ಇತರ ದೇವಸ್ಥಾನ ಹಾಗೂ ಚರ್ಚ್‌ಗಳಿಗೆ ಅನ್ವಯಿಸುವಂತಿಲ್ಲ. ಈ ಧಾರ್ಮಿಕ ಸಂಸ್ಥೆಗಳು ಬಾಣಬಿರುಸುಗಳ ಪ್ರದರ್ಶನವನ್ನು ತಮ್ಮ ಸಂಪ್ರದಾಯದ ಅವಿಭಾಜ್ಯ ಅಂಗ ಎಂಬಂತೆ ನಡೆಸಿಕೊಂಡು ಬರುತ್ತಿವೆ. ಇದು ಎರಡು ಸಮುದಾಯಗಳ ನಡುವೆ ಸ್ಪರ್ಧಾತ್ಮಕ ಪ್ರದರ್ಶನಕ್ಕೆ ಕಾರಣವಾಗಿದೆ. ಒಂದು ಸಮುದಾಯವನ್ನು ಹಿಂದಿಕ್ಕುವ ಭರಾಟೆಯಲ್ಲಿ ವರ್ಷದಿಂದ ವರ್ಷಕ್ಕೆ ಬಾಣಬಿರುಸುಗಳ ಆಟಾಟೋಪ ಹೆಚ್ಚುತ್ತಲೇ ಬಂದಿದೆ. ಅಸಂಖ್ಯಾತ ಘಟನೆಗಳ ಬಳಿಕ ಕೇರಳ ಸರಕಾರ ಹಾಗೂ ಹೈಕೋರ್ಟ್ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿವೆ. ಕೆಲ ಬಗೆಯ ಬಾಣಬಿರುಸುಗಳ ಪ್ರದರ್ಶನಕ್ಕೆ ಒಟ್ಟಾರೆ ಯಾಗಿ ಅನುಮತಿ ನಿರಾಕರಿಸಲಾಗುತ್ತಿದೆ. ಜತೆಗೆ ಈ ಸಂಬಂಧ ನೀಡಿರುವ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದೂ ಆದೇಶಿಸಿದೆ.

 ಈ ಪೈಪೋಟಿಯ ಕಾರಣದಿಂದಾಗಿಯೇ ಜಿಲ್ಲಾಡಳಿತ ಕೊಲ್ಲಂ ದೇಗುಲದಲ್ಲಿ ಸುಡುಮದ್ದು ಪ್ರದರ್ಶನಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ದೇವಸ್ಥಾನದ ಆಡಳಿತ ಮಂಡಳಿ, ತಮ್ಮ ಆದ್ಯತೆಗೆ ಅನುಗುಣ ವಾಗಿ ನಿರ್ಧಾರ ಕೈಗೊಂಡು, ದುರಂತವನ್ನು ತಪ್ಪಿಸಲು ಯಾವ ಮುನ್ನೆ ಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳದೆ ಕಾನೂನು ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಿದೆ.

Writer - ರೋಹನ್ ವೆಂಕಟರಾಮ ಕೃಷ್ಣನ್

contributor

Editor - ರೋಹನ್ ವೆಂಕಟರಾಮ ಕೃಷ್ಣನ್

contributor

Similar News