ಮಾಯವಾದ ‘ಜಯ್’ಗಾಗಿ ಹುಡುಕಾಟ ‘ಕ್ಲೀನ್ ಆಫ್ ಮಾರ್ಶಲ್’ಗಳಿಂದ ದಂಡ ವಸೂಲಿ!

Update: 2016-08-29 18:41 GMT

ಒಂದು ಹುಲಿಯ ಕಥೆ
ಮುಂಬೈಯಲ್ಲೀಗ ಚಿರತೆ ಮತ್ತು ಹುಲಿಗಳು ಪ್ರವಾಸಿಗರ ನಡುವೆ ಸುದ್ದಿ ಮಾಡಿವೆ. ಸಮೀಪದ ಥಾಣೆಯ ಮುರ್ಬಾಡದಲ್ಲಿ ಜನರಿಗೆ ಭಯ ಹುಟ್ಟಿಸಿದ ಚಿರತೆಯೊಂದನ್ನು ವನವಿಭಾಗದ ಶಾರ್ಪ್ ಶೂಟರ್‌ಗಳು ಆಗಸ್ಟ್ 24ರಂದು ಸಂಜೆಗೆ ಕೊಂದು ಹಾಕಿದರು. ಅರಣ್ಯ ಇಲಾಖೆಯೇ ಆ ಘಟನೆಯ ಎರಡು ದಿನಗಳ ಮೊದಲಿಗೆ ಆ ಚಿರತೆ ಕಂಡರೆ ಗುಂಡು ಹಾಕಿ ಕೊಲ್ಲಲು ಆದೇಶಿಸಿತ್ತು. ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸುಮಾರು ನೂರು ಜನರ ತಂಡ ಮುರ್ಬಾಡ್ ಅರಣ್ಯದಲ್ಲಿ ಆ ಚಿರತೆಯ ಹುಡುಕಾಟ ನಡೆಸುತ್ತಿತ್ತು. ಅದು ನರಮಾಂಸ ಭಕ್ಷಣೆ ಮಾಡುತ್ತಿದ್ದ ಚಿರತೆ. ಅದೀಗ ಸತ್ತು ಹೋಯಿತು.
ಇನ್ನೊಂದೆಡೆ ಮಹಾರಾಷ್ಟ್ರ ಸರಕಾರವು ಜನಪ್ರಿಯ ಹುಲಿಯೊಂದು ಕಾಣೆಯಾಗಿರುವ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ‘ಜಯ್’ ಹೆಸರಿನ ಈ ಹುಲಿ ಕಳೆದ ಆರು ತಿಂಗಳಿನಿಂದ ನಾಪತ್ತೆಯಾಗಿದ್ದು ನೂರಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರೂ ಇನ್ನೂ ಯಶಸ್ಸು ದೊರೆತಿಲ್ಲ. ಕುತ್ತಿಗೆಯಲ್ಲಿ ರೇಡಿಯೋ-ಕಾಲರ್ ಅಳವಡಿಸಿದ ನಂತರ ಸ್ಯಾಟಲೈಟ್‌ನಿಂದ ಅದರ ಓಡಾಟವನ್ನು ತಿಳಿಯಲಾಗುತ್ತಿತ್ತು. ಆದರೆ ಈಗ ಸ್ಯಾಟಲೈಟ್ ಸಿಗ್ನಲ್ ಯಾವುದೇ ಸುಳಿವು ನೀಡುತ್ತಿಲ್ಲ. ಹಾಗಿದ್ದರೆ ಈ ಹುಲಿಯ ಮೃತ್ಯು ಆಗಿರಬಹುದೇ? ಅರಣ್ಯಮಂತ್ರಿ ಸುಧೀರ್ ಮುಂಗಟೀವಾರ್ ಈ ಪ್ರಕರಣದ ಸಿಬಿಐ ತನಿಖೆಗೆ ಕೇಂದ್ರವನ್ನು ಆಗ್ರಹಿಸಿದ್ದಾರೆ. ಅಮಿತಾಭ್‌ರ ಶೋಲೆಯ ಪಾತ್ರದ ‘ಜಯ್’ ಹೆಸರನ್ನು ಈ ಹುಲಿಗೆ ಇರಿಸಲಾಗಿತ್ತು.
 

2013ರಲ್ಲಿ ತನ್ನ ಮೂಲ ನಿವಾಸವಾದ ನಾಗ್‌ಝಿರಾ ಅಭಯಾರಣ್ಯ ದಿಂದ ಅದು ನಾಪತ್ತೆಯಾಗಿತ್ತು. ಆ ನಂತರ 150 ಕಿ.ಮೀ. ದೂರದ ಉಮ್ರೆಡ್ -ಕರಹಾಂಡ್ಲಾ ಅಭಯಾರಣ್ಯದಲ್ಲಿ ಆ ಹುಲಿ ಸಿಕ್ಕಿತು. ನಂತರ ಮತ್ತೆ ಕಾಣೆಯಾಗಿದೆ. ದೇಶದಲ್ಲಿ ಅತಿಹೆಚ್ಚು ಫೋಟೊಗಳನ್ನು ಈ ಹುಲಿಯದ್ದೇ ಕ್ಲಿಕ್ಕಿಸಿದ್ದಾರೆ. 250 ಕಿಲೋ ಭಾರದ ಈ ರಾಯಲ್ ಟೈಗರ್ ಕೇವಲ ಮಹಾರಾಷ್ಟ್ರ ಮಾತ್ರವಲ್ಲ ವಿಶ್ವದಲ್ಲೇ ಗಮನಸೆಳೆದಿತ್ತು. ವಾಸ್ತವದಲ್ಲಿ ಈ ಕ್ಷೇತ್ರವು ಐದು ಅಭಯಾರಣ್ಯಗಳನ್ನು ಒಟ್ಟುಗೂಡಿ ಸುತ್ತದೆ. ಅವುಗಳು ತಾಡೋಬಾ, ನಾಗ್‌ಝೀರಾ, ಪೆಂಚ್, ಉಮ್ರೆಡ್ ಮತ್ತು ಕರಹಾಂಡ್ಲಾ. ಆದರೆ ಅನೇಕ ಸಮಯದಿಂದ ‘ಜಯ್’ ಹುಲಿಯ ಯಾವುದೇ ಸುಳಿವು ಸಿಗುತ್ತಿಲ್ಲವಂತೆ. ಇದೀಗ ಪ್ರವಾಸಿಗರಿಗೆ ಈ ಹುಲಿಯ ನಾಪತ್ತೆ ಬಹಳ ದುಃಖವಾಗಿದೆ. ನೂರಕ್ಕೂ ಹೆಚ್ಚು ಜನರ ಹುಡುಕಾಟ ಇನ್ನೂ ಫಲ ನೀಡಿಲ್ಲ. ಇದೀಗ ಅರಣ್ಯ ಮಂತ್ರಿ ಸುಧೀರ್ ಮುಂಗಟಿವಾರ್ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ದಿಲ್ಲಿಗೆ ಹೋಗಿಬಂದರು. ‘ಜಯ್’ಹುಲಿ ಮರಣ ಹೊಂದಿರಬಹುದೆಂದು ವಿಶ್ವಾಸ ಯಾರಿಗೂ ಬರುತ್ತಿಲ್ಲ! ಅದು ಇನ್ನೆಲ್ಲಾದರೂ ದೂರ ಹೋಗಿರಬಹುದೇ....?

* * *
ಮನಪಾ ಚುನಾವಣೆ ಬಹಿಷ್ಕಾರ!: ಪೊಲೀಸ್ ಪತ್ನಿಯರ ಎಚ್ಚರಿಕೆ
ಮುಂಬೈ ಪೊಲೀಸ್‌ವಾಲಾರ ಪತ್ನಿಯರು ಸರಕಾರದ ವಿರುದ್ಧ ತಮ್ಮ ಹೊಸ ರೀತಿಯ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಸರಕಾರ ನಮಗೆ ನಮ್ಮ ಅಧಿಕಾರದ ಮನೆಗಳನ್ನು ಒದಗಿಸಬೇಕು. ಇಲ್ಲವಾದರೆ ಮುಂದಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನಾವು ಮತದಾನ ಮಾಡಲು ಹೋಗಲಾರೆವು ಎಂದಿದ್ದಾರೆ. ಈ ಮೂಲಕ ಪತ್ನಿಯರು ರಾಜ್ಯ ಸರಕಾರದ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರ ಪೊಲೀಸ್ ಪತ್ನಿಯರ ಗುಂಪು ಹೇಳುವಂತೆ ಈ ತನಕ ಇವರಿಗೆ ಕೇವಲ ಆಶ್ವಾಸನೆ ಮೇಲೆ ಆಶ್ವಾಸನೆಗಳು ಸಿಕ್ಕಿವೆಯಂತೆ. ಆದರೆ ಬೇಡಿಕೆ ಇನ್ನೂ ಈಡೇರಿಲ್ಲ. ಮನಪಾ ಚುನಾವಣೆಯ ಮೊದಲು ಮನೆ ದೊರೆಯದಿದ್ದರೆ ಚುನಾವಣಾ ಬಹಿಷ್ಕಾರ ಹಾಕುವೆವು ಎಂದಿದ್ದಾರೆ ಈ ಪತ್ನಿಯರು. ಮಹಾರಾಷ್ಟ್ರ ಪೊಲೀಸ್ ಪತ್ನಿ ಗುಂಪಿನಲ್ಲಿ ಮುಂಬೈಯಲ್ಲಿ 10 ಸಾವಿರದಷ್ಟು ಸದಸ್ಯರಿದ್ದರೆ, ಥಾಣೆಯಲ್ಲಿ ಎರಡೂವರೆ ಸಾವಿರದಷ್ಟು ಸದಸ್ಯರಿದ್ದಾರೆ. ತಮ್ಮ ಬೇಡಿಕೆ ಮುಂದಿಟ್ಟ ಈ ಗುಂಪಿನ ಅಧ್ಯಕ್ಷೆ ಯಶಶ್ರೀ ಪಾಟೀಲ್‌ರ ನೇತೃತ್ವದಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಆಝಾದ್ ಮೈದಾನದಲ್ಲಿ ಧರಣಿ ಹೂಡಿದ್ದರು. ಪೊಲೀಸರಿಗೂ 8 ಗಂಟೆಯ ಡ್ಯೂಟಿ ನೀಡುವಂತೆ ಈಗಲೂ ಆಗ್ರಹಿಸುತ್ತಿದ್ದಾರೆ. ಈಗಿರುವ ಪೊಲೀಸ್ ಕಾಲನಿಗಳ ಮನೆ ತುಂಬಾ ಶಿಥಿಲಗೊಂಡಿವೆ. ಹೀಗಾಗಿ ಅನೇಕ ಪೊಲೀಸರು ದೂರದೂರದ ಉಪನಗರಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ಅಲ್ಲಿಂದ ಮುಂಬೈಗೆ ಬಂದು ಹೋಗುವುದಕ್ಕೆ ತುಂಬಾ ಸಮಯ ಹಿಡಿಯುತ್ತದೆ. ಇವರಿಗೆಲ್ಲ ಮುಂಬೈಯಲ್ಲೇ ಮನೆಗಳನ್ನು ಒದಗಿಸಬೇಕು. ಮನೆ ಎಲ್ಲಿ ಮಾಡಿಕೊಡಬೇಕು ಎನ್ನುವುದು ಸರಕಾರ ನಿರ್ಧರಿಸಬೇಕು. ಸೇವಾ ನಿವೃತ್ತಿಯ ನಂತರ ತಡವಾಗಿ ಬರುವ ಪೆನ್ಶನ್ ಸಮಸ್ಯೆ ಬಗ್ಗೆ ಹರಿಸಬೇಕು. ಕೇಂದ್ರ ನೌಕರರ ರೀತಿಯಲ್ಲಿ ಮಹಾರಾಷ್ಟ್ರ ಪೊಲೀಸರಿಗೂ 7ನೆ ವೇತನ ಆಯೋಗದಂತೆ ವೇತನ ಸಿಗಬೇಕು. ಉತ್ತಮ ವೈದ್ಯಕೀಯ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈ ಗುಂಪು ಇರಿಸಿದೆ.
* * *
ಸಮುದ್ರ ತೀರಗಳಲ್ಲಿ ಅಸುರಕ್ಷತೆಗೆ ಕೋರ್ಟ್ ತರಾಟೆ
ಮುಂಬೈಯ ಸಮುದ್ರ ತೀರಗಳಲ್ಲಿ ಹಲವು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆಗಳನ್ನು ಮುಂದಿಟ್ಟು ಸುರಕ್ಷಾ ವ್ಯವಸ್ಥೆ ಬಗ್ಗೆ ಸರಕಾರ ಇನ್ನೂ ಯಾಕೆ ನಿಧಾನ ಗತಿ ಅನುಸರಿಸುತ್ತಿದೆ ಎಂದು ಬಾಂಬೆ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ‘‘ನ್ಯಾಯಾಲಯವು ಸರಕಾರದ ಬಳಿ 2006ರಲ್ಲಿ ಮಂಜೂರಾದ ನಿರ್ಧಾರಗಳನ್ನು ಇನ್ನೂ ಯಾಕೆ ಜಾರಿಗೆ ತಂದಿಲ್ಲ?’’ ಎಂದು ಪ್ರಶ್ನಿಸಿದೆ.

ಜಸ್ಟೀಸ್ ಎ.ಎಸ್. ಓಕ್ ಮತ್ತು ಎ.ಎ.ಸಯೀದ್ ಅವರು ಒಂದು ಜನಹಿತ ಅರ್ಜಿಯ ವಿಚಾರಣೆ ನಡೆಸುತ್ತಾ 2006ರಿಂದ 2016ರ ತನಕ ಸರಕಾರವು ಮಂಜೂರಾದ ನಿರ್ಧಾರಗಳನ್ನು ಜಾರಿಗೆ ತರಲು ತಡಮಾಡಿದ್ದೇಕೆ ಎಂದು ಕೇಳಿದ್ದಾರೆ. ಇದೀಗ ಮೂರು ತಿಂಗಳ ಒಳಗೆ ಇವನ್ನು ಜಾರಿಗೆ ತರುವ ವಿಷಯವಾಗಿ ಸರಕಾರ ಹೆಜ್ಜೆ ಇಡಬೇಕೆಂದು ಸೂಚಿಸಿದ್ದು ಆಗಸ್ಟ್ ಕೊನೆಯ ವಾರ ಮತ್ತೆ ವಿಚಾರಣೆ ನಡೆಯಲಿದೆ. ಸಮುದ್ರ ತೀರಗಳಲ್ಲಿ ಗಸ್ತು ಹೆಚ್ಚಿಸುವುದು, ಲೈಫ್‌ಗಾರ್ಡ್‌ಗಳನ್ನು ನಿಯುಕ್ತಿಗೊಳಿಸುವುದು. ಸಂಬಂಧಿತ ಉಪಕರಣಗಳನ್ನು ಇರಿಸುವುದು, ಆಳ ಸಮುದ್ರದ ತನಕ ಪ್ರವಾಸಿಗರು ಹೋಗುವುದನ್ನು ತಡೆಯುವುದಕ್ಕೆ ಎಚ್ಚರಿಕೆ ಬೋರ್ಡ್ ತೀರಗಳಲ್ಲಿ ಅಳವಡಿಸುವುದು...ಇತ್ಯಾದಿಗಳ ಬಗ್ಗೆ ಸರಕಾರ ಹೆಚ್ಚಿನ ಪ್ರಯತ್ನವನ್ನೇ ಕೈಗೊಂಡಿಲ್ಲದಿರುವುದು ನ್ಯಾಯಾಲಯ ಗಮನಿಸಿದೆ.
* * *
ಕೊಳಕಿನ ವಿರುದ್ಧ ‘ಕ್ಲೀನ್ ಆಫ್ ಮಾರ್ಶಲ್’ಗಳಿಂದ ದಂಡ
ಮುಂಬೈ ಮಹಾನಗರ ಪಾಲಿಕೆ ತನ್ನೆಲ್ಲಾ ವಾರ್ಡ್‌ಗಳಲ್ಲಿ ‘ಕ್ಲೀನ್ ಆಫ್ ಮಾರ್ಶಲ್’ಗಳನ್ನು ನಿಯುಕ್ತಿಗೊಳಿಸಿದೆ. ಈ ಮಾರ್ಶಲ್‌ಗಳು ಕೊಳಕು ಕಸಕಡ್ಡಿ ರಸ್ತೆಯಲ್ಲಿ ಎಸೆಯುವ, ಉಗುಳುವ ಜನರನ್ನು ಹಿಡಿದು ಅವರಿಂದ ದಂಡ ವಸೂಲಿ ಮಾಡುತ್ತಾರೆ. ಈ ದಂಡದ ಹಣ ನೂರು ರೂ.ಗಳಿಂದ ಹಿಡಿದು ಒಂದು ಸಾವಿರ ರೂ.ಗಳ ತನಕವೂ ಇರುತ್ತದೆ. ಮುಂಬೈಯಾದ್ಯಂತ ಸುಮಾರು 700ಕ್ಕೂ ಅಧಿಕ ಮಾರ್ಶಲ್‌ಗಳು ರೈಲ್ವೆ ಸ್ಟೇಷನ್, ಪ್ರವಾಸಿ ಸ್ಥಳ.....ಇತ್ಯಾದಿ ಪರಿಸರಗಳಲ್ಲಿ ಇರುತ್ತಾರೆ.
‘ಕ್ಲೀನ್ ಆಫ್ ಮಾರ್ಶಲ್’ಗಳು ಮುಂಬೈ ಜನರಿಂದ ಈಗಾಗಲೇ 1.34 ಕೋಟಿ ರೂ.ಗಳ ದಂಡ ವಸೂಲಿ ಮಾಡಿದ್ದಾರೆ. ಜುಲೈ 2016ರಿಂದ ಆರಂಭಗೊಂಡ ಅಭಿಯಾನದಲ್ಲಿ ಆಗಸ್ಟ್ 22ರ ತನಕ 60,967 ಜನರಿಂದ 1,34,82,400 ರೂ. ದಂಡ ವಸೂಲಿ ಮಾಡಲಾಗಿದೆ. ಸರ್ವಾಧಿಕ ದಂಡ ಬೋರಿವಲಿ ಆರ್/ಸೆಂಟ್ರಲ್ ವಾರ್ಡ್‌ನಲ್ಲಿ ವಿಧಿಸಲಾಗಿದೆ. ಇಲ್ಲಿ 18 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.
* * *
ತಬೇಲಾಗಳ 25 ಶೇ. ಹಾಲು ಸರಕಾರಕ್ಕೆ?
ಮುಂಬೈಯ ಅತಿದೊಡ್ಡ ಎಮ್ಮೆ ಹಟ್ಟಿಗಳಿರುವ (ತಬೇಲಾ) ಕ್ಷೇತ್ರ ಆರೆ ಕಾಲನಿ. ಇದೀಗ ಇವುಗಳ ಮೇಲೆ ಫಡ್ನವೀಸ್ ಸರಕಾರದ ಕಣ್ಣು ಬಿದ್ದಿದೆ. ಈ ತಬೇಲಾ ಮಾಲಕರು ಎಲ್ಲಾ ಸರಕಾರಿ ಲಾಭ ಪಡೆಯುತ್ತಾರೆ, ಆದರೆ ನಮಗೇನು ಕೊಡುತ್ತಾರೆ ಎನ್ನುತ್ತಿದೆ ಸರಕಾರ. ಇದೀಗ ಪಶುಕಲ್ಯಾಣ ಮತ್ತು ಹಾಲು ವಿಕಾಸ ಇಲಾಖೆಯು ಈ ತಬೇಲಾ ಮಾಲಕರಿಂದ ಒಟ್ಟು ಉತ್ಪಾದನೆಯಲ್ಲಿ ಶೇ. 5ರಷ್ಟು ಹಾಲಿನ ಭಾಗ ತಮಗೆ ನೀಡುವಂತೆ ಸೂಚನೆ ಮುಂದಿರಿಸಿದೆ. ಕೊಲಬಾ, ಲಾಲ್‌ಭಾಗ್, ಗ್ರ್ಯಾಂಟ್ ರೋಡ್.....ಇಂತಹ ಕ್ಷೇತ್ರಗಳಲ್ಲಿದ್ದ ತಬೇಲಾಗಳನ್ನು 1949ರಲ್ಲಿ ಗೋರೆಗಾಂವ್‌ನ ಸಮೀಪದ ಆರೆ ಕಾಲನಿಗೆ ಶಿಫ್ಟ್ ಮಾಡಲಾಗಿತ್ತು. ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಆರೆ ಕಾಲನಿಯ ಉದ್ಘಾಟನೆ ಮಾಡಿದ್ದರು. ಆಗ ಆರೆ ಕಾಲನಿ ಥಾಣೆ ಜಿಲ್ಲೆಯ ಭಾಗವಾಗಿತ್ತು. ದಟ್ಟ ಅರಣ್ಯದಿಂದ ಸುತ್ತುವರಿದ ಈ ಕ್ಷೇತ್ರದಲ್ಲಿ ಅಂದಿನ ದಿನಗಳಲ್ಲಿ ಓಡಾಡಲು ಭಯಪಡುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಆ ಸಮಯ 28 ಯೂನಿಟ್‌ನ ತಬೇಲಾವಾಲಾರನ್ನು ಸರಕಾರ ಆರೆ ಕ್ಷೇತ್ರಕ್ಕೆ ತಂದಿರಿಸಿತು. ಅಂದಿನ ಸರಕಾರ ಮತ್ತು ತಬೇಲಾವಾಲಾರ ಒಪ್ಪಂದದಂತೆ ಸರಕಾರವು ಆರೆಯಿಂದ ಯಾವ ಹಾಲನ್ನು ಖರೀದಿಸುವುದೋ ಅದರಲ್ಲಿ ತಬೇಲಾವಾಲಾರಿಗೆ 10 ಶೇಕಡಾ ಲಾಭ ನೀಡುವುದು ಎಂದಿತ್ತು. ಆಗ ಇಲ್ಲಿನ ಹಾಲಿನ ಉತ್ಪಾದನೆ ಸುಮಾರು ಒಂದು ಲಕ್ಷ ಲೀಟರ್. ಆದರೆ ಕ್ರಮೇಣ ಇಲ್ಲಿನ ತಬೇಲಾವಾಲಾರು ತಬೇಲಾ ಬಿಟ್ಟು ಪಲಾಯನಕ್ಕೆ ತೊಡಗಿದರು. ಇದರಿಂದ ಸರಕಾರಕ್ಕೆ ಹಾಲು ಸಿಗುವುದು ಕಡಿಮೆಯಾಯಿತು. ಅದೇ ಸಮಯ ಗ್ರಾಮೀಣ ಕ್ಷೇತ್ರಗಳಿಂದ ಸರಕಾರಕ್ಕೆ ಕಡಿಮೆ ಬೆಲೆಯಲ್ಲಿ ಹಾಲು ಸಿಗಲಾರಂಭಿಸಿದಾಗ ಸರಕಾರವು ಆರೆಯಿಂದ ಹಾಲು ಖರೀದಿಸುವುದನ್ನೇ ನಿಲ್ಲಿಸಿಬಿಟ್ಟಿತು.
1955ರಲ್ಲಿ ಆರೆಯಲ್ಲಿ 16,000 ಎಮ್ಮೆಗಳಿದ್ದವು. ಇಂದು ಇಲ್ಲಿ 17,000 ಎಮ್ಮೆಗಳಿವೆ. ಒಂದು ಲಕ್ಷ ಲೀಟರ್‌ಗೂ ಹೆಚ್ಚು ಹಾಲಿನ ಉತ್ಪಾದನೆಯಾಗುತ್ತಿದೆ. ಈ ತಬೇಲಾವಾಲಾರಿಗೆ ಸರಕಾರವು ಅಗ್ಗ ದರದಲ್ಲಿ ನೀರು ಮತ್ತು ವಿದ್ಯುತ್ ಪೂರೈಸುತ್ತಿದೆ. ಹಾಗೂ ಪ್ರತೀ ಎಮ್ಮೆಯ ಬಾಡಿಗೆ ಎಂದು 170-180 ರೂ. ವಸೂಲಿ ಕೂಡಾ ಮಾಡುತ್ತಿದೆ. ‘‘ಆರೆಯ ತಬೇಲಾವಾಲಾರು ಎಲ್ಲಾ ಸರಕಾರಿ ರಿಯಾಯತಿಗಳ ಲಾಭ ಪಡೆಯುತ್ತಿದ್ದಾರೆ. ಆದರೆ ಇದಕ್ಕಾಗಿ ಸರಕಾರಕ್ಕೆ ಏನೂ ಸಿಗುತ್ತಿಲ್ಲ. ಇದೀಗ ಒಟ್ಟು ಉತ್ಪಾದನೆಯ ಶೇ. 25 ಹಾಲು ಕೇಳುತ್ತಿದೆ. ಹಾಲು ನೀಡದಿದ್ದವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದೆಂದು ಸರಕಾರ ಕಾನೂನು ತಜ್ಞರನ್ನು ಕೇಳುತ್ತಿದೆ’’ ಎಂದು ಪಶುಪಾಲನಾ ಮಂತ್ರಿ ಮಹಾದೇವ ಜಾನ್ಕರ್ ತಿಳಿಸಿದ್ದಾರೆ. ಆದರೆ ಬೆಲೆ ಏರಿಕೆಯಿಂದಾಗಿ ಹಾಲಿನ ವ್ಯವಹಾರ ಮಾಡುವುದು ಈ ದಿನಗಳಲ್ಲಿ ಕಷ್ಟವಾಗುತ್ತಿದೆ. ಹೀಗಿರುವಾಗ ಸರಕಾರ ಹೊಸ ಶರ್ತ ಮುಂದಿರಿಸಿದರೆ ನಾವು ಉತ್ಪಾದನೆ ಬಂದ್ ಮಾಡುವ ಸ್ಥಿತಿ ಬರಬಹುದು ಎನ್ನುತ್ತಾರೆ ಆರೆ ಕಾಲನಿಯ ತಬೇಲಾ ಮಾಲಕರು.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ನಾಸ್ತಿಕ ಮದ