ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೇನ್ ದಿನಕ್ಕೆ ಕನಿಷ್ಠ 100 ಬಾರಿ ಸಂಚರಿಸಬೇಕು!!

Update: 2016-04-18 18:29 GMT

ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಪ್ರಸ್ತಾವಿತ ಬುಲೆಟ್ ಟ್ರೇನ್ ರೈಲ್ವೆಗೆ ಆರ್ಥಿಕ ಹೊರೆಯಾಗದಿರಬೇಕಾದರೆ ಅದು ಪ್ರತಿದಿನ 88,000-1,18,000 ಪ್ರಯಾಣಿಕರನ್ನು ಸಾಗಿಸಬೇಕು ಅಥವಾ ಪ್ರತಿ ದಿನ 100 ಬಾರಿ ಸಂಚರಿಸಬೇಕು. ಐಐಎಂ-ಅಹ್ಮದಾಬಾದ್ ಸಿದ್ಧಗೊಳಿಸಿರುವ ಅಧ್ಯಯನ ವರದಿಯು ಈ ಅಂಶವನ್ನು ಬೆಟ್ಟು ಮಾಡಿದೆ.
 ಯೋಜನೆಗಾಗಿ ಮಾಡಲಾಗುತ್ತಿರುವ ಸಾಲದ ಕಂತುಗಳನ್ನು ಬಡ್ಡಿಸಹಿತ ಸಕಾಲದಲ್ಲಿ ಪಾವತಿಸಲು ಸಾಧ್ಯವಾಗಬೇಕಾದರೆ ದೇಶದ ಮಹತ್ವಾಕಾಂಕ್ಷೆಯ ಈ ರೈಲು ಕಾರ್ಯಾರಂಭಗೊಂಡ ಬಳಿಕ 15 ವರ್ಷಗಳವರೆಗೂ ಪ್ರತಿ ವ್ಯಕ್ತಿಗೆ 300 ಕಿ.ಮೀ.ಪ್ರಯಾಣಕ್ಕೆ 1500 ರೂ.ಶುಲ್ಕವನ್ನು ವಿಧಿಸಬೇಕಾಗುತ್ತದೆ ಮತ್ತು ಅದು ಪ್ರತಿ ದಿನ 88,000-1,18,000 ಪ್ರಯಾಣಿಕರನ್ನು ಸಾಗಿಸಬೇಕಾಗುತ್ತದೆ ಎಂದು ‘ಭಾರತದಲ್ಲಿ ಅತ್ಯಂತ ವೇಗದ ರೈಲು(ಎಚ್‌ಎಸ್‌ಆರ್)ಗಳು:ಅಭಿವೃದ್ಧಿಯಲ್ಲಿ ಸಮಸ್ಯೆಗಳು’ ಶೀರ್ಷಿಕೆಯ ಈ ವರದಿಯು ಹೇಳಿದೆ. ರೈಲು ಒಟ್ಟೂ 534 ಕಿ.ಮೀ.ಗಳನ್ನು ಕ್ರಮಿಸಲಿದೆ.

ಯೋಜನೆಯ ವೆಚ್ಚದ ಶೇ.80ರಷ್ಟು...ಅಂದರೆ 97,636 ಕೋ.ರೂ.ಗಳನ್ನು ಶೇ.0.1 ರಿಯಾಯಿತಿ ಬಡ್ಡಿದರದಲ್ಲಿ ಸಾಲವಾಗಿ ಜಪಾನ್ ನೀಡಲಿದ್ದು,ಅದನ್ನು 50 ವರ್ಷಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ರೈಲು ಕಾರ್ಯಾರಂಭಗೊಂಡ 16ನೆ ವರ್ಷದಿಂದ ಸಾಲದ ಮರುಪಾವತಿ ಪ್ರಾರಂಭವಾಗಲಿದೆ.
ಉಳಿದ ಶೇ.20 ರಷ್ಟು...ಅಂದರೆ 20,000 ಕೋ.ರೂ.ಸಾಲವನ್ನು ಕೇಂದ್ರ ಸರಕಾರವು ನೀಡಲಿದ್ದು,ಇದಕ್ಕೆ ಶೇ.8ರಷ್ಟು ಬಡ್ಡಿದರ ವಿಧಿಸಬಹುದು ಎಂದು ಅಧ್ಯಯನವು ಅಂದಾಜಿಸಿದೆ. ಜಪಾನ್ ಸಾಲ ಮರುಪಾವತಿಗೆ 15 ವರ್ಷಗಳ ಸ್ತಂಭನ ಅವಧಿಯ ಕೊಡುಗೆಯನ್ನು ನೀಡಿರುವುದರಿಂದ ಭಾರತೀಯ ರೈಲ್ವೆಯು 16ನೆ ವರ್ಷದಿಂದ ಆದಾಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ ಎಂದು ವರದಿಯನ್ನು ಸಿದ್ಧಪಡಿಸಿರುವ ಐಐಎಂ-ಎ ಬೋಧಕರಾದ ಜಿ.ರಘುರಾಮ ಮತ್ತು ಪ್ರಶಾಂತ ಉದಯಕುಮಾರ ಹೇಳಿದ್ದಾರೆ.

15 ವರ್ಷಗಳ ಬಳಿಕ ವಾಸ್ತವ ನಿರ್ವಹಣಾ ವೆಚ್ಚ ಎಷ್ಟಾಗಲಿದೆ ಎನ್ನುವುದು ಗೊತ್ತಿಲ್ಲವಾದರೂ ವರದಿಯು ಆದಾಯದ ಶೇ.20 ಮತ್ತು ಶೇ.40ರಷ್ಟನ್ನು ನಿರ್ವಹಣಾ ವೆಚ್ಚವನ್ನಾಗಿ ಪರಿಗಣಿಸಿ ಎರಡು ಚಿತ್ರಣಗಳನ್ನು ಮುಂದಿರಿಸಿದೆ. ಉಳಿದ ಆದಾಯ ಸಾಲದ ಮರುಪಾವತಿಗೆ ಬಳಕೆಯಾಗುತ್ತದೆ. ಈ ಎರಡೂ ಚಿತ್ರಣಗಳಲ್ಲಿ ಸಾಲದ ಮರುಪಾವತಿಗೆ ಆದಾಯ ಸೃಷ್ಟಿಯಾಗಬೇಕಾದರೆ ಪ್ರಯಾಣಿಕರು ಸರಾಸರಿ 300 ಕಿ.ಮೀ.ಪ್ರಯಾಣಿಸಬೇಕು ಮತ್ತು ಪ್ರತಿದಿನ ಅನುಕ್ರಮವಾಗಿ 88,000 ಮತ್ತು 1,18,000 ಪ್ರಯಾಣಿಕರು ಈ ರೈಲನ್ನು ಬಳಸಬೇಕು. ಸಾಮಾನ್ಯವಾಗಿ ಒಂದು ರೈಲು 800 ಪ್ರಯಾಣಿಕರನ್ನು ಸಾಗಿಸಬಲ್ಲುದು. ಹೀಗಾಗಿ ಪ್ರತಿದಿನ 88,000 ಪ್ರಯಾಣಿಕರನ್ನು ಸಾಗಿಸಲು ಕನಿಷ್ಠ 100 ಟ್ರಿಪ್‌ಗಳ ಅಗತ್ಯವಿದೆ. ಅಂದರೆ ಪ್ರತಿ ಗಂಟೆಗೆ ಎರಡೂ ದಿಕ್ಕುಗಳಲ್ಲಿ ಮೂರು ರೈಲುಗಳು ಸಂಚರಿಸಬೇಕಾಗುತ್ತದೆ ಎಂದು ರಘುರಾಮ ಹೇಳಿದ್ದಾರೆ.
ಈ ಎಲ್ಲ ಸಮಸ್ಯೆಗಳಿದ್ದರೂ ಎಚ್‌ಎಸ್‌ಆರ್‌ನಿಂದ ಹಲವಾರು ಧನಾತ್ಮಕ ಲಾಭಗಳಿವೆ ಮತ್ತು ಅದು ಭಾರತದ ಒಟ್ಟಾರೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದಿರುವ ವರದಿಯು,ಮೊದಲ ಮಾರ್ಗವಾಗಿ ಮುಂಬೈ-ಅಹ್ಮದಾಬಾದ್ ಮಾರ್ಗವು ಉತ್ತಮ ಆಯ್ಕೆಯಾಗಿದೆ. ಅದು ದೇಶದ ಅತ್ಯಂತ ಹೆಚ್ಚು ಜನಸಂಖ್ಯೆಯ ನಗರಗಳ ಪಟ್ಟಿಯಲ್ಲಿನ ಮೊದಲ ಮತ್ತು ಏಳನೆ ಸ್ಥಾನಗಳಲ್ಲಿರುವ ನಗರಗಳನ್ನು ಸಂಪರ್ಕಿಸುತ್ತದೆ ಮತ್ತು ಇವೆರಡೂ ನಗರಗಳ ನಡುವಿನ 500 ಕಿ.ಮೀ.ಗಳ ಕಾರಿಡಾರ್ ಮಹತ್ವದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News