ಮುಂದೇನಾಗಬಹುದು?

Update: 2016-09-24 04:45 GMT

ಮುಂದೇನಾಗಬಹುದು?

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳು ಆತಂಕದಿಂದ, ವಿರೋಧಿಗಳು ಖುಷಿಯಿಂದ ಕೇಳುತ್ತಿದ್ದಾರೆ. ಅಭಿಮಾನಿಗಳ ಆತ್ಮಸಂತೋಷಕ್ಕಾಗಿ, ವಿರೋಧಿಗಳ ಆತ್ಮಶಾಂತಿಗಾಗಿ ನನಗೆ ಹೊಳೆದದ್ದನಿಷ್ಟು ಹೇಳುತ್ತಿದ್ದೇನೆ.

ಸಾಧ್ಯತೆ 1. ಉದ್ದೇಶಪೂರ್ವಕವಾಗಿ ಆದೇಶ ಪಾಲನೆ ಮಾಡದಿರುವ ನಿರ್ಧಾರವಾಗಿರುವ ಕಾರಣ ಇದು ನ್ಯಾಯಾಂಗ ನಿಂದನೆ ಆಗಲಾರದು ಎನ್ನುವುದನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳಬಹುದು. ಕೇಂದ್ರ ಸರ್ಕಾರವೂ ಕರ್ನಾಟಕದ ರಕ್ಷಣೆಗೆ ನಿಲ್ಲಬಹುದು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ನಡವಳಿಕೆಯನ್ನು ಸ್ವೀಕರಿಸಿ ತನ್ನ ಆದೇಶದ ಮಾರ್ಪಾಟಿಗೆ ಒಪ್ಪಿಕೊಳ್ಳಬಹುದು.

ಸಾಧ್ಯತೆ 2. ಸುಪ್ರೀಂಕೋರ್ಟ್ ಯಾವ ರಿಯಾಯಿತಿಯನ್ನು ತೋರಿಸದೆ ಕೇವಲ ಸಂವಿಧಾನದ 141 ಮತ್ತು 142ನೇ ಪರಿಚ್ಛೇದದ ಆಶಯವನ್ನಷ್ಟೇ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕ್ರಿಯೆಗೆ ಚಾಲನೆ ನೀಡಬಹುದು.

ನ್ಯಾಯಾಂಗನಿಂದನೆ ಪ್ರಕಿಯೆ ಪ್ರಾರಂಭವಾದರೆ ಏನಾಗಬಹುದು?

ಸಾಧ್ಯತೆ 1: ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಯವರು ತಮ್ಮ ಮುಂದೆ ಹಾಜರಾಗಬೇಕೆಂದು ಸುಪ್ರೀಂಕೋರ್ಟ್  ಆದೇಶ ನೀಡಬಹುದು. ಇಬ್ಬರೂ ಆದೇಶಕ್ಕೆ ತಲೆಬಾಗಿ ಆದೇಶ ಉಲ್ಲಂಘನೆಗಾಗಿ ಕ್ಷಮೆಕೇಳಿ ಪಾರಾಗಬಹುದು. (ಹಿಂದೆಲ್ಲ ನಡೆದಿರುವಂತೆ)

ಸಾಧ್ಯತೆ 2:  ಕ್ಷಮೆ ಕೇಳದೆ ವಿಧಾನಮಂಡಲ ಕೈಗೊಂಡಿರುವ ಸಾಮೂಹಿಕ ನಿರ್ಣಯಕ್ಕೆ ಬದ್ಧತೆಯನ್ನು ಘೋಷಿಸಬಹುದು.

        ಕ್ಷಮೆ ಕೇಳಿ ತಪ್ಪೊಪ್ಪಿಕೊಳ್ಳದೆ ಆದೇಶದ ಉಲ್ಲಂಘನೆ ಮಾಡಿದರೆ  ಏನಾಗಬಹುದು?

- ಸುಪ್ರೀಂಕೋರ್ಟ್ ಸಂವಿಧಾನದ 356ನೇ ಪರಿಚ್ಛೇದದಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸುಮಾಡಿ, ಅದರ ಮೂಲಕ ನೀರು ಬಿಡಬೇಕೆಂಬ ತನ್ನ ಆದೇಶದ ಅನುಷ್ಠಾನಕ್ಕೆ ಮುಂದಾಗಬಹುದು. 
- ರಾಷ್ಟ್ರಪತಿ ಆಳ್ವಿಕೆಯ ಹೇರಬೇಕಾದರೆ ಅಂತಿಮವಾಗಿ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟ ತೀರ್ಮಾನಕೈಗೊಳ್ಳಬೇಕಾಗುತ್ತದೆ.
- ಅಂತಹದ್ದೊಂದು ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡರೆ (ನನ್ನ ದೃಡವಾದ ಭಾವನೆ ಪ್ರಕಾರ ಇಂತಹ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಾರದು) ಅಲ್ಲಿಂದ ರಾಜಕೀಯದಾಟ ಶುರುವಾಗುತ್ತದೆ.
- ನೀರು ಬಿಡುವುದಿಲ್ಲ ಎಂದು ಸಾರಿ ಜೈಲಿಗೆ ಹೋಗಲು ಸಿದ್ದರಾದ ಮುಖ್ಯಮಂತ್ರಿಗಳು ಮತ್ತು ಮುಖ್ಯಮಂತ್ರಿಯನ್ನು ಜೈಲಿಗಾದರೂ ಕಳಿಸಿ ನೀರು ಬಿಡಲು ಹೊರಟ ಪ್ರಧಾನಮಂತ್ರಿ. ಆರು ತಿಂಗಳ ನಂತರ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ಮಧ್ಯಂತರ ಚುನಾವಣೆ ಎದುರಾದಾಗ ಮತದಾರರ ಮುಂದೆ ಇರಬಹುದಾದ ಎರಡು ಆಯ್ಕೆ ಇದು. 

        ಇಂತಹದ್ದೊಂದು ಅತಿರೇಕದ ಸಾಧ್ಯತೆ ನಿಜವಾದರೆ ಚುನಾವಣೆ ನಡೆಯುವ ಮೊದಲೇ ಫಲಿತಾಂಶವನ್ನೂ ಹೇಳಿಬಿಡಬಹುದು.

    ಅಂತಹದ್ದೊಂದು ಅತಿರೇಕದ ಸ್ಥಿತಿ ನಿರ್ಮಾಣವಾಗಿ  ಅಪರೂಪಕ್ಕೆ ರಾಜ್ಯದ ಹಿತಾಸಕ್ತಿಯ ರಕ್ಷಣೆಗಾಗಿ  ರಾಜ್ಯದಲ್ಲಿ ಸ್ಥಾಪನೆಗೊಂಡಿರುವ ರಾಜಕೀಯ ಪಕ್ಷಗಳ ನಡುವಿನ ಸೌಹಾರ್ದತೆ ಹಾಳಾಗದಿರಲಿ ಎಂದು ಪ್ರಾಮಾಣಿಕವಾಗಿನಾನು ಆಶಿಸುತ್ತೇನೆ.

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News