ಎಪ್ಪತ್ತರ ‘ಯುವ’ ಕವಿ
‘‘ಈ ಜಗತ್ತಿನ ಗತ್ತಿಗೆ ಅಪ್ಪನ ದಾರಿಯೇ ಸರಿಯಿರಬಹುದು.
ನನ್ನ ದಾರಿ ಬೇರೆ ಅಷ್ಟೆ’’ -ಎಂದು ಸಡ್ಡು ಹೊಡೆದರೂ-
‘‘ಅಮ್ಮನ ಹೃದಯದಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು ನಾನು...’’.
ಓದಿದ್ದು ಚಿಂತಾಮಣಿಯಲ್ಲಿ...ಮುಂದೆ ಕವಿ ನಿಸಾರ್ ಅಹ್ಮದ್ ಅವರು ಬೋಧಿಸುತ್ತಿದ್ದ ದಿನಗಳ ಬೆಂಗಳೂರಿನ ಗ್ಯಾಸ್(ಗೌರ್ನಮೆಂಟ್ ಆರ್ಟ್ಸ್ ಆ್ಯಂಡ್ ಸೈನ್ಸ್)ಕಾಲೇಜಿನಲ್ಲಿ. ಗ್ಯಾಸ್ ಕಾಲೇಜಿನ ಹವಾದಲ್ಲೂ ನಿಸಾರ್ ಅಂಥವರ ಪ್ರಭಾವದ ಹವೆಯಿಂದಲೋ ಏನೋ ರೇಖಾಗಳ ಕನಸು ಕಾಣಬೇಕಾದ ವಯಸ್ಸಿನಲ್ಲ್ಲಿ ಲಕ್ಷ್ಮಣನಿಗೆ ಸಾಹಿತ್ಯಾಸಕ್ತಿ ಅಂಟಿಕೊಂಡು ಅದು ಕಥೆ ಬರೆಯುವವರೆಗೆ ಉಲ್ಭಣಿಸಿತು. ಜನಪ್ರಿಯ ಪತ್ರಿಕೆಯೊಂದರ ದೀಪಾವಳಿ ಸ್ಪರ್ಧೆಯಲ್ಲಿ ಕಥೆಯೊಂದಕ್ಕೆ ‘‘ಪ್ರಥಮ ಚುಂಬನದಲ್ಲೇ’’ ಬಹುಮಾನ ಸಿಕ್ಕಿ ಹೊಸ ದಿಗಂತವೊಂದು ಲಕ್ಷ್ಮಣನ ಮುಂದೆ ತೆರೆದುಕೊಂಡಿತು. ಹನುಮದ್ವಿಕಾಸಕ್ಕೆ ಎಲ್ಲಿಯ ಎಲ್ಲೆ?
ಚಿಂತಾಮಣಿಯ ಶಾಲೆಯೊಂದರಲ್ಲಿ ಹುಚ್ಚು ಖೋಡಿ ಪಡ್ಡೆ ಹುಡುಗಹುಡುಗಿಯರಿಗೆ ಪಾಠ ಹೇಳುತ್ತಾ, ಮಧ್ಯೆ ಮಧ್ಯೆ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಗೆ ಎಡೆತಾಕುತ್ತಾ, ಗಾಂಡಲೀನಾರುಗಳನ್ನು ಕಣ್‌ತುಂಬಿಸಿ ಕೊಳ್ಳುತ್ತಾ, ಕಾವ್ಯಕನ್ನಿಕೆಯೊಂದಿಗೆ ಕೋರ್ಟ್‌ಶಿಪ್ ನಡೆಸುವ ಸಾಹಸ...ಸೃಜನಶೀಲ ಪ್ರತಿಭೆ ಕೈಹಿಡಿಯಿತು. ಫಲ: ‘ಗೋಪಿ ಮತ್ತು ಗಾಂಡಲೀನ’ ಮೊದಲ ಕವನ ಸಂಕಲನ. ಈ ಹೊಸ ಗಾಳಿ, ಈ ತಾಜಾತನ, ಪಶ್ಚಿಮದ ‘ಫರಂಗಿ’ರೋಗವೋ ‘ಪೂರ್ವ’ಮೀಮಾಂಸೆಯ ತಳಿಯೋ ಎಂದು ವಿಮರ್ಶೆ ತಡಕಾಡಿತು.
ನವ್ಯ ಕಾವ್ಯ ಹೊಸದೊಂದು ಮಾರ್ಗವಾಗಿ ಪ್ರಭಾವಕಾರಿಯಾಗಿದ್ದ ಕಾಲಘಟ್ಟದಲ್ಲಿ ಕವಿತೆ ಬರೆಯಲು ಪ್ರಾರಂಭಿಸಿದ ಲಕ್ಷ್ಮಣ ರಾವ್ ಅದರ ಪ್ರಭಾವಗಳನ್ನೆಲ್ಲ ‘ವಾತಾಪಿ ಜೀರ್ಣೋಭವ’ವಾಗಿಸಿಕೊಂಡು, ತಮ್ಮ ಸ್ವಂತಿಕೆಯ ಛಾಪನ್ನು ಮೊದಲ ಸಂಕಲನದಲ್ಲೇ ಮೂಡಿಸಿದವರು.ಲಕ್ಷ್ಮಣ ರಾವ್ ಇಲ್ಲಿಯವರೆಗೆ ಒಂಬತ್ತು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಎರಡು ಭಾವಗೀತೆಗಳ ಸಂಕಲನಗಳು. ಜೊತೆಗೆ ಹನಿಗವಿತೆಗಳು,‘ಭಾರತ ಬಿಂದು ರಶ್ಮಿ’ ವಿನೋದ ಕವಿತೆಗಳೂ ಸೇರಿವೆ. ಇದಲ್ಲದೆ ಕಾದಂಬರಿ, ಸಣ್ಣ ಕಥೆ, ನಾಟಕ, ವ್ಯಕ್ತಿಚಿತ್ರ, ಬಿಡಿ ಲೇಖನಗಳು...ಹೀಗೆ ಸಾಗುತ್ತದೆ ಅವರ ಸೃಜನಶೀಲ ಪ್ರತಿಭೆಯ ಪ್ರಯೋಗಗಳು.‘ಕ್ಯಾಮರಾ ಕಣ್ಣು’ ಸಮಗ್ರ ಕಾವ್ಯ ಸಂಕಲನ.
ನಮ್ಮ ಬರಹಗಾರರಲ್ಲಿ ಅನೇಕರ ಚೊಚ್ಚಲ ಕೃತಿಗಳು ಬಹಳ ಅಳುಕು, ಸಂಕೋಚ, ಪ್ರಚಾರದ ಕೊರತೆ ಇತ್ಯಾದಿಗಳಿಂದ ಕೂಡಿದ ಯಾತನಾಮಯ ಪ್ರಸವಗಳೇ ಆಗಿರುತ್ತವೆ. ಆದರೆ ಲಕ್ಷ್ಮಣ ಅದೃಷ್ಟವಂತರು. ಮೊದಲ ಕವನ ಸಂಕಲನ ‘ಗೋಪಿ ಮತ್ತು ಗಾಂಡಲೀನ’(1971) ಪ್ರಕಟಗೊಳ್ಳುವುದಕ್ಕೂ ಮೊದಲೇ ಅವರು ಅಕ್ಷರ ಹೊಸ ಕಾವ್ಯದ ಹೊಸ ಶೋಧವಾಗಿದ್ದರು. ‘ಅಕ್ಷರ ಹೊಸ ಕಾವ್ಯ’ದಲ್ಲಿ ಹೆಚ್ಚು ಸ್ಥಳವನ್ನು ನೀಡುವ ಮೂಲಕ ಲಂಕೇಶ್ ಈ ಹೊಸ ಕವಿಯ ಆಗಮನವನ್ನು ಸಾರಿದ್ದರು. ಅಕ್ಷರ ಹೊಸ ಕಾವ್ಯ ಲಕ್ಷ್ಮಣ ರಾಯರ ‘ಗೋಪಿ ಮತ್ತು ಗಾಂಡಲೀನ’ ಪ್ರಥಮ ಸಂಕಲನಕ್ಕೆ ಭೂಮಿಕೆ ಸಿದ್ಧಗೊಳಿಸಿತ್ತು. ‘ಗೋಪಿ ಮತ್ತು ಗಾಂಡಲೀನ’, ‘ಅಮ್ಮ’, ‘ಸಖೀಗೀತ’, ‘ಫೋಟೋಗ್ರಾಫರ್’, ‘ಕೇಳಿ’, ‘ಹಸಿರು ಹಾವು’ ಮೊದಲಾದ ಚುರುಕು ನುಡಿಗಳ ಚೆಲುವಾಂತ ಕವಿತೆಗಳಿಂದ ಯುವಕರನ್ನೂ ಮುದುಕರನ್ನೂ ‘ವಾರ್ಹೆವ್ಹಾ’ ಎನ್ನುವ ಬೆರಗಿನುದ್ಗಾರಕ್ಕೆ ತಲುಪಿಸಿಬಿಟ್ಟರು- ಗೋಪಿ ಗಾಂಡಲೀನದ ತಾಜಾತನ ಮತ್ತು ಮುಗ್ಧತೆಗಳು, ತವಕಗಳು, ತುಡಿತಗಳು ಆ ಮಟ್ಟದಲ್ಲಿದ್ದವು. ಈ ಉಲ್ಲಾಸ, ಆಮೋದಪ್ರಮೋದಗಳು, ಬಿಚ್ಚೋಣಗಳು, ಲವಲೌಲವಿಕೆಗಳು ಲಕ್ಷ್ಮಣ ರಾವ್ ಅವರಿಗೆ ತುಂಟ ಕವಿ, ಪ್ರೇಮ ಕವಿ ಇತ್ಯಾದಿ ಅಭಿದಾನಗಳನ್ನು ತಂದುಕೊಟ್ಟವು. ಯುವಮನಸ್ಸುಗಳು ಈ ಸವಿಯಿಂದ ಸಂಭ್ರಮಿಸಿದವು.
‘ಟುವಟಾರ’(1978) ಲಕ್ಷ್ಮಣ ರಾವ್ ಅವರ ಎರಡನೆಯ ಕವನ ಸಂಕಲನ. ‘ವಿಹ್ವಲ’,‘ರಗಳೆ’, ‘ಇಣುಕು’, ‘ಒಂದು ನಾಗರಿಕ ಪ್ರೇಮ ಪ್ರಸಂಗ’ ‘ಕಿಶೋರನ ಅಶೂರ ಗೀತೆ’, ‘ಸರದಿ’ ಮೊದಲಾದವು ಪ್ರಥಮ ಸಂಕಲನದಲ್ಲಿ ಮೂಡಿಸಿದ ಭರವಸೆಯನ್ನು ಹುಸಿಗೊಳಿಸದಂಥ ರಚನೆಗಳು. ಯುಜನಾಂಗಕ್ಕೆ ಸಹಜವಾದ, ಲಂಕೇಶರು ಹೇಳಿರುವಂತೆ ಅಡಿಗರಿಗಿಂತ ಬೇರೆಯದೇ ಆದ ಸ್ವಾತಂತ್ರ್ಯಾಕಾಂಕ್ಷೆ, ಉಲ್ಲಾಸ, ನೋವುಗಳ ಸಮರ್ಥ ಅಭಿವ್ಯಕ್ತಿಯನ್ನು ಈ ಕವಿತೆಗಳಲ್ಲಿ ಕಾಣಬಹುದಾಗಿದೆ. ನಂತರ ಪ್ರಕಟವಾದ ‘ಲಿಲ್ಲಿಪುಟ್ಟಿಯ ಹಂಬಲ’(1981), ‘ಶಾಂಗ್ರಿ-ಲಾ’(1987), ‘ಅಪರಾಧಂಗಳ ಮನ್ನಿಸೊ(1992) ಸಂಕಲನಗಳು ಕವಿಯಾಗಿ ಲಕ್ಷ್ಮಣ ರಾವ್ ಅವರ ಪ್ರಬುದ್ಧ ಬೆಳವಣಿಗೆಯನ್ನು ಸ್ಪಷ್ಟವಾಗಿ ಬೆಳಕಿಗೊಡ್ಡುತ್ತವೆ. ಈ ಮಾತಿಗೆ ನಿದರ್ಶನವಾಗಿ ‘ನಿರಕ್ಷರ ಕುಕ್ಷಿಗ’, ‘ಲಿಲ್ಲಿ ಪುಟ್ಟಿಯ ಹಂಬಲ’, ‘ಬೊಜ್ಜು’, ‘ಕೊಲಂಬಸ್’, ‘ಗುಂಡಪ್ಪವಿಶ್ವನಾಥ್’, ‘ಸಂವಾದ’ ಮೊದಲಾದ ರಚನೆಗಳನ್ನು ನೋಡಬಹುದು. ಈ ಕವಿತೆಗಳಲ್ಲಿ, ಶಕೂವಾಸಂತಿಯರ ಜಗತ್ತಿನಿಂದಾಚೆ ತಾವು ಕಂಡ ಬೇರೊಂದು ಲೋಕದ ಆಗುಹೋಗುಗಳಿಗೆ ಕವಿಯ ಸಂವೇ ದನೆ-ಸ್ಪಂದನಗಳ ರೀತಿನೀತಿಗಳನ್ನು ಕಾಣಬಹುದಾಗಿದೆ. ‘ನಿರಕ್ಷರ ಕುಕ್ಷಿಗ’ಯಲ್ಲಿನ ಸಾಮಾಜಿಕ ಪ್ರಜ್ಞೆ, ‘ಬೊಜ್ಜು’ವಿನಲ್ಲಿನ ಸಾಮಾಜಿಕ-ಸ್ವವಿಮರ್ಶೆಗಳು, ‘ಲಿಲ್ಲಿಪುಟ್ಟಿಯ ಹಂಬಲ’ದಲ್ಲಿನ ಲಕ್ಷ್ಮಣರಾವ್ ವಿಶಿಷ್ಟ ಆಸಕ್ತಿಯಾದ ಕಾಮದ ಇನ್ನೊಂದು ಆಯಾಮ, ಇವುಗಳಿಂದಾಗಿ ಕವಿಯ ಅನಭವ ಲೋಕದಂತೆಯೇ ಸಹೃದಯರ ಕಾವ್ಯಾನುಭವದ ಸೀಮೆಗಳೂ ವಿಸ್ತರಿಸುತ್ತವೆ. ಲಕ್ಷ್ಮಣ ರಾವ್ ಎಂದರೆ ಹೆಣ್ಣಿನ ಸುತ್ತ ಪರಿಭ್ರಮಿಸುವ, ರಂಜಿಸುವ ಪ್ರೇಮ ಕವಿ ಎಂಬ ಗ್ರಹಿಕೆ ಬೆಳೆದುಬಿಟ್ಟಿದೆ. ಇದು ತಪ್ಪುಗ್ರಹಿಕೆ. ಅವರ ಖುಷಿಕೊಡುವ ಕಾವ್ಯದ ಹಿಂದೆ ಪರಂಪರೆ/ಸಂಪ್ರದಾಯಗಳ ಕಟ್ಟುಗಳಿಂದ ಬಿಡುಗಡೆಗಾಗಿ ಹಪಹಪಿಸುವ ಧಾವಂತಗಳ, ಸೋಲಿನ ವಿಷಾದಗಳ ಎಳೆಗಳೂ ಇವೆ. ಸಂದಿಗ್ದ್ಧ, ಬೇಲಿ, ಕೊಲಂಬಸ್ ಕವಿತೆಗಳಲ್ಲಿ ಬಿಡುಗಡೆಗಾಗಿ ಹಂಬಲಿಸುವ, ಹೋರಾಡುವ ದನಿಗಳು ಸ್ಪಷ್ಟ. ಹೊಸ ಲೋಕದ ಹುಡುಕಾಟದಲ್ಲಿ ತೊಡಗುವ ‘ಕೊಲಂಬಸ್’ ಥಟ್ಟನೆ ನಮಗೆ ನಿಸಾರ್ ಅಹ್ಮದ್ ಅವರ ‘ಇಪ್ಪತ್ತನೆ ಶತಮಾನದ ಕೊಲಂಬಸ್’ ಕವಿತೆಯನ್ನು ನೆನಪಿಗೆ ತರುತ್ತದೆ. ಇಬ್ಬರ ಗುರಿ ಒಂದೇ ಆದರೂ ತಲುಪುವ ದಡಗಳು ಬೇರಬೇರೆ. ನಿಸಾರ್‌ರ ಕೊಲಂಬಸ್ ‘‘ನಾನಿಷ್ಟೆ ಲೋಕಕ್ಕೆ: ತೇದಂತೆ ಕರಗುವ ಗಂಧದೊಂದು ಚಕ್ಕೆಯಾಗಿ’’ ನಿರ್ಲಿಪ್ತ ಸಂತೃಪ್ತಿ ಕಂಡರೆ, ಲಕ್ಷ್ಮಣ ರಾವ್ ಕೊಲಂಬಸನದು: ‘‘ನನ್ನ ಭ್ರಮಾಧೀನ ಮನದ ಭ್ರಂತಿಯೆ? ಬರಿಭ್ರಾಂತಿಯೆ?’’ ಎನ್ನುವ ಆರ್ತಸ್ಥಿತಿ. ‘ಗುಂಡಪ್ಪ ವಿಶ್ವನಾಥ್’ ಕಾವ್ಯಪ್ರಿಯರು ವಿಮರ್ಶಕರಿಬ್ಬರನ್ನೂ ಬಹುವಾಗಿ ಆಕರ್ಷಿಸಿದ ಕವಿತೆ. ಇದು ಬಾಹ್ಯನೋಟಕ್ಕೆ ಒಂದು ವ್ಯಕ್ತಿಚಿತ್ರದಂತೆ ಭಾಸವಾದರೂ ವಿಶ್ವನಾಥರ ಕಲಾತ್ಮಕ ಆಟದ ವಿವರಗಳೊಂದಿಗೆ ಮೂರು ಮಜಲುಗಳಲ್ಲಿ ಪ್ರತಿಮಾತ್ಮಕವಾಗಿ ಬೆಳೆಯುತ್ತದೆ. ಪ್ರತಿಭೆ, ಭೋಗ, ಕೀರ್ತಿ, ಅಹಂ ಇತ್ಯಾದಿಯಾಗಿ ಬದುಕಿನ ವಿವಿಧ ಆಮಿಷಾಯಾಮಗಳಿಗೆ ಚಾಚಿಕೊಳ್ಳುತ್ತಾ ರಸಿಕರನ್ನು ತನ್ನ ಈ ವಿಶಿಷ್ಟ ಲಯದೊಳಕ್ಕೆ ಸೆಳೆದುಕೊಳ್ಳುತ್ತದೆ. ಪ್ರತಿಮಾಯೋಗ ವಿಷಾದ ಯೋಗಗಳು ಸಂಗಮಿಸಿರುವ ಈ ಪರಿ ಗಮನಿಸಿ: ವೈಭವಗಳ ಹಂಪೆಯಲ್ಲಿ ಅಂಡಲೆಯುವ ಭೂತ
ಸವೆದ ಸ್ಪರ್ಶಮಣಿ ಕಂಟ ಕುಂಚ ಉಳಿ ಅನಾಥ
ಕೃತಜ್ಞತೆ, ಸಹಾನುಭೂತಿ, ಗೆಳೆಯ ವಿಶ್ವನಾ
ಎಂಥಾ ಅನನ್ಯತೆ. ಇದು ಲಕ್ಷ್ಮಣರಾವ್ ಅತ್ಯುತ್ತಮ ಪ್ರತಿಮಾತ್ಮಕ ಪ್ರಯೋಗ ಎನ್ನುವ ವೆಂಕಟೇಶ ಮೂರ್ತಿಗಳ ಮಾತು ದಿಟ. ಲಕ್ಷ್ಮಣ ರಾವ್ ಆಧುನಿಕತೆಗೆ, ಪ್ರಸಕ್ತ ಸಾಮಾಜಿಕ ಸಂವೇದನೆಗಳಿಗೆ ತೆರೆದುಕೊಂಡ ತೀವ್ರ ಕಳಕಳಿಯುಳ್ಳ ಕವಿ. ಆದರೂ ಯಾವುದೇ ಕಾವ್ಯ ಸಿದ್ಧಾಂತಗಳ ಬಗೆಗೆ ತಲೆ ಕೆಡಸಿಕೊಂಡವರಲ್ಲ. ಅವರು ಸಮಕಾಲೀನ ಸಾಹಿತ್ಯ ಚಳವಳಿಗಳಿಂದ ದೂರವೇ ಇದ್ದು ತಮ್ಮ ಅಂತರ್ಮುಖತೆಯ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾರೆ. ಕಾವ್ಯದ ಪ್ರಸ್ತುತತೆಯ ಅರಿವು ಅವರಿಗಿದೆ. ಸೃಜನಶೀಲ ಕಾವ್ಯಕರ್ಮದ ಮಹತ್ವವೂ ಅವರಿಗೆ ತಿಳಿಯದೇ ಇಲ್ಲ. ಈ ಒಂದು ವಿಶಿಷ್ಟ ಹದದ ಸಂವೇದನೆಯಿಂದಾಗಿಯೇ ಅವರ ಕಾವ್ಯ ಸುಭಗವೂ ಸಲಿಲ ಸಂವಹನಾಶೀಲವೂ ಆಗಿ ಜನಸಾಮಾನ್ಯರೊಡನೆ ಹೃದಯ ಸಂವಾದಿಯಾಗಿದೆ.
ಕಾವ್ಯಕ್ಕೆ ಹೋಲಿಸಿದರೆ ಸಣ್ಣಕಥೆಯಲ್ಲಿ ಲಕ್ಷ್ಮಣ ರಾಯರ ಕೃಷಿ ಸಮೃದ್ಧವೇನಲ್ಲ. ಅವರ ಇಪ್ಪತ್ತು ಕಥೆಗಳ ಸಮಗ್ರ ಸಂಕಲನ, ‘ಪ್ರೀತಿಯ ಬೆಳಕಾಗಿ’ ಓದುಗರಿಗೆ ಲಭ್ಯವಿದೆ. ಪ್ರೇಮ, ಕಾಮ, ಸಾಮಾಜಿಕ ತೊಡಕುಗಳು, ದ್ವೇಷಾಸೂಯೆಗಳು ಮೊದಲಾಗಿ ಪೌಗಂಡ/ಪ್ರಬುದ್ಧ ಪ್ರೀತಿಗಳ ಎಲ್ಲ ಆಯಾಮಗಳನ್ನೂ ಒಳಗೊಂಡಿರುವ ಲಕ್ಷ್ಮಣ ರಾವ್ ಕಥೆಗಳು ನಮ್ಮನ್ನು ಹೆಚ್ಚಾಗಿ ಸೆಳೆದುಕೊಳ್ಳುವುದು ಆಖೈರಾಗಿ ಮೂಡುವ ಪ್ರೀತಿಪ್ರೇಮ ಕುರಿತ ಮುಕ್ತವಾದ ಪ್ರಾಂಜಲ ಅರಿವಿನಿಂದಾಗಿ. ಪರಸ್ಪರ ಪ್ರೀತಿಸುವವರು ನಡೆಸುವ ಹೋರಾಟದಲ್ಲಿ ಪ್ರೇಮಿಗಳು ಕೊನೆಯಲ್ಲಿ ಅರಿವೆಂಬ ಬೆಳಕಿನ ತುದಿಗೆ ಬಂದು ನಿಲ್ಲುತ್ತಾರೆ ಎನ್ನುತ್ತಾನೆ ದಿವ್ಯ ಕಾಮದ ಸಿದ್ಧಾಂತಿ ಡಿ.ಎಚ್.ಲಾರೆನ್ಸ್. ಲಕ್ಷ್ಮಣರ ಕಥೆಗಳಲ್ಲಿ ನಾವು ಇದನ್ನು ಕಾಣುತ್ತೇವೆ. ಇದಕ್ಕಿಂತ ಭಿನ್ನವಾದ ಕತೆಗಳನ್ನೂ ಲಕ್ಷ್ಮಣ ಬರೆದಿರುವುದುಂಟು. ತುರ್ತುಪರಿಸ್ಥಿತಿ ಹಿನ್ನೆಲೆಯ ‘ದಾಖಲೆ’ ನಮ್ಮ ಗಮನ ಸೆಳೆವ ಭಿನ್ನ ನೆಲೆಯ ಕಥೆ. ಲಕ್ಷ್ಮಣ ರಾವ್ ಗದ್ಯವೂ ಆರೋಗ್ಯಕರ ಜೀವನ ದೃಷ್ಟಿ, ಪ್ರಬುದ್ಧ ನಿಲುವುಗಳ ಜೊತೆಗೆ ಭಾಷೆಯೂ ಧ್ವನಿಪೂರ್ಣವಾಗಿ ಕಾವ್ಯಕ್ಕೆ ಹತ್ತಿರವಾಗಿದೆ.
ಬದುಕಿನ ನೂರೆಂಟು ಕಟುವಾಸ್ತವಗಳ ಮಧ್ಯೆ ಇದ್ದುಕೊಂಡೂ ಜೀವನ ಪ್ರೀತಿ, ಜೀವನೋಲ್ಲಾಸಗಳನ್ನು ಕಳೆದುಕೊಳ್ಳದೆ ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕಾವ್ಯ ಕೃಷಿ ಖುಶಿಗಳಲ್ಲಿ ತೊಡಗಿರುವ ಲಕ್ಷಣ ರಾವ್ ಅವರ ಕಾವ್ಯದ ಯಶಸ್ಸಿನ ಗುಟ್ಟೇನು? ಸೋಲೇ ಅವರ ಯಶದ ಹಿಂದಿನ ಗುಟ್ಟಿರಬಹುದೆ? ಅವರ ಕಾವ್ಯ ಪ್ರಪಂಚ ‘ಅಶೂರರದು’. ಹೀಗಾಗಿ ಸೋಲು ಸಹಜವಾಗಿಯೇ ಅವರ ಆಸ್ಥೆಯ ವಿಷಯ ಎನ್ನುವ ವಿಮರ್ಶಕರು ಇದಕ್ಕೆ ಅವರ ಕಾವ್ಯದಲ್ಲಿ ಬರುವ ಕ್ರಿಕೆಟ್ ಸೋಲು, ಪ್ರೀತಿಯ ಸೋಲುಗಳತ್ತ ಬೆರಳು ಮಾಡುತ್ತಾರೆ. ಇದರಿಂದ ಕವಿ ಸಿನಿಕನಾಗುವುದಿಲ್ಲ. ಇಂಥ ಪರಾಭವಗಳ ಮಧ್ಯೆ ದೈನಂದಿನ ದುಕಿನಲ್ಲಿ ಕಂಡುಬರುವ ಅದ್ಭುತಗಳು ಲಕ್ಷ್ಮಣ ರಾವ್ ಕಣ್ಣುತಪ್ಪುವುದಿಲ್ಲ. ಆ ಅದ್ಭುತಗಳು ಗೋಪಿಗಾಂಡಲೀನ ಶಕುವಾಸಂತಿಗಳಾಗಿರಬಹುದು, ಗಾಂಧಿ, ಗುಂಡಪ್ಪವಿಶ್ವನಾಥ, ಲಿಲ್ಲಿಪುಟ್, ಕೊಲಂಬಸ್, ಸಿಂದಬಾದ್, ರಿಪ್‌ವ್ಯಾನ ವಿಂಕಲ್‌ರಂಥ ವ್ಯಕ್ತಿಗಳಾಗಿರಬಹುದು, ದೇಶದ ಬೆನ್ನೆಲುಬಾದ ನಿರಕ್ಷರಕುಕ್ಷಿಗಳಿರಬಹುದು, ನವಿಲು, ಮುಳ್ಳುಹಂದಿಗಳಂಥ ಪ್ರಾಣಿಗಳಾಗಿರಬಹುದು -ಹೀಗೆ ತಮ್ಮ ಪ್ರಜ್ಞೆ, ಸಂವೇದನೆಗಳಿಗೆ ತಾಕುವ ಪ್ರತಿಯೊಂದನ್ನೂ ಪ್ರಾಮಾಣಿಕವಾಗಿ ದಾಖಲಿಸುತ್ತಾರೆ. ಎಂದೇ ಲಕ್ಷ್ಮಣ ರಾವ್ ಕಾವ್ಯ ಓದಿದಾಗ ಈ ಅದ್ಭುತಗಳು ನಾವೇ ಎಂದೋ ಅಥವಾ ನಾವೂ ಕಂಡಿದ್ದೇವಲ್ಲ ಎಂದೋ ಬೆರಗುಪಡುತ್ತಾ ಓದುಗರು ತಮ್ಮ ಅನುಭವಗಳನ್ನು ಶೋಧಿಸಿಕೊಳ್ಳುವಂತಾಗುತ್ತದೆ. ಇದು ದೊಡ್ಡ ಸಾಧನೆಯೇ ಸರಿ!
ನಮ್ಮ ನಡುವಣ ಈ ಯಶೋವಂತ ಕವಿಗೆ ಇಂದು ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಕಾಮನೆ, ಅಭಿನಂದನೆ,‘ಹಿನ್ನೋಟದ ಕನ್ನಡಿ’ ಗ್ರಂಥ ಸಮರ್ಪಣೆ.ಹೇಳೋಣ ಲಕ್ಷ್ಮಣ ರಾವ್ ಅವರಿಗೆ -
ಸ್ವಸ್ತಿ ಸ್ವಸ್ತಿ ಸ್ವಸ್ತಿ
ಭರತ ವಾಕ್ಯ:
ಲಕ್ಷ್ಮಣರೇಖೆ ಎಳೆಯುವುದಿಲ್ಲ ಲಕ್ಷ್ಮಣ
ಇರಲಿ ರೇಖಾಗಳು
ಸುತ್ತಮುತ್ತ ಮುಕ್ತ.