ಮೋದಿಯವರ ಭಾಷಣಕ್ಕೆ ಒಂದಿಷ್ಟು ಸಲಹೆಗಳು...
ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಿಂತು ಭಾಷಣ ಮಾಡಲು ಸಲಹೆ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮಗಳ ಮೂಲಕ ಕರೆ ನೀಡಿದ್ದೇ...ಎಲ್ಲರೂ ತಾಮುಂದು, ನಾಮುಂದು ಎಂದು ಸಲಹೆಗಳನ್ನು ನೀಡತೊಡಗಿದರು. ಕೆಂಪುಕೋಟೆಯಷ್ಟು ಎತ್ತರದಲ್ಲಿ ಸಲಹೆಗಳು ಗುಡ್ಡೆಯಾಗಿ ಬಿದ್ದಿದ್ದವು. ಅದರಿಂದ ಪತ್ರಕರ್ತ ಎಂಜಲು ಕಾಸಿ ಕೆಲವನ್ನು ಆಯ್ದು ತನ್ನ ಪತ್ರಿಕೆಯಲ್ಲಿ ಹಾಕಿಕೊಂಡಿದ್ದಾನೆ. ಅವುಗಳಲ್ಲಿ ಕೆಲವು ಇಲ್ಲಿವೆ.
1. ಮಿಸ್ಟರ್ ನರೇಂದ್ರ ಮೋದಿ...
ನಾನು ಒಬಾಮ ಅಮೆರಿಕದಿಂದ. ನೀವು ಭಾಷಣ ಮಾಡಲು ಸಲಹೆ ಕೇಳಿರುವುದು ತುಂಬಾ ಸಂತೋಷ. ನೀವು ಅಮೆರಿಕಕ್ಕೆ ಬಂದಾಗ ನಿಮ್ಮ ಭಾಷಣವನ್ನು ಕೇಳಿ ನಾವೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು. ಇಡೀ ಅಮೆರಿಕ ನೀವು ಬಂದು ಭಾಷಣ ಮಾಡಿದ ಬಳಿಕ ಮೊದಲ ಬಾರಿಗೆ ನಕ್ಕಿದೆ. ನನ್ನ ಆಡಳಿತದಲ್ಲಿ ಜನರು ಮನಸ್ಸು ತುಂಬಾ ನಗಾಡಿರುವುದು ನಿಮ್ಮ ಭಾಷಣ ಕೇಳಿಯೇ ಆಗಿದೆ. ಮುಖ್ಯವಾಗಿ ನೀವು ಯಾರೇ ಹತ್ತಿರ ಬಂದರೂ ಅವರನ್ನು ಬಲವಾಗಿ ತಬ್ಬಿಕೊಳ್ಳುತ್ತೀರಿ. ಅದು ಮುಜುಗರ ಉಂಟು ಮಾಡುತ್ತದೆ. ತಾವು ಈಗಾಗಲೇ ತಮ್ಮ ಪತ್ನಿಯನ್ನು ಮದುವೆಯಾದ ಕೆಲವೇ ದಿನಗಳಲ್ಲಿ ತ್ಯಜಿಸಿರುವುದರಿಂದ ಮತ್ತು ವಿದೇಶಗಳಲ್ಲಿ ಕಂಡವರನ್ನೆಲ್ಲ ಬಲವಾಗಿ ತಬ್ಬಿಕೊಳ್ಳುತ್ತಿರುವುದರಿಂದ ಜನರು ತಮ್ಮ ಬಗ್ಗೆ ಬೇರೆಯೇ ಇಲ್ಲಿ ಆಡಿಕೊಳ್ಳುತ್ತಿದ್ದಾರೆ. ನೀವು ನನ್ನನ್ನು ತಬ್ಬಿಕೊಂಡ ಬಳಿಕ ಎರಡು ದಿನಗಳ ಕಾಲ ಮೈಕೈ ನೋವಿನಿಂದ ನರಳಿದ್ದೆ. ನನ್ನ ಪತ್ನಿಯೂ ನನ್ನನ್ನು ಈಗ ಅನುಮಾನದಿಂದ ನೋಡುವಂತಾಗಿದೆ. ದಯವಿಟ್ಟು, ಅಷ್ಟು ಆತುರದಲ್ಲಿ ವಿದೇಶದಲ್ಲಿ ಕಂಡವರನ್ನು ತಬ್ಬಿಕೊಳ್ಳ ಬೇಡಿ. ಬೇಕಾದರೆ ನಿಮಗೆ ತಬ್ಬಿಕೊಳ್ಳುವುದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಡಬಹುದಾಗಿದೆ. ಸದಾ ಕ್ಯಾಮರಾವನ್ನು ನೋಡಿಕೊಂಡು ಮಾತನಾಡುವುದು, ಕೈ ಬೀಸುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು. ಯಾರದೋ ಫೋಟೊ ತೆಗೆಯುವ ಸಂದರ್ಭದಲ್ಲಿ ನೀವು ಹೋಗಿ ಅಲ್ಲಿ ನಿಂತುಕೊಳ್ಳುವುದು ನಿಮ್ಮ ಸ್ಥಾನಕ್ಕೆ ಭೂಷಣವಲ್ಲ. ನಾನು ಭಾಷಣ ಮಾಡಿದ ಕೆಲವು ಸಿಡಿಗಳನ್ನು ಕಳುಹಿಸಿಕೊಟ್ಟಿದ್ದೇನೆ. ಅದನ್ನು ನೋಡಿ ಒಂದೆರಡು ದಿನ ಕನ್ನಡಿಯ ಮುಂದೆ ನಿಂತು ರಿಹರ್ಸಲ್ ಮಾಡಿ. ಈ ಬಾರಿ ಕೆಂಪು ಕೋಟೆಯಿಂದ ಅಮೆರಿಕ ನಿಮ್ಮಿಂದ ಇನ್ನಷ್ಟು ಸೇವೆಗಳನ್ನು ನಿರೀಕ್ಷಿಸಿದೆ. ನೀವು ನಿರಾಶೆಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ. ಹಾಗೆಯೇ ನೀವು ಅಮೆರಿಕದ ದರ್ಜಿಗಳ ಕೈಯಲ್ಲಿ ಹೊಲಿಯಲು ಕೊಟ್ಟ ಬಟ್ಟೆಗಳೆಲ್ಲ ಎರಡು ದಿನ ಮೊದಲೇ ಭಾರತಕ್ಕೆ ತಲುಪುವ ವ್ಯವಸ್ಥೆ ಮಾಡಿದ್ದೇನೆ.
-ಬರಾಕ್ ಒಬಾಮ, ಅಮೆರಿಕ
2.ಮೋದಿಯವರಿಗೆ ಅಸ್ಸಲಾಂ ಅಲೈಕುಂ,
ನಾನು ಪಾಕಿಸ್ತಾನದಿಂದ ನವಾಝ್ ಶರೀಫ್. ಕೆಂಪು ಕೋಟೆಯಿಂದ ಭಾಷಣ ಮಾಡಲು ಸಲಹೆಗಳನ್ನು ಕೇಳಿರುವುದು ಸಂತೋಷವಾಯಿತು. ಕೆಂಪುಕೋಟೆಯಿಂದ ಕೆಲವು ಪಾಕಿಸ್ತಾನ ವಿರೋಧಿ ಹೇಳಿಕೆಗಳನ್ನು ಅಗತ್ಯವಾಗಿ ಕೊಡಿ. ಅದರಿಂದ ನನಗೂ ಇಲ್ಲಿ ಒಂದಿಷ್ಟು ರಾಜಕೀಯ ಮಾಡಲು ಸಾಧ್ಯವಾಗುತ್ತದೆ. ನಿಮಗೂ ಅದರಿಂದ ಲಾಭವಾಗಬಹುದು ಎಂದು ಭಾವಿಸಿದ್ದೇನೆ. ಹಾಗೆಯೇ, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ನಾನು ಇಲ್ಲಿ ಪ್ರತಿಪಾದಿಸುತ್ತಿದ್ದೇನೆ. ಹಾಗೆಯೇ ನೀವೂ ಕಾಶ್ಮೀರದ ಬಗ್ಗೆ ಗಟ್ಟಿಯಾದ ಹೇಳಿಕೆಯನ್ನು ಕೊಡಿ. ಭಯೋತ್ಪಾದನೆ, ಪಾಕಿಸ್ತಾನ, ಕಾಶ್ಮೀರ ಶಬ್ದಗಳನ್ನು ಭಾಷಣದಲ್ಲಿ ಹೆಚ್ಚು ಹೆಚ್ಚು ಬಳಸಿ. ಹಾಗೆಯೇ ಪಾಕಿಸ್ತಾನದ ಸ್ವಾತಂತ್ರದ ದಿನ ನಾನು ಕೂಡ ನಿಮ್ಮ ರಾಜಕೀಯಕ್ಕೆ ಅನುಕೂಲವಾಗುವಂತಹ ಕೆಲವು ಹೇಳಿಕೆಗಳನ್ನು ಕೊಡುತ್ತೇನೆ. ಹೀಗೆ ಭಾಷಣ ಗಳಲ್ಲಿ ಕೊಡು-ಕೊಳ್ಳುವಿಕೆ ಇರಲಿ. ಸಾಧ್ಯವಾದರೆ ಕೇಸರಿ ಶಾಲು ಗಳನ್ನು ಕೊರಳಿಗೆ ಸುತ್ತಿಕೊಳ್ಳಿ.
-ನವಾಝ್ ಶರೀಫ್, ಪಾಕಿಸ್ತಾನ
3. ಮೋದಿಯವರಿಗೆ ನಮಸ್ಕಾರ.
ನಾನು ಕರ್ನಾಟಕದಿಂದ ವಾಟಾಳ್ ನಾಗರಾಜ್....
ಕೆಂಪುಕೋಟೆಯಿಂದ ಭಾಷಣ ಮಾಡಲು ಸಲಹೆ ಕೇಳಿದ್ದೀರಿ. ಸಂತೋಷ. ಸಾಧಾರಣವಾಗಿ ನಾನು ಎಮ್ಮೆ, ಕತ್ತೆಗಳ ಮೇಲೆ ನಿಂತೇ ಭಾಷಣ ಮಾಡುವುದು. ಹಾಗೆ ಮಾಡಿದರೆ ಮಾತ್ರ ಪತ್ರಕರ್ತರು ಫೋಟೊಗಳನ್ನು ಪತ್ರಿಕೆಗಳಲ್ಲಿ ಹಾಕುತ್ತಾರೆ. ಇಲ್ಲದೇ ಇದ್ದರೆ ಅವರು ನನ್ನ ಭಾಷಣವನ್ನು ಮೂಸಿಯೂ ನೋಡುವುದಿಲ್ಲ.
ನೀವು ಕೂಡ ಭಾಷಣ ಮಾಡಲು ಕತ್ತೆ, ಎಮ್ಮೆಗಳನ್ನು ಬಳಸಬಹುದು. ಅದರ ಮೇಲೆ ಕುಳಿತು ಭಾಷಣ ಮಾಡಿ ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಒಂದು ವೇಳೆ ಭದ್ರತೆಯ ಕಾರಣದಿಂದ ಕತ್ತೆ, ಎಮ್ಮೆಗಳನ್ನು ಬಳಸಲು ಸಾಧ್ಯವಾಗದೇ ಇದ್ದರೆ ನಿಮ್ಮ ಸಂಪುಟದಲ್ಲಿರುವ ನಮ್ಮವರೇ ಆಗಿರುವ ಅನಂತಕುಮಾರ್, ಸದಾನಂದ ಗೌಡ ಅಥವಾ ವೆಂಕಯ್ಯ ನಾಯ್ಡು ಅವರನ್ನು ಬಳಸಿಕೊಳ್ಳಿ. ಕತ್ತೆ, ಎಮ್ಮೆಗಳ ಸ್ಥಾನವನ್ನು ಅವರು ಪರಿಣಾಮಕಾರಿಯಾಗಿ ತುಂಬುತ್ತಾರೆ. ತಮ್ಮನ್ನು ಹೊತ್ತುಕೊಳ್ಳಲು ಅವರೂ ತುದಿಗಾಲಲ್ಲಿ ನಿಂತಿದ್ದಾರೆ. ಸಾಧ್ಯವಾದರೆ ಕೆಲವು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿ. ಅದರಿಂದ ನನಗೆ ಇಲ್ಲಿ ಸ್ವಲ್ಪ ಕನ್ನಡಪರ ಹೋರಾಟ ಮಾಡಲು ಅನುಕೂಲ ವಾಗುತ್ತದೆ. ಕನ್ನಡದ ಮೇಲೆ ಹಿಂದಿಯನ್ನು ಇನ್ನಷ್ಟು ಹೇರಿದರೆ ಚೆನ್ನಾಗಿತ್ತು. ನನಗೂ ಒಂದಿಷ್ಟು ರಾಜಕೀಯ ಮಾಡಲು ವಿಷಯಗಳು ಸಿಗುತ್ತವೆ.
-ವಾಟಾಳ್ ನಾಗರಾಜ್, ಕರ್ನಾಟಕ
4.ಪತಿ ದೇವರಿಗೆ ನಮಸ್ಕಾರ.
ನಾನು ನಿಮ್ಮ ಪರಿತ್ಯಕ್ತ ಪತ್ನಿ. ತಾವು ಕೆಂಪು ಕೋಟೆಯಿಂದ ಭಾಷಣ ಮಾಡಲು ಸಲಹೆ ಕೇಳಿದ್ದೀರಿ. ತಮ್ಮ ಭಾಷಣದಲ್ಲಿ ಗಂಡಸರಿಗೆ ಪತ್ನಿಯರ ಮೇಲಿರುವ ಹೊಣೆಗಾರಿಕೆಗಳ ಬಗ್ಗೆ ಮಾತನಾಡಿ. ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಮದುವೆಯಾದ ಹೆಣ್ಣನ್ನು ಯಾವ ಕಾರಣಕ್ಕೂ ನಡು ನೀರಿನಲ್ಲಿ ಬಿಟ್ಟು ಬಿಡಬೇಡಿ ಎಂದು ದೇಶದ ಎಲ್ಲ ಪುರುಷರಿಗೆ ಕರೆ ನೀಡಿ. ಹಾಗೆಯೇ, ಕೈ ಹಿಡಿದ ನನಗೆ ಮೋಸ ಮಾಡಿದ ಹಾಗೆ ನೀವು ದೇಶಕ್ಕೆ ಮೋಸ ಮಾಡಬೇಡಿ. ಕೆಂಪುಕೋಟೆಯ ಮೇಲೆ ಭಾಷಣ ಮಾಡುವುದಕ್ಕಾಗಿಯಾದರೂ ಭಾರತಕ್ಕೆ ಬರುತ್ತಿದ್ದೀರಿ ಎನ್ನು ವುದು ಸಂತೋಷ ಕೊಡುವ ವಿಷಯ. ಹಾಗೆ ಭಾಷಣ ಮಾಡಿ, ಅಲ್ಲಿಂದಲೇ ವಿದೇಶಕ್ಕೆ ಹಾರದೆ ಒಮ್ಮೆ ನಿಮ್ಮ ಹಳೆಯ ಗುಜರಾತ್‌ನ್ನು ನೋಡಿ ಹೋಗಿ. ಗುಜರಾತ್‌ನಲ್ಲಿ ಎಲ್ಲಿ ನೋಡಿದರೂ ಸತ್ತ ದನದ ವಾಸನೆ. ಮಣ್ಣು ಮಾಡುವುದಕ್ಕೆ ದಲಿತರು ಕೇಳುವುದಿಲ್ಲ. ಆದುದರಿಂದ ಇಲ್ಲಿರುವುದು ನನಗೆ ತುಂಬಾ ಕಷ್ಟವಾಗಿದೆ. ನಿಮ್ಮ ಜೊತೆಗೆ ನನ್ನನ್ನೂ ವಿದೇಶಕ್ಕೆ ಕರೆದುಕೊಂಡು ಹೋಗಿ.
-ಜಶೋದಾ ಬೆನ್, ನಿಮ್ಮ ಹಾಲಿ ಪತ್ನಿ.
5. ಮೋದಿಯವರಿಗೆ ನಮಸ್ಕಾರ.
ನಾನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ. ನೀವು ಕೆಂಪುಕೋಟೆಯಲ್ಲಿ ಭಾಷಣ ಮಾಡಲು ಸಲಹೆ ಕೇಳಿದ್ದೀರಿ.
ಭಾಷಣ ಸಂದರ್ಭದಲ್ಲಿ ಈ ಬಾರಿ ನೀವು ಯಾವ ಥರದ ಸೂಟ್ ಹಾಕಬೇಕು ಎನ್ನುವುದು ನಿಮ್ಮ ಗೊಂದಲ ವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಕಳೆದ ಬಾರಿ 10 ಲಕ್ಷ ರೂ. ಬೆಲೆಬಾಳುವ ಸೂಟು ಹಾಕಿದ್ದೀರಿ. ಇದೀಗ ನೀವು ಪ್ರಧಾನಿಯಾಗಿ ಎರಡು ವರ್ಷ ಕಳೆದಿದೆ. ದೇಶ ಅಭಿವೃದ್ಧಿಯಾಗಿದೆ ಎನ್ನುವುದು ವಿಶ್ವಕ್ಕೆ ಮನವರಿಕೆ ಯಾಗಬೇಕಾದರೆ ಈ ಬಾರಿ ನೀವು ಒಂದು ಕೋಟಿ ರೂಪಾಯಿಯ ಸೂಟ್ ಹಾಕಿ ಭಾಷಣ ಮಾಡಬೇಕು. ಆಗ ಮಾತ್ರ ದೇಶಕ್ಕೂ, ನಿಮ್ಮ ಭಕ್ತರಿಗೂ ಹೆಮ್ಮೆ. ನೀವು ಇಂಗ್ಲಿಷ್‌ನಲ್ಲಿ ತುಂಬಾ ಹಿಂದೆ ಎಂದು ನನಗೆ ಗೊತ್ತು. ನಾನು ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ಕಲಿತವನು. ನಿಮಗೆ ಪರಿಣಾಮಕಾರಿಯಾಗಿ ಹಿಂದಿಯಲ್ಲೇ ಇಂಗ್ಲಿಷ್ ಭಾಷಣವನ್ನು ಬರೆದುಕೊಡಬಲ್ಲೆ. ನಿಮ್ಮ ಕೈ ಬಲಪಡಿಸಲು ಉಡುಪಿಯಲ್ಲಿ ನಿಂತು ನಾನು ಈಗಾಗಲೇ ಕರೆ ನೀಡಿದ್ದೇನೆ. ಹಾಗೆಯೇ ಕಾಂಗ್ರೆಸ್‌ನ ಕೈಗಳಿಗೆ ಲಕ್ವ ಬಡಿಯಲಿ ಎಂದು ಒಂದು ಹೋಮವನ್ನೂ ಮಾಡಿಸಿದ್ದೇನೆ. ನನಗೆ ನಿಮ್ಮ ಪಾದಬುಡದಲ್ಲಿ ಏನಾದರೂ ಒಂದು ಸ್ಥಾನ ಕೊಟ್ಟರೆ, ಕೈಗೆ ಕೈ ಕೊಟ್ಟು ನಿಮ್ಮ ಬಳಿ ಬರುವುದಕ್ಕೆ ಸಿದ್ಧನಿದ್ದೇನೆ. ನನ್ನನ್ನು ಸ್ವೀಕರಿಸಿ ಪುನೀತನನ್ನಾಗಿ ಮಾಡಬೇಕು ಎಂದು ಕೋರಿಕೆ. ನನ್ನಲ್ಲಿ ಕೆಲವು ವಿದೇಶಿ ವಿಗ್‌ಗಳಿವೆ. ಬೇಕಾದರೆ ಕಳುಹಿಸಿಕೊಡುವೆ. ಸ್ವಾತಂತ್ರ ದಿನಾಚರಣೆಯ ಭಾಷಣದ ಸಂದರ್ಭದಲ್ಲಿ ಬಳಸಿಕೊಳ್ಳಿ.
-ಎಸ್. ಎಂ. ಕೃಷ್ಣ., ಮಾಜಿ ಮುಖ್ಯಮಂತ್ರಿ
6. ಪ್ರಧಾನಿ ಮೋದಿಯವರಿಗೆ ಪೂಜಾರಿಯ ನಮಸ್ಕಾರ.
ಪೂಜಾರಿ ಎಂದರೆ ಗೊತ್ತುಂಟಲ್ಲ, ದೇವಸ್ಥಾನದ ಪೂಜಾರಿ ಅಲ್ಲ ನಾನು. ಆದರೆ ನನಗೂ ಒಂದು ದೇವಸ್ಥಾನ ಉಂಟು ಮಂಗಳೂರಿನಲ್ಲಿ. ಈಗ ನನಗೆ ಇಲ್ಲಿ ಕೆಲಸ ಇಲ್ಲ. ಕಾಂಗ್ರೆಸ್ ಕಚೇರಿಯ ಒಳಗೆ ಹೋಗುವುದಕ್ಕೆ ಅವರು ಬಿಡುವುದಿಲ್ಲ. ಭಾಷಣ ಬರೆದುಕೊಡಿ ಎಂದು ಪೇಪರಿನಲ್ಲಿ ನೀವು ಕೇಳಿಕೊಂಡಿದ್ದೀರಿ. ನಿಮಗೆ ಮಂಡೆ ಸಮ ಇಲ್ಲವಾ? ಒಂದು ಭಾಷಣ ಮಾಡಲಿಕ್ಕೆ ಬರದವರು ನೀವು ಪ್ರಧಾನಿ ಆದದ್ದು ಯಾಕೆ?
ನೋಡಿ, ನಾನು ಮಿನಿಸ್ಟರ್ ಆದಾಗ ಸಾಲ ಮೇಳ ಯೋಜನೆ ಒಂದು ಜಾರಿಗೊಳಿಸಿದ್ದೆ. ಅದನ್ನು ಈಗ ನೀವು ಮತ್ತೆ ಜಾರಿಗೊಳಿಸಬೇಕು. ನನಗೆ ಅರ್ಜಂಟ್ ಸ್ವಲ್ಪ ಸಾಲಬೇಕು. ಪ್ರೆಸ್ ಮೀಟ್ ಕರೆಯಬೇಕಾದರೆ ಪ್ರೆಸ್‌ಕ್ಲಬ್‌ನವರಿಗೆ ದುಡ್ಡುಕೊಡಬೇಕು. ಇಲ್ಲಿ ಭಾರೀ ಕಷ್ಟ ಉಂಟು. ಮುಂದಿನ ಬಾರಿ ಕಾಂಗ್ರೆಸ್‌ನವರು ಟಿಕೆಟ್ ಕೊಡುವ ಲಕ್ಷಣ ಕಾಣುವುದಿಲ್ಲ. ನೀವು ಸಾಲಮೇಳ ಯೋಜನೆಯಲ್ಲಿ ನನಗೆ ಸಾಲ ಕೊಟ್ಟರೆ, ಚುನಾವಣೆಯಲ್ಲಿ ಸ್ವತಂತ್ರವಾಗಿ ನಿಂತು ಕೊಳ್ಳುವುದಕ್ಕೆ ಆಗುತ್ತದೆ. ಠೇವಣಿ ಕಟ್ಟುವುದಕ್ಕೆ ದುಡ್ಡು ಬೇಕಲ್ಲ? ಆದರೆ ಅದು ವಾಪಾಸ್ ಸಿಗುವ ಲಕ್ಷಣ ಏನು ಇಲ್ಲ. ಆದುದರಿಂದ ಬಳಿಕ ಸಾಲ ಮನ್ನಾ ಯೋಜನೆ ಜಾರಿಗೆ ತಂದು ಆ ಸಾಲವನ್ನು ಮನ್ನಾ ಮಾಡಬೇಕು.
ಬೇಕಾದರೆ ನಿಮ್ಮ ಪಕ್ಷದಿಂದ ಟಿಕೆಟ್ ಕೊಟ್ಟರೆ ನಿಂತು ಕೊಳ್ಳುತ್ತೇನೆ. ಈಗಲೇ ಚುನಾವಣಾ ಪ್ರಚಾರ ಶುರು ಮಾಡಿದ್ದೇನೆ. ಕೆಂಪು ಕೋಟೆಯಲ್ಲಿ ನಿಮಗೆ ಭಾಷಣ ಮಾಡಲು ಕಷ್ಟವಾದರೆ ನಾನೇ ಭಾಷಣ ಮಾಡಲು ಸಿದ್ಧನಿದ್ದೇನೆ. ದಿಲ್ಲಿಯವರೆಗೆ ಬರುವುದಕ್ಕೆ ಬಸ್ಸಿನ ದುಡ್ಡು ಕೊಟ್ಟರೆ ಸಾಕು. ಏನೂ ಕೆಲಸ ಇಲ್ಲದೆ ನನಗೆ ಹುಚ್ಚು ಹಿಡಿದ ಹಾಗೆ ಆಗಿದೆ. ಏನಾದರೂ ಕೆಲಸ ಕೊಡದೇ ಇದ್ದರೆ, ನಿಮ್ಮ ವಿರುದ್ಧ ನಾನು ಪ್ರೆಸ್ ಮೀಟ್ ಮಾಡಬೇಕಾಗುತ್ತದೆ. ಎಚ್ಚರಿಕೆ.
- ಜನಾರ್ದನ ಪೂಜಾರಿ, ಮಂಗಳೂರು