ಷಡ್ಯಂತ್ರ ವಿಫಲಗೊಳಿಸಿದ ಉತ್ತರ ಪ್ರದೇಶದ ದಲಿತರು
ಕಳೆದ ಎಪ್ರಿಲ್ ತಿಂಗಳಲ್ಲಿ ಬಿಹಾರದ ಸಾರನಾಥದಿಂದ ಕೇಸರಿ ಪಕ್ಷದ ವತಿಯಿಂದ ಯಾತ್ರೆಯೊಂದು ಉದ್ಘಾಟನೆ ಆಗಿತ್ತು. ಹೆಸರು ಧಮ್ಮ ಚೇತನಾ ಯಾತ್ರೆ. ಖಂಡಿತ ಅದು ಬೌದ್ಧ ಧರ್ಮದ ಯಾತ್ರೆಯಾಗಿತ್ತು. ಮೋದಿ ಮಾಂಕ್ಸ್ ಅಥವಾ ಮೋದಿ ಭಿಕ್ಕುಗಳು ಎಂದು ಕರೆಯಲ್ಪಡುತ್ತಿದ್ದ ಹಿರಿಯ ಭಿಕ್ಕು ಧಮ್ಮ ವಿರಿಯೊ ಮುಂದಾಳುತ್ವದ ಭಿಕ್ಕುಗಳ ಗುಂಪು ಈ ಯಾತ್ರೆಯ ನೇತೃತ್ವ ವಹಿಸಿತ್ತು. ಮೋದಿ ಸಾಧನೆಗಳನ್ನು ಹೊಗಳುವುದು, ಅಂಬೇಡ್ಕರ್ ಬಗ್ಗೆ ಮೋದಿಯ ಮಾತುಗಳನ್ನು ಪ್ರಚುರಪಡಿಸುವುದು ಉತ್ತರಪ್ರದೇಶದ ಉದ್ದಗಲಕ್ಕೂ ಹಾದುಹೋಗುತ್ತಿದ್ದ ಈ ಯಾತ್ರೆಯ ಉದ್ದೇಶ ವಾಗಿತ್ತು. ಇದಕ್ಕೆ ಕಾರಣ ಹೇಗಿದ್ದರೂ ಬೌದ್ಧ ಧರ್ಮದ ಬಹುತೇಕ ಅನುಯಾಯಿಗಳು ಅಥವಾ ಅದರತ್ತ ಒಲವುಳ್ಳವರು ದಲಿತರು. ಆದ್ದರಿಂದ ಅವರ ನಡುವೆ ಧಮ್ಮ ಯಾತ್ರೆಯೆಂದರೆ, ಅದರಲ್ಲೂ ಬೌದ್ಧ ಭಿಕ್ಕುಗಳೇ ಅಂತಹ ಯಾತ್ರೆಯ ನೇತೃತ್ವ ವಹಿಸುತ್ತಾರೆಂದರೆ... ಆ ಮೂಲಕ ಕೇಸರಿ ಪಕ್ಷ ಮತ್ತು ಸಂಘಪರಿವಾರದ ಮುಖಂಡರು ಅಂತಹ ಯಾತ್ರೆಯಲ್ಲಿ ಪಾಲ್ಗೊಂಡರೆ ದಲಿತರ ಓಟುಗಳನ್ನು ಬೌದ್ಧ ಧರ್ಮದ ಹೆಸರಲ್ಲಿ ಒಂದಷ್ಟಾದರೂ ಕೀಳಬಹುದು...!
ಶಾಂತಿಧೂತ ಬುದ್ಧನನ್ನೂ ಹಿಂದುತ್ವ ತನ್ನ ಅಪಾಯಕಾರಿ ರಾಜಕೀಯ ಕುಟಿಲತೆಗೆ ಬಳಸಿಕೊಳ್ಳುತ್ತದೆಂದರೆ ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುವ ಅದರ ನೀತಿ ಮೇರೆ ಮೀರಿರುವುದು ಎಂಥವರಿಗಾದರೂ ಸ್ಪಷ್ಟವಾಗುತ್ತದೆ. ಅಂದರೆ ಹೇಗಿದ್ದರೂ ಬುದ್ಧ ಎಂದರೆ ದಲಿತರಿಗೆ ಭಾವನಾತ್ಮಕ ನಂಟು. ಅಂತಹ ನಂಟನ್ನು ಹಿಂದುತ್ವದ ನೇತೃತ್ವದಲ್ಲಿ ಧಮ್ಮ ಯಾತ್ರೆಯೊಂದರ ಮೂಲಕ ಬೆಸೆದರೆ? ದಲಿತರ ಧಾರ್ಮಿಕ ಭಾವನೆಗಳನ್ನು ಹಿಂದುತ್ವದ ರಾಜಕೀಯಕ್ಕೆ ಬಳಸಿಕೊಂಡರೇ? ಹಿಂದುತ್ವವೂ ಭದ್ರವಾದಂಗಾಯ್ತು ದಲಿತರನ್ನೂ ಹಳ್ಳಕ್ಕೆ ಕೆಡವಿದಂಗಾಯ್ತು!
ಈಗಾಗಲೇ ರಾಮಮಂದಿರ ರಥಯಾತ್ರೆಯ ಮೂಲಕ ಹಿಂದೂಗಳನ್ನು ಭಾವನಾತ್ಮಕವಾಗಿ ಮುಸ್ಲಿಮರ ವಿರುದ್ಧ ಕೆರಳಿಸಿ ದೇಶಾದ್ಯಂತ ಕೇಸರಿ ಪಕ್ಷ ತನ್ನ ಮರದ ಬೇರನ್ನು ಭದ್ರಪಡಿಸಿಕೊಂಡಿದೆ. ಎಟುಕದ್ದೆಂದರೆ ದಲಿತ ಎಂಬ ಗುಂಪಷ್ಟೆ. ಅಂತಹ ಗುಂಪನ್ನು ಬೌದ್ಧ ಧಮ್ಮ ಚೇತನ ಯಾತ್ರೆಯ ಮೂಲಕ ಬೆಸೆದರೇ? ಮುಗಿದುಹೋಯಿತು! ಹಿಂದುತ್ವಕ್ಕೆ ಇನ್ನು ತಡೆ ಎನ್ನುವುದೇ ಇರುವುದಿಲ್ಲ. ಆಶ್ಚರ್ಯವೆಂದರೆ ಹಿಂದುತ್ವ ಈಗಾಗಲೇ ಅದರಲ್ಲಿ ಭಾಗಶಃ ಯಶಸ್ಸು ಕಂಡಿದೆ. ಉದಾಹರಣೆಗೆ ಹೇಳುವುದಾದರೆ ಮಹಾರಾಷ್ಟ್ರದ ಆರ್‌ಪಿಐ ನಾಯಕ ಬೌದ್ಧ ಧರ್ಮಕ್ಕೆ ಸೇರಿದ ರಾಮದಾಸ್ ಆಠವಳೆ ರಾಜ್ಯಸಭಾ ಸದಸ್ಯನಾಗಿ ಕೇಂದ್ರ ಮಂತ್ರಿಮಂಡಲದಲ್ಲಿ ಮಂತ್ರಿಯೂ ಆಗಿದ್ದಾರೆ. ಅವರೂ ಕೇಸರಿ ಪಕ್ಷದ, ದಲಿತರನ್ನು ಸೆಳೆಯಲು ಬೌದ್ಧ ಧರ್ಮ ಬಳಸಿಕೊಳ್ಳುವ ಸಂಚಿನ ಭಾಗವಾಗಿದ್ದಾರೆ ಎಂಬುದು.
ಆದರೆ ಸ್ವಾಗತಾರ್ಹವೆಂದರೆ ಹಿಂದುತ್ವದ ಈ ಬೌದ್ಧ ಧರ್ಮ ಬಳಸಿಕೊಳ್ಳುವ ಸಂಚಿಗೆ ಉತ್ತರಪ್ರದೇಶದಲ್ಲಿ ಭಾರೀ ಹೊಡೆತ ಬಿದ್ದಿದೆ. ಯಾಕೆಂದರೆ ತನ್ನ ಧಮ್ಮ ಚೇತನಾ ಯಾತ್ರೆಯ ಸಮಾರೋಪವನ್ನು ಇದೇ ಜುಲೈ 31ರಂದು ಆಗ್ರಾದಲ್ಲಿ ಹಮ್ಮಿಕೊಂಡಿದ್ದ ಕೇಸರಿ ಪಕ್ಷ ಆ ಸಮಾವೇಶದಲ್ಲಿ 50,000 ದಲಿತರನ್ನು ಸೇರಿಸುವ ಉದ್ದೇಶ ಹೊಂದಿತ್ತು ಮತ್ತು ಆ ಸಮಾವೇಶದಲ್ಲಿ ಆ ಪಕ್ಷದ ಅಧ್ಯಕ್ಷ ಅಮಿತ್ ಶಾ ಮಾತನಾಡುವ ಕಾರ್ಯಕ್ರಮವಿತ್ತು. ಆದರೆ ಸಮಾವೇಶಕ್ಕೆ ಯಾವೊಬ್ಬ ದಲಿತನೂ ಬರುವ ಸಂಭವ ಕಾಣದೆ ಕೇಸರಿ ಪಕ್ಷ ಆ ಸಮಾವೇಶವನ್ನೇ ರದ್ದುಮಾಡಿದೆ. ಆ ಮೂಲಕ ತನ್ನ ಕೋಮುವಾದಿ ರಾಜಕಾರಣಕ್ಕೆ ಬೌದ್ಧ ಧರ್ಮ ಬಳಸಿಕೊಳ್ಳುವ ಅದರ ತಂತ್ರಕ್ಕೆ ಅದು ಭಾರೀ ಮುಖಭಂಗ ಅನುಭವಿಸಿದೆ! ಈ ದಿಸೆಯಲ್ಲಿ ಹೇಳುವುದಾದರೆ ಉತ್ತರ ಪ್ರದೇಶದ ದಲಿತರು ಕೇಸರಿ ಪಕ್ಷಕ್ಕೆ ಮುಟ್ಟಿನೋಡಿಕೊಳ್ಳುವ ಪೆಟ್ಟನ್ನೇ ಕೊಟ್ಟಿದ್ದಾರೆ. ಯಾಕೆಂದರೆ ಒಮ್ಮೆ ಕೇಸರಿ ಪಕ್ಷದ ಈ ತಂತ್ರ ಯಶಸ್ಸು ಕಂಡಿದ್ದರೆ ದೇಶಾದ್ಯಂತ ಅದು ಇದನ್ನು ಅನ್ವಯಿಸುತ್ತಿತ್ತು ಮತ್ತು ಅದಕ್ಕೆ ಕನಿಷ್ಠ ಪಕ್ಷ ದಲಿತರಲ್ಲಿ ಶೇ.50 ಅಥವಾ ಒಟ್ಟು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡರೆ ಶೇ.10 ಓಟ್ ಬ್ಯಾಂಕ್ ಪರ್ಮನೆಂಟಾಗಿ ಸಿಗುತ್ತಿತ್ತು! ಆದರೆ ಈಗ ಅದರ ಆ ತಂತ್ರವನ್ನು ಉತ್ತರ ಪ್ರದೇಶದ ದಲಿತರು ವಿಫಲಗೊಳಿಸಿರುವುದರಿಂದ ಒಟ್ಟಾರೆ ದಲಿತ ರಾಜಕಾರಣಕ್ಕೂ ಒಂದು ಬೆಲೆ ಸಿಕ್ಕಿದೆ. ಹಾಗೆ ಭವಿಷ್ಯದ ದೃಷ್ಟಿಯಿಂದ ತನ್ನನ್ನು ತಾತ್ಕಾಲಿಕವಾಗಿ ಬೆಂಬಲಿಸಿ ಭವಿಷ್ಯದಲ್ಲಿ ತನ್ನನ್ನು ಆಪೋಶನ ತೆಗೆದುಕೊಳ್ಳಬಹುದಾದ ಹಿಂದುತ್ವದಿಂದ ತಪ್ಪಿಸಿಕೊಂಡ ಶ್ರೇಯವೂ ಬೌದ್ಧ ಧರ್ಮಕ್ಕೆ ಸಿಕ್ಕಿದೆ.
ದಲಿತರು ಇಂದು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ತುರ್ತಿದೆ. ಹಿಂದುತ್ವ ಬೋಧಿಸುವ ರಾಜಕೀಯ ಪಕ್ಷ, ಬೌದ್ಧ ಧರ್ಮ ಬೆಳೆಸುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ? ಬೆಳೆಸುವುದಿರಲಿ ಬೌದ್ಧಧರ್ಮವನ್ನು ಶಾಶ್ವತವಾಗಿ ಹಿಂದುತ್ವಕ್ಕೆ ಕಳೆದುಕೊಳ್ಳಬೇಕಾದ ಅಪಾಯವಿದೆ. ಈ ನಿಟ್ಟಿನಲ್ಲಿ ಕೇಸರಿ ಪಕ್ಷದ ಇಂತಹ ಷಡ್ಯಂತ್ರವನ್ನು ವಿಫಲಗೊಳಿಸಿದ ಉತ್ತರ ಪ್ರದೇಶದ ದಲಿತರು ಸ್ತುತ್ಯರ್ಹರು. ಇಡೀ ದೇಶದ ದಲಿತರೆಲ್ಲರೂ ಅವರ ಈ ಕಾರ್ಯವನ್ನು ಶ್ಲಾಘಿಸಿಬೇಕಿದೆ. ತನ್ಮೂಲಕ ಹಿಂದುತ್ವದ ಅಪಾಯದಿಂದ ತಮ್ಮನ್ನು ತಾವು ದಲಿತರು ಕಾಪಾಡಿಕೊಳ್ಳಬೇಕಿದೆ.