ಹೀಗೊಂದು ಹವಾಮಾನ ವರದಿ

Update: 2016-06-25 18:35 GMT

1. ರಾಜ್ಯದಲ್ಲಿ ಮುಂಗಾರು ಮಳೆ ತೀವ್ರವಾಗಿದ್ದು, ಈ ಬಾರಿ ಕಾಂಗ್ರೆಸ್‌ನಲ್ಲಿ ಅತೃಪ್ತಿಯ ಬೆಳೆ ಹುಲುಸಾಗಿ ಬೆಳೆಯಲಿದೆ. ಇದರಿಂದ ಬಿಜೆಪಿಯ ಮತಗಳ ಗೋದಾಮು ಮತ್ತೆ ತುಂಬುವ ಎಲ್ಲ ಸಾಧ್ಯತೆಗಳು ಇವೆ ಎಂದು ಬಿಜೆಪಿ ಹವಾಮಾನ ಇಲಾಖೆಯ ಮುಖ್ಯಸ್ಥ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಈ ಅತೃಪ್ತಿಯ ಬೆಳೆಯ ನಡುವೆ ಬಿಜೆಪಿಯು ಉಪಬೆಳೆಗಳನ್ನೂ ಬೆಳೆಯುವ ಯೋಜನೆಯನ್ನು ಹಾಕಿಕೊಂಡಿದ್ದು, ಅದಕ್ಕೆ ಬೇಕಾಗಿರುವ ಗೊಬ್ಬರವನ್ನು ಎಸ್ಸೆಂ, ಶರೀಫ್ ಕಂಪೆಯು ಒದಗಿಸಿಕೊಡಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಮುಂಗಾರಿನಲ್ಲಿ ಜೆಡಿಎಸ್‌ನ ಪ್ರಮುಖ ರೈತರೊಂದಿಗೆ ಜೊತೆಗೂಡಿ ನಾಟಿ ಮಾಡಿ ಬೆಳೆತೆಗೆದಿದ್ದೇವಾದರೂ, ಪಾಲು ಮಾಡುವ ಸಂದರ್ಭದಲ್ಲಿ ಮಣ್ಣಿನ ಗೌಡರು ನಮಗೆ ವಂಚನೆ ಮಾಡಿರುವುದರಿಂದ, ಬಿಜೆಪಿಯ ಗದ್ದೆಯಲ್ಲಿ ಬಿಜೆಪಿಯ ರೈತರೇ ಉಳಲಿದ್ದಾರೆ. ಸಾಧ್ಯವಾದರೆ, ಹಣಕೊಟ್ಟು ಜೆಡಿಎಸ್‌ನ ರೈತರನ್ನು ಕೊಂಡು, ಗದ್ದೆಯಲ್ಲಿ ದುಡಿಸಲಿದ್ದೇವೆ ಎಂದು ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‌ನ ಅತೃಪ್ತಿಯ ಬೆಳೆ ಹೆಚ್ಚಿರುವುದರಿಂದ, ಬಿಜೆಪಿಗೆ ಆಹಾರದ ಕೊರತೆಯಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬೆಳೆ ಹೀಗೆಯೇ ಹೆಚ್ಚಿದರೆ, ನಾವು ಗದ್ದೆಗಿಳಿದು ದುಡಿಯುವ ಅಗತ್ಯವೇ ಇಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪಕ್ಷದೊಳಗಿರುವ ಹವಾಮಾನದ ಬಗ್ಗೆ ವಿವರಿಸಿದ ಯಡಿಯೂರಪ್ಪ, ಒಳಚರಂಡಿಗಳನ್ನೆಲ್ಲ ನಾವು ವಿಶಾಲಗೊಳಿಸಿರುವುದರಿಂದ ಈ ಹಿಂದಿನಂತೆ ಕೊಳಚೆ ನೀರು ನಿಂತು ಈಶ್ವರಪ್ಪ ಸೊಳ್ಳೆಗಳು ರೋಗ ಹರಡುವ ಭಯವಿಲ್ಲ ಎಂದು ತಿಳಿಸಿದರು. ಅಲ್ಲಲ್ಲಿ ಈ ಸೊಳ್ಳೆ ಗುಂಯ್ ಗುಡುವುದು ಕೇಳುತ್ತಿದೆಯಾದರೂ, ಮಳೆಗಾಲದಲ್ಲಿ ಕೊಳಚೆ ನೀರು ಇದ್ದಲ್ಲಿ ಹೀಗೆ ಸದ್ದು ಬರುವುದು ಸಹಜ. ಅದಕ್ಕೇನೂ ಮಾಡುವ ಹಾಗಿಲ್ಲ. ಆದರೂ ಮೋದಿ ಸೊಳ್ಳೆಬತ್ತಿಯನ್ನು ವಿತರಿಸಲಾಗಿದ್ದು ಬಿಜೆಪಿಯೊಳಗೆ ಇದು ಸದ್ಯಕ್ಕೆ ಯಾವುದೇ ರೋಗವನ್ನು ಹರಡಲಾರದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

2. ಈ ಬಾರಿ ಮಂಡ್ಯದ ಆಕಾಶದಲ್ಲಿ ಭಾರೀ ಕಾರ್ಮೋಡಗಳು ಕವಿದಿದ್ದು ಭಾರೀ ಮಳೆಯಾಗಲಿದೆ ಎಂದು ಕಾಂಗ್ರೆಸ್ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಈಗಾಗಲೇ ಮಂಡ್ಯ, ಮೈಸೂರಿನಾದ್ಯಂತ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ಶುರುವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಎನ್ನುವ ಸುಂಟರಗಾಳಿ ಸದ್ದು ಮಾಡುತ್ತಿದೆಯಾದರೂ, ಸದ್ದಿನಷ್ಟು ಭೀಕರವಾದ ಯಾವ ಪರಿಣಾಮವೂ ಆಗುವುದಿಲ್ಲ. ಇದಕ್ಕೆ ಹೆದರಬೇಕಾದ ಅಗತ್ಯವೂ ಇಲ್ಲ ಎನ್ನುವುದನ್ನು ಮಂಡ್ಯದ ಜನಸಾಮಾನ್ಯ ರೈತರು ಅಭಿಪ್ರಾಯ ಪಡುತ್ತಿದ್ದಾರೆ. ಬೆಂಗಳೂರಿನ ಮುಖ್ಯಮಂತ್ರಿ ನಿವಾಸದಲ್ಲಿ ತೀವ್ರ ಚಳಿ ಕಾಣಿಸಿಕೊಂಡಿದ್ದು, ಸಿದ್ದರಾಮಯ್ಯ ಅವರ ಕುರ್ಚಿ ಆ ಚಳಿಗೆ ಗಡಗಡ ನಡುಗುತ್ತಿದೆ ಎಂದು ಕೆಲವರು ಹೇಳುತ್ತಿದ್ದರಾದರೂ, ತನಗೆ ಸಣ್ಣಗೆ ಜ್ವರ ಬಾಧಿಸಿರುವುದರಿಂದ ಈ ಚಳಿ ಕಾಣಿಸಿಕೊಂಡಿದೆ. ಅದರಿಂದಾಗಿ ನಾನು ನಡುಗುತ್ತಿದ್ದೇನೆ. ಈಗಾಗಲೇ ದಿಲ್ಲಿಯಲ್ಲಿ ಹೋಗಿ ಎರಡು ಬಾರಿ ಔಷಧಿ ತೆಗೆದುಕೊಂಡಿದ್ದೇನೆ. ಆಗಲೂ ಜ್ವರ ನಿಲ್ಲದೇ ಇದ್ದರೆ, ಮತ್ತೊಮ್ಮೆ ಸಣ್ಣದೊಂದು ಸರ್ಜರಿ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆನ್ನಲಾಗಿದೆ.

  ಇತ್ತೀಚೆಗೆ ತನ್ನ ಹೊಟ್ಟೆಗೆ ಮಾಡಿಸಿಕೊಂಡಿರುವ ದೊಡ್ಡ ಸರ್ಜರಿಯಿಂದಾಗಿ ಬೇರೆ ಬೇರೆ ರೋಗಗಳು ಕಾಣಿಸಿಕೊಂಡಿವೆೆ. ಸರ್ಜರಿಯ ಸಂದರ್ಭದಲ್ಲಿ ಕೆಲವು ಸಾಮಗ್ರಿಗಳು ಹೊಟ್ಟೆಯೊಳಗೇ ಉಳಿದು ಬಿಟ್ಟಿರುವುದರಿಂದ ಸಣ್ಣದೊಂದು ಸರ್ಜರಿ ಮಾಡಿ ಅವುಗಳನ್ನು ಹೊರಗೆ ತೆಗೆಯಬೇಕಾಗುತ್ತದೆ. ಅಲ್ಲಿಯವರೆಗೆ ಈ ಚಳಿ ಜ್ವರ ಮುಂದುವರಿಯಲಿದೆ. ಇದೀಗ ಮಳೆಗಾಲವಾಗಿರುವುದರಿಂದ ಕಾಯಿಲೆ ಸ್ವಲ್ಪ ಉಲ್ಬಣಿಸಿದೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವೃದ್ಧಾಶ್ರಮದಲ್ಲಿರುವ ಕೆಲವು ಹಿರಿಯರಿಗೆ ಇದು ಉತ್ತಮ ಹವಾಮಾನವಾಗಿದ್ದು, ಮೆಲ್ಲಗೆ ತಮ್ಮ ಊರುಗೋಲುಗಳ ಸಹಿತ ತಮ್ಮ ತಮ್ಮ ಮೊಮ್ಮಕ್ಕಳ ಗದ್ದೆಯಲ್ಲಿ ಯಾವ ರೀತಿಯಲ್ಲಿ ಕೃಷಿ ಮಾಡಬಹುದು ಎಂದು ಓಡಾಡಲು ಆರಂಭಿಸಿದ್ದಾರೆ ಎಂಬ ಸೂಚನೆ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಸಿಎಂ ಇಬ್ರಾಹೀಂ ಅವರ ಮೇಲೆ ಹವಾಮಾನ ತೀವ್ರ ಪರಿಣಾಮವನ್ನು ಬೀರಿದ್ದು, ಗಾಳಿ ಬಂದೆಡೆಗೆ ತೂರಿಕೊಳ್ಳುವುದಕ್ಕೆ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದೂ ಮಾಹಿತಿ ದೊರಕಿದೆ.
ಗಾಳಿಯೂ ಬಿಜೆಪಿಯ ಕಡೆಗೆ ಬೀಸುತ್ತಿರುವುದರಿಂದ, ಆಗಾಗ ಇಬ್ರಾಹೀಂ ಅವರು ಆಕಡೆಗೆ ವಾಲುತ್ತಿರುವುದು ಅಲ್ಪಸಂಖ್ಯಾತ ದೊಡ್ಡಿಯನ್ನು ಸಣ್ಣದೊಂದು ಕಂಪನ ಸೃಷ್ಟಿಯಾಗಿದೆ. ‘‘ಗಾಳಿ ತೀವ್ರವಾಗಿರುವುದರಿಂದ ತಾನು ಆ ಕಡೆ ಈ ಕಡೆ ವಾಲೂದು ಸಹಜ. ಈ ಹಿಂದೆ ಭಾರೀ ಬಿರುಗಾಳಿಗೆ ಸಿಲುಕಿ, ನಾನು ಜೆಡಿಎಸ್‌ನಿಂದ ಕಾಂಗ್ರೆಸ್ ಕಡೆಗೆ ಬಿದ್ದು ಬಿಟ್ಟೆ. ಇದೀಗ ಮತ್ತೆ ಗಾಳಿ ಬೀಸುತ್ತಿದೆ. ಬಿಜೆಪಿಯ ಕಡೆಗೆ ಗಾಳಿಯ ಪ್ರಭಾವದಿಂದ ವಾಲುತ್ತಿದ್ದೇನೆ ಅಷ್ಟೇ. ಇದು ಗಾಳಿಯ ತಪ್ಪೇ ಹೊರತು ತನ್ನದಲ್ಲ...ಹವಾಮಾನದ ವೈಪರೀತ್ಯವನ್ನು ಗಮನಿಸಿ ದಿಲ್ಲಿಯ ಹವಾಮಾನ ಇಲಾಖೆಯವರು ತನಗೆ ಪುನರ್ವಸತಿ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಕಲ್ಪಿಸಿದರೆ ಈ ವಾಲುವಿಕೆಯಲ್ಲಿ ಮಾರ್ಪಾಡು ಮಾಡಬಹುದು...’’ ಎಂದು ಇಬ್ರಾಹೀಂ ತಿಳಿಸಿದ್ದಾರೆ ಎನ್ನಲಾಗಿದೆ.

*******      *******


 ಇದೇ ಸಂದರ್ಭದಲ್ಲಿ ಸೂಕ್ತ ಮುಂಗಾರು ಮಳೆ ಸುರಿಯುತ್ತಿದ್ದರೂ ದೇವೇಗೌಡರು ಮತ್ತು ಅವರ ಮಕ್ಕಳು ಇನ್ನೂ ಕೃಷಿ ಕಾರ್ಯವನ್ನು ಶುರು ಮಾಡಿಲ್ಲ. ‘‘ಹವಾಮಾನವೇನೋ ಪೂರಕವಾಗಿದೆ. ಆದರೆ ನಮ್ಮ ಗದ್ದೆಯಲ್ಲಿ ದುಡ್ಡಿಯುತ್ತಿದ್ದ ರೈತರನ್ನು ಕಾಂಗ್ರೆಸ್‌ನೋರು ತಮ್ಮ ಗದ್ದೆಯಲ್ಲಿ ಹೆಚ್ಚಿನ ಸಂಬಳ ಕೊಟ್ಟು ದುಡಿಸುತ್ತಿದ್ದಾರೆ. ನಮಗೆ ರೈತರ ಕೈಯಲ್ಲಿ ಕೆಲಸ ಮಾಡಿಸಿಗೊತ್ತೇ ಹೊರತು, ಗದ್ದೆಗಿಳಿದು ಕೆಲಸ ಮಾಡಲು ಗೊತ್ತಿಲ್ಲ. ಅದರಿಂದಾಗಿ ಏನು ಮಾಡಬೇಕು ಎಂದು ತೋಚುತ್ತಿಲ್ಲ’’ ಎಂದು ದೇವೇಗೌಡರು ನೇಗಿಲನ್ನು ಹೊತ್ತುಕೊಂಡು ಕಣ್ಣೀರು ಸುರಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ‘‘ನಮಗೂ ದುಡಿಯಲು ಗೊತ್ತು. ಆದರೆ ಗದ್ದೆಯಲ್ಲಿ ಬೆಳೆಯಲು ಬೇಕಾದ ಗೊಬ್ಬರಗಳನ್ನೇ ಝಮೀರ್ ಕಾಂಗ್ರೆಸ್ ಕಡೆಗೆ ಹೊತ್ಯೊಯ್ದಿದ್ದಾನೆ. ಗೊಬ್ಬರ ಇಲ್ಲದೆ ನಾಟಿ ಮಾಡುವುದು ಹೇಗೆ...’’ ಕುಮಾರಸ್ವಾಮಿ ತೀವ್ರ ಆರೋಪ ಮಾಡಿದ್ದಾರೆ. ‘‘ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರೈತರು ಗೊಬ್ಬರ, ಆಳುಕಾಳುಗಳು ಇಲ್ಲದೇ ಹೇಗೇ ಕಷ್ಟಪಡುತ್ತಿದ್ದಾರೆ ಎನ್ನುವುದಕ್ಕೆ ನಾವೇ ಉದಾಹರಣೆೆ. ಸೂಕ್ತ ಮಳೆಯಾಗಿದ್ದರೂ ಇನ್ನೂ ನಾಟಿ ಮಾಡುವುದಕ್ಕೆ ಆಗದ ಪರಿಸ್ಥಿತಿ ಇದೆ. ಇದಕ್ಕೆ ಕಾಂಗ್ರೆಸ್ ಸರಕಾರವೇ ಕಾರಣ. ಈ ಬಾರಿ ಸೂಕ್ತ ಕೃಷಿ ಬೆಳೆಯಾಗದೇ ಇದ್ದರೆ ನನಗೂ, ನನ್ನ ಕುಟುಂಬಕ್ಕೂ ಒಂದು ಕೆಜಿ ಅಕ್ಕಿಯ ಅನ್ನ ಭಾಗ್ಯ ಯೋಜನೆಯನ್ನು ಸರಕಾರ ಒದಗಿಸಿಕೊಡಬೇಕು. ಇಲ್ಲದೇ ಇದ್ದರೆ ಹಾಸದ ಪುರಾತನ ಕಾಲದ ರೈತರ ಕುಟುಂಬವೊಂದರ ಆತ್ಮಹತ್ಯೆಗೆ ಸಿದ್ದರಾಮಯ್ಯ ಅವರೇ ಹೊಣೆಯಾಗಬೇಕಾಗುತ್ತದೆ’’ ಎಂದು ಕುಮಾರಸ್ವಾಮಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಎಚ್. ಡಿ. ರೇವಣ್ಣ ‘‘ಸೂಕ್ತ ಮಳೆಯೇನೋ ಆಗಿದೆ. ಕೃಷಿಗೆ ಹವಾಮಾನ ಪೂರಕವಾಗಿದೆ. ಆದರೆ ಡಿಕೆಶಿಯವರ ಮೂಲಕ ಕಾಂಗ್ರೆಸ್ ಸರಕಾರವು ನಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ. ಇದೀಗ ನಮ್ಮ ಜಮೀನಿನಲ್ಲಿ ಡಿಕೆಶಿಯವರು ಕೃಷಿ ಮಾಡತೊಡಗಿದ್ದಾರೆ. ಆದುದರಿಂದ ನಮ್ಮ ಜಮೀನನ್ನು ನಮಗೇ ಬಿಟ್ಟುಕೊಡಬೇಕು. ನಾವು ತಂದೆ ಮಕ್ಕಳಿಗೆ ಕೃಷಿ ಮಾಡಲು ಅನುವು ಮಾಡಿಕೊಡಬೇಕು’’ ಎಂದು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಮಝಾನ್ ಭರ್ಜರಿ ಇಫ್ತಾರ್ ಪಾರ್ಟಿಯಲ್ಲಿ ಮಾತನಾಡಿರುವ ಝಮೀರ್ ‘‘ಬಕ್ರೀದ್‌ಗೆ ಬಲಿಕೊಡಲು ಸಾಕಿಕೊಂಡಿದ್ದ ಗೌಡರ ಕುರಿಗಳನ್ನು ನಾವು ತುಸು ಅವಸರದಲ್ಲಿ ರಮಝಾನ್‌ಗೆ ಬಲಿಕೊಟ್ಟಿದ್ದೇವೆ’’ ಎಂದು ಭರ್ಜರಿ ಬಿರಿಯಾನಿಯನ್ನು ಡಿಕೆಶಿಯ ಜೊತೆಗೆ ಹಂಚಿಕೊಂಡು ತಿಂದು ತೇಗು ಬಿಟ್ಟ ಸುದ್ದಿ ಬೆಂಗಳೂರಿನಾದ್ಯಂತ ಹರಡಿದೆ. ಹಾಗೆಯೇ, ಮುಂದಿನ ಬಕ್ರೀದ್‌ಗೆ ಬಲಿ ಕೊಡಲು ಬೇಕಾದ ಬಕ್ರಾಗಳಿಗೆ ಈಗಲೇ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News