ಮನಪಾ ಚುನಾವಣೆಗೆ ಪಕ್ಷಗಳ ತಯಾರಿ, ಮರಾಠಾ ಆಂದೋಲನದ ಬಿಸಿ!
ಅಕ್ಟೋಬರ್ ತಿಂಗಳು ಬರುತ್ತಲೇ ಮುಂಬೈ ಮಹಾನಗರಪಾಲಿಕೆ ಚುನಾವಣಾ ತಯಾರಿ ರಂಗೇರತೊಡಗಿದೆ. ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಮುಂಬೈ ಮನಪಾ ಚುನಾವಣೆ ನಡೆಯಲಿದೆ. ಕಳೆದ ಅನೇಕ ಸಮಯದಿಂದ ಮುಂಬೈ ಮನಪಾ ಶಿವಸೇನಾ ಬಿಜೆಪಿ ಕೈಯಲ್ಲಿದೆ. ಅಕ್ಟೋಬರ್ ಮೂರರ ನಂತರ ಲಾಟರಿ ನಡೆಯಲಿದ್ದು ಆಯಾಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಜನಹಿತ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಶಿವಸೇನಾ-ಬಿಜೆಪಿಯನ್ನು ಮಹಾನಗರಪಾಲಿಕೆ ಆಡಳಿತದಿಂದ ಕಿತ್ತೆಸೆಯಲು ವಿರೋಧ ಪಕ್ಷಗಳು ಏಕತೆಯ ಸಾಹಸದಲ್ಲಿ ತೊಡಗಿಸಿಕೊಂಡಿವೆ. ಆದರೆ ಸವಾಲುಗಳು ನೂರಾರು.
ಕಾಂಗ್ರೆಸ್ ಪಕ್ಷ ಆರೋಗ್ಯ, ನೀರು, ರಸ್ತೆಹೊಂಡಗಳು, ತ್ಯಾಜ್ಯ ಸಮಸ್ಯೆ, ಶಿಕ್ಷಣ ಇಂತಹ ಮೂಲಭೂತ ವಿಷಯಗಳ ಬಗ್ಗೆ ಫೋಕಸ್ ನೀಡಲು ಸಜ್ಜಾಗಿದೆ. ಮುಂಬೈ ಮನಪಾದಲ್ಲಿ ಭ್ರಷ್ಟಾಚಾರ ಹಿಂದಿನಿಂದಲೂ ಇದ್ದೇ ಇದೆ. ಆದರೆ ಈ ಬಾರಿ ರಸ್ತೆ, ನಾಲೆ ಸ್ವಚ್ಛತೆ, ಟ್ಯಾಬ್ ಹಗರಣಗಳು ಹೆಚ್ಚು ಚರ್ಚೆಯಾಗಿವೆ. ಇದು ಶಿವಸೇನೆ - ಬಿಜೆಪಿಯನ್ನು ಆಡಳಿತದಿಂದ ಕೆಳಗಿಳಿಸಲು ಸಹಾಯ ಮಾಡಲಿವೆ ಎಂದು ಕಾಂಗ್ರೆಸ್‌ನ ನಂಬಿಕೆಯಾಗಿದೆ. ಇದಲ್ಲದೆ ಡೆವೆಲಪ್‌ಮೆಂಟ್ ಪ್ಲ್ಯಾನ್ (ಡಿಪಿ) ಮುಂದಿಟ್ಟು ವಿಪಕ್ಷಗಳು ಆಡಳಿತ ಶಿವಸೇನೆ-ಬಿಜೆಪಿಯನ್ನು ತರಾಟೆಗೆ ಎಳೆಯಲಿವೆ.
ಆದರೆ ವಿರೋಧ ಪಕ್ಷಗಳ ಬಹಳ ದೊಡ್ಡ ಸಮಸ್ಯೆ ಎಂದರೆ ಏಕತೆ ಪ್ರದರ್ಶನ ಸಾಧ್ಯವೇ?. ಕಾಂಗ್ರೆಸ್-ಎನ್.ಸಿ.ಪಿ. ನಡುವೆ ಸಂಬಂಧ ಚೆನ್ನಾಗಿಲ್ಲ. ಅತ್ತ ಉತ್ತರ ಪ್ರದೇಶದ ಚುನಾವಣೆಯನ್ನು ಮುಂದಿಟ್ಟು ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಇಲ್ಲಿ ಮೈತ್ರಿ ನಡೆಸುವುದು ಕಷ್ಟವಾಗುತ್ತಿದೆ. ಮುಂಬೈ ಮನಪಾ ಚುನಾವಣೆಗೆ ಇನ್ನು ಕೇವಲ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದೆ. ಕಾಂಗ್ರೆಸ್ ಈಗ ಮುಂಬೈ ಅಧ್ಯಕ್ಷ ಸಂಜಯ್ ನಿರುಪಮ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸುತ್ತಿದ್ದು ಕಾರ್ಯಕರ್ತರಲ್ಲಿ ಉತ್ಸಾಹದ ವಾತಾವರಣ ಮೂಡಿದೆ. ಆದರೆ ಗಟ್ಟಿಯಾದ ನೆಟ್‌ವರ್ಕ್ ಇಲ್ಲದ್ದರಿಂದ ಕಾಂಗ್ರೆಸ್‌ನ ಹೆಚ್ಚಿನ ಅಭ್ಯರ್ಥಿಗಳು ತಮ್ಮ ವಾರ್ಡ್ ಬಿಟ್ಟು ಬೇರೆಡೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ಕಷ್ಟ. ಮುಂಬೈ ಕಾಂಗ್ರೆಸ್‌ನಲ್ಲಿ ಗುಂಪುಗಳಿರುವ ಕಾರಣ ಅಷ್ಟು ಸುಲಭದಲ್ಲಿ ಚುನಾವಣೆ ಎದುರಿಸಲು ಸಾಧ್ಯವಾಗುವುದಿಲ್ಲ. ಆದರೂ ತಮ್ಮ ತಮ್ಮ ಜನರಿಗೆ ಟಿಕೆಟ್ ತೆಗೆಸಿಕೊಡಲು ಈ ಬಣಗಳು ಸಿದ್ಧತೆಯಲ್ಲಿವೆ.
ಇತ್ತ ಕಾಂಗ್ರೆಸ್‌ನ ಚಟುವಟಿಕೆಗಳ ಎದುರು ಎನ್‌ಸಿಪಿ ಸ್ವಲ್ಪ ಕ್ಷೀಣವಾಗಿದೆ. ಛಗನ್ ಭುಜ್‌ಬಲ್ ಅಂತಹ ನಾಯಕರು ಈ ಬಾರಿ ಪ್ರಚಾರಕ್ಕೆ ಬರುವುದು ಕಷ್ಟವಿದೆ. ಸದ್ಯ ಇಲ್ಲಿ ಸಚಿನ್ ಅಹಿರ್ ಎನ್‌ಸಿಪಿ ಯ ಅಧ್ಯಕ್ಷರು. ಈ ಮೊದಲು ಮುಸ್ಲಿಂ ಮತಗಳನ್ನು ಸಮಾಜವಾದಿ ಪಕ್ಷ ಸೆಳೆಯುತ್ತಿದ್ದರೆ ಈ ಬಾರಿ ಕಷ್ಟವಿದೆ. ಎಐಎಂಐಎಂ ಚುನಾವಣೆಗೆ ಇಳಿಯುತ್ತಿದ್ದು, ಇದು ವಿಪಕ್ಷಗಳಿಗೆ ನಷ್ಟವಾಗುವ ಸಂಭವವಿರುವುದಾಗಿ ಹೇಳಲಾಗಿದೆ. ಈಗಾಗಲೇ ಸೂರ್ಯ ನಮಸ್ಕಾರದ ವಿರುದ್ಧ ಸಮಾಜವಾದಿ ಪಾರ್ಟಿ ತನಗೆ ಸಿಕ್ಕಿದ ಸಂಜೀವಿನಿಯನ್ನು ಚೆನ್ನಾಗಿ ಬಳಸಿಕೊಳ್ಳಲು ನೋಡಿದೆ.
ಕಳೆದ ಬಾರಿ ರಾಜ್ ಠಾಕ್ರೆಯ ಎಂಎನ್‌ಎಸ್ (ಮಹಾರಾಷ್ಟ್ರ ನವನಿರ್ಮಾಣ ಸೇನೆ) ಉತ್ತಮ ಫಲಿತಾಂಶ ಪಡೆದಿತ್ತು. ಆದರೆ ಈ ಬಾರಿ ಅಂತಹ ಫಲಿತಾಂಶ ದೊರೆಯಲು ಕಷ್ಟವಿದೆ. ಈಗಾಗಲೇ ಕೆಲವರು ಎಂಎನ್‌ಎಸ್ ತ್ಯಜಿಸಿ ಶಿವಸೇನೆಯತ್ತ ಆಸಕ್ತರಾಗಿದ್ದಾರೆ.
ಮುಸ್ಲಿಂ ಮತದಾರರನ್ನು ಸೆಳೆಯದ ಹೊರತು ಕಾಂಗ್ರೆಸ್ ಮಹಾನಗರ ಪಾಲಿಕೆಯಲ್ಲಿ ತನ್ನ ಹಿಡಿತ ಸಾಧಿಸುವುದು ಕನಸಿನ ಮಾತು. 15ರಿಂದ 20 ಶೇ. ಪಾಲುಗಾರಿಕೆ ನೀಡುವ ಮುಸ್ಲಿಂ ಸಮಾಜವನ್ನು ಸೆಳೆಯಲು ಅದು ರಣನೀತಿ ತಯಾರಿಸುತ್ತಿದೆ. ಮಾಜಿ ಶಾಸಕ ಯೂಸುಫ್ ಅಬ್ರಾಹಿನಿ ನೇತೃತ್ವದಲ್ಲಿ ಈಗಾಗಲೇ ಒಂದು ಕಮಿಟಿ ರಚಿಸಲಾಗಿದೆ. ಮುಸ್ಲಿಂ ಕ್ಷೇತ್ರ ಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ವಿಪಕ್ಷಗಳು ಏಕತೆ ಪ್ರದರ್ಶಿಸದಿದ್ದರೆ ಮೈತ್ರಿ ಬಿದ್ದುಹೋಗಬಹುದು. ಆಗ ಮುಸ್ಲಿಂ ಮತಗಳು ದೊರೆತರೂ ಪ್ರಯೋಜನವಾಗದೆ ಹೋಗಬಹುದು.
* * *
ಜೋಪಡಿ ಕ್ಷೇತ್ರಗಳಲ್ಲಿ ಶೌಚಾಲಯ ನಿರ್ಮಾಣದ ಸಂಕಷ್ಟ್ಟ
ಸ್ಲಮ್ ಕ್ಷೇತ್ರಗಳಲ್ಲಿ ಶೌಚಾಲಯ ನಿರ್ಮಾಣದ ವಿಷಯದಲ್ಲಿ ಮುಂಬೈ ಮಹಾನಗರ ಪಾಲಿಕೆ ತೀರಾ ಸೋಮಾರಿಯಾಗಿದೆಯೇ? ಸೆಪ್ಟಂಬರ್ ತಿಂಗಳ ಮಧ್ಯದ ತನಕ ಮಹಾನಗರ ಪಾಲಿಕೆಗೆ 11,774 ಅರ್ಜಿಗಳು ಬಂದಿತ್ತು. ಆದರೆ ಶೌಚಾಲಯ ನಿರ್ಮಿಸಿದ್ದು ಕೇವಲ 267 ಮಾತ್ರ. 542 ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ. ಅಂದರೆ ಕೇವಲ ಶೇ. 2.26 ಮಾತ್ರ ಕೆಲಸ ಪೂರ್ಣಗೊಂಡಿದೆ ಈ ತನಕ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನಕ್ಕೆ ಇನ್ನಷ್ಟು ಬೆಂಬಲ ನೀಡುವ ಪ್ರಯತ್ನವಾಗಿ ಮನೆ ಮನೆಗೆ ಶೌಚಾಲಯ ಯೋಜನೆಗೆ ಅಸಕ್ತಿ ತೋರಿಸಿದರೂ ಮುಂಬೈ ಮಹಾನಗರ ಪಾಲಿಕೆ ಆ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿಲ್ಲ.!
ಮನಪಾ ಅಧಿಕಾರಿಗಳ ಪ್ರಕಾರ ಗಣೇಶೋತ್ಸವ ಮುಗಿದ ಕೂಡಲೇ ಈ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆಯಂತೆ. ಆದರೆ ಸ್ಲಂ ಕ್ಷೇತ್ರಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅಡ್ಡಿಯಾಗಿರುವುದು ಸೀವೇಜ್ ಲೈನ್ (ಗಟಾರ). ಹೀಗಾಗಿ ಶೌಚಾಲಯ ಕಟ್ಟಲು ಭಾರೀ ಸಂಕಷ್ಟ ಎದುರಾಗಿದೆಯಂತೆ. ಮುಂಬಯಿಯ ಅನೇಕ ಸ್ಲಂ ಬಸ್ತಿಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ತುಂಬಾ ಕಡಿಮೆ ಇದೆ.
***
ವಿಚಾರಣಾಧೀನ ಕೈದಿಗಳೂ ಮನೆಗೆ ಫೋನ್ ಮಾಡಬಹುದು
ಮಹಾರಾಷ್ಟ್ರದಲ್ಲಿ ಸುಮಾರು 18 ಸಾವಿರ ವಿಚಾರಣಾಧೀನ ಕೈದಿಗಳು ತಮ್ಮ ಪರಿವಾರದವರಿಗೆ ಇನ್ನು ಮುಂದೆ ಫೋನ್ ಮಾಡಬಹುದಾಗಿದೆ. ಹಾಗೂ ಪ್ರತೀವಾರದ ಒಂದು ದಿನದಲ್ಲಿ ಐದು ನಿಮಿಷ ಮಾತನಾಡಬಹುದಾಗಿದೆ. ಇಂತಹ ಮೊದಲ ಸೌಲಭ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆರಂಭವಾಗಿದೆ. ಜಿಲ್ಲಾ ಕಲೆಕ್ಟರ್ ಶೇಖರ್ ಗಾಯಕ್‌ವಾಡ ಅವರು ಸಾಂಗ್ಲಿ ಜೈಲ್‌ನಲ್ಲಿ ಈ ಸೌಕರ್ಯದ ಉದ್ಘಾಟನೆಗೈದಿದ್ದಾರೆ.
ಇದಕ್ಕಿಂತ ಮೊದಲು ಇಂತಹ ಸೌಲಭ್ಯ ಸಜೆ ಅನುಭವಿಸುತ್ತಿರುವ ಕೈದಿಗಳಿಗಿತ್ತು. ಸಜೆ ಅನುಭವಿಸುತ್ತಿರುವ ಸುಮಾರು ಹತ್ತು ಸಾವಿರ ಕೈದಿಗಳು ಮಹಾರಾಷ್ಟ್ರದಲ್ಲಿದ್ದಾರೆ.
ಮಹಾರಾಷ್ಟ್ರ ಪೊಲೀಸ್ ಉಪ ಮಹಾನಿರ್ದೇಶಕರಾದ (ಜೈಲ್) ಸ್ವಾತಿ ಸಾಠೆ ಅವರು ವಿಚಾರಣಾಧೀನ ಕೈದಿಗಳಿಗೂ ಪರಿವಾರದ ಜನರಿಗೆ ಫೋನ್ ಮಾಡುವ ಸೌಲಭ್ಯ ಒದಗಿಸಿದ್ದಾರೆ. * * *
ಮಹಾರಾಷ್ಟ್ರದಲ್ಲೀಗ ಮರಾಠ ಆಂದೋಲನ
ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ ಠಾಕ್ರೆ ಅವರು ತಮ್ಮ ವ್ಯಂಗ್ಯಚಿತ್ರ ಮಾಧ್ಯಮದಿಂದ ಮರಾಠಿ ಅಸ್ಮಿತೆಯನ್ನು ಜಾಗೃತಿಗೊಳಿಸಿರುವುದು ಹಳೆಯ ಸಂಗತಿ. ಆಗಸ್ಟ್ 1960ರಲ್ಲಿ ಅವರು ಇಂತಹ ವ್ಯಂಗ್ಯಚಿತ್ರಗಳ ಪತ್ರಿಕೆ ‘ಮಾರ್ಮಿಕ್’ ಆರಂಭಿಸಿದ್ದರು. ಇಲ್ಲಿಂದ ಶಿವಸೇನೆಯು ಸಂಘಟನೆಯಿಂದ ರಾಜಕೀಯ ಪಕ್ಷದ ರೂಪದಲ್ಲಿ ಬೆಳೆಯತೊಡಗಿತ್ತು. ಶಿವಸೇನೆ ಈ ಹೊತ್ತು ತನ್ನ ಸ್ಥಾಪನೆಯ ಸುವರ್ಣ ಮಹೋತ್ಸವದತ್ತ ದಾಪುಗಾಲಿಕ್ಕಿದೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮರಾಠ ಆಂದೋಲನದ ವಿಷಯದಲ್ಲಿ ಒಂದು ಕಾರ್ಟೂನ್ ರಚಿಸಿ ಇದೀಗ ಶಿವಸೇನೆ ವಿವಾದ ಎದುರಿಸುತ್ತಿದೆ. ಶಿವಸೇನೆ ಮುಖ ಪತ್ರ ಸಾಮ್ನಾದಲ್ಲಿ ಸಂಪಾದಕ ಸಂಜಯ್ ರಾವುತ್ ಅವರ ರವಿವಾರದ ಲೇಖನದ ಜೊತೆ ಮುದ್ರಿಸಲಾದ ಒಂದು ವ್ಯಂಗ್ಯಚಿತ್ರ ವಿವಾದ ಸೃಷ್ಟಿಸಿದೆ.
ಮಹಾರಾಷ್ಟ್ರದಲ್ಲಿ ಈ ಸಲ ಲಕ್ಷಗಟ್ಟಲೆ ಮರಾಠರು ಮೂಕ ಮೋರ್ಚಾದ ಹಿಂದೆ ಹೊರಟಿದ್ದಾರೆ. ಆದರೆ ಈ ಮೂಕ ಮೋರ್ಚಾವನ್ನು ಮುಖ (ಚುಂಬನ) ಮೋರ್ಚಾದ ರೂಪದಲ್ಲಿ ವ್ಯಂಗ್ಯಚಿತ್ರದಲ್ಲಿ ಬಿಂಬಿಸಲಾಗಿದೆ. ವ್ಯಂಗ್ಯಚಿತ್ರದಲ್ಲಿ ಶ್ರೀನಿವಾಸ ಪ್ರಭು ದೇಸಾಯಿ ಒಬ್ಬ ಯುವತಿ ಈ ಮೋರ್ಚಾದಲ್ಲಿ ಚುಂಬನಕ್ಕೆ ಸಿದ್ಧವಾಗಿರುವಂತೆ ಬಿಂಬಿಸಿದ್ದಾರೆ. ಮೋರ್ಚಾದಲ್ಲಿ ಯುವತಿಯರ ಸಂಖ್ಯೆಯೂ ಸಾಕಷ್ಟಿದೆ. ಹೀಗಿರುವಾಗ ವಿವಾದ ಸ್ವಾಭಾವಿಕವಾಗಿದೆ.
ಮರಾಠ ಸಮಾಜದ ಕ್ರಾಂತಿ ಮೋರ್ಚಾ ಸಮನ್ವಯ ಸಮಿತಿಯ ಬೈಠಕ್ ಕಳೆದ ಶುಕ್ರವಾರ ಮುಂಬೈಯಲ್ಲಿ ನಡೆದಿದೆ. ಶಿವಾಜಿ ಮಂದಿರ ಸಭಾಗೃಹದಲ್ಲಿ ನಡೆದ ಈ ಬೈಠಕ್‌ನಲ್ಲಿ ದೀಪಾವಳಿಯ ನಂತರ ಹಾಗೂ ವಿಧಾನ ಸಭೆಯ ಚಳಿಗಾಲದ ಅಧಿವೇಶನದ ಮೊದಲು ಮುಂಬೈಯಲ್ಲಿ ಮರಾಠ ಸಮಾಜದ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಿ ಅತಿದೊಡ್ಡ ಮೋರ್ಚಾ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ದಿನಾಂಕ ನಿಶ್ಚಯಿಸಿಲ್ಲ. * * * 68 ವರ್ಷಗಳ ನಂತರ ಎಸ್.ಟಿ. ನೌಕರರ ಡ್ರೆಸ್ ಬದಲು
ಮುಂಬೈಯಲ್ಲಿಂದು ವಿಭಿನ್ನ ಸಂಸ್ಥೆಗಳ ನೌಕರರ ಡ್ರೆಸ್ ಬದಲಿಸುವ ದೃಶ್ಯ ಕಾಣುತ್ತಿದ್ದೇವೆ. ಹೆಚ್ಚಿನ ಸಂಸ್ಥೆಗಳು ತಮ್ಮ ಹಳೆಯ ಯೂನಿಫಾರ್ಮ್ ಕಿತ್ತೆಸೆಯಲು ನೋಡುತ್ತಿವೆ. ಹೊಸಲುಕ್ ಕಾಣಿಸುವಲ್ಲಿ ಪೈಪೋಟಿಯ ದೃಶ್ಯಗಳೂ ಇವೆ. ಅನೇಕ ದಶಕಗಳ ನಂತರ ಆರೆಸ್ಸೆಸ್, ತನ್ನ ಯೂನಿಫಾರ್ಮ್ ಬದಲಿಸಲು ತೀರ್ಮಾನಿಸಿದ್ದು ಇತ್ತೀಚೆಗೆ ಎಲ್ಲರಿಗೂ ಗೊತ್ತು. ಅತ್ತ ರೈಲ್ವೆ ಕೂಡಾ ತನ್ನ ನೌಕರರಿಗೆ ಡ್ರೆಸ್ ಡಿಸೈನ್ ತಯಾರಿಸುತ್ತಿದೆ. ಇದೀಗ ಮಹಾರಾಷ್ಟ್ರ ಎಸ್.ಟಿ. (ರಾಜ್ಯಸಾರಿಗೆ) ಮಹಾಮಂಡಲ ಕೂಡಾ ತನ್ನ ನೌಕರರ ಬಟ್ಟೆಯನ್ನು 68 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬದಲಿಸಲು ಮುಂದಾಗಿದೆ. ಈ ಮಾಹಿತಿ ನೀಡಿದವರು ಸಾರಿಗೆ ರಾಜ್ಯಮಂತ್ರಿ ದಿವಾಕರ್ ರಾವ್‌ತೆ. ಇಲ್ಲಿ ಬಸ್ ಕಂಡಕ್ಟರ್, ಚಾಲಕರಿಗೆ ಹಾಗೂ ಮಹಿಳಾ ನೌಕರರಿಗೆ ಬೇರೆ ಬೇರೆ ಡಿಸೈನ್ ಇರುವುದು. ಈ ಡಿಸೈನ್‌ನ ಕೆಲಸ ಕೇಂದ್ರೀಯ ಸಂಸ್ಥೆ ರಾಷ್ಟ್ರೀಯ ಫ್ಯಾಶನ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ (ನಿಫ್ಟ್)ಗೆ ನೀಡಲಾಗಿದೆ. ಈ ಸಂಸ್ಥೆ ಕೇಂದ್ರ ಜವಳಿ ಮಂತ್ರಾಲಯದ ವ್ಯಾಪ್ತಿಗೆ ಬರುತ್ತದೆ.
ನಿಫ್ಟಿ ಪ್ರತಿನಿಧಿಗಳು ಎಸ್.ಟಿ. ನೌಕರರು, ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಜೊತೆ ಚರ್ಚೆ ನಡೆಸಿ ಡ್ರೆಸ್ ಬಣ್ಣ, ಡಿಸೈನ್ ತಯಾರಿಸಲಿದ್ದಾರೆ.