passionಗೆ ಮೀಟರ್ ಪಟ್ಟಿ ಹಿಡಿಯಬಹುದೆ?!!

Update: 2016-05-16 17:55 GMT

 ಸಿದ್ಧಾಂತಗಳ ಮೀಟರ್ ಪಟ್ಟಿಯನ್ನು ಸಿದ್ಧಾಂತಿಗಳಿಗೆ, ಕವಿಗಳಿಗೆ, ಕಲಾವಿದರಿಗೆ ಮತ್ತಿತರ ಕ್ರಿಯೇಟಿವ್ ಕೆಲಸಗಳಲ್ಲಿರುವವರಿಗೆ ಹಿಡಿದು ಅಳೆಯತೊಡಗಿದರೆ ಏನಾಗುತ್ತದೆ?
 
 
 ಸಿದ್ಧಾಂತಿಗಳು -ಡಾಕ್ಟ್ರೈನ್ ಬರೆಯಬೇಕಾಗುತ್ತದೆ. ಕವಿಗಳು - ಘೋಷಣೆ ಬರೆಯಬೇಕಾಗುತ್ತದೆ. ಕಲಾವಿದರು - ಪೋಸ್ಟರ್ ರಚಿಸಬೇಕಾಗುತ್ತದೆ.
 ವಿಜಯನಾಥ ಶೆಣೈ ಅವರ ಬಗ್ಗೆ ಶಿವು ತೀರ್ಥಹಳ್ಳಿ ವ್ಯಕ್ತಪಡಿಸಿದ ಅಭಿ ಪ್ರಾಯದಲ್ಲಿ ನನಗೆ ಇಂತಹದೊಂದು ಅಪಾಯ ಹೊಳೆದದ್ದಕ್ಕಾಗಿ ಈ ಪತ್ರ.
 ನಾನು ಕಳೆದ ಸುಮಾರು 40 ವರ್ಷಗಳಿಂದ ವಿಜಯನಾಥ ಶೆಣೈ ಅವರನ್ನು ಗಮನಿಸುತ್ತಾ ಬಂದಿದ್ದೇನೆ. ನಮ್ಮ-ನಿಮ್ಮಂತೆ ಸಾಮಾನ್ಯ ಬ್ಯಾಂಕ್ ನೌಕರಿಯಲ್ಲಿದ್ದ ಶೆಣೈ ಅವರು ಮೂಲತಃ ತಮ್ಮ ಮನೆಯನ್ನು passion ನಿಂದ ಕಟ್ಟಲು ಹೊರಟು ಸೋತು ನಿಂತವರು. ಆ ಮನೆ ನಿರ್ಮಾಣದ ಹಂತದಲ್ಲಿ, ಕಾಲೇಜ್‌ನಲ್ಲಿದ್ದ ನಾನು ನನ್ನ ಶಿಕ್ಷಕರಾಗಿದ್ದ ದಿ. ಶೇಖರ ಇಡ್ಯರ ಜೊತೆ ಮೊದಲ ಬಾರಿಗೆ ಅವರ ಮನೆಗೆ ಭೇಟಿ ನೀಡಿದ್ದೆ. ಮುಂದೆ ನಾನು ತಿಳಿದಂತೆ, ಆ ಮನೆಯ (ಹಸ್ತಶಿಲ್ಪ- ಮನೆಯ ಹೆಸರು) ಆರ್ಥಿಕ ಭಾರ ಹೆಚ್ಚಾದಾಗ, ಮಣಿಪಾಲದ ಪೈಗಳು ಅವರಿಗೆ ಪರ್ಯಾಯ ಮನೆಯೊಂದನ್ನು ಕಲ್ಪಿಸಿ, ಆ ಮನೆಯ ಉಸ್ತುವಾರಿಯನ್ನು ತಮ್ಮ ಒಡೆತನದ ಟ್ರಸ್ಟ್ ಒಂದಕ್ಕೆ ಪಡೆದು, ಅವರನ್ನೂ ಟ್ರಸ್ಟಿನ ಭಾಗವಾಗಿಸಿಕೊಂಡರು.
ಈ ಮನೆ ಕಟ್ಟುವ ವೇಳೆ ಪೂರಕ ಮಾಹಿತಿಗಾಗಿ ಸಂಚರಿಸುತ್ತಿದ್ದಾಗ ಕರಾವಳಿಯ ಉದ್ದಗಲಕ್ಕೂ ಇಂತಹ ಹಾಳು ಬೀಳುತ್ತಿರುವ ಮನೆಗಳನ್ನು ಕಂಡಿದ್ದ ಶೆಣೈ ಅವರು ಮತ್ತು ಅವರ ಜೊತೆ ಅಷ್ಟೇ passion ನಿಂದ ಕೈಗೂಡಿಸಿ ದುಡಿದ ಪೈ ಕುಟುಂಬದ ಹೊಸ ತಲೆಮಾರಿನ ಹರೀಶ್ ಪೈ (ಇವರು ಪೈ ಸಾಮ್ರಾಜ್ಯಕ್ಕೆ ಸೇರಿದವರಾದರೂ ಈಗ ಬಹುತೇಕ ಆ ಸಾಮ್ರಾಜ್ಯದಿಂದ ಪರಿತ್ಯಕ್ತರಾಗಿ ನಮ್ಮ-ನಿಮ್ಮಂತೆ ಕಷ್ಟಪಟ್ಟು ದುಡಿದು ಬದುಕುತ್ತಿರುವವರು; ಟಿ.ಎಂ.ಎ. ಪೈಗಳ ಮೊದಲ ಮಗ ದಿ. ಪಾಂಡುರಂಗ ಪೈಗಳ ಮಗ)- ಬಹುತೇಕ ಇವರಿಬ್ಬರ ಕನಸಿನ ಫಲಿತಾಂಶವೇ ಈ ಹೆರಿಟೇಜ್ ವಿಲೇಜ್. ಇಂದು ಮಣ್ಣು ಪಾಲಾಗಿರುತ್ತಿದ್ದ ಹಲವು ಮನೆಗಳನ್ನು ವಸ್ತುಶಃ ಇಂಚಿಂಚೂ ಕಿತ್ತು ತಂದು ದುರಸ್ತಿ ಮಾಡಿ ಒಂದೆಡೆ ನಿಲ್ಲಿಸಿರುವುದು ಹುಚ್ಚು passion ಇದ್ದಾಗ ಮಾತ್ರ ಸಾಧ್ಯ. 

ನೀವು ಪ್ರಕಟಿಸಿರುವ ಶಿವು ತೀರ್ಥಹಳ್ಳಿ ಅವರ ಬರಹ ನನಗೆ ಬೀಸು ಹೇಳಿಕೆ ಎಂದು ಅನ್ನಿಸಿದ್ದು ಈ ಕಾರಣಗಳಿಗೆ:
 
 1. ಕರಾವಳಿಯ ಜಮೀನ್ದಾರಿಕೆಯ ದೊಡ್ಡ ಮನೆಗಳೆಲ್ಲವೂ ನಮ್ಮದೇ ತಳ ಸಮುದಾಯಗಳ ಶ್ರಮದ, ಬೆವರು-ರಕ್ತದ ಫಲವೇ ಹೊರತು ದುಡ್ಡಿರುವವರ ದುಡ್ಡಿನ ಅಟ್ಟಿಗಳ ಪ್ರದರ್ಶನ ಅಲ್ಲ. ಈ ಮನೆಗಳಲ್ಲಿರುವುದು ನಮ್ಮದೇ ಹಿಂದಿನ ತಲೆಮಾರುಗಳ ಕ್ರಿಯೇಟಿವ್ ಯೋಚನೆಗಳು, ಕೈಕೌಶಲಗಳು ಮತ್ತು ಬದುಕಿನ ಬಿಂಬಗಳು.
 2. ಈ ಮನೆಗಳು ಕರಾವಳಿಯಲ್ಲಿ ಯಾಕೆ ಹಾಳುಬೀಳತೊಡಗಿದವು? ಭೂಸುಧಾರಣೆ ಕಾನೂನು ಬಂದ ಬಳಿಕ, ಒಡೆಯರ ಆಸ್ತಿಗಳೂ ಅವರ ಮಕ್ಕಳಲ್ಲಿ ಪಾಲಾಗಿ ಹರಿದು ಹಂಚಿ ಹೋದಾಗ, ಈ ಮಾಜಿ ಒಡೆಯರ ತಲೆಗಿಂತ ಮುಂಡಾಸುಗಳೇ ಭಾರವಾಗತೊಡಗಿ, ಇಂತಹ ಮನೆಗಳ ನಿರ್ವಹಣೆ ಉಸ್ತುವಾರಿ ದುಸ್ತರವಾಗತೊಡಗಿತು. ಹಾಗಾಗಿ ಅವು ಹಾಳುಬೀಳತೊಡಗಿದವು. ಅವುಗಳನ್ನು ರಕ್ಷಿಸುವ ಮೂಲಕ ಶೆಣೈ ಮತ್ತವರ ತಂಡ ಒಂದಿಡೀ ತಲೆಮಾರಿನ ಸಾಂಸ್ಕೃತಿಕ ಬದುಕಿಗೆ ಮರುಜೀವ ಕೊಡುವುದು ಸಾಧ್ಯವಾಗಿದೆ. ಇಂತಹ ಮಾನವ ಬದುಕಿನ ಸಂಗ್ರಹಾಲಯಗಳು ಇವತ್ತಿಗೂ ಜಗತ್ತಿನಲ್ಲಿ ಹೆಚ್ಚಿಲ್ಲ.
3. ಒಬ್ಬ ವ್ಯಕ್ತಿ ಸುಮಾರು 40 ವರ್ಷಗಳ ಕಾಲ ತನ್ನ ಕುಟುಂಬ, ದೈಹಿಕ ಆರೋಗ್ಯ, ಹಣಕಾಸು ಎಲ್ಲವನ್ನೂ ಪಣಕ್ಕಿಟ್ಟು ಕೇವಲ ತನ್ನ passion ಒಂದನ್ನೇ ಗುರಿಯಾಗಿಟ್ಟುಕೊಂಡು ಹಗಲು-ರಾತ್ರಿ ಕನಸುತ್ತಾ ಕೂರುವುದಿದೆಯಲ್ಲ - ಈ ಶೃದ್ಧೆಗೆ ನನ್ನ ಸಂಪೂರ್ಣ ಗೌರವ ಸಲ್ಲುತ್ತದೆ. ಈವತ್ತಿಗೂ ವಯಸ್ಸು-ಆರೋಗ್ಯಗಳಿಂದ ಅರೆಜೀವ ಆಗಿರುವ ಶೆಣೈ ಅವರು ದಿನದ ಬಹುತೇಕ ಅವಧಿಯನ್ನು ಅಲ್ಲೇ ಕಳೆಯುತ್ತಾರೆ.
4. ಇಷ್ಟಾಗಿ, ಈ ಹೆರಿಟೇಜ್ ಟ್ರಸ್ಟಿಗೆ ಶೆಣೈಯವರು ಪೂರ್ಣ ಮಾಲಕರೂ ಅಲ್ಲ. ನಾಳೆ ಶೆಣೈ ಅವರ ಕಾಲದ ಬಳಿಕ ಅದು ಯಾವುದೋ ರಿಯಲ್ ಎಸ್ಟೇಟ್ ವ್ಯವಹಾರಕ್ಕೋ, ಸಿರಿವಂತ ರೆಸಾರ್ಟಿಗೋ ಹೋಗುವ ಸ್ಥಿತಿ ಎದುರಾಗುವ ಅಪಾಯ ಇಲ್ಲ ಎಂದು ಹೇಳುವಂತಿಲ್ಲ. ನಾವಿಂದು ನಮ್ಮ ಹಿಂದಿನ ತಲೆಮಾರುಗಳಿಗೆ ಸೇರಿದ ಈ ಸಂಪತ್ತನ್ನು ಸಾರ್ವಜನಿಕವಾಗಿ "heritage' ಎಂದು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಚ್ಚರದಿಂದಿರಬೇಕು ಮತ್ತು ಸರಕಾರದ ಗಮನಕ್ಕೆ ಈ ವಿಚಾರಗಳನ್ನು ತರಬೇಕಿದೆಯೇ ಹೊರತು ಇದನ್ನು ಜೀವರಹಿತ ಎಂದು ತಿರಸ್ಕರಿಸಿ ರೆಸಾರ್ಟಿಗೋ, ರಿಯಲ್ ಎಸ್ಟೇಟ್ ವ್ಯವಹಾರಕ್ಕೋ ಹಾದಿ ಮಾಡಿಕೊಡುವುದು ತಪ್ಪಾದೀತು.
5. ಶೆಣೈ ಅವರು ಆ ಸಮಾರಂಭದಲ್ಲಿ ಏನಂದರು ಎಂಬುದು ನನಗೆ ತಿಳಿದಿಲ್ಲ. ಆದರೆ, ನಾನು ಕಳೆದ ಹತ್ತು ವರ್ಷಗಳಿಂದ ಅವರನ್ನು ಕಂಡಂತೆ, ಅವರಲ್ಲಿ ಸಂಸ್ಕೃತಿ ಎಂದರೆ ಭೂಮಾಲಕತನ, ಜಮೀನ್ದಾರಿಕೆ, ಜಾತಿಪದ್ಧತಿ, ಜೀತ ಎಂಬ ತರಹದ ಯೋಚನೆಗಳನ್ನು ಕಂಡಿಲ್ಲ. ನಿಜಕ್ಕೆಂದರೆ, ಅವರಲ್ಲಿ passionನ ತೀವ್ರತೆ ಬಿಟ್ಟು ಬೇರೇನನ್ನೂ ನಾನು ಕಂಡಿಲ್ಲ. ರವಿವರ್ಮನ ಚಿತ್ರಗಳು, ಕೆ.ಕೆ. ಹೆಬ್ಬಾರರ ಚಿತ್ರಗಳು, ಅಮೂಲ್ಯ ಮಿನಿಯೇಚರ್‌ಗಳು ಈ ಹೆರಿಟೇಜ್ ವಿಲೇಜ್‌ನ ಭಾಗ ಆಗಿರುವುದಿದ್ದರೆ ಅದಕ್ಕೆ ಅವರ ಶ್ರಮ-ಶೃದ್ಧೆ ಮಾತ್ರ ಕಾರಣ. ಅವರೊಂದಿಗೆ ಹೆರಿಟೇಜ್ ವಿಲೇಜಿಗಾಗಿ ದುಡಿದ ಕಾರ್ಪೆಂಟರ್‌ಗಳು, ಮೇಸ್ತ್ರಿಗಳು, ಶ್ರಮಿಕರು ಇಂದು ಕರಾವಳಿಯಲ್ಲಿ ತಮ್ಮ ಕೌಶಲಗಳ ಕಾರಣದಿಂದಾಗಿ ನಾಡಿನಲ್ಲೇ ಮುಂಚೂಣಿಯಲ್ಲಿದ್ದಾರೆ. ಅವರ ಶ್ರಮಕ್ಕೆ ಬೆಲೆ-ಗೌರವ ಎರಡನ್ನೂ ಪಡೆದುಕೊಂಡಿದ್ದಾರೆ.
 6. ಭೂಸುಧಾರಣೆಯ ಫಲವಾದ ಪಲ್ಲಟಗಳು ಕರಾವಳಿಯಲ್ಲಿ ಮಾಡಿ ರುವ ಬದಲಾವಣೆಗಳು ಸಾಮಾಜಿಕ ನ್ಯಾಯವನ್ನು ತಂದಿವೆ. ನಮ್ಮಂತವರು ಭೂಮಿ ಹೊಂದುವುದು ಸಾಧ್ಯವಾಗಿದೆ. ಹಾಗಂತ ಸಾಮಾಜಿಕ ನ್ಯಾಯ ಪೂರ್ಣಗೊಂಡಿಲ್ಲ. ಹೊಸ ಧಣಿಗಳು ಹುಟ್ಟಿಕೊಂಡಿದ್ದಾರೆ, ಜಮೀನ್ದಾರಿಕೆ, ಜೀತ ಎಲ್ಲವೂ ಇದ್ದಲ್ಲೇ ಇವೆ. ಅದರೊಂದಿಗೆ ಹೆಚ್ಚುವರಿಯಾಗಿ ಶಿಕ್ಷಣದ ವ್ಯಾಪಾರ - ಕೋಮುವಾದದಂತಹ ಹೊಸ ಅಪಾಯಗಳನ್ನೂ ನಾವೀಗ ಎದುರಿಸಬೇಕಾಗಿದೆ. ಇದು ಪ್ರತ್ಯೇಕ ಚರ್ಚೆಯ ವಿಚಾರ. ಆದರೆ ಹೆರಿಟೇಜ್ ವಿಲೇಜ್‌ನ ಕಂಬಗಳಿಗೆ - ಗೋಡೆಗಳಿಗೆ ಜೀವ ಇಲ್ಲ ಎಂದರೆ ಅದು ತುಂಬಾ ಕಟು ಮಾತು.
7. ಇನ್ನು ಐನೂರು ರೂಪಾಯಿ ಟಿಕೆಟಿನ ಮಾತು. ಅಲ್ಲಿ ತೊಡಗಿಸ ಲಾಗಿರುವ ಹಣ-ಶ್ರಮಗಳಿಗೆ ಈ 500 ಏನೇನೂ ಅಲ್ಲ. ವೀಕೆಂಡ್ ಗಿರಾಕಿಗಳು, ಮಜಾವಾದಿಗಳನ್ನು ದೂರ ಇರಿಸಿ ಆಸಕ್ತರನ್ನು ಮಾತ್ರ ಈ ವಿಲೇಜ್ ಕಾಣಲು ಬಿಡುವುದಕ್ಕೆ ಇಂತಹದೊಂದು ಸೋಗು ಅನಿವಾರ್ಯ. ಹಾಗಂತ, ಕಳೆದ 20 ವರ್ಷಗಳಿಂದ ಚಿಕ್ಕಾಸೂ ಕೊಡದೆ ಲಕ್ಷಾಂತರ ಮಂದಿ ಅಲ್ಲಿಗೆ ಬಂದು ಹೆರಿಟೇಜ್ ವಿಲೇಜನ್ನು ನೋಡಿ ಹೋಗಿದ್ದಾರೆ; ಮಜಾವಾದಿಗಳು ಬಂದು ಶೆಣೈ ಅವರಿಂದ ಬೈಯಿಸಿಕೊಂಡು ಹೋದ ಘಟನೆಗಳೂ ಹಲವಾರಿವೆ.

Writer - ರಾಜಾರಾಮ್ ತಲ್ಲೂರ್

contributor

Editor - ರಾಜಾರಾಮ್ ತಲ್ಲೂರ್

contributor

Similar News