ಸೂಕ್ಷ್ಮ ಮಾಹಿತಿ ಸೋರಿಕೆ ಮಾಧ್ಯಮಗಳಿಗಿದು ದೊಡ್ಡ ಸುದ್ದಿಯಲ್ಲ!

Update: 2016-08-27 18:01 GMT

ಇದೊಂದು ಶಹಬ್ಬಾಸ್ ಎನ್ನಬಹುದಾದ ಮೀಡಿಯಾ ಮ್ಯಾನೇಜ್‌ಮೆಂಟ್. ಇಡಿಯ ದೇಶ ಆಮ್ನೆಸ್ಟಿ, ರಮ್ಯಾ, ಸಿಂಧುವಿನ 13 ಕೋಟಿ, ಜೈಶಾ ಒಲಿಂಪಿಕ್ಸ್‌ನಲ್ಲಿ ನೀರಿಲ್ಲದೆ ನಿತ್ರಾಣಗೊಂಡದ್ದರ ಬಗ್ಗೆ ಹಿಗ್ಗಾಮುಗ್ಗ ಚರ್ಚೆ ಮಾಡುತ್ತಿರುವಾಗ ಈ ಮುಸುಕಿನ ಅಡಿಯಲ್ಲೆ ಕೇಂದ್ರ ಸರಕಾರ ದೊಡ್ಡದೊಂದು ಕಂಟಕದ ಬೀಸುವ ಕತ್ತಿಯಿಂದ ಪಾರಾಗಿಬಿಟ್ಟಿದೆ.

ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಸಿದ ಮಹತ್ವದ ದಾಖಲೆಯೊಂದುಹಾದಿಬೀದಿಯಲ್ಲಿ ರಂಪ ಮಾಡುತ್ತಿರುವಾಗ, ಬೇರಾವುದೇ ಸರಕಾರ ಇರುತ್ತಿದ್ದರೂ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ದೇಶತುಂಬ ತುಂಬಿರುವ ದೇಶಭಕ್ತರ ಕೈನಲ್ಲಿ ಛೀ-ಥೂ ಅನ್ನಿಸಿಕೊಳ್ಳಬೇಕಿತ್ತು. ಆದರೆ, ಕತ್ತಲೆ ಆವರಿಸಿದೆ. ಮಾತಾಡಬೇಕಾದ ಮಾಧ್ಯಮಗಳ ಬಾಯಲ್ಲಿ ಭರಪೂರ ಅವಲಕ್ಕಿ ತುಂಬಿಕೊಂಡು, ಬಾಯಾಡಿಸಲಾಗುತ್ತಿಲ್ಲ!
‘ದಿ ಆಸ್ಟ್ರೇಲಿಯನ್’’ಪತ್ರಿಕೆಯ ಅಸೋಸಿಯೇಟ್ ಎಡಿಟರ್ ಕೆಮರಾನ್ ಸ್ಟೀವರ್ಟ್ ಒಂದು ಸೊಓಂೀಟಕ ತನಿಖಾ ವರದಿ ಪ್ರಕಟಿಸಿದ್ದಾರೆ. ಭಾರತದ ಮಹತ್ವಾಕಾಂಕ್ಷೆಯ ಇಪ್ಪತ್ತೆದು ಸಾವಿರ ಕೋಟಿ ರೂಪಾಯಿ ವೆಚ್ಚದ ಜಲಾಂತರ್ಗಾಮಿ ಯೋಜನೆಯ ಸೂಕ್ಷ್ಮ ಮಾಹಿತಿಗಳೆಲ್ಲ ಹಾದಿ-ಬೀದಿಯಲ್ಲೀಗ ತಿರುಗಾಡುತ್ತಿವೆ ಎಂಬ ಮಾಹಿತಿ ಈ ವರದಿಯ ಮೂಲಕ ಜಗಜ್ಜಾಹೀರಾಗಿದೆ.

ಫ್ರೆಂಚ್  ಜಲಾಂತರ್ಗಾಮಿ ನಿರ್ಮಾಣ ಸಂಸ್ಥೆ DCNSನ ಸ್ಕಾರ್ಪಿಯನ್ ಜಲಾಂತರ್ಗಾಮಿ ತಂತ್ರಜ್ಞಾನವನ್ನು ಬಳಸಿಕೊಂಡು, ಭಾರತೀಯ ನೌಕಾಪಡೆಗೆ 6 ಜಲಾಂತರ್ಗಾಮಿಗಳನ್ನು ನಿರ್ಮಿಸುವ ಯೋಜನೆ ಇದು. ಈ ಯೋಜನೆಯಡಿ ಮೊದಲ ಜಲಾಂತರ್ಗಾಮಿ ‘‘ಕಾಲ್ವಾರಿ’’ ಈಗಾಗಲೇ ನಿರ್ಮಾಣ ಪೂರ್ಣಗೊಂಡು ಮೇ ತಿಂಗಳಿನಿಂದೀಚೆಗೆ ಪ್ರಾಯೋಗಿಕ ಬಳಕೆಯಲ್ಲಿದೆ. ಇನ್ನುಳಿದ ಐದು ಜಲಾಂತರ್ಗಾಮಿಗಳು ಒಂಭತ್ತು ತಿಂಗಳ ಅಂತರದಲ್ಲಿ ನೌಕಾಪಡೆಗೆ ಸೇರ್ಪಡೆಗೊಳ್ಳಬೇಕಿವೆ. ಮುಂದಿನ ದಶಕದಲ್ಲಿ ಭಾರತೀಯ ನೌಕಾಪಡೆಯ ಪ್ರಮುಖ ಅಸ ಇದಾಗಬೇಕಿತ್ತು.

ದುರದೃಷ್ಟವಶಾತ್, ಈ ಅತ್ಯಾಧುನಿಕ ಯುದ್ಧಸಾಮರ್ಥ್ಯಗಳಿರುವ ಜಲಾಂತರ್ಗಾಮಿಗೆ ಸಂಬಂಸಿದ ಎಲ್ಲ ವಿವರಗಳಿರುವ ಸುಮಾರು 22,400 ಪುಟಗಳ ದಾಖಲೆ ಈಗ ಸಾರ್ವಜನಿಕವಾಗಿ ಲಭ್ಯವಿದ್ದು, ಅದು ಪಾಕಿಸ್ತಾನ, ಚೀನಾದಂತಹ ನೆರೆರಾಷ್ಟ್ರಗಳ ಕೈಗೆ ಸಿಕ್ಕರೆ, ನಮ್ಮ ದೇಶದ ರಕ್ಷಣೆಗೆ ಸಂಬಂಸಿ ಬಹುದೊಡ್ಡ ಲೋಪ ಆಗಲಿದೆ. ರಾಡಾರ್ ಮೂಲಕ ಪತ್ತೆ ಆಗದಿರುವ ಸಾಮರ್ಥ್ಯ (stealth technology ), ಅದರ ಗುಪ್ತವಾರ್ತೆ ಸಂವಹನದ ತರಂಗಾಂತರ ವಿವರಗಳು, ಶಕ್ತಿ-ಸಾಮರ್ಥ್ಯ, ಯುದ್ಧ ಸಾಮರ್ಥ್ಯ ಸೇರಿದಂತೆ ಎಲ್ಲ ವಿವರಗಳೂ ಈ ಬಹಿರಂಗಗೊಂಡಿರುವ ಮಾಹಿತಿಯಲ್ಲಿ ಸೇರಿವೆ.
ದೇಶದಿಂದ ಹೊರಗೆ, ಫ್ರಾನ್ಸಿನಲ್ಲೇ ಈ ಮಾಹಿತಿ ಸೋರಿಕೆ ಆಗಿದ್ದು, ಆಗ್ನೇಯ ಏಷ್ಯಾದ ದೇಶವೊಂದರ ಮೂಲಕ ಅದು ಬಹಿರಂಗಗೊಂಡಿದೆ ಎಂದು ‘‘ದಿ ಆಸ್ಟ್ರೇಲಿಯನ್’’ಪತ್ರಿಕೆ ಹೇಳುತ್ತಿದೆಯಾದರೂ, ಈ ಸೋರಿಕೆಯಿಂದ ನಮ್ಮ ದೇಶದ ಸುಮಾರು ಇಪ್ಪತ್ತೆದು ಸಾವಿರ ಕೋಟಿ ರಕ್ಷಣಾ ಹೂಡಿಕೆ ನೀರಿನಲ್ಲಿ ಹೋಮ ಆದಂತಾಗಿದೆ. 2011ರಲ್ಲೇ ಫ್ರಾನ್ಸಿನ ಕಂಪೆನಿಯಿಂದ ಈ ಸೋರಿಕೆ ಸಂಭವಿಸಿದೆ ಎನ್ನಲಾಗುತ್ತಿದ್ದು, ಅಲ್ಲಿಂದ ಇಲ್ಲಿಯ ತನಕ ಅದು ನಮ್ಮ ದೇಶದ ಗಮನಕ್ಕೂ ಬಂದಿಲ್ಲ; ಆಸ್ಟ್ರೇಲಿಯಾದ ಪತ್ರಿಕೆಯೊಂದು ಈ ಬಗ್ಗೆ ಗಮನಿಸಿ ವರದಿ ಮಾಡುತ್ತಿದೆ ಎಂಬುದು ಬಹಳ ಕಳವಳಕಾರಿ ಅಂಶ.

ಭಾರತದ ಜಲಾಂತರ್ಗಾಮಿ ಪಡೆ ಸದಾ ವಿವಾದಗಳಲ್ಲೇ ಮುಳುಗಿದೆ. ರಶ್ಯಾ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ‘ಸಿಂಧು ಘೋಷ್’ ಮಾದರಿಯ ಎರಡು ಜಲಾಂತರ್ಗಾಮಿಗಳಾದ ‘ಸಿಂಧುರತ್ನ’ ಮತ್ತು ‘ಸಿಂಧುರಕ್ಷಕ್’ 2014ರಲ್ಲಿ ಅವಘಡಕ್ಕೆ ತುತ್ತಾದ ಬಳಿಕ ಅಂದಿನ ನೌಕಾಸೇನಾ ಮುಖ್ಯಸ್ಥ ಅಡ್ಮಿರಲ್ ಡಿ.ಕೆ. ಜೋಷಿ ರಾಜೀ ನಾಮೆ ಇತ್ತಿದ್ದರು. ಈ ರಶ್ಯಾ ಮಾದರಿ ಮತ್ತು ಜರ್ಮನ್ ತಂತ್ರಜ್ಞಾನದ ‘ಶಿಶುಮಾರ್’ ಮಾದರಿ ಜಲಾಂತರ್ಗಾಮಿಗಳನ್ನು ಬಳಕೆಯಿಂದ ತೆಗೆದುಹಾಕಿ ಈ ಸ್ಕಾರ್ಪಿಯಾನ್ ಮಾದರಿಯ ಫ್ರೆಂಚ್  ಜಲಾಂತರ್ಗಾಮಿಗಳನ್ನು ನೌಕಾಸೇನೆಗೆ ಬಳಸಿಕೊಳ್ಳಲು ದೇಶ ಯೋಜಿಸಿತ್ತು. ಆದರೆ ಈಗ ಈ ಇಡೀ ಯೋಜನೆ ಮಣ್ಣುಪಾಲಾದಂತಾಗಿದೆ.
ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು, ಈ ತಪ್ಪುನಮ್ಮಲ್ಲಾದದ್ದಲ್ಲ, ಏನೇನೆಲ್ಲ ಬಹಿರಂಗಗೊಂಡಿದೆ, ಅದರ ಪರಿಣಾಮಗಳೇನು ಎಂಬ ಬಗ್ಗೆ ತನಿಖೆ ಮಾಡುವುದಾಗಿ ಹೇಳಿದ್ದಾರೆ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News