9ನೆ ತರಗತಿಯ ಮಕ್ಕಳು ಫೇಲಾಗುವುದೇಕೆ?

Update: 2016-04-11 18:12 GMT

ಮಹಾರಾಷ್ಟ್ರದಲ್ಲಿ ಶಿಕ್ಷಣ ಅಧಿಕಾರ ಅಧಿನಿಯಮದ ಅನ್ವಯ ಒಂದನೆ ತರಗತಿಯಿಂದ ಎಂಟನೆ ತರಗತಿ ತನಕದ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದು ಅನಿವಾರ್ಯವಾಗಿದೆ. ಒಂಬತ್ತನೆ ತರಗತಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಇದೀಗ ಶಿಕ್ಷಣ ಪ್ರಪಂಚದಲ್ಲಿ ಒಂಬತ್ತನೆ ತರಗತಿಯ ವಿದ್ಯಾರ್ಥಿಗಳನ್ನೂ ತೇರ್ಗಡೆಗೊಳಿಸುವುದು ಅನಿವಾರ್ಯ ಮಾಡಬೇಕು ಎಂದು ಚರ್ಚೆಗಳು ಕೇಳಿ ಬರುತ್ತಿವೆ. ಆದರೆ ಈ ವಿಷಯದಲ್ಲಿ ಶಿಕ್ಷಕರು ಮತ್ತು ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದ ವರಿಷ್ಠ ಅಧಿಕಾರಿಗಳು ಬೇರೆ ಬೇರೆ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.

ಎಂಟನೆ ತರಗತಿಯ ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಗಮನವನ್ನೇ ನೀಡುತ್ತಿಲ್ಲ. ಹಾಗಾಗಿ ಅವರು ಕ್ಷೀಣವಿದ್ದಾರೆ ಎನ್ನುವುದು ಅನೇಕ ಅಧ್ಯಾಪಕರ ಪ್ರತಿಕ್ರಿಯೆ. ಈ ಕಾರಣದಿಂದ ವಿದ್ಯಾರ್ಥಿಗಳು ಒಂಬತ್ತನೆ ತರಗತಿಯಲ್ಲಿ ಉತ್ತಮ ಫಲಿತಾಂಶ ಕಾಣಿಸಲು ಅಸಮರ್ಥರಾಗುತ್ತಿದ್ದಾರಂತೆ. ಇತ್ತ ಶಿಕ್ಷಣ ವಿಭಾಗದ ಮುಂಬೈ ಕ್ಷೇತ್ರದ ಉಪನಿರ್ದೇಶಕ ಬಿ.ಬಿ. ಚವ್ಹಾಣ್ ಆರೋಪಿಸುವಂತೆ ಶಿಕ್ಷಕರು ಮತ್ತು ಶಾಲೆಗಳು ಒಟ್ಟು ಸೇರಿ ಒಂಬತ್ತನೆ ತರಗತಿಯ ವಿದ್ಯಾರ್ಥಿಗಳನ್ನು ಕೆಲವೆಡೆ ಉದ್ದೇಶ ಪೂರ್ವಕವಾಗಿ ಫೇಲ್ ಮಾಡುತ್ತಿದ್ದಾರೆ. ಏಕೆಂದರೆ ಹತ್ತನೆ ಪರೀಕ್ಷಾ ಫಲಿತಾಂಶದಲ್ಲಿ ಶೇ. ನೂರು ಫಲಿತಾಂಶ ಪಡೆಯಬೇಕು. ಅದಕ್ಕೆ ಕೆಲವು ವಿದ್ಯಾರ್ಥಿಗಳು ಅಡ್ಡಿಯಾಗುವ ಸಾಧ್ಯತೆಗಳಿವೆ. ಅದಕ್ಕಾಗಿ ಅಂತಹ ವಿದ್ಯಾರ್ಥಿಗಳನ್ನು ಒಂಬತ್ತನೆ ತರಗತಿಯಲ್ಲಿ ಫೇಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಒಂಬತ್ತನೆ ತರಗತಿಯ ಕೆಲವು ವಿದ್ಯಾರ್ಥಿಗಳನ್ನು ಫೇಲ್ ಮಾಡಿ ಅವರಿಗೆ ಫಾರ್ಮ್ 17 ತುಂಬಿಸಿ ಅವರನ್ನು ಖಾಸಗಿಯಾಗಿ ಪರೀಕ್ಷೆಗೆ ಕೂರಲು ಹೇಳುತ್ತಿದ್ದಾರೆ. ಕೆಲಸಮಯದ ಹಿಂದೆ ಶಿಕ್ಷಣ ವಿಭಾಗವು ಒಂದು ಜಿ.ಆರ್. ಜಾರಿಗೊಳಿಸಿತ್ತು. ಇದರಂತೆ ಶಾಲೆಗಳಿಗೆ ಒಂಬತ್ತನೆ ತರಗತಿಯಲ್ಲೂ ಶೇ.ನೂರು ಫಲಿತಾಂಶ ಇರಬೇಕು ಎಂದು ಸಲಹೆ ನೀಡಿತ್ತು. ಒಂದು ವೇಳೆ 9ನೆ ತರಗತಿಯಲ್ಲಿ ಯಾವ ವಿದ್ಯಾರ್ಥಿಯಾದರೂ ಫೇಲ್ ಆದರೆ ಆ ವಿದ್ಯಾರ್ಥಿಯನ್ನು ಅದೇ ವರ್ಷ ಜುಲೈ ತಿಂಗಳಲ್ಲಿ ಪುನಃ ಪರೀಕ್ಷೆಗೆ ಕೂರಿಸಿ ಒಂದು ವರ್ಷವನ್ನು ಉಳಿಸಬೇಕು ಎಂದಿತ್ತು.

 ಇತ್ತೀಚಿನ ನಾಗಪುರ ಅಧಿವೇಶನದಲ್ಲೂ ಪ್ರಮುಖ ಕಾರ್ಯದರ್ಶಿಯವರು ಬೈಠಕ್ ಕರೆದಿದ್ದರು. ಆವಾಗ ಮುಖ್ಯಮಂತ್ರಿಯವರು ಎಲ್ಲಾ ಶಾಲೆಗಳಿಗೆ ಮಾಧ್ಯಮಿಕ ಸ್ತರದ ಡ್ರಾಪ್ ಔಟ್ ಕಡಿಮೆ ಮಾಡಲು ಆದೇಶ ನೀಡಿದ್ದರು. ಕಳೆದ ವರ್ಷ ಆಗಸ್ಟ್ - ಸೆಪ್ಟಂಬರ್‌ನಲ್ಲಿ ಸರ್ವೇ ನಡೆಸಿ 9ನೆ ಮತ್ತು 10ನೆ ತರಗತಿಯ ವಿದ್ಯಾರ್ಥಿಗಳ ಡೇಟಾ ಜಮಾ ಮಾಡಲಾಗಿತ್ತು. ಈ ಸರ್ವೇಯ ಪ್ರಕಾರ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಮುಂಬೈಯ ಒಟ್ಟು 115 ಶಾಲೆಗಳಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮಾರ್ಚ್ 2015ರಲ್ಲಿ 9ನೆ ಪರೀಕ್ಷೆಯಲ್ಲಿ ಫೇಲ್ ಮಾಡಲಾಗಿತ್ತು. ಈ ಬಗ್ಗೆ ಮರುಪರೀಕ್ಷೆ ನಡೆಸಿ ಒಂದು ವರ್ಷ ಉಳಿಸುವಂತೆ ಪ್ರಾಂಶುಪಾಲರಿಗೆ ಹೇಳಲಾಗಿತ್ತು. ಅನಂತರ ಶಿಕ್ಷಣ ವಿಭಾಗದಿಂದ ಅಕ್ಟೋಬರ್‌ನಲ್ಲಿ ಎಲ್ಲಾ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ಕಳುಹಿಸಲಾಗಿತ್ತು. ಒಂಬತ್ತನೆ ತರಗತಿಯಲ್ಲಿ ಇಷ್ಟು ಮಕ್ಕಳು ಫೇಲ್ ಆಗಲು ಕಾರಣವೇನು? ಎಂದು ಅದರಲ್ಲಿ ಕೇಳಲಾಗಿತ್ತು. ಒಂಬತ್ತನೆ ತರಗತಿಯಲ್ಲಿ ಇಷ್ಟೊಂದು ವಿದ್ಯಾರ್ಥಿಗಳು, ಫೇಲ್ ಆಗಿದ್ದರೆ ಹತ್ತನೆ ತರಗತಿಯ ಫಲಿತಾಂಶ ಇಷ್ಟು ಏರಿದ್ದಕ್ಕೆ ಏನು ಕಾರಣ ಎಂದು ಶಿಕ್ಷಣ ವಿಭಾಗ ಕೆಲವು ಶಾಲೆಗಳ ಪ್ರಾಂಶುಪಾಲರನ್ನು ಕೇಳಿತ್ತು ಎಂದಿದ್ದಾರೆ ಚವ್ಹಾಣ್.

ಒಂಬತ್ತನೆ ತರಗತಿಯ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಫೇಲ್ ಮಾಡಬೇಡಿ. ಹತ್ತನೆ ತರಗತಿಯ ವಿದ್ಯಾರ್ಥಿಗಳ ಕುರಿತು ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟೇ ಕಾಳಜಿ ಒಂಬತ್ತನೆ ತರಗತಿಯ ವಿದ್ಯಾರ್ಥಿಗಳಿಗೂ ನೀಡಬಾರದೇಕೆ? ಒಂಬತ್ತನೆ ವಿದ್ಯಾರ್ಥಿಗಳ ಪರೀಕ್ಷೆ ಅದು ಗೃಹಪರೀಕ್ಷೆಯಾಗಿದೆ. ಹತ್ತನೆಯದು ಪಬ್ಲಿಕ್ ಪರೀಕ್ಷೆ. ಒಂದು ರೀತಿಯಲ್ಲಿ ಒಂಬತ್ತನೆ ತರಗತಿಯ ಫಲಿತಾಂಶ ಹತ್ತನೆ ತರಗತಿಗಿಂತ ಉತ್ತಮ ಆಗಿರಬೇಕು. ಯಾಕೆ ಆಗುತ್ತಿಲ್ಲ? ಯಾಕೆಂದರೆ ಶಾಲಾ ಪ್ರಾಂಶುಪಾಲ ಹಾಗೂ ಶಿಕ್ಷಕರಿಗೆ ಹತ್ತನೆ ತರಗತಿಯ ಶೇ. ನೂರು ಫಲಿತಾಂಶದ ಮಂಡೆ ಬಿಸಿ! ಹೀಗೆಯೇ ಮುಂದುವರಿದರೆ ಈ ಫೇಲಾದ ಮಕ್ಕಳು ತಪ್ಪುದಾರಿ ಹಿಡಿಯುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಹೀಗಾಗಿ 9ನೆ ತರಗತಿಯ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಶಿಕ್ಷಕರ ಜವಾಬ್ದಾರಿಯಾಗಿದೆ.

ಆದರೆ ಟೀಚರ್ ಡೆಮೋಕ್ರೆಟಿಕ್ ಫ್ರಂಟ್‌ನ ಉಪಾಧ್ಯಕ್ಷ ರಾಜೇಶ್ ಪಾಂಡ್ಯ ಅವರು 9ನೆ ತರಗತಿಯಲ್ಲಿ ಕೆಲವು ವಿದ್ಯಾರ್ಥಿಗಳನ್ನು ಉದ್ದೇಶ ಪೂರ್ವಕವಾಗಿ ಫೇಲ್ ಮಾಡುವುದಿಲ್ಲ ಶಿಕ್ಷಕರು. ಅವರು 10ನೆ ತರಗತಿಯಂತೆಯೇ ಒಂಬತ್ತನೆ ತರಗತಿಯ ಮಕ್ಕಳಿಗೂ ಕಲಿಸುತ್ತಾರೆ. ಆದರೆ 8ನೆ ತರಗತಿ ತನಕ ಸಿಲೆಬಸ್ ಸುಲಭವಿದೆ. 9ನೆ ತರಗತಿಯ ಸಿಲೆಬಸ್ ಕಷ್ಟವಿದೆ, ದೀರ್ಘವಿದೆ. ಹೀಗಾಗಿ 8ರ ತನಕ ಆರಾಮವಾಗಿ ಪಾಸಾದ ಅನೇಕ ವಿದ್ಯಾರ್ಥಿಗಳಿಗೆ 9ನೆ ತರಗತಿಯ ಪಾಠಗಳು ಸಹಜವಾಗಿಯೇ ಕಷ್ಟವಾಗುತ್ತಿದೆ. ಹೀಗಾಗಿ ಶಿಕ್ಷಣ ಇಲಾಖೆಯ ಆರೋಪ ತಪ್ಪು ಎನ್ನುತ್ತಾರೆ.

............................

ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನ ಭಾರ ಎಷ್ಟಿರಬೇಕು?

 ಕಳೆದ ವರ್ಷ ಜುಲೈಯಲ್ಲಿ ಮಹಾರಾಷ್ಟ್ರ ಸರಕಾರವು ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನ ಭಾರ ವಿದ್ಯಾರ್ಥಿಯ ತೂಕದ ಶೇ. 10 ಕ್ಕಿಂತ ಅಧಿಕ ಇರಬಾರದು ಎಂದು ಜಿ.ಆರ್. ಹೊರಡಿಸಿದೆ. ಆದರೆ ಇದನ್ನು ಕಟ್ಟುನಿಟ್ಟಾಗಿ ಯಾರೂ ಪಾಲಿಸುತ್ತಿಲ್ಲ ಎಂದು ಇತ್ತೀಚೆಗೆ ಶಿಕ್ಷಣದ ಉಪನಿರ್ದೇಶನಾಲಯ ಕೈಗೊಂಡ ತನಿಖೆಯಲ್ಲಿ ತಿಳಿದುಬಂದಿದೆ. ಈ ತನಿಖೆಯಲ್ಲಿ ಶಹರದ ಶೇ.35 ರಷ್ಟು ವಿದ್ಯಾರ್ಥಿಗಳ ಬ್ಯಾಗ್‌ನ ಭಾರವು ಅವರ ಶರೀರದ ಭಾರಕ್ಕಿಂತ ಶೇ.10 ಕ್ಕಿಂತಲೂ ಅಧಿಕವಿತ್ತು. ಮೀಡಿಯಾದ ವರದಿಯಂತೆ 212 ಶಾಲೆಗಳಲ್ಲಿನ 4,569 ವಿದ್ಯಾರ್ಥಿಗಳಲ್ಲಿ 1,394 ವಿದ್ಯಾರ್ಥಿಗಳ ಬ್ಯಾಗ್‌ನ ಭಾರ ನಿರ್ಧಾರಿತ ಸೀಮೆಗಿಂತ ಹೆಚ್ಚಿಗೆ ಇತ್ತು. ಈ ತನಿಖೆಯನ್ನು ಸರಕಾರವು ಬಾಂಬೆ ಹೈಕೋರ್ಟ್ ತರಾಟೆಗೆ ಎಳೆದ ನಂತರ ಕೈಗೊಂಡಿತ್ತು. ಬಾಂಬೆ ಹೈಕೋರ್ಟ್‌ನಲ್ಲಿ ಈ ಬಗ್ಗೆ ಜನಹಿತ ಅರ್ಜಿ ದಾಖಲಿಸಿದ ಅರ್ಜಿದಾರರಾದ ಸ್ವಾತಿ ಪಾಟೀಲ್ ಹೇಳುತ್ತಾರೆ. ಇತ್ತೀಚೆಗೆ ಶಾಲಾ ಬ್ಯಾಗ್‌ಗಳ ತೂಕದ ತನಿಖೆ ನಡೆಸಿದ್ದು, ಅದು ತನಿಖೆಗೆ ಸರಿಯಾದ ಸಮಯ ಆಗಿರಲಿಲ್ಲ. ಯಾಕೆಂದರೆ ಈ ದಿನಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಹಾಗೂ ಶಾಲಾ ಮಕ್ಕಳ ಬ್ಯಾಗ್ ಕಡಿಮೆ ಭಾರ ಇರುವುದು ಸಹಜವೇ ಆಗಿದೆ. ಈ ತನಿಖೆ ಬಹಳ ಮೊದಲೇ ಮಾಡಬೇಕಾಗಿತ್ತು. ಆಗ ನಿಜವಾದ ದೃಶ್ಯ ಕಾಣಬಹುದಿತ್ತು ಎಂದಿದ್ದಾರೆ. ರಾಜ್ಯ ಸರಕಾರವು ಕೋರ್ಟ್‌ನಲ್ಲಿ 44 ಸಲಹೆಗಳನ್ನು ನೀಡಿತ್ತು. ಅದು ಕೇವಲ ಶಾಲೆಗಳು ಮತ್ತು ಪಾಲಕರಿಗೆ ಸಂಬಂಧಿಸಿತ್ತು. ಇದರಲ್ಲಿ ರಾಜ್ಯ ಸರಕಾರದ ಸ್ವತಃ ತನ್ನದೇ ಪಾತ್ರ ಎಲ್ಲೂ ನಿಶ್ಚಿತವಾಗಿರಲಿಲ್ಲ. ಹೀಗಾಗಿ ನಾನು ಕೋರ್ಟ್‌ಗೆ ಹೋದೆ. ಸರಕಾರದ ಪಾತ್ರ ಏನು ಅನ್ನುವುದು ಸ್ಪಷ್ಟವಾಗಬೇಕಿದೆ. ಹಲವು ಶಾಲೆಗಳು ನಿಯಮ ಪಾಲಿಸುವುದಿಲ್ಲ. ಇಲ್ಲಿ ದೂರನ್ನು ಯಾರಿಗೆ ನೀಡಬೇಕು? ಎನ್ನುವುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ ಸ್ವಾತಿ.

............................

ನಾಲ್ಕು ವರ್ಷಗಳಲ್ಲಿ 22 ಹುಲಿ, 29 ಚಿರತೆಗಳ ಸಾವು

ಮಹಾರಾಷ್ಟ್ರದ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ 22 ಹುಲಿಗಳು ಮತ್ತು 29 ಚಿರತೆಗಳು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿವೆ.
ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದವರು ಹೀಗೆಂದು ಆರೋಪಿಸಿದ್ದಾರೆ. ಜನವರಿ ತಿಂಗಳಲ್ಲಿ ಚಂದ್ರಪುರದಲ್ಲಿ 3 ಚಿರತೆಗಳು ಸಾವನ್ನಪ್ಪಿದರೆ ನಂತರ ಅಲ್ಲಿನ ಕೆರೆಯೊಂದರ ಪಕ್ಕದಲ್ಲಿ ಹುಲಿ ಮರಿಗಳು ಸತ್ತುಬಿದ್ದು ದೊಡ್ಡ ಚರ್ಚೆ ಹುಟ್ಟಿಸಿತ್ತು. ಅರಣ್ಯ ಮಂತ್ರಿ ಸುಧೀರ್ ಮುನ್‌ಗಂಟೀವಾರ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಸರಕಾರವು ವಿಶೇಷ ಹುಲಿ ಸುರಕ್ಷಾ ತಂಡವನ್ನು ರಚನೆ ಮಾಡಿದ್ದು, ಅಕ್ರಮ ಶಿಕಾರಿಗೆ ತಡೆ ನೀಡುವಲ್ಲಿ ಪರಿಣಾಮಕಾರಿ ರಣನೀತಿ ರಚಿಸಿದೆ. ವಿಶೇಷ ಟಾಸ್ಕ್ ಫೋರ್ಸ್ ಸ್ಥಾಪನೆಯ ನಂತರ ಯಾವುದೇ ಶಿಕಾರಿಯ ಘಟನೆ ವರದಿಯಾಗಿಲ್ಲ ಎಂದಿದ್ದಾರೆ.

ಎಸ್.ಟಿ.ಎಫ್. ತಂಡವು ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಡೆ ನಿಗಾ ಇರಿಸಿದೆ. ಮಹತ್ವಪೂರ್ಣ ನಾಕಾಗಳಲ್ಲಿ ತನಿಖಾ ಚೌಕಿಗಳನ್ನು ಇರಿಸಿದೆ. 2,100 ರಷ್ಟು ಸಿಸಿಟಿವಿ ಕ್ಯಾಮರಾ, 124 ಬೇಸ್ ಸ್ಟೇಷನ್, ಮೆಟಲ್ ಡಿಟೆಕ್ಟರ್ ತಾಗಿಸಲಾಗಿದೆ ಎಂದೂ ಅರಣ್ಯ ಮಂತ್ರಿ ಹೇಳಿದ್ದಾರೆ.

............................

ಫಡ್ನವೀಸ್- ರತನ್ ಟಾಟಾ ನಡುವೆ ಒಪ್ಪಂದ

ಮಹಾರಾಷ್ಟ್ರ ಸರಕಾರ ಮತ್ತು ಟಾಟಾ ಟ್ರಸ್ಟ್‌ನ ನಡುವೆ ಒಂಬತ್ತು ಒಪ್ಪಂದಗಳು ಇತ್ತೀಚೆಗೆ ನಡೆದಿವೆ. ಈ ಒಪ್ಪಂದಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಟಾಟಾ ಟ್ರಸ್ಟ್‌ನ ರತನ್ ಟಾಟಾ ಸಹಿ ಹಾಕಿದ್ದಾರೆ. ಈ ಒಪ್ಪಂದದಂತೆ ಜೈಲ್‌ಗಳ ಕೈದಿಗಳಿಗೆ ಕಾನೂನು ಸಲಹೆ, ಶಾರೀರಿಕ, ಮಾನಸಿಕ, ಆರೋಗ್ಯ ಸೇವೆ ಮತ್ತು ಕೌಶಲ್ಯ ಆಧಾರಿತ ತರಬೇತಿ ನೀಡಲಾಗುವುದು. ಮೊದಲ ಹಂತದಲ್ಲಿ ಮಹಾರಾಷ್ಟ್ರದ ಐದು ಜೈಲುಗಳಲ್ಲಿ 10 ಸಾವಿರ ಕೈದಿಗಳಿಗೆ ಮತ್ತು ಅವರ ಪರಿವಾರಕ್ಕೆ ಈ ಸೌಲಭ್ಯ ಒದಗಿಸಲಾಗುವುದು.
ಇದಲ್ಲದೆ ಮೆಡಿಕಲ್ ಕಾಲೇಜ್‌ನ ಮಾಧ್ಯಮದಿಂದ ಆರೋಗ್ಯ ಸೇವೆ, ವಿಟಮಿನ್ ಆಹಾರಗಳ ಪೂರೈಕೆ, ಶಿಕ್ಷಣದಲ್ಲಿ ಗುಣಮಟ್ಟದ ಹೆಚ್ಚಳ, ಡಿಜಿಟಲ್ ತರಬೇತಿಯ ಮಾಧ್ಯಮದಿಂದ ಮಹಿಳಾ ಸಶಕ್ತೀಕರಣ, ಜೈಲ್ ಆಡಳಿತದಲ್ಲಿ ಸುಧಾರಣೆ ಇತ್ಯಾದಿಗಳು ಸೇರಿವೆ.

............................

ಜೂ.30ರ ತನಕ ಪ್ಲಾಸ್ಟಿಕ್ ಬಾಟಲಿಯಲ್ಲಿ ಶರಾಬು ಮಾರಾಟ

ಮುಂಬೈಯಲ್ಲಿ ಶರಾಬು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮಾರಬಾರದು ಎಂದು ಎಪ್ರಿಲ್ ಒಂದರಿಂದ ಜಾರಿಗೆ ಬಂದಿರುವ ಸರಕಾರಿ ಆದೇಶದ ಮೇಲೆ ಜೂನ್ 30ರ ತನಕ ತಡೆ ಹೇರಿದೆ. ಈ ತಡೆಯಿಂದಾಗಿ ಜೂನ್ 30ರ ತನಕ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಶರಾಬು ಸಿಗಬಹುದಾಗಿದೆ.

ಪ್ಲಾಸ್ಟಿಕ್ ಬಾಟಲಿಗಳನ್ನು ತಯಾರಿಸುವ ಡಿಸ್ಟಿಲರ್ಸ್ ಅಸೋಸಿಯೇಶನ್‌ನ ವತಿಯಿಂದ ಈ ಸರಕಾರಿ ಆದೇಶದ ವಿರುದ್ಧ ಮುಂಬೈ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿತ್ತು. ಇದನ್ನು ವಿಚಾರಣೆಗೆ ತೆಗೆದುಕೊಂಡ ಮುಖ್ಯ ನ್ಯಾಯಾಧೀಶ ಡಿ.ಎಚ್. ಬಾಘೆಲಾ ಮತ್ತು ನ್ಯಾಯಾಧೀಶ ಎಂ.ಎಸ್. ಸೋನಕ್ ಅವರು ಹೇಳಿದಂತೆ ಜೂನ್ 30ರ ತನಕ ತಡೆ ಹೇರಿದರೂ ಆ ತಾರೀಕಿನ ಒಳಗೆ ಪ್ಲಾಸ್ಟಿಕ್ ಬಾಟಲಿಗಳನ್ನು ರಿಸೈಕ್ಲಿಂಗ್ ಮಾಡುವ ವ್ಯವಸ್ಥೆ ಕಾಣಿಸಬೇಕು ಎಂದಿದ್ದಾರೆ.

ಪ್ಲಾಸ್ಟಿಕ್ ಬಾಟಲಿಗಳು ಪರಿಸರ ಮತ್ತು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಸರಕಾರ ತಯಾರಿಸಿದ ನಿಯಮಗಳನ್ನು ಪಾಲನೆ ಮಾಡಬೇಕೆಂದು ಡಿಸ್ಟಿಲರ್ಸ್ ಅಸೋಸಿಯೇಶನ್‌ಗೆ ಆದೇಶಿಸಲಾಗಿದೆ. ಈ ಬಗ್ಗೆ ಮುಂದಿನ ವಿಚಾರಣೆ ಜೂನ್ 14 ರಂದು ನಡೆಯಲಿದೆ. 20 ಶೇಕಡಾ ಶರಾಬು ಈಗಲೂ ಪ್ಲಾಸ್ಟಿಕ್ ಬಾಟಲಿಗಳಲ್ಲೇ ಮಾರಲಾಗುತ್ತಿದೆ.

............................

ಒಂದು ವರ್ಷದಲ್ಲಿ 40 ಡಾಕ್ಟರ್‌ಗಳ ಮೇಲೆ ಹಲ್ಲೆ

ಮಹಾನಗರ ಪಾಲಿಕೆ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಬಂಧುಗಳಿಂದ ಡಾಕ್ಟರ್‌ಗಳ ಮೇಲಿನ ಹಲ್ಲೆಯ ಘಟನೆಗಳು ನಿಲ್ಲುವ ಲಕ್ಷಣಗಳಿಲ್ಲ. (ಕೆಲ ಸಮಯದ ಹಿಂದೆ ಡಾಕ್ಟರ್‌ಗಳು ಬೈಕ್ ರ್ಯಾಲಿ ನಡೆಸಿ ತಮಗೆ ರಕ್ಷಣೆ ಬೇಕು ಎಂದು ಹೇಳಿದ್ದನ್ನು ಗಮನಿಸಬಹುದು.)

ಇದೀಗ ಮಹಾನಗರ ಪಾಲಿಕೆಯ ಸಯನ್ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಮೇಲೆ ರೋಗಿಯ ಕುಟುಂಬದವರು ಹಲ್ಲೆ ನಡೆಸಿದ ಘಟನೆ ಮತ್ತೆ ಚರ್ಚೆಯಾಗಿದೆ. 79 ವರ್ಷದ ಒಬ್ಬ ಮಹಿಳೆಯನ್ನು ಸಯನ್ ಆಸ್ಪತ್ರೆಗೆ ಭರ್ತಿಗೊಳಿಸಲಾಗಿತ್ತು. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದರು. ಇದರಿಂದ ಹಲ್ಲೆ ಘಟನೆ ನಡೆದು ಡ್ಯೂಟಿ ಡಾಕ್ಟರ್ ಡಾ. ದೇಸಾಯಿ ಅವರ ಮುಖಕ್ಕೆ ಗಾಯವಾಯಿತು. ಡಾಕ್ಟರ್‌ಗಳ ಮೇಲಿನ ಹಲ್ಲೆಯು ಈ ವರ್ಷದ 6ನೆ ಘಟನೆ ಇದಾಗಿದೆ. ಮಹಾರಾಷ್ಟ್ರ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ (ಮಾರ್ಡ್) ಅಧ್ಯಕ್ಷ ಡಾ. ಸಾಗರ್ ಮುದಲಾ ಅವರು ಹೇಳುವಂತೆ ಒಂದು ವರ್ಷದಲ್ಲಿ ಡಾಕ್ಟರ್‌ಗಳ ಮೇಲೆ ಇದು 40 ನೆ ಹಲ್ಲೆಯಾಗಿದೆ. ಇದು ಬಹಳ ದುಃಖದ ಸಂಗತಿಯಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದಂತೆ ಡಾಕ್ಟರ್‌ಗಳ ಸಂಖ್ಯೆ ಕಡಿಮೆ ಆಗುತ್ತದೆ. ಇದೂ ಇಂತಹ ಘಟನೆಗಳಿಗೆ ಒಂದು ಕಾರಣವಾಗಿದೆ. ಇಲ್ಲಿ ರೋಗಿಯ ಶುಶ್ರೂಷೆಗೆ ತಡವಾಗುತ್ತದೆ ಎಂದಿದ್ದಾರೆ.

............................

ಶಾಲೆಗೆ ಹೋಗದ ಮಕ್ಕಳನ್ನು ತೋರಿಸಿ, ಒಂದು ಸಾವಿರ ರೂ. ಪುರಸ್ಕಾರ ಪಡೆಯಿರಿ
ಶಾಲೆಗೆ ಹೋಗದ ಯಾರಾದರೂ ಮಕ್ಕಳಿದ್ದರೆ ತೋರಿಸಿರಿ ಮತ್ತು ಒಂದು ಸಾವಿರ ರೂಪಾಯಿ ಪುರಸ್ಕಾರ ಪಡೆಯಿರಿ ಇದು ಮಹಾರಾಷ್ಟ್ರದ ಶಿಕ್ಷಣ ಮಂತ್ರಿಯವರ ಹೊಸ ಸ್ಲೋಗನ್. ಶಿಕ್ಷಣ ಮಂತ್ರಿ ವಿನೋದ್ ತಾವ್ಡೆ ಅವರು ಹೇಳಿದಂತೆ ಈ ಪುರಸ್ಕಾರ ಹಣವನ್ನು ಶಿಕ್ಷಣ ಮಂತ್ರಿ ಮತ್ತು ಜಿಲ್ಲಾ-ತಾಲೂಕು ಶಿಕ್ಷಣ ಅಧಿಕಾರಿಯ ವೇತನದಿಂದ ಕಳೆದು ನೀಡಲಾಗುವುದು ಎಂದು ವಿಧಾನ ಪರಿಷತ್‌ನಲ್ಲಿ ಹೇಳಿದ್ದಾರೆ.

ಶಾಲೆಗೆ ತೆರಳದೆ ಮನೆಯಲ್ಲೇ ಕುಳಿತುಕೊಂಡಿರುವ ಮಕ್ಕಳ ಸಂಖ್ಯೆ ಪತ್ತೆ ಹಚ್ಚುವುದಕ್ಕೆ ಆಗಾಗ ಸಮೀಕ್ಷೆ ಸರಕಾರ ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಎರಡು ಸಲ ಮಹತ್ವಪೂರ್ಣ ಸಮೀಕ್ಷೆ ನಡೆಸಲಾಗುವುದು. ಅನಂತರವೇ ಈ ಪುರಸ್ಕಾರ ಯೋಜನೆ ಆರಂಭಿಸಲಿದ್ದಾರೆ. ಸರ್ವ ಶಿಕ್ಷಣ ಅಭಿಯಾನದಂತೆ 6 ರಿಂದ 14 ವರ್ಷದವರೆಗೆ ಪ್ರತೀ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಸಿಗಬೇಕು. ಈ ಬಗ್ಗೆ ರಾಜ್ಯದಿಂದ ಹಿಡಿದು ಕೇಂದ್ರ ಸರಕಾರದ ತನಕ ನಿಗಾ ಇರಿಸಲಾಗಿದೆ.

4 ಜುಲೈ 2015 ರಂದು ರಾಜ್ಯದಲ್ಲಿ ವ್ಯಾಪಕ ಸಮೀಕ್ಷೆ ನಡೆಸಲಾಗಿತ್ತು. ಜುಲೈ 2015 ರ ತನಕ 54,648 ವಿದ್ಯಾರ್ಥಿಗಳು ಶಾಲೆಯ ಹೊರಗಿರುವುದು ತಿಳಿದು ಬಂದಿತ್ತು. ಅನಂತರ 15 ಜನವರಿಯಿಂದ 30 ಜನವರಿ 2016 ರಲ್ಲಿ ಸಮೀಕ್ಷೆ ನಡೆಸಿದಾಗ 15,712 ಮಕ್ಕಳು ಶಾಲೆಯ ಹೊರಗೆ ಇರುವುದು ತಿಳಿದು ಬಂತು. ರಾಜ್ಯದಲ್ಲಿ ಕಂಡು ಬಂದಿದ್ದ 74,971 ವಿದ್ಯಾರ್ಥಿಗಳಲ್ಲಿ 49,339 ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ನೀಡಲಾಗಿದೆ. ಈ ಮಕ್ಕಳ ಆಧಾರ್ ಕಾರ್ಡ್ ಮಾಡಿಸಿ ಸರಳ ಕ್ರಮಾಂಕ ನೀಡಲಾಗಿದೆ. ಇವರಿಗೆ ಎಜ್ಯುಕೇಶನ್ ಗ್ಯಾರಂಟಿ ಕಾರ್ಡ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News