ಮಕ್ಕಳ ದೌರ್ಜನ್ಯ ತಡೆಗೆ ಆಸರೆಯಾದ ʼತೆರೆದ ಮನೆʼ ಕಾರ್ಯಕ್ರಮ

Update: 2025-01-16 05:24 GMT

ರಾಯಚೂರು: ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು, ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಜಾರಿಗೆ ತಂದ ‘ತೆರೆದ ಮನೆ’ ಕಾರ್ಯಕ್ರಮ ಅಡಿಯಲ್ಲಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಮಕ್ಕಳಿಗೆ ಪೊಲೀಸರ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ, ಮಕ್ಕಳ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯ, ಫೋಕ್ಸೋ ಪ್ರಕರಣ, ಮಕ್ಕಳ ಅಪಹರಣ ಪ್ರಕರಣ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಅಷ್ಟೇ ಅಲ್ಲದೇ ಪಾನ್ ಶಾಪ್ ಗಳಲ್ಲಿ ಅಕ್ರಮ ಮದ್ಯ ಮಾರಾಟ, ಕಲಬೆರಕೆ ಸೇಂದಿ ಮಾರಾಟ, ಇಸ್ಪೇಟ್, ಜೂಜಾಟ, ಮಟ್ಕಾ ಚೀಟಿ ಹಾಗೂ ಇತರೆ ಅಕ್ರಮ ಚಟುವಟಿಕೆಗಳ ಹಾವಳಿಯಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ.

ತೆರೆದ ಮನೆ ಕಾರ್ಯಕ್ರಮದ ಉದ್ದೇಶ: ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಜೊತೆಗೆ ಆಸ್ತಿಪಾಸ್ತಿ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತ ಪೊಲೀಸರ ಬಗ್ಗೆ ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಚಿಕ್ಕಮಕ್ಕಳಿಗೆ ಪೊಲೀಸರೆಂದರೆ ಜನರಿಗೆ ಬೆದರಿಕೆ ಹಾಕುವವರು, ಸಿನಿಮಾಗಳಲ್ಲಿ ವಿಲನ್ ಆಗಿ ತೋರಿಸಿ ಕ್ರೂರಿಗಳೆಂದು ಇಂದಿನ ದಿನಮಾನಗಳಲ್ಲಿ ನಕಾರಾತ್ಮಕವಾಗಿ ಬಿಂಬಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತೆರೆದ ಮನೆ ಕಾರ್ಯಕ್ರಮ ಅಡಿಯಲ್ಲಿ ತಿಂಗಳ ಪ್ರತಿ ಗುರುವಾರ ಒಂದು ಪೊಲೀಸ್ ಠಾಣೆಯಿಂದ 18 ವರ್ಷದ ಒಳಗಿನ ಶಾಲಾ ಮಕ್ಕಳಿಗೆ ಪೊಲೀಸರ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ಪೊಲೀಸರೆಂದರೆ ಜನಸ್ನೇಹಿಗಳು, ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವವರು ಎಂಬ‌ ಸಂದೇಶ ನೀಡಲು ತೆರೆದ ಮನೆ ಕಾರ್ಯಕ್ರಮ 2013ರಿಂದ ಜಾರಿಗೊಳಿಸಲಾಗಿದೆ. ಆರಂಭದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸೀಮಿತವಾಗಿದ್ದ ಯೋಜನೆಯನ್ನು ಮುಂದೆ ಇಡಿ ರಾಜ್ಯಕ್ಕೆ ವಿಸ್ತರಿಸಲಾಯಿತು.

ಇಂದಿನ ಮಕ್ಕಳೇ ಭವಿಷ್ಯದ ನಾಗರಿಕರು: ಅಪರಾಧ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ನಾಗರಿಕರ ಜತೆಗೆ ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳಿರುವ ಕಾರಣ ಮಕ್ಕಳು ಜಾಗೃತರಾದರೆ ಅವರು ವಾಸವಾಗಿರುವ ಸುತ್ತಮುತ್ತಲಿನ ಪರಿಸರದಲ್ಲಿನ ಅಪರಾಧ ಚಟುವಟಿಕೆಗಳ ತಡೆಗೆ ಮುಂದೆ ಬರಬಹುದು.

ಏನೇನು ಜಾಗೃತಿ ಮೂಡಿಸಲಾಗುತ್ತದೆ: ಪ್ರತಿ ಪೊಲೀಸ್ ಠಾಣೆಯಿಂದ ಗುರುವಾರ ಸ್ಥಳೀಯ ಶಾಲಾ ಮಕ್ಕಳಿಗೆ ಠಾಣೆಗೆ ಕರೆಯಿಸಿ ಅಥವಾ ಶಾಲೆಗೆ ಪಿಎಸ್ಐ ನೇತೃತ್ವದ ಪೊಲೀಸರ ತಂಡ ತೆರಳಿ ಪೊಲೀಸರ ಕಾರ್ಯಗಳೇನು, ಅಪರಾಧ ತಡೆಗೆ ಯಾವ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂಬುವುದರ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಗುತ್ತದೆ.

ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ: ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಠಾಣೆಗೆ ಕರೆತರುವ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಠಾಣೆಗೆ ಬರುವ ಮಕ್ಕಳು ಖೈದಿಗಳ ಕೈಗೆ ಬೇಡಿ ಏಕೆ ಹಾಕಲಾಗುತ್ತದೆ, ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವು ದಿಲ್ಲವೇ, ಪಿಸ್ತೂಲ್‌ ಯಾವಾಗ ಬಳಸುತ್ತೀರಾ, ಕಳ್ಳರು ಹಿಡಿದು ಏನ್‌ ಮಾಡುತ್ತೀರಾ ಎಂಬೆಲ್ಲ ಪ್ರಶ್ನೆಗಳನ್ನು ಕೇಳುವ ಜೊತೆಗೆ ಪೊಲೀಸರ ಕಾರ್ಯವೈಖರಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

 

2024ರಲ್ಲಿ ಜಿಲ್ಲೆಯಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದ ವಿವರ: ಜಿಲ್ಲೆಯಲ್ಲಿ 28 ಪೊಲೀಸ್ ಠಾಣೆಗಳಿದ್ದು ಜನವರಿಯಲ್ಲಿ 19 ಕಾರ್ಯಕ್ರಮಗಳು ನಡೆದಿದ್ದು, 1126 ಮಕ್ಕಳು ಭಾಗವಹಿಸಿದ್ದರು. ಫೆಬ್ರವರಿಯಲ್ಲಿ 19 ಕಾರ್ಯಕ್ರಮ, 794 ಮಕ್ಕಳು ಪಾಲ್ಗೊಂಡಿದ್ದರು. ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆ ರಜೆ ಇದ್ದ ಕಾರಣ ಕಾರ್ಯಕ್ರಮ ನಡೆದಿಲ್ಲ.

ಜೂನ್ ನಲ್ಲಿ 38 ಕಾರ್ಯಕ್ರಮ, 1462 ಮಕ್ಕಳು ಭಾಗವಹಿಸಿದರೆ, ಜುಲೈ ನಲ್ಲಿ 25 ಕಾರ್ಯಕ್ರಮ,1258 ಮಕ್ಕಳು, ಆಗಸ್ಟ್ ನಲ್ಲಿ 54 ಕಾರ್ಯಕ್ರಮ, 2154 ಮಕ್ಕಳು, ಸೆಪ್ಟಂಬರ್ ನಲ್ಲಿ 32 ಕಾರ್ಯಕ್ರಮ, 1522 ಮಕ್ಕಳು, ಅಕ್ಟೋಬರ್ ನಲ್ಲಿ 27 ಕಾರ್ಯಕ್ರಮ, 1160 ಮಕ್ಕಳು ಭಾಗಿ, ನವೆಂಬರ್‌ನಲ್ಲಿ 39 ಕಾರ್ಯಕ್ರಮ ನಡೆದು 1764 ಮಕ್ಕಳು ಭಾಗವಹಿದರೆ ಡಿಸೆಂಬರ್ ನಲ್ಲಿ 45 ಕಾರ್ಯಕ್ರಮ ನಡೆದು 2551 ಮಕ್ಕಳು ಭಾಗವಹಿಸಿದ್ದಾರೆ. 2024 ರಲ್ಲಿ ಒಟ್ಟು 301 ಕಾರ್ಯಕ್ರಮ ನಡೆದರೆ ಒಟ್ಟು13796 ಮಕ್ಕಳು ಭಾಗವಹಿಸಿ ಪೊಲೀಸ್ ಠಾಣೆ,ಪೊಲೀಸ್ ಇಲಾಖೆಯ ಬಗ್ಗೆ ಮಾಹಿತಿ‌ ತಿಳಿದುಕೊಂಡಿದ್ದಾರೆ.

 

2024 ರಲ್ಲಿ ನಡೆದ ಮಕ್ಕಳ ವಿರುದ್ಧದ ಅಪರಾಧ ಪ್ರಕರಣ 

*ಹತ್ಯೆ-1

*ಫೋಕ್ಸೋ-96

*ಮಕ್ಕಳ ಅಪಹರಣ-46

*ಮಹಿಳೆ ಅಥವಾ ತಾಯಿಯೊಂದಿಗೆ ಕಾಣೆಯಾದ‌ಮಕ್ಕಳು- 16

*ಬಾಲ್ಯ ವಿವಾಹ-9

ಬಾಲ ಕಾರ್ಮಿಕ-17


‘ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ವಿಶೇಷವಾಗಿ ರಾಯಚೂರು ಜಿಲ್ಲೆಯಲ್ಲಿ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಪೊಲೀಸರ ಬಗ್ಗೆ ಭಯ ಹೋಗಲಾಡಿಸಲು ನೆರವಾಗಿದೆ.

-ಎಂ.ಪುಟ್ಟ ಮಾದಯ್ಯ, ಎಸ್ ಪಿ, ರಾಯಚೂರು

 

ತೆರೆದ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು‌ ಪೊಲೀಸರ ಜೊತೆ ಅನೋನ್ಯವಾಗಿ,ಸ್ನೇಹಮಯವಾಗಿದ್ದಾರೆ. ಬೀಟ್ ನಲ್ಲಿರುವ ಪೊಲೀಸರಿಗೆ ಅನೇಕ ಬಾರಿ ಅಕ್ರಮ ಮದ್ಯ ಮಾರಾಟ, ಪಾಲಕರ ಜಗಳ, ತಂದೆ, ಮನೆಯ ಸದಸ್ಯರು ಕುಡಿತದಿಂದ ಗಲಾಟೆ ಮಾಡಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

-ಬಸವರಾಜ ಮಕ್ಕಳ‌ ಘಟಕದ ಸದಸ್ಯರು, ಪೊಲೀಸ್ ಅಧಿಕಾರಿ.

 

ಕಳೆದ ನವೆಂಬರ್ ನಲ್ಲಿ ನಮ್ಮ ಶಾಲೆಯಲ್ಲಿ ಪೊಲೀಸ್ ಅಧಿಕಾರಿಗಳ‌ ನೇತೃತ್ವದ ತಂಡ ಆಗಮಿಸಿ ಪೊಲೀಸ್ ಇಲಾಖೆಯ ಬಗ್ಗೆ ಅನೇಕ. ವಿಷಯ ತಿಳಿಸಿದ್ದಾರೆ. ನಾವು ಪೊಲೀಸರಿಗೆ ನೀಡುವ ಪಿಸ್ತೂಲ್, ಪೊಲೀಸ್ ಆಗಲು‌ ಹೇಗೆ ತಯಾರಿ ನಡೆಸಬೇಕು, ಎಷ್ಟು‌ ತಾಸು‌ ಓದಬೇಕು ಎಂಬೆಲ್ಲ‌ ವಿಷಯ‌ ಕೇಳಿದಾಗ ಅಧಿಕಾರಿಗಳು ಉಪಯುಕ್ತ ಮಾಹಿತಿ ನೀಡಿದ್ದಾರೆ.

-ಐಶ್ವರ್ಯ, ಪಗಡದಿನ್ನಿ‌ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಾವಸಲಿ, ರಾಯಚೂರು

contributor

Similar News