ವರ್ಣಾಶ್ರಮ ವ್ಯವಸ್ಥೆಗೆ ಸವಾಲಾದ ನಾರಾಯಣ ಗುರುಗಳು

Update: 2016-09-16 17:58 GMT

ಭಾಗ-3

1916ರಲ್ಲಿ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ’ ಸ್ಥಾಪನೆಯ ಮೂಲಕ ನಾರಾಯಣ ಗುರು ಚಳವಳಿ ಸಂಘರ್ಷದ ಹಾದಿಗೆ ಇಳಿಯಿತು. ಆಗ ಅವರಿಗೆ ಜೊತೆಯಾದವರು ಡಾ. ಪಲ್ಪು. ಪಲ್ಪುಮತ್ತು ಅವರಣ್ಣ ವೇಲು ಇಬ್ಬರೂ ಕೇರಳದ ಜಾತಿ ವ್ಯವಸ್ಥೆಗೆ ಬಲಿಯಾಗಿ ಹುಟ್ಟೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಎರಡೂ ಸಿಗದೆ, ಊರು ಬಿಟ್ಟು ಹೋದವರು.

ವೇಲು ಈಳವ ಜನಾಂಗದ ಮೊದಲ ಪದವೀಧರ. ಆತ ಮದ್ರಾಸ್‌ನಲ್ಲಿಯೇ ಕಲಿತು, ಅಲ್ಲಿಯೇ ಸರಕಾರಿ ನೌಕರಿ ಸೇರಿದರೆ, ಪಲ್ಪುಮದ್ರಾಸ್‌ನಲ್ಲಿ ಓದಿ ಮೈಸೂರಿನಲ್ಲಿ ಸರಕಾರಿ ವೈದ್ಯರಾಗು ತ್ತಾರೆ. ಈಳವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಕೋರುವ ಮೊದಲ ಮನವಿಯನ್ನು ತಿರುವಾಂಕೂರಿನ ದಿವಾನರಿಗೆ ಅರ್ಪಿಸುವ ಮೂಲಕ ಡಾ.ಪಲ್ಪುತನ್ನ ಹೋರಾಟ ಆರಂಭಿಸುತ್ತಾರೆ. ತಿರುವಾಂಕೂರಿನ ದಿವಾನರು, ಭಾರತದ ಆಗಿನ ವೈಸ್‌ರಾಯ್, ಬ್ರಿಟಿಷ್ ಪಾರ್ಲಿಮೆಂಟ್, ಕಾಂಗ್ರೆಸ್ ಪಕ್ಷ ಹಾಗೂ ಇಂಗ್ಲಿಷ್ ದಿನಪತ್ರಿಕೆಗಳಿಗೆ ಈಳವರ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಅವರು ಸತತ ಪ್ರಯತ್ನ ನಡೆಸುತ್ತಾರೆ.

ಅದಕ್ಕೆ ನಿರೀಕ್ಷಿತ ಫಲ ಸಿಗದಾಗ, ಬೆಂಗಳೂರಿನಲ್ಲಿ ಡಾ.ಪಲ್ಪು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಕೇರಳದ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದ ವಿವೇಕಾನಂದರು ‘‘ಆಧ್ಯಾತ್ಮಿಕ ನಾಯಕರೊಬ್ಬರ ನೇತೃತ್ವದಲ್ಲಿ ಸಾಮಾಜಿಕ ಚಳವಳಿಯನ್ನು ಹುಟ್ಟು ಹಾಕಿದರೆ ಮಾತ್ರ ಕೇರಳದಲ್ಲಿ ಪರಿವರ್ತನೆ ಸಾಧ್ಯ’’ ಎನ್ನುತ್ತಾರೆ. ಅಲ್ಲಿಂದ ಕೇರಳಕ್ಕೆ ಹಿಂದಿರುಗಿದ ಡಾ.ಪಲ್ಪುನಾರಾಯಣ ಗುರು ಗಳನ್ನು ಭೇಟಿ ಮಾಡುತ್ತಾರೆ. ಈ ಭೇಟಿಗೆ ಐತಿಹಾಸಿಕ ಮಹತ್ವವಿದೆ

ಇಬ್ಬರ ಮಿಲನದಿಂದಲೇ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ’ ಸ್ಥಾಪನೆಯಾಗುತ್ತದೆ. ಈಳವರಲ್ಲಿ ಧಾರ್ಮಿಕ ಮತ್ತು ಜಾತ್ಯತೀತ ಶಿಕ್ಷಣ ಹಾಗೂ ಉದ್ಯಮಶೀಲ ಮನೋಭಾವನೆಯನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು.

ಈ ಹಂತದಲ್ಲಿ ಕುಮಾರ ಆಶಾನ್ ಇವರಿಬ್ಬರ ಜೊತೆಯಾಗು ತ್ತಾರೆ. ಮೂಲತಃ ಕವಿ ಮತ್ತು ಲೇಖಕನಾದ ಆಶಾನ್ ತನ್ನ ಕಾವ್ಯ, ಬರಹ, ಭಾಷಣಗಳ ಮೂಲಕ ಚಳವಳಿಗೆ ಜೀವ ತುಂಬಿದವರು. ಅವರ ಸಂಪಾದಕತ್ವದ ವಿವೇಕೋದಯಂ ಪತ್ರಿಕೆ ಚಳವಳಿಯ ಮುಖವಾಣಿಯಾಗಿತ್ತು.

ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಅನ್ಯಾಯದ ವಿರುದ್ಧದ ಹೋರಾಟದ ಕಣಕ್ಕಿಳಿದ ಈಳವರು, ಆಗಲೇ ಸಾಕಷ್ಟು ಜಾಗೃತರಾಗಿ ದ್ದರು. ತಮ್ಮದೇ ದೇವಾಲಯಗಳು ಅವರ ಸಂಘಟನೆಗೆ ಶಕ್ತಿ ತುಂಬಿದ್ದವು. ಎಸ್‌ಎನ್‌ಡಿಪಿ ಕೈಗಾರಿಕಾ ಸಮ್ಮೇಳನ ಮತ್ತು ಮಹಿಳಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿತ್ತು. ಹಲವಾರು ಯುವಕರು ಮದ್ರಾಸ್ ಬೆಂಗಳೂರಿಗೆ ಹೋಗಿ ಇಂಗ್ಲಿಷ್ ಮತ್ತು ಆಯುರ್ವೇದ ವ್ಯಾಸಂಗ ಮಾಡಿ ಬಂದಿದ್ದರು.

ನಾರಾಯಣ ಗುರುಗಳ ದೂರದರ್ಶಿತ್ವ ಮತ್ತು ಕಾರ್ಯತಂತ್ರ ಅರಿವಾಗುವುದು ಇಲ್ಲಿ. ದೇವಸ್ಥಾನ ಪ್ರವೇಶಕ್ಕೆ ಅವರು ಹೋರಾಟ ನಡೆಸಲಿಲ್ಲ. ಬದಲಿಗೆ ಅವರೇ ದೇವಸ್ಥಾನಗಳನ್ನು ಸ್ಥಾಪಿಸಿದರು. ಆದರೆ ಅದೇ ರೀತಿ ಅವರು ಸ್ವತಂತ್ರವಾಗಿ ಶಾಲೆಗಳನ್ನು ಸ್ಥಾಪಿಸಲು ಸಾಧ್ಯ ಇರಲಿಲ್ಲ, ಶಾಲೆಗಳ ಸ್ಥಾಪನೆಗೆ ಸರಕಾರದ ಅನುಮತಿ ಬೇಕಿತ್ತು. ಅದಕ್ಕಾಗಿ ಸರಕಾರಿ ಶಾಲೆಗಳ ಪ್ರವೇಶದ ಹಕ್ಕಿನ ಹೋರಾಟಕ್ಕೆ ಅವರು ಚಾಲನೆ ನೀಡಿದರು.

ಶಾಲೆಗಳ ಪ್ರವೇಶಕ್ಕಾಗಿ ಎಸ್‌ಎನ್‌ಡಿಪಿ ಹೋರಾಟ ಪ್ರಾರಂಭಿಸಿ ದರೂ ಅದು ಅಷ್ಟೊಂದು ಸರಳವಾಗಿರಲಿಲ್ಲ. ಈಳವರಲ್ಲಿ ಬೆಳೆಯು ತ್ತಿರುವ ಜಾಗೃತಿ ನಂಬೂದಿರಿ ಮತ್ತು ನಾಯಕ್ ಜನಾಂಗದಲ್ಲಿ ದ್ವೇಷದ ಕಿಚ್ಚು ಹತ್ತಿಸಿತ್ತು. ದೇವಸ್ಥಾನ ಸ್ಥಾಪನೆಯ ಕಾಲದಲ್ಲಿ ಎದುರಾಗದ ವಿರೋಧ ಶಾಲೆಗಳ ಪ್ರವೇಶದ ಹಕ್ಕಿನ ಚಳುವಳಿಗೆ ಎದುರಾಗಿತ್ತು. ಎಸ್‌ಎನ್‌ಡಿಪಿ ಚಳವಳಿಯಲ್ಲಿ ಈ ಕಾಲ ನಿರ್ಣಾಯಕವಾದದ್ದು. ಆಗ ಎಲ್ಲೆಡೆ ನಾಯರ್-ಈಳವರ ಸಂಘರ್ಷ ನಡೆಯುತ್ತದೆ. ಈಳವ ಮಹಿಳೆಯರ ಮೇಲೆ ಬಹಿರಂಗವಾಗಿ ದೌರ್ಜನ್ಯವೆಸಗಲಾಗುತ್ತದೆ. ಎಸ್‌ಎನ್‌ಡಿಪಿಯನ್ನು ಬೆಂಬಲಿಸುವ ಪತ್ರಿಕೆಗಳ ಕಚೇರಿಯನ್ನು ಸುಟ್ಟು ಹಾಕಲಾಗುತ್ತದೆ.

ಚಳವಳಿಯ ಒತ್ತಡಕ್ಕೆ ಮಣಿದ ತಿರುವಾಂಕೂರು ದಿವಾನರು ಈಳವರಿಗೆ ಅವರದ್ಧೆ ಶಾಲೆಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಾರೆ. ಸರಕಾರಿ ಶಾಲೆಗಳಲ್ಲಿ ಎಲ್ಲಾ ಜಾತಿ ಜನರಿಗೆ ಮುಕ್ತ ಪ್ರವೇಶ ನೀಡುವ ಮಸೂದೆ ಜಾರಿಗೆ ಬರುತ್ತದೆ. ನಾರಾಯಣ ಗುರು ಚಳವಳಿಯಲ್ಲಿ ದೇವಸ್ಥಾನ ಸ್ಥಾಪನೆಗಿಂತಲೂ ಮುಖ್ಯವಾದ ಘಟನೆ ಇದು. ಇದು ಮುಖ್ಯವಾಗಿ ಕುಮಾರನ್ ಆಶಾನ್ ಮತ್ತು ಡಾ. ಪಲ್ಪುಅವರ ನಾಯಕತ್ವದ ಜಯ. ಆದರೆ, ಶೂದ್ರರು ಸರಕಾರಿ ಸೇವೆಗೆ ಸೇರುವ ಅವಕಾಶವನ್ನು ಕೊನೆಗೂ ತಮ್ಮ ಜೀವಮಾನದಲ್ಲಿ ನಾರಾಯಣ ಗುರುಗಳಿಗೆ ಕಾಣಲಾಗುವುದಿಲ್ಲ. 1936ರಲ್ಲಿ ಸರಕಾರ ಲೋಕಸೇವಾ ಆಯೋಗವನ್ನು ಸ್ಥಾಪಿಸಿ, ಉನ್ನತ ಹುದ್ದೆಗಳನ್ನು ಹೊರತುಪಡಿಸಿ, ಹಿಂದುಳಿದವರಿಗೆ ಶೇ.40ರಷ್ಟು ಮೀಸಲಾತಿಯನ್ನು ನೀಡುತ್ತದೆ. ಅಷ್ಟರಲ್ಲಿ ಗುರುಗಳು ಇಹಲೋಕವನ್ನು ತ್ಯಜಿಸಿದ್ದರು.

ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿನ ಮೀಸಲಾತಿ ಈಳವ ಜನಾಂಗದಲ್ಲಿ ಎರಡೂ ವರ್ಗಗಳ ಬುದ್ಧಿಜೀವಿಗಳ ಸೃಷ್ಟಿಗೆ ಕಾರಣವಾಯಿತು. ಸಾಹಿತಿಗಳು, ಪತ್ರಕರ್ತರು, ಶಿಕ್ಷಕರು ಮತ್ತು ಧಾರ್ಮಿಕ ನಾಯಕರದ್ದು ಒಂದು ಗುಂಪಾದರೆ, ವೈದ್ಯರು, ವಕೀಲರು, ಉದ್ಯಮಿಗಳು, ಆಡಳಿತಾಧಿಕಾರಿಗಳು ಮತ್ತು ರಾಜಕಾರಣಿಗಳು ಇನ್ನೊಂದು ಗುಂಪಿನಲ್ಲಿದ್ದರು. ಕೇರಳದಲ್ಲಿ ಶಿಕ್ಷಣದ ಪ್ರಸಾರದಲ್ಲಿ ಆರ್. ಶಂಕರ್ ಅವರದ್ದು ನಿರ್ಣಾಯಕ ಪಾತ್ರ. ಇವರು ಸ್ಥಾಪಿಸಿದ್ದ ‘ಶ್ರೀ ನಾರಾಯಣ ಟ್ರಸ್ಟ್’ 1952ರಲ್ಲಿಯೇ ನೂರಾರು ಶಾಲೆ, ಪಾಲಿಟೆಕ್ನಿಕ್, ಶಿಕ್ಷಕ ತರಬೇತಿ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ಹೊಂದಿದ್ದವು.

ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಈಳವರು ಅಭಿವೃದ್ಧಿ ಹೊಂದಿದ್ದರು. ಎಸ್‌ಎನ್‌ಡಿಪಿಯ ಮೊದಲ ಅಧಿವೇಶನದ ಕಾಲದಲ್ಲಿಯೇ ನಾರಾಯಣ ಗುರುಗಳು ಕೈಗಾರಿಕಾ ಸಮ್ಮೇಳನವನ್ನು ನಡೆಸಿದ್ದರು. ಆನಂತರ ಅದು ವಾರ್ಷಿಕ ಕಾರ್ಯಕ್ರಮವಾಯಿತು. ತೆಂಗಿನನಾರು ಉದ್ದಿಮೆ ಜನಪ್ರಿಯವಾಗತೊಡಗಿದ್ದು ಅದೇ ಕಾಲದಲ್ಲಿ. ಪ್ರತಿ ದೇವಾಲಯ, ಆಶ್ರಮ ಮತ್ತು ಮಂದಿರಗಳಲ್ಲಿ ತೆಂಗು ನಾರಿನ ಉದ್ದಿಮೆಯ ಘಟಕಗಳನ್ನು ಸ್ಥಾಪಿಸುವಂತೆ ಅವರು ಪ್ರೇರೇಪಿಸಿದ್ದರು. ಈಗ ತೆಂಗುನಾರಿನ ಉದ್ದಿಮೆಯಲ್ಲಿ ಕೇರಳ ದೇಶದಲ್ಲಿಯೇ ಏಕಸ್ವಾಮ್ಯವನ್ನು ಪಡೆದಿದೆ.

ಈ ಹಂತದಲ್ಲಿ ಎಸ್‌ಎನ್‌ಡಿಪಿ ಮುಂದಿನ ಹೋರಾಟವನ್ನು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಕೇಂದ್ರೀಕರಿಸುತ್ತದೆ. ಈ ಹೋರಾಟದಲ್ಲಿ ಅವರಿಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗಗಳು ಜೊತೆಯಾಗುತ್ತವೆ. ಈ ಮೂರು ಜನಾಂಗಗಳ ಒಟ್ಟು ಜನಸಂಖ್ಯೆ ತಿರುವಾಂಕೂರು ಸಂಸ್ಥಾನದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟಿತ್ತು. ತಿರುವಾಂಕೂರು ಸಂಸ್ಥಾನದಲ್ಲಿ 1888ರಲ್ಲಿಯೇ ವಿಧಾನಸಭೆ ರಚನೆಯಾಗಿ ಚುನಾವಣೆಗಳು ನಡೆಯುತ್ತಾ ಬಂದಿದ್ದರೂ, 1935ರವರೆಗೆ ನಡೆದ 15 ಚುನಾವಣೆಗಳಲ್ಲಿ ಶೇ.26ರಷ್ಟಿದ್ದ ಈಳವರಲ್ಲಿ ಒಬ್ಬರೂ ಕೂಡ ಆಯ್ಕೆಯಾಗಿರಲಿಲ್ಲ. ಶೇ.22ರಷ್ಟಿದ್ದ ಕ್ರಿಶ್ಚಿಯನ್ ಮತ್ತು ಶೇ.18ರಷ್ಟಿದ್ದ ಮುಸ್ಲಿಮರ ಪ್ರಾತಿನಿಧ್ಯ ಮೂರು-ನಾಲ್ಕರ ಗಡಿ ದಾಟಿರಲಿಲ್ಲ.

ಐದು ರೂಪಾಯಿ ತೆರಿಗೆ ನೀಡುವವರು ಮಾತ್ರ ಮತದಾನದ ಹಕ್ಕು ಪಡೆದಿರುವುದು ಈ ಅನ್ಯಾಯಕ್ಕೆ ಕಾರಣವಾಗಿತ್ತು. ಆ ಕಾಲದ ಭೂಒಡೆತನ ಬಹುಪಾಲು ನಾಯರ್ ಮತ್ತು ನಂಬೂದಿರಿಗಳ ಕೈಯಲ್ಲಿದ್ದ ಕಾರಣ ಉಳಿದ ಜನಾಂಗ ಮತದಾನದ ಹಕ್ಕನ್ನು ಪಡೆಯುವುದು ಅಸಾಧ್ಯವಾಗಿತ್ತು. ಇದನ್ನು ಪ್ರತಿಭಟಿಸಲೆಂದೇ ಮೂರು ಜನಾಂಗಗಳು ಕೂಡಿ ಸಂಯುಕ್ತ ರಾಜಕೀಯ ಸಂಘಟನೆಯನ್ನು ರಚಿಸಿಕೊಂಡು 1935ರ ಚುನಾವಣೆಯನ್ನು ಬಹಿಷ್ಕರಿಸಿದವು. ಈ ಹೋರಾಟದ ಕಾವಿಗೆ ಮಣಿದ ತಿರುವಾಂಕೂರು ಸಂಸ್ಥಾನ ಜಾತಿ ಪ್ರಮಾಣಕ್ಕೆ ಅನುಗುಣವಾಗಿ ರಾಜಕೀಯ ಮೀಸಲಾತಿ ಘೋಷಿಸಿತು. ಆದರೆ, ಈ ರಾಜಕೀಯ ಚಳವಳಿ ಮುಂದಿನ ದಿನಗಳಲ್ಲಿ ಕೇರಳದ ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾದಂತೆಯೇ ಎಸ್‌ಎನ್‌ಡಿಪಿ ಸಂಘಟನೆಯಲ್ಲಿ ಬಿರುಕು ಮೂಡಲು ಕೂಡ ಕಾರಣವಾಗಿದ್ದು ಮಾತ್ರ ದುರಂತ.

1936ರಲ್ಲಿ ಎಸ್‌ಎನ್‌ಡಿಪಿ ಸಂಘಟನಾ ಜಾಲ ವ್ಯಾಪಕವಾಗಿ ಹರಡಿತ್ತು. ಅದರ ಹತ್ತು ಯೂನಿಯನ್‌ಗಳು, 245 ಶಾಖೆಗಳು ಸ್ಥಾಪನೆಯಾಗಿದ್ದವು. 50,000ಕ್ಕೂ ಹೆಚ್ಚಿನವರು ಅದರ ಸಕ್ರಿಯ ಸದಸ್ಯರಾಗಿದ್ದರು. ಎಸ್‌ಎನ್‌ಡಿಪಿಯ ಮುಖ್ಯ ಉದ್ದೇಶಗಳು ಈಡೇರಿದ್ದವು. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಯೊಂದರ ಸಂಘಟನೆಯ ಮೇಲೆ ರಾಜಕೀಯ ನಾಯಕರ ಕಣ್ಣು ಬಿದ್ದಿತ್ತು. ಸಂಘಟನೆಯಲ್ಲಿದ್ದ ಅನೇಕರಲ್ಲಿ ರಾಜಕೀಯ ಆಕಾಂಕ್ಷೆಗಳು ಹುಟ್ಟಿಕೊಂಡಿದ್ದವು.

ನಾರಾಯಣ ಗುರುಗಳ ಸಾವಿನ ನಂತರ ಪರಸ್ಪರ ಭಿನ್ನ ವಿಚಾರಧಾರೆಯನ್ನು ಹೊಂದಿದ್ದ ನಾಯಕರು ಎಸ್‌ಎನ್ ಡಿಪಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಪಟ್ಟರು. ಮೊದಲನೆಯದಾಗಿ ಮೇಲ್ಜಾತಿ ಜನರ ವೈರಿ ಎಂದು ಬಗೆಯಲಾದ ಬ್ರಿಟಿಷರನ್ನು ಸ್ನೇಹಿತರೆಂದು ತಿಳಿದುಕೊಂಡಿದ್ದ ಮಿತವಾದಿ ಕೃಷ್ಣನ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕವೇ ಈಳವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕೆಂದು ಹೇಳುತ್ತಿದ್ದ ಕಾಂಗ್ರೆಸ್ ಒಲವಿನ ಟಿ.ಕೆ ಮಾಧವನ್ ಮತ್ತು ಸಿ.ಕೇಶವನ್, ಸಮಾಜವಾದಿ ಮತ್ತು ಪುರೋಗಾಮಿ ವಿಚಾರಧಾರೆಯ ಸಹೋದರ ಅಯ್ಯಪ್ಪನ್ ಅವರ ಸಮಾಜವಾದಿ-ಪುರೋಗಾಮಿ ವಿಚಾರಧಾರೆಗಳನ್ನು ಮೇಳೈಸಲು ಯತ್ನಿಸುತ್ತಿದ್ದ ಇನ್ನೊಂದು ಗುಂಪು ಇದರಲ್ಲಿ ಪ್ರಮುಖವಾದವುಗಳು. ಈ ಕೊನೆಯ ಗುಂಪನ್ನೇ ಕಮ್ಯೂನಿಸ್ಟ್‌ರೆಂದು ಕರೆಯಲಾಗುತ್ತಿತ್ತು.

ಕೇರಳದ ಕಮ್ಯೂನಿಸ್ಟ್ ಪಕ್ಷವನ್ನು ನಾರಾಯಣ ಗುರು ಚಳವಳಿಯ ಮುಂದುವರಿದ ಭಾಗವೆಂದು ಹೇಳಲು ಇತಿಹಾಸವೇ ಪುರಾವೆ. ಅಧಿಕೃತವಾಗಿ ನಾರಾಯಣ ಗುರು ಚಳವಳಿಗೆ ಎಸ್‌ಎನ್‌ಡಿಪಿಯೇ ಉತ್ತರಾಧಿಕಾರವನ್ನು ಪಡೆದಿದ್ದರೂ ಅದು ಕಮ್ಯೂನಿಸ್ಟ್ ಚಳವಳಿಗೆ ನಾಂದಿಯಾಗಿದ್ದನ್ನು ಇತಿಹಾಸ ಹೇಳುತ್ತದೆ. ಈ ಬೆಳವಣಿಗೆಗೆ ಮುಖ್ಯವಾಗಿ ಕಾರಣಕರ್ತರಾದವರು ಸಹೋದರ ಅಯ್ಯಪ್ಪನ್.

ಪ್ರಗತಿಪರ ಚಿಂತನೆಯ, ನೇರನಡೆನುಡಿಯ ಅಯ್ಯಪ್ಪನ್ ಹುಟ್ಟಿನಿಂದಲೇ ಹೋರಾಟಗಾರ ಮತ್ತು ಅಪ್ರತಿಮ ಧೈರ್ಯಶಾಲಿ. ಜಾತಿ ಶ್ರೇಣಿಯಲ್ಲಿ ಈಳವರಿಗಿಂತ ಕೆಳಗಿದ್ದ ಪುಲಯರ ಜೊತೆ ತಮ್ಮೂರಿನಲ್ಲಿ ಸಹಭೋಜನ ಮಾಡಿಸಿ ಜಾತಿಯಿಂದ ಬಹಿಷ್ಕೃತನಾದ ಅಯ್ಯಪ್ಪನ್ ಜಾತಿ ನಿರ್ಮೂಲನೆಯ ಪ್ರಬಲ ಪ್ರತಿಪಾದಕ. ಅಯ್ಯಪ್ಪನ್ ಅವರನ್ನು ಗುರುತಿಸಿದ ಗುರುಗಳು ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡುವ ಉದ್ಧೇಶ ಹೊಂದಿದ್ದರಂತೆ. ಮೂಲತಃ ನಾಸ್ತಿಕನಾದ ಅಯ್ಯಪ್ಪನ್ ‘ಸ್ವತಂತ್ರ ಸಮುದಾಯ ಪ್ರತಿಷ್ಠಾನ’ವನ್ನು ಸ್ಥಾಪಿಸಿ ‘ಸಹೋದರ’ ಎನ್ನುವ ಪತ್ರಿಕೆ ಪ್ರಾರಂಭಿಸಿ ಜಾತಿ ವಿನಾಶ ಚಳವಳಿಯನ್ನು ನಡೆಸುತ್ತಿದ್ದರು. ಅವರನ್ನು ‘ಪುಲಯರ ಅಯ್ಯಪ್ಪನ್’ ಎಂದು ಜನ ಗೇಲಿ ಮಾಡುತ್ತಿದ್ದರಂತೆ.

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News