ಎನ್‌ಐಎ ಕೇಸರಿ ಉಗ್ರವಾದಿಗಳನ್ನು ರಕ್ಷಿಸುತ್ತಿದೆಯೇ?

Update: 2016-05-04 18:19 GMT

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿವೃತ್ತಿ ಹೊಂದಲಿದ್ದ ಎನ್‌ಐಎಯ ಮುಖ್ಯಸ್ಥ ಶರದ್ ಕುಮಾರ್ ಅವರ ಅಧಿಕಾರದ ಅವಧಿಯನ್ನು ಪ್ರಧಾನ ಮಂತ್ರಿ ನೇತೃತ್ವದ ಸಮಿತಿ ವಿಸ್ತರಿಸಿತು. ಈ ವಿಸ್ತರಣೆ ಅನಿರೀಕ್ಷಿತವಾಗಿದ್ದು ಹಲವರು ಮಾಲೆಗಾಂವ್ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳಲ್ಲಿ ಭಾಗಿಯಾಗಿದ್ದ ಕೇಸರಿ ತೀವ್ರವಾದಿಗಳನ್ನು ರಕ್ಷಿಸುವ ಸಲುವಾಗಿ ಹೀಗೆ ಮಾಡಲಾಗಿದೆ ಎಂದೇ ಆರೋಪಿಸಿದ್ದರು. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಕೇಸರಿ ತೀವ್ರವಾದಿ ಗುಂಪುಗಳು ಈ ಸ್ಫೋಟಗಳಲ್ಲಿ ಭಾಗಿಯಾಗಿರುವುದು ಎನ್‌ಐಎ ಕಂಡುಕೊಂಡಿತ್ತು. ಬಿಜೆಪಿಗೆ ಸಾಮೀಪ್ಯ ಹೊಂದಿರುವ ಎನ್‌ಐಎ ಮುಖ್ಯಸ್ಥ ಶರದ್ ಕುಮಾರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಮೂಲಕ ಕೇಸರಿ ಉಗ್ರವಾದಿಗಳನ್ನು ರಕ್ಷಿಸಿ ಅವರ ಸ್ಥಾನದಲ್ಲಿ ಮುಸ್ಲಿಂ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವ ಚಿಂತನೆ ಮಾಡಲಾಗಿದೆ ಎಂದೇ ಬಹಳಷ್ಟು ಜನರು ಟೀಕಿಸಿದ್ದರು. ಅಖಿಲ ಭಾರತ ಮುಸ್ಲಿಂ ಮಜ್ಲಿಸೇ ಮುಶಾವರತ್ ನ ಅಧ್ಯಕ್ಷರಾಗಿರುವ ನವೀದ್ ಹಮೀದ್, ಕೇಸರಿ ಉಗ್ರವಾದ ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಣಿಸುವುದು ಮೋದಿ ನೇತೃತ್ವದ ಸರಕಾರಕ್ಕೆ ಬೇಡವಾಗಿದ್ದು ಅದೇ ಕಾರಣಕ್ಕೆ ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 2015ರ ಜೂನ್‌ನಲ್ಲಿ ಸಾರ್ವಜನಿಕ ವಕೀಲೆ ರೋಹಿಣಿ ಸಾಲ್ಯಾನ್, ಕೇಸರಿ ಉಗ್ರವಾದಿಗಳ ಬಗ್ಗೆ ಮೃದು ಧೋರಣೆ ಹೊಂದುವಂತೆ ಎನ್‌ಐಎ ಸೂಚಿಸಿತ್ತು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಇಂಬು ನೀಡುವಂತೆ ಎನ್‌ಐಎ ಬಳಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಒಂಬತ್ತು ಮುಸ್ಲಿಂ ಆರೋಪಿಗಳನ್ನು ಜೈಲಿನಲ್ಲಿಡಲಾಗಿತ್ತು. ಸ್ವಾಮಿ ಅಸೀಮಾನಂದ ಮಾಲೆಗಾಂವ್ ಸ್ಫೋಟವನ್ನು ಕೇಸರಿ ಉಗ್ರವಾದಿಗಳು ನಡೆಸಿದ್ದಾರೆ ಎಂದು ಒಪ್ಪಿಕೊಂಡ ನಂತರವೂ ಒಂಬತ್ತು ಮುಸ್ಲಿಂ ಆರೋಪಿಗಳನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಶತಾಯಗತಾಯ ಪ್ರಯತ್ನಿಸಲಾಗಿತ್ತು. ಈ ವಾರ ಈ ಒಂಬತ್ತು ಮುಸ್ಲಿಂ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿ ಬಂಧಮುಕ್ತಗೊಳಿಸಿದ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಶೇಷ ನ್ಯಾಯಾಧೀಶ ವಿವಿ ಪಾಟೀಲ್ ಯಾವುದೇ ಸಂಶಯವಿಲ್ಲದೆ ಸ್ಪಷ್ಟ ಶಬ್ದಗಳಲ್ಲಿ ಈ ಮಂದಿಯನ್ನು ಪ್ರಕರಣದಲ್ಲಿ ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದರು. ಅಂತರ್ಜಾಲ ಸುದ್ದಿಜಾಲ ವೈರ್ ಪ್ರಕಾರ ಹೆಸರನ್ನು ಹೇಳಲು ಬಯಸದ ಅಧಿಕಾರಿಯೊಬ್ಬರು, ಶರದ್ ಕುಮಾರ್ ಬಿಜೆಪಿ ನೇತೃತ್ವದ ಸರಕಾರಕ್ಕೆ ಹತ್ತಿರವಾಗಿರುವುದು ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಪ್ರಮುಖ ಕಾರಣ. ಸರಕಾರಿ ವಕೀಲೆ ರೋಹಿಣಿ ಸಾಲ್ಯಾನ್ ಅವರು ಎನ್‌ಐಎ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಕುಮಾರ್ ಅವರ ಅಧಿಕಾರದ ಅವಧಿಯನ್ನು ವಿಸ್ತರಿಸಲು ಕಾರಣವನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳುತ್ತಾರೆ. ಕಳೆದ ವಾರ ಕಾಂಗ್ರೆಸ್ ಎನ್‌ಐಎಯ ಆಡಳಿತ ನಿರ್ದೇಶಕರನ್ನು ವಜಾಗೊಳಿಸುವಂತೆ ಮತ್ತು ಸರ್ವೋಚ್ಚ ನ್ಯಾಯಾಲಯ ಎಲ್ಲ ಪ್ರಕರಣಗಳನ್ನು ಪರಿಶೀಲಿಸುವಂತೆ ಆಗ್ರಹಿಸಿತ್ತು. ಮೋದಿ ಸರಕಾರದ ಮೇಲೆ ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್ ಎನ್‌ಐಎಯನ್ನು ಆರೆಸ್ಸೆಸ್ ಅನ್ನು ರಕ್ಷಿಸುವ ಸಲುವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿತ್ತು. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾಕ್ಷಿಗಳು ಉಲ್ಟಾ ಹೊಡೆಯುತ್ತಿವೆ. ಅದು ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೀರ್ ಅಥವಾ ಮಾಲೆಗಾಂವ್ ಸ್ಫೋಟವೇ ಆಗಿರಲಿ ಎಂದು ಕಾಂಗ್ರೆಸ್ ವಕ್ತಾರ ಡಾ. ಅಜೊಯ್ ಕುಮಾರ್ ಆರೋಪಿಸಿದ್ದರು. ಬಿಜೆಪಿ ಭದ್ರತೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು, ಅದು ತನ್ನ ರಾಜಕೀಯ ಹಿತಾಸಕ್ತಿಯನ್ನು ಈಡೇರಿಸುವ ಸಲುವಾಗಿ ಎನ್‌ಐಎಯನ್ನು ಬಳಸುತ್ತಿದೆ ಎಂದು ಹೇಳಿದ್ದರು. ಎನ್‌ಐಎ ಮುಖ್ಯಸ್ಥರ ಅಧಿಕಾರವನ್ನು ಯಾಕೆ ವಿಸ್ತರಿಸಲಾಗಿದೆ ಎಂದು ಪ್ರಶ್ನಿಸಿದ ಅವರು ಈ ಕೂಡಲೇ ಅವರ ಒಪ್ಪಂದವನ್ನು ಮುರಿದು ಹಾಕಬೇಕು ಎಂದು ಹೇಳಿಕೊಂಡಿದ್ದರು. ಒಂದು ತನಿಖಾ ಸಂಸ್ಥೆಯ ಮುಖ್ಯಸ್ಥನನ್ನೇ ಒಪ್ಪಂದದ ಮೇರೆಗೆ ಖರೀದಿಸುವುದೆಂದರೆ ಆಶ್ಚರ್ಯವೇ. ಈ ದೇಶ ದಲ್ಲಿ ಹಿಂದೆಂದೂ ಹೀಗೆ ನಡೆದಿಲ್ಲ. ಇದು ಮೋದಿ ಸರಕಾರ ಕಾರ್ಯಾಚರಿಸುವ ರೀತಿ ಎಂದವರು ಹೇಳಿಕೆ ನೀಡಿದ್ದರು. ಆರೆಸ್ಸೆಸ್‌ನ ಪ್ರಮುಖ ನಾಯಕರು ಭಯೋತ್ಪಾದನಾ ಪಿತೂರಿಯಲ್ಲಿ ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಸೀಮಾನಂದ ತಾನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಹಿರಿಯ ಮುಖಂಡ ಇಂದ್ರೇಶ್ ಕುಮಾರ್ ಅವರನ್ನು ಭೇಟಿ ಮಾಡಿರುವುದಾಗಿ ಒಪ್ಪಿಕೊಂಡಿದ್ದರೂ ಎನ್‌ಐಎ ಮಾತ್ರ ತನಿಖೆಯನ್ನು ಮುಂದುವರಿಸಲು ನಿರಾಕರಿಸಿತ್ತು.
ಪ್ರತಿಯೊಂದು ದೇಶ ಕೂಡಾ ತನ್ನ ತನಿಖಾ ಸಂಸ್ಥೆ ಪ್ರಾಮಾಣಿಕ ಮತ್ತು ಸಮಗ್ರತೆಯನ್ನು ಹೊಂದಿದೆ ಎಂದೇ ನಂಬುತ್ತಾರೆ ಎಂದವರು ಹೇಳುತ್ತಾರೆ. ಆದರೆ ಮೋದಿ ಸರಕಾರ ಯಾವ ರೀತಿ ಎನ್‌ಐಎಯನ್ನು ನಿರ್ಲಕ್ಷಿಸುತ್ತಿದೆ ಮತ್ತು ಅದನ್ನು ಪಕ್ಷಪಾತ ರಾಜಕೀಯಕ್ಕೆ ಯಾವುದೇ ನಾಚಿಕೆಯಿಲ್ಲದೆ ಬಳಸುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದವರು ಹೇಳುತ್ತಾರೆ.

Writer - ಆರ್.ಎನ್.

contributor

Editor - ಆರ್.ಎನ್.

contributor

Similar News

ಸಂವಿಧಾನ -75