ತ್ರಿವಿಧ ದಾಸೋಹಿಗೆ ಜನ್ಮ ಶತಾಬ್ದಿ ನಮನ

Update: 2016-08-27 18:34 GMT

ಇಂದು ರಾಷ್ಟ್ರದ ಶೈಕ್ಷಣಿಕ ನಕ್ಷೆಯಲ್ಲಿ ಸುತ್ತೂರು ಮಠದ ಜೆ.ಎಸ್.ಎಸ್. ವಿದ್ಯಾ ಸಂಸ್ಥೆ ಒಂದು ಗುರುತ್ವಾಕರ್ಷಣ ಬಿಂದುವಾಗಿ ಕಂಗೊಳಿಸುತ್ತಿರುವುದಕ್ಕೆ ರಾಜೇಂದ್ರ ಸ್ವಾಮೀಜಿಯವರ ಶೈಕ್ಷಣಿಕ ಅಭಿವೃದ್ಧಿ ಕುರಿತ ಕಾಳಜಿ ಮತ್ತು ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವ ಸಂಕಲ್ಪಶಕ್ತಿ, ಸಮರ್ಪಣ ಮನೋಭಾವಗಳೇ ಕಾರಣ ಎಂದರೆ ಅದು ಅತಿಶಯೋಕ್ತಿಯಾಗಲಾರದು.

‘‘ಅವ್ವಾ...ಹೊಟ್ಟೆ ಸುಡ್ತಿದೆ..ಹಸಿವು..ಹಸಿವು..’’

ವಿದ್ಯಾರ್ಥಿ ನಿಲಯದ ಸೂರಿನ ಗಳುಗಳನ್ನು ಎಣಿಸುತ್ತಾ ಹೊಟ್ಟೆ ಮೇಲೆ ಒದ್ದೆಬಟ್ಟೆ ಹಾಕ್ಕೊಂಡು ಮಲಗಿದ್ದ ವಿದ್ಯಾರ್ಥಿಗಳ ಆಕ್ರಂದನ.

ಸ್ವಾಮಿಗಳ ಕರುಳು ಚುರ್ ಎಂದಿತು. ಉಗ್ರಾಣ ಖಾಲಿಯಾಗಿದ್ದರಿಂದ ಅಂದು ವಿದ್ಯಾರ್ಥಿಗಳ ಅನ್ನದಾಸೋಹಕ್ಕೂ ತತ್ವಾರವಾಗಿತ್ತು. ಕಡಲೆಪುರಿ ಹಸಿವನ್ನು ಹಿಂಗಿಸಿರಲಿಲ್ಲ. ರಾತ್ರಿ ಒಂದೆರಡು ಜಾವ ಕಳೆದಿರಬೇಕು. ಕತ್ತಲಲ್ಲೇ ಜೋಳಿಗೆ ಹಿಡಿದು ಹೊರಟರು ಸ್ವಾಮಿಗಳು. ಶಿವನ ಕರುಣೆ ದೊಡ್ಡದು. ಜೋಳಿಗೆ ತುಂಬಿತು. ಮಧ್ಯರಾತ್ರಿಯಲ್ಲೇ ಅಡುಗೆ ಮಾಡಿಸಿ ಹಸಿದ ವಿದ್ಯಾರ್ಥಿಗಳಿಗೆ ಉಣಬಡಿಸಿದರು. ಮರುದಿನ ವಿದ್ಯಾರ್ಥಿಗಳು, ಪ್ರಕೃತಿಯ ಕರುಣೆಯಿಂದ ಮುಂಜಾನೆ ನಳನಳಿಸುವ ಗಿಡಬಳ್ಳಿಗಳಂತೆ ಕಂಗೊಳಿಸುತ್ತ ಶಾಲೆಗೆ ನಡೆದರು. ಸ್ವಾಮೀಜಿ ಧನ್ಯತೆಯಿಂದ ಪುಳುಕಿತರಾದರು. ಇದು ಕಟ್ಟುಕಥೆಯಲ್ಲ. ನಿಜ ಸಂಗತಿ. ನಡೆದದ್ದು 1941ರ ಸುಮಾರಿನಲ್ಲಿ, ಚಾಮರಾಜನಗರದ ವಿದ್ಯಾರ್ಥಿ ನಿಲಯದಲ್ಲಿ. ಸ್ವಾಮಿಗಳು, ಸುತ್ತೂರು ಶ್ರೀಕ್ಷೇತ್ರ ಜಗದ್ಗುರು ವೀರಸಿಂಹಾಸನ ಮಠದ ಪೂಜ್ಯ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು.

 ಅನ್ನದಾಸೋಹ ಮತ್ತು ಅಕ್ಷರದಾಸೋಹ ಎರಡಕ್ಕೂ ಪ್ರಸಿದ್ಧವಾಗಿರುವ, ಈಗ ಜ್ಞಾನ ದಾಸೋಹದ ಬೃಹತ್ ಕೇಂದ್ರವಾಗಿ ಬೆಳೆದು ನಿಂತಿರುವ ಸುತ್ತೂರು ಮಠದ ಈ ಮಹತ್ತರ ಸಾಧನೆಗೆ ಬೀಜಾಂಕುರ ಮಾಡಿದವರು ಶಿವರಾತ್ರಿ ರಾಜೇಂದ್ರ ಸ್ವಾಮಿಗಳು. ಯುವ ಸನ್ಯಾಸಿಯಾಗಿ ಕಾಶಿಯಲ್ಲಿ ಗುರುಕುಲ ಶಿಕ್ಷಣ ಮುಗಿಸಿ ಊರಿಗೆ ವಾಪಸುಹೊರಟು ನಿಂತಿದ್ದ ರಾಜೇಂದ್ರರಿಗೆ ಗುರುಕರುಣೆ ಉಪದೇಶಿಸಿದ್ದು.

‘‘ನೀವೊಬ್ಬರೆ ವಿದ್ಯಾವಂತರಾದರೆ ಸಾಲದು. ಊರಿಗೆ ಮರಳಿದ ಮೇಲೆ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಬೇಕು, ನೀವೊಂದು ದೀಪವಾಗಿ ಬೆಳಗಬೇಕೆನ್ನುತ್ತೀರೋ? ಅಥವಾ ನಿಮ್ಮಿಂದ ಸಹಸ್ರಾರು ದೀಪಗಳು ಬೆಳಗಬೇಕೆನ್ನುತ್ತೀರೋ? ಯೋಚಿಸಿ..

ಸುತ್ತೂರಿನ ಮಲ್ಲಿಕಾರ್ಜುನ ದೇವರು ಮತ್ತು ಶ್ರೀಮತಿ ಮರಮ್ಮಣ್ಣಿ ದಂಪತಿಗಳ ಸುಪುತ್ರ ರಾಜೇಂದ್ರರು ಜನಿಸಿದ್ದು 1916ರ ಆಗಸ್ಟ್ 29ರಂದು. ಹನ್ನೆರಡನೆಯ ವಯಸ್ಸಿಗೇ, 1928ರಲ್ಲಿ ಸುತ್ತೂರು ಮಠದ ಹಿರಿಯ ಸ್ವಾಮೀಜಿ ಶಿವಯೋಗ ಶಿವರಾತ್ರೀಶ್ವರ ಸ್ವಾಮಿಗಳ ಕೃಪೆಗೆ ಪಾತ್ರರಾಗಿ ಶ್ರಿಮಠದ ಉತ್ತರಾಧಿಕಾರಿಯಾದರು. ಹಿರಿಯ ಸ್ವಾಮಿಗಳ ಆಣತಿ, ಆಶಯಗಳಂತೆ ಮೈಸೂರು ಮತ್ತು ಕಾಶಿಯಲ್ಲಿ ಉನ್ನತ ವ್ಯಾಸಂಗ ನಡೆಸಿ ಸಂಸ್ಕೃತ ಮತ್ತು ಆಂಗ್ಲ ಭಾಷೆಗಳಲ್ಲಿ ಪರಿಣತಿ ಪಡೆದರು. ವೇದ, ಆಗಮ ಮೊದಲಾಗಿ ಧರ್ಮ ಶಾಸ್ತ್ರಗಳನ್ನು ತಲಸ್ಪರ್ಶಿ ಅಧ್ಯಯನಮಾಡಿದರು. ಧರ್ಮ ಮತ್ತು ಸಂಸ್ಕೃತಿಗಳನ್ನು ಕರತಲಾಮಲಕಮಾಡಿಕೊಂಡರು. ತಾವು ಓದುತ್ತಿದ್ದಾಗಲೇ ಗುಪ್ತವಾಗಿ ಬಡ ವಿದ್ಯಾರ್ಥಿಗಳಿಗೆ ಸಹಾಯಮಾಡುತ್ತಿದ್ದ ರಾಜೇಂದ್ರರಿಗೆ ಪಂಚಗವಿ ಮಠದ ಗೌರಿಶಂಕರ ಸ್ವಾಮಿಗಳು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗು ಎಂದು ನೀಡಿದ ಉಪದೇಶ ಸದಾಕಾಲ ಕಿವಿಗಳಲ್ಲಿ ಗುನುಗುನಿಸುತ್ತಿತ್ತು. 1941ರಲ್ಲಿ ಚಾಮರಾಜನಗರದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯ ಆರಂಭಿಸಿದರು. ಬಡ ವಿದಾರ್ಥಿಗಳ ಅನ್ನದಾಸೋಹ-ಅಕ್ಷರ ದಾಸೋಹಗಳಿಗಾಗಿ ಗಾಡಿ ಕಟ್ಟಿಕೊಂಡು ಊರೂರು ಸುತ್ತಿದರು, ದವಸಧಾನ್ಯ ಸಂಗ್ರಹಿಸಿ ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಂಡರು. 1945ರಲ್ಲಿ ಚಾಮರಾಜನಗರದಲ್ಲಿ ಉಚಿತ ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. ಜ್ಞಾನದಾಸೋಹಕ್ಕೆ ನಾಂದಿಯಾಗಿ 1954ರಲ್ಲಿ ಮೈಸೂರಿನಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾ ವಿದ್ಯಾಪೀಠ(ಜೆ.ಎಸ್.ಎಸ್.) ಸ್ಥಾಪಿಸಿದರು. ಪ್ರೌಢಶಾಲೆಯವರೆಗೆ ಶಿಕ್ಷಣ ನೀಡುವ ಸಣ್ಣ ವಿದ್ಯಾ ಸಂಸ್ಥೆಯಾಗಿ ಅಂದು ಪ್ರಾರಂಭಗೊಂಡ ಜೆ.ಎಸ್.ಎಸ್. ವಿದ್ಯಾಪೀಠ, ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ದಾರ್ಶನಿಕತೆ ಮತ್ತು ದೂರದೃಷ್ಟಿಗಳಿಂದಾಗಿ ಇಂದು ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ಉನ್ನತ ಶಿಕ್ಷಣ ನೀಡುವ ಬೋಧಿ ವೃಕ್ಷವಾಗಿ ಬೆಳೆದಿರುವುದು ಪವಾಡಸದೃಶವಾದುದು. ಮೆಡಿಕಲ್, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಪ್ರಥಮ ದರ್ಜೆ ಕಾಲೇಜು, ಕಾನೂನು ಕಾಲೇಜು, ಔಷಧ ವಿಜ್ಞಾನ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು, ಸಂಸ್ಕೃತ ಪಾಠ ಶಾಲೆಗಳು ಹೀಗೆ ಈ ಬೋಧಿ ವೃಕ್ಷ ಹಲವಾರು ಶಾಖೋಪಶಾಖೆಗಳನ್ನು ಹೊಂದಿದೆ. ಸುತ್ತೂರು ಮಠದ ಶೈಕ್ಷಣಿಕ ಚಟುವಟಿಕೆಗಳು ಮೈಸೂರು ಮತ್ತು ಮೈಸೂರು ಜಿಲ್ಲೆಗೆ ಮಾತ್ರ ಸೀಮಿತಗೊಂಡಿಲ್ಲ. ಬೆಂಗಳೂರು, ಶಿವಮೊಗ್ಗ, ಹಾಸನ, ಮಂಡ್ಯ ಜಿಲ್ಲೆಗಳಲ್ಲೂ ಜೆ.ಎಸ್.ಎಸ್.ವಿದ್ಯಾ ಕೇಂದ್ರಗಳನ್ನು ಶ್ರೀಮಠ ಯಶಸ್ವಿಯಾಗಿ ನಡೆಸುತ್ತಿದೆ. ತಮಿಳುನಾಡಿನ ಊಟಿಯಲ್ಲೂ ವಿದ್ಯಾ ಕೇಂದ್ರವೊಂದನ್ನು ನಡೆಸಲಾಗುತ್ತಿದೆ. ಅಲ್ಲದೆ ಐಎಎಸ್, ಐಪಿಎಸ್ ಮೊದಲಾದ ಭಾರತೀಯ ಆಡಳಿತ ಸೇವಾಕಾಂಕ್ಷಿಗಳಿಗೆ ಈ ಪರೀಕ್ಷೆಗಳನ್ನು ಬರೆಯಲು ಅಗತ್ಯವಾದ ತರಬೇತಿ ನೀಡಲು ಬೆಂಗಳೂರಿನಲ್ಲಿ ‘ಜಸ್ಟೀಸ್’ ಸಂಸ್ಥೆ ಸ್ಥಾಪಿಸಿ ತರಬೇತಿ ಕೇಂದ್ರವೊಂದನ್ನು ನಡೆಸುತ್ತಿರುವುದು ಸುತ್ತೂರು ಶ್ರೀಮಠದ ಶಿಕ್ಷಣಪರ ಕಾಳಜಿಗೆ ಮತ್ತೊಂದು ಹೆಗ್ಗುರುತಾಗಿದೆ. ರೈತರಿಗೆ ನೆರವಾಗಲು ಕೃಷಿ ವಿಜ್ಞಾನ ಕೇಂದ್ರ, ಬಡಬಗ್ಗರ ಆರೋಗ್ಯ-ಆರೈಕೆಗಳಿಗಾಗಿ ಆಸ್ಪತ್ರೆ, ವೃದ್ಧರಿಗಾಗಿ ಆಶ್ರಯ ಧಾಮ -ಹೀಗೆ ಬೆಳೆಯುತ್ತದೆ ಸುತ್ತೂರು ಮಠದ ಸೇವಾಕೇಂದ್ರಿತ ಸಾಧನೆಗಳ ಯಾದಿ.

ಮಾನವ ಕುಲದ ಅಭಿವೃದ್ಧ್ದಿಗೆ ಅನ್ನ-ಅರಿವು-ಆರೋಗ್ಯ ಅತ್ಯಾವಶ್ಯಕವಾದ ಮೂಲಧಾತುಗಳು ಎಂದು ದೃಢವಾಗಿ ನಂಬಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಶ್ರದ್ಧಾಪೂರ್ವಕವಾದ ಅಹರ್ನಿಶಿ ಕಾಯಕದಿಂದ ಈ ತ್ರಿವಿಧ ದಾಸೋಹಕ್ಕೆ ಭದ್ರವಾದ ಬುನಾದಿ ನಿರ್ಮಿಸಿದರು. ಇಂದು ರಾಷ್ಟ್ರದ ಶೈಕ್ಷಣಿಕ ನಕ್ಷೆಯಲ್ಲಿ ಸುತ್ತೂರು ಮಠದ ಜೆ.ಎಸ್.ಎಸ್. ವಿದ್ಯಾ ಸಂಸ್ಥೆ ಒಂದು ಗುರುತ್ವಾಕರ್ಷಣ ಬಿಂದುವಾಗಿ ಕಂಗೊಳಿಸುತ್ತಿರುವುದಕ್ಕೆ ರಾಜೇಂದ್ರ ಸ್ವಾಮೀಜಿಯವರ ಶೈಕ್ಷಣಿಕ ಅಭಿವೃದ್ಧಿ ಕುರಿತ ಕಾಳಜಿ ಮತ್ತು ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವ ಸಂಕಲ್ಪಶಕ್ತಿ, ಸಮರ್ಪಣ ಮನೋಭಾವಗಳೇ ಕಾರಣ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಜೆ.ಎಸ್.ಎಸ್.ಇಂಜಿನಿಯರಿಂಗ್ ಕಾಲೇಜ್ ಭಾರತದಲ್ಲಿಯೇ ಅತ್ಯುತ್ತಮ ಇಂಜಿನಿಯರಂಗ್ ಶಿಕ್ಷಣ ಸಂಸ್ಥ್ಥೆ ಎಂಬ ಖ್ಯಾತಿಗೆ ಪಾತ್ರವಾಗಿದ್ದು ಹೊರದೇಶಗಳ ವಿದಾರ್ಥಿ ಗಳೂ ಪ್ರವೇಶ ಪಡೆಯಲು ಕಾತರರಾಗಿರುವುದು ಇಲ್ಲಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿ ನಿಲಯಗಳು ನಾಡಿಗೆ ಸಮೃದ್ಧ ಫಲ ನೀಡುತ್ತಿರುವುದನ್ನು ತಮ್ಮ ಜೀವಿತಾವಧಿಯಲ್ಲೇ ಕಂಡು ಧನ್ಯರಾದ ಮಹಾನುಭಾವರು, ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳು. ನಾಡಿನ ಖ್ಯಾತ ಅರ್ಥ ಶಾಸ್ತ್ರಜ್ಞರಾದ ಡಾ.ಡಿ.ಎಂ.ನಂಜುಂಡಪ್ಪ, ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪ, ಭಾಷಾ ಶಾಸ್ತ್ರಜ್ಞ ಡಾ.ಚಿದಾನಂದ ಮೂರ್ತಿ ಮೊದಲಾದವರು ಜೆ.ಎಸ್.ಎಸ್. ಹಿರಿಯ ವಿದ್ಯಾರ್ಥಿಗಳೆಂಬ ಅದರ ಹಿರಿಮೆಗೆ ಮತ್ತೊಂದು ಸಾಕ್ಷಿ.

ಶ್ರೀ ಶಿವರಾತ್ರೀಶ್ವರ ಸಂಸ್ಥೆ ಸಾಂಸ್ಕೃತಿಕ ರಂಗದಲ್ಲೂ ನಡೆಸುತ್ತಿರುವ ಕೈಂಕರ್ಯ ಗಮನಾರ್ಹವಾದದ್ದು. ಜೆ.ಎಸ್.ಎಸ್.ಸಂಗೀತ ಸಭಾ ರಸಿಕರಿಗೆ ಸಂಗೀತದ ರಸದೌತಣ ಉಣಬಡಿಸುವುದರಲ್ಲಿ ಕ್ರಿಯಾಶೀಲ ವಾಗಿದೆ. ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಸಂಸ್ಥೆ ಮೂಲಕ ನಡೆಸುತ್ತಿರುವ ಪುಸ್ತಕ ಪ್ರಕಟಣಾ ಕಾರ್ಯ ಸ್ತುತ್ಯಾರ್ಹವಾದುದಾಗಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಜಯಂತಿ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ನಾಡಿನ ಪ್ರತಿಭಾವಂತ ಕಲಾವಿದರನ್ನೂ ವಿದ್ವಜ್ಜನರನ್ನೂ ಸನ್ಮಾನಿಸುವುದು ಇದರ ವೈಶಿಷ್ಟವಾಗಿದೆ.

ನಾಡಿನಲ್ಲಲ್ಲದೆ ವಿದೇಶಗಳಲ್ಲೂ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿದ ಕೀರ್ತಿ ಸುತ್ತೂರು ಮಠದ್ದು. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು 1986ರಷ್ಟು ಹಿಂದೆಯೇ ಇಂಗ್ಲೆಂಡ್, ಅಮೆರಿಕಗಳಲ್ಲಿ ಧರ್ಮ ಪ್ರಚಾರ ಪ್ರವಾಸ ಕೈಗೊಂಡಿದ್ದರೆಂಬದು ಇಲ್ಲಿ ಉಲ್ಲೇಖನಾರ್ಹ. ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಮಹತ್ವಪೂರ್ಣ ಕೊಡುಗೆ ಮತ್ತು ತ್ಯಾಗಪೂರ್ಣ ಸೇವೆಯನ್ನು ಮನಗಂಡು ಮೈಸೂರು ವಿಶ್ವವಿದ್ಯಾನಿಲಯ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ.

ಅಸದೃಶ ರೀತಿಯಲ್ಲಿ ಜೀವನಪೂರ್ತಿ ಧಾರ್ಮಿಕ ಮತ್ತು ಶೈಕ್ಷಣಿಕ ಕಾಯಕದಲ್ಲಿ ತೊಡಗಿಕೊಂಡು ನಾಡುನುಡಿಗಳಿಗೆ ಅದ್ವಿತೀಯ ಸೇವೆ ಸಲ್ಲಿಸಿರುವ ಸ್ಮರಣೀಯ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು 1986ರ ಡಿಸೆಂಬರ್ 6ರಂದು ಶಿವೈಕ್ಯರಾದರು. ನಂತರ ಸುತ್ತೂರು ಮಠದ ಪೀಠಾಧೀಶರಾದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶ್ರೀಮಠದ ಕೀರ್ತಿ ಪರಂಪರೆಗೆ ಚ್ಯುತಿ ಬರದಂತೆ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಗುಣಮೌಲ್ಯ ಸಂಪನ್ನತೆಗಳಿಂದ ಸಾಂಗೋಪಾಂಗವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದಾಗಿದೆ.

 ಈ ವರ್ಷ ಸುತ್ತೂರು ವೀರಸಿಂಹಾಸನ ಮಠದ ಇಪ್ಪತ್ಮೂರನೆ ಜಗದ್ಗುರುಗಳಾದ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜನ್ಮ ಶತಾಬ್ದಿ. ವರ್ಷದುದ್ದಕ್ಕೂ ಮೈಸೂರಿನಲ್ಲಿರುವ ಸುತ್ತೂರು ಮಠದಲ್ಲಿ ಹಾಗೂ ರಾಜ್ಯ ನಾನಾನಕಡೆಗಳಲ್ಲಿ ಶ್ರದ್ಧಾಭಕ್ತಿ, ಸಡಗರಸಂಭ್ರಮಗಳಿಂದ ರಾಜೇಂದ್ರ ಸ್ವಾಮಿಗಳ ಜಯಂತ್ಯುತ್ಸವವನ್ನು ಆಚರಿಸಲಾ ಗುತ್ತಿದೆ. ರಾಜೇಂದ್ರ ಜ್ಯೋತಿ ಯಾತ್ರೆಯು ವಿವಿಧ ರಾಜ್ಯಗಳಲ್ಲಿ 114 ದಿನಗಳ ಸಂಚಾರ ಮುಗಿಸಿ ಮೈಸೂರು ತಲುಪಿದೆ. ಜನವರಿ 2ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜನ್ಮಶತಾಬ್ದಿ ಆಚರಣೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ