ಭಾರತಕ್ಕೆ ಶಾಪವಾಗಿರುವ ಬಿರುಬೇಸಿಗೆ...

Update: 2016-04-22 18:52 GMT

ಮಹಾಕವಿ ಕಾಳಿದಾಸ ‘ಋತುಸಂಹಾರ ’ ಕಾವ್ಯ ಬರೆದ ಕಾಲದಿಂದಲೇ ಋತುಗಳ ಜೊತೆಗೆ ಭಾರತದ ಸರಸ ಹೆಸರುವಾಸಿಯಾಗಿತ್ತು. ಆದರೆ ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ಈ ಸರಸವು ಜಟಿಲಗೊಂಡಿದೆ.
    ಹವಾಮಾನ ಬದಲಾವಣೆಯು ಉಷ್ಣಮಾರುತಗಳ ಪುನರಾವರ್ತನೆ ಹಾಗೂ ತೀವ್ರತೆಗೆ ಕಾರಣವಾಗುವ ನಿರೀಕ್ಷೆಯಿದೆ. ಭಾರತದ ಪಾಲಿಗೆ 2015ನೆ ಇಸವಿಯು,ಈವರೆಗೆ ದಾಖಲಾದ (1901ರಿಂದೀಚೆಗೆ) ಮೂರನೆ ಅತ್ಯಧಿಕ ತಾಪಮಾನದ ವರ್ಷವಾಗಿತ್ತು ಹಾಗೂ ಭೀಕರ ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಈ ವರ್ಷ ಭಾರತದ ಹವಾಮಾನ ಇಲಾಖೆ (ಐಎಂಡಿ)ಯು ವಾಯವ್ಯ ಹಾಗೂ ಕೇಂದ್ರ ಭಾರತ (ರಾಜಸ್ಥಾನ, ಪಂಜಾಬ್, ಹರ್ಯಾಣ, ಪೂರ್ವ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್)ದಲ್ಲಿ ಹಿಂದಿನ ವರ್ಷಗಳಿಗಿಂತ ಬೇಗನೆ ಉಷ್ಣಮಾರುತಗಳು ಉಂಟಾಗಲಿವೆಯೆಂದು ಎಚ್ಚರಿಕೆ ನೀಡಿತ್ತು. ಆನಂತರ ಉಷ್ಣಮಾರುತದ ಹಾವಳಿಯ ಹಿನ್ನೆಲೆಯಲ್ಲಿ ಕೋಲ್ಕತಾ ಸಹಿತ ಪಶ್ಚಿಮಬಂಗಾಳದ ಕೆಲವು ಪ್ರದೇಶಗಳು, ಒಡಿಶಾ ಹಾಗೂ ಮಧ್ಯಪ್ರದೇಶದಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ.
ಬಿಸಿಗಾಳಿಯು ಆರೋಗ್ಯ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತ್ತವೆ. ಬಿಸಿಲಿನ ಬಾಧೆ ತಾಳಲಾರದೆ ಸಾವುಗಳು ಸಂಭವಿಸುವ ಜೊತೆಗೆ ಹಲವಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುವುದು ಸಾಮಾನ್ಯವಾಗಿದೆ. ಸೂರ್ಯಾಘಾತ (ಹೀಟ್ ಸ್ಟ್ರೋಕ್), ತೀವ್ರವಾದ ತಾಪಮಾನಗಳು ಹೃದಯನಾಳ ಹಾಗೂ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
  ಈ ಶತಮಾನದ ಕೊನೆಯ ವೇಳೆಗೆ ಭಾರತದ 345 ಜಿಲ್ಲೆಗಳ (ಸುಮಾರು 70 ಕೋಟಿ ಜನತೆ) ಸರಾಸರಿ ತಾಪಮಾನದಲ್ಲಿ 2 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಏರಿಕೆಯಾಗುವ ಸಾಧ್ಯತೆಯಿದೆಯೆಂದು ಇಂಧನ ಮಂಡಳಿ, ಪರಿಸರ ಹಾಗೂ ಜಲ (ಸಿಇಇಡಬ್ಲು), ಭಾರತೀಯ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್ ಅಹ್ಮದಾಬಾದ್ ಹಾಗೂ ಗಾಂಧಿನಗರ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ ಜಂಟಿ ಅಧ್ಯಯನವು ಬಹಿರಂಗಪಡಿಸಿದೆ.ಮುಂದಿನ ಮೂರು ದಶಕಗಳಲ್ಲಿ ಭಾರತದ ಸರಾಸರಿ ವಾಯುತಾಪಮಾನದಲ್ಲಿ 1-1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಏರಿಕೆಯಾಗಲಿದೆ. ರಾತ್ರಿ ಸಮಯದ ಅಧಿಕ ತಾಪಮಾನಕ್ಕೂ, ಮಾನವರಲ್ಲಿ ಹೃದಯ ಸಂಬಂಧಿ ಅಸ್ವಸ್ಥತೆಯ ಪ್ರಕರಣಗಳ ಹೆಚ್ಚಳಕ್ಕೂ ಪರಸ್ಪರ ಸಂಬಂಧವಿದೆ.
     ಅತ್ಯಧಿಕ ಬಿಸಿಲಿನ ಝಳವಿರುವ ಬೇಸಿಗೆಗಳು, ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಕಾರ್ಮಿಕರಿಗೆ ಹೊರಾಂಗಣದ ಕೆಲಸಗಳನ್ನು ಕೈಗೊಳ್ಳಲು ಅತ್ಯಂತ ಅಪಾಯ ಕಾರಿಯೆಂಬುದನ್ನು ಚೊಚ್ಚಲ ಜಾಗತಿಕ ಹವಾಮಾನ ಬದಲಾವಣೆಯ ಅಪಾಯದ ವೌಲ್ಯಮಾಪನ ( ಸಿಇಇಡಬ್ಲು, ಹಾರ್ವರ್ಡ್ ವಿವಿ,ತ್ಸಿಗುಂವಾ ವಿವಿ ಆಗೂ ಬ್ರಿಟನ್ ವಿದೇಶಿ ಹಾಗೂ ಕಾಮನ್‌ವೆಲ್ತ್ ಕಚೇರಿ)ವು ಬೆಳಕು ಚೆಲ್ಲಿದೆ. ಬೆಳೆ ವೈಫಲ್ಯದ ಅಪಾಯ ಹಾಗೂ ಇದರಿಂದಾಗಿ ರೈತರಿಗೆ ಆರ್ಥಿಕ ಸಂಕಷ್ಟ ಉಟಾಗಲಿದೆ. ಇಂತಹ ಸಂದರ್ಭಗಳಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುವ ಅಪಾಯವೂ ಇದೆ.
    ಬದಲಾಗುತ್ತಿರುವ ಹವಾಮಾನದಲ್ಲಿ ಅಧಿಕ ತಾಪಮಾನದ, ದೀರ್ಘವಾದ ಹಾಗೂ ಮಾರಣಾಂತಿಕವಾದ ಬೇಸಿಗೆಗಳು ಸಾಮಾನ್ಯವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಹೊಂದಾಣಿಕೆಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಆರೋಗ್ಯ, ಜಲ ಹಾಗೂ ವಿದ್ಯುತ್ ವಲಯಗಳ ನಡುವೆ ಸಮನ್ವಯತೆ ಹಾಗೂ ನೀತಿ ರೂಪಿಸುವುದು ಅವುಗಳಲ್ಲಿ ಒಳಗೊಂಡಿವೆ.
  ಪ್ರಪ್ರಥಮವಾಗಿ ಆರೋಗ್ಯ ಎಚ್ಚರಿಕೆ ವ್ಯವಸ್ಥೆ (ಎಚ್‌ಎಚ್‌ಡಬ್ಲುಎಸ್) ಯನ್ನು ಸದೃಢಗೊಳಿಸಬೇಕಾಗಿದೆ. ಹವಾಮಾನ ಮುನ್ಸೂಚನೆಯನ್ನು ಒದಗಿಸುವುದು, ಜನರಿಗೆ ಎಚ್ಚರಿಕೆ ನೀಡುವುದು ತುರ್ತುಪರಿಸ್ಥಿತಿ ಪ್ರತಿಕ್ರಿಯಾ ವ್ಯವಸ್ಥೆಯನ್ನು ಸರ್ವಸನ್ನದ್ಧವಾಗಿಡುವುದು, ರೋಗಿಗಳ ಹಠಾತ್ ಪ್ರವಾಹವನ್ನು ನಿಭಾಯಿಸಲು ಆರೋಗ್ಯ ಸೌಕರ್ಯಗಳ ಸ್ಥಾಪನೆ ಇದರಲ್ಲಿ ಒಳಗೊಂಡಿದೆ. ಅಧಿಕ ತಾಪಮಾನದಿಂದಾಗಿ ಮಾನವರಲ್ಲಿ ಹೃದಯಕ್ಕೆ ಸಂಬಂಧಿಸಿದ ಅಪಾಯಗಳುಂಟಾಗುವುದನ್ನು ತಡೆಯಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಎಚ್ಚರಿಕೆ ವ್ಯವಸ್ಥೆಗಳು ನೆರವಾಗಬಲ್ಲವು. ಭಾರತೀಯ ಹವಾಮಾನ ಇಲಾಖೆಯು, ಉಷ್ಣಮಾರುತದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಿರುವ ಹೊರತಾಗಿಯೂ, ತುರ್ತು ಪ್ರಕ್ರಿಯಾ ವ್ಯವಸ್ಥೆಗಳು ಹಾಗೂ ಆರೋಗ್ಯ ಸೌಲಭ್ಯಗಳ ನಡುವಿನ ಸಮನ್ವಯತೆಯು ತಪ್ಪಿಹೋಗಿದೆ.
    ತಾಪಮಾನ-ಆರೋಗ್ಯ ಮುನ್ನೆಚ್ಚರಿಕೆ ವ್ಯವಸ್ಥೆ (ಎಚ್‌ಎಚ್‌ಡಬ್ಲುಎಸ್)ಯ ಜಾರಿಯಿಂದ, ಸಾವಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದನ್ನು ಜಾಗತಿಕ ಅಧ್ಯಯನಗಳು ಪ್ರದರ್ಶಿಸಿವೆ. ಫ್ರಾನ್ಸ್‌ನಲ್ಲಿ 2006ರಲ್ಲಿ ಎಚ್‌ಎಚ್‌ಡಬ್ಲುಎಸ್‌ನ ಜಾರಿಯಿಂದಾಗಿ 4400 ಸಾವುಗಳು ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಾಯಿತು. ಇನ್ನು ಭಾರತದ ವಿಷಯಕ್ಕೆ ಬರುವುದಾದರೆ ಅಹ್ಮದಾಬಾದ್, ನಾಗಪುರ ಹಾಗೂ ಒಡಿಶಾಗಳಲ್ಲಿ ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನಗಳನ್ನು ನಡೆಸಲಾಗಿದೆ. ಈ ವ್ಯವಸ್ಥೆಗಳನ್ನು ದೇಶಾದ್ಯಂತ ಇತರ ನಗರಗಳಿಗೂ ವಿಸ್ತರಿಸುವ ಅಗತ್ಯವಿದೆ.
 ಎರಡನೆಯದಾಗಿ ಹವಾಮಾನ ಬದಲಾವಣೆ ಹಾಗೂ ಆರೋಗ್ಯ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸಲಾಗಿದೆ. ತಾಪಮಾನ ಸಂಬಂಧಿ ಅನಾರೋಗ್ಯ ಹಾಗೂ ಮರಣಗಳನ್ನು ತಡೆಗಟ್ಟುವುದೇ ಈ ಯೋಜನೆಯ ಮುಖ್ಯ ಕಾರ್ಯಕ್ರಮವಾಗಿದೆ.
     ಮೂರನೆಯದಾಗಿ, ನೀರಿನ ಸಮರ್ಪಕ ಪೂರೈಕೆಯನ್ನು ಖಾತರಿಪಡಿಸುವುದು. ಬಿಸಿಲಝಳಕ್ಕೆ ಒಡ್ಡಿಕೊಳ್ಳುವುದರಿಂದ ನಿರ್ಜಲೀಕರಣವು (ಡಿಹೈಡ್ರೇಶನ್) ಉಂಟಾಗಿ, ಜೀವಕ್ಕೆ ಅಪಾಯವುಂಟಾಗಬಹುದು ಹಾಗೂ ಅಂತಿಮವಾಗಿ ಸಾವು ಕೂಡಾ ಸಂಭವಿಸಬಹುದಾಗಿದೆ. ಕುಡಿಯುವ ನೀರಿನ ಸಕಾಲಿಕ ಲಭ್ಯತೆಯು, ಇಂತಹ ಅಪಾಯವನ್ನು ತಪ್ಪಿಸಲು ನೆರವಾಗುತ್ತದೆ. ತಾಪಮಾನ ತೀವ್ರವಾಗಿರುವ ಪ್ರದೇಶಗಳಲ್ಲಿ ನೀರಿನ ತೀವ್ರ ಕೊರತೆಯೂ ಸಾಮಾನ್ಯವಾಗಿದೆ. ಲಾತೂರ್, ಉಸ್ಮಾನಾಬಾದ್ ಹಾಗೂ ಬೀಡ್‌ನಂತಹ ಅಧಿಕ ತಾಪಮಾನದಿಂದ ಪೀಡಿತವಾದ ಪ್ರದೇಶಗಳು ನೀರಿನ ತೀವ್ರ ಅಭಾವವನ್ನೂ ಎದುರಿಸುತ್ತಿವೆ. ಫ್ಯಾನ್‌ಗಳು ಹಾಗೂ ಹವಾನಿಯಂತ್ರಕಗಳ ಬಳಕೆಯ ಮೂಲಕ ತಂಪಾದ ವಾತಾವರಣದ ಸೌಕರ್ಯವನ್ನು ಪಡೆಯಲು ಕೂಡಾ ನೀರಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಾನವ ಜೀವಗಳ ರಕ್ಷಣೆಗೆ ಜಲವಲಯದ ವ್ಯೆಹಾತ್ಮಕ ಯೋಜನೆಗೆ ಗರಿಷ್ಠ ಮಹತ್ವವನ್ನು ನೀಡಬೇಕಾಗಿದೆ.
    ನಾಲ್ಕನೆಯದಾಗಿ ಸಮರ್ಪಕ ಅವಧಿಯವರೆಗೆ ಯೋಗ್ಯ ಪ್ರಮಾಣದಲ್ಲಿ ವಿದ್ಯುತ್ತನ್ನು ಒದಗಿಸುವುದು. ಬಿಸಿಲಿನ ಒತ್ತಡ ತಡೆಗಟ್ಟಬೇಕಾದರೆ ತಂಪಾದ ಪರಿಸರ ನಿರ್ಮಾಣವು ಮೂಲಾಧಾರವಾಗಿದೆ. ಫ್ಯಾನ್‌ಗಳು, ಏರ್‌ಕಂಡಿಶನರ್‌ಗಳು ಅಥವಾ ವೈದ್ಯಕೀಯ ಕೇಂದ್ರಗಳ ಕಾರ್ಯನಿರ್ವಹಣೆಯು ವಿದ್ಯುತ್ ಪೂರೈಕೆಯನ್ನು ಅವಲಂಬಿಸಿದೆ. ಕುಡಿಯುವ ನೀರಿಗಾಗಿ ಅಂತರ್ಜಲವನ್ನು ಮೇಲೆತ್ತಲು ಹಲವು ಸಮುದಾಯಗಳು ವಿದ್ಯುತ್ತನ್ನು ಅವಲಂಬಿಸಿವೆ. ಭಾರತಾದ್ಯಂತ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಸರ್ವೇಸಾಮಾನ್ಯವಾಗಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕಾಗಿದೆ. ವಿದ್ಯುತ್ ಸಂಪರ್ಕದ ಪೂರೈಕೆಯು ಅತ್ಯಂತ ಕಠಿಣವಾಗಿರುವ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರವಿದ್ಯುತ್ ಆಧಾರಿತ ವ್ಯವಸ್ಥೆಗಳನ್ನು ಒದಗಿಸಬೇಕಾಗಿದೆ. ಛತ್ತೀಸ್‌ಗಡ, ಮಹಾರಾಷ್ಟ್ರ ಹಾಗೂ ತ್ರಿಪುರ ರಾಜ್ಯಗಳು ಈಗಾಗಲೇ ಇಂತಹ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿವೆ.
 ನೀತಿ ಜೋಡಣೆ ಹಾಗೂ ಈ ವಲಯಗಳ ನಡುವೆ ಸಮನ್ವಯ ಗೊಳಿಸುವುದು ಅತ್ಯಂತ ಆವಶ್ಯಕತೆಯ ಪ್ರಕ್ರಿಯೆಯಾಗಿದೆ. ಮುಂಬರುವ ವರ್ಷಗಳಲ್ಲಿ ಋತುಗಳ ಜೊತೆಗಿನ ಸರಸವು ಕಳೆದುಹೋಗಬಹುದು. ಆದರೆ ಜೀವಗಳು ಕಳೆದುಹೋಗಕೂಡದು.
                                                                                               ಕೃಪೆ: ದಿ ಹಿಂದೂ

Writer - ಹೇಮ ಎಚ್. ಧೋಲಕಿಯಾ

contributor

Editor - ಹೇಮ ಎಚ್. ಧೋಲಕಿಯಾ

contributor

Similar News