ಅಂಬೇಡ್ಕರರೆಡೆಗಿನ ಹಿಂದುತ್ವದ ಹುಸಿ ಪ್ರೀತಿ

Update: 2016-04-15 17:43 GMT

ಕಳೆದ ವರ್ಷ ಅಂಬೇಡ್ಕರ್ ಜನ್ಮದಿನದ ಸಂದರ್ಭದಲ್ಲಿ ಆರೆಸ್ಸೆಸ್ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆ ಬಾಬಾಸಾಹೇಬರ ಹೆಸರಿನಲ್ಲಿ ವಿಶೇಷ ಸಂಚಿಕೆ ಹೊರತಂದಿತ್ತು. ವಿಶೇಷ ಸಂಚಿಕೆಯ ಆ ಉದ್ದೇಶ ಎಲ್ಲರಿಗೂ ತಿಳಿದದ್ದೆ. ಅಸ್ಪಶ್ಯರನ್ನು ಹಿಂದುತ್ವದೊಳಕ್ಕೆ ಎಳೆದುಕೊಳ್ಳುವ, ಎಳೆದುಕೊಳ್ಳಲಾಗದಿದ್ದರೂ ಕಡೇಪಕ್ಷ ನಾವು ಅಂಬೇಡ್ಕರ್ ವಿರೋಧಿಗಳಲ್ಲ ಎಂದು ತೋರಿಸಿಕೊಳ್ಳುವ, ವ್ಯರ್ಥವೋ ಸಾರ್ಥವೋ ಒಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ನಡೆದ ಪ್ರಯತ್ನವದು. ಆರೆಸ್ಸೆಸ್‌ನ ಇಂತಹ ಪ್ರಯತ್ನವನ್ನು ಅದರ ಸಂಬಂಧಿತ ಎಲ್ಲರೂ ನಿರಂತರ ಮಾಡುತ್ತಲೇ ಇದ್ದಾರೆ. ಮೋದಿಯವರ ಅಂಬೇಡ್ಕರರೆಡೆಗಿನ ಮೆಚ್ಚುಗೆಯ ಮಾತುಗಳಿರಬಹುದು, ಆರೆಸ್ಸೆಸ್ ಶಾಖೆಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವ ಕಾರ್ಯಕ್ರಮವಿರಬಹುದು, ಯಡಿಯೂರಪ್ಪನವರಿಂದ ಅಂಬೇಡ್ಕರ್ ಜಯಂತಿಯಂದೇ ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮವಿರಬಹುದು. ಅಂಬೇಡ್ಕರ್ ಹಿಂದುತ್ವದ ಉಗ್ರವಿರೋಧಿಯಾಗಿದ್ದರೂ ಅವರನ್ನು ಹಿಂದುತ್ವದ ಸುಧಾರಕ ಎನ್ನುವ ಬಿಜೆಪಿಯ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಮತ್ತು ಅಂತಹ ಇತರರ ಈ ಧಾಟಿಯ ಅನೇಕ ಲೇಖನಗಳಿರಬಹುದು, ಅವೆಲ್ಲ ಆರೆಸ್ಸೆಸ್‌ನ ಈ ಅಂಬೇಡ್ಕರ್ ಪ್ರೇಮದ ತದ್ರೂಪಿ ಉದಾಹರಣೆಗಳಷ್ಟೆ. ಪ್ರಶ್ನೆ ಏನೆಂದರೆ ಅಂಬೇಡ್ಕರರ ಆ ಅಖಂಡ ವಿಚಾರಗಳು ಆರೆಸ್ಸೆಸ್ ತಿಳಿದುಕೊಂಡಷ್ಟು ಸುಲಭದ್ದೆ? ಅರಗಿಸಿಕೊಳ್ಳಲು ಸಾಧ್ಯವೇ? ಈ ದಿಸೆಯಲ್ಲಿ ಅವರ ಒಂದಷ್ಟು ಬರಹಗಳನ್ನು ಪ್ರಸ್ತಾಪಿಸುವ ಮೂಲಕ ಉತ್ತರ ಕಂಡುಕೊಳ್ಳಬಹುದು. 

ಮೊದಲಿಗೆ ಅತ್ಯಂತ ಸರಳ ಮತ್ತು ಅಗತ್ಯದ ಅಂಶವಾದ, ಹಿಂದೂಗಳು ಏಕೆ ಅಸ್ಪಶ್ಯತೆ ಆಚರಿಸುತ್ತಾರೆ? ಈ ಪ್ರಶ್ನೆಗೆ ಅಂಬೇಡ್ಕರರು ಕೊಡುವ ಉತ್ತರ ಹಾಗೆ ಅಸ್ಪಶ್ಯತೆ ಆಚರಿಸುವವರ ಅಂತಹ ಸಿದ್ಧಾಂತವಾದಿಗಳ ಬೆವರಿಳಿಸುತ್ತದೆ. ಅಂಬೇಡ್ಕರರು ಹೇಳುತ್ತಾರೆ ಅಸ್ಪಶ್ಯರು ಹಿಂದೂಗಳ ಸಮಾಜಕ್ಕೆ ಸೇರುವುದಿಲ್ಲ ಮತ್ತು ಹಿಂದೂಗಳೂ ಅಷ್ಟೆ ತಾನು ಮತ್ತು ಅಸ್ಪಶ್ಯರು ಇಬ್ಬರೂ ಒಂದೇ ಸಮಾಜಕ್ಕೆ ಸೇರಿದವರು ಎಂದು ಭಾವಿಸುವುದಿಲ್ಲ. ಈ ನಿಟ್ಟಿನಲ್ಲಿ ಅಸ್ಪಶ್ಯರ ಸಮಸ್ಯೆಯ ಬಗ್ಗೆ ಹಿಂದೂಗಳಲ್ಲಿ ನೈತಿಕವಾಗಿಯೂ ನಿರಾಸಕ್ತಿ ಕಂಡುಬರುತ್ತದೆ ಯಾಕೆ ಎಂಬುದಕ್ಕೆ ಇದೇ ಪ್ರಮುಖ ಕಾರಣ. ಅಲ್ಲದೆ, ಆತ್ಮಸಾಕ್ಷಿಯೂ ಇಲ್ಲದ ಕಾರಣ ಹಿಂದೂವೊಬ್ಬನಲ್ಲಿ ಅಸ್ಪಶ್ಯರು ಅನುಭವಿಸುವ ಇಂತಹ ನಿರಂತರ ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ದನಿ ಎತ್ತುವ ಪ್ರಾಮಾಣಿಕ ಆಕ್ರೋಶವೂ ಇರುವುದಿಲ್ಲ. ಒಟ್ಟಾರೆ ಆತ(ಹಿಂದೂ) ಅಸ್ಪಶ್ಯರು ಅನುಭವಿಸುವ ಇಂತಹ ಅನ್ಯಾಯ ಮತ್ತು ಅಸಮಾನತೆಯಲ್ಲಿ ಎಳ್ಳಷ್ಟೂ ತಪ್ಪು ಕಾಣುವುದಿಲ್ಲ, ಅದನ್ನು ಆಚರಿಸುವ ತನ್ನ ನಿಲುವಿನಿಂದ ಕೂಡ ಆತ ಹಿಂದೆ ಸರಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಆತ್ಮಸಾಕ್ಷಿಯ ಸ್ಪಷ್ಟ ಕೊರತೆಯ ಕಾರಣದಿಂದಾಗಿ ಅಸ್ಪಶ್ಯತೆಯನ್ನು ನಿರ್ಮೂಲನೆಗೊಳಿಸುವ ಈ ಹಾದಿಯಲ್ಲಿ ಇರುವ ಅತಿದೊಡ್ಡ ತಡೆಯೆಂದರೆ ಅದು ಹಿಂದೂ ಅಷ್ಟೆ. ಅಂಬೇಡ್ಕರರ ಬರಹಗಳ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.5, ಪು.99) ಬುಟ್ಟಿಗೆ ಕೈಹಾಕಿದಾಗ ಸಾಮಾನ್ಯವಾಗಿ ಸಿಗುವ ಬರಹ ಮತ್ತು ಆ ಮಾದರಿಯ ಒಂದು ಹಣ್ಣು ಇದು. ಅಂದಹಾಗೆ ಈ ಹಣ್ಣು ಮತ್ತು ಅದರ ರುಚಿ ಹಿಂದುತ್ವದ ಸುಧಾರಣೆಯ ಸರಕಾಗಿ ಕಾಣುತ್ತದೆಯೇ?

 ಇನ್ನು ತಮ್ಮನ್ನು(ಅಸ್ಪಶ್ಯರನ್ನು) ವರ್ಣಾಶ್ರಮದೊಳಕ್ಕೆ ಸೇರಿಸದಿದ್ದರ ಉದ್ದೇಶವನ್ನು ಕೂಡ ಅಂಬೇಡ್ಕರರು ಒಂದೆಡೆ ಬಿಡಿಸಿ ಹೇಳುತ್ತಾರೆ. (ಅದೇ ಕೃತಿ, ಪು.100). ಅದನ್ನು ಉಲ್ಲೇಖಿಸುವುದಾದರೆ ಮನು ಚಾತುರ್ವರ್ಣವನ್ನು ಪಂಚವರ್ಣವನ್ನಾಗಿ ವಿಸ್ತರಿಸಲು ಸಿದ್ಧನಿರಲಿಲ್ಲ. ಹೀಗೆ 5ನೆ ವರ್ಣ ಇಲ್ಲ ಎನ್ನುವ ಮೂಲಕದ ಆತನ ಹೇಳಿಕೆಯ ರೂಪದ ಸಲಹೆಯ ಅರ್ಥವೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಆ ನಾಲ್ಕು ವರ್ಣಗಳ ಆಚೆ ಇರುವಂಥವರನ್ನು ಆತ ಹಿಂದೂ ಸಮಾಜದೊಳಕ್ಕೆ ಸೇರಿಸಲು ಸಿದ್ಧನಿರಲಿಲ್ಲ ಎಂಬುದು. ಈ ಕಾರಣಕ್ಕಾಗಿ ಆತ ಹಾಗೆ ವರ್ಣಗಳ ಹೊರಗಿದ್ದವರನ್ನು ಬಾಹ್ಯರು,ವರ್ಣಬಾಹ್ಯರು, ಹೀನರು, ಅಂತ್ಯವಾಸಿಗಳು ಎಂದು ಕರೆದ. ಹೀಗೆ ಹೇಳುತ್ತಲೇ ಅಂಬೇಡ್ಕರರು ವ್ಯಂಗ್ಯವಾಗಿ ಅಸ್ಪಶ್ಯತೆಯನ್ನು ಪೋಷಿಸಿಕೊಂಡು ಬರಲು ಇಚ್ಛಿಸುವ ಸಂಪ್ರದಾಯವಾದಿ ಹಿಂದೂವಿಗೆ ಮನುಸ್ಮತಿ ಕೂಡ ಮೋಸಮಾಡಿಲ್ಲ! ಎನ್ನುತ್ತಾರೆ. ಮತ್ತೂ ಪ್ರಶ್ನೆಯೇನೆಂದರೆ ಹಿಂದೂಧರ್ಮದ ಆಧಾರಸ್ತಂಭವಾದ ಚಾತುರ್ವರ್ಣದ ವಿಶ್ಲೇಷಣೆಯ ಅಂಬೇಡ್ಕರರ ಈ ಸಾಲುಗಳು ಹಿಂದುತ್ವದ ಸುಧಾರಣೆಯ ನುಡಿಗಳಾಗಿ ಕಾಣುತ್ತದೆಯೇ? ಎಂಬುದು.

ಇನ್ನು ಅಸ್ಪಶ್ಯತೆಯ ಕ್ರೂರ ವಾಸ್ತವತೆಯನ್ನು ನೇರಾನೇರ ಅಂಬೇಡ್ಕರರು ಹಿಂದೂಗಳ ದೃಷ್ಟಿಕೋನದಲ್ಲಿ ಬಿಡಿಸುವುದು ಹೇಗೆಂದರೆ ಅಸ್ಪಶ್ಯತೆಯು ಅಸ್ಪಶ್ಯರಿಗೆ ದುರದೃಷ್ಟಕರವಿರಬಹುದು, ಆದರೆ ಅನುಮಾನವೇ ಬೇಡ ಹಿಂದೂಗಳಿಗೆ ಅದು ಅದೃಷ್ಟಕರ. ಅದು ಅವರಿಗೆ ಕೀಳಾಗಿ ನೋಡಲು ಸಾಧ್ಯವಾಗುವುದಕ್ಕೆ ಒಂದು ವರ್ಗವನ್ನು ಸೃಷ್ಟಿಸಿಕೊಡುತ್ತದೆ. ಅಂತೆಯೇ ಹಿಂದೂಗಳಿಗೆ ಒಂದು ಪದ್ಧತಿ ಬೇಕು. ಆ ಪದ್ಧತಿಯಲ್ಲಿ ಯಾರೂ ಕೂಡ ಎಲ್ಲವೂ ಆಗಿರಬಾರದು ಮತ್ತು ಪ್ರತಿಯೊಬ್ಬರೂ ಕೂಡ ಏನಾದರೊಂದು ಕೂಡ ಆಗಿರಬಾರದು. ಅದಲ್ಲದೆ, ಆ ಪದ್ಧತಿಯಲ್ಲಿ ಅವರಿಗೆ ಒಂದಷ್ಟು ಜನರಿರಬೇಕು ಮತ್ತು ಉಳಿದವರು ಏನೇನಕ್ಕೂ ಆಗಬಾರದಂತವರಾಗಿರಬೇಕು. ಇಲ್ಲಿ ಏನೇನಕ್ಕೂ ಆಗಬಾರದವರೆಂದರೆ ಅಸ್ಪಶ್ಯರು ಮತ್ತು ಇದು ಹಿಂದೂಗಳನ್ನು ಆ ಒಂದಷ್ಟು ಜನರನ್ನಾಗಿ ಮಾಡುತ್ತದೆ. ಪರಿಣಾಮ ಹಿಂದೂಗಳಲ್ಲುಂಟಾಗುವ ಇಂತಹ ಸಹಜ ಅಹಂ ಭಾವವನ್ನು ಅಸ್ಪಶ್ಯತಾಚರಣೆಯ ಈ ಪದ್ಧತಿ ಹಾಗೆಯೇ ಉಳಿಸಿ ಅವರನ್ನು ತಮಗೆ ತಾವೇ ತಾನು ಇತರರಿಗಿಂತ ದೊಡ್ಡವ ಎಂದುಕೊಳ್ಳುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಯಾಕೆ ಹಿಂದೂಗಳು ಅಸ್ಪಶ್ಯತಾಚರಣೆ ಆಚರಿಸುವುದನ್ನು ಬಿಟ್ಟುಕೊಡಲು ಇಚ್ಛಿಸುವುದಿಲ್ಲ ಎಂಬುದಕ್ಕೆ ಇದೇ ಪ್ರಮುಖ ಕಾರಣ. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.5, ಪು.102). ಮುಂದುವರಿದು ಅಸ್ಪಶ್ಯತೆ ಅದು ಹೇಗೆ ನಿರ್ಮೂಲನೆಯಾಗಬಹುದು ಎಂದು ಹೇಳುತ್ತಾ ಅಂಬೇಡ್ಕರರು ಕೇಳುವುದೇನೆಂದರೆ ಅಸ್ಪಶ್ಯತೆ ಮಾಯವಾಗುತ್ತದೆ. ಅದು ಯಾವಾಗ ಅಂದರೆ ಹಿಂದೂ ಸಾಮಾಜಿಕ ಶ್ರೇಣೀಕರಣ, ವಿಶೇಷವಾಗಿ ಜಾತಿಪದ್ಧತಿ ವಿಸರ್ಜನೆಯಾದಾಗ, ನಾಶವಾದಾಗ. ಪ್ರಶ್ನೆ ಎಂದರೆ ಇದು ಸಾಧ್ಯವೇ? ಹಾಗೆ ಇದು ಸಾಧ್ಯವಿಲ್ಲ ಎಂದು ಹೇಳುತ್ತಲೇ ಅವರು ಯಾಕೆಂದರೆ ಜಾತಿಪದ್ಧತಿಗೆ ಇರುವ ಅನುಮೋದನೆ ಅದು ಧಾರ್ಮಿಕ ಅನುಮೋದನೆ. ಹೇಗೆಂದರೆ ವರ್ಣವ್ಯವಸ್ಥೆಯ ನವರೂಪವಾದ ಈ ಜಾತಿ, ಹಿಂದೂಗಳ ಪವಿತ್ರ ಗ್ರಂಥಗಳಾದ ದೋಷಾತೀತವೆನಿಸಿದ ವೇದಗಳ ಅನುಮೋದನೆ ಪಡೆದಿದೆ. ದುರದೃಷ್ಟಕರವೆಂದರೆ ಯಾವುದೇ ವಿಷಯವಾಗಲಿ ಹೀಗೆ ಅದು ಧಾರ್ಮಿಕತೆಯ ಅನುಮೋದನೆ ಪಡೆಯಿತೆಂದರೆ ಅದು ಅಂತಹ ಅನುಮೋದನೆಯ ಕಾರಣ ಕ್ಕಾಗಿಯೇ ಪವಿತ್ರವಾಗಿಬಿಡುತ್ತದೆ, ಶಾಶ್ವತದ್ದಾಗಿಬಿಡುತ್ತದೆ. ಈ ಕಾರಣಕ್ಕಾಗಿ ಹಿಂದೂಗಳಿಗೆ ಜಾತಿ ಎಂದರೆ ಪವಿತ್ರ, ಜಾತಿ ಎಂದರೆ ಶಾಶ್ವತ. ಹೀಗಿರುವಾಗ ಇಂತಹ ಪವಿತ್ರ ಪದ್ಧತಿಯನ್ನು, ಹಿಂದೂಧರ್ಮದ ಆಧಾರಸ್ತಂಭವಾಗಿರುವ ಈ ಜಾತಿವ್ಯವಸ್ಥೆಯನ್ನು ಹಿಂದೂಗಳು ನಾಶಗೊಳಿಸುವರೇ? ಪ್ರಾಕ್ಟಿಕಲ್ ಆಗಿ ಅಂಬೇಡ್ಕರರು ಕೇಳುವ ಈ ಪ್ರಶ್ನೆ ಗಮನಿಸಿ. ಪ್ರಶ್ನೆಯೇನೆಂದರೆ ಅಂಬೇಡ್ಕರರು ಕೇಳುವ ಈ ಪ್ರಶ್ನೆ ಅದ್ಯಾವ ದೃಷ್ಟಿಕೋನದಲ್ಲಿ ಆರೆಸ್ಸೆಸ್‌ನ ಮುಖವಾಣಿಯೊಂದು ಪ್ರಕಟಿಸುವ ವಿಚಾರವಾಗುತ್ತದೆ?

ಅಂತಿಮವಾಗಿ ಅಂಬೇಡ್ಕರರು ಹೇಳುತ್ತಾರೆ ಪ್ಯಾಶಿಸ್ಟ್ ಮತ್ತು ಅಥವಾ ನಾಝಿ ಸಿದ್ಧಾಂತದ ಲಕ್ಷಣದಂತೆಯೇ ಹಿಂದುತ್ವ ಕೂಡ ರಾಜಕೀಯ ಸಿದ್ಧಾಂತ. ಎಲ್ಲಕ್ಕಿಂತ ಹೆಚ್ಚಾಗಿ ಅದು ಪ್ರಜಾಪ್ರಭುತ್ವ ವಿರೋಧಿ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.1, ಪು.346). ಅಂದಹಾಗೆ ಪ್ರಜಾಪ್ರಭುತ್ವ ವಿರೋಧಿ ವ್ಯವಸ್ಥೆಯ ಉದ್ದೇಶವಾದರೂ ಏನಿರುತ್ತದೆ? ವಿರೋಧಿಗಳನ್ನು ಬಗ್ಗುಬಡಿಯುವುದು. ಬಗ್ಗುಬಡಿಯುವುದು ಅದು ಹೇಗೆ? ವಿರೋಧಿಗಳನ್ನು ಒಳಕ್ಕೆಳೆದುಕೊಳ್ಳುವುದು ಅಥವಾ ಅವರ ವಿಚಾರಗಳು ಮತ್ತು ನಮ್ಮ ವಿಚಾರಗಳು ಎರಡೂ ಒಂದೇ ಎಂದು ಬಿಡುವುದು! ತನ್ಮೂಲಕ ಅಂಬೇಡ್ಕರರ ಅಧಮ್ಯ ವಿಚಾರಗಳ ಪ್ರಸ್ತುತತೆಯನ್ನು, ಅದರಿಂದ ಉಂಟಾಗಬಹುದಾದ ವೈಚಾರಿಕ ವಿಪ್ಲವವನ್ನು ಇನ್ನಿಲ್ಲವಾಗಿಸುವುದು! ಈ ಹಿನ್ನೆಲೆಯಲ್ಲಿ ಮೋದಿಯವರಿಂದ ಅಂಬೇಡ್ಕರ್ ಗುಣಗಾನ, ಆರೆಸ್ಸೆಸ್ ಮುಖವಾಣಿಯಿಂದಲೂ ಅಂಬೇಡ್ಕರ್ ಕುರಿತು ವಿಶೇಷ ಸಂಚಿಕೆ ಇತ್ಯಾದಿಗಳ ಸದುದ್ದೇಶ ಇದಲ್ಲದೆ ಮತ್ತೇನಾಗಿರಲು ಸಾಧ್ಯ? ಈ ನಿಟ್ಟಿನಲ್ಲಿ ಹಿಂದುತ್ವವಾದಿಗಳ ಇಂತಹ ಉದ್ದೇಶ ಅದು ಯಶ ಕಾಣುತ್ತದೆಯೆ? ಅಥವಾ ಅಂಬೇಡ್ಕರರ ವಿಚಾರಗಳು ಅವರು ವಶಪಡಿಸಿಕೊಳ್ಳುವಷ್ಟು ದುರ್ಬಲವೇ? ಖಂಡಿತ ಇಲ್ಲ. ಯಾಕೆಂದರೆ ಹಿಂದುತ್ವವಾದಿಗಳ ಪ್ರಾಕೃತಿಕ ಗುಣ ಆಗಾಗ ಹೊರಹೊಮ್ಮುತ್ತಿರುತ್ತದೆ! ಅದು ರೋಹಿತ್ ವೇಮುಲಾ ಹತ್ಯೆ ಪ್ರಕರಣವಿರಬಹುದು... ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತರ ಮೀಸಲಾತಿ ಪರಾಮರ್ಶೆಯಾಗಬೇಕು ಎಂಬ ಹೇಳಿಕೆಯಿರಬಹುದು... ಉತ್ತರಪ್ರದೇಶದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಮಧು ಮಿಶ್ರಾ ಒಂದು ಕಾಲದಲ್ಲಿ ನಮ್ಮ ಚಪ್ಪಲಿ ಶುಚಿಗೊಳಿಸುತ್ತಿದ್ದವರು ಸಂವಿಧಾನದ ಸಹಾಯದಿಂದ ಇಂದು ಆಳುವಂತವರಾಗಿದ್ದಾರೆ ಎಂದು ಹೇಳಿದ್ದಿರಬಹುದು... ಹೀಗೆ ಹೊರಹೊಮ್ಮುತ್ತಲೇ ಇದೆ! ಈ ಹಿನ್ನೆಲೆಯಲ್ಲಿ ಪ್ರಕೃತಿಯ ವಿರುದ್ಧ ಯಾರೂ ಕೂಡ ನಡೆಯಲು ಸಾಧ್ಯವಿಲ್ಲ. ಯಾಕೆಂದರೆ ಅಂಬೇಡ್ಕರ್ ಸೃಷ್ಟಿಮಾಡಿಟ್ಟುಹೋಗಿರುವ ಪ್ರಕೃತಿ ಆ ತರಹದ್ದು!

ಅಂಬೇಡ್ಕರರು ಹೇಳುತ್ತಾರೆ ಅಸ್ಪಶ್ಯರು ಹಿಂದೂಗಳ ಸಮಾಜಕ್ಕೆ ಸೇರುವುದಿಲ್ಲ ಮತ್ತು ಹಿಂದೂಗಳೂ ಅಷ್ಟೆ ತಾನು ಮತ್ತು ಅಸ್ಪಶ್ಯರು ಇಬ್ಬರೂ ಒಂದೇ ಸಮಾಜಕ್ಕೆ ಸೇರಿದವರು ಎಂದು ಭಾವಿಸುವುದಿಲ್ಲ. ಈ ನಿಟ್ಟಿನಲ್ಲಿ ಅಸ್ಪಶ್ಯರ ಸಮಸ್ಯೆಯ ಬಗ್ಗೆ ಹಿಂದೂಗಳಲ್ಲಿ ನೈತಿಕವಾಗಿಯೂ ನಿರಾಸಕ್ತಿ ಕಂಡುಬರುತ್ತದೆ ಯಾಕೆ ಎಂಬುದಕ್ಕೆ ಇದೇ ಪ್ರಮುಖ ಕಾರಣ. ಅಲ್ಲದೆ, ಆತ್ಮಸಾಕ್ಷಿಯೂ ಇಲ್ಲದ ಕಾರಣ ಹಿಂದೂವೊಬ್ಬನಲ್ಲಿ ಅಸ್ಪಶ್ಯರು ಅನುಭವಿಸುವ ಇಂತಹ ನಿರಂತರ ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ದನಿ ಎತ್ತುವ ಪ್ರಾಮಾಣಿಕ ಆಕ್ರೋಶವೂ ಇರುವುದಿಲ್ಲ.

Writer - ರಘೋತ್ತಮ ಹೊ.ಬ, ಮೈಸೂರು

contributor

Editor - ರಘೋತ್ತಮ ಹೊ.ಬ, ಮೈಸೂರು

contributor

Similar News

ಸಂವಿಧಾನ -75