ಮಳೆಗಾಲದಲ್ಲಿ ಮರಣ ಮೃದಂಗಬಾರಿಸುವ ಸೊಳ್ಳೆಗಳು
ಮಳೆಗಾಲದಲ್ಲಿ ಸೊಳ್ಳೆಗಳದ್ದೇ ಕಾರುಬಾರು. ಈ ಕಾರಣಕ್ಕಾಗಿಯೇ ಬೇಸಿಗೆಯಲ್ಲಿ ಸೆಕೆಯ ಕಾಟ, ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಎಂದು ಹೇಳಲಾಗುತ್ತಿದೆ. ಏನೇ ಇದ್ದರೂ ಮಳೆಗಾಲ ಸೊಳ್ಳೆಗಳಿಗೆ ಪರ್ವಕಾಲ. ಅವುಗಳು ಹೆಚ್ಚಿನ ಸಂತಾನೋತ್ಪತ್ತಿ ಮಾಡುವುದು, ಅವುಗಳ ಆಟ-ಆರ್ಭಟ ಹೆಚ್ಚಾಗಿ ಕಾಣ ಸಿಗುವುದು ಮಳೆಗಾಲದಲ್ಲಿಯೇ. ಬೇಸಿಗೆಯಲ್ಲಿ ಕಾಣದಂತೆ ಮಾಯವಾಗುವ ಸೊಳ್ಳೆಗಳು ಮಳೆ ಬಂದು ಅಲ್ಲಲ್ಲಿ ನೀರು ನಿಂತೊಡನೆಯೇ ತಮ್ಮ ರುದ್ರ ನರ್ತನವನ್ನು ಮನುಕುಲದ ಮೇಲೆ ತೋರಿಸಿಬಿಡುತ್ತವೆ. ಸೊಳ್ಳೆಗಳಿಗೆ ಮನುಷ್ಯನ ರಕ್ತವೆಂದರೆ ಅತೀವ ಪ್ರೀತಿ. ಮನುಷ್ಯನ ರಕ್ತವನ್ನು ಹೀರಿ ರೋಗಗಳನ್ನು ಹರಡಿಸುವ ಕಾರ್ಯವನ್ನು ಸೊಳ್ಳೆಗಳು ಸದ್ದಿಲ್ಲದೆ ಮಾಡುತ್ತವೆ. ಮಲೇರಿಯಾ, ಆನೆಕಾಲು ರೋಗ, ಡೆಂಗ್, ಚಿಕುನ್‌ಗುನ್ಯ, ಮೆದುಳು ಜ್ವರ ಮುಂತಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸೊಳ್ಳೆಗಳು ಸದ್ದಿಲ್ಲದೇ ಮಾಡುತ್ತಿರುತ್ತವೆ. ಅನಾಫೆಲಿಸ್ ಹೆಣ್ಣು ಸೊಳ್ಳೆ, ಏಡಿಸ್ ಸೊಳ್ಳೆ ಮತ್ತು ಕ್ಯೂಲೆಕ್ಸ್ ಸೊಳ್ಳೆ ಇವುಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರುಗಳು ಅನಾಫೆಲಿಸ್ ಮಲೇರಿಯಾ ರೋಗಕ್ಕೆ ನಾಂದಿ ಹಾಡಿದಲ್ಲಿ ಏಡಿಸ್ ಸೊಳ್ಳೆ ಡೆಂಗ್ ಮತ್ತು ಚಿಕುನ್‌ಗುನ್ಯ ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಕ್ಯೂಲೆಕ್ಸ್ ಸೊಳ್ಳೆಯಿಂದ ಮೆದುಳು ಜ್ವರ ಮತ್ತು ಆನೆಕಾಲು ರೋಗ ಹರಡುತ್ತದೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದುಸೊಳ್ಳೆಗಳು ದೇಹದ ಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದರೂ, ಮನುಕುಲದ ಬಹುದೊಡ್ಡ ವೈರಿ. ಸೊಳ್ಳೆಗಳು ಮನುಷ್ಯನ ಏಳಿಗೆಗೆ ಬಹುದೊಡ್ಡ ಕಂಟಕವೆಂದರೂ ತಪ್ಪಲ್ಲ. ಜೀವನದ ಆಟದಲ್ಲಿ ಮನುಷ್ಯನ ಕಡುವೈರಿ ಸೊಳ್ಳೆಗಳೇ. ಈ ವೈರತ್ವಕ್ಕೆ ಸರಿಸಾಟಿ ಇನ್ಯಾವುದೂ ಸಿಗಲಿಕ್ಕಿಲ್ಲ. ಮಲೇರಿಯಾ ಬಾಧಿಸಿದಷ್ಟು ತೊಂದರೆ, ಆರ್ಥಿಕ ನಷ್ಟ, ಸಾವು ನೋವು ಇನ್ನಾವುದೇ ರೋಗದಿಂದಲೂ ಬಂದಿಲ.್ಲ ಮಲೇರಿಯಾದ ಕಪಿ ಮುಷ್ಟಿಗೆ ಸಿಕ್ಕಿ ಮನುಕುಲ ವಿಲವಿಲನೆ ಒದ್ದಾಡಿದೆ ಎಂದರೂ ಅತಿಶಯೋಕ್ತಿಯಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ವರ್ಷಕ್ಕೆ 5 ಮಿಲಿಯನ್ ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ. ಮಲೇರಿಯಾ ಮನುಕುಲವನ್ನು ಗಡಗಡನೆ ನಡುಗಿಸುತ್ತಲೇ ಇದೆ. ವಿಪರ್ಯಾಸವೆಂದರೆ ಮಲೇರಿಯಾ ಬಂದವರು ಚಳಿಜ್ವರದಿಂದ ನಡುಗುತ್ತಿದ್ದರೆ, ರೋಗ ಬರದವರು ರೋಗವನ್ನು ತೀವ್ರತೆಯನ್ನು ನೆನೆದು ನಡುಗುತ್ತಾರೆ. ಲಕ್ಷಾಂತರ ಮಂದಿ ಸಾಯುತ್ತಲೇ ಇದ್ದಾರೆ. ಹೊಸ ಹೊಸ ಔಷಧಗಳು, ಹೊಸ ಹೊಸ ಅಣುಜೀವಿಗಳು ಹುಟ್ಟುತ್ತಲೇ ಇವೆ. ಸೊಳ್ಳೆಗಳ ರುದ್ರನರ್ತನ ಮುಂದುವರಿಯುತ್ತಲೇ ಇವೆ. ಮಲೇರಿಯಾದ ಜೊತೆಗೆ ಇತರ ಡೆಂಗ್, ಮೆದುಳು ಜ್ವರ, ಆನೆಕಾಲು ರೋಗ, ಚಿಕುನ್‌ಗುನ್ಯ ಜ್ವರ ಹೀಗೆ ಸೊಳ್ಳೆಗಳು ಒಂದಾದ ಮೇಲೊಂದರಂತೆ ಮಾನವಕುಲದ ಮೇಲೆ ಪ್ರಹಾರ ಮಾಡುತ್ತಲೇ ಇವೆ.ೀವ ಜಗತ್ತಿನ ಪ್ರಭೇದಗಳಲ್ಲಿ ಕೀಟ ಪ್ರಭೇದ ಬಹಳ ದೊಡ್ಡದು. ಇದರಲ್ಲಿ ಸೊಳ್ಳೆಗಳದ್ದೇ ಸಿಂಹಪಾಲು ಜಗತ್ತಿನಾದ್ಯಂತ ಜನಿಸುವ ಸೊಳ್ಳೆಗಳಲ್ಲಿ ಶೇಕಡಾ 80ರಿಂದ 90ರಷ್ಟು ಕಾಡುಗಳಲ್ಲಿ ಹುಟ್ಟಿ ಬೆಳೆದು ಸಾಯುತ್ತವೆ. ಕೇವಲ ಶೇ. 10ರಿಂದ 20 ಮಾತ್ರ ಮನುಷ್ಯರ ಸಂಪರ್ಕಕ್ಕೆ ಬರುತ್ತವೆ. ಸಂತಸದ ವಿಚಾರವೆಂದರೆ ಈ ಶೇ.10ರಲ್ಲಿ, ಕೇವಲ ನೂರಲ್ಲಿ ಒಂದೆರಡು ಸೊಳ್ಳೆಗಳಿಗೆ ಮಾತ್ರ ಮಾನವನ ರಕ್ತ ಹೀರುವ ಅವಕಾಶ ದೊರಕುತ್ತದೆ. ಎಲ್ಲಾ ಸೊಳ್ಳೆಗಳಿಗೂ ಮನುಷ್ಯನ ರಕ್ತ ಹೀರುವ ಅವಕಾಶ ದೊರೆತಲ್ಲಿ ನಮ್ಮ ಊಹೆಗೂ ನಿಲುಕದ ರೋಗಗಳು ಹುಟ್ಟಬಹುದು ಮತ್ತು ಹರಡ ಬಹುದು.
ಸೊಳ್ಳೆಗಳ ನಿಯಂತ್ರಣ ಹೇಗೆ ?
- ಬಿಟ್ಟು ನಾಡು ಸೇರಿದ ಸೊಳ್ಳೆಗಳಿಗೆ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ರಕ್ತವೇ ಆಹಾರ. ಕಾಡು ಕಡಿದು ಕಾಂಕ್ರೀಟ್ ನಾಡು ಮಾಡಿರುವ ಮನುಷ್ಯನಿಗೆ ಉಚಿತವಾಗಿ ದೊರಕಿದ ಸಂಗಾತಿ ಸೊಳ್ಳೆ ಎಂದರೂ ತಪ್ಪಲ್ಲ. ಇದು ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ. ಹೆಣ್ಣು ಸೊಳ್ಳೆಗಳಿಗೆ ಮೊಟ್ಟೆ ಇಡುವ ಸಮಯದಲ್ಲಿ ರಕ್ತ ಅತೀ ಅಗತ್ಯ. ಇದಕ್ಕಾಗಿ ಇವುಗಳು ಹೆಚ್ಚಾಗಿ ಮನುಷ್ಯನ ಮತ್ತು ಇತರ ಪ್ರಾಣಿಗಳ ರಕ್ತ ಹೀರುತ್ತವೆ. ಈ ಪ್ರಕ್ರಿಯೆಯಲ್ಲಿ ರೋಗಿಗಳಿಂದ ಹೀರಿದ ರಕ್ತಗಳ ಜೊತೆಗೆ ರೋಗಿಯಲ್ಲಿನ ಜೀವಾಣುಗಳನ್ನು ಹೀರಿಕೊಂಡು ಬಿಡುತ್ತವೆ. ಆ ಬಳಿಕ ಈ ರೋಗಾಣುಯುಕ್ತ ಸೊಳ್ಳೆ ಆರೋಗ್ಯವಂತ ಮನುಷ್ಯರನ್ನು ಕಚ್ಚಿ ತನ್ನ ಎಂಜಲಿನಲ್ಲಿನ ರೋಗಾಣುಗಳನ್ನು ಆತನಿಗೂ ಹಬ್ಬಿಸಿ ರೋಗವನ್ನು ಹರಡಿಸುತ್ತವೆ. ಹೀಗೆ ಸೊಳ್ಳೆಗಳು ರೋಗವಾಹಕಕೀಟಗಳಾಗಿ ಮನುಕುಲಕ್ಕೆ ಬಹು ದೊಡ್ಡ ಕಂಟಕವಾಗಿ ಪರಿಣಮಿಸಿವೆ. ಸೊಳ್ಳೆ ನಿಯಂತ್ರಣಕ್ಕೆ ಈ ಕೆಳಗಿನ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. .ಪರಿಸರದ ಸ್ವಚ್ಛತೆಯನ್ನು ಕಾಪಾಡಬೇಕು. ಪರಿಸರ, ನೀರು ಮತ್ತು ಗಾಳಿ ಕಲುಷಿತಗೊಳ್ಳದ ರೀತಿಯಲ್ಲಿ ನಾವು ಬದುಕಬೇಕಾದ ಅನಿವಾರ್ಯತೆ ಇದೆ ಮತ್ತು ಇತರ ಜೀವ ಸಂಕುಲಗಳನ್ನು ಬದುಕಲು ಬಿಡಬೇಕು.
- .ಸೂಕ್ತ ನೀರಿನ ನಿರ್ವಹಣೆಗಾಗಿ ಬೇಕಾದ ವ್ಯವಸ್ಥೆ ಮಾಡಬೇಕು. ಉತ್ತಮ ಚರಂಡಿ ವ್ಯವಸ್ಥೆ, ನದಿ, ಕೆರೆ, ತೊರೆ, ಕಾಲುವೆಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.
- .ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರು ಸೊಳ್ಳೆಗಳಿಗೆ ಸ್ವರ್ಗವಿದ್ದಂತೆ.
- .ಎಲ್ಲೆಂದರಲ್ಲಿ ಕಸ ಎಸೆಯುವುದು, ತಿಪ್ಪೆ ಗುಂಡಿಗಳಲ್ಲಿ ನೀರು ನಿಲ್ಲುವುದು, ಘನ ಮತ್ತು ದ್ರವ್ಯ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಇತ್ಯಾದಿಗಳಿಂದ ಸೊಳ್ಳೆಗಳ ಸಂಖ್ಯೆ ವೃದ್ಧಿಸುತ್ತದೆ.
- .ಕೃತಕವಾಗಿ ನೀರು ನಿಲ್ಲುವ ಜಾಗಗಳಾದ ತೆಂಗಿನ ಚಿಪ್ಪು, ಹೂದಾನಿ, ಟಯರ್, ಖಾಲಿ ಡಬ್ಬ ಮತ್ತು ಕ್ಯಾನ್‌ಗಳು, ಅಕ್ವೇರಿಯಂ, ಏರ್‌ಕಂಡಿಷನರ್ ಮತ್ತು ಏರ್‌ಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆ ನಿಲ್ಲದಂತೆ ಮಾಡಿಕೊಳ್ಳಬೇಕು.
- .ಮನೆಯ ಸುತ್ತಮುತ್ತ ಇರುವಂತಹ ಹಳೆ ಬಕೆಟ್ ಮತ್ತು ನೀರಿನ ಕ್ಯಾನ್‌ಗಳಲ್ಲಿ ಬೋರಲಾಗಿ ಹಾಕಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ನೀರು ತುಂಬುವ ವಸ್ತುಗಳನ್ನು ನೀರು ಬೀಳದಂತಹ ಸೂರಿನಡಿಯಲ್ಲಿ ಇಡಬೇಕು. ಹೂ ಕುಂಡಗಳ ಕೆಳಗಿರುವ ತಟ್ಟೆಗಳನ್ನು ತೆಗೆಯಬೇಕು. ಇಡಲೇ ಬೇಕಿದ್ದಲ್ಲಿ ಈ ತಟ್ಟೆಗಳನ್ನು ಚೆನ್ನಾಗಿ ತಿಕ್ಕಿ, ತೊಳೆದು ಸೊಳ್ಳೆಗಳ ತತ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕು ಮತ್ತು ನೀರು ಶೇಖರಣೆ ಆಗದಂತೆ ನೋಡಿಕೊಳ್ಳಬೇಕು. ಹೂಕುಂಡಗಳಲ್ಲಿರುವ ಮಣ್ಣನ್ನು ಸಡಿಲವಾಗಿರುವಂತೆ ನೋಡಿಕೊಳ್ಳಬೇಕು. ಈ ಮಣ್ಣುಗಟ್ಟಿಯಾಗಿದ್ದಲ್ಲಿ ನೀರು ಸೋರಿ ಹೋಗುವುದಕ್ಕೆ ಅಡ್ಡಿಯಾಗಿ, ನೀರು ತುಂಬಿಕೊಂಡು ಸೊಳ್ಳೆಗಳನ್ನು ಆಕರ್ಷಿಸಬಹುದು. ಏಡಿಸ್ ಸೊಳ್ಳೆ ಶುದ್ಧವಾದ ತಿಳಿಯಾದ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಮನೆಯೊಳಗೆ ಅಲಂಕಾರಕ್ಕಾಗಿ ಬಳಸುವ ಹೂದಾನಿಗಳ ನೀರನ್ನು ದಿನವೂ ಬದಲಿಸಬೇಕು. ಮತ್ತು ಶುಭ್ರವಾಗಿ ಇಟ್ಟುಕೊಳ್ಳಬೇಕು. .ಸೊಳ್ಳೆ ಮರಿಗಳನ್ನು ತಿನ್ನುವ ಗಪ್ಪಿಮೀನುಗಳನ್ನು ಬೆಳೆಸಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು.
- .ಉದ್ದ ತೋಳಿನ ಅಂಗಿ, ಕಾಲು ಮುಚ್ಚುವ ಪ್ಯಾಂಟ್ ಮತ್ತು ಕಾಲು ಚೀಲ ಧರಿಸಿದಲ್ಲಿ ಸೊಳ್ಳೆಗಳಿಂದ ಕಡಿಸಿಕೊಳ್ಳುವ ಸಾಧ್ಯತೆ ಕಡಿಮೆಯಿರುತ್ತದೆ. ಮೈ ತುಂಬಾ ಬಟ್ಟೆ ಧರಿಸಿ ಆದಷ್ಟು ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಸೊಳ್ಳೆ ಪರದೆಯನ್ನು ಬಳಸಬೇಕು. ಹಗಲು ಹೊತ್ತು ವಿಶ್ರಮಿಸುವಾಗಲೂ ಸೊಳ್ಳೆಯ ಸಾಂದ್ರತೆ ಜಾಸ್ತಿ ಇರುವ ಪ್ರದೇಶಗಳಲ್ಲಿ ಸೊಳ್ಳೆ ಪರದೆ ಬಳಸುವುದು ಸೂಕ್ತ. ಸೊಳ್ಳೆ ಮೈ ಮೇಲೆ ಕುಳಿತುಕೊಳ್ಳದೆ ಇರುವಂತಹ ಸೊಳ್ಳೆ ನಿರೋಧಕ ಅಥವಾ ವಿಕರ್ಷಕ ದ್ರಾವಣಗಳನ್ನು ಬಳಸಬಹುದು. ಕಿಟಿಕಿ ಮತ್ತು ತೆರೆದ ಜಾಗಗಳಿಗೆ ನೆಟ್ ಬಳಸಿದಲ್ಲಿ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ತಡೆಯಬಹುದು.
- .ಅತ್ಯಂತ ಸುವಾಸನೆಯುಕ್ತ ಸಾಬೂನು ಮತ್ತು ಶೃಂಗಾರ ಯುಕ್ತ ದ್ರವ್ಯಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ಇವುಗಳು ಕೂಡಾ ಕೆಲವೊಮ್ಮೆ ಸೊಳ್ಳೆಗಳನ್ನು ಆಕರ್ಷಿಸಬಹುದು.
- .ಕೀಟನಾಶಕಗಳ ಬಳಕೆ ಮತ್ತು ಸೊಳ್ಳೆ ನಿಯಂತ್ರಣ ಮಾಡುವ ಔಷಧಗಳ ಬಳಕೆ ಮುಂತಾದುವುಗಳಿಂದ ಸೊಳ್ಳೆಗಳ ಸಂತಾನಾಭಿವೃದ್ಧಿ ಆಗದಂತೆ ಮಾಡಬೇಕು.
- .ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗುವಂತಹ ಯಾವುದೇ ರೀತಿಯ ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು.
- .ನಗರೀಕರಣ, ಕೈಗಾರೀಕರಣಗಳಿಂದಾಗಿ, ನಗರ ಪ್ರದೇಶಗಳಲ್ಲಿಯೂ ಸೊಳ್ಳೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡಿ, ಎಲ್ಲಿಯೂ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣ ನಿರ್ಮಾಣವಾಗದಂತೆ ನೋಡುವ ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ.
- ಒಟ್ಟಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಬೇಕಾದ ತುರ್ತು ಆವಶ್ಯಕತೆ ಇದೆ. ಮಳೆಗಾಲದ ಆರಂಭದಲ್ಲಿ ಸಾಕಷ್ಟು ಮುಂಜಾಗರೂಕತೆ ವಹಿಸಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗುವ ವಾತಾವರಣವನ್ನು ಇಲ್ಲದಾಗಿಸಿ ಸೊಳ್ಳೆಗಳ ಸಂಖ್ಯೆಯನ್ನು ಡಿಮೆ ಮಾಡುವ ಎಲ್ಲಾ ಪೂರಕ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲೇಬೇಕು. ಇಲ್ಲವಾದಲ್ಲಿ ಸೊಳ್ಳೆಗಳ ಸಂಖ್ಯೆ ವೃದ್ಧಿಸಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಂಡು ಮನುಕುಲದ ಮೇಲೆ ಸವಾರಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ಕಾರಣದಿಂದಲೇ ಪ್ರತಿಯೊಬ್ಬ ನಾಗರಿಕನೂ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಪರಿಸರದ ನೈರ್ಮಲ್ಯವನ್ನು ಕಾಪಾಡಿಕೊಂಡಲ್ಲಿ ಸೊಳ್ಳೆಗಳ ಸಂಖ್ಯೆ ನಿಯಂತ್ರಿಸಲ್ಪಟ್ಟು ಆರೋಗ್ಯವಂಥ ಸಮಾಜದ ನಿರ್ಮಾಣ ಸಾಧ್ಯವಾಗಬಹುದು. ಇದರಲ್ಲಿಯೇ ಸಮಾಜದ ಮತ್ತು ಮನುಕುಲದ ಹಿತ ಅಡಗಿದೆ.