ಶವಗಳ ಮೂಲಕವೂ ಹಣ ಗಳಿಸುವವರು! ಮ್ಯಾಂಗ್ರೋವ್ ಇರುವಲ್ಲಿ ಕಾಮಗಾರಿ ಬೇಡ
ಲೋಕಲ್ ರೈಲುಗಳಿಂದ ಸಾವನ್ನಪ್ಪಿದವರ
ನಿರ್ಜೀವ ಶರೀರಕ್ಕೂ ಡಿಮಾಂಡ್!
ದೇಶದ ಆರ್ಥಿಕ ರಾಜಧಾನಿ ಮತ್ತು ಕನಸುಗಳ ಮಾಯಾನಗರಿ ಮುಂಬೈಯಲ್ಲಿ ಶವಗಳ ಒಪ್ಪಂದ ಕೂಡಾ ನಡೆಯುತ್ತದೆ. ಹಲವಾರು ಶವಗಳ ಬಗ್ಗೆ ನಕಲಿ ವಾರೀಸುದಾರರು ಸಹ ಕಾಣಸಿಗುತ್ತಾರೆ. ಲಕ್ಷಗಟ್ಟಲೆ ಹಣದ ಲಾಭ ಇರುವ ಈ ಜಾಲದಲ್ಲಿ ಪೊಲೀಸರಿಂದ ಹಿಡಿದು ವಕೀಲರ ತನಕ ಸೇರಿಕೊಂಡಿದ್ದಾರೆ. ಮುಂಬೈಯ ಲೈಫ್‌ಲೈನ್ ಎನ್ನಲಾಗುವ ಲೋಕಲ್ ರೈಲುಗಳ ಕಾರಣದಿಂದಾಗಿ ತಿಂಗಳಲ್ಲಿ ಹಲವು ಸಾವುಗಳು ಸಂಭವಿಸುತ್ತಾ ಇರುತ್ತವೆ. (ಇತ್ತೀಚೆಗೆ 3 ದಿನಗಳಲ್ಲಿ 10 ಜನ ರೈಲಡಿಗೆ ಬಿದ್ದು ಸಾವನ್ನಪ್ಪಿದರು). ಆದರೆ ಕೆಲವೊಮ್ಮೆ ಈ ಶವಗಳ ಗುರುತು ಪತ್ತೆ ಹಚ್ಚಲು ತುಂಬಾ ಕಷ್ಟಪಡಬೇಕಾಗುತ್ತದೆ. ಇಂತಹ ಅನಾಥ ಶವಗಳನ್ನು ಪಡೆಯಲು ಮುಂಬೈಯಲ್ಲಿ ನಕಲಿ ವಾರೀಸುದಾರರು ಸಕ್ರಿಯರಾಗಿದ್ದಾರೆ. ಈ ಶವಗಳ ಹೆಸರಲ್ಲಿ ನಕಲಿ ಕ್ಲೈಮ್ ಸಲ್ಲಿಸಿ ಹಣ ಪಡೆಯುವ ಇಂತಹ ಜಾಲದಲ್ಲಿ ರೈಲ್ವೆ ಸಿಬ್ಬಂದಿ, ವಕೀಲರು, ಪೊಲೀಸರೂ ಒಳಗೊಂಡಿರುವುದು ಸುಳ್ಳೇನಲ್ಲ. ಕೆಲವು ರೈಲ್ವೆ ಅಧಿಕಾರಿಗಳೇ ಹೇಳುವಂತೆ ಈ ರ್ಯಾಕೆಟ್‌ನಲ್ಲಿ ವಕೀಲರು, ದಲ್ಲಾಳಿಗಳು, ಜಿಆರ್‌ಪಿ ಹಾಗೂ ಕೆಲವು ರೈಲು ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಹಾಗೂ ರೈಲ್ವೆಗೆ ಶವಗಳ ಕ್ಲೈಮ್ ವಿಷಯದಲ್ಲಿ ಲಕ್ಷಗಟ್ಟಲೆ ಹಣ ವಂಚನೆ ಮಾಡುತ್ತಾರೆ. ಈ ರೀತಿ ರೈಲು ದುರ್ಘಟನೆಯಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ನಕಲಿ ಹೆಸರಲ್ಲಿ ಕ್ಲೈಮ್ ಸಲ್ಲಿಸಿ ಹಣ ಪಡೆದುಕೊಳ್ಳುವ ಇಂತಹ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದೆ. ಈಗ ಅನಾಥ ಶವಗಳು ಮಾತ್ರವಲ್ಲ, ವಾರೀಸುದಾರರು ಇದ್ದವರ ಶವಗಳನ್ನೂ ಈ ಜಾಲದ ಸದಸ್ಯರು ವಂಚನೆ ಮಾಡುತ್ತಾರೆ.
ಮೂರು ವರ್ಷಗಳ ಹಿಂದೆ ರಾಮ್‌ಕಲಾಬಾಯಿ ಗನಬಾಸ್ ಎಂಬವರ ಮಗ ರೈಲಿನ ಅಡಿಗೆ ಬಿದ್ದು ಸಾವನ್ನಪ್ಪಿದ್ದ. ಮಗನ ಸಾವಿನ ನಂತರ ಅವರು ವಕೀಲರನ್ನು ಹಿಡಿದರು. ಹಾಗೂ ವಕೀಲರು ಸರಿಯಾದ ದಾಖಲೆ ಪತ್ರಗಳನ್ನು ಸಲ್ಲಿಸಿ ರೈಲ್ವೆ ಟ್ರಿಬ್ಯೂನಲ್ ಬೋರ್ಡ್‌ನಿಂದ ಪರಿಹಾರ ನೀಡುವಂತೆ ಕ್ಲೈಮ್ ಮಾಡಿದ್ದರು. ನಂತರ ಅವರು ಅದರಲ್ಲಿ ಗೆದ್ದು ರಾಮ್ ಕಲಾಬಾಯಿ ಅವರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವ ಆದೇಶವೂ ಬಂತು. ಅವರ ಖಾತೆಗೆ ನೇರ ಹಣ ಜಮಾ ಆಗುವುದಿತ್ತು. ಆದರೆ ಈ ಸುದ್ದಿ ತಿಳಿದು ಬರುತ್ತಲೇ ನಕಲಿ ವಾರೀಸುದಾರ ಜಾಲದ ಸದಸ್ಯರು ರೈಲ್ವೆಯ ಒಳಗಿನವರಲ್ಲಿ ಒಪ್ಪಂದ ಮಾಡಿಕೊಂಡರು. ವಕೀಲರು ಸಾದಾ ಕಾಗದದಲ್ಲಿ ರಾಮ್‌ಕಲಾಬಾಯಿ ಅವರ ಹೆಬ್ಬೆರಳು ಸಹಿ ಪಡೆದರು. ಆದರೆ ಅದರಲ್ಲಿ ಬೇರೆ ಬ್ಯಾಂಕ್‌ನ ನಕಲಿ ಖಾತೆ ನಮೂದಿಸಲಾಗಿತ್ತು. ಹಾಗೂ ಆ ರ್ಯಾಕೆಟ್‌ನ ಸದಸ್ಯರು ಹಣ ಬರುತ್ತಲೇ ಅದನ್ನು ಖಾತೆಯಿಂದ ಪಡೆದು ಪರಾರಿಯಾದರು.
ಇಂತಹ ಹಲವು ಘಟನೆಗಳು ಕಾಣಿಸಿಕೊಂಡ ನಂತರ ಆರ್.ಪಿ.ಎಫ್. ಅಧಿಕಾರಿಗಳು ಎಚ್ಚೆತ್ತುಕೊಂಡರು. ಅವರ ತನಿಖೆ ಪ್ರಕಾರ ಈ ಜಾಲದ ಸದಸ್ಯರು ಬೆಳಗ್ಗೆಯೇ ಚರ್ಚ್‌ಗೇಟ್‌ನಿಂದ ವಿರಾರ್, ಸಿ.ಎಸ್.ಟಿ.ಯಿಂದ ಕಲ್ಯಾಣ್ ತನಕ ಮತ್ತು ಹಾರ್ಬರ್ ಲೈನ್‌ನಲ್ಲಿ ಸುಮಾರು 30ರಷ್ಟು ರಿಟರ್ನ್ ರೈಲ್ವೆ ಟಿಕೆಟ್ ಖರೀದಿಸುತ್ತಾರೆ. ಎಲ್ಲಾದರೂ ರೈಲು ದುರ್ಘಟನೆಯಲ್ಲಿ ಯಾವನಾದರೂ ಪ್ರಯಾಣಿಕ ಸತ್ತ ಸುದ್ದಿ ಬಂದರೆ ಅಲ್ಲಿಗೆ ಜಿಆರ್‌ಪಿ ಸಿಬ್ಬಂದಿ, ಸ್ಟೇಷನ್ ಮಾಸ್ಟರರ ಟೀಮ್ ಸ್ಟ್ರೆಚರ್ ಸಹಿತ ಅತ್ತ ಹೋಗುತ್ತಾರೆ. ಶವದ ಕಿಸೆಯಲ್ಲಿ ಟಿಕೆಟ್, ಪಾಸ್ ಇಲ್ಲದಿದ್ದರೆ ಜಿಆರ್‌ಪಿ ಅಥವಾ ಸಿಬ್ಬಂದಿ, ನಕಲಿ ವಾರೀಸುದಾರರ ಜಾಲದ ಸದಸ್ಯರು ಖರೀದಿಸಿದ ಟಿಕೇಟನ್ನು ಕಿಸೆಯಲ್ಲಿ ಇರಿಸುತ್ತಾರೆ. ನಂತರ ಜಿಆರ್‌ಪಿಯನ್ನು, ಅವರ ತಂಡದ ವಕೀಲರನ್ನು ಸಂಪರ್ಕಿಸುತ್ತಾರೆ. ನಂತರ ಆ ವ್ಯಕ್ತಿಯ ಕುಟುಂಬವನ್ನು ಸಂಪರ್ಕಿಸುತ್ತಾರೆ. ಕೋರ್ಟ್ ಕೇಸ್, ಕ್ಲೈಮ್ ಎಂದೆಲ್ಲ ವಿಚಾರಣೆ, ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ.
ಕೊನೆಗೆ ಸತ್ತ ವ್ಯಕ್ತಿಯ ಕುಟುಂಬಕ್ಕೆ ಕೇವಲ 30 ಪ್ರತಿಶತ ಮಾತ್ರ ಹಣ ಕೊಡುತ್ತಾರೆ. ಉಳಿದುದನ್ನು ಈ ಜಾಲದ ಸದಸ್ಯರು ತಾವೇ ಇಟ್ಟುಕೊಳ್ಳುತ್ತಾರೆ. ಶವದ ವಾರೀಸುದಾರರು ಬಂದು ಕ್ಲೈಮ್ ಮಾಡಿದರೂ ಅದರಲ್ಲಿ ಈ ಜಾಲದ ಸದಸ್ಯರು ಮೂಗು ತೂರಿಸಿ ತಮಗೆ ಬೇಕಾದಂತೆ ಹೇಗಾದರೂ ಬದಲಾಯಿಸಿ ತಮ್ಮ ಪಾಲು ಪಡೆಯುತ್ತಾರೆ.
ರೈಲ್ವೆ ಅಧಿಕಾರಿಗಳು ತಿಳಿಸಿದಂತೆ 2012ರಲ್ಲಿ ಸತ್ತ ವ್ಯಕ್ತಿಗಳ ಕುಟುಂಬದವರಿಂದ ಪರಿಹಾರ ಹಣಕ್ಕಾಗಿ 510 ಅರ್ಜಿಗಳು, 2013ರಲ್ಲಿ 376 ಅರ್ಜಿಗಳು, 2014ರಲ್ಲಿ 355 ಅರ್ಜಿಗಳು, 2015ರಿಂದ ಮಾರ್ಚ್ 2016ರ ತನಕ 340 ಅರ್ಜಿಗಳು ಬಂದಿವೆ. ಇದರಲ್ಲಿ ಅನೇಕ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 2015-2016 ರಲ್ಲಿ ಬಂದ 340 ಅರ್ಜಿಗಳಲ್ಲಿ 114 ಅರ್ಜಿಗಳನ್ನು ಸರಿಯಾದ ದಾಖಲೆ ಇಲ್ಲ ಎಂದು ತಿರಸ್ಕರಿಸಲಾಗಿದೆ. ಹಾಗೂ 7 ಕೋಟಿ ರೂಪಾಯಿಗೂ ಹೆಚ್ಚು ರೈಲ್ವೆಗೆ ಉಳಿತಾಯವಾಗಿದೆ ಎಂದಿದ್ದಾರೆ ಅಧಿಕಾರಿಗಳು.
* * *
ಮ್ಯಾಂಗ್ರೋವ್ ಕ್ಷೇತ್ರಗಳಲ್ಲಿ ಕಟ್ಟಡ ನಿರ್ಮಾಣವಿಲ್ಲ
ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್‌ನ ತರಾಟೆಯ ನಂತರ ತನ್ನ ಆದೇಶ ವೊಂದನ್ನು ವಾಪಾಸ್ ಪಡೆದುಕೊಳ್ಳಬೇಕಾಗಿ ಬಂದಿದೆ. ಮ್ಯಾಂಗ್ರೋವ್ ಕ್ಷೇತ್ರಗಳಲ್ಲಿ (ಸಮುದ್ರ ಖಾಡಿ ತೀರಗಳಲ್ಲಿನ ವೃಕ್ಷ) ಕಾಮಗಾರಿಗೆ ತಾನು ನೀಡಿದ್ದ ಅನುಮತಿಯನ್ನು ಈಗ ಮುಂಬೈ ಹೈಕೋರ್ಟ್‌ನ ತರಾಟೆಯ ಕಾರಣ ಹಿಂದಕ್ಕೆ ಪಡೆದುಕೊಳ್ಳಬೇಕಾಗಿ ಬಂತು.
ಮಹಾರಾಷ್ಟ್ರ ಸರಕಾರವು 2013ರಲ್ಲಿ ಮ್ಯಾಂಗ್ರೋವ್ ಕ್ಷೇತ್ರದಲ್ಲಿನ ಜಮೀನಿನಲ್ಲಿ ಯಾವುದೇ ರೀತಿಯ ಕಾಮಗಾರಿ ಮಾಡಲು ಇದ್ದ ತಡೆ ಆದೇಶದಲ್ಲಿ ತಿದ್ದುಪಡಿ ಮಾಡಲು ಮುಂದಾಗಿತ್ತು. ಆದರೆ ಸರಕಾರವು ಈಗ ಮುಂಬೈ ಹೈಕೋರ್ಟ್ ಈ ಬಗ್ಗೆ ತನ್ನನ್ನು ತರಾಟೆಗೆ ಎಳೆದ ಪ್ರಯುಕ್ತ ಈ ನಿರ್ಣಯ ವಾಪಾಸ್ ಪಡೆಯಿತು.
ಕಳೆದ ವಾರ ಮುಂಬೈ ಹೈಕೋರ್ಟ್ ಸರಕಾರವನ್ನು ತರಾಟೆಗೆ ಎಳೆಯುತ್ತಾ ಮಹಾರಾಷ್ಟ್ರ ಸರಕಾರವು ಮ್ಯಾಂಗ್ರೋವ್ ಅಥವಾ ಖಾಡಿ ತೀರಗಳ ಭೂಮಿಯ ಕಾನೂನಿನಲ್ಲಿ ತಿದ್ದುಪಡಿ ಮಾಡಲು ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಸರಕಾರದ ಈ ಆದೇಶದ ಮಾಹಿತಿಯನ್ನು ಸರಕಾರಿ ವಕೀಲರು ಜಸ್ಟೀಸ್ ಎ.ಎಸ್. ಓಕ್ ಮತ್ತು ಎ.ಎ. ಸಯೀದ್ ಅವರಿಗೆ ನೀಡಿದ್ದರು. ಹಿಂದಿನ ಆದೇಶದಲ್ಲಿ ತಿದ್ದುಪಡಿ ಮಾಡುವ ತನ್ನ ವಿಚಾರವನ್ನು ಸರಕಾರ ವಾಪಾಸ್ ಪಡೆಯುವುದು ಎಂದರು. ಆನಂತರ ನ್ಯಾಯಾಧೀಶರು ತಿದ್ದುಪಡಿಯನ್ನು ಸರಕಾರ ಹಿಂದಕ್ಕೆ ಪಡೆಯುವ ಬಗ್ಗೆ ಒಪ್ಪಿಗೆ ನೀಡಿದರು. ಸರಕಾರ 19 ಮಾರ್ಚ್ 2013 ರಂದು ಮ್ಯಾಂಗ್ರೋವ್ ಕ್ಷೇತ್ರದಲ್ಲಿ ಕಾಮಗಾರಿಗೆ ತಡೆ ನೀಡಿತ್ತು. ಬಿಲ್ಡರ್ ಮತ್ತು ರಿಯಲ್ ಎಸ್ಟೇಟ್ ಲಾಬಿ ಈ ಬಗ್ಗೆ ಸರಕಾರಕ್ಕೆ ಒತ್ತಡ ಹಾಗೂ ಎಚ್ಚರಿಕೆ ನೀಡಿತ್ತು. ಈ ಒತ್ತಡದ ನಂತರ ಸರಕಾರವು ಈ ಆದೇಶದಲ್ಲಿ ತಿದ್ದುಪಡಿ ತಂದು ಕೋರ್ಟ್‌ನ ಅನುಮತಿಗೆ ಕಾದಿತ್ತು. ಆದರೆ ಒಂದು ಜನಹಿತ ಅರ್ಜಿಯ ಕಾರಣ ಸರಕಾರದ ಈ ನಿರ್ಣಯಕ್ಕೆ ಸವಾಲು ಹಾಕಲಾಗಿತ್ತು. ಮ್ಯಾಂಗ್ರೋವ್-ಖಾಡಿ ತೀರಗಳಲ್ಲಿ ಕಟ್ಟಡಗಳನ್ನು ಕಟ್ಟುವುದರಿಂದ ಪರಿಸರಕ್ಕೆ ತೀವ್ರ ಸಂಕಷ್ಟವೊದಗಲಿದೆ. ಹಾಗೂ ತೀರಗಳ ಆಕ್ರಮಣ ದಿನೇದಿನೇ ಹೆಚ್ಚಳವಾಗಲಿದೆ ಎಂಬ ಭಯ ವ್ಯಕ್ತಪಡಿಸಲಾಗಿತ್ತು. ಸರಕಾರ ಬಿಲ್ಡರ್ ಲಾಬಿಗೆ ಮಣಿಯುವ ಲಕ್ಷಣಗಳಿವೆ ಎಂದೂ, ಸರಕಾರಕ್ಕೆ ಪರಿಸರದ ಬಗ್ಗೆ ಚಿಂತೆ ಇಲ್ಲವೆಂದೂ ಜನಹಿತ ಅರ್ಜಿಯಲ್ಲಿ ಆಪಾದಿಸಲಾಗಿತ್ತು.
* * *
ಐತಿಹಾಸಿಕ ಡಾ. ಅಂಬೇಡ್ಕರ್ ಭವನ ಕೆಡವಿ ಹಾಕಿದ ವಿವಾದ!
ಮುಂಬೈಯ ದಾದರ್ ಪೂರ್ವದ ಐತಿಹಾಸಿಕ ಡಾ. ಅಂಬೇಡ್ಕರ್ ಭವನದ ಮೇಲೆ ಮಹಾನಗರ ಪಾಲಿಕೆಯು ಬುಲ್ಡೋಜರ್ ಓಡಿಸಿ ಧ್ವಂಸಗೊಳಿಸಿದ ವಿರುದ್ಧ ಡಾ. ಬಾಬಾಸಾಹೇಬ ಆಂಬೇಡ್ಕರ್‌ರ ಅನುಯಾಯಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಅತ್ತ ಡಾ. ಬಾಬಾಸಾಹೇಬ ಅವರ ಮೊಮ್ಮಗ ಹಾಗೂ ಭಾರತೀಯ ರಿಪಬ್ಲಿಕನ್ ಪಕ್ಷ ಬಹುಜನ ಮಹಾಸಂಘದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಮತ್ತು ರಿಪಬ್ಲಿಕನ್ ಸೇನೆಯ ಅಧ್ಯಕ್ಷ ಆನಂದ್‌ರಾಜ್ ಅಂಬೇಡ್ಕರ್‌ರು ಈ ಘಟನೆಗೆ ತೀವ್ರ ನೊಂದಿದ್ದು ಮನಪಾ ಅಧಿಕಾರಿಗಳ ವಿರುದ್ಧ ಭೋಯಿವಾಡಾ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಆನಂದ್‌ರಾಜ್ ಅವರು ‘‘ಮನಪಾ ಐತಿಹಾಸಿಕ ಭವನವನ್ನು ಕೆಡವಿ ಹಾಕಿ ಡಾ. ಅಂಬೇಡ್ಕರ್‌ರ ಅನುಯಾಯಿಗಳಿಗೆ ಅವಮಾನ ಮಾಡಿದೆ’’ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ರಾಜಕೀಯ ರಂಗು ಬಂದಿದ್ದು ಶಿವಸೇನೆ ಕೂಡಾ ಈ ವಿಷಯವಾಗಿ ಧುಮುಕಿದ್ದು ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಲು ಮುಂದಾಗಿದೆ.
ಆದರೆ ಅಂಬೇಡ್ಕರ್ ಭವನವನ್ನು ಶಿಥಿಲ ಕಟ್ಟಡ, ಯಾವ ಕ್ಷಣವೂ ಅಪಾಯ ಉಂಟಾಗುವ ಸಾಧ್ಯತೆಗಳಿವೆ ಎಂದಿರುವ ಮನಪಾ ಆಡಳಿತ ಇದನ್ನು ಕೆಡವಿ ಹಾಕಿದೆ. ಮಹಾನಗರ ಪಾಲಿಕೆಯ ಈ ದ್ವಂಸ ಕಾರ್ಯಾಚರಣೆಯ ಸಂದರ್ಭ ಡಾ. ಬಾಬಾ ಸಾಹೇಬರ ಬುದ್ಧ ಭೂಷಣ ಪ್ರಿಂಟಿಂಗ್ ಪ್ರೆಸ್, ಭಾ.ರಿ.ಪ. ಬಹುಜನ ಮಹಾಸಂಘ, ರಿಪಬ್ಲಿಕನ್ ಸೇನಾ ಮತ್ತು ಭಾರತೀಯ ಬೌದ್ಧ ಮಹಾಸಭಾದ ಕಾರ್ಯಾಲಯಗಳೂ ಕೆಡವಲ್ಪಟ್ಟಿವೆ. ಕೆಲವು ದಾಖಲೆಗಳೂ ನಾಶವಾಗಿವೆಯಂತೆ.
ಡಾ. ಬಾಬಾ ಸಾಹೇಬ ಅಂಬೇಡ್ಕರರು ದಿ ಪೀಪಲ್ಸ್ ಇಂಪ್ರೂವ್‌ಮೆಂಟ್ ಟ್ರಸ್ಟ್‌ನ ಸ್ಥಾಪನೆ ಮಾಡಿದ್ದರು. ಈ ಸಂಸ್ಥೆ ದಾದರ್ ಪೂರ್ವದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಿಸಿತ್ತು. ಆದರೆ ಈಗ ಭವನವು ತುಂಬಾ ಶಿಥಿಲಾವಸ್ಥೆಗೆ ತಲುಪಿತ್ತು. ಮಹಾನಗರ ಪಾಲಿಕೆಯು ಜೂನ್ ಒಂದರಂದು ನೋಟಿಸ್ ಜಾರಿಗೊಳಿಸಿತ್ತು. ಹಾಗೂ ಒಂದು ತಿಂಗಳೊಳಗೆ ಭವನವನ್ನು ಖಾಲಿಗೊಳಿಸಲು ಸೂಚನೆ ನೀಡಿತ್ತು. ಇತ್ತ ‘ದಿ ಪೀಪಲ್ಸ್ ಇಂಪ್ರೂವ್‌ಮೆಂಟ್ ಟ್ರಸ್ಟ್’ನ ರಣಪಿಸೆ ಅವರು ಪ್ರತಿಕ್ರಿಯಿಸುತ್ತಾ, ‘‘ಜನತೆಯ ಬೇಡಿಕೆ ಅನುಸಾರ ಟ್ರಸ್ಟ್‌ನ ಜಮೀನಿನಲ್ಲಿ ಹದಿನೇಳು ಮಾಳಿಗೆಯ ಅತ್ಯಾಧುನಿಕ ಭವನವನ್ನು ನಿರ್ಮಿಸಲಾಗುವುದು. ಇದರ ಕಾರ್ಯಾಚರಣೆ ಶುರುಮಾಡಲಾಗಿದೆ’’ ಎಂದಿದ್ದಾರೆ. ನಡುವೆ ಪ್ರಿಂಟಿಂಗ್ ಪ್ರೆಸ್, ರಿಪಬ್ಲಿಕನ್ ಸೇನೆಯ ಕಾರ್ಯಾಲಯದ ಮೇಲೆ ಹಲ್ಲೆ ಮತ್ತು ಕೆಡವಿ ಹಾಕಿದ ವಿರುದ್ಧ 10 ಲಕ್ಷ ರೂಪಾಯಿ ತನಕದ ಸಂಪತ್ತು ನಷ್ಟಗೊಳಿಸಿದ್ದಲ್ಲದೆ, ನಗದು ಹಣ ಕಳ್ಳತನ ಮಾಡಿದ ದೂರನ್ನು ಭೋಯಿವಾಡಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು, ಮನಪಾ ಅಧಿಕಾರಿಗಳ ಸಹಿತ ಹಲವು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ!