ಯುದ್ಧೋನ್ಮಾದದ ವಾತಾವರಣ ಸೃಷ್ಟಿಸಲಾಗುತ್ತಿದೆಯೇ?
ನಾವೆಲ್ಲರೂ ನೋಡಿರುವ ಹಾಗೆ ಚುನಾವಣಾಪೂರ್ವದಲ್ಲಿ ಭಾರೀ ವಾಚಾಳಿಯಾಗಿದ್ದ ಮೋದಿ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸುವ ವಿಷಯದಲ್ಲಿ ಅಂದಿನ ಪ್ರಧಾನಿ ಯುದ್ಧ ನಿಷ್ಪ್ರಯೋಜಕ ಎಂದು ಜರೆದಿದ್ದರು. ಆತನ ಬಾಯಿಯಿಂದ ಪಾಕಿಸ್ತಾನದ ವಿರುದ್ಧ ಬಲ ಪ್ರಯೋಗ ಮಾಡುವ ಮಾತುಗಳೂ ಕೇಳಿಬರುತ್ತಿದ್ದವು. ಇದೇ ಮೋದಿ ಪ್ರಧಾನಿಯಾದ ನಂತರ ನಿಯಂತ್ರಣ ರೇಖೆಯಾಚೆಯಿಂದ ಕಾಶ್ಮೀರದಲ್ಲಿರುವ ಸೇನಾ ನೆಲೆಗಳ ಮೇಲೆ ಸುಮಾರು 20 ದಾಳಿಗಳು (19 ಯೋಧರ ಸಾವಿಗೆ ಕಾರಣವಾದ ಉರಿ ದಾಳಿಯನ್ನೂ ಒಳಗೊಂಡಂತೆ) ನಡೆದಿವೆ. ಪಂಜಾಬ್‌ನಲ್ಲಿ ಎರಡು ದಾಳಿಗಳು ಸಂಭವಿಸಿವೆ - ಒಂದು ಗುರುದಾಸ್‌ಪುರ ಪೊಲೀಸ್ ಠಾಣೆಯ ಮೇಲೆ (ಮೃತಪಟ್ಟವರ ಸಂಖ್ಯೆ 7); ಎರಡು, ಪಠಾಣ್‌ಕೋಟ್ ವಾಯು ಸೇನಾ ನೆಲೆ ಮೇಲೆ (ಮೃತಪಟ್ಟವರ ಸಂಖ್ಯೆ 6). ಉರಿ ಶಿಬಿರದ ಮೇಲಿನ ದಾಳಿ ಶಾಂತಿ ಕಾಲದಲ್ಲಿ ಸೇನಾಪಡೆಗಳ ಮೇಲಾಗಿರುವ ಅತ್ಯಂತ ಮಾರಕ ದಾಳಿಗಳಲ್ಲೊಂದು. ಪಠಾಣ್‌ಕೋಟ್ ಮತ್ತು ಉರಿ ದಾಳಿಗಳಿಂದಾಗಿ ಮೋದಿ ಸರಕಾರಕ್ಕೆ ಭಾರೀ ದೊಡ್ಡ ಮುಖಭಂಗವಾಗಿರುವುದು ಸ್ಪಷ್ಟ. ಇದರ ಬಳಿಕ ಸಂಘಿಗಳು ಏಕ್ದ್‌ಂ ತಣ್ಣಗಾಗಿದ್ದರು. ಎರಡೆರಡು ಬಾರಿ ಅಷ್ಟೊಂದು ಕಟ್ಟೆಚ್ಚರದ ಭದ್ರತಾ ವ್ಯವಸ್ಥೆಯನ್ನು ಮುರಿದು ದಾಳಿ ಮಾಡಿರುವುದು ಭಾರತೀಯ ಸೇನೆಯ ಪಾಲಿಗೂ ಅವಮಾನದ ವಿಷಯ. ಹೀಗಾಗಿ ಸೆಪ್ಟಂಬರ್ 29ರಂದು ನಡೆದುದೆನ್ನಲಾದ ನಿರ್ದಿಷ್ಟ್ಟ ದಾಳಿಗಳ (Surgical Strikes) ಹಿಂದೆ ಕಳೆದುಹೋದ ಮರ್ಯಾದೆಯನ್ನು ಮರಳಿ ಪಡೆಯುವ ಉದ್ದೇಶವಿದೆ ಎಂದರೆ ತಪ್ಪಾಗಲಾರದು. ಭಾರತದ ಸೇನಾಪಡೆಗಳು ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಕೆಲವೊಂದು ಉಗ್ರರ ಕಟ್ಟೆಗಳಿಗೆ (ಲಾಂಚ್ ಪ್ಯಾಡ್) ದಾಳಿ ಮಾಡಿ ವಾಪಸಾಗಿವೆ ಎಂದು ಮೋದಿ ಸರಕಾರ ಮಾಧ್ಯಮಗಳ ಮೂಲಕ ಹೇಳಿಕೊಂಡದ್ದೆ ತಡ, ಇದು ಉರಿ ದಾಳಿಗೆ ಪ್ರತೀಕಾರವೆಂದು ಸಂಭ್ರಮಿಸಿದ ಸಂಘಿಗಳು ಕೇಕೆ ಹಾಕಿ ಕುಣಿದಾಡತೊಡಗಿದ್ದಾರೆ. ಐವತ್ತಾರಿಂಚಿನ ಎದೆಯ ಪರಾಕ್ರಮವನ್ನು ಹೊಗಳಲಾರಂಭಿಸಿದ್ದಾರೆ. ಭಾರತೀಯ ಸೇನೆಯ ಶೌರ್ಯವನ್ನು ಪರಿಪರಿಯಾಗಿ ಕೊಂಡಾಡುತ್ತಿದ್ದಾರೆ. ಕೇಂದ್ರ ರಕ್ಷಣಾಮಂತ್ರಿಯ ಸ್ಥಾನದಲ್ಲಿರುವ ವ್ಯಕ್ತಿ ಸೇನೆಯನ್ನು ಹನುಮಂತನಿಗೆ ಹೋಲಿಸುತ್ತಾರೆಂದರೆ ಇವರ ಅತಿರೇಕದ ಮಟ್ಟ ಎಷ್ಟಿದೆ ಎಂದು ಊಹಿಸಬಹುದು! ಬಾಂಗ್ಲಾದೇಶದ ವಿಮೋಚನೆ ಬಗ್ಗೆ ಅನಗತ್ಯ ಮಾತುಗಳನ್ನಾಡಿರುವ ಈ ಸಡಿಲು ನಾಲಿಗೆಯ ಮಂತ್ರಿಗೆ ಪ್ರಚೋದನಾಕಾರಿ ಹೇಳಿಕೆಗಳ ಗೀಳು ಅಂಟಿಕೊಂಡಿರುವಂತಿದೆ. ಇಲ್ಲಿ ಒಂದು ವಿಷಯವನ್ನು ಹೇಳಬೇಕಾಗಿದೆ. ಯಾವುದೆ ಸರ್ವಾಧಿಕಾರಿ ಅಥವಾ ಫ್ಯಾಶಿಸ್ಟ್ ಪ್ರಭುತ್ವಕ್ಕೆ ತನ್ನ ಉಳಿವಿಗೋಸ್ಕರ ಸೇನಾಪಡೆಗಳ ಮೇಲೆ ಸಂಪೂರ್ಣವಾಗಿ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದಲೇ ಅಂಥಲ್ಲಿ ಸೇನಾಪಡೆಗಳಿಗೆ ಅತಿಯಾದ ಮಹತ್ವವನ್ನು ನೀಡಲಾಗುತ್ತದೆ ಮತ್ತು ಅತಿಯಾದ ವೈಭವೀಕರಣ ನಡೆಯುತ್ತದೆ. ಉಗ್ರರ ದಾಳಿಗಳಲ್ಲಿ ಸಾವನ್ನಪ್ಪುವ ಯೋಧರು ನಿಜಕ್ಕೂ ವಂದನೆಗೆ ಪಾತ್ರರು. ಆದರೂ ಅವರನ್ನು ಹುತಾತ್ಮರೆಂದು ಕರೆಯುವುದರಿಂದ ಹುತಾತ್ಮ ಶಬ್ದ ಅದರ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ನಾವು ಗಮನಿಸಬೇಕು. ಇರಲಿ. ಈಗ ಸೆಪ್ಟಂಬರ್ 29ರ ದಾಳಿಯಲ್ಲಿ ಗಮನಾರ್ಹ ಸಂಖ್ಯೆಯ ಉಗ್ರರು ಹಾಗೂ ಅವರನ್ನು ಬೆಂಬಲಿಸಲು ಯತ್ನಿಸುವವರು ತೀವ್ರವಾಗಿ ಗಾಯಗೊಂಡಿದ್ದಾರೆ ಅಥವಾ ಸತ್ತಿದ್ದಾರೆೆ ಎಂದು ಭಾರತೀಯ ಸೇನೆ ಹೇಳುತ್ತಿದೆ. ಭಾರತದ ದೇಶಭಕ್ತ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಪ್ರತಿಪಾದನೆಗಳನ್ನು ನಂಬುವುದಾದರೆ ಭಾರತೀಯ ಸೇನೆಯ ನಿರ್ದಿಷ್ಟ ದಾಳಿ ಕಾರ್ಯಾಚರಣೆ ಉರಿ ದಾಳಿಗೆ ಪ್ರತೀಕಾರವಾಗಿತ್ತು; ಇದರಿಂದ ಪಾಕಿಸ್ತಾನದ ಸೇನೆಗೆ ತಕ್ಕ ಶಾಸ್ತಿ ಆಗಿದ್ದು ಅದೀಗ ಪ್ರತಿದಾಳಿ ಮಾಡದಂತಾಗಿದೆ. ಆದರೆ ಭಾರತೀಯ ಸೇನೆಯ ಹೇಳಿಕೆಯನ್ನು ತಳ್ಳಿಹಾಕಿರುವ ಪಾಕಿಸ್ತಾನ, ಭಾರತದ ಸೇನಾಪಡೆಗಳು ನಿಯಂತ್ರಣ ರೇಖೆ ದಾಟಿಲ್ಲ; ತಮ್ಮ ನೆಲೆಗಳಿಂದಲೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪಾಕ್ ಯೋಧರು ಹತರಾಗಿ 9 ಮಂದಿ ಗಾಯಾಳುಗಳಾಗಿದ್ದಾರೆಂದು ವಾದಿಸುತ್ತಿದೆ. ಪಾಕಿಸ್ತಾನದ ಐಎಸ್‌ಪಿಆರ್ (Inter Services Public Relations) ಸಂಸ್ಥೆ ಹೊರಡಿಸಿದ ಪ್ರಕಟಣೆಯನ್ನು ಆಧರಿಸಿದ ಪಾಕಿಸ್ತಾನಿ ಮಾಧ್ಯಮಗಳೂ ಇದನ್ನೇ ಹೇಳುತ್ತಿವೆ. ಇನ್ನು ಪಾಕಿಸ್ತಾನ ಸೆರೆಹಿಡಿದ ಭಾರತೀಯ ಯೋಧನ ಬಗ್ಗೆ ಎರಡೂ ದೇಶಗಳು ಚಿತ್ರವಿಚಿತ್ರ ಹೇಳಿಕೆಗಳನ್ನು ನೀಡುತ್ತಿವೆ. ಹೀಗಿರುವಾಗ ಅತ್ತ ಸೆಪ್ಟಂಬರ್ 29ರ ಘಟನೆಗೆ ಸಂಬಂಧಿಸಿದಂತೆ ನಿಯಂತ್ರಣ ರೇಖೆಯಲ್ಲಿ ಯಾವುದೇ ಗುಂಡಿನ ಚಕಮಕಿಗಳು ನಡೆದಿರುವುದನ್ನು ಭಾರತ, ಪಾಕಿಸ್ತಾನಗಳಲ್ಲಿರುವ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ತಂಡ ಪ್ರತ್ಯಕ್ಷವಾಗಿ ವೀಕ್ಷಿಸಿಲ್ಲವೆಂದು ವಿಶ್ವಸಂಸ್ಥೆಯ ಕಾರ್ಯದರ್ಶಿಯ ವಕ್ತಾರರು ಹೇಳುತ್ತಿದ್ದಾರೆ! ವಾಸ್ತವದಲ್ಲಿ ಈ ಹಿಂದಿನ ಯುಪಿಎ ಸರಕಾರದ ಪ್ರತಿಕ್ರಿಯೆಗೂ ಮೋದಿ ಸರಕಾರದ್ದಕ್ಕೂ ವಿಶೇಷ ವ್ಯತ್ಯಾಸಗಳೇನೂ ಇಲ್ಲ. ಅಂದು ನಮ್ಮ ಬಹುತೇಕ ಟಿವಿ ಮತ್ತು ಸಾಮಾಜಿಕ ಜಾಲತಾಣಗಳು ವಿರೋಧ ಪಕ್ಷಗಳನ್ನು ಬೆಂಬಲಿಸುತ್ತ ದುರ್ಬಲ ಪ್ರತಿಕ್ರಿಯೆಗಾಗಿ ಆಳುವ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದವು. ಆದರೆ ಈ ಭಾರೀ ಮಾಧ್ಯಮಗಳ ಪ್ರತಿಕ್ರಿಯೆ ತೀರ ಭಿನ್ನವಾಗಿರುವುದನ್ನು ಗಮನಿಸಬಹುದು. ಮೋದಿ ಕಳೆದ ಡಿಸೆಂಬರ್‌ನಲ್ಲಿ ಅನಿರೀಕ್ಷಿತವಾಗಿ ಲಾಹೋರಿಗೆ ತೆರಳಿ ನವಾಝ್ ಷರೀಫರನ್ನು ಭೇಟಿಯಾದಾಗ, ಬಟ್ಟೆಬರೆ ಮೊದಲಾದ ಗಿಫ್ಟ್ಟ್‌ಗಳ ವಿನಿಮಯ ನಡೆದಾಗ, ಪಾಕಿಸ್ತಾನದ ತನಿಖಾ ತಂಡಕ್ಕೆ ಪಠಾಣ್‌ಕೋಟ್ ಭೇಟಿಗೆ ಅನುಮತಿಯಿತ್ತಾಗ ಆಗಬೇಕಾದಷ್ಟು ವಿಶ್ಲೇಷಣೆೆಗಳು ಆಗಲಿಲ್ಲ. ಬದಲು ಮೆಚ್ಚುಗೆ, ಸಮರ್ಥನೆಗಳು ವ್ಯಕ್ತವಾಗಿದ್ದವು. ಅದೇ ಮೋದಿ ಜಾಗದಲ್ಲಿ ಸಿಂಗ್ ಇದ್ದಿದ್ದರೆ ಟೀಕೆಗಳ ಸುರಿಮಳೆ ಆಗುತ್ತಿದ್ದುದು ನಿಶ್ಚಿತ. ಇವತ್ತು ಮೋದಿ ಸರಕಾರವನ್ನು, ಸಂಘ ಪರಿವಾರವನ್ನು ಟೀಕಿಸುವ ಮಾಧ್ಯಮಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು ಆ ಟೀಕೆಗಳು ಕೂಡ ತುಂಬಾ ಕ್ಷೀಣಧ್ವನಿಯಲ್ಲಿರುವುದು ಎದ್ದುಕಾಣುವಂತಿದೆ. ಕಾರಣ ಬಹಳ ಸ್ಪಷ್ಟವಿದೆ: ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲಿ ಆಗುತ್ತಿರುವಂತೆ ಮಾಧ್ಯಮಗಳಲ್ಲಿಯೂ ವ್ಯವಸ್ಥಿತ ಕೇಸರೀಕರಣ ನಡೆದಿದೆ. ಇದರೊಂದಿಗೆ ಜಾಹೀರಾತುಗಳ ಆಯುಧವೂ ಇರುವುದರಿಂದ ಬಹುತೇಕ ಮಾಧ್ಯಮಗಳು ಮೋದಿ ಸರಕಾರದ ವಕ್ತಾರರಂತಾಗಿವೆ. ಹೊಗಳುವಿಕೆ, ಮುಖಸ್ತುತಿಗಳೂ ಜಾಸ್ತಿಯಾಗಿವೆ ಎನ್ನಬಹುದು. ಗುಜರಾತ್ ಹತ್ಯಾಕಾಂಡದ ಬಗ್ಗೆ, ನಕಲಿ ಎನ್‌ಕೌಂಟರ್‌ಗಳ ಬಗ್ಗೆ, ಆರೆಸ್ಸೆಸ್‌ನ ಅನೈತಿಕ ಚಟುವಟಿಕೆಗಳ ಬಗ್ಗೆ ತನಿಖಾ ವರದಿಗಳನ್ನು ಪ್ರಕಟಿಸಿದ ಇಂಗ್ಲಿಷ್ ನಿಯತಕಾಲಿಕಗಳ ಸಂಪಾದಕರು ಕೆಲಸ ಕಳೆದುಕೊಂಡಿರುವುದಷ್ಟೇ ಅಲ್ಲ ಅವುಗಳ ನಿಲುವು ಕೂಡ ಈಗ ಹೆಚ್ಚು ಕಡಿಮೆ 180 ಡಿಗ್ರಿ ಬದಲಾಗಿರುವುದನ್ನು ಕಾಣಬಹುದು. ಕೇಸರೀಕರಣದ ವೇಗವನ್ನು ನೋಡುವಾಗ ಮಾಧ್ಯಮಗಳು ಸಂಪೂರ್ಣ ನಿಯಂತ್ರಣಕ್ಕೊಳಪಡುವ ದಿನಗಳು ದೂರವಿಲ್ಲವೆಂದೆ ಅನಿಸುತ್ತದೆ. ಹಿಟ್ಲರನ ಆಡಳಿತದಲ್ಲಿ ಜರ್ಮನಿಯಲ್ಲಿ ಆದದ್ದೂ ಇದೇ. ಮೋದಿ ಸರಕಾರ ಬಿಂಬಿಸಲೆತ್ನಿಸುತ್ತಿರುವಂತೆ ಸೆಪ್ಟಂಬರ್ 29ರಂದು ನಡೆದುದೆನ್ನಲಾದ ಸರ್ಜಿಕಲ್ ದಾಳಿ ಇದೇ ಮೊದಲ ಬಾರಿಗೆ ಆಗಿರುವುದಲ್ಲ. ಇಂತಹ ಅನೇಕ ದಾಳಿಗಳು ಈ ಹಿಂದೆಯೂ ಅಂದರೆ 2014ರ ಮೇ ತಿಂಗಳಿಗೂ ಹಿಂದೆ ನಡೆದಿವೆ. ಆದರೆ ಇಂತಹ ಗುಪ್ತ ಕಾರ್ಯಾಚರಣೆಗಳನ್ನು ರಹಸ್ಯವಾಗಿ ಇಡಲಾಗುತ್ತಿತ್ತು; ಅದನ್ನೆಲ್ಲ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುತ್ತಿರಲಿಲ್ಲ. ವಾಸ್ತವವಾಗಿ 1990ರ ದಶಕದಿಂದ ಪ್ರಾರಂಭವಾಗಿರುವ ಇಂತಹ ನಿರ್ದಿಷ್ಟ್ಟ ದಾಳಿಗಳು 2003ರ ತನಕ ನಿರಂತರವಾಗಿ ನಡೆದಿವೆ; 2003ರಲ್ಲಾದ ಕದನವಿರಾಮದಿಂದಾಗಿ ಸ್ಥಗಿತಗೊಂಡ ಬಳಿಕ 2008ರಿಂದ ಪುನರಾರಂಭಗೊಂಡಿವೆ. ಆದರೆ ಈ ಬಾರಿಯ ದಾಳಿಗಳಿಗೆ ಭಾರೀ ಪ್ರಚಾರ ನೀಡುತ್ತಿರುವುದರ ಹಿಂದೆ ಬಹುಶಃ ಮೂರು ಉದ್ದೇಶಗಳಿರಬಹುದು. ಒಂದು ಮೋದಿಯ ಸ್ವಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದು. ಎರಡು, ದೇಶಭಕ್ತರ ಪ್ರತೀಕಾರದ ಕೂಗನ್ನು ಮನ್ನಿಸುವುದು. ಮೂರು, ಜನರ ಗಮನವನ್ನು ಆಂತರಿಕ ಸಮಸ್ಯೆಗಳಿಂದ ಆಚೆ ಸೆಳೆಯುವುದು. ಮೂಲಗಳ ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿಯಂತ್ರಣ ರೇಖೆಗೆ ಸಮೀಪವಾಗಿ ಅಂದರೆ ಅರ್ಧದಿಂದ ಒಂದು ಕಿ.ಮೀ. ದೂರದಲ್ಲಿ ಸುಮಾರು 12 ಉಗ್ರರ ಕಟ್ಟೆಗಳಿವೆ. ಕಟ್ಟೆಗಳು ಎಂದರೆ ಸಣ್ಣಪುಟ್ಟ ಬಾಡಿಗೆ ಮನೆಗಳು. ಇವುಗಳಲ್ಲಿ ಒಬ್ಬ ಅಥವಾ ಇಬ್ಬರು ಉಗ್ರರು ಸದಾಕಾಲ ಇರುತ್ತಾರೆ. ಭಾರತಕ್ಕೆ ನುಸುಳಲಿರುವ ತಂಡವನ್ನು ದೂರದ ಶಿಬಿರಗಳಲ್ಲಿ ಅಣಿಗೊಳಿಸಿದ ನಂತರ ಅವರನ್ನೆಲ್ಲ ಮೊದಲು ಈ ಕಟ್ಟೆಗಳಿಗೆ ರವಾನಿಸಲಾಗುತ್ತದೆ. ಮುಂದೆ ಇಲ್ಲಿಂದ ಅವರನ್ನು ಭಾರತದೊಳಗೆ ಕಳುಹಿಸಲಾಗುತ್ತದೆ. ಭಾರತೀಯ ಸೇನೆಯ ಸೆಪ್ಟಂಬರ್ 29ರ ಕಾರ್ಯಾಚರಣೆ ನಡೆದಿರುವುದು ಇಂತಹ 7 ಅಥವಾ 8 ಕಟ್ಟೆಗಳ ಮೇಲೆ ಎನ್ನಲಾಗುತ್ತಿದೆ. ದಾಳಿಯಲ್ಲಿ 3 ಕಟ್ಟೆಗಳು ಸಂಪೂರ್ಣವಾಗಿ ದ್ವಂಸಗೊಂಡಿವೆ ಎನ್ನಲಾಗಿದೆೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಾಕಿಸ್ತಾನದಲ್ಲಿ ವಿಶೇಷ ತರಬೇತು ಪಡೆಯುತ್ತಿರುವ ದೊಡ್ಡ ಸಂಖ್ಯೆಯ ಉಗ್ರಗಾಮಿಗಳೆಲ್ಲಾ ಇರುವುದು ನಿಯಂತ್ರಣ ರೇಖೆಯಿಂದ ತುಂಬಾ ದೂರದಲ್ಲಿರುವ ತರಬೇತಿ ಶಿಬಿರಗಳಲ್ಲಿ; ಇಂತಹ ಕಟ್ಟೆಗಳಲ್ಲಿ ಅಲ್ಲ. ಹೀಗಾಗಿ ಭಾರತೀಯ ಸೇನೆಯ ತಥಾಕಥಿತ ದಾಳಿಯಲ್ಲಿ ಭಾರತದೊಳಕ್ಕೆ ನುಸುಳಲಿದ್ದ ಕೆಲವು ಉಗ್ರರು ಹತರಾಗಿರಬಹುದಾದರೂ ಇದರಿಂದಾಗಿ ಲಷ್ಕರೆ ಎ ತಯ್ಯಿಬ, ಜೈಶೆ ಎ ಮುಹಮ್ಮದ್ ಇತ್ಯಾದಿಗಳ ಸಾಮರ್ಥ್ಯಕ್ಕೆ ಗಮನಾರ್ಹ ಧಕ್ಕೆಯಾಗಲಾರದು.
ಸೆಪ್ಟಂಬರ್ 18ರ ಉರಿ ದಾಳಿಯ ಬಳಿಕ ಈ ಹಲ್ಲ್ಲಿಗೆ ಪ್ರತಿಯಾಗಿ ದವಡೆಯನ್ನೆ ಮುರಿಯಬೇಕು ಎಂದು ಒಕ್ಕೊರಲಲ್ಲಿ ಬೊಬ್ಬಿರಿದ ದೇಶಭಕ್ತರೆಲ್ಲ ಪಾಕಿಸ್ತಾನಕ್ಕೆ ತಿರುಗೇಟು ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದರೆ ಅತ್ತ ಅಮೆರಿಕ ಸರಕಾರ ಪಾಕಿಸ್ತಾನದೊಂದಿಗೆ ಸೇನಾ ಸಹಕಾರ ಬಲಪಡಿಸಲು ಮಾರ್ಗೋಪಾಯಗಳನ್ನು ಅರಸುತ್ತಿದೆ. ಸೆಪ್ಟಂಬರ್ 19ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಪಾಕಿಸ್ತಾನಕ್ಕೆ ತೆರಳಿ ಪ್ರಧಾನಿ ನವಾಝ್ ಷರೀಫ್ ಜೊತೆ ಮಾತುಕತೆ ನಡೆಸುತ್ತಾನೆ. ಸೆಪ್ಟಂಬರ್ 21ರಂದು ರಾವಲ್‌ಪಿಂಡಿಯಲ್ಲಿ ನಡೆದ ಅಮೆರಿಕ-ಪಾಕಿಸ್ತಾನ ರಕ್ಷಣಾ ಸಲಹೆ ಗುಂಪಿನ ಸಭೆಯಲ್ಲಿ ಭಾಗವಹಿಸುತ್ತಾರೆ.ಸಭೆಯ ನಂತರ ನೀಡಲಾದ ಜಂಟಿ ಹೇಳಿಕೆಯಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಲ್ಲಿ ಭದ್ರತಾ ಸಹಭಾಗಿತ್ವ ಒಪ್ಪಂದದ್ದೆ ಪ್ರಧಾನ ಪಾತ್ರವೆಂದು ಹೇಳಲಾಗಿದೆ. ಒಪ್ಪಂದದನ್ವಯ ಎರಡೂ ದೇಶಗಳು ತಮ್ಮ ನಡುವಿನ ಸದೃಢ ರಕ್ಷಣಾ ಸಂಬಂಧವನ್ನು ಭವಿಷ್ಯತ್ತಿನಲ್ಲೂ ಮುಂದುವರಿಸುವುದಕ್ಕೆ ಬದ್ಧವಾಗಿವೆ. ಇದೆಲ್ಲ ನೀಡುವ ಸಮಗ್ರ ಚಿತ್ರಣ ಏನೆಂದರೆ ಪಾಕಿಸ್ತಾನ ಜೊತೆಗಿನ ವಿಶಿಷ್ಟ ಮಿಲಿಟರಿ ಸಂಬಂಧಗಳಿಗೆ ಅಮೆರಿಕ ಈಗಲೂ ಬಹಳ ಮಹತ್ವ ನೀಡುತ್ತಿದೆ. ಅದು ತನ್ನ ಅಫ್ಘಾನಿಸ್ತಾನದೊಳಗಿನ ಕಾರ್ಯಾಚರಣೆಗಳಿಗೆ ಇಂದಿಗೂ ಪೂರ್ತಿಯಾಗಿ ಪಾಕಿಸ್ತಾನದ ಮೇಲೆ ಹೊಂದಿಕೊಂಡಿದೆ. ಕೊನೆಯದಾಗಿ ಭಯೋತ್ಪಾದನಾ ವಿರೋಧಿ ಚಟುವಟಿಕೆಗಳು, ಪ್ರಾದೇಶಿಕ ಸ್ಥಿರತೆ ಮತ್ತು ಇತರ ಭದ್ರತಾ ಸಹಕಾರದ ಕ್ಷೇತ್ರಗಳು ತಮ್ಮೆರಡು ದೇಶಗಳ ಸಮಾನ ಗುರಿ ಎನ್ನುವ ಜಂಟಿ ಹೇಳಿಕೆ, ಯಾವುದೇ ದೇಶದ ನೆಲವನ್ನು ಬಳಸಿ ಇತರ ದೇಶಗಳನ್ನು ಅಸ್ಥಿರಗೊಳಿಸುವುದು ಸಲ್ಲದು ಎಂದೂ ಉಪದೇಶಿಸುತ್ತದೆ! ಇದೆಲ್ಲ ತೀರ ಹಾಸ್ಯಾಸ್ಪದವಾಗಿದೆ ಎಂದೇ ಹೇಳಬೇಕಾಗುತ್ತದೆ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯವಾಗಿ ಪ್ರತ್ಯೇಕಗೊಳಿಸುವೆನೆಂದು ಮೋದಿ ಶಪಥ ಮಾಡಿದ ಹೊರತಾಗಿಯೂ ಅಮೆರಿಕದ ಪೆಂಟಗನ್ ಪಾಕಿಸ್ತಾನದೊಂದಿಗಿನ ವಾಣಿಜ್ಯ ವ್ಯವಹಾರಗಳನ್ನು ಎಂದಿನಂತೆ ಮುಂದುವರಿಸಿದೆ. ಇದರರ್ಥ ಭಾರತ ಮತ್ತು ಅಮೆರಿಕ ನಡುವಿನ ನಿಕಟ ಸಹಭಾಗಿತ್ವದ ಒಪ್ಪಂದ, ಪೆಂಟಗನ್‌ನ ಮುಖ್ಯಸ್ಥ ಆಷ್ಟನ್ ಕಾರ್ಟರ್‌ಗೆ ಭಾರತದ ಬಗ್ಗೆ ಇರುವ ಸ್ನೇಹದ ಭಾವನೆ, ಸೇನಾಪಡೆಗಳ ಚಲನವಲನಗಳ ಕುರಿತಂತೆ ಉಭಯ ದೇಶಗಳ ನಡುವೆ ಆಗಿರುವ ಲಾಜಿಸ್ಟಿಕ್ಸ್ ಒಪ್ಪಂದ ಮುಂತಾದವುಗಳಿಗೆಲ್ಲ ಏನೂ ಬೆಲೆ ಇಲ್ಲ ಎಂದಲ್ಲವೇ? ಸಾಲದುದಕ್ಕೆ ಬಲೂಚಿಸ್ತಾನದ ವ್ಯವಹಾರಗಳಲ್ಲಿ ಭಾರತದ ಹಸ್ತಕ್ಷೇಪದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಎತ್ತಲಾಗುವುದೆಂಬ ವರ್ತಮಾನಗಳಿವೆ ಎಂದರೆ ಬಲೂಚಿಸ್ತಾನ ಕುರಿತ ಮೋದಿಯ ಮಾತುಗಳು ಅಮೆರಿಕಕ್ಕೆ ರುಚಿಸಿಲ್ಲವೆಂದೆ ಅರ್ಥ. ಒಬಾಮರನ್ನು ಬರಾಕ್ ಎಂದು ಸಂಬೋಧಿಸುವ ಮೂಲಕ ಅಮೆರಿಕಕ್ಕೆ ಭಾರೀ ನಿಕಟವಾಗಿರುವಂತೆ ತೋರ್ಪಡಿಸಿದ್ದು, ಮ್ಯಾಡಿಸನ್ ಗಾರ್ಡನ್‌ನಲ್ಲಿ ನಡೆಸಿದ ಮನರಂಜನಾ ಪ್ರದರ್ಶನ ಮುಂತಾದುವೆಲ್ಲ ದೊಡ್ಡ ಡ್ರಾಮಾ ಎಂದು ಜನರಿಗೆ ಈಗಲಾದರೂ ಅರ್ಥವಾಗಬೇಕು. ಇಷ್ಟೆಲ್ಲ ಆದ ಬಳಿಕ ಪ್ರಶ್ನೆ ಏನೆಂದರೆ ಸೆಪ್ಟಂಬರ್ 29ರ ತಥಾಕಥಿತ ನಿರ್ದಿಷ್ಟ್ಟ ದಾಳಿಗಳ ನಂತರದಲ್ಲಿ ಪಾಕಿಸ್ತಾನಿ ಉಗ್ರರ ದಾಳಿಗಳು ಕಮ್ಮಿಯಾಗಲಿವೆಯೇ? ಇಲ್ಲವೆಂದೆ ತೋರುತ್ತದೆ. ಪಾಕಿಸ್ತಾನದಲ್ಲಿರುವ ಉಗ್ರಗಾಮಿ ಸಂಘಟನೆಗಳು ಉರಿ ಮಾದರಿಯ ಮತ್ತೊಂದು ದಾಳಿ ನಡೆಸಬಹುದು, ಭಾರತೀಯ ನಗರಗಳ ಮೇಲೆ ದಾಳಿ ಮಾಡಬಹುದು, ಅನ್ಯದೇಶಗಳಲ್ಲಿರುವ ಭಾರತೀಯ ಗುರಿಗಳ ಮೇಲೆ ದಾಳಿ ಮಾಡಬಹುದು. ಹಾಗಾದರೆ ನಿರ್ದಿಷ್ಟ್ಟ ದಾಳಿಗಳಿಗೆ ಇಷ್ಟೊಂದು ಪ್ರಚಾರ ಕೊಟ್ಟಿರುವುದರ ಉದ್ದೇಶ ಏನಿರಬಹುದು? ಈಗಾಗಲೇ ಹೇಳಿರುವಂತೆ ಮೋದಿಯ ಐವತ್ತಾರಿಂಚಿನ ಎದೆಯ ಪುನಃಶ್ಚೇತನ, ದೇಶಭಕ್ತರ ಮನಃತೃಪ್ತಿ ಮತ್ತು ಜನರ ಗಮನವನ್ನು ಸಾಮಾಜಿಕ, ಆರ್ಥಿಕ ರಂಗಗಳಲ್ಲಿ ಆಗಿರುವ ವೈಫಲ್ಯಗಳಿಂದ ಬೇರೆಡೆಗೆ ತಿರುಗಿಸುವುದು. ಇಟಲಿ, ಜರ್ಮನಿಗಳ ಫ್ಯಾಶಿಸ್ಟ್ಟ್ ಪ್ರಭುತ್ವಗಳೂ ಹೆಚ್ಚು ಕಡಿಮೆ ಇದೇ ತಂತ್ರಗಾರಿಕೆ ಬಳಸಿದುದನ್ನು ನೆನಪಿಸಿಕೊಳ್ಳಬಹುದು. ವಾಸ್ತವದಲ್ಲಿ ನಿರ್ದಿಷ್ಟ್ಟ ದಾಳಿ, ಸಿಂಧೂ ನದಿ ನೀರಿನ ಬಳಕೆಯ ಮರುಪರಿಶೀಲನೆ, ಪಾಕಿಸ್ತಾನದ ಅತ್ಯಧಿಕ ಸವಲತ್ತು ಪಡೆದಿರುವ ರಾಷ್ಟ್ರ ಸ್ಥಾನಮಾನದ ರದ್ದತಿ ಮುಂತಾದ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದರ ಹಿಂದೆ ದೇಶದಲ್ಲಿ ಯುದ್ಧೋನ್ಮಾದದ ವಾತಾವರಣವನ್ನು ಸೃಷ್ಟಿಸುವ ಹುನ್ನಾರ ಇರುವಂತೆ ತೋರುತ್ತಿದೆ. ಗಮನಾರ್ಹವಾಗಿ ಈಗಾಗಲೇ ಸರಕಾರದ ಸೂಚನೆಯಂತೆ ಪಂಜಾಬ್ ಭಾಗದ ಗಡಿರೇಖೆಯಿಂದ 10 ಕಿ.ಮೀ. ದೂರದೊಳಗಿನ ಹಳ್ಳಿಗಳ ಸುಮಾರು 15 ಲಕ್ಷ ಜನ ಗುಳೇ ಹೋಗಲಾರಂಭಿಸಿದ್ದಾರೆ. ಸದ್ಯೋಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ ವಾತಾವರಣ ಇನ್ನಷ್ಟು ಬಿಗುವಾಗಲಿದ್ದು ಶಾಂತಿ, ಸಹಕಾರದ ಮಾತುಕತೆಗಳು ಮರೀಚಿಕೆಯಾಗಲಿವೆ ಎಂದೇ ಅನಿಸುತ್ತದೆ.
ಅಂತಿಮವಾಗಿ ಒಂದು ಮುಖ್ಯ ವಿಷಯ ಏನೆಂದರೆ ಒಂದು ಕಡೆ ಅಮೆರಿಕ, ಇಸ್ರೇಲ್‌ಗಳ ಶಸ್ತ್ರಾಸ್ತ್ರ ಉದ್ದಿಮೆಗಳಿಗೆ ನಿರಂತರ ಮಾರುಕಟ್ಟೆಯ ಆವಶ್ಯಕತೆ ಇರುವಾಗ ಇನ್ನೊಂದು ಕಡೆ ಭಾರತ, ಪಾಕಿಸ್ತಾನದಂತಹ ಸಂಘರ್ಷಗಳು ಮತ್ತು ಉಗ್ರರ ದಾಳಿಗಳು ವಿಶ್ವಾದ್ಯಂತ ನಡೆಯುತ್ತಲೇ ಇರುವುದು ಒಂದಕ್ಕೊಂದು ಪೂರಕವಾದ ಬೆಳವಣಿಗೆಗಳಾಗಿವೆ. ಆದುದರಿಂದಲೇ ಅಮೆರಿಕ ತನ್ನ ಭಯೋತ್ಪಾದನೆ ವಿರುದ್ಧದ ಸಮರವನ್ನು ಘೋಷಿಸಿದ ನಂತರ ವಿಶ್ವದಲ್ಲಿ ಉಗ್ರಗಾಮಿಗಳ ಚಟುವಟಿಕೆಗಳು ಮೊದಲಿಗಿಂತಲೂ ಹೆಚ್ಚಾಗಿರುವುದನ್ನು ಕಾಕತಾಳೀಯ ಎನ್ನಲಾಗುವುದಿಲ್ಲ.