‘ಇಲ್ಲ’ಗಳ ನಡುವೆ ಸಂಭ್ರಮದ ಚೆರೆ ಪೆರ್ನಾಳ್

Update: 2016-07-06 06:46 GMT

ವಾರಾಂತ್ಯದ ದಿನ ಶನಿವಾರ ಬೇಗ ಬರಲಿ ಎಂಬ ಅಭಿಲಾಷೆಯೊಂದಿಗೆ ದಿನ ದೂಡುತ್ತಿದ್ದ ಸಮಯವದು. ರಾತ್ರಿಯ ಅನ್ನವನ್ನು ಬೆಳಗ್ಗೆ ತುಸು ಬಿಸಿ ಮಾಡಿ ಅಲ್ಯುಮಿನಿಯಂ ಬುತ್ತಿಯಲ್ಲಿ ಹಾಕಿ ಅದರ ಮೇಲಿನ ಒಂದು ಸಣ್ಣ ತಟ್ಟೆಯಲ್ಲಿ ಟೊಮೆಟೋ ಸಾರು, ಇಲ್ಲವೇ ಬೇಳೆ ಸಾರು, ತಪ್ಪಿದರೆ ಒಣ ಮೀನಿನ ಸಾರನ್ನು ಹಾಕಿ ಬೆಳಗ್ಗೆ ಶಾಲೆಗೆ ಹೊರಡುವಾಗ ತಾಯಿ ನನ್ನ ಕೈಯಲ್ಲಿ ಕೊಡುತ್ತಿದ್ದರು, ಶಾಲೆಯ ದಾರಿಯುದ್ದಕ್ಕೂ ಮಳೆಗಾಲದ ಮಳೆ ನೀರು ಬಿದ್ದು, ಆ ಬುತ್ತಿ ತಣ್ಣಗಾಗಿ, ತರಗತಿ ಕೋಣೆಯ ಒಂದು ಮೂಲೆಯಲ್ಲಿಟ್ಟು ಮಧ್ಯಾಹ್ನ ತೆರೆದು ನೋಡಿದಾಗ, ಇಂದಿನ ಫ್ರಿಡ್ಜ್‌ನಲ್ಲಿ ಇದ್ದುದಕ್ಕಿಂತಲೂ ತಂಪಾಗಿರುತ್ತಿದ್ದ ಆ ಅನ್ನವನ್ನು ತಿನ್ನುವುದೇ ನನಗೆ ಒಂದು ರೀತಿಯ ಹಿಂಜರಿಕೆ. ಆದರೂ ಹಸಿವಿನಿಂದ ತಿಂದು, ಸಾಯಂಕಾಲ ಮನೆಗೆ ಬಂದು ಕೇಳುತ್ತಿದ್ದ ಪ್ರಶ್ನೆ ಇವತ್ತು ಯಾವ ವಾರ? ಶನಿವಾರ ಯಾವಾಗ ಬರುತ್ತದೆ ಎಂದು.

ಶನಿವಾರದ ಬಗ್ಗೆ ನನಗೆ ಮಾತ್ರವಲ್ಲ, ನನ್ನ ಓರಗೆಯ ಬಹುತೇಕ ಮಕ್ಕಳಿಗೂ ಅದೇ ಕಾತರ. ಕಾರಣ ಇದೆ. ಶನಿವಾರ ಬೀಡಿಯ ಮಜೂರಿಯ ದಿನ. ಸೋಮವಾರದಿಂದ ಶನಿವಾರದವರೆಗೆ ಕಟ್ಟಿದ ಬೀಡಿಗೆ ಮಜೂರಿ ನೀಡುವ ಶನಿವಾರ ನಮಗೆ ಮೀನು ಪದಾರ್ಥದ ದಿನ ಮಾತ್ರವಲ್ಲ ಶಾಲೆಯಿಂದ ಮಧ್ಯಾಹ್ನ ಓಡೋಡಿ ಬರುವ ನಾನು, ಶಾಲಾಚೀಲ ಬೀಸಾಡಿ ತಡಕಾಡುತ್ತಿದ್ದುದು ಗೋಡೆಯ ಮೊಳೆಗೆ ತೂಗು ಹಾಕುತ್ತಿದ್ದ ಬಟ್ಟೆಯ ಚೀಲವನ್ನು. ನನ್ನ ಬಹು ನಿರೀಕ್ಷೆಯ ಶನಿವಾರದ ಉಡುಗೊರೆಯಾದ ಬಟರ್ ತಪ್ಪಿದರೆ ರಸ್ಕ್, ಅಥವಾ ಚಕ್ಕುಲಿಯ ಸಣ್ಣ ಪ್ಯಾಕೆಟ್ ಇಡುತ್ತಿದ್ದ ಚೀಲವದು. ಆ ಪೊಟ್ಟಣದಿಂದ ಒಂದೆರಡನ್ನು ತಿಂದು ನೀರು ಕುಡಿಯುತ್ತಿದ್ದ ನನಗೆ ಮತ್ತೆ ಬಟರ್, ರಸ್ಕ್, ಚಕ್ಕುಲಿ ಕಾಣಬೇಕಾದರೆ ಮುಂದಿನ ಶನಿವಾರವೇ ಬರಬೇಕಿತ್ತು. ಹಸಿಮೀನಿನ ಪದಾರ್ಥ ಬಹುತೇಕ ಖಚಿತವಾಗಿ ಸಿಗುತ್ತಿದ್ದ ದಿನವೇ ಶನಿವಾರ. ಅಂದು ಸಿಕ್ಕಿದ್ದ ಮಜೂರಿಯೆಂಬ ಬಿಡಿಗಾಸು ಅಂದೇ ಖಾಲಿಯಾಗುತ್ತಿದ್ದುದರಿಂದ ಮತ್ತೆ ತಿಂಡಿ-ಮೀನಿನ ರುಚಿ ನೋಡಬೇಕಾದರೆ ನಾವು ಶನಿವಾರವನ್ನೇ ಎದುರು ನೋಡ ಬೇಕಾಗಿತ್ತು.

1980ರ ದಶಕದ ನನ್ನ ಪ್ರಾಥಮಿಕ ವಿದ್ಯಾಭ್ಯಾಸದ ಆ ದಿನಗಳಲ್ಲಿ ತುಪ್ಪದ ಅನ್ನ ಮತ್ತು ಕೋಳಿ ಪದಾರ್ಥವನ್ನು ಸವಿಯಲು ವರ್ಷದಲ್ಲಿ ಮೂರು ಅವಕಾಶಗಳಷ್ಟೇ ಸಿಗುತ್ತಿದ್ದುದು. ಮೊದಲನೆಯದು ರಬೀವುಲ್ ಅವ್ವಲ್ ತಿಂಗಳಲ್ಲಿ. ಕುಟುಂಬದ, ಅಲ್ಪಸ್ವಲ್ಪ ಉಳ್ಳವರು ಮನೆಯಲ್ಲಿ ನಡೆಸುತ್ತಿದ್ದ ಮೌಲೀದ್ ಪಾರಾಯಣದ ಅಹ್ವಾನವನ್ನು ನೀಡಿದಾಗ ಖುಷಿಯಿಂದಲೇ ಸಮಯಕ್ಕೆ ಮುಂಚಿತವಾಗಿ ಹಾಜರಾಗುತ್ತಿದ್ದ ನಾನು ಮತ್ತು ನನ್ನ ಓರಗೆಯ ಮಕ್ಕಳು ಅಂಗಳದಲ್ಲಿ ಇಟ್ಟ ಬೆಂಚು ಅಥವಾ ಜಗಲಿ ಮೇಲೆ ಕುಳಿತು ಕೊನೆಯ ದುಆ(ಪ್ರಾರ್ಥನೆ)ದ ನಿರೀಕ್ಷೆ ಮಾಡುತ್ತಿದ್ದೆವು. ಕೊನೆಯ ದುಆ ಆಯಿತು ಎಂದರೆ ಊಟ ಖಚಿತ. ತುಪ್ಪದ ಅನ್ನದ ಪರಿಮಳದಲ್ಲಿ ತೇಲುತ್ತಿದ್ದ ನಮಗೆ ಇಬ್ಬಿಬ್ಬರಿಗೆ ಒಂದೇ ತಟ್ಟೆಯಲ್ಲಿ ಬಡಿಸುತ್ತಿದ್ದ ದಿನಗಳದು. ಇಬ್ಬಿಬ್ಬರು ಎರಡು ಬದಿಯಿಂದ ಊಟ ಮಾಡುತ್ತಾ ಬರಬೇಕಿತ್ತು. ಆದಾಗ್ಯೂ ಯಾವುದೇ ಗೊಂದಲವಿಲ್ಲದೆ ಎದುರು ಬದುರು ಕುಳಿತು ಎಲ್ಲರೂ ಹೊಂದಾಣಿಕೆಯಿಂದಲೇ ಊಟ ಮಾಡಿ ಎದ್ದೇಳುತ್ತಿದ್ದರು. ಅಂದಿನ ಪ್ರತಿಯೊಬ್ಬರಿಗೂ ಒಂದೊಂದು ಅಗುಳಿನ ಬೆಲೆ ಗೊತ್ತಿತ್ತು.

ಮತ್ತೆ ಇದೇ ಅವಕಾಶ ಬರಬೇಕಾದರೆ ಈದುಲ್ ಫಿತ್ರ್ ಬರಬೇಕಾಗಿತ್ತು. ಇದು ನಮ್ಮ ನಮ್ಮ ಮನೆಯಲ್ಲೇ ಕೋಳಿ ಪದಾರ್ಥ,ಇಡ್ಲಿ, ಸೀರ್‌ಕುರ್ಮ ಮಾಡುತ್ತಿದ್ದ ಸಂದರ್ಭ. ತುಪ್ಪದ ಅನ್ನ ಮಾಡುವಷ್ಟು ಆರ್ಥಿಕ ಪರಿಸ್ಥಿತಿ ಇಲ್ಲದಿದ್ದುದರಿಂದ ಸಾದಾ ಕುಚ್ಚಲು ಅಕ್ಕಿಯ ಅನ್ನವೇ ಹಬ್ಬಕ್ಕೂ ಕೂಡಾ. ಆದರೆ ಒಂದು ಖುಷಿಯ ವಿಚಾರವೆಂದರೆ ಪದಾರ್ಥ ಮಾತ್ರ ಕೋಳಿಯದ್ದಾಗಿತ್ತು. ಇದಕ್ಕಿಂತಲೂ ಮಿಗಿಲಾಗಿ ಈದುಲ್ ಫಿತ್ರ್‌ನ ದಿನ ನಮ್ಮ ಸಂತೋಷವನ್ನು ಇಮ್ಮಡಿ ಮಾಡುತ್ತಿದ್ದುದು ಬೆಳಗ್ಗಿನ ಇಡ್ಲಿ ಹಾಗೂ ನಂತರದ ಸೀರ್‌ಕುರ್ಮ(ಪಾಯಸ). ಇದನ್ನು ಮತ್ತೆ ಕಾಣಬೇಕಾದರೆ ಈದುಲ್-ಅಝ್‌ಹಾ (ಬಕ್ರೀದ್) ಬರಬೇಕಾಗಿತ್ತು.

ಈದುಲ್ ಫಿತ್ರ್ ಹಬ್ಬವು ಆಡು ಭಾಷೆಯಲ್ಲಿ ಚೆರುಪೆರ್ನಾಳ್ ಎಂದೆ ಜನಜನಿತ. ಇಂದಿಗೂ ತುಳುವರಿಗೂ ಚಿರಪರಿಚಿತವಾಗಿರುವುದು ಎಲ್ಯ ಪೆರ್ನಾಳ್ ಮತ್ತು ಮಲ್ಲ ಪೆರ್ನಾಳ್ (ಈದುಲ್ ಫಿತ್ರ್ ಅಝ್‌ಹಾ) ಎಂಬುದಾಗಿಯೇ ಆಗಿದೆ. ದಶಕಗಳ ಹಿಂದಿನ ಈದುಲ್ ಫಿತ್ರ್‌ನ್ನು ನೆನಪು ಮಾಡಿಕೊಳ್ಳುವಾಗ ರಮಝಾನ್ ಉಪವಾಸವನ್ನು ನೆನಪಿಸಿಕೊಳ್ಳದಿದ್ದರೆ ಹೇಗೆ? ಚೆರು ಪೆರ್ನಾಳ್ ಇರುವುದೇ ರಮಝಾನ್ ಉಪವಾಸದ ಹಿನ್ನೆಲೆಯಲ್ಲಿ. ಬಾಲ್ಯದ ದಿನಗಳಲ್ಲಿ ಉಪವಾಸ ಹಿಡಿಯುವುದು ನಮಗೆ ತುಂಬಾ ಆಸಕ್ತಿಕರ ಚಟುವಟಿಕೆ. ಉಪವಾಸದ ಮಹತ್ವವನ್ನು ಅರಿತು ಹಿಡಿದುದಕ್ಕಿಂತಲೂ ಹೆಚ್ಚಾಗಿ ಪ್ರಭಾತದ ಆಹಾರ, ಸಾಯಂಕಾಲದ ಉಪವಾಸ ವರ್ಜ್ಯದ ಖರ್ಜೂರ, ಹೆಸ್ರು ಕಾಳು ನೀರಿನ ರುಚಿಗಾಗಿಯೇ ನಾನು ಉಪವಾಸದ ಕಡೆಗೆ ಆಕರ್ಷಿತನಾಗಿದ್ದೆ. ಪ್ರಭಾತದ ನಿದ್ದೆಯಿಂದ ಎದ್ದೇಳಲು ಆಗ ಯಾವುದೇ ಅಲಾರಾಂ ಆಗಲಿ ಗಡಿಯಾರವಾಗಲಿ ಇರಲಿಲ್ಲವಾದರೂ ತಾಯಿ ಎದ್ದು, ಪಾತ್ರೆ ಪಗಡಿಯು ಮಾಡುತ್ತಿದ್ದ ಸದ್ದು ನನ್ನನ್ನು ಎಚ್ಚರಿಸುತ್ತಿತ್ತು. ಒಂದು ವೇಳೆ ಎಚ್ಚರಿಸದಿದ್ದರೆ ಅತೀವ ಕೋಪ ಬರುತ್ತಿತ್ತು. ಯಾವುದೇ ಆಯಾಸ-ಸುಸ್ತು ಇಲ್ಲದೆ ಲವಲವಿಕೆಯಿಂದಲೇ ಉಪವಾಸ ಹಿಡಿಯುತ್ತಿದ್ದ ನನ್ನಂತಹ ಬಾಲಕರು ಉಪವಾಸ ಹಿಡಿದೇ ಸಾಕಷ್ಟು ಆಟವನ್ನು ಆಡುತ್ತಿದ್ದೆವು. ಯಾವುದೇ ಬಳಳಿಕೆಯಿಲ್ಲದೆ ಇಫ್ತಾರ್‌ಗೆ ಸಜ್ಜ್ಜಾಗುತ್ತಿದ್ದೆ. ನನಗೆ ನಿತ್ಯದ ಹೆಸ್ರು ಕಾಳು ನೀರೇ ಮರುದಿನದ ಉಪವಾಸಕ್ಕೆ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತಿತ್ತು. ಒಂದು ಒಣ ಖರ್ಜೂರವನ್ನು ಎರಡು-ಮೂರು ಪಾಲು ಮಾಡಿ ಉಪವಾಸ ಬಿಡುತ್ತಿದ್ದ ಆ ದಿನಗಳು ಆಹಾರದ, ಹಸಿವಿನ ಮಹಿಮೆಯನ್ನು ಕಲಿಸಿಕೊಟ್ಟಿತ್ತು.

ರಮಝಾನ್ ತಿಂಗಳ 29ನೆ ದಿನ ಮುಕ್ತಾಯವಾಗುತ್ತಿದ್ದಂತೆ ನಾಳೆ ಪೆರ್ನಾಳ್ ಆಗಬಹುದೇ ಎಂಬ ಕುತೂಹಲ. ನೆರೆಹೊರೆಯ ಕೆಲವು ಹಿಂದೂ ಬಾಂಧವರು ಪೆರ್ನಾಳಿನ ಬಗ್ಗೆ ತಮ್ಮ ಪಂಚಾಗದ ಪ್ರಕಾರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಯಾವ ದಿನ ಪೆರ್ನಾಳ್ ಎಂದು ಅವರು ಅಮಾವಾಸ್ಯೆಯ ಫಲದ ಆಧಾರದಲ್ಲಿ ಖಚಿತವಾಗಿಯೇ ಹೇಳುತ್ತಿದ್ದರು. ಆದಗ್ಯೂ ಕೆಲವೊಮ್ಮೆ ಕವಿದ ಕಾರ್ಮೋಡದ ಕಾರಣದಿಂದ ಚಂದ್ರದರ್ಶನವಾಗದೇ ಅವರು ಹೇಳಿದ ದಿನ ಪೆರ್ನಾಳ್ ಆಗದೆ ಒಂದು ದಿನ ಮುಂದೂಡಲ್ಪಟ್ಟಾಗ ನಮಗಾಗುತ್ತಿದ್ದ ಬೇಸರ ಅಷ್ಟಿಷ್ಟಲ್ಲ. ಟೆಲಿಫೋನ್ ತೀರಾ ಅಪರೂಪವಾಗಿದ್ದ. ಅಂದು ದೂರದ ಮಸೀದಿಯಿಂದ ತಕ್ಬೀರ್ ಕೇಳುತ್ತದೋ ಎಂದು ತುಸು ಎತ್ತರಕ್ಕೇರಿ ಕವಿಗೊಡುತ್ತಿದ್ದೆವು. ಕೊನೆಗೂ ಕೇಳದೆ ಇದ್ದಾಗ 30ನೆ ಉಪವಾಸ ಹಿಡಿದು ನಿರೀಕ್ಷಿತವಾಗಿಯೇ ಶವ್ವಾಲ್ ಒಂದನೆ ದಿನಕ್ಕೆ ಅಣಿಯಾಗುತ್ತಿದ್ದೆವು.

ಶವ್ವಾಲ್ ಒಂದು, ಈದುಲ್ ಫಿತ್ರ್‌ನ ದಿನ. ಬೆಲೆ (ದೊಡ್ಡ) ಪೆರ್ನಾಳ್‌ನಲ್ಲಿ ಇಲ್ಲದ ಒಂದು ಕೆಲಸ ಈ ಚೆರುಪೆರ್ನಾಳ್‌ನಲ್ಲಿ ನನಗಿತ್ತು. ಪೆರ್ನಾಳಿನ ದಿನ ಬೆಳಗ್ಗೆ ಬಹು ಬೇಗ ಎದ್ದು ಮುಖ ತೊಳೆದು ಒಂದು ಚೀಲವನ್ನು ಹಿಡಿದುಕೊಂಡು ಸುಮಾರು ಒಂದೂವರೆಯಿಂದ ಎರಡು ಕಿ.ಮೀ. ದೂರ ನಡೆದು ಜಮಾಅತ್‌ನ ನಾಲ್ಕೈದು ಮನೆಗಳಿಗೆ ಹೋಗಿ ಫಿತ್ರ್ ಅಕ್ಕಿಯನ್ನು ಸಂಗ್ರಹಿಸಬೇಕಾಗಿತ್ತು. ಜಮಾಅತ್‌ನಲ್ಲಿ ಅನುಕೂಲಸ್ಥರಾಗಿದ್ದ ಐದಾರು ಕುಟುಂಬಗಳು ಫಿತ್ರ್ ಅಕ್ಕಿಯನ್ನು ವಿತರಿಸುತ್ತಿದ್ದವು. ಫಿತ್ರ್‌ನ ಬಗ್ಗೆ ಜಾಗೃತಿ ಕಡಿಮೆ ಇದ್ದ ಆ ದಿನಗಳಲ್ಲಿ ಕೆಲವೇ ಕೆಲವು ಕುಟುಂಬಗಳು ಫಿತ್ರ್ (ದಾನದ ಅಕ್ಕಿ) ಹಂಚುತ್ತಿದ್ದರು. ನಾನು ಮನೆಗಳಿಗೆ ಹೋಗಿ ಚೀಲ ತೋರಿಸಿದಾಗ ಖುಷಿಯಿಂದಲೇ ಒಂದೆರಡು ಸೇರು ಅಕ್ಕಿಯನ್ನು ಹಾಕಿ ಕಳುಹಿಸಿದ್ದ ಆ ದಿನಗಳು ಇಂದಿಗೂ ನೆನಪಿನಲ್ಲಿ ಉಳಿದಿದೆ. ವಾರಕೊಮ್ಮೆ ನಾಲ್ಕು ಸೇರು ಕೆ.ಜಿ. ಅಕ್ಕಿ ತರುತ್ತಿದ್ದ ನಮಗೆ ಈ ಫಿತ್ರ್ ಅಕ್ಕಿ ಕೆಲವು ದಿನಗಳ ಕಾಲ ಆಸರೆಯಾಗುತ್ತಿತ್ತು. ಪ್ರಾಥಮಿಕ ಶಾಲಾ ಶಿಕ್ಷಣದಿಂದ ನನ್ನ ಪ್ರೌಢಶಾಲಾ ವಿದ್ಯಾಭ್ಯಾಸದವರೆಗೂ ಹಲವಾರು ಪೆರ್ನಾಳಿನಲ್ಲಿ ಫಿತ್ರ್ ಅಕ್ಕಿಯನ್ನು ಸಂಗ್ರಹ ಮಾಡುವ ಜವಾಬ್ದಾರಿ ನನಗಿತ್ತು.

ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಗಳು ವಾರಕ್ಕೊಮ್ಮೆ ಬಂದು ಬಟ್ಟೆ ವಿತರಿಸಿ ಕಂತಿನ ಮೂಲಕ ಹಣ ಪಡೆಯುತ್ತಿದ್ದರು. ಅಂದಿನ ದಿನದಲ್ಲಿ ಹಬ್ಬ ಹರಿದಿನಗಳಿಗೆ ಬಟ್ಟೆ ಖರೀದಿಗೆ ಈ ವಾರದ ಬಟ್ಟೆ ವ್ಯಾಪಾರಿಗಳೇ ಮೂಲ. ಅವರು ತಂದು ಕೊಡುತ್ತಿದ್ದ ಅಂಗಿ-ಲುಂಗಿ ಧರಿಸಿ, ಸುಗಂಧ ದ್ರವ್ಯವನ್ನುಸ್ವಲ್ಪ ಹತ್ತಿಗೆ ಲೇಪಿಸಿ ಆ ಹತ್ತಿ ತುಂಡನ್ನು ಕಿವಿಗಿರಿಸಿ ಅಪರೂಪದ ಇಡ್ಲಿಯನ್ನು ಖುಷಿಯಿಂದಲೇ ತಿಂದು ಮಸೀದಿಯ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ಆಗುತ್ತಿದ್ದ ಖುಷಿಗೆ ಪಾರವೇ ಇರುತ್ತಿರಲಿಲ್ಲ.

ಮಸೀದಿಯಲ್ಲಿ ಹೊಸಬಟ್ಟೆ ಧಾರಿಗಳಾಗಿ ಸಮಾವೇಶಗೊಂಡು ಪ್ರಾರ್ಥನೆಗೈದು ಮನೆಗೆ ಮರಳುವ ಹಾದಿಯಲ್ಲಿ ಕೆಲವು ಮನೆಗಳಿಗೆ ತೆರಳಿ ಆಹಾರ ಸೇವಿಸಿ ಮನೆಗೆ ಮರಳುವಾಗ ಮಧ್ಯಾಹ್ನ ಕಳೆಯುತ್ತಿತ್ತು. ಸಂಜೆಯ ಕೆಂಪು, ಬಾನಿನಲಿ ರಂಗೇರಿ ನೇಸರ ಪಡುವಣದಲ್ಲಿ ಇಳಿಯುತ್ತಿದ್ದಂತೆ ಪೆರ್ನಾಳ್ ಕಳೆದು ಹೋಗುತ್ತಿರುವ ಬೇಸರ ಗಾಢವಾಗಿ ಮೂಡುತ್ತಿತ್ತು.

ಉಲ್ಲೇಖ ಮಾಡಲೇಬೇಕಾದ ವಿಷಯವೆಂದರೆ ಅಂದಿನ ಉಪವಾಸದ ಬಗ್ಗೆ ಹಿಂದೂ ಧರ್ಮೀಯರು ಹೊಂದಿದ್ದ ಗೌರವದ ಭಾವನೆ. ಉಪವಾಸ ಯಾವಾಗ ಆರಂಭವೆಂದು ಮಾತಿನ ನಡುವೆ ಕೇಳುತ್ತಿದ್ದ ಅಂದಿನ ಹಿರಿಯರು, ತಪ್ಪಿ ಊಟ ಆಯ್ತ, ಚಹಾ ಕುಡಿದು ಆಯ್ತ ಎಂದು ಪ್ರಶ್ನಿಸಿ, ಉಪವಾಸವೆಂಬುದನ್ನು ಅರಿತ ಕೂಡಲೇ ಕೇಳಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದರು.

ನೆರೆಯ ಹಿಂದೂ ಬಾಂಧವರನ್ನು ಪೆರ್ನಾಳ್‌ಗೆ ಕರೆಯದೇ ಇದ್ದರೆ ಬೇಸರಿಸುತ್ತಿದ್ದ ಕಾಲವದು. ಏಕೆ ಕರೆಯಲಿಲ್ಲ ಎಂದು ಕೋಪಗೊಂಡು, ಮರುದಿನ ಪ್ರಶ್ನಿಸುತ್ತಿದ್ದರು. ಪೆರ್ನಾಳ್‌ನ ದಿನ ಮಾಡುತ್ತಿದ್ದ ಇಡ್ಲಿ, ಸೀರ್‌ಕುರ್ಮವನ್ನು ಮತ್ತೆ ಸವಿಯ ಬೇಕೆಂದಿದ್ದರೆ ಮತ್ತೆ ಬೆಲೆಪೆರ್ನಾಳ್ ಬರಬೇಕಿತ್ತು ಇಲ್ಲವೇ ನೆರೆಮನೆಯ ಶಾಂತಕ್ಕೆಯವರ ಮನೆಯಲ್ಲಿ ವಿಶು ಹಬ್ಬ ಬರಬೇಕಿತ್ತು. ಪೆರ್ನಾಳ್‌ನ ದಿನ ನಮ್ಮ ಮನೆಯಲ್ಲಿ ಬಂದು ಪ್ರೀತಿಯಿಂದ ಇಡ್ಲಿ ತಿಂದು ಹೋಗುತ್ತಿದ್ದ ಶಾಂತೆಕ್ಕೆಯವರ ಮನೆಯ ಹಬ್ಬದ ದಿನ ನಮಗೆ ತಿಂಡಿಯನ್ನು ನೀಡದೆ ಇರಲಾರರು.

ಉಪವಾಸ, ಪೆರ್ನಾಳಿನ ಬಗ್ಗೆ ಅತೀವ ಗೌರವ ಹೊಂದಿದ್ದ ಅಂದಿನ ಸಹಧರ್ಮೀಯ ಬಾಂಧವರು, ಉಪವಾಸ ಹಿಡಿಯದವನ ಬಗ್ಗೆ ಅಷ್ಟೇ ಲಘುವಾಗಿ ಮಾತನಾಡುತ್ತಿದ್ದರು. ಅಂದಿನ ಪೆರ್ನಾಳ್, ಕೇವಲ ಮುಸ್ಲಿಮರಿಗೆ ಒಳ್ಳೆಯ ದಿನವಾಗಿರದೆ ಹಿಂದೂ-ಮುಸ್ಲಿಂ ಬಾಂಧವ್ಯ ಬೆಸೆಯುವ ಒಳ್ಳೆಯ ದಿನ(ಎಡ್ಡೆದಿನ)ವಾಗಿ ಮಾರ್ಪಟ್ಟಿತ್ತು. ಅದು ಮರಳಿ ಬರುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?

ಅಬ್ದುಲ್ ರಝಾಕ್ ಅನಂತಾಡಿ,

Writer - ಅಬ್ದುಲ್ ರಝಾಕ್ ಅನಂತಾಡಿ

contributor

Editor - ಅಬ್ದುಲ್ ರಝಾಕ್ ಅನಂತಾಡಿ

contributor

Similar News

ಸಂವಿಧಾನ -75