ಭಾಜಪದ ಅಧ್ಯಕ್ಷರಾಗಿ ಯಡಿಯೂರಪ್ಪ

Update: 2016-04-14 17:47 GMT

ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾಪಕ್ಷದ ಮುಂಚೂಣಿಯ ನಾಯಕರಾಗಿ ಹೊರಹೊಮ್ಮುವ ತನಕವೂ ಭಾಜಪ ನಂಬಿದ್ದ ಘೋಷಣೆಯೊಂದೆ ಅದು: ಪಾರ್ಟಿ ವಿತ್ ಡಿಫರೆನ್ಸ್ (ವಿಭಿನ್ನ ನಿಲುವಿನ ಪಕ್ಷ!). ಆದರೆ ತದನಂತರದ ಬೆಳವಣಿಗೆಗಳಲ್ಲಿ ಇಂತಹ ಘೋಷಣೆಗಳು ಲ ಕೊಡುವುದು ಕಷ್ಟವೆಂದು ಗೊತ್ತಾದ ತಕ್ಷಣ ಅದು ಮೋದಿಯವರನ್ನು ಅವರ ರಾಜ್ಯ ಗುಜರಾತನ್ನು ರಾಷ್ಟ್ರದ ಅಭಿವೃದ್ಧಿಯ ಸಂಕೇತವಾಗಿ ಬಿಂಬಿಸುತ್ತ ಅವುಗಳ ಸುತ್ತಲೇ ತನ್ನ ಪ್ರಭಾವಳಿಯನ್ನು ಬೆಳೆಸಿಕೊಳ್ಳುತ್ತಾ ಹೋಯಿತು. 2014ರ ಲೋಕಸಭೆಯ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಅಕಾರ ಹಿಡಿದ ನಂತರ ಭಾಜಪದ ವರಸೆಯೇ ಬದಲಾಗಿ ಹೋಯಿತು. ಪಾರ್ಟಿ ವಿತ್ ಡಿಫರೆನ್ಸ್ ಬದಲಾಗಿ ಪಾರ್ಟಿ ವಿತ್ ಇಂಟೆನ್ಷನ್ ಎಂದಾಯಿತು. ಯುಪಿಎ ಸರಕಾರದ ಭ್ರಷ್ಟಾಚಾರಗಳ ಬಗ್ಗೆ ಭಾರೀ ದೊಡ್ಡ ಧ್ವನಿಯಲ್ಲಿ ಕೂಗಾಡಿಯೇ ಅಕಾರದ ಗದ್ದುಗೆ ಹಿಡಿದ ಭಾಜಪ ತನ್ನ ಪಕ್ಷದೊಳಗಿನ ಭ್ರಷ್ಟಾಚಾರದ ಬಗ್ಗೆ ಜಾಣ ಮೌನ ತಳೆಯಿತು. 2004ರವರೆಗೂ ವಾಜಪೇಯಿಯವರ ಸರಕಾರದಲ್ಲಿ ಮಂತ್ರಿಯಾಗಿದ್ದ ಅನಂತ್‌ಕುಮಾರ್ ಅವರ ಸಾವಿರಾರು ಕೋಟಿ ರೂಪಾಯಿಗಳ ಹುಡ್ಕೊ ಹಗರಣದ ಬಗ್ಗೆಯಾಗಲಿ, ಮಧ್ಯಪ್ರದೇಶದಲ್ಲಿ ನಡೆದ ವ್ಯಾಪಂ ಹಗರಣದ ಬಗ್ಗೆಯಾಗಲಿ ಭಾಜಪ ಯಾವತ್ತಿಗೂ ಸ್ಪಷ್ಟವಾದ ತನ್ನ ನಿಲುವನ್ನು ಬಹಿರಂಗ ಪಡಿಸಲೇ ಇಲ್ಲ. ಭಾಜಪದ ಇಂತಹ ಇಬ್ಬಂದಿತನದ ನೀತಿ ಇದೀಗ ಮತ್ತೊಮ್ಮೆ ಸಾಬೀತಾಗಿದೆ.

 ಕರ್ನಾಟಕದ ಭಾರತೀಯ ಜನತಾಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ತಾನು ಸಹ ಉಳಿದ ರಾಜಕೀಯ ಪಕ್ಷಗಳ ರೀತಿಯ ಸಮಯಸಾಧಕ ಪಕ್ಷವೇ ಹೊರತು, ತನ್ನದೇನು ಪಾರ್ಟಿ ವಿತ್ ಡಿಫರೆನ್ಸ್ ಅಲ್ಲ ಎಂದು ತೋರಿಸಿಕೊಂಡಿದೆ. ಇದರಿಂದ ಭಾಜಪ ತನ್ನ ಬಣ್ಣವನ್ನು ತಾನೇ ಬಯಲು ಮಾಡಿಕೊಂಡಿದೆ. ವಾಸ್ತವದಲ್ಲಿ ಭಾಜಪ ಉಳಿದ ರಾಜಕೀಯ ಪಕ್ಷಗಳಿಗಿಂತ ಯಾವುದೇ ವಿಷಯದಲ್ಲೂ ಭಿನ್ನವೇನೂ ಅಲ್ಲ. ಆದರೆ ಅದರ ಅಬ್ಬರದ ಪ್ರಚಾರ, ತಾನು ಮಾತ್ರ ದೇಶಭಕ್ತವೆಂದು ಮಾಡಿಕೊಂಡ ಅಬ್ಬರದಪ್ರಚಾರ ಜನತೆಯನ್ನು ಮರುಳುಗೊಳಿಸುವಲ್ಲಿ ಯಶಸ್ವಿಯಾಗಿಸಿತು. ಅದಕ್ಕೆ ಪೂರಕವಾಗಿ ಹಣಕ್ಕಾಗಿ ಮತ್ತು ಇನ್ನಿತರೇ ಸವಲತ್ತುಗಳಿಗಾಗಿ ತಮ್ಮನ್ನು ಮಾರಿಕೊಂಡ ಕೆಲ ಮಾಧ್ಯಮಗಳು ಭಾಜಪ ಮತ್ತು ಅದರ ನಾಯಕರಾದ ಮೋದಿಯವರನ್ನು ಅವತಾರ ಪುರುಷನೆಂಬಂತೆ ಬಿಂಬಿಸುತ್ತ 2014ರಲ್ಲಿ ಭಾಜಪ ಅಕಾರ ಹಿಡಿಯುವಲ್ಲಿ ಯಶಸ್ವಿಯಾಗುವಂತೆ ನೋಡಿಕೊಂಡವು. ಕರ್ನಾಟಕದಲ್ಲೂ ಅವರ ಇಂತಹ ಪ್ರಚಾರ ಸಾಕಷ್ಟು ಯಶಸ್ವಿಯಾಗಿದ್ದರ ಪರಿಣಾಮವಾಗಿ ಕಾಂಗ್ರೆಸ್‌ಗಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಪಡೆಯಿತು. 2008ರಿಂದ 2013ರವರೆಗೂ ಕರ್ನಾಟಕದಲ್ಲಿ ಅಕಾರ ಅನುಭವಿಸಿದ್ದ ಭಾಜಪ 2013ರಲ್ಲಿ ಕಂಡ ಸೋಲು ಅದಕ್ಕೊಂದು ಪಾಠವಾಗಲೇ ಇಲ್ಲ.ಕೇವಲ ನಮ್ಮ ಒಳಜಗಳಗಳಿಂದ ನಾವು ಸೋತೆವು ಎಂದು ಹೇಳಿಕೊಳ್ಳುತ್ತ ಬಂದ ಅದರ ನಾಯಕರುಗಳೆಂದೂ ಅಕಾರಾವಯಲ್ಲಿ ತಮ್ಮ ನಾಯಕರು ನಡೆಸಿದ ಭ್ರಷ್ಟಾಚಾರದ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪ ವ್ಯಕ್ತಪಡಿಸಲೇ ಇಲ್ಲ. ಇದೀಗ ಅದರ ಮುಂದುವರಿದ ಭಾಗವಾಗಿ ಮಾಜಿಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರನ್ನು ಭಾಜಪದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಇದರಿಂದ ಭಾಜಪದ ಪ್ರಾಮಾಣಿಕತೆಯ ಮುಖವಾಡ ಕಳಚಿಬಿದ್ದಿದೆ. ಜೊತೆಗೆ ಅದು ಇದುವರೆಗೂ ಪ್ರತಿಪಾದಿಸುತ್ತ ಬಂದ ಎರಡು ನೀತಿಗಳನ್ನು ಕೈಬಿಟ್ಟಿರುವುದು ಗೋಚರಿಸುತ್ತಿದೆ. 2014ರ ಮುಂಚೆ ಅದರ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಮತ್ತು ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು ಭಾಜಪ ಯಾವತ್ತಿಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಗಿ ವಿಚಾರಣೆಗಳು ನ್ಯಾಯಾಲಯದಲ್ಲಿ ಬಾಕಿ ಉಳಿಸಿಕೊಂಡಿರುವಂತಹ ಯಾವುದೇ ನಾಯಕರಿಗೂ ಮಣೆ ಹಾಕುವುದಿಲ್ಲ ಮತ್ತು ಅರವತ್ತೆದು ವರ್ಷಗಳ್ನು ದಾಟಿದವರಿಗೆ ಯಾವ ಉನ್ನತಾಕಾರವನ್ನೂ ನೀಡುವುದಿಲ್ಲವೆಂದು ಮತ್ತು ಅದನ್ನು ಸಾರ್ವಜನಿಕವಾಗಿ ಪಕ್ಷದ ನೀತಿಯೆಂಬಂತೆ ಘೋಷಣೆ ಮಾಡಿದ್ದರು. ಆದರೆ ಇದೀಗ ಯಡಿಯೂರಪ್ಪನವರನ್ನು ಕರ್ನಾಟಕ ಭಾಜಪದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ತನ್ನೆರಡೂ ನೀತಿಗಳಿಗದು ತಿಲಾಂಜಲಿಯಿಟ್ಟಿದೆ. 2018ರಲ್ಲಿ ಅಥವಾ ಅದಕ್ಕೂ ಮುಂಚೆ ನಡೆಯಬಹುದಾದ ರಾಜ್ಯಚುನಾವಣೆಗಳಲ್ಲಿ ಅಕಾರ ಹಿಡಿಯುವ ಏಕೈಕ ಉದ್ದೇಶದಿಂದ ಅದು ಈ ನಿರ್ಣಯ ಕೈಗೊಂಡಿದೆಯೆಂದರೆ ತಪ್ಪಾಗಲಾರದು. ಅಲ್ಲಿಗೆ ಒಂದು ವಿಷಯ ಸ್ಪಷ್ಟವಾದಂತಾಯಿತು: ಅದು ಅಕಾರವನ್ನು ಹಿಡಿಯಲು ಯಾವುದೇ ರಾಜಿ ಮಾಡಿಕೊಳ್ಳಲು ತಯಾರಾಗಿರುವ ಒಂದು ಪಕ್ಷವೇ ಹೊರತು ತಾನು ಹೇಳಿಕೊಂಡಂತೆ ಪಾರ್ಟಿ ವಿತ್ ಡಿಫರೆನ್ಸ್ ಅಲ್ಲ. ಅದಕ್ಕೆ ಲೇಖನದ ಮೊದಲಿಗೆ ನಾನು ಹೇಳಿದ್ದು. ಭಾಜಪ ಇವತ್ತು ಪಾರ್ಟಿ ವಿತ್ ಇಂಟನ್ಷನ್ ಎಂದು!

  ಇವತ್ತು ಯಡಿಯೂರಪ್ಪನವರು ಬಹುತೇಕ ಆರೋಪಗಳಿಂದ ಮುಕ್ತರಾಗಿ ಹೊರಬಂದಿರಬಹುದು. ಆದರೆ ಶಿವಮೊಗ್ಗದ ಕೆಲ ಪ್ರಕರಣಗಳಿನ್ನೂ ವಿಚಾರಣೆಯ ಹಂತದಲ್ಲಿವೆ. ಕಾನೂನಾತ್ಮಕವಾಗಿ ನೋಡಿದರೆ ನಮ್ಮ ದೇಶದ ಬಹುತೇಕ ರಾಜಕಾರಣಿಗಳ ಮೇಲಿನ ಆರೋಪಗಳು ಸೂಕ್ತ ಸಾಕ್ಷಾಧಾರಗಳಿಲ್ಲದೆ ನ್ಯಾಯಾಲಯದಿಂದ ಆರೋಪ ಮುಕ್ತರಾಗಿ ಹೊರಬಂದಿರುವುದನ್ನು ನಾವು ನೋಡಬಹುದು. ನಾಳೆ 2ಜಿ ಹಗರಣದ ರೂವಾರಿಗಳಾದ ರಾಜಾ ಮತ್ತು ಕನ್ನಿಮೋಳಿಯವರು ಸಹ ಆರೋಪಮುಕ್ತರಾಗಿ ಹೊರ ಬರಬಹುದು. ಹಾಗೆಂದು ಅವರು ಅಪರಾಧವನ್ನೇ ಎಸಗಿಲ್ಲವೆಂದು ಹೇಳಲಾಗುವುದಿಲ್ಲ. ರಾಜಕಾರಣವೆನ್ನುವುದು ಬರೀ ನೈತಿಕವಾದ ವ್ಯವಹಾರವಲ್ಲ. ಜನತೆಯ ಮಟ್ಟಿಗೆ ರಾಜಕಾರಣ ನೈತಿಕವಾಗಿಯೂ ಸರಿಯಿರಬೇಕಾದ ವಿಷಯವಾಗಿದೆ. ಈ ದೃಷ್ಟಿಯಿಂದ ನೋಡಿದರೆ ಯಡಿಯೂರಪ್ಪನವರು ಈಗಾಗಲೇ ಒಂದು ಬಾರಿ ಸೆರೆಮನೆವಾಸವನ್ನೂ ಅನುಭವಿಸಿ ಬಂದವರು. ಇವತ್ತು ಯಾರೇನೇ ಹೇಳಿದರು ನೈತಿಕವಾಗಿ ಅವರು ಭ್ರಷ್ಟ ರಾಜಕಾರಣಿಯೇ! ಆದರೆ ಭಾಜಪದ ಮಟ್ಟಿಗೆ ಅಕಾರವೇ ಸರ್ವಸ್ವವಾಗಿದ್ದು ಅದಕ್ಕಾಗಿ ಅವರು ಒಂದು ಬಲಿಷ್ಠ ಜನಾಂಗದ ಬೆಂಬಲ ಹೊಂದಿರುವ ಯಡಿಯೂರಪ್ಪನವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಕಳೆದುಕೊಂಡ ಕರ್ನಾಟಕವನ್ನು ಮತ್ತೆ ಗಳಿಸಲು ಹೊರಟಿದೆ.
 ಇಲ್ಲಿ ಎರಡು ಅಂಶಗಳನ್ನು ನಾವು ಗಮನಿಸಬೇಕು: ಒಂದು ಕರ್ನಾಟಕದ ಮಟ್ಟಿಗೆ ಇವತ್ತಿಗೂ ಭಾಜಪ ಮೇಲ್ಜಾತಿಗಳ ಪಕ್ಷವೇ ಆಗಿದೆ. ಬಹುಸಂಖ್ಯಾತ ಲಿಂಗಾಯತರನ್ನು ಓಲೈಸಲು ಅದು ಹೊರಟಿದೆ. ಅದ್ಯಾವತ್ತು ದಲಿತರಿಗಾಗಲಿ ಹಿಂದುಳಿದ ವರ್ಗದವರ ಕೈಗಾಗಲಿ ಅಕಾರ ನೀಡಲಾರದು. ಹಾಗೊಂದು ವೇಳೆ ಅದಕ್ಕೆ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ವಿಶ್ವಾಸವಿದ್ದುದೇ ಆಗಿದ್ದರೆ ದಲಿತ ನಾಯಕರಾದ ಗೋವಿಂದ ಕಾರಜೋಳ ಅವರನ್ನೊ ಇಲ್ಲ ಅರವಿಂದ ಲಿಂಭಾವಳಿಯವರನ್ನೊ ರಾಜ್ಯಾಧ್ಯಕ್ಷರನ್ನಾಗಿ ಮಾಡಬಹುದಿತ್ತು. ಜೊತೆಗೆ ಯಡಿಯೂರಪ್ಪನವರಿಲ್ಲದ ಭಾಜಪಕ್ಕೆ ಕರ್ನಾಟಕದಲ್ಲಿ ಅಸ್ತಿತ್ವವೂ ಇಲ್ಲವೆಂಬುದು ಸಹ ಅದಕ್ಕೆ ಮನವರಿಕೆಯಾಗಿದೆ.

ಈ ದಿಸೆಯಲ್ಲಿಯೇ ಭಾಜಪದ ನಿಜಬಣ್ಣ ಬಯಲಾಗಿದೆಯೆಂದು, ಅದು ಮೊದಲಿಗೆ ಹೇಳಿದ ಭ್ರಷ್ಟಾಚಾರದ ವಿರುದ್ಧ ಹೋರಾಟವಾಗಲಿ, ಇಲ್ಲ ಈ ತಲೆಮಾರಿನವರಿಗೆ ಅಕಾರವೆಂಬುದಾಗಲಿ ಎಲ್ಲವೂ ಬೊಗಳೆಯೆಂದು ನಾನು ಹೇಳಿದ್ದು. ಜೊತೆಗೆ ಅದಕ್ಕೆ ದಲಿತ ನಾಯಕರಾಗಲಿ, ಹಿಂದುಳಿದ ನಾಯಕರಾಗಲಿ ಕೇವಲ ಶೋಕೇಸಿನ ಪೀಸುಗಳು ಮಾತ್ರವೆಂದು.

     ಇನ್ನು ಕರ್ನಾಟಕ ರಾಜ್ಯ ಭಾಜಪದ ಅಧ್ಯಕ್ಷರನ್ನಾಗಿ ಯಡಿಯೂರಪ್ಪನವರನ್ನು ನೇಮಿಸಿರುವುದು, ಕೇವಲ ಭಾಜಪದ ಆಂತರಿಕ ವಲಯದಲ್ಲಿ ಮಾತ್ರವಲ್ಲ ಕಾಂಗ್ರೆಸ್ ಪಕ್ಷದಲ್ಲೂ ಕೆಲ ಮಟ್ಟಿಗೆ ಸಂಚಲನವನ್ನುಂಟು ಮಾಡಿದೆ. ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರಾಗಿರುವ ಪರಮೇಶ್ವರ್ ಅವರ ಅವ ಮುಗಿದು ತಿಂಗಳುಗಳೇ ಕಳೆದರೂ ಬೇರೊಬ್ಬ ಅಧ್ಯಕ್ಷರನ್ನು ನೇಮಿಸಲಾಗದಷ್ಟು ಗೊಂದಲದಲ್ಲಿ ಕಾಂಗ್ರೆಸ್ ಮುಳುಗಿದೆ. ಅದೂ ಅಲ್ಲದೆ ಪರಮೇಶ್ವರ್ ಅವರು ಗೃಹಸಚಿವರಾದನಂತರ ಪಕ್ಷದ ಚಟುವಟಿಕೆಗಳಲ್ಲಿ ಸಹಜವಾಗಿ ಅವರಿಗೆ ಆಸಕ್ತಿಯಾಗಲಿ, ಅದಕ್ಕೆ ಬೇಕಾದ ಸಮಯವಾಗಲಿ ಇರುವುದು ಸಾಧ್ಯವಿಲ್ಲ. ಆದರೆ ಮತ್ತೆ ಮತ್ತೆ ಎದುರಾಗುತ್ತಿರುವ ಚುನಾವಣೆಗಳು ಮತ್ತು ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆಯಂತಹ ವಿಷಯಗಳೇ ಪ್ರಾಮುಖ್ಯತೆ ಪಡೆದು ರಾಜ್ಯಾಧ್ಯಕ್ಷರನ್ನು ನೇಮಿಸುವಲ್ಲಿ ಅನಗತ್ಯ ವಿಳಂಬ ಉಂಟಾಗುತ್ತಿದೆ. ಇದೀಗ ಲಿಂಗಾಯತ ನಾಯಕ ಯಡಿಯೂರಪ್ಪನವರನ್ನು ಭಾಜಪದ ಅಧ್ಯಕ್ಷರನ್ನಾಗಿ ನೇಮಿಸಿರುವುದರಿಂದ ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸಹ ಮುಳುಗುವಂತಾಗಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಈಗಾಗಲೇ ಲಿಂಗಾಯತ ಸಮುದಾಯ ಯಡಿಯೂರಪ್ಪನವರ ಬೆನ್ನ ಹಿಂದೆ ನಿಂತಿರುವುದರಿಂದ ರಾಜಕೀಯವಾಗಿ ಅವರನ್ನು ಎದುರಿಸಲು ಸಶಕ್ತರಾದ ಇನ್ನೊಬ್ಬ ಲಿಂಗಾಯತ ನಾಯಕರನ್ನು ನೇಮಿಸುವುದೋ ಎಂಬ ಗೊಂದಲದಲ್ಲಿ ಕಾಂಗ್ರೆಸ್ ಮುಳುಗಿದೆ. ಈ ಕಾರಣಕ್ಕಾಗಿಯೇ ಸಚಿವ ಎಸ್.ಆರ್. ಪಾಟೀಲ್ ಅವರ ಹೆಸರು ಚಾಲ್ತಿಯಲ್ಲಿದೆ. ಇನ್ನು ಒಕ್ಕಲಿಗರೊಬ್ಬರನ್ನು ನೇಮಿಸಲು ಜನತಾದಳದ ಜೊತೆಯಿರುವ ಒಕ್ಕಲಿಗ ಸಮಾಜ ಕಾಂಗ್ರೆಸ್ಸಿಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತದೆಯೇ ಎನ್ನುವ ಗೊಂದಲವೂ ಅದರಲ್ಲಿ ಮೂಡಿ, ಡಿ.ಕೆ.ಶಿವಕುಮಾರ್ ಹೆಸರು ಚಾಲ್ತಿಯಲ್ಲಿದೆ. ಆದರೆ ದಲಿತರೊಬ್ಬರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದಲ್ಲಿ ಇಡೀ ಅಹಿಂದವರ್ಗ ಕಾಂಗ್ರೆಸ್ಸಿನ ಪರವಾಗಿ ನಿಲ್ಲುವ ಸಾದ್ಯತೆಯಿದೆ. ಯಾಕೆಂದರೆ ಯಾವಾಗೆಲ್ಲ ಕಾಂಗ್ರೆಸ್ ಅಹಿಂದ ವರ್ಗದವರ ಬೆಂಬಲಕ್ಕೆ ನಿಂತಿದೆಯೊ ಆಗೆಲ್ಲ ಮೇಲ್ಜಾತಿಗಳು ಅದರ ವಿರುದ್ಧವಾಗಿ ಮತ ಹಾಕುತ್ತಾ ಬಂದಿವೆ. ಈಗಲೂ ಸಹ ಲಿಂಗಾಯತರೊಬ್ಬರನ್ನು ಕಾಂಗ್ರೆಸ್ಸಿನ ಅಧ್ಯಕ್ಷರನ್ನಾಗಿ ಮಾಡಿದರೂ ಆ ಸಮುದಾಯ ಅಷ್ಟು ಸುಲಭವಾಗಿ ಕಾಂಗ್ರೆಸ್ಸನ್ನು ನಂಬಿ ಅದರೊಂದಿಗೆ ಬರುವುದು ಕಷ್ಟದ ಮಾತು. ಇನ್ನು ಒಕ್ಕಲಿಗ ಸಮುದಾಯವೂ ಅಷ್ಟೆ!. ದೇವೇಗೌಡರ ಎತ್ತರಕ್ಕೇರಬಲ್ಲಂತಹ ನಾಯಕನಿಲ್ಲದ ಕಾಂಗ್ರೆಸ್ಸನ್ನು ಅದು ಬೆಂಬಲಿಸುವುದು ಅಸಾಧ್ಯ. ಆದ್ದರಿಂದಲೇ ಕಾಂಗ್ರೆಸ್ ಅಹಿಂದವರ್ಗದವರನ್ನು ತನ್ನೊಂದಿಗೆ ಕೊಂಡೊಯ್ಯಲೇ ಬೇಕಾದ ಅನಿವಾರ್ಯತೆಯಿದೆ. ಇದಕ್ಕಾಗಿಯಾದರೂ ಅದು ಯಾರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೂ ಮುಂದಿನ ಮುಖ್ಯಮಂತ್ರಿಯನ್ನಾಗಿ ದಲಿತರೊಬ್ಬರನ್ನು ಮಾಡುತ್ತೇವೆಂದು ಘೋಷಿಸಿದರೆ ಮಾತ್ರ ಭಾಜಪ ಮತ್ತು ದಳವನ್ನು ನಿಯಂತ್ರಿಸಲು ಸಾಧ್ಯ.

ಇದೆಲ್ಲದರ ನಡುವೆ ಸಿದ್ದರಾಮಯ್ಯನವರ ಸರಕಾರದ ವಿರುದ್ಧ ಸಮರ ಸಾರಿರುವಂತೆ ಕಾಣುತ್ತಿರುವ ಭಾಜಪ ಮತ್ತು ಯಡಿಯೂರಪ್ಪನವರನ್ನು ಎದುರಿಸಲು ತಮ್ಮ ಸಂಪುಟಕ್ಕೆ ಇನ್ನಷ್ಟು ಅರ್ಹರನ್ನು ತೆಗೆದುಕೊಂಡು ಚುರುಕಾದ ಆಡಳಿತ ನೀಡಲು ಸಿದ್ದರಾಮಯ್ಯನವರು ಪ್ರಯತ್ನಿಸಲೇ ಬೇಕಾಗಿದೆ. ಇಲ್ಲದೇ ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ಯಾವ ಶಕ್ತಿಯೂ ಕಾಂಗ್ರೆಸ್ಸನ್ನು ಕಾಪಾಡಲಾರದು.

  ಅಂತೂ ಮುಂದಿನ ಚುನಾವಣೆಯ ಹೊತ್ತಿಗೆ ಕರ್ನಾಟಕ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸಲು ಮೇಲ್ಜಾತಿಗಳು ಸಂಪೂರ್ಣ ಸಜ್ಜಾಗಿ ನಿಲ್ಲುವುದಂತೂ ಸತ್ಯ! ಈ ಹಿನ್ನೆಲೆಯಲ್ಲಿ ಈಗಲಾದರು ಅಹಿಂದ ವರ್ಗ ಒಂದಾಗಿ ನಿಲ್ಲಬೇಕಾದ ಅನಿವಾರ್ಯತೆಯಿದೆ.

Writer - ಕು.ಸ.ಮಧುಸೂದನರಂಗೇನಹಳ್ಳಿ

contributor

Editor - ಕು.ಸ.ಮಧುಸೂದನರಂಗೇನಹಳ್ಳಿ

contributor

Similar News

ಸಂವಿಧಾನ -75