ದೇವರ ರೂಪ ಮತ್ತು ಸಾಮಾಜಿಕ ಸ್ವರೂಪ

Update: 2016-04-14 17:51 GMT

ಇಗರ್‌ಸೋಲ್ ಎಂಬ ವಿಚಾರವಾದಿ ಹೇಳಿದ: ‘ದೇವರು ಸತ್ತ. ಮನುಷ್ಯ ಬದುಕಿದ’. ಇಲ್ಲ, ದೇವರು ಸತ್ತಿಲ್ಲ ಏಕೆಂದರೆ ಆತ ಹುಟ್ಟಿಯೇ ಇಲ್ಲ. ಅವನು ಅಭವ. ಆದರೂ ಭವವನ್ನು ನಿಯಂತ್ರಿಸುವವನೆಂದು ಮನುಕುಲದ ಅರ್ಧ ಭಾಗವಂತೂ ನಂಬಿಕೂತಿದೆ.

ಪ್ರಖ್ಯಾತ ಲೇಖಕ, ವಿಚಾರವಾದಿ ಪ್ರೊ.ಎ.ಎನ್.ಮೂರ್ತಿರಾವ್ ತಮ್ಮ ‘ದೇವರು’ ಕೃತಿಯಲ್ಲಿ ಹೇಳುತ್ತಾರೆ: ‘ದೇವರು ಬೇಕು, ಆದರೆ ಅವನಿಲ್ಲ! ಇದು ನಮ್ಮ ಕರುಣಾಜನಕ ಐರನಿ.’ ಅಂದರೆ, ಯಾವೆಲ್ಲ ಶಕ್ತಿ ಸಾಮರ್ಥ್ಯಗಳನ್ನೂ ಗುಣಾವಳಿಗಳನ್ನೂ ಆದರ್ಶಗಳನ್ನೂ ಅವನಿಗೆ ಆರೋಪಿಸಲಾಗಿದೆಯೋ, ಅಂಥವನ್ನೆಲ್ಲ ಒಳಗೊಂಡ ದೇವರು ಇರುತ್ತಿದ್ದರೆ ಈ ಕಷ್ಟ ನಷ್ಟ, ನೋವು ಹಿಂಸೆ, ಕ್ರೌರ್ಯ ದೌರ್ಜನ್ಯ, ಕಾಯಿಲೆ ಕಸಾತಿಗಳು, ಉತ್ಪಾತಗಳು ಇರುತ್ತಿರಲಿಲ್ಲ.

ಪ್ರಾಣಿಗಳೇ ಮೇಲು. ಅವುಗಳಿಗೆ ಮನುಷ್ಯನ ಕಲ್ಪನಾಶಕ್ತಿಯಿಲ್ಲ. ಬುದ್ಧಿಶಕ್ತಿಯು ಬದುಕಲು ಎಷ್ಟು ಅಗತ್ಯವೋ ಅಷ್ಟೇ. ಹಾಗಾಗಿ ಅವು ಪೂಜೆ, ವಿಧಿಗಳೆಂದು, ದೇವರು ದಿಂಡರೆಂದು, ಕರ್ಮಕಾಂಡವೆಂದು ತಲೆಕೆಡಿಸಿಕೊಂಡಿಲ್ಲ. ವಿಚಾರವಾದಿ ಭೂಪಾಳ ಕೈಲಾಸಂ ಹೇಳುವಂತೆ, ಒಂದು ವೇಳೆ ಕತ್ತೆಗಳಿಗೆ ದೇವರನ್ನು ಕಲ್ಪಿಸಿಕೊಳ್ಳುವ ಶಕ್ತಿಯಿರುತ್ತಿದ್ದರೆ ಕತ್ತೆಗಳ ದೇವರು ಕತ್ತೆಯೇ ಆಗಿರುತ್ತಿತ್ತು. ಈ ಮಾತು ದೇವರ ಕಲ್ಪನೆಗಿರುವ ಮಿತಿಯನ್ನು ಸೊಗಸಾಗಿ ಬಣ್ಣಿಸುತ್ತದೆ.

ದೇವರನ್ನು ಕಲ್ಪಿಸಿಕೊಳ್ಳುವಾಗಲೂ ಮನುಷ್ಯನ ಕಲ್ಪನಾಶಕ್ತಿಯ ಮಿತಿಯೆಷ್ಟೆಂದರೆ, ಒಂದು ಪ್ರದೇಶದ ದೇವರು ಇನ್ನೊಂದು ಪ್ರದೇಶದ ದೇವರಾಗಿರುವುದಿಲ್ಲ. ತಮ್ಮ ‘ಬಾಳ್ವೆಯೇ ಬೆಳಕು’ ವೈಚಾರಿಕ ಕೃತಿಯಲ್ಲಿ ಶಿವರಾಮ ಕಾರಂತರು ನಮ್ಮ ಬದುಕು ವೈವಿಧ್ಯಪೂರ್ಣವೂ ವಿಸ್ತಾರವೂ ಆಗದೆ ನಮ್ಮ ದೇವರ ಕಲ್ಪನೆ ವಿಸ್ತಾರಗೊಳ್ಳುವುದಿಲ್ಲವೆಂದೂ, ನಮ್ಮ ನಮ್ಮ ಜೀವನದ ಮಿತಿಯಿಂದ ದೇವರಿಗೂ ಮಿತಿಯೆಂದೂ ವಿಶ್ಲೇಷಿಸುತ್ತ, ಭಾರತದ ಯಾವ ದೇವರೂ ದೇಶದ ಗಡಿಯಾಚೆ ಯಾಕೆ ಹೋಗಿಲ್ಲವೆಂದು ವಿಡಂಬಿಸುತ್ತಾರೆ.

ಬೀಚಿಯವರು ಸೋವಿಯತ್ ಒಕ್ಕೂಟಕ್ಕೆ ಸಂದರ್ಶನವಿತ್ತ ನೆನಪಿನಲ್ಲಿ ‘ದೇವರಿಲ್ಲದ ಗುಡಿ’ ಎಂಬ ಅದ್ಭುತ ಗ್ರಂಥ ರಚಿಸಿದ್ದಾರೆ. ಇದರಲ್ಲಿ ಧರ್ಮದ ಹಿಡಿತವಿಲ್ಲದ, ದೇವರ ಹಳವಂಡವಿಲ್ಲದ ರಾಷ್ಟ್ರವೊಂದು ಶಾಂತಿ-ಪ್ರಗತಿ-ಪ್ರಾಮಾಣಿಕತೆಯೊಂದಿಗೆ ಸಾಗಿಬಂದಿರುವುದನ್ನು ಕೊಂಡಾಡಿದ್ದಾರೆ.

ದೇವರ ಭಯ, ಹಿರಿಯರ ಭಯ, ಕಾನೂನಿನ ಭಯ, ಸಾವಿನ ಭಯ ಮುಂತಾದ ಮಾತುಗಳು ಕೇಳಿಬರುತ್ತಿವೆ. ದೇವರ ಭಯವಿಲ್ಲದ ನಾಸ್ತಿಕ ಬಿಡು ನಡತೆಯವನಾಗುತ್ತಾನೆ, ಅನೈತಿಕ ಕೆಲಸಗಳಲ್ಲಿ ತೊಡಗುತ್ತಾನೆ, ದುರಹಂಕಾರಿಯಾಗುತ್ತಾನೆ ಮುಂತಾದ ಮಾತುಗಳು ಪ್ರಚಲಿತದಲ್ಲಿವೆ. ಈ ಮಾತಿನಿಂದ ಎರಡು ಸತ್ಯಗಳಂತೂ ಹೊರಬೀಳುತ್ತವೆ: 1. ದೇವರ ಸೃಷ್ಟಿಗೆ ಭಯವೇ ಕಾರಣ ಮತ್ತು 2. ಸಮಾಜದಲ್ಲಿ ವ್ಯಕ್ತಿಯನ್ನು ಹದ್ದುಬಸ್ತಿನಲ್ಲಿಡಲು ದೇವರು ಧರ್ಮಗಳೆಂಬ ಸಂಗತಿಗಳಲ್ಲಿ ನಂಬಿಕೆಗಳನ್ನು ರಕ್ಷಿಸಿಕೊಂಡು ಬರಬೇಕಾಗಿದೆ. ಅಂದರೆ ವ್ಯಕ್ತಿಯನ್ನು ತಹಬಂದಿಯಲ್ಲಿಡಲು ಕಾನೂನು-ಪೊಲೀಸು ವ್ಯವಸ್ಥೆಯಷ್ಟೇ ಸಾಕಾಗುವುದಿಲ್ಲ.

ವಿಜ್ಞಾನ ಇನ್ನೂ ಬೆಳೆಯದಿದ್ದಾಗ, ಪ್ರಕೃತಿಯನ್ನು ಮನುಷ್ಯ ತನ್ನ ಬದುಕಿಗೆ ಅನುಕೂಲವಾಗುವಂತೆ ನಿಯಂತ್ರಿಸಲು ಅಸಾಧ್ಯವಾಗಿತ್ತು. ಮಳೆ ಬಿಸಿಲು, ಗಾಳಿ ಗುಡುಗು, ಹಗಲು ರಾತ್ರಿ, ಕ್ರೂರ ಪ್ರಾಣಿಗಳು, ನೆರೆ ಕ್ಷಾಮಗಳೆಲ್ಲಾ ಯಾಕೆ ಉಂಟಾಗುತ್ತವೆಂಬುದನ್ನು ತಿಳಿಯಲು ಸಹಸ್ರಾರು ವರ್ಷಗಳೇ ಹಿಡಿದವು. ಅಲ್ಲಿಯತನಕ ವ್ಯಕ್ತಿ, ಈ ಎಲ್ಲದರ ಹಿಂದೆ ತನ್ನಂಥದೇ ಒಬ್ಬ ವ್ಯಕ್ತಿ (ಶಕ್ತಿ) ಇದ್ದಾನೆಂದೂ, ಆತ ಇವನ್ನೆಲ್ಲಾ ನಿಯಂತ್ರಿಸುತ್ತಿದ್ದಾನೆಂದೂ, ಆತನನ್ನು ಮೆಚ್ಚಿಸಿದರೆ, ಪೂಜಿಸಿದರೆ, ಆತ ದಯೆ ತೋರುವನೆಂದು ತಿಳಿದ. ಈ ಹಂತದಲ್ಲಿ ಆತನ ಭಯ, ಅಭದ್ರತೆ, ಕಾತುಕಗಳೇ ಅಮಾನುಷ ಶಕ್ತಿಯನ್ನು ಸೃಷ್ಟಿಸುವಂತಾಯಿತು. ರಾತ್ರಿಗೊಂದು ಹಗಲಿಗೊಂದು ದೇವರು, ನೀರಿಗೊಂದು ಮಳೆಗೊಂದು, ನೆಲಕ್ಕೊಂದು ಬಾನಿಗೊಂದು ಹೀಗೆ ದೇವರುಗಳ ಸರಣಿಯನ್ನೇ ಸೃಷ್ಟಿಸಿದ. ಈ ಹಂತದಲ್ಲಿ ಇವರ ದೇವತೆಗಳನ್ನೆಲ್ಲಾ ಪ್ರಾಕೃತಿಕ ಶಕ್ತಿಗಳನ್ನೇ ಆಧರಿಸಿ ಹುಟ್ಟಿದವು ಎನ್ನಬಹುದು. ಋಗ್ವೇದದ ಮಂತ್ರಗಳಲ್ಲಿ ಬಹುಭಾಗವೆಲ್ಲಾ ಮಳೆ ಬೆಳೆ, ಆಹಾರ, ಪುತ್ರಸಂತಾನ, ಹಯನುಗಳಿಗಾಗಿ ದೇವರನ್ನು ಪ್ರಾರ್ಥಿಸುವ ಸ್ವರೂಪದವಾಗಿವೆ. ಅಂದರೆ, ಪ್ರಾರ್ಥನೆ ಮತ್ತು ಕೆಲವು ಕ್ರಿಯೆಗಳ ಅನುಕರಣೆ (ವಿಧಿ) ಹುಟ್ಟಿಸಿಕೊಂಡು ಈ ದೇವತೆಗಳನ್ನು ಸಂತುಷ್ಟಪಡಿಸಲು ಉದ್ದೇಶಿಸಿದವು. ಬೈಬಲಿನಲ್ಲೂ ಅಷ್ಟೆ. ಬೆಂಕಿಯ ಶೋಧನೆಯಾದ ಮೇಲೆ (ಗುಹಾಹಿತ: ಗುಹೆಯೊಳಗೆ ರಕ್ಷಿಸಿಟ್ಟ ಬೆಂಕಿ) ಹೋಮಹವನಾದಿಗಳು ಹುಟ್ಟಿಕೊಂಡವು. ವ್ಯಕ್ತಿ ತಿನ್ನುತ್ತಿದ್ದ, ಕುಡಿಯುತ್ತಿದ್ದ ವಸ್ತಗಳನ್ನೆಲ್ಲಾ ಈ ದೇವತೆಗಳಿಗೆ ಮುಂಚಿತವಾಗಿ ಅರ್ಪಿಸುತ್ತಿದ್ದ.

ಕೆಲವರು ಆದಿಮ ಭೌತವಾದಿ ವ್ಯವಸ್ಥೆಯೆಂದು ಬಣ್ಣಿಸುವ ಋಗ್ವೇದದ ಕಾಲದ ದೇವರುಗಳಿಂದ ಅಂಥ ಅಪಾಯವೇನೂ ಇಲ್ಲ. ನಂತರ ಪಶುಪಾಲನೆಯೊಂದಿಗೆ ಕೃಷಿ ವ್ಯವಸ್ಥೆಯ ಉದಯದೊಂದಿಗೆ ವ್ಯಕ್ತಿ ಮಾಡುವ ಕೆಲಸದಲ್ಲಿ ಮಾರ್ಪಾಡು ಉಂಟಾಯಿತು. ಹಳೆಯ ದೇವರು ಸಾಲದೆ ಹೋಯಿತು. ಹೊಲಗದ್ದೆಗಳನ್ನು ಪ್ರಾಣಿ ಪಕ್ಷಿಗಳಿಂದ ರಕ್ಷಿಸಲು ಬೇಲಿಯೊಡ್ಡುವುದಲ್ಲದೆ ಸಮಾಜವೇ ಮನೆಕಟ್ಟಿ ವಾಸ್ತವ್ಯ ಹೂಡಬೇಕಾಯಿತು. ಅಲೆಮಾರಿ ಬದುಕನ್ನು ಕೈಬಿಟ್ಟ ವ್ಯಕ್ತಿಗೆ ಅಕ್ಕಪಕ್ಕದವರೊಂದಿಗೆ ವಿವಿಧ ವಿಷಯಗಳಲ್ಲಿ ವಿವಾದ, ಜಗಳ, ಹುಟ್ಟಿಕೊಂಡು, ಅವುಗಳನ್ನು ನಿಯಂತ್ರಿಸಲು ಒಬ್ಬ ಮುಖಂಡ ಬೇಕಾಯಿತು. ಇಂಥ ಹಟ್ಟಿಗಳು ಅಥವಾ ಗ್ರಾಮಗಳು ಪರಸ್ಪರ ಕಚ್ಚಾಡಿದಾಗ ‘ಸಂಗ್ರಾಮ’ ಹುಟ್ಟಿಕೊಂಡಿತು. ಕ್ರಮೇಣ ರಾಜ, ಮಂತ್ರಿಗಳು, ನ್ಯಾಯಾಲಯ, ಪುರೋಹಿತ ಇತ್ಯಾದಿ ವ್ಯವಸ್ಥೆ ಹುಟ್ಟಿಕೊಂಡಿತು. ಅಷ್ಟರಲ್ಲಿ ಮಹಿಳೆಯರಿಗಿದ್ದ ಸ್ವಾತಂತ್ರಕ್ಕೂ ಧಕ್ಕೆಯುಂಟಾಗಿ ಅವರು ಮನೆಯೊಳಗೆ ಉಳಿಯಬೇಕಾಯಿತು. ಒಬ್ಬ ಗಂಡಸಿಗೆ ಒಬ್ಬಳು ಪತ್ನಿ, ಅವಳಿಂದಾದ ಪುತ್ರನಿಗೆ ಆಸ್ತಿ ಆನುವಂಶಿಕವಾಗಿ ಬರುವುದಾಯಿತು. ಸಣ್ಣಪುಟ್ಟ ರಾಜರು ಕಚ್ಚಾಡಿ ದೊಡ್ಡ, ಬಲಿಷ್ಠ ಅಧಿಪತಿಯ ಆವಶ್ಯಕತೆ ಉಂಟಾಯಿತು. ಈ ಹಂತದಲ್ಲಿ ಪ್ರಾಕೃತಿಕ ದೇವತೆಗಳು ಮೂಲೆಗುಂಪಾಗಿ ಸೃಷ್ಟಿ-ಸ್ಥಿತಿ-ಲಯಗಳನ್ನು ನಿಯಂತ್ರಿಸುವ ಬ್ರಹ್ಮ-ವಿಷ್ಣು-ಮಹೇಶ್ವರ ಎಂಬ ತ್ರಿಮೂರ್ತಿ ಕಲ್ಪನೆ ಹುಟ್ಟಿಕೊಂಡಿತು.

ಹೀಗೆ ಆಯಾ ಕಾಲದ ಸಾಮಾಜಿಕ ವ್ಯವಸ್ಥೆಗಳ ಸ್ವರೂಪ, ಬದಲಾವಣೆಗಳೊಂದಿಗೆ ದೇವರ ಕಲ್ಪನೆಯಲ್ಲಿ ಸ್ಥಿತ್ಯಂತರ ಉಂಟಾಗಿದೆ. ಇದು ಎಲ್ಲ ದೇವತೆಗಳಲ್ಲೂ ಸಾಮಾನ್ಯವಾದುದು. ಆದರೆ, ಭಾರತ ಹತ್ತಾರು ವಿದೇಶೀ ಜನಾಂಗಗಳ ದಾಳಿಗೆ ಮತ್ತೆ ಮತ್ತೆ ತುತ್ತಾಗಿ, ಈ ದೇವರುಗಳ ಕಲ್ಪನೆಯಲ್ಲಿ ಮತ್ತು ಅವುಗಳ ಕಾರ್ಯದಲ್ಲಿ ವಿಕಾಸ ಮತ್ತು ಪರಿವರ್ತನೆ, ವಿಲೀನೀಕರಣ ಉಂಟಾದುದನ್ನು ಗಮನಿಸಬಹುದು. ಹೀಗಾಗುವಾಗ, ಆರ್ಯ-ದ್ರಾವಿಡ, ಹಳ್ಳಿ-ನಗರ, ದೇಶಿ-ವಿದೇಶಿ, ಮೇಲ್ಜಾತಿ-ಕೆಳ ಜಾತಿ, ವೈದಿಕ-ಅವೈದಿಕ ಹೀಗೆ ಈ ಸಂಬಂಧದಲ್ಲೂ ಸಂಘರ್ಷವೂ, ಸಾಮರಸ್ಯವೂ ಏರ್ಪಟ್ಟಿದೆ. ಹಾಗಾಗಿ, ಇವತ್ತು ಮೂಲತಃ ವೈದಿಕೇತರ ದೇವರಾಗಿರುವ ಶಿವನು, ಹಾವು-ಚಂದ್ರ-ಗಂಗೆ-ಭೂತ ಗಣ-ಗೂಳಿಗಳ ಸಾಹಚರ್ಯದಲ್ಲಿ ವೈದಿಕ-ವೈದಿಕೇತರರ ದೇವರಾಗಿದ್ದಾನೆ. ಇದು ವೈದಿಕರು ತಮ್ಮ ಸಂಸ್ಕೃತಿಯೊಳಗೆ ವೈದಿಕೇತರ ಸಂಸ್ಕೃತಿಯನ್ನು ವಿಲೀನೀಕರಿಸಿದ ಪ್ರಕ್ರಿಯೆ ಎನ್ನಬಹುದು.

ದೇಶೀ ಬುಡಕಟ್ಟುಗಳು ಮತ್ತು ದ್ರಾವಿಡರೊಂದಿಗೆ ಮೊದಮೊದಲು ಘರ್ಷಣೆಗಿಳಿದ ಆರ್ಯರು, ಕ್ರಮೇಣ ಸಾಮರಸ್ಯದ ಬದುಕನ್ನು ರೂಢಿಸಿಕೊಳ್ಳಬೇಕಾಯಿತು. ಇದು ಬಹಳ ಅನಿವಾರ್ಯವಾದ ಸ್ಥಿತಿ. ಈ ಸ್ಥಿತಿಯನ್ನು ಈಶ್ವರ, ಅದಕ್ಕಿಂತ ಹೆಚ್ಚಾಗಿ ಗಣಪತಿಯ ಉಪಾಸನೆಯ ಕ್ರಮದಲ್ಲಿ ಗುರುತಿಸಬಹುದಾಗಿದೆ. ವೇದ ಕಾಲದ ರುದ್ರನೇ ಬೇರೆ ಈ ಶಿವನೇ ಬೇರೆ. ಈ ಶಿವನ ಕಲ್ಪನೆಯಲ್ಲಿ ಆರ್ಯ-ದ್ರಾವಿಡ ಧಾರ್ಮಿಕ ಶ್ರದ್ಧೆಗಳು ಸಂಗಮಿಸಿದುದನ್ನು ಗುರುತಿಬಹುದು. ಗಂಗೆ-ಚಂದ್ರ-ಹಾವು ಖಂಡಿತವಾಗಿ ದ್ರಾವಿಡರ ದೇವತೆಗಳು. ಈ ದೇವತೆಗಳು ಆರ್ಯರ ಶಿವ, ತನ್ನ ಮೈಮೇಲೆ ಧರಿಸುವುದರಿಂದ, ಒಂದು ಬಗೆಯಲ್ಲಿ ಅವು ಅಂಗ ದೇವತೆಗಳಾದವು. ಆರ್ಯರು ಈಶ್ವರನಿಗೆ ಸಲ್ಲಿಸುವ ಪೂಜೆಯಲ್ಲಿ ತಮ್ಮ ಲಾಗಾಯ್ತಿನ ದೇವತೆಗಳಿಗೂ ಪೂಜೆ ಸಲ್ಲುವುದರಿಂದ ಆರ್ಯೇತರರೂ ಈ ಕಲ್ಪನೆಯನ್ನು ಅಂಗೀಕರಿಸಿದಂತೆ ಕಾಣುತ್ತದೆ. ದ್ರಾವಿಡ-ಆರ್ಯ ಸಂಸ್ಕೃತಿಯ ಸಂಗಮದ ಪ್ರತೀಕವಾಗಿರುವ ಈ ಈಶ್ವರನ ಕಲ್ಪನೆಯಲ್ಲಿ ಆರ್ಯ ಸಂಸ್ಕೃತಿಯ ಶ್ರೇಷ್ಠತೆಯ, ಯಾಜಮಾನ್ಯದ ಪ್ರತೀಕವೂ ಇದೆಯೆಂಬುದನ್ನು ಆರ್ಯೇತರರು ಗಮನಿಸುವ ಗೋಜಿಗೆ ಹೋಗಲಿಲ್ಲ ಎನ್ನಬಹುದು.

ಗಣಪತಿಯ ಕಲ್ಪನೆಯಂತೂ ತೀರಾ ವಿಲಕ್ಷಣವಾದುದು. ಆದರೆ ಅಷ್ಟೇ ಸ್ವಾರಸ್ಯಕರವಾದುದು. ಆನೆಯ ಮುಖ, ಏಕದಂತ, ಡೊಳ್ಳುಹೊಟ್ಟೆ, ಇಲಿಯ ವಾಹನವುಳ್ಳ ಈ ದೇವತೆಯ ಕಲ್ಷನೆ ಕೂಡ ಆರ್ಯೇತರ ಮೂಲದಿಂದ ಬಂದುದೆಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ. ಗಣಪತಿ ತಂದೆಯ ಮಗನಲ್ಲ, ತಾಯಿಯ ಮಗ ಎಂಬುದಷ್ಟೇ ಅಲ್ಲ, ಗಣಪತಿಯ ಪೂಜೆಗೆ ಮೊದಲು ಗೌರಿಯನ್ನು ಪ್ರತಿಷ್ಠೆ ಮಾಡಿ ಪೂಜಿಸುವ ವಿಧಾನವಂತೂ ಖಂಡಿತವಾಗಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿಂದ ಎತ್ತಿಕೊಂಡ ಕಲ್ಪನೆ. ಗೌರಿ ಅಥವಾ ಗಣಪತಿಯ ವಿಗ್ರಹವನ್ನು ಮಣ್ಣಿನಿಂದ ರಚಿಸುವುದು ಮತ್ತು ಗಣಪತಿಯ ಹುಟ್ಟಿನ ಕುರಿತಾದ ಐತಿಹ್ಯ ಕೂಡಾ ಪ್ರಗತಿಪರ ಜಾನಪದ ಆಶಯವನ್ನು ಪ್ರತಿಬಿಂಬಿಸುತ್ತದೆ. ನೀರು ಮತ್ತು ಕೃಷಿಯೊಂದಿಗೆ (ಮಣ್ಣು) ಈ ಉಪಾಸನಾತತ್ವ ಸಂಬಂಧಗೊಂಡಿದೆ ಎನ್ನಬಹುದು. ಆನೆಯ ಮುಖ, ಇಲಿಯ ವಾಹನ, ಸರ್ಪದ ಆಭರಣ ಕೂಡ ಬುಡಕಟ್ಟುಗಳ ಕುಲಲಾಂಛನವನ್ನು (totem) ಪ್ರತಿನಿಧಿಸುವಂತಿದೆ. ಗಣಪತಿಯ ತತ್ವವೇ ಏಕೆ, ಅರ್ಧನಾರೀಶ್ವರ ಕಲ್ಪನೆಯೇ ಆರ್ಯೇತರ ಮೂಲಗಳಿಂದ, ದುಡಿಯುವ ವರ್ಗದ ಜೀವನ ತತ್ವಗಳಿಂದ ಸ್ಫೂರ್ತಿವಾದುದೆನ್ನಬಹುದು.

ದೇವರ ಕಲ್ಪನೆಯಲ್ಲಾದ ವಿಕಾಸ, ಮಾನವ ಜೀವನದಲ್ಲಾದ ವಿಕಾಸಕ್ಕೆ ನೇರವಾಗಿ ಸಾಪೇಕ್ಷಗೊಂಡಿದೆ, ಸಮಾಂತರವಾಗಿದೆ. ಏಕೆಂದರೆ, ಮೂಲತಃ ಒಡ್ಡೊದ್ದಾದ, ಅಷ್ಟೇನೂ ಸೂಕ್ಷ್ಮತೆಯಿಲ್ಲದ, ಕಲ್ಲುಗಳನ್ನು ವಿಗ್ರಹವಾಗಿ ಪ್ರತಿಷ್ಠಿಸಲಾಗುತ್ತಿತ್ತು, ದೇವಾಲಯಗಳೂ ಅಷ್ಟೇನೂ ಕುಸುರಿಕತೆಗೆ ಹೆಸರಾಗಿರಲಿಲ್ಲ. ಆದರೆ, ಭದ್ರತೆ ಮತ್ತು ಬಾಳಿಕೆಯ ದೃರಷ್ಟಿ ಪ್ರಧಾನವಾಗಿತ್ತು. ಕ್ರಮೇಣ ಮಾನವ ಜೀವನದ ವಿಕಾಸದೊಂದಿಗೆ ಸಂಪತ್ತಿನ ಮಿಗತೆಯು ಒಂದು ವರ್ಗವನ್ನಾದರೂ ದಾನಧರ್ಮಕ್ಕೆ ಉತ್ತೇಜಿಸುತ್ತಾ ಬಂದಂತೆ, ದೇವಾಲಯಗಳು ಅತ್ಯಂತ ಸೂಕ್ಷತೆಗೆ, ಆಡಂಬರಕ್ಕೆ, ವಿಲಾಸಕ್ಕೆ ಕೂಡ ಹೆಸರಾದವು. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಎಲ್ಲ ಶ್ರೇಷ್ಠವಾದ ಕಲೆ, ವಾಸ್ತು ಕೌಶಲಗಳು ಭೂಮಿಯಲ್ಲಿ ದೇವರಾಗಿರುವ ರಾಜರಿಗೆ ಸೇರಿದ್ದಾದ್ದರಿಂದ, ಆತ ತನ್ನಿಚ್ಛೆಗೆ ತಕ್ಕಂತೆ ಏನನ್ನೂ ಮಾಡಬಹುದಾಗಿತ್ತು. ವಿಗ್ರಹಗಳ ಮೈಮೇಲೆ ಕೂಡ ಆಭರಣಗಳು, ಮುತ್ತು ರತ್ನಗಳ ಕೆತ್ತನೆ ಕಾಣಿಸಿಕೊಳ್ಳ ತೊಡಗಿತು. ಮೂಲತಃ ಸ್ತನಬಂಧ ಹೊಂದಿದ್ದ ಹೆಣ್ಣು ವಿಗ್ರಹಗಳ ಕಲ್ಪನೆಯಾದರೂ ಆಗಿನ್ನೂ ರವಿಕೆ ಹಾಕಿಕೊಳ್ಳುವ ಸಂಪ್ರದಾಯವಿಲ್ಲದ ಸಮಾಜದ್ದು. ಹಾಗಾಗಿ ಮಧ್ಯಯುಗದಿಂದೀಚಿನ ಹೆಣ್ಣು ವಿಗ್ರಹಗಳಷ್ಟೇ ಪೂರ್ತಿ ಮೈಮುಚ್ಚಿಕೊಂಡ ವಿನ್ಯಾಸ ಹೊಂದಿರುತ್ತದೆ. ಅಲ್ಲೂ ಕೂಡ, ಪ್ರತಿಮಾ ವಿಜ್ಞಾನದ ಪರಂಪರೆಯೊಂದಿರುವುದರಿಂದ, ಹೆಣ್ಣು ದೇವತೆಗಳ ಶಿಲಾವಿಗ್ರಹಗಳಂತೂ ಪ್ರಾಚೀನ ಮಾದರಿಯಲ್ಲೇ, ಸ್ತನಬಂಧದೊಂದಿಗೆ ನಿರ್ಮಿತವಾಗಿರುವುದೇ ಅಧಿಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News