ಸಹಿಷ್ಣುತೆಯ ಕೆಲವು ಮಾದರಿಗಳು

Update: 2016-04-23 18:55 GMT

ಲೋಕೋ ಭಿನ್ನ ರುಚಿ: ಇದು ನಮ್ಮದೇ ಮಾತು. ಆದರೆ ಈ ಭಿನ್ನತೆಯನ್ನು ಗೌರವಿಸಲಾಗದಷ್ಟು ಮನಸ್ಸು ಅನಾರೋಗ್ಯಪೀಡಿತವಾದಲ್ಲಿ ನಾವು ಪರಮ ಅಸಹಿಷ್ಣುಗಳಾಗುತ್ತೇವೆ. ಲೋಕೋ ಭಿನ್ನರುಚಿ ಎಂಬ ಮಾತಿನ ಅರ್ಥ ಭಿನ್ನ ರುಚಿಗಳನ್ನು ಮಾನ್ಯ ಮಾಡಬೇಕು, ಗೌರವಿಸಬೇಕು ಎಂಬುದೇ ಆಗಿದೆ. ಬಹುತ್ವವನ್ನು ಮಾನ್ಯ ಮಾಡಿರುವ ಸಂವಿಧಾನವನ್ನು ಹೊಂದಿರುವ ನಾಡಿನಲ್ಲಿ ಇದರ ಮಹತ್ವ ಇನ್ನೂ ಹೆಚ್ಚಿನದು. ಇಲ್ಲಿ ಸಹಿಷ್ಣುತೆಯೇ ಮುಖ್ಯ ಪಾತ್ರಧಾರಿ. ನಮಗಿಂತ ಭಿನ್ನವಾದ ಇನ್ನೊಂದು ಅಭಿಪ್ರಾಯವನ್ನು ಒಪ್ಪದಿದ್ದರೂ ಗೌರವಿಸುವಂಥ ಕನಿಷ್ಠ ಸೌಜನ್ಯವಾದರೂ ಪ್ರಜೆಗಳಲ್ಲಿರಬೇಕೆಂಬುದು ನಮ್ಮ ಸಂವಿಧಾನದ ಆಶಯ. ಈ ಆಶಯಕ್ಕನುಗುಣವಾಗಿ ನಾವೆಲ್ಲ ನಡೆದುಕೊಳ್ಳುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಘಟ್ಟದಲ್ಲಿ ನಾವಿಂದು ಬಂದು ನಿಂತಿದ್ದೇವೆ.
 ಸಹಿಷ್ಣುತೆ ಹಿಂದೂ ಧರ್ಮದ ಮೂಲಭೂತ ಗುಣಲಕ್ಷಣವಾಗಿದ್ದು, ನಮ್ಮಲ್ಲಿ ಅಸಹಿಷ್ಣುತೆ ಇಲ್ಲವೇ ಇಲ್ಲ ಎನ್ನುವುದು ಸರಕಾರ ಒಪ್ಪಿಸುತ್ತಿರುವ ಗಿಣಿಪಾಠ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ಆಡಿರುವ ಈ ಮಾತುಗಳನ್ನು ಗಮನಿಸಿ:

‘‘ಅಸಹಿಷ್ಣುತೆ ಮಾಧ್ಯಮಗಳ ಸೃಷ್ಟಿ. ಸುದ್ದಿವಾಹಿನಿಗಳು ಕಥೆ ಹೆಣೆಯುತ್ತವೆ. ನಾಲ್ಕೈದು ಮಂದಿಯ ತೀಕ್ಷ್ಣ ಪ್ರತಿಕ್ರಿಯೆಗಳಿಗೆ ಮಾತ್ರ ಆದ್ಯತೆ ನೀಡುತ್ತವೆ. ಸಮತೋಲನ ಕಾಪಾಡಿಕೊಳ್ಳುವುದಿಲ್ಲ’’. ಪರದೇಶವೊಂದರಲ್ಲಿ ತಾಯ್ನಿಡಿನ ಮರ್ಯಾದೆ ಕಾಪಾಡಲು ಇಂಥ ಮಾತು ಅಗತ್ಯವಾಗಿರಬಹುದು. ಆದರೆ ದೇಶದ ಇಂದಿನ ಸಂದರ್ಭದಲ್ಲಿ ಅಸಹಿಷ್ಣುತೆ ವಿಜೃಂಭಿಸುತ್ತಿರುವ ವಾಸ್ತವಿಕತೆಯನ್ನು ಮರೆಮಾಚಲಾಗದು. ಇಂದು ಅಸಹಿಷ್ಣುತೆ ನಾನಾರೂಪಗಳಲ್ಲಿ ಪ್ರಕಟವಾಗುತ್ತಿರುವುದು ಜೇಟ್ಲಿಯವರಿಗೆ ತಿಳಿಯದ ಸಂಗತಿ ಏನಲ್ಲ. ಅಸಹಿಷ್ಣುತೆಯನ್ನು ಖಂಡಿಸಿ, ಅದರ ವಿರುದ್ಧ ಪ್ರತಿಭಟಿಸಿ ಸಾಹಿತಿ ಕಲಾವಿದರು ಪ್ರಶಸ್ತಿಗಳನ್ನು ವಾಪಸು ಮಾಡಿದಾಗ ಇದೇ ಜೇಟ್ಲಿಯವರು ‘‘ಇದೆಲ್ಲ ಹೇಳಿ ಮಾಡಿಸಿದ್ದು-ಮ್ಯಾನ್‌ಫ್ಯಾಕ್ಚರ್ಡ್’’ ಎಂದು ಬಣ್ಣಿಸಿದ್ದರು.
 ನಮ್ಮ ಬುದ್ಧಿಜೀವಗಳಲ್ಲೂ ಬಹುತೇಕ ಮಂದಿ ಇದನ್ನು ಎಡ ಮತ್ತು ಬಲಪಂಥೀಯ ಚಿಂತನೆಗಳ ತುರೀಯಾವಸ್ಥೆ ಎಂದು ನಂಬುತ್ತಾರೆ. ಸಹಿಷ್ಣುತೆ ಹಿಂದೂ ಧರ್ಮದ ಪರಮ ಶಕ್ತಿ, ಎಂದೇ ಅನ್ಯಧರ್ಮಗಳ ವಿನಾಶಕೃತ್ಯಗಳನ್ನೂ ಎಲ್ಲ ಹಿಕಮತ್ತುಗಳನ್ನೂ ಅರಗಿಸಿಕೊಂಡು ಭದ್ರವಾಗಿ ನಿಂತಿದ್ದೇವೆ. ಈಗಿನದೆಲ್ಲ ಕೇವಲ ತತ್ಕಾಲೀನ ಪಥಭ್ರಂಶಗಳಷ್ಟೆ ಎಂದು ನಿರಾತಂಕದಿಂದಿರುವವರೂ ಇದ್ದಾರೆ. ‘‘ಹಿಂದೂ ಸಹಿಷ್ಣುತೆ ಎನ್ನುವುದು ಒಂದು ಕಟ್ಟುಕತೆ’’ ಎನ್ನುವ ಟೀಕಾಕಾರರೂ ಇದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ದಾರ್ಶನಿಕರಾದ ಲಂಡನ್ ಸ್ಕೋಲ್ ಆಫ್ ಎಕನಾಮಿಕ್ಸ್ ಪ್ರೊ. ಭಿಕು ಛೋಟಾಲಾಲ್ ಪಾರೆಖ್ ಹೇಳಿರುವ ಕೆಳಗಿನ ಮಾತುಗಳು ಅಧ್ಯಯನಯೋಗ್ಯವಾದವು:
‘‘ಹಿಂದೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಸಹಿಷ್ಣುತೆಗೆ ಅಪಾರ ಮಹತ್ವವಿದೆ. ಸಹಿಷ್ಣುತೆಯಲ್ಲಿ ಹಿಂದೂ ಧರ್ಮದ ದಾಖಲೆ ಉಳಿದ ಧರ್ಮಗಳಿಗಿಂತ ಚೆನ್ನಾಗಿದೆ. ಭಿನ್ನಾಭಿಪ್ರಾಯ ಮರೆಯವುದು ಹಿಂದೂ ಧರ್ಮದ ಜಾಯಮಾನ. ಅನ್ಯ ಧರ್ಮಗಳನ್ನು ಒಂದು ಕ್ರಮಾಗತ ವ್ಯವಸ್ಥೆಯಲ್ಲಿ ಸಂಯೋಜಿಸಿ ಗೌರವಿಸುವುದು ಇದರ ರೀತಿ. ಎಲ್ಲ ಧರ್ಮಗಳ ಬಗೆಗೂ ಒಂದು ರೀತಿಯ ಪೋಷಕ ಭಾವ ಅದರದು. ಈ ನಡೆಯನ್ನು ಅನ್ಯಧರ್ಮಗಳು ಒಪ್ಪುವವರೆಗೆ ಹಿಂದೂ ಧರ್ಮ ಅವುಗಳನ್ನು ಸಹಿಸುತ್ತದೆ. ಆದರೆ ಕೆಳಜಾತಿಯವರು, ದಲಿತರು, ಬ್ರಾಹ್ಮಣೇತರರು, ಹಿಂದೂಯೇತರರು ಈ ವ್ಯವಸ್ಥೆಗೆ ಸವಾಲು ಹಾಕಿ, ಸಮಾನ ಗೌರವಕ್ಕೆ ಆಗ್ರಹಿಸಿದರೆ, ಹಿಂದೂ ಸಹಿಷ್ಣುತೆ ಕಟ್ಟೆಯೊಡೆದು ಅಸಹಿಷ್ಣುತೆ ವಿವಿಧ ರೂಪಗಳನ್ನು ತೋರುತ್ತದೆ’’.
ವಿದ್ವದೀಯ ಚರ್ಚೆಗೆ ಯೋಗ್ಯವಾದ ಮೇಲಿನ ಮಾತುಗಳು ಮೇಲ್ನೋಟಕ್ಕೆ ಹಿಂದೂ ಧರ್ಮದ ಶಕ್ತಿ ಮತ್ತು ದೌರ್ಬಲ್ಯಗಳೆರಡನ್ನೂ ಎತ್ತಿ ತೋರಿಸುವುದರಲ್ಲಿ ಯಶಸ್ವಿಯಾಗಿದೆ. ಇದು ಅಸಹಿಷ್ಣುತೆಯ ಒಂದು ನೆಲೆ. ಈ ಒಂದು ತಾರ್ಕಿಕ ನೆಲೆಯನ್ನು ಮೀರಿದ ಇನ್ನೊಂದು ನೆಲೆ, ತಪ್ಪುಗ್ರಹಿಕೆಯಿಂದ ಕೂಡಿದ ನೆಲೆಯದು, ದ್ವೇಷಮೂಲವಾದದ್ದು. ಇದು ತಾತ್ವಿಕ ಅಥವಾ ವೈಚಾರಿಕ ಭಿನ್ನತೆಯಿಂದ ಉದ್ಭವಿಸಿದ್ದಲ್ಲ. ಈ ಭಿನ್ನ ನೆಲೆಯ ಶಕ್ತಿಗಳು ‘ಹಿಂದೂ’ ಅಹಮಿಕೆಯನ್ನು ಉದ್ರೇಕಿಸುವಂಥ ತಲೆತಿಕ್ಕುವಿಕೆಯಿಂದ ಉದ್ಭವಿಸಿರುವ ಶಕ್ತಿಗಳು. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಈ ಶಕ್ತಿಗಳು ಜಾಗೃತವಾಗಿವೆ.
 
ದಳ, ಸೇನೆ ಹೀಗೆ ಹಲವು ಹೆಸರುಗಳಲ್ಲಿ ಉಗ್ರವಾಗಿ ಕ್ರಿಯಾಶೀಲವಾಗಿರುವ ಇವು ಹಿಂದೂ ಧರ್ಮದ ರಕ್ಷಣೆಯ ಗುತ್ತಿಗೆ ಪಡೆದಂತೆ ಆಕ್ರಮಣಕಾರಿ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಇವತ್ತು ಬಹುತೇಕ ಭಾರತೀಯರಲ್ಲಿ ಮೂಡಿರುವ ಆತಂಕಗಳಿಗೆ ಕಾರಣವಾಗಿದೆ. ಈಗ ಅಸಹಿಷ್ಣುತೆಯ ಕೆಲವು ಮಾದರಿಗಳನ್ನು ನೋಡೋಣ.
1. ಮಂಡ್ಯದಲ್ಲಿ ಹಿಂದೂ ಕನ್ಯೆ ಮುಸ್ಲಿಂ ವರನ ವಿವಾಹಕ್ಕೆ ವಿರೋಧ
2. ಬೆಂಗಳೂರಿನಲ್ಲಿ ‘ಬಿಂಬ’ ನಾಟಕ ತಂಡಕ್ಕೆ ‘ಅಚ್ಛೇ ದಿನ್’ ನಾಟಕ ಪ್ರದರ್ಶಿಸದಂತೆ ಬೆದರಿಕೆ.
3. ಸಾಗರದಲ್ಲಿ ಕಾಲೇಜ್ ಪ್ರೊಫೆಸರ್ ಡಾ.ಮೇಟಿ ಮಲ್ಲಿಕಾರ್ಜುನ ವಿರುದ್ಧ ಬಿಜೆಪಿ ಯುವಮೋರ್ಚಾ ಮತ್ತು ಹಿಂದೂ ಸಂಘಟನೆಗಳಿಂದ ದೇಶದ್ರೋಹದ ಆಪಾದನೆ.
4. ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ಅಧ್ಯಯನ ಕೇಂದ್ರದಿಂದ ದಲಿತ ಪಿಎಚ್.ಡಿ. ವಿದಾರ್ಥಿಯೊಬ್ಬನ ಉಚ್ಚಾಟನೆ.
 5. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ಚೆನ್ನೈ ಐಐಟಿ ಪ್ರಕರಣಗಳು.
 
   ಮೊದಲಿನದು, ಮಂಡ್ಯದ ಪ್ರಕರಣ. ತೀರಾ ವೈಯಕ್ತಿಕ ಸ್ವರೂಪದ್ದು. ಹಿಂದೂ ಹುಡುಗಿಯೊಬ್ಬಳು ಮತ್ತು ಮುಸ್ಲಿಮ್ ಯುವಕನೊಬ್ಬ ಪರಸ್ಪರ ಪ್ರೀತಿಸಿದ್ದಾರೆ. ಇಬ್ಬರೂ ಬಾಳ ಸಂಗಾತಿಗಳಾಗಲು ನಿರ್ಧರಿಸುತ್ತಾರೆ. ಇವರ ವಿವಾಹಕ್ಕೆ ಉಭಯತ್ರ ತಂದೆತಾಯಿಯರ ಒಪ್ಪಿಗೆ, ಆಶೀರ್ವಾದವಿದೆ. ಇದು ವ್ಯಕ್ತಿಗತ ಸ್ವಾತಂತ್ರದ ಮಿತಿಯೊಳಗಿನದು. ಇದರಲ್ಲಿ ಸಂಬಂಧಿತ ಕುಟುಂಬಗಳು ಹೊರತು ಅನ್ಯರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಆದರೆ ಹಿಂದೂ ಧರ್ಮದ ರಕ್ಷಣೆಯ ಗುತ್ತಿಗೆ ಪಡೆದಂಥ ಅಹಂಕಾರದಿಂದ ವರ್ತಿಸುವ ಎಂಥದೋ ಸೇನೆಯೊಂದು ಈ ವಿವಾಹಕ್ಕೆ ತೊಡರುಗಾಲು ಹಾಕಲು ಯತ್ನಿಸುತ್ತದೆ. ಇದು ‘ಲವ್ ಜಿಹಾದ್’ ಎನ್ನುವುದು ಅದರ ವಾದ. ಅಂದರೆ ತಮ್ಮ ಧರ್ಮದ ಯುವತಿಯೊಬ್ಬಳನ್ನು ಅನ್ಯ ಧರ್ಮದವರು ಬಲಾತ್ಕಾರದಿಂದ ಹಾರಿಸಿಕೊಂಡು ಹೋಗುತ್ತಿದ್ದಾರೆ ಎಂಬ ತಪ್ಪುಕಲ್ಪನೆಯಿಂದ ಉಂಟಾದದ್ದು. ಈ ತಪ್ಪುಕಲ್ಪನೆ ಹೇಗೆ ಬಂತು? ಇತಿಹಾಸದಲ್ಲಿ ಅನ್ಯಧರ್ಮೀಯ ಸ್ತ್ರೀಯರನ್ನು ಅಪಹರಿಸಿದ ಘಟನೆಗಳನ್ನು ನಾವು ಕಾಣುತ್ತೇವೆ. ದೇಶ ವಿಭಜನೆಯ ಕಾಲದಲ್ಲೂ ಇದು ನಡೆದದ್ದುಂಟು. ಆದರೆ ಆಗಿನ ಸಂದರ್ಭಗಳೇ ಬೇರೆ. ಸ್ವಾತಂತ್ರ ನಂತರ ನಾವು ಬಹಳ ದೂರ ಸಾಗಿ ಬಂದಿದ್ದೇವೆ. ನಮ್ಮದೀಗ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ. ಪ್ರಜೆಗಳಿಗೆ ವ್ಯಕ್ತಿಗತ ಸ್ವಾತಂತ್ರದಡಿ ತಮಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವೂ ಇದೆ. ಆದರೆ ಇಲ್ಲಿ ಬಲಾತ್ಕಾರಕ್ಕೆ ಅವಕಾಶವಿಲ್ಲ. ವಯಸ್ಕರಾದ ಇಬ್ಬರು ಅನ್ಯಧರ್ಮೀಯ ಯುುವಕ-ಯುವತಿಯರು ಪರಸ್ಪರ ಸಮ್ಮತಿಯಿಂದ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿದೆ. ಅನ್ಯಹಿತಾಸಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಹೀಗಿರುವಾಗ ಮಂಡ್ಯದಲ್ಲಿ ‘ಲವ್‌ಜಿಹಾದ್’ ಎಂಬಂಥ ತಪ್ಪುಕಲ್ಪನೆಯಿಂದ ಯಾವುದೋ ಹೆಸರಿನ ಸೇನೆಯೊಂದು ಮದುವೆಗೆ ಅಡ್ಡಿಪಡಿಸಿದ್ದು, ಮಂಡ್ಯ ಬಂದ್‌ನಂಥ ಹಿಂಸಾಪ್ರಚೋದನಾಕಾರಿ ಪ್ರತಿಭಟನೆಗೆ ಮುಂದಾದ್ದು ಎಷ್ಟರಮಟ್ಟಿಗೆ ಸರಿ? ಯಾವ ರಾಜಕೀಯ ಕುಮ್ಮಕ್ಕಿನಿಂದ ಇಂಥ ಶಕ್ಕಿಗಳು ಕಾರ್ಯಪ್ರವೃತ್ತವಾಗಿರಬಹುದು? ಮದುವೆಯಂಥ ವ್ಯಕ್ತಿಗತ ವಿಷಯದಲ್ಲೂ ಬಹುಸಂಖ್ಯಾತ ಸಮುದಾಯದ ಸಂಘಟನೆಯೊಂದು ಹಿಂಸಾತ್ಮಕವಾಗಿ ಹಸ್ತಕ್ಷೇಪ ಮಾಡುವುದಾದಲ್ಲಿ ಅದು ವ್ಯಕ್ತಿಯನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರಕ್ಕಿಂತ ಬೇರೆಯಲ್ಲ. ವ್ಯಕ್ತಿ ಸ್ವಾತಂತ್ರವಿಲ್ಲದಿದ್ದಲ್ಲಿ ದೇಶದ ಸ್ವಾತಂತ್ರಕ್ಕೆ ಏನರ್ಥ? ವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡುವಂಥ ಅಧಿಕಾರವನ್ನು ಸ್ವಯಂಘೋಷಿತ ಧರ್ಮರಕ್ಷಕ ಪುಂಡುಪೋಕರಿಗಳಿಗೆ ಯಾರು ಕೊಟ್ಟರು? ‘ಬಿಂಬ’ ಮತ್ತು ಡಾ.ಮೇಟಿ ಮಲ್ಲಿಕಾರ್ಜುನರಿಗೆ ಒಡ್ಡಿದ ಬೆದರಿಕೆ ಪ್ರಕರಣಗಳು ಪ್ರಜಾಪ್ರಭುತ್ವದಲ್ಲಿ ತಲೆತಗ್ಗಿಸಬೇಕಾದಂಥ ಘಟನೆಗಳು; ಅಭಿವ್ಯಕ್ತಿ ಸ್ವಾತಂತ್ರಹರಣದ ಜ್ವಲಂತ ನಿದರ್ಶನಗಳು. ‘ಬಿಂಬ’ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಾಟಕಗಳ ಪ್ರದರ್ಶನ, ಮಕ್ಕಳ ನಾಟಕ ಶಿಬಿರ ಮತ್ತಿತರ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಒಂದು ಹವ್ಯಾಸಿ ಸಾಂಸ್ಕೃತಿಕ ತಂಡ. ಬೀದಿ ನಾಟಕಗಳು ಮತ್ತಿತರ ಪ್ರಯೋಗಗಳ ಮೂಲಕ ಜನಜಾಗೃತಿಯುಂಟು ಮಾಡಲು ರಂಗ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಉತ್ಸಾಹಿ ತಂಡ ಇದು. ‘ಅಚ್ಛೇದಿನ್ ಎಲ್ಲಿ?’ ಬೀದಿ ನಾಟಕ ಈ ತಂಡದ ಇತ್ತೀಚಿನ ಪ್ರಯೋಗ. ಮೋದಿ ಸರಕಾರದ ರಕ್ಷಣೆಯ ಗುತ್ತಿಗೆ ಪಡೆದಂಥ ಕೆಲವರು ಈ ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದು ಹಾಗೂ ಮೋದಿ ವಿರುದ್ಧ ಟೀಕೆ ಮಾಡಬಾರದೆಂದು ನಾಟಕದ ನಿರ್ದೇಶಕರಾದ ಶಶಿಕಾಂತ್ ಯಡಹಳ್ಳಿಯವರಿಗೆ ಬೆದರಿಕೆ ಹಾಕಿರುವುದು ಅತ್ಯಂತ ಖಂಡನಾರ್ಹ ಸಂಗತಿ. ಪ್ರಜಾಪ್ರಭುತ್ವದಲ್ಲಿ ಯಾವುದೇ ಸರಕಾರವಾಗಲೀ, ಪ್ರಧಾನ ಮಂತ್ರಿಯಾಗಲೀ ಟೀಕಾತೀತರಲ್ಲ. ಸರಕಾರದ ಸಾಧನೆ, ವೈಫಲ್ಯಗಳನ್ನು ಟೀಕಿಸುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ ಕಲಾವಿದರಿಗಿದೆ. ಎರಡು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಮೋದಿಯವರು ತಮ್ಮ ‘ಅಚ್ಛೇದಿನ್’ ವಚನವನ್ನು ತಾವೇ ನುಂಗಿಕೊಳ್ಳಬೇಕಾದಂಥ ಪರಿಸ್ಥಿತಿ ಉಂಟಾಗಿರುವುದು ಸರ್ವವಿಧಿತ. ಬಡಬಗ್ಗರು ಮತ್ತು ದೀನದಲಿತರ ಪಾಲಿಗೆ ‘ಅಚ್ಛೇದಿನ್’ ಬಂದೇ ಇಲ್ಲ. ಸಗಟು ಸೂಚ್ಯಂಕ ಇಳಿಮುಖವಾಗಿದ್ದರೂ ಜನಸಾಮಾನ್ಯರ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಬೇಳೆಕಾಳುಗಳಂತೂ ಹಿಂದೆಂದೂ ಕಾಣದಷ್ಟು ತುಟ್ಟಿಯಾಗಿವೆ. ಅನುಕೂಲಗಳೇನಾದರೂ ಆಗಿದ್ದಲ್ಲಿ ಅದು ಶ್ರೀಮಂತ ವರ್ಗಕ್ಕೆ ಮಾತ್ರ. ಇದನ್ನು ಎತ್ತಿ ಹೇಳುವುದರಲ್ಲಿ ತಪ್ಪೇನಿದೆ?
 
ಎ.14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಸಾಗರದಲ್ಲಿ ಭಾಷಣ ಮಾಡುತ್ತಾ ಡಾ.ಮೇಟಿ ಮಲ್ಲಿಕಾರ್ಜುನ ಅವರು, ‘‘70 ವರ್ಷಗಳ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಬಾಬಾ ಸಾಹೇಬರು ಕಂಡ ಕನಸುಗಳು ಸಂವಿಧಾನದಲ್ಲಿ ನಮಗೆ ನಾವೇ ಕಟ್ಟಿಕೊಂಡ ಸಾಮಾಜಿಕ ನ್ಯಾಯದ ಆಶಯಗಳು ಇನ್ನೂ ಪೂರ್ಣಗೊಳ್ಳದೇ ಇರುವಾಗ, ಅಂಚಿನ ಮತ್ತು ತಳಸಮುದಾಯಗಳ ಜೀವನಸ್ಥಿತಿಗಳು ದಿನೇದಿನೇ ಮತ್ತೂ ಅಧೋಗತಿಗೆ ಇಳಿಯುತ್ತಿರುವಾಗ ಈ ಸಾಮಾಜಿಕ ತರತಮಗಳನ್ನು ನೀಗಿಸಲು ಪ್ರಯತ್ನಿಸದೇ ಕೇವಲ ಭಾರತ ಮಾತೆಗೆ ಜೈ ಎಂದು ಘೋಷಣೆ ಕೂಗುವುದರಿಂದ ಆಗುವ ಪುರುಷಾರ್ಥವೇನು’’ ಎಂದು ಪ್ರಶ್ನಿಸಿದ್ದರಲ್ಲಿ ತಪ್ಪೇನು? ಯಾವುದೇ ಪ್ರಜ್ಞಾವಂತ ಸರಕಾರ ಮತ್ತು ಪ್ರಜೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದಂಥ ಮಾತುಗಳನ್ನೇ ಡಾ.ಮೇಟಿಯವರು ಆಡಿದ್ದಾರೆ. ಬಿಜೆಪಿ ಮತ್ತು ಹಿಂದುತ್ವಪರ ಸಂಘಟನೆಗಳು ಡಾ.ಮೇಟಿಯವರ ಭಾಷಣಕ್ಕೆ ಅಡ್ಡಿಪಡಿಸಿದ್ದು ಮತ್ತು ಅವರನ್ನು ರಾಷ್ಟ್ರದ್ರೋಹದ ಅಡಿ ಬಂಧಿಸುವಂತೆ ಆಗ್ರಹಪಡಿಸಿರುವುದು ಖಂಡನೀಯ. ಇಂಥ ಪ್ರಯತ್ನಗಳು ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಗೊಳಿಸುವ ಸಾಂಸ್ಕೃತಿಕ ಭಯೋತ್ಪಾದನೆ ಎಂದು ನಾಡಿನ ಪ್ರಗತಿಪರ ಸಾಹಿತಿಗಳು ಮತ್ತು ವಿಚಾರವಾದಿಗಳು ಆತಂಕ ವ್ಯಕ್ತಪಡಿಸಿರುವುದು ಸಹಜ ಪ್ರತಿಕ್ರಿಯೆಯೇ ಆಗಿದೆ. ಬಾಯಲ್ಲಿ ಅಂಬೇಡ್ಕರರನ್ನು ಜಪಿಸುತ್ತ, ಬಗಲಲ್ಲಿ ಬಡಿಗೆ ಹಿಡಿದಿರುವ ಮೋದಿ ಸರಕಾರದ ದಲಿತ ದಮನ ನೀತಿ ಇತ್ತೀಚಿನ ಜೆಎನ್‌ಯು, ಹೈದರಾಬಾದ್ ವಿವಿಗಳು ಮತ್ತು ಚೆನ್ನೈ ಐಐಟಿ ವಿದ್ಯಮಾನಗಳಿಂದ ಸ್ಪಷ್ಟವಾಗಿದೆ. ಇಲ್ಲಿ ಮತ್ತು ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ಆಧ್ಯಯನ ಸಂಸ್ಥೆಯಲ್ಲಿ ದಲಿತ ವಿದಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ನಡೆಸಿಕೊಂಡಿರುವ ರೀತಿಯಿಂದಲೇ ಸರಕಾರದ ದಲಿತ ದಮನ ಧೋರಣೆ ಬಯಲಾಗಿದೆ. ಎಬಿವಿಪಿ ಮೂಲಕ ಸ್ವಾಯತ್ತ ಸಂಸ್ಥೆಗಳಾದ ವಿವಿಗಳನ್ನು ನಿಯಂತ್ರಿಸುವ ದುಡುಕಿನ ನಿರ್ಧಾರದಲ್ಲಿ ಸರಕಾರ ಶೈಕ್ಷಣಿಕ ಸ್ವಾತಂತ್ರಕ್ಕೆ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಸಾಕಷ್ಟು ಹಾನಿಯುಂಟುಮಾಡಿದೆ. ಈ ಎಲ್ಲ ಅವಿವೇಕಗಳಿಂದಾಗಿ ದೇಶವಿದೇಶಗಳ ಪ್ರಾಜ್ಞರು ಸರಕಾರದ ಉದ್ದೇಶದ ಬಗ್ಗೆಯೇ ಶಂಕಿಸುವಂತಾಗಿದೆ.
 ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಬೆದರಿಕೆ ತಲೆದೋರಿದೆ, ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬುದಕ್ಕೆ ಇದಕ್ಕಿಂತ ಮಿಗಿಲಾದ ಉದಾಹರಣೆಗಳು ಬೇಕೆ? ಹಿಂದೂ ಧರ್ಮಧ ಮತ್ತು ದೇಶಭಕ್ತಿಯ ಗುತ್ತ್ತಿಗೆ ಹಿಡಿದಂತಿರುವ ಕೆಲವು ಆರೆಸ್ಸೆಸ್ ಕೃಪಾಪೋಷಿತ ಸಂಘಟನೆಗಳು ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ದಿನದಿಂದ ವಿಭಿನ್ನ ನೀತಿ-ನಿಲುವು, ಧೋರಣೆ, ಅಭಿಪ್ರಾಯಗಳ ವಿರುದ್ಧ ತೋರುತ್ತಿರುವ ಉಗ್ರ ಅಸಹನೆ, ಅಸಹಿಷ್ಣುತೆಗಳನ್ನು ನೋಡಿದಾಗ ಭಾರತೀಯ ಸಮಾಜ ಅರಾಜಕತೆಯತ್ತ ಸಾಗುತ್ತಿದೆಯೇ ಎಂದು ಗಾಬರಿಯಾಗುತ್ತದೆ. ಕೇಂದ್ರ ಸರಕಾರ ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಬೇಕು. ವ್ಯಕ್ತಿಗತ ಬದುಕಿನಲ್ಲಿ ಧರ್ಮದ ಮೂಲಕ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಯತ್ನಿಸುತ್ತ, ರಾಷ್ಟ್ರ ಜೀವನದಲ್ಲಿ ಸಂವಿಧಾನ ಕೊಡಮಾಡಿರುವ ಜಾತ್ಯತೀತ ವ್ಯವಸ್ಥೆಯಲ್ಲಿ ನೆಮ್ಮದಿಯ ಬದುಕನ್ನು ಬಾಳುವ ಅಪೇಕ್ಷೆಯುಳ್ಳ ಅಗಣಿತ ಸಂಖ್ಯೆಯ ಹಿಂದೂಗಳಿದ್ದಾರೆ, ಅಲ್ಪಸಂಖ್ಯಾತರಿದ್ದಾರೆ ಎಂಬ ದೇಶದಲ್ಲಿನ ವಾಸ್ತವವನ್ನು ಸರಕಾರ ಮರೆಯಬಾರದು ಹಾಗೂ ಅವರ ಸಹನೆಯನ್ನು ಪರೀಕ್ಷಿಸುವ ಸಾಹಸಕ್ಕಿಳಿಯಬಾರದು.

ಭರತ ವಾಕ್ಯ
ಸಹಿಷ್ಣು ಭರತ ನಿರ್ಮಾಣಕ್ಕೆ ನಾವು ಎರಡು ಕೆಲಸಗಳನ್ನು ಮಾಡಬೇಕು. ಸಹಿಷ್ಣುತೆಗೆ ಅಗತ್ಯವಾದ ಎಲ್ಲ ಹಿಂದೂ ಪರಿಕರಗಳನ್ನು ಒಗ್ಗೂಡಿಸಬೇಕು. ಜೊತೆಗೆ, ಹಿಂದೂ ಧರ್ಮದಲ್ಲಿ ಬೇರೂರಿರುವ ಅಸಹಿಷ್ಣುತೆಯ ಪ್ರವೃತ್ತಿಯನ್ನು ಒಪ್ಪಿಅದನ್ನು ಎದುರಿಸಬೇಕು. ಇಂಥ ಪ್ರವೃತ್ತಿಯನ್ನು ಸಮಾನತೆಯ ಹಾಗೂ ಬಹುತ್ವದ ವಿಮರ್ಶೆಗೆ ಒಡ್ಡಬೇಕು. ಈ ಸಾಂಸ್ಕೃತಿಕ ಕೆಲಸವನ್ನು ಹಿಂದೆ ರಾಜಾ ರಾಮ್‌ಮೋಹನ್ ರಾಯರಂಥ ಚಿಂತಕರು ಮಾಡಿದ್ದರು.
-ಭಿಕು ಛೋಟೆಲಾಲ್ ಪಾರೆಖ್

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News

ನಾಸ್ತಿಕ ಮದ