ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ: ಒಂದು ಅವಲೋಕನ

Update: 2016-10-13 18:48 GMT

ಮೋದಿ ಸರಕಾರದ ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ ಮುಂತಾದ ಅಭಿಯಾನಗಳಿಗೂ ಈ ಹಿಂದಿನ ಸರಕಾರಗಳ ಯೋಜನೆಗಳಿಗೂ ಇರುವ ಪ್ರಧಾನ ವ್ಯತ್ಯಾಸವೆಂದರೆ ಅಪಾರ ವೆಚ್ಚದ ಆಡಂಬರಯುತ ಪ್ರಚಾರಾಂದೋಲನ. ಸ್ವಚ್ಛ ಭಾರತ ಅಭಿಯಾನದ ಪ್ರಚಾರಕ್ಕೆ ಖರ್ಚಾಗುತ್ತಿರುವ ದುಡ್ಡಿನ ಒಂದು ಭಾಗವನ್ನು ತೆರಿಗೆಯ ಮೂಲಕ ಪರೋಕ್ಷವಾಗಿ ಜನರಿಂದಲೆ ವಸೂಲಿ ಮಾಡುತ್ತಿರುವುದು ಬೇರೆ ವಿಚಾರ! ಎರಡು ವರ್ಷಗಳ ಹಿಂದೆ ಮೋದಿಯ ಜನ್ಮದಿನದಂದು ಪ್ರಾರಂಭಿಸಲಾದ ಈ ಅಭಿಯಾನವನ್ನು ಗಾಂಧೀಜಿಯ 100ನೆ ಜನ್ಮದಿನ ಬರುವ 2019ನೆ ಇಸವಿಗೆ ಮೊದಲು ಮಾಡಿಮುಗಿಸಲಾಗುವುದೆಂದು ಹೇಳಲಾಗಿದೆ. ಭಾರತದ ಎಲ್ಲಾ 4,041 ನಗರಗಳಲ್ಲಿನ 1.04 ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಾಣ, 5.08 ಲಕ್ಷ ಸಾರ್ವಜನಿಕ, ಸಾಮುದಾಯಿಕ ಶೌಚಾಲಯ ನಿರ್ಮಾಣ, ಪ್ರತಿಯೊಂದು ಮನೆಯಿಂದ ತ್ಯಾಜ್ಯ ಸಂಗ್ರಹ ಮತ್ತು ಘನತ್ಯಾಜ್ಯ ವಿಲೇವಾರಿಯ ಗುರಿಗಳನ್ನು ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಒಟ್ಟು ವೆಚ್ಚ 62,009 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದ್ದು ಇದಕ್ಕಾಗಿ ವಿಶ್ವಬ್ಯಾಂಕ್ ನಿಂದ 1.5 ಬಿಲಿಯ ಡಾಲರು ಸಾಲವನ್ನೂ ಎತ್ತಲಾಗಿದೆ. ಮೋದಿ ಸರಕಾರ ಘೋಷಿಸಿರುವ ಇದೇ ರೀತಿಯ ಇನ್ನೊಂದು ಯೋಜನೆಯೆಂದರೆ ಡಿಜಿಟಲ್ ಇಂಡಿಯ. ಇದರ ಪ್ರಕಾರ 2019ರೊಳಗೆ ಎಲ್ಲರಿಗೂ ಬ್ರಾಡ್‌ಬ್ಯಾಂಡ್ ಸೇವೆ ಮತ್ತು ಮನೆಮನೆಗೆ ಎಲ್ಲಾ ಬಗೆಯ ಸೇವೆಗಳನ್ನು ಒದಗಿಸಲಾಗುವುದಂತೆ. ಇವೆರಡೂ ಯೋಜನೆಗಳು ಯಾವ ಹಂತದಲ್ಲಿವೆ ಎಂದು ನೋಡೋಣ. ಭಾರತ ಎಷ್ಟು ಸ್ವಚ್ಛವಾಗಿದೆ?

ಸ್ವಚ್ಛ ಭಾರತ ಕಾರ್ಯಕ್ರಮ ಕೇವಲ ಕಸ ಗುಡಿಸುವುದಕ್ಕಷ್ಟೆ ಸೀಮಿತವಾಗಿರುವಂತಿದೆ. ಅತ್ತ ಶೌಚಾಲಯ ನಿರ್ಮಾಣ ಕಾರ್ಯ ಕುಂಟುತ್ತ ಸಾಗಿದೆ. ರಾಷ್ಟ್ರೀಯ ಸಮೀಕ್ಷಾ ಸಂಸ್ಥೆಯ (National Sample Survey OrganisationResearch Institute for Compassionate Economics) ಇತ್ತೀಚಿನ ಅಧ್ಯಯನ ತಿಳಿಸುವಂತೆ 2015-16ರ ಮೊದಲ 11 ತಿಂಗಳುಗಳ ಅವಧಿಯಲ್ಲಿ ದೇಶಾದ್ಯಂತ ಸುಮಾರು 1.09 ಕೋಟಿ ಶೌಚಾಲಯಗಳನ್ನು ಕಟ್ಟಿಸ ಲಾಗಿದೆ. ಆದರೆ ಗ್ರಾಮೀಣ ಭಾಗದ ಶೇ. 52.1ರಷ್ಟು ಜನ ಅವುಗಳನ್ನು ಉಪಯೋಗಿಸುತ್ತಿಲ್ಲ. ಹಳ್ಳಿ ಶಾಲೆಗಳಲ್ಲಿ ಸೌಕರ್ಯ ಒದಗಿಸಿದ ಹೊರತಾಗಿಯೂ 56.6 ಪ್ರತಿಶತ ಜನ ಮತ್ತೂ ಬಯಲು ಶೌಚಾಲಯವನ್ನೆ ಆರಿಸಿಕೊಂಡಿದ್ದಾರೆ. ರಾಷ್ಟ್ರೀಯ ಸಮೀಕ್ಷಾ ಸಂಸ್ಥೆಯ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ಬಳಕೆಗೆ ಬೇಕಾದ ನೀರಿರುವುದು ಕೇವಲ 42.5 ಪ್ರತಿಶತ ಮನೆಗಳಲ್ಲಿ. ನೀರಿಲ್ಲದೆ ಶೌಚಾಲಯ ಕಟ್ಟಿಸಿ ಏನು ಉಪಯೋಗ? ಮತ್ತೊಂದು ಮುಖ್ಯ ಸಮಸ್ಯೆಯೆಂದರೆ ದ್ರವತ್ಯಾಜ್ಯದ ವಿಲೇವಾರಿಗೆ ಅಗತ್ಯವಿರುವ ಮೂಲಭೂತ ವ್ಯವಸ್ಥೆಗಳ ಅಲಭ್ಯತೆ. ಅಧ್ಯಯನ ನಡೆದಿರುವ ಹಳ್ಳಿಗಳ ಪೈಕಿ ಶೇ. 44ರಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. 44.4 ಪ್ರತಿಶತ ಹಳ್ಳಿಗಳಲ್ಲಿ ಶೌಚಾಲಯಗಳ ತ್ಯಾಜ್ಯ ನೀರನ್ನು ಕೆರೆ, ಗದ್ದೆಗಳಿಗೆ ಹರಿಸಲಾಗುತ್ತಿದೆ. ಉಳಿದ 55.6 ಪ್ರತಿಶತ ಹಳ್ಳಿಗಳ ಪೈಕಿ ಶೇ. 36.7ರಲ್ಲಿ ಕಾಂಕ್ರಿಟ್ ಅಥವಾ ಕಲ್ಲಿನ ಕಾಲುವೆಗಳಿದ್ದರೆ ಶೇ. 19ರಷ್ಟು ಹಳ್ಳಿಗಳಲ್ಲಿರುವುದು ಮಣ್ಣಿನ ಕಾಲುವೆಗಳು. ಇವುಗಳಲ್ಲಿ ದ್ರವತ್ಯಾಜ್ಯದ ಶೇ. 16ರಷ್ಟನ್ನು ಕೊಳಗಳಿಗೆ, ಶೇ. 24ರಷ್ಟನ್ನು ಸ್ಥಳೀಯ ನಾಲೆಗೆ ಮತ್ತು ಶೇ. 7ರಷ್ಟನ್ನು ಸ್ಥಳೀಯ ಹೊಳೆಗೆ ಬಿಡಲಾಗುತ್ತಿದೆ. ಎಲ್ಲಕ್ಕಿಂತಲೂ ಮುಖ್ಯ ವಿಷಯವೆಂದರೆ ನೀರಿನ ಅಭಾವ ತೀವ್ರವಿರುವುದರಿಂದ ಇರುವ ಶೌಚಾಲಯಗಳೂ ಪ್ರಯೋಜನಕ್ಕೆ ಬಾರದಂತಾಗಿವೆ. ಮೋದಿ ಸರಕಾರ ಎರಡು ವರ್ಷಗಳ ಹಿಂದೆ ಪ್ರಾರಂಭಿಸಿದ್ದ 702 ಸಂಸದರನ್ನೊಳಗೊಂಡ ಸಂಸದ ಆದರ್ಶ ಗ್ರಾಮ ಯೋಜನೆಯನ್ನು ಜ್ಞಾಪಿಸಿಕೊಳ್ಳಿ. ಇವತ್ತಿನ ವಾಸ್ತವ ಏನೆಂದರೆ ಈ ಆದರ್ಶ ಗ್ರಾಮಗಳ ಪೈಕಿ ಶೇ. 80ರಷ್ಟು ಗ್ರಾಮಗಳಲ್ಲಿ ಜನ ಈಗಲೂ ಬಯಲು ಶೌಚಾಲಯವನ್ನೆ ನೆಚ್ಚಿಕೊಂಡಿದ್ದಾರೆ! ವಾಸ್ತವದಲ್ಲಿ ಸ್ವಚ್ಛ ಭಾರತ ಅಭಿಯಾನ ಬರೀ ಸಾರ್ವಜನಿಕ ಸ್ಥಳಗಳ ನೈರ್ಮಲ್ಯದ ಮೇಲೆ ಕೇಂದ್ರೀಕರಿಸುತ್ತಿದ್ದು ಹೆಚ್ಚಿನ ಜನರಿಗೆ ಬಯಲು ಶೌಚ ನಿರ್ಮೂಲನವೂ ಅದರ ಪ್ರಮುಖ ಗುರಿಗಳಲ್ಲೊಂದೆಂಬ ವಿಚಾರದ ಅರಿವಿಲ್ಲವೆಂದು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಲ್ಲಿ 56.4 ಪ್ರತಿಶತ ಮನೆಗಳು ಒಳಚರಂಡಿ ವ್ಯವಸ್ಥೆಗೆ ಜೋಡಿಸಲ್ಪಟ್ಟಿದ್ದರೂ ಹೆಚ್ಚಿನ ತ್ಯಾಜ್ಯ ನೇರವಾಗಿ ನದಿಗಳನ್ನು ಸೇರುತ್ತಿದೆ. ನಡುವೆ ಇದೇ ಅಕ್ಟೋಬರ್ ತಿಂಗಳ ಎರಡನೆ ವಾರದಲ್ಲಿ ಗುಜರಾತಿನ ರಾಜಧಾನಿ ಗಾಂಧಿನಗರದಲ್ಲಿ ನಡೆದಂತಹ ಅತ್ಯಂತ ಅಸಹ್ಯಕರ ಘಟನೆಯನ್ನು ನೋಡಿದರೆ ಸಂಘಪರಿವಾರಗಳು ಸ್ವಚ್ಛ ಭಾರತವನ್ನು ತಮ್ಮದೆ ಆದ ರೀತಿಯಲ್ಲಿ ಅರ್ಥೈಸಿಕೊಂಡಿರುವ ಹಾಗೆ ತೋರುತ್ತದೆ. ಅಲ್ಲಿನ ವಿಹಿಂಪ ಮತ್ತು ಬಜರಂಗ ದಳ ಕಾರ್ಯಕರ್ತರು ಲಯನ್ಸ್ ಕ್ಲಬ್, ತಂಗನಾತ್ ಮತ್ತು ಸೆಕ್ಟರ್ 6ರ ಗರ್ಭಾ ನೃತ್ಯ ಕಾರ್ಯಕ್ರಮಗಳಿಗೆ ಬಂದವರ ಮೇಲೆಲ್ಲ ದನದ ಉಚ್ಚೆಯನ್ನು ಸಿಂಪಡಿಸಿ ಅವರನ್ನು ಸ್ವಚ್ಛಗೊಳಿಸಲು ಶುರುಹಚ್ಚಿದ್ದರು. ಇದಕ್ಕೆ ತೀವ್ರ ಮಟ್ಟದ ಆಕ್ಷೇಪಣೆ ವ್ಯಕ್ತವಾಗಿ ಪೊಲೀಸರಿಗೆ ದೂರು ಕೊಟ್ಟ ಬಳಿಕವೆ ಈ ಹೊಲಸು ಕೆಲಸವನ್ನು ನಿಲ್ಲಿಸಲಾಗಿದೆ! ಗುಜರಾತ್ ಮಾದರಿ

ಮೋದಿಯ ತವರೂರಾದ ಗುಜರಾತಿನಲ್ಲಿ ಸ್ವಚ್ಛ ಭಾರತ ಅಭಿಯಾನ ಸದ್ಯ ಯಾವ ಹಂತದಲ್ಲಿದೆ ಎಂದು ತಿಳಿಯಲು ರಾಜ್ಯದ ಪ್ರತಿಷ್ಠಿತ ನಗರಿ ಅಹ್ಮದಾಬಾದಿಗೆ ಒಂದು ಪುಟ್ಟ ಭೇಟಿ ನೀಡಿದರೆ ಸಾಕು. ತನಗೆ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನ ಬೇಕೆಂದು ಕೂಗುಹಾಕುತ್ತಿರುವ ಅಹ್ಮದಾಬಾದ್ ನಗರದಲ್ಲಿ ತ್ಯಾಜ್ಯ ವಿಲೇವಾರಿಯೆ ಸರಿಯಾಗಿಲ್ಲ. ಅಲ್ಲಿ ತಿಂಗಳೊಂದರ ಸುಮಾರು 1.14 ಲಕ್ಷ ಮೆಟ್ರಿಕ್ ಟನ್ನುಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದೆಯಾದರೂ ವಿಲೇವಾರಿ ಆಗುತ್ತಿರುವುದು ಕೇವಲ ಒಂದು ಸಣ್ಣ ಅಂಶ ಮಾತ್ರ! ಮೋದಿಗೆ ತುಂಬ ಅಚ್ಚುಮೆಚ್ಚಿನದ್ದು ಎನ್ನಲಾದ, ಶೈಕ್ಷಣಿಕ ಕ್ಷೇತ್ರೀಯ ಯೋಜನೆಯ ಭಾಗವಾದ ಸಂಸ್ಕಾರ ಧಾಮದಿಂದ ಬರೀ 1.5 ಕಿಮೀ ದೂರದಲ್ಲಿರುವ ಮಣಿಪುರ ಗ್ರಾಮಕ್ಕೆ ಹೋದರೆ ದಿನಾ ಬೆಳಗ್ಗೆ ನೀರಿನ ಚೊಂಬು ಹಿಡಕೊಂಡು ಬಯಲುಗಳಲ್ಲಿ ಶೌಚಕ್ರಿಯೆಗೆ ಹೋಗುತ್ತಿರುವ ಜನ ಕಾಣಸಿಗುತ್ತಾರೆ! ಬೀದಿಯ ಇಕ್ಕೆಲಗಳಲ್ಲಿಯೂ ಸಾಲುಸಾಲು ತ್ಯಾಜ್ಯದ ರಾಶಿಗಳನ್ನು ಕಾಣಬಹುದು! ಇನ್ನು ರಾಜಧಾನಿ ಗಾಂಧಿನಗರದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿನ ಸೆಕ್ಟರ್ 8 ಎಂದರೆ ಐಎಎಸ್, ಐಪಿಎಸ್, ಐಎಫ್‌ಎಸ್ ಮುಂತಾದವುಗಳಿಗೆ ಸೇರಿದ ಗಣ್ಯಾತಿಗಣ್ಯ ಅಧಿಕಾರಿಗಳು ವಾಸ ಮಾಡುವ ಪ್ರತಿಷ್ಠಿತ ಪ್ರದೇಶ. ಆದರೆ ಇವರ ಮನೆಗೆಲಸದವರು, ಕೂಲಿಯಾಳುಗಳು ಹೇಗಿದ್ದಾರೆ? ಅವರೆಲ್ಲ ಈಗಲೂ ಮುಂಜಾವದ ಹೊತ್ತಲ್ಲಿ ಶೌಚಕ್ಕಾಗಿ ಪೊದೆ ಬಯಲುಗಳನ್ನೆ ಆಶ್ರಯಿಸುವ ಪರಿಸ್ಥಿತಿ ಇದೆ!
ಅಸಲಿಗೆ ಗುಜರಾತ್ ರಾಜ್ಯದಾದ್ಯಂತ ಪೇಟೆ ಪಟ್ಟಣಗಳಲ್ಲಿ ಇಂದಿಗೂ ಮಲ ಹೊರುವ ಪದ್ಧತಿ ಜಾರಿಯಲ್ಲಿದೆ. ‘ಅಭಿವೃದ್ಧಿ’ಯ ಮಾದರಿ ಎನ್ನಲಾದ ಆಧುನಿಕ ಅಹ್ಮದಾಬಾದ್ ನಗರವೊಂದರಲ್ಲೆ 188 ಒಣ ಪಾಯಿಖಾನೆಗಳಿರುವುದಾಗಿ ಲೆಕ್ಕ ಹಾಕಲಾಗಿದೆ. 2011ರ ಜನಗಣತಿ ಕಾಲದಲ್ಲಿ ಗುಜರಾತ್ ರಾಜ್ಯದಲ್ಲಿ 12,566 ಮಲ ಹೊರುವವರಿದ್ದರು. ಸುಮಾರು 12, 13 ವರ್ಷ ಮೋದಿ ರಾಜ್ಯಭಾರ ಕಂಡಿರುವ ಗುಜರಾತಿನ ಅಸಲಿ ಚಿತ್ರಣವಿದು.


ದೇಶಾದ್ಯಂತ ಮಲಹೊರುವಿಕೆ ಇಡೀ ದೇಶದಲ್ಲಿ ಇಂದಿಗೂ ಐದಾರು ಲಕ್ಷದಷ್ಟು ಮಲಹೊರುವವರು ಇದ್ದಾರೆಂದು ಸಾಮಾಜಿಕ ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ ಸರಕಾರಿ ಅಂಕಿಅಂಶಗಳ ಪ್ರಕಾರ ಅವರ ಜನಸಂಖ್ಯೆ ಸುಮಾರು 1.8 ಲಕ್ಷವಂತೆ. ಇವರಲ್ಲಿ ಹೆಚ್ಚಿನವರು ಗುಜರಾತ್ ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಇದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಸರಿಯಾದ ಅಂಕಿಅಂಶಗಳನ್ನು ನೀಡುತ್ತಿಲ್ಲ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವೆಂದರೆ ಒಣ ಪಾಯಿಖಾನೆಗಳು ಮತ್ತು ಮಲ ಹೊರುವವರ ಸಂಖ್ಯೆಗಳ ಕುರಿತ ಗೊತ್ತುಗುರಿಯಿಲ್ಲದ ವರದಿಗಳು. ಇವು ಹಾಸ್ಯಾಸ್ಪದವೆನ್ನುವ ಮಟ್ಟಿಗೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ! ಈ ವಿಚಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (National Commission for Scheduled Castes) ಜುಲೈ 21ರ ಸಭೆಯಲ್ಲಿ ಬಯಲಾಗಿದೆ. ಉದಾಹರಣೆಗೆ 1,57,321 ಒಣ ಪಾಯಿಖಾನೆಗಳಿರುವ ತೆಲಂಗಾಣದಲ್ಲಿ ಮಲ ಹೊರುವವರ ಸಂಖ್ಯೆ ಸೊನ್ನೆ ಅಂತೆ! ಈ ನಿಷ್ಪತ್ತಿ ಛತ್ತೀಸ್‌ಗಡದಲ್ಲಿ 4391: 3; ಕರ್ನಾಟಕದಲ್ಲಿ 24,468:302 ಮತ್ತು ಮಧ್ಯಪ್ರದೇಶದಲ್ಲಿ 39,362:36 ಇದೆಯಂತೆ! ಇದೇ ಅಧಿಕಾರಿಗಳ ವರದಿ ಪ್ರಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಲಗಳಲ್ಲಿ ಮಲ ಹೊರುವವರ ಸಂಖ್ಯೆ ಹೆಚ್ಚಾಗಿದೆಯಂತೆ!! ಇದೆಲ್ಲ ನಿಜಕ್ಕೂ ಭಾರೀ ಕುತೂಹಲಕಾರಿಯಾಗಿದೆ. ಇನ್ನು ಇವರ ಸಾಮಾಜಿಕ ಪರಿಸ್ಥಿತಿಯ ವಿಷಯಕ್ಕೆ ಬಂದರೆ ಅದರ ಸುಧಾರಣೆಗಾಗಿ 2013ರ ಬಜೆಟ್ಟಿನಲ್ಲಿ ಮುಂದಿನ ಐದು ವರ್ಷಗಳ ಅವಧಿಗೆಂದು ರೂ. 4,656 ಕೋಟಿ ಮೀಸಲಿಡಲಾಗಿತ್ತು. 2015-16ರಲ್ಲಿ ತೆಗೆದಿರಿಸಲಾದ ರೂ. 470.19 ಕೋಟಿಯಲ್ಲ್ಲಿ ಒಂದು ನಯಾಪೈಸೆಯೂ ಖರ್ಚಾಗಿಲ್ಲ ಮಾತ್ರವಲ್ಲ ಪ್ರಸಕ್ತ ಸಾಲಿನ ಬಜೆಟ್ ಅನುದಾನದಲ್ಲಿ ಇನ್ನಷ್ಟು ಕಡಿತ ಮಾಡಿ ಅದನ್ನೀಗ ರೂ. 10 ಕೋಟಿಗೆ ಇಳಿಸಲಾಗಿದೆ. ಇದರರ್ಥವೇನು? ಬಾಯಲ್ಲಿ ಮಗೂ ಮಗೂ ಎನ್ನುವ ಮೋದಿ ಸರಕಾರದ ಹೊಟ್ಟೆಯೊಳಗೆ ಧಗಧಗ ಉರಿಯಿದೆ ಎಂದಲ್ಲವೇ? ದಲಿತ, ದಮನಿತರೆಲ್ಲರೂ ಇದೇ ಸ್ಥಿತಿಯಲ್ಲಿ ಕೊಳೆಯುತ್ತಿರಬೇಕು, ಮೇಲ್ಜಾತಿಗಳು ಆಳುತ್ತಿರಬೇಕು, ಮನುವಾದಿ ಜಾತಿವ್ಯವಸ್ಥೆ ಮುಂದುವರಿಯಬೇಕು ಎಂದಲ್ಲವೇ? ಇದೆಲ್ಲವೂ ಆರೆಸ್ಸೆಸ್ ಕಟ್ಟಾಳು ಮೋದಿಯ ನಡೆನುಡಿಗಳಲ್ಲೆ ವ್ಯಕ್ತವಾಗುತ್ತದೆ. ನಿಮಗೆ ಗೊತ್ತೆ, ವಾಲ್ಮೀಕಿ ಜಾತಿಗೆ ಸೇರಿದ ಮಲ ಹೊರುವವರ ಕೆಲಸವನ್ನು ಈ ಮೋದಿ ಪೂಜಾರಿ ದೇವಸ್ಥಾನವನ್ನು ಶುಚಿಮಾಡುವುದಕ್ಕೆ ಹೋಲಿಸಿದ್ದಾರೆ. ಈ ಘೋರ ದೌರ್ಜನ್ಯವನ್ನು ಆತ ‘ಆಧ್ಯಾತ್ಮಿಕ ಅನುಭವ’ ಎಂದು ಕರೆದಿದ್ದಾರೆ. ಅಷ್ಟೆ ಅಲ್ಲ, ಅದು ಸಮಾಜ ಸೇವೆಗಾಗಿ ದೇವರೆ ಅವರಿಗೆ ವಹಿಸಿದ ಕರ್ತವ್ಯ; ಹಾಗಾಗಿ ಶತಮಾನಗಳಿಂದಲೂ ಅವರು ಅದನ್ನು ಮುಂದುವರಿಸಿದ್ದಾರೆ ಎಂಬ ಸಮರ್ಥನೆಯನ್ನೂ ನೀಡಿದ್ದಾರೆ.

ಡಿಜಿಟಲ್ ಇಂಡಿಯ ಮೋದಿ ಸರಕಾರದ ಡಿಜಿಟಲ್ ಇಂಡಿಯ ಯೋಜನೆ ಹಳೆ ಮದ್ಯ ಹೊಸ ಬಾಟಲಿಯಲ್ಲಿ ಎಂಬ ಗಾದೆಯನ್ನು ನೆನಪಿಸುತ್ತದೆ. ಈಗ ಆಗಿರುವುದೇನೆಂದರೆ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲ, ರಾಷ್ಟ್ರೀಯ ಅರಿವಿನ ಜಾಲ (National Knowledge Network) ಮತ್ತು ಇಲೆಕ್ಟ್ರಾನಿಕ್ ಆಡಳಿತ (E-Governance) ಎನ್ನುವ ಮೂರು ಹಳೆ ಯೋಜನೆಗಳನ್ನು ಒಟ್ಟು ಸೇರಿಸಿ ‘ಡಿಜಿಟಲ್ ಇಂಡಿಯ’ ಎನ್ನುವ ಒಂದೇ ಹೆಸರಿನಡಿ ತರಲಾಗಿದೆ! ತಂತಿ ಬ್ರಾಡ್‌ಬ್ಯಾಂಡ್ ಸೇವೆ ಜಾಗತಿಕವಾಗಿ ಸರಾಸರಿ ಪ್ರತಿ 100 ಜನರಲ್ಲಿ 9.4 ಜನರನ್ನು ತಲಪಿದ್ದರೆ ನಮ್ಮಲ್ಲದು ಬರೀ 1.2ರಷ್ಟಿದೆ. ಭಾರತ ವಿಶ್ವದಲ್ಲಿ 125ನೆ ಸ್ಥಾನದಲ್ಲಿದೆ. ನಿಸ್ತಂತು ಬ್ರಾಡ್‌ಬ್ಯಾಂಡ್‌ನಲ್ಲಿ ಪ್ರತಿ 100 ಜನರಲ್ಲಿ 3.2 ಜನರನ್ನಷ್ಟೆ ತಲುಪಲು ಸಾಧ್ಯವಾಗಿದ್ದು ವಿಶ್ವದಲ್ಲಿ 113ನೆ ಸ್ಥಾನದಲ್ಲಿದೆ. ಗುರಿಸಾಧನೆಯ ವಿಷಯದಲ್ಲಿ ಶೇ. 3ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಲಾಗಿದೆ. ಗುಜರಾತಿನ ಪ್ರತಿಷ್ಠಿತ ನಗರಿ ಅಹ್ಮದಾಬಾದಿನ ಸ್ಥಿತಿಯನ್ನೆ ತೆಗೆದುಕೊಳ್ಳಿ. ನ್ಯಾಯಾಧೀಶರ ಕಾಲನಿಯಿಂದ ಕೇವಲ 10 ನಿಮಿಷಗಳಲ್ಲಿ ತಲುಪಬಹುದಾದ, ಸಂಸ್ಕಾರ ಧಾಮದಿಂದ ಬರೀ 3 ಕಿಮೀ. ದೂರದಲ್ಲಿರುವ ನಗರದ ಹೊರವಲಯದಲ್ಲಿ ಈಗಲೂ ಬಿಎಸ್ಸೆನ್ನೆಲ್‌ನ ದೂರವಾಣಿ ಸೇವೆಗಳು ಲಭ್ಯವಿಲ್ಲ. ಇಲ್ಲಿ ಮೊಬೈಲ್ ಕೂಡ ಕೆಲಸಮಾಡುತ್ತಿಲ್ಲ. ಇನ್ನು ಗ್ರಾಮ ಪಂಚಾಯತ್‌ಗಳನ್ನು ಪರಸ್ಪರ ಜೋಡಿಸುವ ಕಾರ್ಯವೂ ತುಂಬಾ ತುಂಬಾ ಹಿಂದೆಬಿದ್ದಿದೆ. ಅತ್ತ 10 ರಾಜ್ಯಗಳ ನಕ್ಸಲ್ ಪೀಡಿತ ಪ್ರದೇಶಗಳಿಗೆ ದೂರಸಂಪರ್ಕ ಜಾಲವನ್ನು ದಾಖಲೆ ಸಮಯದಲ್ಲಿ ಮಾಡಿಮುಗಿಸಲಾಗಿದೆ ಎಂದು ಮೋದಿ ಸರಕಾರ ಕೊಚ್ಚಿಕೊಳ್ಳುತ್ತಿದೆ!

ಮೋದಿ ಸರಕಾರದ ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ, ಬುಲೆಟ್ ರೈಲು, ಸ್ಮಾರ್ಟ್ ಸಿಟಿ ಇತ್ಯಾದಿಗಳು ಬರೀ ಜನಮರುಳ ಘೋಷಣೆಗಳಾಗಿದ್ದು ಅವುಗಳ ಪ್ರಾಮಾಣಿಕತೆ ಪ್ರಶ್ನಾರ್ಹವಾಗಿದೆ. ಇದನ್ನು ಮೋದಿಯವರ ಹಿಂದಿನ ದಾಖಲೆಗಳೆ ಎಲ್ಲದಕ್ಕಿಂತ ಚೆನ್ನಾಗಿ ಬಿಚ್ಚಿಡುತ್ತವೆ. ಉದಾಹರಣೆಗೆ ಗುಜರಾತಿನಲ್ಲಿ 2012ರ ಚುನಾವಣೆಗಳಿಗೆ ಮೊದಲು ಬಡ ಮತ್ತು ಕೆಳಮಧ್ಯಮ ವರ್ಗಗಳಿಗೆ 5 ವರ್ಷಗಳಲ್ಲಿ 50 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದ ಮೋದಿ ಅಂದು ಪಂಚತಾರಾ ಹೋಟೆಲ್‌ನಲ್ಲಿ ಭರ್ಜರಿ ಊಟ ಹಾಕಿಸಿ ಈ ಕುರಿತ ವರ್ಣರಂಜಿತ ಕಿರುಹೊತ್ತಗೆಯನ್ನೂ ಬಿಡುಗಡೆಗೊಳಿಸಿದ್ದರು. ಆ ಭರವಸೆ ಇನ್ನೂ ಹೊತ್ತಗೆಯಲ್ಲೆ ಉಳಿದಿದೆ! ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದ ಕಾಕಿನಾಡ ಬ್ಲಾಕ್‌ನಲ್ಲಿ 2,20,000 ಕೋಟಿ ರೂ. ಬೆಲೆಬಾಳುವ 20 ಟ್ರಿಲಿಯ ಸಿಎಫ್‌ಟಿ ಗ್ಯಾಸ್ ಲಭ್ಯವಿರುವುದಾಗಿ ಗುಜರಾತ್ ರಾಜ್ಯ ಪೆಟ್ರೋಲಿಯಂ ಕಾರ್ಪೊರೇಷನ್ ಕಂಡುಹಿಡಿದಿದೆ ಎಂದು 2005ರಲ್ಲಿ ಘೋಷಿಸಿದ್ದರು. ಆದರೆ 2009ಕ್ಕಾಗುವಾಗ ಈ ಅಂದಾಜು 20 ಟ್ರಿಲಿಯ ಸಿಎಫ್‌ಟಿಯಿಂದ ಏಕಾಏಕಿ 2ಕ್ಕೆ ಇಳಿದಿದೆ! ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುವುದು, ಆ ಮೇಲೆ ಅಂಕಿ ಅಂಶಗಳೊಂದಿಗೆ ಆಟವಾಡಿ ತನಗನುಕೂಲವಾದ ಚಿತ್ರಣ ನೀಡುವುದೆ ಮೋದಿ ಸರಕಾರದ ತಂತ್ರಗಾರಿಕೆಯಾಗಿದೆ. ಹೀಗಾಗಿ ಅದು 2019ರ ಚುನಾವಣೆಗೆ ಮುನ್ನ ಎಲ್ಲಾ ಗುರಿಗಳನ್ನು ಸಾಧಿಸಲಾಗಿದೆ ಎಂದು ಕೊಚ್ಚಿಕೊಳ್ಳುವುದಂತೂ ನಿಶ್ಚಿತ. ಆದರೆ ಮೋದಿಯ ಚುನಾವಣಾಪೂರ್ವ ಭರವಸೆಗಳೆಲ್ಲವೂ ಗಾಳಿಯಲ್ಲೆ ತೇಲುತ್ತಿರುವುದನ್ನು ಕಂಡಿರುವ ಮತದಾರರೀಗ ಕೊಂಚ ಎಚ್ಚತ್ತುಕೊಂಡಿದ್ದಾರೆ. ವೋಟಿಗಾಗಿ, ಅಧಿಕಾರಕ್ಕಾಗಿ ತಮ್ಮನ್ನು ವಂಚಿಸಲಾಗುತ್ತಿದೆ ಎಂಬುದರ ಅರಿವು ಅವರಿಗೆ ಆಗುತ್ತಿದೆ.
*********
 (ಆಧಾರ: 4.10.2016ರ OrissaPostನಲ್ಲಿ ಆರ್.ಕೆ.ಮಿಶ್ರಾ ಲೇಖನ ಮತ್ತು ಇತರ ವರದಿಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News