ಪೊಲೀಸ್ ಅಧಿಕಾರಿಗಳಿಗೂ ಬೆಂಬಲ ಬೆಲೆ ಘೋಷಣೆಯಾಗಲಿ!
‘‘ಆತ್ಮಹತ್ಯೆ ನಿಲ್ಲಲಿ...ಆತ್ಮಹತ್ಯೆ ನಿಲ್ಲಲಿ....’’
ಎಂಬ ಘೋಷಣೆ ಕೇಳಿದ್ದೇ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದ ರೈತರು ನಿರಾಳರಾದರು. ಬಿಜೆಪಿಯ ನಾಯಕರೆಲ್ಲರೂ ತಮ್ಮ ಪರವಾಗಿ ಬೀದಿಗಿಳಿದಿದ್ದಾರೆ ಎಂದು ಅವರು ಸಂಭ್ರಮಿಸಿದರು. ಆತ್ಮಹತ್ಯೆ ಮಾಡುತ್ತಿರುವ ರೈತರ ಕುಟುಂಬದ ಧ್ವನಿ ಕೊನೆಗೂ ವಿರೋಧ ಪಕ್ಷದ ನಾಯಕರ ಕಿವಿಗೆ ಮುಟ್ಟಿತಲ್ಲ ಎಂದು ಅವರು ಖುಷಿಪಟ್ಟರು. ಮಗದೊಂದೆಡೆ ದೇವೇಗೌಡರು ಅವರ ಪುತ್ರರು ಮೆರವಣಿಗೆಯಲ್ಲಿ ತೆರಳುತ್ತಾ ‘ಆತ್ಮಹತ್ಯೆಗೆ ಸರಕಾರವೇ ಹೊಣೆ’’ ಎಂದು ಕೂಗುತ್ತಿದ್ದರು. ಎಲ್ಲರೂ ವಿಧಾನಸೌಧದ ಕಡೆಗೆ ಸಾಗುತ್ತಿರುವುದು ನೋಡಿ, ನಾಳೆಯೇ ನಮ್ಮ ಬಗ್ಗೆ ಒಂದು ತೀರ್ಮಾನವನ್ನು ಸರಕಾರ ತೆಗೆದುಕೊಳ್ಳಬಹುದು ಎಂದು ರೈತರು ಮಾತನಾಡಿಕೊಂಡರು.
ಪತ್ರಕರ್ತ ಎಂಜಲು ಕಾಸಿ ತಕ್ಷಣ ಜಾಗರೂಕನಾದ. ನೇರವಾಗಿ ಮೆರವಣಿಗೆಯಲ್ಲಿ ಸೇರಿಕೊಂಡು ಜೆಡಿಎಸ್ ಮುಖಂಡ ಕುಮಾರಸ್ವಾಮಿಯನ್ನು ಸಂದರ್ಶನ ಮಾಡತೊಡಗಿದ ‘‘ಸಾರ್...ರೈತರ ಆತ್ಮಹತ್ಯೆ ತಡೆಯುವುದಕ್ಕಾಗಿ ಏನೇನು ಬೇಡಿಕೆಗಳನ್ನು ಸಲ್ಲಿಸಿದ್ದೀರಿ?’’
‘‘ಏನ್ರೀ...ತಲೆಸರಿಯಿಲ್ಲದವರ ಹಾಗೆ ಮಾತನಾಡುತ್ತಿದ್ದೀರಿ....ರೈತರೆಲ್ಲಿ ಆತ್ಮಹತ್ಯೆ ಮಾಡ್ಕೋತಿದ್ದಾರೆ...ಅವರೆಲ್ಲ ನೆಮ್ಮದಿಯಿಂದ ಇದ್ದಾರೆ...ನೋಡಿ...ನನ್ನ ತಂದೆ ಹುಟ್ಟುತ್ತಲೇ ರೈತರಾಗಿದ್ದವರು. ಈಗ ಮಾಜಿ ಪ್ರಧಾನಿಯಾಗಿ ಮನೆಯಲ್ಲಿ ಆರಾಮ ಜೀವನ ನಡೆಸುತ್ತಿಲ್ಲವೇ?’’ ಕುಮಾರಸ್ವಾಮಿ ಸಿಡುಕಿ ಕೇಳಿದರು.
‘‘ಹಾಗಾದರೆ ಮತ್ಯಾವ ಆತ್ಮಹತ್ಯೆ ಸಾರ್? ಮೊನ್ನೆ ಪಿಯುಸಿ, ಎಸ್ಸೆಸೆಲ್ಸಿ ಫಲಿತಾಂಶದ ಸಂದರ್ಭದಲ್ಲಿ ಎಳೆ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರಲ್ಲ, ಅದರ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದೀರಾ?’’
‘‘ಮತಹಾಕುವ ವಯಸ್ಸಿಗೆ ಬಾರದ ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ನಾವ್ಯಾಕೆ ಪ್ರತಿಭಟನೆ ಮಾಡಬೇಕು? ತಲೆಕೆಟ್ಟಿದೆಯಾ?’’ ಕುಮಾರಸ್ವಾಮಿ ಮತ್ತೆ ಸಿಟ್ಟಾದರು.
‘‘ಹಾಗಾದರೆ ನೀವು ಯಾರ ಪರವಾಗಿ ಪ್ರತಿಭಟನೆಗಿಳಿದಿದ್ದೀರಿ ಸಾರ್...?’’ ಕಾಸಿ ಕುತೂಹಲದಿಂದ ಕೇಳಿದ.
‘‘ಮತ್ಯಾರು? ನಮ್ಮ ಪೊಲೀಸ್ ಅಧಿಕಾರಿಗಳು ಕಣ್ರೀ...ಟಿವಿಯಲ್ಲಿ ನೋಡ್ತಾ ಇಲ್ವಾ...? ಒಬ್ಬೊಬ್ಬರಾಗಿ ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ...ಅವರ ರಕ್ಷಣೆ ನಮ್ಮ ಹೊಣೆ ಕಣ್ರೀ...ಒಂದು ಕಾಲದಲ್ಲಿ ರೈತರ ಮೇಲೆ ಎರ್ರಾಬಿರ್ರಿ ಲಾಠಿ ಚಾರ್ಜ್ ಮಾಡುತ್ತಾ ವೈಭವದಿಂದ ಬಾಳುತ್ತಿದ್ದ ಪೊಲೀಸ್ ಅಧಿಕಾರಿಗಳ ಸ್ಥಿತಿ ಇಂದು ಚಿಂತಾಜನಕವಾಗಿದೆ. ಇಂದು ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದರ ಬಗ್ಗೆ ಮುಖ್ಯಮಂತ್ರಿ ಗಂಟೆಗಟ್ಟಲೆ ಮಾತನಾಡುತ್ತಾರೆ. ಆದರೆ ಅಮಾಯಕ ಪೊಲೀಸ್ ಅಧಿಕಾರಿಗಳ ಬಗ್ಗೆ ಮಾತನಾಡುವವರೇ ಇಲ್ಲವಾಗಿದ್ದಾರೆ...ಆದುದರಿಂದ ನಾನು ಬೀದಿಗಿಳಿದಿದ್ದೇನೆ....ಪೊಲೀಸರ ಆತ್ಮಹತ್ಯೆ ನಿಲ್ಲಬೇಕು...ಅವರ ಮೇಲೆ ಒತ್ತಡ ಹೇರಬಾರದು...’’ ಕುಮಾರಸ್ವಾಮಿ ಘಂಟಾಘೋಷವಾಗಿ ಹೇಳಿದರು.
ಅಷ್ಟರಲ್ಲಿ ಇನ್ನೊಂದು ದಿಕ್ಕಿನಲ್ಲಿ ಬಿಜೆಪಿಯ ಮುಖಂಡ ಯಡಿಯೂರಪ್ಪ ಕೂಗಾಡುತ್ತಿದ್ದರು ‘‘ಪೊಲೀಸರ ಆತ್ಮಹತ್ಯೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು. ತಕ್ಷಣ ನ್ಯಾಯ ಸಿಗಬೇಕು...’’
ಪತ್ರಕರ್ತ ಎಂಜಲು ಕಾಸಿ ಅತ್ತ ಓಡಿದ. ‘‘ಸಾರ್...ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ಹೇಳಿ ಸಾರ್?’’
ಯಡಿಯೂರಪ್ಪ ತಕ್ಷಣ ಅರಚಾಡತೊಡಗಿದರು ‘‘ನೋಡ್ರಿ...ಯಾವುದೇ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರೆ ಅವರ ಮೃತದೇಹವನ್ನು ತಕ್ಷಣ ಬಿಜೆಪಿಯ ಮುಖಂಡರಿಗೆ ಹಸ್ತಾಂತರಿಸಬೇಕು....’’
ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಅಂತ್ಯ ಸಂಸ್ಕಾರಕ್ಕೆ ಅವರ ಕುಟುಂಬಕ್ಕೆ ಹಸ್ತಾಂತರಿಸುವುದು ನ್ಯಾಯವಲ್ಲವೆ?’
‘‘ನೋಡ್ರಿ...ಯಾವುದೇ ಪೊಲೀಸ್ ಅಧಿಕಾರಿಗಳು ಸಂಘಪರಿವಾರ ಮತ್ತು ಬಿಜೆಪಿಯ ಸೊತ್ತು. ಅವರ ದುರಂತ ನಡೆದಾಗ ಅವರಿಗೆ ನ್ಯಾಯ ನೀಡುವುದು ನಮ್ಮ ಹೊಣೆಗಾರಿಕೆ. ಆದುದರಿಂದ ಅವರ ಮೃತದೇಹದ ಮೇಲೆ ನಮಗೇ ಅಧಿಕಾರವಿರುವುದು. ಮಡಿಕೇರಿಯಲ್ಲಿ ಪೊಲೀಸ್ ಅಧಿಕಾರಿಯ ಮೃತದೇಹವನ್ನು ನಮ್ಮ ಶಾಸಕರ ಕೈಗೆ ಒಪ್ಪಿಸದೇ ರಾಜ್ಯ ಸರಕಾರ ಅನ್ಯಾಯ ಮಾಡಿದೆ. ಕನಿಷ್ಟ ಒಂದಿಡೀ ದಿನ ಆ ಪ್ರಾರ್ಥಿವ ಶರೀರವನ್ನು ಮುಂದಿಟ್ಟು ನಾವು ಪ್ರತಿಭಟನೆ ಮಾಡಬೇಕು ಎಂದು ತೀರ್ಮಾನಿಸಿದ್ದೆವು. ಆದರೆ ಮೃತರ ಕುಟುಂಬದ ತಲೆಕೆಡಿಸಿ ನಮ್ಮ ಪ್ರತಿಭಟನೆಯನ್ನು ವಿಫಲಗೊಳಿಸಿತು...’’
‘‘ಸಾರ್...ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ತಡೆಯಲು ನಿಮ್ಮ ಬೇಡಿಕೆ ಏನೇನು ಇದೆ ಹೇಳಿ...’’ ಕಾಸಿ ಪ್ರಶ್ನಿಸಿದ.
‘‘ನೋಡ್ರಿ...ಪೊಲೀಸರ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದು...ಮುಖ್ಯವಾಗಿ ನಕಲಿ ಎನ್‌ಕೌಂಟರ್‌ಗಳನ್ನು ಮಾಡಿದರೆ ಅದನ್ನು ಪ್ರಶ್ನಿಸುವುದು, ತನಿಖೆ ಮಾಡುವುದರಿಂದ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ನಿರ್ಮಾಣವಾಗುತ್ತದೆ. ಇದರಿಂದ ಅವರು ಆತ್ಮಹತ್ಯೆಯ ಕಡೆಗೆ ವಾಲುವ ಸಾಧ್ಯತೆಗಳಿವೆ. ಆದುದರಿಂದ ಎಲ್ಲ ನಕಲಿ ಎನ್‌ಕೌಂಟರ್‌ಗಳ ತನಿಖೆಯನ್ನು ಕೈ ಬಿಡಬೇಕು. ಮತ್ತು ಎನ್‌ಕೌಂಟರ್ ಮಾಡುವ ಪೂರ್ಣ ಸ್ವಾತಂತ್ರವನ್ನು ಪೊಲೀಸ್ ಅಧಿಕಾರಿಗಳಿಗೆ ಕೊಟ್ಟು ಅವರನ್ನು ಒತ್ತಡದಿಂದ ಪಾರು ಮಾಡಬೇಕು...’’ ಯಡಿಯೂರ ಆಗ್ರಹಿಸಿದರು.
‘‘ಸಾರ್...ಮತ್ತೆ?’’ ಕಾಸಿ ಕೇಳಿದ.
‘‘ಮತ್ತೆ...ಪೊಲೀಸ್ ಅಧಿಕಾರಿಗಳು ಲಂಚ ತೆಗೆದುಕೊಂಡು ಸಿಕ್ಕಿ ಬಿದ್ದಾಗ ಅವರನ್ನು ಅಮಾನತು ಮಾಡುವುದು ಬಹುದೊಡ್ಡ ಅಪರಾಧ. ಹಾಗೆ ಅಮಾನತು ಮಾಡಿದ ಅಧಿಕಾರಿಗಳನ್ನೇ ಅಮಾನತು ಮಾಡಬೇಕು. ಹಾಗೆಯೇ ಲಂಚ ತೆಗೆದುಕೊಳ್ಳುವುದನ್ನು ಸರಕಾರ ಸಕ್ರಮಗೊಳಿಸಬೇಕು. ಇಲ್ಲವಾದರೆ ಲಂಚ ತೆಗೆದುಕೊಂಡು ಅಮಾನತಾಗಿ, ಕೆಲಸ ಕಳೆದುಕೊಂಡು ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಬಹುದು...’’ ಯಡಿಯೂರಪ್ಪ ಬೇಡಿಕೆ ಮುಂದಿಟ್ಟರು. ‘‘ಸಾರ್...ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲವೇ?’’ ಕಾಸಿ ಆತಂಕದಿಂದ ಪ್ರಶ್ನೆ ಮಾಡಿದ.
‘‘ಸಾರ್ವಜನಿಕರಿಗಾಗಿ ಪ್ರಾಣವನ್ನೇ ಒತ್ತೆಯಿಡುವ ಅಧಿಕಾರಿಗಳಿಗಾಗಿ ಸಾರ್ವಜನಿಕರು ಇಷ್ಟನ್ನೂ ಮಾಡಲಾಗುವುದಿಲ್ಲವೇ? ತಕ್ಷಣ ರೈತರಿಗೆ ಬೆಂಬಲ ಬೆಲೆ ಘೋಷಿಸಿದಂತೆ, ಪೊಲೀಸ್ ಅಧಿಕಾರಿಗಳಿಗೂ ಬೆಂಬಲ ಲಂಚ ಎಂದು ಘೋಷಿಸಬೇಕು. ಸಾಧಾರಣವಾಗಿ ಕೆಲವೊಮ್ಮೆ ಲಂಚವೇ ಸಿಗದೆ ಪೊಲೀಸರು ಸಂಕಷ್ಟ ಎದುರಿಸುವುದಿದೆ. ಆಗ ಸರಕಾರವೇ ಇಂದಿಷ್ಟು ಬೆಂಬಲಲಂಚವನ್ನು ಪಾವತಿಸಬೇಕು. ಈ ಮೂಲಕ ಪೊಲೀಸ್ ಅಧಿಕಾರಿಗಳನ್ನು ಒತ್ತಡದಿಂದ ಪಾರು ಮಾಡಬೇಕು...’’
ಕಾಸಿ ನಿಂತಲ್ಲೇ ಬೆಚ್ಚಿ ಬಿದ್ದ.
‘‘ಅಷ್ಟೇ ಅಲ್ಲ, ಪೊಲೀಸರಿಗೆ ಎಲ್ಲಿಗೆ ಬೇಕೋ ಅಲ್ಲಿಗೆ ತಕ್ಷಣ ಸಚಿವರು ವರ್ಗಾವಣೆ ಮಾಡಬೇಕು...ಹಾಗೆಯೇ ಯಾರನ್ನು ಯಾವುದೇ ಕಾರಣಕ್ಕೂ ಅಮಾನತು ಮಾಡಿ ಅವರನ್ನು ಒತ್ತಡಕ್ಕೆ ತಳ್ಳಬಾರದು...ಮತ್ತು ಯಾವುದೇ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರೆ ತಕ್ಷಣ ಕಾಂಗ್ರೆಸ್‌ನ ಇಬ್ಬರು ಸಚಿವರು ರಾಜೀನಾಮೆ ನೀಡಬೇಕು...ಅಥವಾ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಇನ್ನಷ್ಟು ಉತ್ತಮ. ಅದು ಪೊಲೀಸ್ ಅಧಿಕಾರಿಗಳಲ್ಲಿ ನೈತಿಕ ಸ್ಥೈರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ’’
‘‘ಮುಂದೆ ನಿಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ನಿಯಮ ಅನ್ವಯವಾಗುತ್ತದೆಯೇ ಸಾರ್?’’ ಕಾಸಿ ಕೇಳಿದ.
‘‘ಮುಂದೆ ಸರಕಾರ ಬರುವುದಕ್ಕೆ ಈ ಬಿಜೆಪಿಯೊಳಗಿರುವ ಜನರು ಬಿಡುತ್ತಾರೇನ್ರಿ..? ನನಗಂತೂ ಅಧಿಕಾರಕ್ಕೆ ಬರುವುದು ಅನುಮಾನ?’’ ಯಡಿಯೂರಪ್ಪ ಮೀಸೆಯ ಮರೆಯಲ್ಲಿ ನಗುತ್ತಾ ಹೇಳಿದರು.
‘‘ಆದರೂ ಅಧಿಕಾರಕ್ಕೆ ಬಂದು ಬಿಟ್ಟರೆ?’’ ಕಾಸಿ ಕೇಳಿದ.
‘‘ಬಂದು ಬಿಟ್ಟರೆ...ನಾನೇ ಮುಖ್ಯಮಂತ್ರಿ....’’ ಯಡಿಯೂರಪ್ಪ ಘೋಷಿಸಿ ಬಿಟ್ಟರು.
‘‘ಅದು ಹೇಗೆ...ನಾವು ಇಲ್ಲಿ ಇರುವುದು ಯಾಕೆ?’’ ಈಶ್ವರಪ್ಪ ಖ್ಯಾತೆ ತೆಗೆದರು.
‘‘ನಾನು ಕೂಡ ಇಲ್ಲೇ ಇದ್ದೇನೆ’’ ಶೆಟ್ಟರ್ ಅರಚ ತೊಡಗಿದರು. ಒಟ್ಟಿನಲ್ಲಿ ನೆರೆದವರ ನಡುವೆ ‘‘ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ’’ ಎಂದು ಗುದ್ದಾಟ ಆರಂಭವಾಯಿತು.
ತನ್ನ ಪ್ರಶ್ನೆಗೆ ಉತ್ತರಿಸುವುದು ಬಿಟ್ಟು ಎಲ್ಲರೂ ಗುದ್ದಾಡುವುದು ಕಂಡು ಕಂಗಾಲಾದ. ದೂರದಲ್ಲಿ ಒಂದಿಷ್ಟು ಮಂದಿ ನಿಂತು ಇವರನ್ನೇ ನೋಡುತ್ತಿದ್ದರು. ಕಾಸಿ ಅವರಲ್ಲಿ ಕೇಳಿದ ‘‘ಬಿಜೆಪಿ ಅಧಿಕಾರಕ್ಕೆ ಬಂದರೆ...’’
ಅಷ್ಟರಲ್ಲಿ ಅವರೆಲ್ಲ ಒಟ್ಟಾಗಿ ಹೇಳಿದರು ‘‘ನಾವೆಲ್ಲ ಆತ್ಮಹತ್ಯೆ ಮಾಡ್ಕೋತೀವಿ...’’
‘‘ಯಾರ್ರೀ...ನೀವೆಲ್ಲ?’’ ಕಾಸಿ ಆತಂಕದಿಂದ ಕೇಳಿದ.
‘‘ಕರ್ನಾಟಕದಲ್ಲಿ ಇನ್ನೂ ಆತ್ಮವಿಶ್ವಾಸದಿಂದ ಬದುಕು ಸವೆಸುತ್ತಿರುವ ಈ ನೆಲದ ಅಳಿದುಳಿದ ರೈತರು’’ ಎಲ್ಲರು ಒಟ್ಟಾಗಿ ನುಡಿದರು.