ರಂಗಾಯಣ ‘ರಾಮಾಯಣ’

Update: 2016-08-13 18:14 GMT

ಸರಿಸುಮಾರು ಒಂದೂಕಾಲು ಶತಮಾನದ ಇತಿಹಾಸವುಳ್ಳ ಕನ್ನಡ ರಂಗಭೂಮಿಯ ಹೊಸ ಕವಲು ರಂಗಾಯಣ. ರಂಗಾಯಣಕ್ಕೂ ಈಗ ಇಪ್ಪತ್ತೈದರ ಪ್ರಾಯ. ರಂಗಾಯಣ ಒಂದು ನಾಟಕ ಶಾಲೆ. ಅಭಿನಯ ಮತ್ತು ರಂಗಭೂಮಿಯ ಇತರ ‘ಭಾಷೆ’ಗಳ ಬಗ್ಗೆ ತರಬೇತಿ, ತಾಲೀಮು, ನಾಟಕಗಳ ಪ್ರದರ್ಶನ - ಸ್ಥೂಲವಾಗಿ ಇದು ರಂಗಾಯಣದ ಅಂಗರಚನೆ. ಪಾಶ್ಚಾತ್ಯ ರಂಗಭೂಮಿಯ ‘ರೆಪರ್ಟರಿಗೆ’ ಸಮನಾಂತರವಾದುದು ರಂಗಾಯಣ. ರಂಗಾಯಣ ರೆಪರ್ಟರಿ ಎನ್ನುವ ಪರಿಕಲ್ಪನೆ ಬಿ.ವಿ.ಕಾರಂತರ ಕನಸಿನ ಕೂಸು. ರಂಗಾಯಣ ರೆಪರ್ಟರಿ ಕಲ್ಪನೆ ಬಂದದ್ದು ಹೇಗೆ?

ರೆಪರ್ಟರಿ ಅಥವಾ ರಂಗ ಶಾಲೆಯ ಪರಿಕಲ್ಪನೆ ಹುಟ್ಟಿದ್ದು ಇಂಗ್ಲೆಂಡಿನಲ್ಲಿ. ಇಂಗ್ಲೆಂಡಿನ ವೃತ್ತಿ ರಂಗಭೂಮಿ ಜನಪ್ರಿಯ ನಾಟಕಗಳ ಮರುಪ್ರದರ್ಶನಗಳಲ್ಲೇ ತೃಪ್ತಿಗೊಂಡು ಹೊಸ ನಾಟಕಕಾರರಿಗೆ, ನಿರ್ದೇಶಕರಿಗೆ, ನಟ-ನಟಿಯರಿಗೆ ಅವಕಾಶಗಳೇ ಇಲ್ಲವಾದಂಥ ಪರಿಸ್ಥಿತಿಯಲ್ಲಿ ರೆಪರ್ಟರಿ ಹುಟ್ಟಿತು. ‘ಮಹಾಭಾರತ’ ಸಿನಿಮಾ ಖ್ಯಾತಿಯ ಪೀಟರ್ ಬ್ರೂಕ್ ಈ ರೆಪರ್ಟರಿಯಲ್ಲೇ ಹುಟ್ಟಿ ಬೆಳದವರು.

    ಕನ್ನಡ ರಂಗಭೂಮಿಯಲ್ಲೂ ಇಂಥದೇ ಪರಿಸ್ಥಿತಿ ಉದ್ಭವಿಸಿದಾಗ ಬಿ.ವಿ.ಕಾರಂತರ ಮನದೊಳಗೆ ರಂಗಾಯಣ ರೆಪರ್ಟರಿಯ ಪರಿಕಲ್ಪನೆ ಮೂಡಿತು. ಕನ್ನಡದ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳೆರಡರಲ್ಲೂ ಕೆಲವೊಂದು ಒಳ್ಳೆಯ ಗುಣಗಳು ಮತ್ತು ಕೆಲವೊಂದು ನಕಾರಾತ್ಮ ಗುಣಗಳಿರುವುದು ಬಾಲ್ಯದಿಂದ ರಂಗಭೂಮಿಯಲ್ಲೇ ಬದುಕು ಸವೆಸಿದ ಕಾರಂತರ ಗಮನಕ್ಕೆ ಬಂದಿತ್ತು. ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಗಳಲ್ಲಿನ ಉತ್ತಮಾಂಶಗಳನ್ನು ತೆಗೆದುಕೊಂಡು, ಇಲ್ಲಿರಬಹುದಾದ ಕೊರತೆಗಳನ್ನು ನೀಗಿಸಿ ಒಂದು ಹೊಸ ರಂಗಭೂಮಿ ಕಟ್ಟುವುದು ಸಾಧ್ಯವಿಲ್ಲವೇ? ವೃತ್ತಿ ರಂಗಭೂಮಿಯಲ್ಲಿ ಸಂಸ್ಥೆ ಮುಖ್ಯವಾಗುತ್ತೆ. ಹವ್ಯಾಸಿಯಲ್ಲಿ ವ್ಯಕ್ತಿ ಮುಖ್ಯ ಆಗ್ತಾನೆ. ನಾಟಕದ ಕಂಪೆನಿಯಲ್ಲಿ ನಿರಂತರತೆ ಇರುತ್ತೆ. ಹವ್ಯಾಸಿಯಲ್ಲಿ ಇಂಥ ನಿರಂತರತೆ ಇರುವುದಿಲ್ಲವಾದರೂ ಪ್ರಯೋಗಶೀಲತೆ ಮತ್ತು ಸಾಹಸಪ್ರಿಯತೆಗಳಿರುತ್ತವೆ. ರೆಪರ್ಟರಿಯಲ್ಲಿ ಕಂಪೆನಿಯ ನಿರಂತರತೆ, ಶಿಸ್ತು ಮತ್ತು ಹವ್ಯಾಸಿಯ ಪ್ರಯೋಗಶೀಲತೆ ಮತ್ತು ಸಾಹಸಪ್ರಿಯತೆಗಳೆರಡೂ ಇರುತ್ತವೆ. ಇಂಥದೊಂದು ಪರಿಕಲ್ಪನೆಯಿಂದ ‘ನಾಟಕ-ಕರ್ನಾಟಕ ರೆಪರ್ಟರಿ’ಯನ್ನು ಕರ್ನಾಟಕ ಸರಕಾರ ‘ರಂಗಾಯಣ’ ಎಂಬ ಅಭಿದಾನದಿಂದ ಬಿ.ವಿ.ಕಾರಂತರ ನೇತೃತ್ವದಲ್ಲಿ ಸ್ಥಾಪಿಸಿತು. 1989ರ ಮಕರಸಂಕ್ರಾಂತಿಯಂದು ಮೈಸೂರಿನಲ್ಲಿ ರಂಗಾಯಣ ವಿದ್ಯುಕ್ತವಾಗಿ ಅಸ್ತಿತ್ವಕ್ಕೆ ಬಂತು. ಐದು ರಂಗಾಯಣಗಳ ಕನಸು ಕಂಡಿದ್ದ ಬಿ.ವಿ.ಕಾರಂತರ ಮೊದಲ ಆಯ್ಕೆ ಮೈಸೂರಾಗಿತ್ತು. ಮೊದಲ ಮೂರು ವರ್ಷ ಯುವಪ್ರತಿಭೆಗಳಿಗೆ ರಂಗಭೂಮಿಯ ವಿವಿಧ ಅಂಗಗಳಾದ ಅಭಿನಯ, ಸಂಗೀತ, ಬೆಳಕು, ರಂಗಸಜ್ಜಿಕೆ, ಪ್ರಸಾಧನ ಮೊದಲಾದುವುಗಳಲ್ಲಿ ತರಬೇತಿ ನೀಡುವುದು ರಂಗಾಯಣದ ಮುಖ್ಯ ಧ್ಯೇಯವಾಗಿತ್ತು. ನಂತರ ರಂಗಾಯಣವನ್ನು ನೋಂದಾಯಿತ ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಿ ಯುವ ಕಲಾವಿದರ ತರಬೇತಿಯೊಂದಿಗೆ ರಾಜ್ಯಾದ್ಯಂತ ನಾಟಕ ಪ್ರದರ್ಶನಗಳನ್ನು ನೀಡುವುದು ಆಗ ರಂಗಾಯಣ ಹಮ್ಮಿಕೊಂಡ ಗುರಿಯಾಗಿತ್ತು. ಶುರುವಿಗೆ ರಂಗಾಯಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ಕೆಲಸ ಮಾಡಬೇಕು ಕ್ರಮೇಣ ಅದು ಸರಕಾರದಿಂದ ಆರ್ಥಿಕ ಅನುದಾನ ಪಡೆಯುವ ಸ್ವಾಯತ್ತ ಸಂಸ್ಥೆಯಾಗಬೇಕು ಎಂಬುದು ಆಗಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಬಿ.ವಿ.ಕಾರಂತರ ನಡುವಣ ಒಡಂಬಡಿಕೆಯಾಗಿತ್ತು. ಮೈಸೂರಿನ ರಂಗಾಯಣ ಮೊದಲ ಮೂರು ವರ್ಷಗಳಲ್ಲಿ ಬಿ.ವಿ.ಕಾರಂತರ ದಿಗ್ದರ್ಶನದಲ್ಲಿ ಗಣನೀಯ ಸಾಧನೆ ಮಾಡಿತು. ದೇಶವಿದೇಶಗಳ ನಿರ್ದೇಶಕರು, ಹೆಸರಾಂತ ನಾಟಕಕಾರರು, ತಂತ್ರಜ್ಞರನ್ನು ಕರೆಸಿ ಕಲಾವಿದರಿಗೆ ತರಬೇತಿ ನೀಡಲಾಯಿತು. ಅವರ ನಿರ್ದೇಶನದಲ್ಲಿ ಅತ್ಯುತ್ತಮ ನಾಟಕಗಳು ಪ್ರದರ್ಶನ ಕಂಡವು. ಅಭಿನಯ, ರಂಗ ಸಂಗೀತ, ಬೆಳಕು, ಕೋರಿಯೋಗ್ರಫಿ ಮೊದಲಾದವುಗಳಲ್ಲಿ ಹೊಸ ಪ್ರತಿಭೆಗಳು ಅರಳಿದವು. ಹೀಗೆ ರಂಗಾಯಣ ಒಂದು ಸಮರ್ಥ ತಂಡವಾಗಿ ರೂಪುಗೊಂಡಿತು. ಕರ್ನಾಟಕದ ಭಾಷೆ ಶಿಷ್ಟ ಕನ್ನಡವಾದರೂ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಲೆನಾಡು, ಕರಾವಳಿ ಇಲ್ಲೆಲ್ಲ ವಿಶಿಷ್ಟವಾದ ದೇಸಿ ಭಾಷೆಗಳಿವೆ. ಹಾಗೆಯೇ ಈ ಪ್ರದೇಶಗಳಲ್ಲಿ ವಿಶಿಷ್ಟ ಜನಪದ ಕಲಾ ಪ್ರಕಾರಗಳಿವೆ. ಅವುಗಳಲ್ಲಿ ರಂಗಭೂಮಿಯೂ ಒಂದು. ಮೈಸೂರಿನಲ್ಲಿ ಕಂಸಾಳೆ ಕಂಗೊಳಿಸುವ ಹಾಗೆ ಕರ್ನಾಟಕದ ಇತರ ಪ್ರದೇಶಗಳಲ್ಲಿ ದೊಡ್ಡಾಟ, ಸಣ್ಣಾಟ, ಕೃಷ್ಣಪಾರಿಜಾತ, ಯಕ್ಷಗಾನ, ಸೂತ್ರದ ಬೊಂಬೆಯಾಟ, ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ, ಭೂತಾರಾಧನೆ, ನಾಗಮಂಡಲ ಇತ್ಯಾದಿ ಶ್ರೀಮಂತ ಕಲಾಪ್ರಕಾರಗಳಿವೆ. ಇವೆಲ್ಲವುಗಳನ್ನೂ ಮೇಳೈಸಿಕೊಂಡು ಪ್ರಾದೇಶಿಕ ಸೊಗಡು ಸೂಸುವ ಐದು ರಂಗಾಯಣಗಳನ್ನು ಕಟ್ಟಬೇಕು. ಇವು ಕರ್ನಾಟಕದ ಉದ್ದಗಲ ಸಂಚರಿಸಿ ಪ್ರಾದೇಶಿಕ ಸಾಂಸ್ಕೃತಿಕ ರಾಯಭಾರಿಗಳಂತೆ ನಾಟಕಗಳನ್ನು ಪ್ರದರ್ಶಿಸಬೇಕು. ಈ ಐದು ರಂಗಾಯಣಗಳೂ ಸ್ವಾಯತ್ತ ಸಂಸ್ಥ್ಥೆಗಳಾಗಿಯೂ, ಪರಸ್ಪರ ಸಹಕಾರ ಮತ್ತು ಸಮನ್ವಯಗಳ ದೃಷ್ಟಿಯಿಂದ, ಹಿರಿಯ ರಂಗಕರ್ಮಿ ಕೆ.ವಿ ಸುಬ್ಬಣ್ಣನವರು ಸೂಚಿಸಿರುವಂಥ ರಂಗಭೂಮಿ ಪ್ರಾಧಿಕಾರವೊಂದರ ಅಡಿಯಲ್ಲಿ ಕೆಲಸಮಾಡಬೇಕು ಎಂಬುದು ಬಿ.ವಿ.ಕಾರಂತರ ಕನಸಾಗಿತ್ತು. ರಂಗಾಯಣ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ಬಿ.ವಿ.ಕಾರಂತರು ಈ ಅಂಕಣಕಾರನಿಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ತಮ್ಮ ಈ ಕನಸುಗಳನ್ನು ವ್ಯಕ್ತಪಡಿಸಿದ್ದರು.

ರಂಗಾಯಣಕ್ಕೆ ಇಪ್ಪತ್ತೈದು ತುಂಬಿದ ಈ ಸಂದರ್ಭದಲ್ಲಿ ನಿಂತು, ಕಾರಂತರ ಕನಸುಗಳೆಲ್ಲ ನನಸಾಯಿತೆ ಎಂದು ಅದರತ್ತ ಒಂದು ಅವಲೋಕನ ನಡೆಸಿದಾಗ ನಮಗೆ ಕಾಣಸಿಗುವ ನೋಟ ಅಷ್ಟೇನೂ ಚೇತೋಹಾರಿಯಾದುದಲ್ಲ. ರಂಗಾಯಣ ಎಷ್ಟರಮಟ್ಟಿಗೆ ಸ್ವಾಯತ್ತವೋ ತಿಳಿಯದು. ಸೃಜನಶೀಲ ಸ್ವಾತಂತ್ರ್ಯಕ್ಕೇನೂ ಅಡ್ಡಿಬರದಿದ್ದರೂ ಅದು ಇನ್ನೂ ಕನ್ನಡ ಸಂಸ್ಕೃತಿ ಇಲಾಖೆಯ ಅಧೀನ ಸಂಸ್ಥೆಯಾಗಿಯೇ ಕೆಲಸಮಾಡುತ್ತಿದೆ. ರಂಗಾಯಣಕ್ಕೆ ಮಾತೃ ಸಂಸ್ಥೆಯಾಗಿ ರಂಗಭೂಮಿ ಪ್ರಾಧಿಕಾರ ರಚನೆಯಾಗಿಲ್ಲ. ರಂಗಾಯಣದ ಗಡಿಯೇನೋ ಮೈಸೂರಿನಾಚೆಗೂ ವಿಸ್ತರಿಸಿದೆ. ಮಂಗಳೂರು, ಧಾರವಾಡ, ಕಲ್ಬುರ್ಗಿ, ಶಿವಮೊಗ್ಗ ಇಲ್ಲೆಲ್ಲ ರಂಗಾಯಣಗಳು ಅಸ್ತಿತ್ವಕ್ಕೆ ಬಂದಿವೆ. ಅಷ್ಟರಮಟ್ಟಿಗೆ ಬಿ.ವಿ.ಕಾರಂತರ ಕನಸು ನನಸಾಗಿದೆ. ಆದರೆ ಈ ರಂಗಾಯಣಗಳು ಕಾರಂತರ ಅಭೀಪ್ಸೆ, ದರ್ಶನ, ಗುರಿ ಉದ್ದೇಶಗಳಿಗನುಗುಣವಾಗಿ ಕೆಲಸ ಮಾಡುತ್ತಿವೆಯೆ ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಗಲಾರದು. ನಿದರ್ಶನವಾಗಿ ಇತ್ತೀಚಿನ ದಿನಗಳಲ್ಲಿ ಪ್ರಮಾದಗಳಿಂದಾಗಿ ಸುದ್ದಿಯಲ್ಲಿರುವ ಕಲಬುರಗಿ, ಶಿವಮೊಗ್ಗ ರಂಗಾಯಣಗಳನ್ನು ನೋಡಬಹುದು. ಎರಡು ವರ್ಷಗಳ ಕೂಸಾದ ಕಲಬುರಗಿ ರಂಗಾಯಣದ ನಿರ್ದೇಶಕರು ಮತ್ತು ಕಲಾವಿದರು ಜಾತಿನಿಂದನೆ, ಅಶಿಸ್ತಿನ ವರ್ತನೆ ಮೊದಲಾದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಶಿವಮೊಗ್ಗ ರಂಗಾಯಣದ ವಿರುದ್ಧ ಆರ್ಥಿಕ ಅವ್ಯವಹಾರಗಳ ಆಪಾದನೆ ಮಾಡಲಾಗಿದೆ. ನೀತಿ, ನೈತಿಕತೆ, ನಿಯಮ, ಆತ್ಮ ಸಂಯಮಗಳಲ್ಲಿ ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕಾದ, ಇಂಥ ಜೀವನಮೌಲ್ಯ ವಿರೋಧಿ ನಡತೆಗಳ ವಿರುದ್ಧ ತಮ್ಮ ಮಾತುಕೃತಿಗಳ ಮೂಲಕ ದನಿ ಎತ್ತಬೇಕಾದ ಕಲಾವಿದರ ವಿರುದ್ಧವೇ ಈ ಬಗೆಯ ಆಪಾದನೆಗಳು ಕೇಳಿ ಬಂದಿರುವುದು ಸಾಹಿತಿ-ಕಲಾವಿದ ಸಮುದಾಯ ತಲೆತಗ್ಗಿಸಬೇಕಾದಂಥ ವಿಷಯ. ಕರ್ನಾಟಕದ ಸಾಂಸ್ಕೃತಿಕ ವೈಶಿಷ್ಟ್ಯ ಅನನ್ಯವಾದದ್ದು. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ, ಮಲೆನಾಡು ಈ ಪ್ರದೇಶಗಳ ಭಾಷೆ ಮತ್ತು ಜಾನಪದ ಸಂಸ್ಕೃತಿ ಈ ಅನನ್ಯತೆಗೆ ಉತ್ತಮ ನಿದರ್ಶನಗಳಾಗಬಲ್ಲವು. ಸೃಜನಶೀಲ ಕಲಾವಿದರಿಗೆ ತಮ್ಮ ಪ್ರತಿಭೆ ಸಾಮರ್ಥ್ಯಗಳನ್ನು ತೊಡಗಿಸಲು ವಿಪುಲ ಅವಕಾಶಗಳು ಇಲ್ಲಿವೆ. ಈ ಪ್ರಾದೇಶಿಕ ವೈವಿಧ್ಯತೆ ಮತ್ತು ಶ್ರೀಮಂತಿಕೆಗಳನ್ನು ಅಧ್ಯಯನ, ಸಂಶೋಧನೆ, ಪ್ರಯೋಗಗಳ ಮೂಲಕ ಬೆಳೆಸಿ ಬೆಳಗಿಸಲೆಂದೇ ಸರಕಾರ ರಂಗಾಯಣಗಳನ್ನು ಸ್ಥಾಪಿಸಿರುವುದು. ಹೈದರಾಬಾದ್ ಕರ್ನಾಟಕ ಸೂಫಿಸಂತರಿಗೆ, ತತ್ತ್ವಪದಕಾರರಿಗೆ, ದಾಸರು, ವಚನಕಾರರಿಗೆ ಜನ್ಮನೀಡಿದ ಫಲವತ್ತಾದ ಸಾಂಸ್ಕೃತಿಕ ಭೂಮಿ. ಈ ಶ್ರೀಮಂತ ಪರಂಪರೆ ಮತ್ತು ಈ ಪ್ರದೇಶದ ರಾಜಕೀಯ ಇತಿಹಾಸ ಸೃಜನಶೀಲ ಕಲಾವಿದರಿಗೆ ಸವಾಲೊಡ್ಡುವಂಥದ್ದು. ಕಲಬುರಗಿಯ ರಂಗಾಯಣ ಈ ನಿಟ್ಟನಲ್ಲಿ ಪ್ರಯೋಗಶೀಲತೆ ಮೆರೆದು ದೇಶದ ಜನತೆಗೆ ಈ ಭಾಗದ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ, ಪ್ರದರ್ಶಿಸಲಿದೆ ಎಂದು ನಿರೀಕ್ಷಿಸಿದವರಿಗೆ ಅಲ್ಲಿನ ಇತ್ತೀಚಿನ ವಿದ್ಯಮಾನಗಳು ನಿರಾಶೆಯುಂಟುಮಾಡಿವೆ. ಯಾವುದೇ ಸಂಸ್ಥೆಯಲ್ಲೂ ಇಂಥ ಬಾಲಾರಿಷ್ಟಗಳು ನಿರೀಕ್ಷಿತವೇ. ಆದರೆ ಆಡಳಿತ ಸೂತ್ರ ಹಿಡಿದವರು ಇಂಥವುಗಳನ್ನೆಲ್ಲ ಮೊಳಕೆಯಲ್ಲೇ ಚಿವುಟಿ ಹಾಕುವಷ್ಟು, ನಿಭಾಯಿಸುವಷ್ಟು ಸಮರ್ಥರಿರಬೇಕು. ಇಂಥ ಶಕ್ತಿ ಜೊತೆಗೆ ಎಲ್ಲರನ್ನೂ ಜೊತೆಜೊತೆಯಾಗಿ ಕರೆದೊಯ್ಯುವಂಥ, ವೈಚಾರಿಕ ಭಿನ್ನಾಭಿಪ್ರಾಯಗಳು, ಪ್ರತಿಭೆ ಸಾಮರ್ಥ್ಯಗಳಿಗೆ ಸಂಬಂಧಿಸಿದ ಪೂರ್ವಾಗ್ರಹಗಳು ಮೊದಲಾದ ದೌರ್ಬಲ್ಯಗಳನ್ನು ಸುಧಾರಿಸುವ ಸಹಕಾರ-ಸಾಮರಸ್ಯಗಳ ಮನೋಭಾವವುಳ್ಳ ಸಮನ್ವಯಕಾರರೂ ಆಗಿರಬೇಕಾಗುತ್ತದೆ. ಕಲಾವಿದರ ನೆಲೆಯಾಗಿರುವ ರಂಗಾಯಣದಂಥ ಕಲಾ ಸಂಸ್ಥೆಗಳಲ್ಲಿ ಸೂಕ್ಷ್ಮತೆ -ಸಂವೇದನಾಶೀಲತೆಗಳನ್ನು ಮರೆತ ಅಹಂ-ದರ್ಪಗಳ ಧೋರಣೆಗೆ ಮಾನ್ಯತೆ ಇಲ್ಲ ಎಂಬುದನ್ನು ಆಡಳಿತದ ಹೊಣೆಹೊತ್ತವರು ಅರಿತುಕೊಳ್ಳಬೇಕು. ಶುರುವಿನಲ್ಲಿ ಮೈಸೂರು ರಂಗಾಯಣವೂ ಇಂಥ ಬಾಲಾರಿಷ್ಟಗಳಿಂದ ಮುಕ್ತವಾಗಿರಲಿಲ್ಲ. ಆದರೂ ಬಿ.ವಿ.ಕಾರಂತ, ಪ್ರಸನ್ನರಂಥವರ ಪ್ರಬುದ್ಧ ಮಾರ್ಗದರ್ಶನದಲ್ಲಿ ಅವುಗಳನ್ನೆಲ್ಲ ದಾಟಿ ಭೂಮಿಗೀತ, ರಾಗ-ಸರಾಗದ ಹತ್ತು ಕಾರ್ಯಕ್ರಮಗಳು, ಮಲೆಗಳಲ್ಲಿ ಮದುಮಗಳು ಮೊದಲಾದ ಉತ್ತಮ ನಾಟಕಗಳ ಪ್ರದರ್ಶನದಿಂದ ಪ್ರಯೋಗಶೀಲತೆಯನ್ನು ಮೆರೆಯಿತು, ಕನ್ನಡ ರಂಗಭೂಮಿಗೆ ಹೊಸ ಆಯಾಮಗಳನ್ನು ನೀಡಿತು. ಪ್ರತಿಭಾನ್ವಿತ ಕಲಾವಿದರನ್ನು ಪರಿಚಯಿಸಿತು. ಆನಂತರ ಅಸ್ತಿತ್ವಕ್ಕೆ ಬಂದ ಇತರ ರಂಗಾಯಣಗಳಲ್ಲಿ ಇಂಥ ಸಾಧನೆ ಕಂಡುಬಂದಿಲ್ಲ. ಹುಟ್ಟಿದ ಕೂಡಲೇ ಸಾಧನೆಯ ಶೃಂಗವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ ಸಾಧನೆಯ ಜಾಡಿನಲ್ಲಿ ಸಾಗಲು ಸಮರ್ಥ ಮಾರ್ಗದರ್ಶನ, ಗೊತ್ತ್ತುಗುರಿ, ಮುಕ್ತ ವಾತಾವರಣ, ಪ್ರಬುದ್ಧ ಮನಸ್ಸುಗಳ ನಡುವೆ ಒಡನಾಟ ಇವುಗಳು ಅಗತ್ಯ ಎಂಬುದನ್ನು ಅಲ್ಲಗಳೆಯಲಾಗದು. ರಂಗಾಯಣಗಳು ಸದ್ಯ ಕನ್ನಡ ಸಂಸ್ಕೃತಿ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂಬುದು ದಿಟ. ಈ ಇಲಾಖೆ ಅನುದಾನ ನೀಡಬಹುದು, ಆಡಳಿತಾತ್ಮಕ ವಿಷಯಗಳಲ್ಲಿ ಮಾರ್ಗದರ್ಶನ ನೀಡಬಹುದು. ಆದರೆ ಕಲೆ-ಸಾಹಿತ್ಯ-ಸಂವೇದನೆಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲೂ ಅಲ್ಲ. ಬಹುಶ: ರಂಗಭೂಮಿ ಪ್ರಾಧಿಕಾರದಂಥ ಸಂವೇದನಾಶೀಲ ಪರಿಣಿತರನ್ನೊಳಗೊಂಡ ಒಂದು ವ್ಯವಸ್ಥೆಯ ಅಗತ್ಯವನ್ನು ಇತ್ತೀಚಿನ ಬೆಳವಣಿಗೆಗಳಿಂದ ಮನಗಾಣಬಹುದಾಗಿದೆ.

ಭರತ ವಾಕ್ಯ:

ಈ ಕೆಲವೊಂದು ಬೇಸರ ಬೆಳವಣಿಗೆಗಳಿಂದಾಗಿ ರಂಗಾಯಣಗಳದ್ದು ‘ರಾಮಾಯಣ’ವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ