ಆದಿವಾಸಿಗಳ ಅನ್ನದ ಬಟ್ಟಲು

Update: 2016-07-17 17:28 GMT

ಭಾರತದ ಆದಿವಾಸಿಗಳೆಂದರೆ,ಅಶಿಕ್ಷಿತರು,ಅನಾಗರಿಕರು ಎಂಬ ಕೀಳು ಮನೋಭಾವನೆ ನಮ್ಮಲ್ಲಿ ಬೇರೂರಿದೆ.ಆಧುನಿಕತೆ ಮತ್ತು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಭಾರತದ ನಿಜವಾದ ಆಹಾರ ಭದ್ರತೆಯ ಕೀಲಿ ಕೈ ಇವರ ಬಳಿ ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.ಇವತ್ತಿಗೂ ಎಲ್ಲಾ ಬಗೆಯ ದೇಶಿ ಬಿತ್ತನೆ ಬೀಜಗಳಿಂದ ಹಿಡಿದು,ತರಕಾರಿ ಮತ್ತು ಹಣ್ಣಿನ ತಳಿಗಳನ್ನು ಉಳಿಸಿ ಸರಂಕ್ಷಿಸಿ ಕಾಪಾಡಿಕೊಂಡು ಬಂದವರು ಇವರು.
ಓಡಿಶಾ,ಅಥವಾ ಮಧ್ಯಪ್ರದೇಶ,ಛತ್ತೀಸ್‌ಗಡ,ಆಂಧ್ರಪ್ರದೇಶ ರಾಜ್ಯಗಳ ಬುಡಕಟ್ಟು ಜನರು ವಾಸಿಸುವ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿದಾಗ, ಅಲ್ಲಿ ಸಿಗುವ ಅಲ್ಲಿನ ದೇಶಿ ಭತ್ತದ ತಳಿಯಿಂದ ತಯಾರಿಸಿದ ಅನ್ನ, ರುಚಿ ರುಚಿಯಾದ ತರಕಾರಿಗಳು ಮತ್ತು ವಿವಿಧ ಬಗೆಯ ಕಾಳುಗಳನ್ನು ತಿಂದಾಗ ಮಾತ್ರ ಇವರ ಪಾರಂಪರಿಕ ಜ್ಞಾನ ನಮಗೆ ಮನದಟ್ಟಾಗುವುದು.

      2012ರಲ್ಲಿ ಭಾರತದ ನಕ್ಸಲ್ ಇತಿಹಾಸದ ಕಥನ ಎಂದೂ ಮುಗಿಯದ ಯುದ್ಧ ಕೃತಿ ರಚನೆಗೆ ಮಾಹಿತಿಗಾಗಿ ದಂಡಕಾರಣ್ಯದ ಪ್ರದೇಶಗಳಲ್ಲಿ (ಮಧ್ಯಪ್ರದೇಶದ ಬಾಳ್‌ಗಾಟ್, ಜಬಲ್‌ಪುರ್, ಛತ್ತೀಸ್‌ಗಡದ ಜಗದಾಲ್ ಪುರ್ ಬಸ್ತಾರ್,ರಾಯಪುರ, ಬಿಲಾಸ್ ಪುರ್ ಮತ್ತು ದಂತೆವಾಡ ಜಿಲ್ಲೆಗಳಲ್ಲಿ ಹಾಗೂ ಮಹಾರಾಷ್ಟ್ರದ ಗೊಂಡಿಯ ಮತ್ತು ಚಂದ್ರಾಪುರ್ )ಅಲೆಯುವಾಗ,ಅಲ್ಲಿನ ಜಿಲ್ಲಾ ಕೇಂದ್ರಗಳ ಹೊಟೇಲ್ಗಳಲ್ಲಿ ಕೇವಲ ಹತ್ತು ರೂಪಾಯಿಗೆ ಬೊಗಸೆ ತುಂಬಾ ಪ್ಲೇಟಿಗೆ ಹಾಕಿದ ಅನ್ನ ಮತ್ತು ವಿವಿಧ ಮೊಳಕೆಯೊಡೆದ ಕಾಳುಗಳ ಸಾರು, ಇಲ್ಲವೆ ನಮ್ಮ ಹಪ್ಪಳದ ಅಗಲದ ಐದು ಚಪಾತಿ ಮತ್ತು ತರಕಾರಿ ಪಲ್ಯ ನೀಡುವ ಅಲ್ಲಿನ ಜನರ ಔದಾರ್ಯಕ್ಕೆ ಮನಸೋತಿದ್ದೇನೆ. ಏಕೆಂದರೆ,ಇಲ್ಲಿನ ಬುಡಕಟ್ಟು ಜನಾಂಗವು ಇನ್ನೂ ಅನ್ನ ಅಥವಾ ಆಹಾರವನ್ನು ನಾಗರಿಕ ಜಗತ್ತಿನ ರೀತಿಯಲ್ಲಿ ವ್ಯಾಪಾರದ ಮಟ್ಟಕ್ಕೆ ಇಳಿಸಿಲ್ಲ.
  ಭಾರತದ ಅನ್ನದ ಬಟ್ಟಲು ಎಂದು ಕರೆಸಿಕೊಳ್ಳುವ ಛತ್ತೀಸ್‌ಗಡ ರಾಜ್ಯದ ಬಸ್ತಾರ್ ಅರಣ್ಯ ವಲಯದಲ್ಲಿ 5ದಿನಗಳಿಂದ 10ದಿನಗಳ ಅವಧಿಯಲ್ಲಿ ಬೆಳೆಯಬಹುದಾದ ಎರಡು ಸಾವಿರಕ್ಕೂ ಹೆಚ್ಚು ದೇಶಿ ಭತ್ತದ ತಳಿಗಳನ್ನು ಖ್ಯಾತ ಭತ್ತದ ತಳಿ ತಜ್ಞ ಡಾ.ಆರ್.ಎಚ್.ರಿಚಾರಿಯ ಗುರುತಿಸಿದ್ದಾರೆ.ಅತಿ ಉದ್ದನೆಯ ಭತ್ತದ ತಳಿಗಳಲ್ಲಿ ಒಂದಾದ ಸ್ಥಳೀಯ ಭಾಷೆಯಲ್ಲಿ ಡೊಕ್ರ-ಡೊಕ್ರಿಎನ್ನುವ ಭತ್ತದ ತಳಿಯೊಂದು ಪತ್ತೆಯಾಗಿದೆ.


ಇಲ್ಲಿನ ಆಹಾರ ಬೆಳೆಗಳು ಮತ್ತು ತಳಿಗಳ ವೈಶಿಷ್ಟವೆಂದರೆ, ಆಯಾ ಭೌಗೋಳಿಕ ಮತ್ತು ಹವಾಮಾನಕ್ಕೆ ಅನುಗುಣವಾಗಿ ಬೆಳೆಯಬಹುದಾದ ಗುಣಗಳನ್ನು ಹೊಂದಿವೆ. ಇಲ್ಲಿನ ಆದಿವಾಸಿಗಳು ಬಸ್ತಾರ್ ಅರಣ್ಯದ ಅಬುಜ್‌ಮರ್ ಗಿರಿಶ್ರೇಣಿಯ ತಪ್ಪಲಿನ ಪ್ರದೇಶದಲ್ಲಿ ಸಮತಟ್ಟ್ಟಾದ ನೆಲಕ್ಕೆ ಮಳೆಗಾಲಕ್ಕೆ ಮುನ್ನ ಭತ್ತದ ಬೀಜಗಳನ್ನು ಚೆಲ್ಲಿ, ಮಳೆ ಆಶ್ರಿತ ಭತ್ತವನ್ನು ಸಹ ಬೆಳೆಯುತ್ತಾರೆ. ಎಲ್ಲಾ ವಿಧವಾದ ರೋಗನಿರೋಧಕ ಶಕ್ತಿಯನ್ನು ಈ ತಳಿಗಳು ಪಡೆದುಕೊಂಡಿರುವುದು ವಿಶೇಷ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಮರಿಯ ಎಂಬ ಬುಡಕಟ್ಟು ಜನಾಂಗದ ಆದಿವಾಸಿಗಳು ಮಳೆಯಾಶ್ರಿತ ಭತ್ತದ ಕೃಷಿಯಲ್ಲಿ ಪರಿಣಿತ ತಜ್ಞರಾಗಿದ್ದಾರೆ. ಇಲ್ಲಿನ ಬಹುತೇಕ ತರಕಾರಿಗಳು ಕೂಡ ದೇಶಿ ಬಿತ್ತನೆ ಬೀಜಗಳಿಂದ ಕೂಡಿವೆ. ಟೊಮೆಟೊ,ಬದನೆ,ಹಾಗಲ,ಕುಂಬಳ,ಹೀರೆಕಾಯಿ,ಸೋರೆಕಾಯಿ,ಬಗೆ ಬಗೆಯ ಸೊಪ್ಪುಗಳು ವಿಶಿಷ್ಟ ರುಚಿ ಮತ್ತು ಪೌಷ್ಟಿಕಾಂಶಗಳು ಹಾಗೂ ನಾರಿನಿಂದ ಕೂಡಿವೆ.
  ಇತ್ತೀಚೆಗೆ ಛತ್ತೀಸಗಡದ ರಾಜಧಾನಿ ರಾಯ್ ಪುರ್‌ನಲ್ಲಿ ಆರಂಭವಾಗಿರುವ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾನಿಲಯ ಇಲ್ಲಿನ ಸ್ಥಳೀಯ ಬೀಜ ಸಂಸ್ಕೃತಿ ಮತ್ತು ಆದಿವಾಸಿಗಳ ಕೃಷಿಯ ವೈವಿಧ್ಯತೆ ಹಾಗೂ ಅವರ ದೇಶಿ ಜ್ಞಾನ ಪರಂಪರೆ ಕುರಿತಂತೆ ಅಧ್ಯಯನ ಕೈಗೊಂಡಿದೆ. ಕೆಲವು ಖಾಸಗಿ ಬೀಜ ಕಂಪೆನಿಗಳ ಹಾವಳಿಯಿಂದಾಗಿ ಬೀಜ ಸಂಕರದ ಕೆಲಸ ಕೂಡ ಗುಪ್ತವಾಗಿ ನಡೆಯುತ್ತಿದ್ದು, ಹೈಬ್ರಿಡ್ ತಳಿಗಳ ಹಾವಳಿಯಿಂದಾಗಿ ದೇಶಿ ಬಿತ್ತನೆ ಬೀಜಗಳು ನಶಿಸುತ್ತಿವೆ. ಇವುಗಳನ್ನು ಸಂರಕ್ಷಿಸಲು ರೂಪಾಂತರ್ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ಸ್ಥಳೀಯ ಆದಿವಾಸಿಗಳ ನೆರವಿನಿಂದ ಈ ಪ್ರದೇಶದಲ್ಲಿ ಕ್ರಿಯಾಶೀಲವಾಗಿದೆ. ಜೊತೆಗೆ ಇಲ್ಲಿನ ಬೀಜ ಸಂಸ್ಕೃತಿಯ ಬೀಗದ ಕೀಲಿ ಆದಿವಾಸಿ ಮಹಿಳೆಯರ ಕೈಯಲ್ಲಿದೆ.

  ವಾರಕ್ಕೊಮ್ಮೆ ಸ್ಥಳೀಯವಾಗಿ ನಡೆಯುವ ವಾರದ ಸಂತೆಗಳಲ್ಲಿ ತಮ್ಮ ತರಕಾರಿಗಳನ್ನು ಮಾರಲು ಹೋಗುವ ಮಹಿಳೆಯರು ಮಳೆಗಾಲಕ್ಕೆ ಮುನ್ನ ಬೀಜಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ವಿನಿಮಯ ಪದ್ಧತಿ ಇತರೆ ಬುಡಕಟ್ಟು ಜನಾಂಗಗಳ ನಡುವೆಯೂ ನಡೆಯುತ್ತದೆ. ಯಾವುದೇ ರೀತಿಯ ರಸಾಯನಿಕ ಅಥವಾ ಕೀಟ ನಾಶಕ ಬಳಸದ ಅಧಿಕ ಇಳುವರಿ ಪಡೆಯಬಹುದಾದ ಅನೇಕ ಭತ್ತ ಮತ್ತು ಗೋಧಿಯ ತಳಿಗಳು ಇಲ್ಲಿರುವುದು ವಿಶೇಷವಾಗಿದೆ. ಕಪ್ಪು ಭತ್ತ ಎಂದು ಕರೆಯುವ ವಿಶೇಷ ತಳಿಯೊಂದಿದ್ದು, ಇದರಲ್ಲಿರುವ ನಾರಿನ ಅಂಶ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣವನ್ನು ಹೊಂದಿದೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.

  ಈ ಪ್ರದೇಶದಲ್ಲಿ ದೊರೆಯುವ ಮೂಲಂಗಿ,ಈರುಳ್ಳಿ,ಬೆಳ್ಳುಳ್ಳಿ,ಇವುಗಳಲ್ಲಿ ಇರುವ ಖಾರದ ಅಂಶ ನಮ್ಮ ನಾಲಿಗೆಯನ್ನು ಸುಡುತ್ತವೆ.ಅದೇ ರೀತಿ ಸ್ಥಳೀಯವಾಗಿ ಬೆಳೆಯುವ ಆಲೂಗೆಡ್ಡ, ಹೂಕೋಸು, ಎಲೆ ಕೋಸು ಇವುಗಳನ್ನು ತರಕಾರಿ ಮಾರುಕಟ್ಟೆಯಲ್ಲಿ ನೋಡುವುದೇ ಕಣ್ಣಿಗೆ ಹಬ್ಬ.
ಅರಣ್ಯದೊಳಗಿದ್ದು ಯಾವುದೇ ಸಾಂಕ್ರಾಮಿಕ ರೋಗಗಳಿಗೆ ಅಥವಾ ಸೊಳ್ಳೆಗಳಿಂದ ತಗಲುಬಹುದಾದ ಹಲವು ಕಾಯಿಲೆಗಳಿಗೆ ತುತ್ತಾಗದೆ ಇರುವಂತಹ, ಆದಿವಾಸಿಗಳ ರೋಗ ನಿರೋಧಕ ಶಕ್ತಿಯ ಹಿಂದೆ ಅವರ ಆಹಾರ ಸಂಸ್ಕೃತಿಯ ಇತಿಹಾಸವಿದೆ. ಹಸಿವು,ಬಡತನ ,ಅಪೌಷ್ಟಿಕತೆಯಿಂದ ಬಳಲುತ್ತಿರುವ ಆದಿವಾಸಿಗಳ ರೋಗ ನಿರೋಧಕ ಶಕ್ತಿಗೆ ಬಹು ಮುಖ್ಯ ಕಾರಣ ಕೃಷಿ ಮತ್ತು ಆಹಾರ ಸಂಸ್ಕೃತಿಯಲ್ಲಿ ಅವರು ಅಳವಡಿಸಿಕೊಂಡು ಬಂದಿರುವ ದೇಶಿ ಜ್ಞಾನ ಪರಂಪರೆಯನ್ನು ನಾವು ಅಲ್ಲಗೆಳೆಯಲಾಗದು.

Writer - ಜಗದೀಶ್ ಕೊಪ್ಪ

contributor

Editor - ಜಗದೀಶ್ ಕೊಪ್ಪ

contributor

Similar News