ಬರ, ಸಾವು, ಸೋಲುಗಳ ಸುಳಿಯಲ್ಲಿ ಅರಸು: ಎಂ.ರಘುಪತಿ
ತುರ್ತು ಪರಿಸ್ಥಿತಿ ಹೇರಿಕೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೆಟ್ಟದ್ದೇನು ಘಟಿಸಲಿಲ್ಲ. ಬೇರೆ ರಾಜ್ಯಕ್ಕೆ ಹೋಲಿಸಿಕೊಂಡರೆ ಕರ್ನಾಟಕ ಶಾಂತವಾಗಿತ್ತು. ಅದರ ಕೀರ್ತಿ ಅರಸರಿಗೆ ಸಲ್ಲಲೇಬೇಕು. ಆದರೆ ಅರಸರ ದುರದೃಷ್ಟವೋ ಏನೋ, ಮೆಚ್ಚಿ ಮಾತನಾಡಬೇಕಾದವರು ಸುಮ್ಮನಾದರು. ಸಮರ್ಥಿಸಿಕೊಳ್ಳಬೇಕಾದ ಕಾಂಗ್ರೆಸ್ಸಿಗರು ಪ್ರತಿನಿತ್ಯ ಕಿರುಕುಳ ಕೊಟ್ಟರು. ತಮ್ಮ ಸಂಪುಟದಲ್ಲಿದ್ದ ಮಂತ್ರಿಗಳೇ ದಿಲ್ಲಿಗೆ ಹೋಗಿ ಅರಸರ ಆಡಳಿತ ದಾರಿ ತಪ್ಪಿದೆ ಎಂದು ದೂರು ಹೇಳಿದರು.
ರಾಜಕಾರಣದಲ್ಲಿ ಏರಿಳಿತ, ತಂತ್ರ-ಪ್ರತಿತಂತ್ರ, ಪರ-ವಿರೋಧ, ಸೋಲು-ಗೆಲುವು ಎಲ್ಲ ಇದ್ದದ್ದೆ ಎಂದುಕೊಂಡರೂ, ಪ್ರಕೃತಿಯೂ ದೇವರಾಜ ಅರಸು ಮೇಲೆ ಮುನಿಸಿಕೊಂಡಿತು, 1973ರಲ್ಲಿ ರಾಜ್ಯ ಭೀಕರ ಬರಗಾಲಕ್ಕೆ ತುತ್ತಾಯಿತು. ಮಳೆ ಇಲ್ಲದೆ ಬೆಳೆ ಇಲ್ಲದೆ ಜನ ಹಸಿವಿನಿಂದ ಕಂಗೆಟ್ಟ ಸ್ಥಿತಿಯನ್ನು ಅರಸರಿಂದ ನೋಡುವುದೇ ದೊಡ್ಡ ಕಷ್ಟವಾಗಿತ್ತು. ಆದರೆ ಅರಸು ಹಿಂಜರಿಯಲಿಲ್ಲ, ಉತ್ತರ ಕರ್ನಾಟಕಕ್ಕೆ ಪ್ರವಾಸ ಕೈಗೊಂಡು ಜನರನ್ನು ಖುದ್ದಾಗಿ ಕಂಡು ಸಂತೈಸಿದರು. ಸಂಕಷ್ಟದಲ್ಲೂ ಹತ್ತು ಹಲವು ಯೋಜನೆಗಳು, ಕಾರ್ಯಕ್ರಮಗಳ ಮೂಲಕ ಜನರ ನೆರವಿಗೆ ನಿಂತರು. ಅದೇ ಸಮಯದಲ್ಲಿ ಇತ್ತ ಪಕ್ಷದೊಳಗೆ, ಅಧ್ಯಕ್ಷರಾದ ರಂಗನಾಥ್ ಬೆಂಗಳೂರಿನ ಜ್ಯೂಬಿಲಿ ಹಾಲ್‌ನಲ್ಲಿ ಡಿಸಿಸಿ ಅಧ್ಯಕ್ಷರ ಮೀಟಿಂಗ್ ಕರೆದರು. ಆ ಮೀಟಿಂಗ್‌ನ ಉದ್ದೇಶವೇ ಅರಸುಗೆ ಅವಮಾನ ಮಾಡುವುದಾಗಿತ್ತು.
ಅದಕ್ಕಾಗಿ ಒಂದು ತಂಡವೂ ತಯಾರಾಗಿತ್ತು. ವಿದ್ಯಾಧರ ಎಂಬ ಯುವಕ ಕಂಕುಳಲ್ಲಿ ಬ್ಯಾಗ್ ಇಟ್ಟುಕೊಂಡಿದ್ದ, ಅರಸುಗೆ ವಿರುದ್ಧವಾಗಿ ಓಟು ಮಾಡದಿರಲು ಹಣ ಹಂಚುತ್ತಿದ್ದ ಎಂದು ಇದ್ದಕ್ಕಿದ್ದಂತೆ ಎಚ್.ಡಿ. ಗಂಗರಾಜು ಅವರ ತಂಡ ಆತನ ಮೇಲೆ ಬಿತ್ತು. ಬಿದ್ದ ರಭಸಕ್ಕೆ ಆತ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ. ಆ ಕಾರ್ಯಕರ್ತನ ಸಾವಿಗೆ ಅರಸು ಕಾರಣ ಎಂದು ಹೈಕಮಾಂಡಿಗೆ ದೂರು ಕೊಡಲಾಯಿತು. ಇದರಿಂದ ಅರಸು ಬಹಳ ನೊಂದುಕೊಂಡರು. ನಾಯಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಬಡ ಕಾರ್ಯಕರ್ತ ಬಲಿಯಾಗಿದ್ದು ಅರಸು ಅವರನ್ನು ಬಹಳ ದಿನಗಳವರೆಗೆ ಕಾಡಿತು. ಇದಾದ ನಂತರ ಕೆ.ಎಚ್.ರಂಗನಾಥ್ ಮಂತ್ರಿಯಾದರು, ಕೆ.ಎಚ್.ಪಾಟೀಲರನ್ನು ಪಕ್ಷದ ಅಧ್ಯಕ್ಷರನ್ನಾಗಿಸಿದರು. ಎಲ್ಲವೂ ಸರಿಹೋಗಬಹುದೆಂದು ಭಾವಿಸಿದರು. ಆದರೆ ಅತೃಪ್ತ ಬಹುಸಂಖ್ಯಾತ ಲಿಂಗಾಯತರು ಮತ್ತೊಂದು ಮುಸುಕಿನ ಮಹಾಯುದ್ಧಕ್ಕೆ ತಯಾರಾಗಿದ್ದರು. ಆಟವೂ ಶುರುವಾಯಿತು.
ಅದು ಉಪಚುನಾವಣೆಯಲ್ಲಿ ನಿಚ್ಚಳವಾಗಿ ಕಾಣತೊಡಗಿತು. ಚಾಮರಾಜಪೇಟೆಯಿಂದ ಗೆದ್ದಿದ್ದ ವಾಟಾಳ್‌ರಿಗೆ ಚುನಾವಣಾ ಆಯೋಗದ ತಕರಾರು, 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಿತ್ತು. ಅರಸು ಅಲ್ಲಿಗೆ ನನ್ನನ್ನು ಅಭ್ಯರ್ಥಿಯನ್ನಾಗಿಸಲು ಮುಂದಾದರು. ನಾನೂ ಒಪ್ಪಿ ಓಡಾಡತೊಡಗಿದೆ. ಆದರೆ ಕೆ.ಎಚ್.ಪಾಟೀಲರು ಹೈಕಮಾಂಡ್ ಮೇಲೆ ಒತ್ತಡ ತಂದು ವೈ. ರಾಮಚಂದ್ರರನ್ನು ಕಣಕ್ಕಿಳಿಸಿದರು. ವಾಟಾಳ್, ಪ್ರಭಾಕರ್ ರೆಡ್ಡಿಯನ್ನು ಕಣಕ್ಕಿಳಿಸಿ, ಗೆಲ್ಲಿಸಿಕೊಂಡರು. ಆಗಲೂ ಅರಸು, ''ನೋಡಪ್ಪ ರಘು, ರಾಜಕಾರಣದಲ್ಲಿ ಇವೆಲ್ಲ ಸಹಜ. ನಾವು ತಡಕೊಂಡು ನಿಲ್ಲಬೇಕಪ್ಪ. ಭಾರೀ ಮಳೆ, ಬಿರುಗಾಳಿಗೆ ಹಡಗು ನಿಲ್ಲಲ್ವ, ತನ್ನ ಗುರಿ ಸೇರಲ್ವ ಹಾಗೆ... ಎಲ್ಲವನ್ನು ಸಹಿಸಿಕೊಂಡು ನಮ್ಮ ಗುರಿ ಮುಟ್ಟಬೇಕಪ್ಪ'' ಎಂದರು. ಅವರ ಮಾತು ಅವರಿಗೂ ನನಗೂ, ಇಬ್ಬರಿಗೂ ಧೈರ್ಯ ಹೇಳುವಂತಿತ್ತು. ಅದೇ ರೀತಿ ಅರಸೀಕೆರೆ ಮತ್ತು ಚಾಮರಾಜ ಕ್ಷೇತ್ರಗಳ ಉಪಚುನಾವಣೆಗಳಲ್ಲೂ ಅರಸು ಹೇಳಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕೆ.ಎಚ್.ಪಾಟೀಲರು ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ, ಆಡಳಿತ ಪಕ್ಷಕ್ಕೆ, ಮುಖ್ಯಮಂತ್ರಿ ಅರಸುಗೆ ಮತ್ತೆ ಮುಜುಗರವಾಗುವಂತೆ ನೋಡಿಕೊಂಡರು. ಇಷ್ಟಾದರೂ ಅರಸು ಮಾತಾಡಲಿಲ್ಲ. ಆದರೆ ಅರಸು ಮಿತ್ರ ಅಝೀಝ್ ಸೇಠ್ ಸುಮ್ಮನಿರದೆ, ಅಧ್ಯಕ್ಷರ ವಿರುದ್ಧ ಮಾತನಾಡಿದರು. ಅದು ಮಾಧ್ಯಮಗಳಲ್ಲಿ ಪ್ರಕಟವಾಯಿತು.
ಆಶ್ಚರ್ಯವೆಂದರೆ, ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದ ಅಧ್ಯಕ್ಷರ ನಡೆ ಕೆಟ್ಟದಾಗಿ ಕಾಣದೆ, ಸೇಠ್‌ರ ಪತ್ರಿಕಾ ಹೇಳಿಕೆ ಮಹಾಪರಾಧವಾಗಿ ಕಂಡು, ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಸೇಠ್‌ರನ್ನು ಅಮಾನತು ಮಾಡಬೇಕೆಂಬ ನಿರ್ಣಯ ಪಾಸಾಯಿತು. ಹೈಕಮಾಂಡ್ ಕೂಡ ಅದಕ್ಕೆ ಸಮ್ಮತಿಸಿತು. ನಿರ್ಣಯ ಪಾಸು ಮಾಡಿದ ಸಭೆಯಲ್ಲಿ ಮುಖ್ಯಮಂತ್ರಿ ಅರಸು ಕೂಡ ಇದ್ದರು. ಮಿತ್ರ ಸೇಠ್‌ರನ್ನು ಉಳಿಸಿಕೊಳ್ಳಲಿಕ್ಕಾಗದೆ ವೌನವಾಗಿ ಕಣ್ಣೀರು ಹಾಕಿದರು. ಅರಸುಗೆ ಅಡಿಗಡಿಗೂ ಕಷ್ಟ. ಕಷ್ಟದ ಜೊತೆಗೆ ದಿಲ್ಲಿಗೆ ದೂರು. ಮೊತ್ತ ಮೊದಲ ಬಾರಿಗೆ ಅರಸು ಬಗ್ಗೆ ಇಂದಿರಾ ಗಾಂಧಿ ಅಸಮಾಧಾನಗೊಂಡದ್ದೂ ಆಗಲೇ.
ಅದೇ ಸಮಯದಲ್ಲಿ ಇಂದಿರಾ ಗಾಂಧಿಯವರು ಹೈದರಾಬಾದಿಗೆ ಬರುವ ಕಾರ್ಯಕ್ರಮವಿತ್ತು. ಅಲ್ಲಿಗೆ ನಾನು ಹೋಗಿದ್ದೆ. ನನ್ನತ್ತ ನೋಡಿದ ಮೇಡಂ, ''ಅರಸುಗೆ ಹೇಳಿ, ಉಪಚುನಾವಣೆ ಸೋಲು ನನಗೆ ಬೇಸರವಾಗಿದೆ, ಕೊನೆ ಪಕ್ಷ ಗುಲ್ಪರ್ಗಾ ಬೈ ಎಲೆಕ್ಷನ್ನಾದರೂ ಗೆಲ್ತಾರ ನಿಮ್ಮ ಅರಸು'' ಎಂದು ಪ್ರಶ್ನಿಸಿದರು. ನಾನು ಅದನ್ನು ಅರಸುಗೆ ಹಾಗೇ ಹೇಳಿದೆ. ಅದಕ್ಕವರು, ''ಒಂದು ಕೆಲಸ ಮಾಡಿ ರಘು, ಗುಲ್ಬರ್ಗಾ ಚುನಾವಣೆಯ ಪೂರ್ಣ ಉಸ್ತುವಾರಿಯನ್ನು ನೀವೇ ವಹಿಸಿಕೊಳ್ಳಿ, ಎಷ್ಟು ದುಡ್ಡು ಬೇಕೋ ಅಷ್ಟನ್ನೂ ತೆಗೆದುಕೊಂಡು ಹೋಗಿ ಅಲ್ಲಿಯೇ ಕ್ಯಾಂಪ್ ಮಾಡಿ'' ಎಂದರು. ನಾವು ರೆಡ್ಡಿ ಲಿಂಗಾಯತರ ಪೈಕಿಯ ಸಿದ್ದರಾಮರೆಡ್ಡಿ ಎಂಬವರನ್ನು ಅಭ್ಯರ್ಥಿಯನ್ನಾಗಿಸಿದೆವು. ಇದಕ್ಕೆ ಯಥಾಪ್ರಕಾರ ಪಕ್ಷದ ಅಧ್ಯಕ್ಷ ಕೆ.ಎಚ್.ಪಾಟೀಲ್ ವಿರೋಧ ವ್ಯಕ್ತಪಡಿಸಿದರು. ಅತ್ತ ಕಡೆಯಿಂದ ವೀರೇಂದ್ರ ಪಾಟೀಲರು, ಇತ್ತ ಕಡೆಯಿಂದ ಪಕ್ಷದೊಳಗಿನ ಕೆ.ಎಚ್. ಪಾಟೀಲರು- ಇಬ್ಬರು ನಮ್ಮ ಅಭ್ಯರ್ಥಿಯನ್ನು ಸೋಲಿಸಲು ಶಕ್ತಿಮೀರಿ ಶ್ರಮಿಸಿದರು. ನಾವು 70 ಸಾವಿರ ಮತಗಳ ಅಂತರದಿಂದ ರೆಡ್ಡಿಯನ್ನು ಗೆಲ್ಲಿಸಿಕೊಂಡೆವು. ಇಂದಿರಾರಿಗೆ ಅರಸು ಅವರ ಮೇಲೆ ವಿಶ್ವಾಸ ಮರುಕಳಿಸಿತು.
ನನ್ನ ಹಿರಿಯಣ್ಣ ಎಂದ ಎಂಜಿಆರ್
ಇಂದಿರಾ ಗಾಂಧಿಯವರೇನೋ ಅರಸು ಅವರ ಪರವಾಗಿಯೇ ಇದ್ದರು. ಆದರೆ ಅರಸು ಯಾರನ್ನೆಲ್ಲ ಹುಡುಕಿ ತಂದು ಅಧಿಕಾರದ ಕುರ್ಚಿಗೆ ಕೂರಿಸಿ, ಅವರ ಉದ್ಧಾರದ ಕನಸು ಕಾಣುತ್ತಿದ್ದರೋ, ಅವರೇ ಅರಸು ಅವರಿಗೆ ಬಹಳ ನೋವು ಕೊಟ್ಟರು. ಈ ಪ್ರಸಂಗ ಕೇಳಿ...
1973-74ರಲ್ಲಿರಬಹುದು... ದೇವರಾಜ ಅರಸು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ತಮಿಳುನಾಡಿನಲ್ಲಿ ಎಂಜಿಆರ್ ಮುಖ್ಯಮಂತ್ರಿಯಾಗಿದ್ದರು. ಇಬ್ಬರಿಗೂ ಒಳ್ಳೆಯ ಸ್ನೇಹವಿದ್ದು, ವ್ಯಕ್ತಿಗೌರವ ಕಾಪಾಡಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಅರಸು ಕೆ.ಕೆ.ಮೂರ್ತಿ ಎಂಬ ವ್ಯಕ್ತಿಯನ್ನು ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್‌ಗೆ ಚೇರ್ಮನ್ ಮಾಡಿದ್ದರು. ಇವರು ಮೈಸೂರಿನ ಸುಪ್ರಸಿದ್ಧ ದಸರಾಗೂ ಕೂಡ ಚೆೇರ್ಮನ್ ಆಗಿದ್ದರು. ದಸರಾದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಯಾಯ ಕ್ಷೇತ್ರದಲ್ಲಿ ಹೆಸರು ಮಾಡಿದವರನ್ನು ಕರೆಸುತ್ತಿದ್ದುದು ವಾಡಿಕೆ. ವಿಶೇಷ ಆಹ್ವಾನಿತರನ್ನಾಗಿ ಯಾರನ್ನು ಕರೆಯಬೇಕು ಎಂಬುದು ಈ ಚೇರ್ಮನ್‌ಗೆ ಬಿಟ್ಟಿದ್ದು. ಈ ಸಲುಗೆಯನ್ನು ದುರುಪಯೋಗಪಡಿಸಿಕೊಂಡ ಕೆ.ಕೆ.ಮೂರ್ತಿ, ಮೈಸೂರು ದಸರಾದಲ್ಲಿ ನೃತ್ಯ ಕಾರ್ಯಕ್ರಮ ನೀಡಲು ಆಗಿನ ಸುಪ್ರಸಿದ್ಧ ಚಿತ್ರನಟಿ ಜಯಲಲಿತಾರನ್ನು ಆಹ್ವಾನಿಸಿದರು. ಅವರು ಒಪ್ಪಿ ಮೈಸೂರಿಗೆ ಬಂದವರು, ಅದೇನೋ ಕಾರಣದಿಂದ 'ನಾನು ನೃತ್ಯ ಮಾಡುವುದಿಲ್ಲ' ಎಂದು ವಾಪಸ್ ಹೋಗಿಬಿಟ್ಟರು. ಹೀಗೆ ಚಿತ್ರನಟಿ ಜಯಲಲಿತಾ ಮೈಸೂರಿಗೆ ಬಂದು ಹೋಗಿದ್ದು, ಸುದ್ದಿ ಮಾಧ್ಯಮಗಳಲ್ಲಿ ದೇವರಾಜ ಅರಸರಿಗೂ ಜಯಲಲಿತಾಗೂ ಸಂಬಂಧ ಕಟ್ಟಿ, ತಪ್ಪು ಅರ್ಥ ಬರುವಂತೆ ವರದಿಯಾಯಿತು.
ದಿನಪತ್ರಿಕೆಗಳ ಸುದ್ದಿ ನೋಡಿದ ಅರಸು ಕಣ್ಣಲ್ಲಿ ನೀರು. ತುಂಬಾನೆ ನೊಂದುಕೊಂಡರು. ಅದಷ್ಟೇ ಅಲ್ಲ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ದೇವೇಗೌಡರು, 'ದೇವರಾಜ ಅರಸು ಕರೆದರೂ ಅವರು ಬರಲಿಲ್ಲ' ಎಂಬ ಅರ್ಥದಲ್ಲಿ, ಬಹಳ ವ್ಯಂಗ್ಯವಾಗಿ ಮಾತನಾಡಿದರು. ಆಗ ಅರಸು, ''ಯಾವ ತನಿಖೆ ಮಾಡಿದರೂ ನಾನು ಸಿದ್ಧ'' ಎಂದು ಹೇಳಿದರು. ಇದೇನೋ ನಿಭಾಯಿಸಿದ್ದಾಯಿತು. ಆದರೆ ಎಂಜಿಆರ್ ಏನಂದುಕೊಂಡರೋ ಎಂಬ ಚಿಂತೆ ಅರಸರಿಗೆ ಕಾಡತೊಡಗಿತು. ಆಗ ನಾನು, ''ಸರ್, ಎಂಜಿಆರ್ ಜೊತೆ ಮಾತಾಡಿ...'' ಎಂದು ಸಲಹೆ ನೀಡಿದೆ. ಆದರೆ ಎಂಜಿಆರ್‌ಗೆ ಇಂಗ್ಲಿಷ್ ಬರುತ್ತಿರಲಿಲ್ಲ, ಅರಸುಗೆ ತಮಿಳು ಬರುತ್ತಿರಲಿಲ್ಲ.
ಇವರಿಬ್ಬರಿಗೂ ನಾನೆ ದುಬಾಷಿ. ಮುಖ್ಯಮಂತ್ರಿಗಳ ಕಚೇರಿಯಿಂದಲೇ ಫೋನ್ ಮಾಡಿ, ಎಂಜಿಆರ್‌ಗೆ ಕನೆಕ್ಟ್ ಮಾಡಿ ಅರಸು ಕೈಗೆ ಕೊಟ್ಟೆ, ನಮಸ್ಕಾರಗಳನ್ನು ವಿನಿಮಯ ಮಾಡಿಕೊಂಡರು. ನಂತರ ''ನೀವೇನು ತಲೆಕೆಡಿಸಿಕೊಳ್ಳಬೇಡಿ, ನಿಜಾಂಶ ಏನು ಎಂದು ನನಗೆ ಗೊತ್ತಿದೆ, ನನಗೆ ನೀವು ಹಿರಿಯ ಸಹೋದರನಿದ್ದಂತೆ, ಜಯಲಲಿತಾ ನನಗೆ ಎಲ್ಲವನ್ನು ಹೇಳಿದ್ದಾರೆ'' ಎಂದು ಅರಸುಗೆ ಹೇಳಿ ಎಂದರು. ಅದನ್ನು ಕೇಳಿದ ನಂತರ ಅರಸು ನಿರಾಳರಾದರು. ಹಳ್ಳಿ ನ್ಯಾಯವೇ ದಿಲ್ಲಿ ನ್ಯಾಯ
1974-75ರಲ್ಲಿ ಬೆಳಗಾವಿಯಲ್ಲಿ ಗಡಿ ವಿವಾದ ಶುರುವಾಯಿತು. ಬೆಳಗಾವಿಯ ಕೆಲವು ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು, ಅಲ್ಲಿ ಮರಾಠಿಯೇ ಮುಖ್ಯ ಭಾಷೆಯಾದ್ದರಿಂದ ಬಹುಸಂಖ್ಯಾತ ಮರಾಠಿಗಳ ಕೈ ಮೇಲಾಯಿತು. ಅಲ್ಪಸಂಖ್ಯಾತರಾದ ಕನ್ನಡಿಗರ ಕೂಗು ಕೇಳದಂತಾಯಿತು. ಪರಿಸ್ಥಿತಿ ಬಿಗಡಾಯಿಸಿತು. ಗಲಭೆ ನಿಯಂತ್ರಿಸದಂತಾಯಿತು. ಆ ಸಮಯದಲ್ಲಿ ದೇವರಾಜ ಅರಸು, ''ಬೆಳಗಾವಿಗೆ ಹೋಗೋಣ, ಸಭೆ ಮಾಡೋಣ, ಕನ್ನಡಿಗರಿಗೆ ಧೈರ್ಯ ತುಂಬೋಣ'' ಎಂದರು. ಜೊತೆಗೆ ನನ್ನನ್ನೂ ಕರೆದರು. ಆದರೆ ಪೊಲೀಸ್ ಗುಪ್ತದಳ ಮುಖ್ಯಮಂತ್ರಿಗಳಿಗೆ ಪರಿಸ್ಥಿತಿ ಅಷ್ಟು ಸರಿಯಿಲ್ಲ, ಬಹಿರಂಗ ಸಭೆ ಬೇಡ ಎಂದು ಸೂಚಿಸಿತು.
ಆದರೆ ಅರಸು ಕೇಳಬೇಕಲ್ಲ, ಹೊರಟೇಬಿಟ್ಟರು. ಬೆಳಗಾವಿಯ ಕೆಎಲ್‌ಇ ಕಾನೂನು ಕಾಲೇಜಿನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿತ್ತು. ನಾವು ಬೆಳಗಾವಿಗೆ ಹೋದಾಗ ಸ್ಥಳೀಯ ಪೊಲೀಸರು, ಕನ್ನಡಿಗರು ಮತ್ತು ಮರಾಠಿಗರು- ಇಬ್ಬರು ನಿಮ್ಮ ವಿರುದ್ಧವಿದ್ದಾರೆ. ಗಲಾಟೆಯಾಗುವ ಸೂಚನೆ ಇದೆ ಎಂದು ವರದಿ ಕೊಟ್ಟರು. ಆದರೆ ಅರಸು, ''ಸಭೆ ನಡೆಸಲಿಲ್ಲ ಅಂದರೆ ತಪ್ಪಾಗುತ್ತದೆ. ಅದು ನಮ್ಮ ಹೇಡಿತನವಾಗಿ ಕಾಣುತ್ತದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು'' ಎಂದು ಹೇಳಿ ಸಭೆ ಶುರು ಮಾಡಿಯೇಬಿಟ್ಟರು. ಉದ್ರಿಕ್ತ ಮರಾಠಿಗರು, ಮರಾಠಿಗರ ಉಪಟಳ ಸಹಿಸಿ ಸಾಕಾಗಿದ್ದ ಕನ್ನಡಿಗರು, ಎರಡೂ ಕಡೆಯಿಂದ ಕಲ್ಲು ತೂರಾಟ. ಆ ಕಲ್ಲಿನ ಮಳೆಯ ನಡುವೆಯೇ ಮುಖ್ಯಮಂತ್ರಿ ಅರಸರ ಭಾಷಣ, ''ಬೆಳಗಾವಿ ನಮ್ಮದು, ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ'' ಎಂದುಬಿಟ್ಟರು.
ಅಲ್ಲಿಂದ ನೇರವಾಗಿ ದಿಲ್ಲಿಗೆ ಹೋದೆವು. ಮಹಾರಾಷ್ಟ್ರದ ಮಂತ್ರಿ ವಸಂತರಾವ್ ಮತ್ತು ಕರ್ನಾಟಕದ ಅರಸುರೊಂದಿಗೆ ಕೇಂದ್ರದ ಹೋಮ್ ಮಿನಿಸ್ಟರ್ ವೈ.ಬಿ.ಚವ್ಹಾಣ್ ವಿಜ್ಞಾನ ಭವನದಲ್ಲಿ ಗಡಿ ವಿವಾದ ಕುರಿತ ಸಭೆ ಕರೆದಿದ್ದರು. 10 ಗಂಟೆಗೆ ಸಭೆ. ಅರಸು ನನ್ನನ್ನು ಕರೆದು, ''ಎಲ್ಲಾದರೂ ಸುತ್ತಾಡಿಕೊಂಡು ಬಾ, ಗಡಿ ಸಮಸ್ಯೆ ಅಲ್ವಾ ತುಂಬಾ ಸೀರಿಯಸ್ಸಾಗಿದೆ, ಸಭೆ ಎಷ್ಟೊತ್ತಾಗುತ್ತೋ ಗೊತ್ತಿಲ್ಲ'' ಎಂದರು. ಆದರೆ ನಾನು ಎಲ್ಲೂ ಹೋಗದೆ, ಹೊರಗೆ ಕಾದು ಕುಳಿತೆ. ಆಶ್ಚರ್ಯ, 10.45ಕ್ಕೆಲ್ಲ ಅರಸು ಹೊರಗೆ ಬಂದೇಬಿಟ್ಟರು. ಬಂದು ಚೇರಲ್ಲಿ ಕೂತು ಪೈಪ್ ಹಚ್ಚಿದರು. ಆಗ ಅಲ್ಲಿದ್ದ ಆರ್. ಪಿ.ಸಿಂಗ್ ಎಂಬ ಕರ್ನಾಟಕದ ಅಧಿಕಾರಿ, ''ಏನ್ ಸಾರ್ ಇಷ್ಟು ಬೇಗ'' ಎಂದರು. ಅರಸು, ''ಏನಿಲ್ಲಪ್ಪ, ಚವ್ಹಾಣ್ ಸಾಹೇಬರು ನಾವು ಮಹಾಜನ್ ವರದಿಯನ್ನು ಸ್ವೀಕಾರ ಮಾಡಲು ತಯಾರಿಲ್ಲ ಎಂದರು. ನಾನು, ನಿಮಗೆ ಬೇಡ ಎಂದರೆ ನಮಗೂ ಬೇಡ. ಯಥಾಸ್ಥಿತಿ ಕಾಯ್ದುಕೊಳ್ಳೋಣ ಅಂದೆ. ಇಂದಿರಾ ಮೇಡಂ ಎಕ್ಸ್ ಲೆಂಟ್ ಅಂದರು, ಮೀಟಿಂಗ್ ಮುಗೀತು''. ನಾನಿದ್ದೋನು ''ಇದರಿಂದ ನಮಗೇನು ಲಾಭ ಸಾರ್'' ಅಂದೆ. ಅದಕ್ಕೆ ಅರಸು, ''ನಮಗಿರುವುದು ನಮಗೇ ಉಳಿಯುತ್ತೆ, ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನೋದು ತಪ್ಪೋಗ್ತದೆ, ಇದರಿಂದ ಕರ್ನಾಟಕಕ್ಕೆ ತಾತ್ಕಾಲಿಕವಾಗಿ ಗೆಲುವು, ಉದ್ರಿಕ್ತ ವಾತಾವರಣ ತಿಳಿಯಾಗುತ್ತೆ, ಅದಕ್ಕಾಗಿ ಇಷ್ಟೆಲ್ಲ ಮಾಡಿದೆನಪ್ಪ'' ಎಂದರು.
ನಾನು, ''ಅಲ್ಲಾ ಸಾರ್, ಇಷ್ಟು ಜಟಿಲವಾದ ಸಮಸ್ಯೆ, ಹೂವು ಎತ್ತಿದಂತೆ ಬಗೆಹರಿಯತಲ್ಲ'' ಅಂದೆ. ಅದಕ್ಕೆ ಅರಸು, ''ಏನಿಲ್ಲಪ್ಪ, ನಮ್ಮ ಹಳ್ಳಿ ಪಂಚಾಯ್ತಿ ನ್ಯಾಯವನ್ನು ದಿಲ್ಲಿ ಪಂಚಾಯ್ತಿಗೆ ತಗೊಂಡೋದೆನಪ್ಪ, ಅಷ್ಟೆ'' ಎಂದರು. ಅರಸು ಸ್ವತಃ ಹೊಲ ಗದ್ದೆಗಳಲ್ಲಿ ಉಳುಮೆ ಮಾಡಿದ ರೈತ. ಹಳ್ಳಿಯಲ್ಲಿ ಅಣ್ಣ ತಮ್ಮಂದಿರ ನಡುವೆ, ದಾಯಾದಿಗಳ ನಡುವೆ ಜಮೀನು ಒತ್ತುವರಿಗಾಗಿ ಜಗಳ, ಕದನಗಳನ್ನು ಕಣ್ಣಾರೆ ಕಂಡಿದ್ದರು. ನ್ಯಾಯ ಪಂಚಾಯ್ತಿಗಳ ಮೂಲಕ ಬಗೆಹರಿಸಿದ್ದರು. ಅದನ್ನೇ ರಾಜ್ಯದ ಗಡಿ ವಿಚಾರಕ್ಕೂ ಅಳವಡಿಸಿದ್ದರು. ಅಂದರೆ ಅರಸರಿಗೆ ಅಪಾರ ಅನುಭವವಿತ್ತು, ಸಾಮಾನ್ಯ ಜ್ಞಾನವಿತ್ತು, ಸಂದಿಗ್ಧ ಸಂದರ್ಭವನ್ನು ಸಮಚಿತ್ತದಿಂದ ನಿಭಾಯಿಸುವ ರಾಜಕೀಯ ಮುತ್ಸದ್ದಿತನವೂ ಇತ್ತು. ಸೇಡಿನ ರಾಜಕಾರಣವಲ್ಲ...
1976ರಲ್ಲಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ, ಇದು ದೇವರಾಜ ಅರಸು ಅವರಿಗೆ ಸಿಕ್ಕ ಸುವರ್ಣ ಅವಕಾಶ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟರು. ಶತ್ರುಗಳನ್ನು ಸದೆಬಡಿಯಲು, ಬಹುಸಂಖ್ಯಾತರಾದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಮಟ್ಟಹಾಕಲು, ನೆನಗುದಿಗೆ ಬಿದ್ದ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅರಸು ಅವರ ಯೋಚನೆಯೇ ಬೇರೆ ಇತ್ತು. ನಿಭಾಯಿಸಿದ ರೀತಿಯೂ ಭಿನ್ನವಾಗಿತ್ತು. ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ ವಾಜಪೇಯಿ, ಅಡ್ವಾಣಿ, ಪೀಲೂ ಮೋದಿ ಯಾವುದೋ ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದರು. ಅವರನ್ನು ಬಂಧಿಸಲಾಯಿತು. ಆನಂತರ ಸ್ಥಳೀಯ ನಾಯಕರಾದ ರಾಮಕೃಷ್ಣ ಹೆಗಡೆ ಮತ್ತು ಎ.ಕೆ.ಸುಬ್ಬಯ್ಯನವರನ್ನು ಬಂಧಿಸಲಾಯಿತು. ಆದರೆ ಈ ಬಂಧನಗಳಾವುವೂ ಅರಸು ಅವರ ಆಜ್ಞೆ ಆದೇಶದ ಮೇರೆಗೆ ನಡೆದ ಬಂಧನಗಳಲ್ಲ, ಕೇಂದ್ರದ ಸೂಚನೆಯ ಮೇರೆಗೆ ನಡೆದಂಥವು. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ದೇವೇಗೌಡ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಲಂಕೇಶ್, ಕಡಿದಾಳು ಮಂಜಪ್ಪ, ಹಿರಣ್ಣಯ್ಯರಂತಹ ಸಾಹಿತಿ-ಕಲಾವಿದರೂ ತುರ್ತು ಪರಿಸ್ಥಿತಿಯ ವಿರುದ್ಧವಿದ್ದರು.
ಕರಪತ್ರ ಹಂಚುವ, ಕವನ-ಲೇಖನಗಳ ಮೂಲಕ ಟೀಕಿಸುವ, ಬೀದಿ ನಾಟಕಗಳ ಮೂಲಕ ವಿಮರ್ಶೆಗೊಳಪಡಿಸುವ ಮಾರ್ಗಗಳಲ್ಲಿ ನಿರತರಾಗಿದ್ದರು. ಆದರೆ ಅರಸು ಅವರಾರನ್ನೂ ಬಂಧಿಸಲಿಲ್ಲ. ಸೇಡಿನ ರಾಜಕಾರಣಕ್ಕೆ ಅರಸು ಎಂದೂ ಕೈ ಹಾಕಲಿಲ್ಲ. ಆ ನಂತರ, 2ನೆ ಕಂತಿನಲ್ಲಿ ಹೈಕಮಾಂಡಿನ ಸೂಚನೆ ಮೇರೆಗೆ ದೇವೇಗೌಡ ಮತ್ತಿತರನ್ನು ಬಂಧಿಸಿದರು. ಬಂಧನವೇನೂ ಆಯಿತು, ಅರಸು ಸುಮ್ಮನಿರಬೇಕಲ್ಲ. ''ರೀ ರಘು ಬನ್ರಿ ಇಲ್ಲೇ ಹೋಗಿಬರೋಣ'' ಎಂದು ಸೆಂಟ್ರಲ್ ಜೈಲಿಗೆ ಕರೆದುಕೊಂಡುಹೋದರು. ಜೈಲ್ ಐಜಿ ಮಲ್ಲಯ್ಯನವರನ್ನು ಕರೆದು, ''ಇವರಾರು ಕೈದಿಗಳಲ್ಲ, ನಮ್ಮ ಅತಿಥಿಗಳು, ಅವರಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳಬೇಕು'' ಎಂದರು. ಅಷ್ಟೇ ಅಲ್ಲ, ತುರ್ತು ಪರಿಸ್ಥಿತಿಯಲ್ಲಿ ಬಂಧಿತರಾದವರನ್ನು ಬೇರೆಯೇ ಇರಿಸಿ, ಅಲ್ಲಿಗೆ ಪೇಪರ್ ಪುಸ್ತಕಗಳನ್ನು ಸರಬರಾಜು ಮಾಡುವಂತೆ, ಕೆಲವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಹಾಗೂ ಅವರಿಗೆ ಕುರುಬರ ಹಾಸ್ಟೆಲ್ ಕಡೆಯ ಬಾಗಿಲಿನಿಂದ ಹೊರಹೋಗಲು ಅವಕಾಶ ಮಾಡಿಕೊಡುವಂತೆ ವ್ಯವಸ್ಥೆ ಮಾಡಿಸಿದ್ದರು.
ಈ ಸಂದರ್ಭದಲ್ಲೊಂದು ಘಟನೆ ಜರಗಿತು... ಮುಖ್ಯಮಂತ್ರಿ ದೇವರಾಜ ಅರಸು ಜೈಲಿಗೆ ಭೇಟಿ ನೀಡುವುದು ಗೊತ್ತಿದ್ದ ಉತ್ತರ ಕರ್ನಾಟಕದ ಕಡೆಯ, ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದ 65 ವರ್ಷದ ಮಹಿಳೆ ಓಡಿ ಬಂದು ಕಾಲಿಗೆ ಬಿದ್ದು, ''ಬುದ್ಧಿ, ನನಗೆ ಜೀವಾವಧಿ ಶಿಕ್ಷೆಯಾಗಿದೆ, ನಾನು ಇಲ್ಲೇ ಸತ್ತುಹೋಗಬಹುದು, ಏನಾದರು ಮಾಡಿ ಸ್ವಾಮಿ'' ಎಂದು ಅಳತೊಡಗಿದಳು. ಅರಸು ಕಣ್ಣಲ್ಲಿ ನೀರು ತುಳುಕಾಡಿದವು. ಮಾತನಾಡಲಿಲ್ಲ. ಆದರೆ ಸ್ವಲ್ಪ ದಿನಗಳಲ್ಲಿ ಆಕೆಯ ಶಿಕ್ಷೆಯನ್ನು ಕಡಿತಗೊಳಿಸಿ, ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿದ್ದರು. ಇದನ್ನು ಏನೆಂದು ಬಣ್ಣಿಸುವುದು?
ಇಂದಿರಾಗೆ ಕಡಕ್ ಉತ್ತರ
ತುರ್ತು ಪರಿಸ್ಥಿತಿ ಹೇರಿಕೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೆಟ್ಟದ್ದೇನು ಘಟಿಸಲಿಲ್ಲ. ಬೇರೆ ರಾಜ್ಯಕ್ಕೆ ಹೋಲಿಸಿಕೊಂಡರೆ ಕರ್ನಾಟಕ ಶಾಂತವಾಗಿತ್ತು. ಅದರ ಕೀರ್ತಿ ಅರಸರಿಗೆ ಸಲ್ಲಲೇಬೇಕು. ಆದರೆ ಅರಸರ ದುರದೃಷ್ಟವೋ ಏನೋ, ಮೆಚ್ಚಿ ಮಾತನಾಡಬೇಕಾದವರು ಸುಮ್ಮನಾದರು. ಸಮರ್ಥಿಸಿಕೊಳ್ಳಬೇಕಾದ ಕಾಂಗ್ರೆಸ್ಸಿಗರು ಪ್ರತಿನಿತ್ಯ ಕಿರುಕುಳ ಕೊಟ್ಟರು. ತಮ್ಮ ಸಂಪುಟದಲ್ಲಿದ್ದ ಮಂತ್ರಿಗಳೇ ದಿಲ್ಲಿಗೆ ಹೋಗಿ ಅರಸರ ಆಡಳಿತ ದಾರಿ ತಪ್ಪಿದೆ ಎಂದು ದೂರು ಹೇಳಿದರು. ಹಿಂದೂ ಮುಂದೂ ಯೋಚಿಸದ ಇಂದಿರಾ ಗಾಂಧಿ, ಅರಸರನ್ನು ಕರೆಸಿದರು, ದೂರುಗಳ ಬಗ್ಗೆ ಕೇಳಿದರು. ಆದರೆ ಅರಸು ವಿಚಲಿತರಾಗಲಿಲ್ಲ. ಅಷ್ಟೊತ್ತಿಗಾಗಲೇ ಪಳಗಿದ ರಾಜಕಾರಣಿಯಾಗಿದ್ದ, ರಾಷ್ಟ್ರ ಮಟ್ಟದಲ್ಲಿ ಚಾಲ್ತಿಯಲ್ಲಿದ್ದ ಅರಸು, ''ನಾನು ಬೇಡ ಅನ್ನುವುದಾದರೆ, ನೀವು ಬೇರೆ ನಾಯಕನನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಒಂದು ಮಾತು ನೆನಪಿರಲಿ, ಕಾಂಗ್ರೆಸ್ಸಿನ ಭದ್ರಕೋಟೆಯಾಗಿರುವ ಕರ್ನಾಟಕ ವಿನಾಕಾರಣ ಕೈತಪ್ಪಿಹೋಗಲಿದೆ. ಮೊದಲ ಬಾರಿಗೆ ನಾನೊಬ್ಬ ಕಡಿಮೆ ಸಂಖ್ಯೆಯ ಜನಾಂಗದಿಂದ ಬಂದವನಾಗಿದ್ದೇನೆ. ಇದುವರೆಗೂ ಆಡಳಿತ ಮಾಡಿಕೊಂಡು ಬಂದ ಬಹುಸಂಖ್ಯಾತರಿಗಿರುವ ಸಿಟ್ಟು ಸಹಜ. ಸಮಸ್ಯೆಗಳಿವೆ, ನಿಜ, ಎಲ್ಲಿಲ್ಲ. ನನ್ನನ್ನು ಕೆಳಗಿಳಿಸುವುದರಿಂದ ಆ ಸಮಸ್ಯೆಗಳೆಲ್ಲ ಸಾಲ್ವ್ ಆಗುವುದಾದರೆ, ಅದೂ ಆಗಲಿ. ಆದರೆ ಅದಕ್ಕೂ ಮುಂಚೆ ರಾಜ್ಯಕ್ಕೆ ಒಂದು ತಂಡ ಕಳಿಸಿ, ಸರ್ವೆ ಮಾಡಿಸಿ ವರದಿ ತರಿಸಿಕೊಳ್ಳಿ. ಆ ನಂತರ ಮುಂದುವರಿಯಿರಿ'' ಎಂದರು. ಇಂದಿರಾ ಮೇಡಂ ಒಂದು ತಂಡ ಕಳಿಸಿ, ವರದಿ ತರಿಸಿಕೊಂಡರು. ತಮ್ಮ 20 ಅಂಶದ ಕಾರ್ಯಕ್ರಮಗಳು ದೇಶದ ಯಾವ ರಾಜ್ಯದಲ್ಲಿಯೂ ಅಷ್ಟಾಗಿ ಕಾರ್ಯರೂಪಕ್ಕೆ ಬರದಿದ್ದಾಗ, ಅದು ಕರ್ನಾಟಕದಲ್ಲಿ, ಅರಸು ಆಡಳಿತದಲ್ಲಿ ಚಾಲ್ತಿಯಲ್ಲಿರುವುದು ಕಂಡುಬಂದಾಗ ಮರು ಮಾತಾಡದೆ ಸುಮ್ಮನಾದರು. ಕಾಕತಾಳೀಯವೋ ಏನೋ ಆಗ ಅವರ ಕೈಯಲ್ಲಿ ಅಧಿಕಾರವೂ ಇರಲಿಲ್ಲ.