ಇದು ಗೋವಿನ ಬಗೆಗಿನ ಪ್ರಾಮಾಣಿಕ ಕಾಳಜಿಯೇ?
ಗೋವು ಅಥವಾ ಹಸುವಿನ ಹೆಸರಿನ ರಾಜಕಾರಣ ಸದ್ಯ ಬಹುಸಂಖ್ಯಾತರನ್ನು ತಲೆತಿನ್ನುತ್ತಿದೆ. ಗೋ ಸಾಗಾಟಗಾರರ ಮೇಲೆ ಹಲ್ಲೆ, ಗೋವಿನ ಚರ್ಮ ತೆಗೆಯುವವರ ಮೇಲೆ ಹಲ್ಲೆ, ಗೋಮಾಂಸ ತಿನ್ನುವವರ ಮೇಲೆ ಹಲ್ಲೆ, ಗೋಮಾಂಸ ಇಟ್ಟುಕೊಂಡವರ ಮೇಲೆ ಹಲ್ಲೆ, ಖಂಡಿತ ಈ ಹಲ್ಲೆಗಳ ಪಟ್ಟಿ ಗಮನಿಸಿದರೆ ಅರ್ಥವಾಗುತ್ತದೆ ಇಲ್ಲಿ ನಿರ್ದಿಷ್ಟ ಸಮುದಾಯಗಳ ಮೇಲೆ ಹಲ್ಲೆ ನಡೆಸಲು ಅಂದರೆ ದಲಿತರು ಮತ್ತು ಮುಸ್ಲಿಮರ ಮೇಲೆ ಹಲ್ಲೆ ನಡೆಸಲು ಉದ್ದೇಶ ಇಟ್ಟುಕೊಂಡಿದೆ ಎಂಬುದು. ಯಾಕೆಂದರೆ ಗೋವು ಸಾಗಿಸುವವರು ಮುಸ್ಲಿಮರು ಮತ್ತು ದಲಿತರು. ಅವರ ಮೇಲೆ ಹಲ್ಲೆಯಾಗುತ್ತದೆ. ಆದರೆ ಅದೇ ಗೋವನ್ನು ಮುಸ್ಲಿಮರು ಮತ್ತು ದಲಿತರಿಗೆ ಮಾರುವವರು ಮೇಲ್ಜಾತಿ ಹಿಂದೂಗಳು. ಅವರ ಮೇಲೆ ಹಲ್ಲೆಯಾಗುವುದಿಲ್ಲ! ಗೋವಿನ ಚರ್ಮ ತೆಗೆಯುವವರು ದಲಿತರು ಅವರ ಮೇಲೆ ಹಲ್ಲೆಯಾಗುತ್ತದೆ ಆದರೆ ಅದೇ ಚರ್ಮದಿಂದ ತಯಾರಿಸಿದ ಚಪ್ಪಲಿ ಧರಿಸುವವರ ಮೇಲೆ ಹಲ್ಲೆಯಾಗುವುದಿಲ್ಲ.
ಮುಂದುವರಿದು ಗೋಮಾಂಸ ಇಟ್ಟುಕೊಳ್ಳುವವರು ದಲಿತರು ಮತ್ತು ಮುಸ್ಲಿಮರು ಅವರ ಮೇಲೆ ಹಲ್ಲೆಯಾಗುತ್ತದೆ ಆದರೆ ಗೋಮಾಂಸ ರ್ತುಮಾಡುವವರು, ರ್ತು ಮಾಡಲಿಕ್ಕೆಂದೆ ದೊಡ್ಡ ದೊಡ್ಡ ಕಸಾಯಿಖಾನೆಗಳನ್ನು ಇಟ್ಟುಕೊಂಡವರು ದೊಡ್ಡ ದೊಡ್ಡ ಹಿಂದೂ ಮೇಲ್ಜಾತಿ ವ್ಯವಹಾರಸ್ಥರು. ಅವರ ಮೇಲೆ ಹಲ್ಲೆಯಾಗುವುದಿಲ್ಲ. ಇದರರ್ಥ, ಇದು ಗೋವಿನ ಪ್ರೀತಿಯ ಮೇಲಿನ ಹಲ್ಲೆಯಾಗುವುದಿಲ್ಲ. ಬದಲಿಗೆ ನಿರ್ದಿಷ್ಟ ಸಮುದಾಯಗಳ ಮೇಲಿನ ದ್ವೇಷದ ಹಲ್ಲೆಯಾಗಿದೆ. ಈ ನಿಟ್ಟಿನಲ್ಲಿ ಹಿಂದೂಗಳಿಗಾಗಿ ಅವರ ಗೋವಿನ ಬಗೆಗಿನ ಪ್ರೀತಿಗಾಗಿ ಗೋವನ್ನು ತಿನ್ನುವವರು, ಅದನ್ನು ಸಾಗಿಸುವವರು ಕೆಲವೊಂದು ಆಗ್ರಹಗಳನ್ನು ಈ ಸಂದರ್ಭದಲ್ಲಿ ಮಂಡಿಸಬೇಕಾಗುತ್ತದೆ. ಯಾವುದೇ ಸಮಸ್ಯೆಗೆ ಒಂದೇ ಮುಖ ಇರುವುದಿಲ್ಲ. ಅದರಲ್ಲೂ ಹಲವು ಆಯಾಮದ ಬಹುಮುಖ ಸಮಸ್ಯೆ ಈ ಗೋರಕ್ಷಣೆ ಎನ್ನಬಹುದು.
ಗೋವು ಅಥವಾ ಹಸುವಿನ ಸಮಸ್ಯೆ ಮೊದಲು ಆರಂಭವಾಗುವುದು ಅದನ್ನು ಸಾಕುವವರಿಂದ. ಅದು ರೈತರಿರಬಹುದು, ಗೋಪಾಲಕರಿರಬಹುದು ಅವರು ಹಸುವನ್ನು ಸಾಕುತ್ತಾರೆ. ಅದರ ಗಂಜಳ, ಸೆಗಣಿ ಎಲ್ಲವನ್ನು ಕೊಟ್ಟಿಗೆಗೆ ಸುರಿಯುತ್ತಾರೆ, ಮೇವು ಹಾಕುತ್ತಾರೆ, ಹೊಲಗಳಲ್ಲಿ ಮೇಯಿಸುತ್ತಾರೆ, ಹಾಲು ಕರೆಯುತ್ತಾರೆ, ರೋಗವುಂಟಾದಾಗ ಆಸ್ಪತ್ರೆಗೆ ಸೇರಿಸುತ್ತಾರೆ. ಪ್ರಶ್ನೆಯೇನೆಂದರೆ ಅದರ ಸಾವಾದಾಗ? ಯಾಕೆಂದರೆ ಸಾವು ಸಹಜ. ಅದು ಹಸುವಿಗೆ ಯಾವ ರೂಪದಲ್ಲಾದರೂ ಬರಬಹುದು. ಮನೆಯಲ್ಲಾದರೂ ಸಾಯಬಹುದು, ಹೊಲದಲ್ಲಾದರೂ ಸಾಯಬಹುದು. ರಸ್ತೆಗಳಲ್ಲಿ ಅವಘಡದಲ್ಲಾದರೂ ಸಾಯಬಹುದು. ಆದರೆ ಹೀಗೆ ಸತ್ತಾಗ ಅದನ್ನು ಪ್ರೀತಿಯಿಂದ ಸಾಕುವ ರೈತ ಅಥವಾ ಗೋಪಾಲಕ ಅದರತ್ತ ನೋಡುವ ನೋಟ ಥೇಟ್ ಅಸ್ಪಶ್ಯತಾಚರಣೆಯಂತೆಯೇ ಇರುತ್ತದೆ.
ಅಂದರೆ ಆತ ಸತ್ತ ಆ ದನವನ್ನು ಅಸ್ಪಶ್ಯನನ್ನು ಮುಟ್ಟದಿರುವಂತೆ ಮುಟ್ಟದೆ ಅದರ ವಿಲೇವಾರಿಗಾಗಿ ಆಚರಣೆಯಂತೆ ದಲಿತರನ್ನು ಹುಡುಕುತ್ತಾನೆ. ದಲಿತ ಸಮುದಾಯದ ಯಾರಾದರೂ ಸಿಗುತ್ತಾರಾ ಎಂದು ಹುಡುಕಿ ನಂತರ ಅದನ್ನು ಆತ ಹೂಳಿಸುತ್ತಾನೆ ಅಥವಾ ತಿನ್ನುವವರು ಅಕಸ್ಮಾತ್ ಸಿಕ್ಕರೆ ಅವರಿಗೆ ಕೊಡುತ್ತಾನೆ. ಇಲ್ಲಿ ರೈತರು ತಿನ್ನುವವರಿಗೆ ಯಾಕೆ ಕೊಡುತ್ತಾರೆ ಎಂದರೆ ಅದನ್ನು ಹೂಳಲು ಸ್ಥಳ ಇಲ್ಲದಿರುವುದರಿಂದ ಅಥವಾ ಅದು ಕೂಡ ಅದನ್ನು ವಿಲೇವಾರಿಮಾಡುವ ಒಂದು ಸಹಜ ವಿಧಾನವಷ್ಟೆ. ಸದ್ಯದ ವಾಸ್ತವವೆಂದರೆ ಗೋವುಗಳನ್ನು ಸಾಗಿಸುವಾಗ ದಾಳಿಮಾಡುವ ಗೋರಕ್ಷಕರು ಗೋವುಗಳು ಸತ್ತಾಗ ಸೃಷ್ಟಿಯಾಗುವ ಈ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಸತ್ತ ಗೋವನ್ನು ವಿಲೇವಾರಿ ಮಾಡಬೇಕಾದ ಪರ್ಯಾಯ ಕ್ರಮಗಳ ಬಗ್ಗೆ ಅದಕ್ಕೆ ಪ್ರತ್ಯೇಕ ಸ್ಮಶಾನ, ಸಾಗಿಸಲು ಪ್ರತ್ಯೇಕ ವಾಹನ, ಹೂಳಲು ಅಥವಾ ಸತ್ತ ಗೋವನ್ನು ಎತ್ತಲು ಜನ ಇವೆಲ್ಲವನ್ನು ಗೋರಕ್ಷಕರು ಒದಗಿಸುವುದೇ ಇಲ್ಲ ಅಥವಾ ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು, ಸಲಹೆಯನ್ನು ಗೋರಕ್ಷಕರು ನೀಡುವುದೇ ಇಲ್ಲ.
ಇನ್ನು ಗೋವು ಸತ್ತಾಗ ಈ ಕತೆಯಾದರೆ ಅದು ಉಪಯೋಗ ಕಳೆದುಕೊಂಡಾಗ ಮತ್ತೊಂದು ಕತೆ. ಗೋವು ಬಡಕಲಾದಾಗ, ಹಾಲು ಕರೆಯದಾದಾಗ, ಗೊಡ್ಡು ಆದಾಗ ಸಹಜವಾಗಿ ಅದನ್ನು ರೈತ ಮಾರಲೇಬೇಕಾಗುತ್ತದೆ. ಆರ್ಥಿಕ ಚಟುವಟಿಕೆಯ ಭಾಗವಾದ ಗೋವನ್ನು ಯಾವೊಬ್ಬ ರೈತನೂ ಅದು ‘ದೇವರು’ ಎಂದು ಪೂಜೆ ಮಾಡುತ್ತಾ ಮನೆಯಲ್ಲಿ ಇಟ್ಟುಕೊಳ್ಳುವುದು ಆಗುವುದಿಲ್ಲ.
ಬದಲಿಗೆ ಅದನ್ನು ಆತ ತಿನ್ನುವವರಿಗೋ ಮತ್ತೊಬ್ಬರಿಗೋ ಮಾರಲೇಬೇಕಾಗುತ್ತದೆ. ಆ ಮೂಲಕ ಆತ ಹಣ ಗಳಿಸುತ್ತಾನೆ. ಲಾಭ ಪಡೆಯುತ್ತಾನೆ. ಪ್ರಶ್ನೆಯೇನೆಂದರೆ ರೈತನ ಈ ಸಮಸ್ಯೆಗೆ ಅಂದರೆ ಅದು ಗೊಡ್ಡು ಆದಾಗ, ಉಪಯೋಗ ಕಡಿಮೆಯಾದಾಗ ಮಾರದಿರುವಂಥ ಲಾಭದಾಯಕ ಪರ್ಯಾಯ ಮಾರ್ಗ? ಊಹ್ಞೂಂ, ಈ ಹಂತದಲ್ಲೂ ಕೂಡ ಗೋರಕ್ಷಕರು ಕ್ರಮಗಳನ್ನು ಸೂಚಿಸುವುದಿಲ್ಲ. ಅಂತಹ ಹಸುವಿಗೆ ಒಂದಕ್ಕೆ ಎರಡು ನಾವು ಕೊಡುತ್ತೇವೆ ಎಂದು ರೈತನ ಸಹಾಯಕ್ಕೆ ದಿಢೀರ್ ಧಾವಿಸುವುದಿಲ್ಲ. ಬದಲಿಗೆ ಅದೇ ರೈತ ಉಪಯೋಗವಿಲ್ಲದ ಆ ಹಸುವನ್ನು ಅಥವಾ ಎತ್ತನ್ನು ಯಾರಿಗೆ ಮಾರುತ್ತಾನೆ? ಸಾಗಿಸುವವರು ಯಾರು? ಯಾವ ಜನ? ಎಂದು ರಕ್ಷಕರು ಕಾಯುತ್ತಿರುತ್ತಾರೆ ದಿಢೀರ್ ದಾಳಿಮಾಡಲು ಸಜ್ಜಾಗುತ್ತಾರೆ.
ಈ ಸಂದರ್ಭದಲ್ಲಿ ಮತ್ತೊಂದು ಪ್ರಶ್ನೆ ಅಂದರೆ ನಿರುಪಯೋಗಿ ಈ ಗೋವುಗಳನ್ನು ವಿಲೇವಾರಿ ಮಾಡುವ ಈ ಪ್ರಕ್ರಿಯೆಯಲ್ಲಿ ತಪ್ಪು(?) ರೈತನದ್ದು ಕೂಡ ಇರುತ್ತದೆಯಲ್ಲವೆ? ಆದರೆ ಗೋರಕ್ಷಕರು ಆತನ ಮೇಲೆ ಎಂದಾದರೂ ದಾಳಿ ನಡೆಸಿದ ಉದಾಹರಣೆ ಇದೆಯೇ!?
ಇನ್ನು ಗೋವಿನ ಚರ್ಮದ ಬಳಕೆ ಬಗ್ಗೆ ಹೇಳುವುದಾದರೆ ಎಲ್ಲ ರೀತಿಯ ಚರ್ಮ ವಾದ್ಯಗಳಲ್ಲಿ ಅಂದರೆ ದೇವಸ್ಥಾನ, ಜಾತ್ರೆಗಳಲ್ಲಿ ಬಳಸುವ ಡಮರು, ಡಕ್ಕೆ, ಡೋಲು, ತಮಟೆಗಳಿಂದ ಹಿಡಿದು ದೊಡ್ಡ ದೊಡ್ಡ ಸಂಗೀತ ಕಚೇರಿಗಳಲ್ಲಿನ ಡ್ರಮ್‌ಗಳವರೆಗೆ ಗೋವಿನ ಚರ್ಮದ ಬಳಕೆ ವ್ಯಾಪಕವಾಗಿ ಮುಂದುವರಿದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಮತ್ತು ಮಿಲಿಟರಿಯಲ್ಲಿಯೂ ಇಂತಹ ಚರ್ಮೋತ್ಪನ್ನಗಳ ಬಳಕೆ ಸಹಜವಾಗಿದೆ... ಇಲ್ಲಿ ಗೋವಿನ ಚರ್ಮರಹಿತವಾಗಿ ಚಪ್ಪಲಿ ಅಥವಾ ಶೂ ಅನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಇಲ್ಲ! ಶುದ್ಧ ಚರ್ಮದ ಚಪ್ಪಲಿಗೆ ಭಾರೀ ಬೆಲೆ ಇರುವುದರಲ್ಲಿಯೇ ಅರ್ಥವಾಗುತ್ತದೆ ಪಾದರಕ್ಷೆ ಉತ್ಪನ್ನಗಳ ಕ್ಷೇತ್ರದಲ್ಲಿ ಗೋವಿನ ಚರ್ಮಕ್ಕೆ ಅದೆಂತಹ ಬೇಡಿಕೆ ಇದೆ ಎಂಬುದು. ಹಾಗೆಯೇ ಲೆದರ್ ಬೆಲ್ಟ್ ಗೋವಿನ ಚರ್ಮ ಬಳಸುವ ಮತ್ತೊಂದು ಪ್ರಮುಖ ಉತ್ಪನ್ನ. ಒಂದಂತೂ ಸ್ಪಷ್ಟ, ಎಲ್ಲ ಬಗೆಯ ಚರ್ಮೋತ್ಪನ್ನಗಳಲ್ಲಿ ಗೋವಿನ ಚರ್ಮದ ಬಳಕೆ ವ್ಯಾಪಕವಾಗಿದೆ ಮತ್ತು ಸಹಜವಾಗಿದೆ. ಪ್ರಶ್ನೆ ಏನೆಂದರೆ ಗೋವನ್ನು ಕೊಲ್ಲದೆಯೇ ಗೋವಿನ ಚರ್ಮ ಪಡೆಯಲಾಗುತ್ತದೆಯೇ? ಖಂಡಿತ ಇಲ್ಲ. ಅಂದಹಾಗೆ ಇಲ್ಲಿ ಗೋವಿನ ಚರ್ಮವನ್ನು ಪೂರೈಸುವವರು ಪರೋಕ್ಷವಾಗಿ ಅದೇ ರೈತರು ಅಥವಾ ಗೋಪಾಲಕರು.
ದುರಂತವೆಂದರೆ ಇಲ್ಲಿಯೂ ಅಷ್ಟೆ ಚರ್ಮ ತೆಗೆಯುವ ದಲಿತರ ಮೇಲೆ ಹಲ್ಲೆಯಾಗುತ್ತದೆ ಆದರೆ ಅದನ್ನು ಪೂರೈಸುವ ರೈತರ ಮೇಲೆ, ಸಂಸ್ಕರಿಸುವ ಚರ್ಮೋತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳ ಮೇಲೆ, ಬಳಸುವ ಗ್ರಾಹಕರ ಮೇಲೆ ಗೋರಕ್ಷಕರಿಂದ ಹಲ್ಲೆಯಾಗುವುದಿಲ್ಲ! ಅಥವಾ ಚರ್ಮದಿಂದ ರೈತನಿಗೆ ಬರುವ ಆದಾಯಕ್ಕೆ, ಕಾರ್ಖಾನೆಗಳಿಗೆ ಬರುವ ಆದಾಯಕ್ಕೆ ಪರ್ಯಾಯ ಪರಿಹಾರವನ್ನು ಲಾಭವನ್ನು ಗೋರಕ್ಷಕರು ನೀಡುವುದಿಲ್ಲ. ಕ್ರಮಗಳನ್ನು ಸೂಚಿಸುವುದಿಲ್ಲ.
ಇದು ಗೋವಿನ ಬಗೆಗಿನ ಪ್ರಾಮಾಣಿಕ ಕಾಳಜಿಯೇ?. ಖಂಡಿತ ಅಲ್ಲ. ಬದಲಿಗೆ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ತಾರತಮ್ಯಾಧರಿತ ದೌರ್ಜನ್ಯ!