ಅರೆಪುದಡ್ಡೆ, ಪತ್ರ್ ರೊಟ್ಟಿ, ಬೆಳ್ಳಿ ಲೋಟದ ಹಾಲು

Update: 2016-10-25 18:38 GMT

ಗ್ರೆಟ್ಟಾ ಬಾಯಿ ತನ್ನ ಹಿತ್ತಲಲ್ಲಿ ಹಬಿನಮ್ಮನವರ ಮನೆಯ ಮುಂದೆ ಒಂದು ದೊಡ್ಡ ಮನೆಯನ್ನು ಕಟ್ಟಿಸಿದರು. ಆ ಮನೆಗೆ ಒಬ್ಬರು ಸಾಹೇಬರ ಸಂಸಾರ ಬಿಡಾರಕ್ಕೆ ಬಂದರು. ಆ ಸಾಹೇಬರು ಸರಕಾರದ ಅಧಿಕಾರಿಗಳಾಗಿದ್ದರು. ಅವರಿಗೆ ಓಡಾಡಲು ಚಾಲಕ ಸಹಿತ ಕಾರು ಇತ್ತು. ಅವರ ಹಿರಿಯ ಮಗಳು ನನ್ನ ವಯಸ್ಸಿನವಳು. ಎಸೆಸ್ಸೆಲ್ಸಿ ಮುಗಿಸಿ ಮನೆಯಲ್ಲೇ ಇದ್ದಳು. ಇಬ್ಬರು ಚಿಕ್ಕ ಹುಡುಗರು. ಹಬಿನಮ್ಮನವರ ಸ್ನೇಹದಿಂದ ಅವರ ಮನೆಯವರ ಸ್ನೇಹವೂ ಆಯ್ತು. ಈ ಸ್ನೇಹದಲ್ಲಿಯೂ ನಮ್ಮ ಮನೆಯಲ್ಲಿ ನನ್ನದೇ ಹೆಚ್ಚಿನ ಪಾಲು. ಈ ಕಾರಣದಿಂದಲೇ ಅವರ ಮನೆಯ ಚಿಕ್ಕ ಹುಡುಗರಾಗಿದ್ದ ಫರ್ವೀಝ್ ಮತ್ತು ಫರ್ವೀನ್‌ರವರಿಗೆ ಸಾಂದರ್ಭಿಕವಾಗಿ ಮನೆ ಪಾಠ ಮಾಡುತ್ತಿದ್ದೆ. ಅವರು ನಮ್ಮ ಜಿಲ್ಲೆಯವರಲ್ಲ ಎಂದು ನೆನಪು ಹಾಗೆಯೇ ಅವರು ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಿದ್ದರು. ಮನೆ ಮಾತು ಹಿಂದಿಯಾಗಿತ್ತು. (ಮುಂದೆ ಅದು ಹಿಂದಿಯಲ್ಲ ಉರ್ದು ಎನ್ನುವುದು ತಿಳಿಯಿತು). ಅವರಿಗೆ ತುಳು ಬರುತ್ತಿರಲಿಲ್ಲ. ಆದ್ದರಿಂದ ಅವರ ಅಡುಗೆಗೂ ಹಬಿನಮ್ಮನವರ ಮನೆಯ ಅಡುಗೆಗೂ ವ್ಯತ್ಯಾಸವಿತ್ತು. ಅವರ ಮನೆಯಲ್ಲಿ ಚಹಾ ತಿಂಡಿ ತಿಂದು ಬರುತ್ತಿದ್ದೆನಲ್ಲಾ, ಹಾಗೆಯೇ ನಾನೂ ನಮ್ಮ ಮನೆಯಲ್ಲಿ ಮಾಡಿದ ತಿಂಡಿಯನ್ನು ಒಯ್ಯುತ್ತಿದ್ದೆ. ಹೀಗೆ ನಾನು ಒಯ್ದ ಒಂದು ತಿಂಡಿ ಅವರ ಮಗಳಿಗೆ ಇಷ್ಟವಾಯಿತು. ಅದನ್ನು ಅವಳು ಬಟಾಟೆಯಿಂದ ತಯಾರಿಸಿದ್ದು ಎಂದು ತಿಳಿದಳು.

ಆದರೆ ಅದು ಬಟಾಟೆಯದ್ದಾಗಿರದೆ ನಮ್ಮ ‘ಮಸಾಲೆ ರೊಟ್ಟಿ’ ಆಗಿತ್ತು. ತುಳುವಿನಲ್ಲಿ ‘ಅರೆಪುದಡ್ಡೆ’. ಅಂದರೆ ಅಕ್ಕಿಯಿಂದ ಮಾಡಿದ ದಪ್ಪ ರೊಟ್ಟಿಗಳನ್ನು ತೆಂಗಿನಕಾಯಿ ಸೇರಿಸಿ ರುಬ್ಬಿದ ಮಸಾಲೆಯಲ್ಲಿ ಪುನಃ ಬೇಯಿಸುವುದು. ಹಾಗೆ ಬೆಂದಾಗ ಆ ರೊಟ್ಟಿ ಮೆದುವಾಗುತ್ತದೆ. ಅದನ್ನು ಬಿಸಿಯಾಗಿ ತಿನ್ನುವುದಕ್ಕಿಂತ ತಣ್ಣಗೆ ಆದ ಮೇಲೆ ತಿಂದರೆ ತುಂಬಾ ರುಚಿ. ಅವರು ಅಕ್ಕಿ ತಿಂಡಿ ಮಾಡುತ್ತಿರಲಿಲ್ಲ. ಚಪಾತಿಯೇ ಮುಖ್ಯ ಹಾಗೂ ಅನ್ನವೂ ಬೆಳ್ತಿಗೆಯದ್ದು. ಅಪರೂಪದಲ್ಲಿ ನಮ್ಮ ಅಪ್ಪ ಆಫೀಸರನ್ನು ಭೇಟಿಯಾಗಿ ಮಾತನಾಡಿದ್ದೂ ಇದೆ. ಅಮ್ಮನೂ ಅವರ ಮಡದಿಯೊಂದಿಗೆ ಪರಿಚಿತರಾಗಿದ್ದರು.

ನಾವು ಫೆರ್ನಾಂಡಿಸ್‌ರ ಮನೆ ಬಿಡುವ ಸಂದರ್ಭವನ್ನು ಈ ಮೊದಲೇ ಹೇಳಿದ ನೆನಪು. ದಿಢೀರಾಗಿ ಮನೆ ಬಿಡಬೇಕಾದ ಅನಿವಾರ್ಯತೆ ಒದಗಿ ಬಂತು. ಈ ನಡುವೆ ಐರಿಬಾಯಿಯವರ ಮನೆ ಹಿತ್ತಿಲಿನ ಅರ್ಧ ಭಾಗ ಮಾರಾಟವಾಗಿ ಆಲ್ವರಿಸ್ ಎನ್ನುವವರು ಮನೆ ಸಹಿತವಾದ ಹಿತ್ತಲನ್ನು ಕೊಂಡಿದ್ದರು. ಅವರು ಮನೆಯ ಮುಂಭಾಗದ ಜಾಗದಲ್ಲಿ ಎರಡು ಅವಳಿ ಮನೆಗಳನ್ನು ಕಟ್ಟಿಸಿದರು. ಅದನ್ನು ಬಾಡಿಗೆಗೆ ಕೊಡುವ ಉದ್ದೇಶ ಅವರದಾಗಿತ್ತು. ನಮ್ಮ ಅಪ್ಪ ಆಲ್ವರಿಸ್‌ರಲ್ಲಿ ವಿಚಾರಿಸಿ ಅದನ್ನು ನಮಗಾಗಿ ಬಾಡಿಗೆಗೆ ಪಡೆದುಕೊಂಡಿದ್ದರು. ಆ ಬಾಡಿಗೆ ನಮಗೆ ದುಬಾರಿಯಾದುದೇ ಆಗಿತ್ತು. ಆದರೆ ಆ ಪರಿಸರ ನಮಗೆ ಒಗ್ಗಿ ಹೋಗಿದ್ದುದರಿಂದ ಸದ್ಯ ಅಲ್ಲಿಯೇ ಇರಲು ಮನಸ್ಸು ಮಾಡಿದೆವು.

  ಆಲ್ವರಿಸ್‌ರ ಮನೆಯಲ್ಲಿದ್ದಾಗ ಆ ಅವಳಿ ಮನೆಯ ಇನ್ನೊಂದು ಮನೆಗೆ ಬಾಡಿಗೆಗೆ ಬಂದವರು ಬೀಡಿ ಸಾಹೇಬರು ಅವರ ಮಡದಿಯೊಂದಿಗೆ. ಇವರು ಹೊಸದಾಗಿ ಮದುವೆಯಾದ ದಂಪತಿಗಳು. ಬೀಡಿ ಸಾಹೇಬರು ಮೊದಲೇ ಪರಿಚಿತರು. ಅವರು ಗ್ರೆಟ್ಟಾ ಬಾಯಿಯ ರಸ್ತೆ ಬದಿಯ ಕಟ್ಟಡದಲ್ಲಿ ಬೀಡಿ ಬ್ರಾಂಚೊಂದನ್ನು ಇಟ್ಟುಕೊಂಡಿದ್ದರು. ಅಲ್ಲದೆ ಇನ್ನೊಂದು ಸಣ್ಣ ಅಂಗಡಿಯನ್ನು ಕೊಂಡುಕೊಂಡಿದ್ದರು. ಈ ಅಂಗಡಿಯಲ್ಲಿ ಬಾಳೆಹಣ್ಣು, ತರಕಾರಿ, ಬ್ರೆಡ್ಡು, ಬಿಸ್ಕತ್ತು ಹೀಗೆ ದಿನ ನಿತ್ಯದ ವಸ್ತುಗಳು ಸಿಗುತ್ತಿದ್ದವು. ಇದನ್ನು ಅವರ ತಮ್ಮ ನೋಡಿಕೊಳ್ಳುತ್ತಿದ್ದರು. ಬೀಡಿ ಸಾಹೇಬರ ಮಡದಿಯ ಹೆಸರು ಝುಬೇದಕ್ಕ. ಬಹಳ ನಾಚಿಕೆಯ ಸ್ವಭಾವದವರಾಗಿದ್ದರು. ಸಾಹೇಬರು ನಮ್ಮ ಅಮ್ಮನಲ್ಲಿ ಅವಳನ್ನು ಮಾತನಾಡಿಸಿ ಎಂದು ಹೇಳುತ್ತಿದ್ದರು. ನಾವು ಅವರ ನೆರೆಯವರಾಗಿ ಒಂದು ವರ್ಷ ಪೂರ್ಣವಾಗಿ ಇರಲಿಲ್ಲ. ಆದರೂ ಆ ಮನೆಯು ನಮ್ಮ ಆತ್ಮೀಯ ವಲಯಕ್ಕೆ ಸೇರಿಕೊಂಡಿತು. ನಮ್ಮೆರಡು ಮನೆಗಳ ನಡುವಿನ ಜಾಗದಲ್ಲಿ ನಳ್ಳಿ ಹಾಗೂ ಬಟ್ಟೆ ಒಗೆಯುವ ಕಲ್ಲು ಇದ್ದು ಅಮ್ಮ ಮತ್ತು ಝುಬೇದಕ್ಕ ಮಾತನಾಡುವ ಅವಕಾಶವಿತ್ತು. ಉಳಿದ ಸಮಯ ಮಾತನಾಡಬೇಕಾದರೆ ಅವರು ಅವರ ಮನೆಯ ಬಾಗಿಲ ಅಡ್ಡದಲ್ಲಿ ಒಳ ಬದಿಯಲ್ಲೇ ನಿಂತು ಮಾತನಾಡುತ್ತಿದ್ದರು. ಮುಸ್ಲಿಂ ಸಂಪ್ರದಾಯದಂತೆ ಗಂಡಸರನ್ನು ನೋಡುವ ಮತ್ತು ಗಂಡಸರು ಅವರನ್ನು ನೋಡುವ ಸಂದರ್ಭವನ್ನು ಹೀಗೆ ನಿರ್ವಹಿಸುತ್ತಿದ್ದರು.

ಸಾಹೇಬರು ಅಥವಾ ಅವರ ತಮ್ಮ ಮನೆಗೆ ಬರುವಾಗ ರಾಶಿ ರಾಶಿ ತರಕಾರಿ ತರುತ್ತಿದ್ದರೆ ಅವರು ಅದರಲ್ಲಿ ಹೆಚ್ಚಿನ ಪಾಲು ನಮ್ಮ ಮನೆಗೆ ಕೊಡುತ್ತಿದ್ದರು. ಯಾಕೆಂದರೆ ಅವರಿಗೆ ಅದು ಹೆಚ್ಚು ಆಗಿ ಹಾಳಾಗುತ್ತದೆ ಎನ್ನುವ ಕಾರಣಕ್ಕಾಗಿ. ನಾನು ಕೇಳಿದ ಒಂದು ಮಾತು- ‘ಕೊಳೆತು ಹೋದರೂ ಬೇರೆಯವರಿಗೆ ಕೊಡಲಾರರು’ ಎಂಬುದು. ಅದಕ್ಕೆ ತದ್ವಿರುದ್ಧವಾದುದು ಝುಬೇದಕ್ಕನ ಸ್ವಭಾವ. ಇದರ ಜೊತೆಗೆ ವಿಶೇಷವಾದುದು ಎಂದರೆ ನಾವು ಅಲ್ಲಿ ಇರುವ ಸಂದರ್ಭದಲ್ಲೇ ಅವರ ಪವಿತ್ರ ತಿಂಗಳು ರಮಝಾನ್‌ನ ಉಪವಾಸ ಬಂದಿತ್ತು. ಸೂರ್ಯೋದಯದ ಮೊದಲು ಅವರು ಉಣ್ಣುತ್ತಿದ್ದ ಊಟದಲ್ಲಿ ಮನೆಯಲ್ಲಿ ಮಾಡುವ ಒಂದು ತೆಳುವಾದ ಅಕ್ಕಿ ರೊಟ್ಟಿ. ಅವರ ಬ್ಯಾರಿ ಭಾಷೆಯಲ್ಲಿ ‘ಪತ್ರ್ ರೊಟ್ಟಿ’ ಎನ್ನುತ್ತಿದ್ದರು. ಬಟ್ಟಲು ತುಂಬಾ ರೊಟ್ಟಿ ಬೆಳಗ್ಗೆ ಬೆಳಗ್ಗೆ ನಮ್ಮ ಮನೆಗೆ ಬಂದರೆ ಆ ದಿನ ತಿಂಡಿ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಹೀಗೆ ನಮಗೆ ತರಕಾರಿ ತಿಂಡಿಗಳನ್ನು ಧಾರಾಳವಾಗಿ ಕೊಡುತ್ತಿದ್ದ ಝುಬೇದಕ್ಕನ ನಾಚಿಕೆಯಿಂದ ಕೂಡಿದ ಮೃದುವಾದ ಸ್ವರದ ಮೆತ್ತಗಿನ ಮಾತು ನನ್ನ ಕಿವಿಯಲ್ಲಿ ಈಗಲೂ ಗುನುಗುನಿಸುತ್ತಿದೆ. ರಮಝಾನ್ ತಿಂಗಳ ಉಪವಾಸ ಮುಗಿದು ಹಬ್ಬದ ದಿನ ಅವರ ಮನೆಯ ಊಟ ಮುಗಿದು ಅವರ ತಾಯಿ ಮನೆಗೆ ಹೋಗುವಾಗ ನನ್ನನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದುದು ನೆನಪಿದೆ. ಅವರ ತಾಯಿ, ತಂಗಿ, ತಮ್ಮಂದಿರು ಪರಿಚಿತರೇ ಆಗಿದ್ದರು.

ಆಗಾಗ ಝುಬೇದಕ್ಕನ ಮನೆಗೆ ಬಂದಾಗ ನಮ್ಮಲ್ಲಿಯೂ ಮಾತನಾಡುತ್ತಿದ್ದರು. ಹಾಗೆಯೇ ಸಾಹೇಬರ ತಾಯಿ, ಝುಬೇದಕ್ಕನ ಅತ್ತೆಯೂ ಬರುತ್ತಿದ್ದರು. ಹೀಗೆಯೇ ಇದ್ದ ದಿನಗಳಲ್ಲಿ ಒಂದು ದಿನ ಝುಬೇದಕ್ಕನಿಗೆ ಸಿನೆಮಾ ನೋಡುವ ಆಸೆ. ಸಾಹೇಬರು ಕರೆದುಕೊಂಡು ಹೋಗುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ನಮ್ಮ ಅಮ್ಮನಲ್ಲಿ ಜೊತೆಗೆ ಬರಲು ಕೇಳಿಕೊಂಡರು. ನನ್ನ ಅಮ್ಮನಿಗೂ ಹಾಗೆ ಒಬ್ಬಳೇ ಸ್ನೇಹಿತರ ಜೊತೆ ಹೋಗಿ ಗೊತ್ತಿಲ್ಲ. ಅವರು ಅವರ ಸ್ನೇಹಿತೆ ಹಬಿನಮ್ಮನನ್ನು ಜೊತೆಗೆ ಕರೆದರು. ಜೊತೆಗೆ ಲೂಸಿ ಬಾಯಿಯೂ ಸೇರಿಕೊಂಡರು. ಝುಬೇದಕ್ಕನವರ ಕಾರಲ್ಲಿ ಈ ಹೆಂಗಸರೇ ಸಿನೆಮಾ ನೋಡಲು ಹೋದುದು ನಮ್ಮ ನೆರೆಯವರಿಗೆ ಆಶ್ಚರ್ಯದ ಸಂಗತಿಯೂ ಹೌದು. ಜೊತೆಗೆ ಇಂದು ಯೋಚಿಸಿದಾಗ ಅದು ಒಂದು ಕ್ರಾಂತಿಯೇ. ಈ ಹೆಂಗಸರನ್ನು ಕಳುಹಿಸಿದ ಮನೆಯ ಗಂಡಸರನ್ನು ನಿಜವಾಗಿಯೂ ಹೊಗಳಲೇಬೇಕು. ಝುಬೇದಕ್ಕನಿಗೆ ಹೆಚ್ಚು ಅಡುಗೆ ಬರುತ್ತಿರಲಿಲ್ಲ. ಅಮ್ಮನಿಂದ ಕೇಳಿ ಮಾಡುತ್ತಿದ್ದರು. ಹಾಗೆಯೇ ಝುಬೇದಕ್ಕ ಗರ್ಭಿಣಿಯಾದಾಗ ಅವರಿಗೆ ತುಂಬಾ ನಿದ್ದೆ ಹಾಗೂ ಸುಸ್ತು ಇರುತ್ತಿತ್ತು. ಆಗ ನಮ್ಮ ಮನೆಯಿಂದ ಅಮ್ಮ ಅವರಿಗೆ ಸಾಂಬಾರು, ಸಾರು, ಪಲ್ಯ ಕೊಡುತ್ತಿದ್ದರು. ಹಾಗೆಯೇ ನಮ್ಮ ಮನೆಯಲ್ಲಿ ವಿಶೇಷ ಅಡುಗೆ ಮಾಡಿದಾಗಲೂ ಝುಬೇದಕ್ಕನಿಗೆ ನೀಡದೆ ಉಳಿಯಲು ಸಾಧ್ಯವೇ ಇರಲಿಲ್ಲ. ಮನೆಯ ಹೆಂಗಸರು ಹೀಗೆ ನೆರೆಕರೆಯಲ್ಲಿ ಅನ್ಯೋನ್ಯವಾಗಿದ್ದಾಗ ಜಾತಿ ಧರ್ಮಗಳ ನಡುವಿನ ಅಂತರ ಕಡಿಮೆಯಾಗಿ ಸೌಹಾರ್ದ ನೆಲೆಸಲು ಸಾಧ್ಯವಿದೆಯಲ್ಲಾ? ಆದರೆ ಇಂತಹ ತಾಯಂದಿರ ಗಂಡು ಮಕ್ಕಳು ತಮ್ಮ ತಾಯಂದಿರ ಮಾತು ಕೇಳದೆ ಉಳಿಯುವುದರಿಂದಲೇ ಅಲ್ಲದೆ ವೈಷಮ್ಯ ಹುಟ್ಟುವುದು? ಬಹುಷಃ ಒಂದು ಮನೆಯಿಂದ ಇನ್ನೊಂದು ಮನೆಗೆ ಚಹಾಪುಡಿ, ಸಕ್ಕರೆ, ಮೆಣಸು, ನೀರುಳ್ಳಿ ಅಥವಾ ಹಳ್ಳಿಯಲ್ಲಾದರೆ ಎಲೆ ಅಡಿಕೆ, ನಸ್ಯ ಇವೆಲ್ಲವೂ ವಿನಿಮಯವಾಗುತ್ತಲೇ ಸೌಹಾರ್ದವೂ ನೆಲೆಗೊಳ್ಳುತ್ತಿತ್ತು ಎಂದರೆ ತಪ್ಪಲ್ಲ. ಇಂತಹ ಅನಿವಾರ್ಯತೆ ಬಡತನವಲ್ಲ. ಮನಸ್ಸಿನ ಸಿರಿತನವನ್ನು ಹೆಚ್ಚಿಸುವಂತಹುದು ಎಂದು ನನ್ನ ಭಾವನೆ. ಈ ಮನೆಯಲ್ಲಿರುವಾಗ ನಾನು ಕಾಲೇಜಿಗೆ, ತಂಗಿ ಹೈಸ್ಕೂಲಿಗೆ, ತಮ್ಮ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದೆವು. ಆರ್ಥಿಕವಾಗಿ ಅಪ್ಪನಿಗೆ ಸಾಕಷ್ಟು ತೊಂದರೆಯಾಗಿದ್ದು ಇದೆ. ಇಂತಹ ವೇಳೆಯಲ್ಲಿ ಪರೀಕ್ಷೆಯ ಫೀಸು ಕಟ್ಟಲು ತೊಂದರೆಯಾಯ್ತು. ಅದುವರೆಗೆ ಸಾಹೇಬರ ಮನೆಯೊಂದಿಗೆ ಹಣಕಾಸಿನ ಲೇವಾದೇವಿ ಇರಲಿಲ್ಲ. ಅಪ್ಪನಿಗೆ ಸಾಲ ಕೇಳಲು ಸಂಕೋಚ. ಅಪ್ಪನ ಒಪ್ಪಿಗೆಯಿಂದ ನಾನೇ ಹೋಗಿ ಝುಬೇದಕ್ಕನಲ್ಲಿ ಕೇಳಿ ಅವರ ಮೂಲಕ ಸಾಹೇಬರಿಂದ ರೂ.26ನ್ನು ಪಡಕೊಂಡು ಪರೀಕ್ಷೆಗೆ ಕಟ್ಟಿದೆ.

ಆದರೆ ಹಿಂತಿರುಗಿಸಲು ಸ್ವಲ್ಪ ತಡವಾಯ್ತು. ಕಾಲೇಜಿಗೆ ಹೋಗುವ ಮಕ್ಕಳು ತಂದೆ ತಾಯಿಗಳಿಗೆ ಗೊತ್ತಿಲ್ಲದೆ ಹೀಗೆ ಕೇಳಿ ದುರುಪಯೋಗ ಮಾಡಿರಬಹುದೇ ಎಂಬ ಸಂಶಯ ಬರುವುದು ಸಹಜವೇ. ಅದರಂತೆ ಸಾಹೇಬರು ಅಪ್ಪನಲ್ಲಿ ಈ ಬಗ್ಗೆ ವಿಚಾರಿಸಿದರು. ಅಪ್ಪ ಅವರ ಸಂಶಯ ನಿವಾರಿಸಿ ‘‘ಇಲ್ಲ, ನನಗೆ ತಿಳಿದೇ ಅವಳು ಪಡಕೊಂಡಿರುವುದು ಸ್ವಲ್ಪ ಕೈ ಕಟ್ಟಿದೆ. ಕೊಡುತ್ತೇನೆ’’ ಎಂದು ಹೇಳಿ ಮತ್ತೆ ಕೆಲ ದಿನಗಳಲ್ಲಿ ನನ್ನ ಮೂಲಕವೇ ಕೊಡಿಸಿದರು. ಹೀಗೆ ಗಂಡ ಕೇಳಿರುವುದಕ್ಕೆ ಬೇಸರಗೊಂಡ ಝುಬೇದಕ್ಕ ಕ್ಷಮೆ ಕೇಳಿದರು. ಈ ವಿಷಯವನ್ನು ನಾವ್ಯಾರು ತಪ್ಪಾಗಿ ಭಾವಿಸಿಲ್ಲ. ಆದರೆ ನನಗೆ ಮಾತ್ರ ಈ ಸಾಲವನ್ನು ಅಪ್ಪನೇ ಕೇಳುತ್ತಿದ್ದರೆ, ನನ್ನನ್ನು ಹೀಗೆ ಅನುಮಾನಿಸುವುದಕ್ಕೆ ಅವಕಾಶವಿರುತ್ತಿರಲಿಲ್ಲವಲ್ಲಾ ಎಂಬ ಯೋಚನೆ ಬಂದು ಸ್ವಲ್ಪ ಬೇಸರವಾಯಿತು. ಇಂತಹ ಸಂದರ್ಭಗಳಲ್ಲಿ ನನ್ನ ವೈಯುಕ್ತಿಕ ಬದುಕಿನ ಕಷ್ಟಗಳಿಗೆ ಸ್ಪಂದಿಸಿದವರಿಗೆ ನಾನು ಆಜನ್ಮ ಋಣಿ ಎನ್ನುವ ಭಾವ ನನ್ನಲ್ಲಿ ಯಾವತ್ತೂ ಇರುತ್ತದೆ. ಆಲ್ವರಿಸರ ಮನೆಯ ವಾಸ್ತವ್ಯ ನಮಗೆ ಒಗ್ಗಿ ಬರಲಿಲ್ಲ. ದುಬಾರಿ ಬಾಡಿಗೆಯೂ ನಮ್ಮನ್ನು ಆ ಮನೆ ಬಿಡುವಂತೆ ಒತ್ತಾಯಿಸಿತು. ಅಪ್ಪನ ಆರೋಗ್ಯವು ಕೆಟ್ಟಿತ್ತು. ಏನೆಂದು ನನಗೆ ನೆನಪಿಲ್ಲ. ಅಪ್ಪನಿಗೆ ಕಾಯಿಲೆ ಬಂದದ್ದೇ ಗೊತ್ತಿಲ್ಲ. ಅಂತಹುದರಲ್ಲಿ ಮನೆ ಬದಲಾಯಿಸಬೇಕೆಂಬ ಮಾನಸಿಕ ಒತ್ತಡ ಅಪ್ಪನಿಗೆ. ಆದರೆ ಆಸುಪಾಸಿನಲ್ಲಿ ಮನೆಗಳು ಇರಲಿಲ್ಲ. ಇದ್ದ ಮನೆಗಳಲ್ಲಿ ಎಲ್ಲರೂ ಖಾಯಂ ಆಗಿ ಇರುವವರೇ. ಹೊಸ ಮನೆ ಕಟ್ಟಿಸಿ ಬಾಡಿಗೆ ಕೊಡುವ ಸಾಮರ್ಥ್ಯ ಯಾರಿಗೂ ಇರಲಿಲ್ಲ. ಜೊತೆಗೆ ಮನೆ ಹಿತ್ತಿಲು ಮಾರಾಟಗಳು ಅಪರೂಪವಾಗಿದ್ದ ಆ ದಿನಗಳಲ್ಲಿ ನಮಗೆ ನೆರವಾದವರು ಅಪ್ಪನ ಸ್ನೇಹಿತರೂ ನನ್ನ ಶಾಲಾ ಗುರುಗಳಾದ ಗುರುವಪ್ಪ ಮಾಸ್ತರರು. ದೇರೆಬೈಲಿನ ಚರ್ಚ್‌ನ ಮುಂದುಗಡೆಯ ಓಣಿಯಲ್ಲಿ ಅವರ ಮನೆ ಹಿತ್ತಿಲು ಇತ್ತು. ಅವರ ಮನೆಯ ಒಂದು ಭಾಗವನ್ನೇ ನಮಗೆ ವಾಸಕ್ಕೆ ವ್ಯವಸ್ಥೆ ಮಾಡಿಕೊಟ್ಟರು.

ನಮ್ಮ ಮತ್ತು ಅವರ ಮನೆಯ ನಡುವಿನ ಬಾಗಿಲು ಮುಚ್ಚಲ್ಪಟ್ಟಿತ್ತು. ಕಿಟಕಿ ಮುಚ್ಚಿದರೂ ಬೇಕೆಂದಾಗ ಮಾತಾಡಿಕೊಳ್ಳಲು ಅವರ ಮಡದಿ ಅಥವಾ ಮಗಳು ಕಿಟಕಿ ತೆರೆಯುತ್ತಿದ್ದರು. ದೇರೇಬೈಲಿಗೆ ಬರುವಾಗ ನನ್ನ ಬದುಕಿನ 17 ವರ್ಷಗಳ ಕಾಲದ ಸುಂದರವಾದ ನೆನಪುಗಳೊಂದಿಗೆ ಬಂದೆವು.
 ಕಾಪಿಕಾಡಿನ ಪಾಸ್‌ಹಿಲ್ ರಸ್ತೆಯಿಂದ ಶಾಲೆಯ ಕಡೆಗೆ ಬರುವ ದಾರಿಯಲ್ಲಿ ವಾಸಪ್ಪ ಮೇಸ್ತ್ರಿ ಕಾಂಪೌಂಡು, ಪದ್ಮಪ್ಪಣ್ಣನ ಕಾಂಪೌಂಡುಗಳ ಮುಂದೆ ಈಗ ಕಿರೋಡಿಯನ್ ಕಾಂಪೌಂಡು ಇದೆ. ಅಂದು ಅಲ್ಲಿದ್ದ ಬಿ.ವಿ. ಕಿರೋಡಿಯನ್ ಅವರು ನಾಟಕ ಕಲಾವಿದರಾಗಿದ್ದರು. ಅವರ ಅಮ್ಮ ‘ಸಣ್ಣಮಕ್ಕ’ ನಮ್ಮ ಪಾಲಿಗೆ ಅಜ್ಜಿ ಸಮಾನರು. ಅವರು ಉತ್ತಮ ನಾಟಿವೈದ್ಯೆಯಾಗಿದ್ದರು. ನಾನು ಅಜ್ಜಿ ಅಥವಾ ಅಮ್ಮನೊಂದಿಗೆ ಅವರ ಮನೆಗೆ ಹೋಗುತ್ತಿದ್ದ ನೆನಪು. ಬಿ.ವಿ. ಕಿರೋಡಿಯನ್ ಮಡದಿ ಸರಸ್ವತಿ ಮತ್ತು ನನ್ನ ಅಮ್ಮನಿಗೂ ಸ್ನೇಹವಿತ್ತು. ಬಿ.ವಿ.ಶಿರೋಡಿಯನರ ತಂದೆ ಮತ್ತು ನನ್ನ ಅಜ್ಜನ (ಅಮ್ಮನ ಅಪ್ಪ) ಸ್ನೇಹಿತರಾಗಿದ್ದರು. ಈ ಕಾರಣದಿಂದ ನಮ್ಮ ಕಿರೋಡಿಯನರ ಮನೆಯ ಹಿಂದಿನ ಒಂದೆರಡು ಹಿತ್ತಲುಗಳ ಬಳಿಕ ಒಂದು ಹಿತ್ತಲು ಖರೀದಿಸಿದ್ದರು. ಹಾಗೆಯೇ ಆ ಹಿತ್ತಲಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟಿಸಿದ್ದರು. ಆ ಮನೆಯಲ್ಲಿ ಅಜ್ಜನ ವ್ಯವಹಾರಕ್ಕೆ ಅದು ಸೂಕ್ತವಾಗಿಲ್ಲದ ಕಾರಣ ಅಜ್ಜ ಕಾವೂರು ಕ್ರಾಸ್‌ನಲ್ಲಿದ್ದ ಫೆರ್ನಾಂಡಿಸ್ ಕಾಂಪೌಂಡ್‌ನ ಮನೆಯನ್ನು ಬಿಡಲಿಲ್ಲ.

ಈ ಮನೆಯಲ್ಲಿ ಮದುವೆಯಾದ ಹೊಸದರಲ್ಲಿ ಸ್ವಲ್ಪ ಸಮಯ ನಮ್ಮ ಅಪ್ಪ ಅಮ್ಮ ಇದ್ದರಂತೆ. ಆ ವೇಳೆಗೆ ಗುರುವಪ್ಪ ಮಾಸ್ತರರು ಕೂಡಾ ಹೊಸದಾಗಿ ಮದುವೆಯಾದವರು ಆ ಮನೆಯಲ್ಲೇ ಎರಡು ವಿಭಾಗ ಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದರು. ಮುಂದೆ ಈ ಎರಡೂ ಸಂಸಾರಗಳು ಬೇರೆ ಮನೆ ಮಾಡಿಕೊಂಡರು. ಆಗಲೇ ಆನೆಗುಂಡಿಯ ಹುಲ್ಲಿನ ಛಾವಣಿಯ ಮನೆ ನನ್ನದಾದುದು. ಈ ಮನೆಯಲ್ಲಿದ್ದ ಈ ಇಬ್ಬರು ಶಿಕ್ಷಕರು ಹೋದರೆ ಅಲ್ಲಿಗೆ ಸಂಸ್ಕೃತ ಪಂಡಿತರು ವಾಸ್ತವ್ಯಕ್ಕೆ ಬಂದರು. ಸಂಸ್ಕೃತ ಪಂಡಿತರ ಮನೆಗೆ ಅಮ್ಮನೊಂದಿಗೆ ಹೋಗುತ್ತಿದ್ದೆ. ಯಾಕೆ ಎಂಬ ಕಾರಣ ಗೊತ್ತಿಲ್ಲ. ಸಂಸ್ಕೃತ ಪಂಡಿತರು ಕಚ್ಚೆ ಪಂಚೆ, ಶರ್ಟು, ಶಾಲುಗಳೊಂದಿಗೆ ಮುಂಡಾಸು ಧರಿಸುತ್ತಿದ್ದರು. ನಾನು ಮುಂಡಾಸು ಅಜ್ಜನೆಂದೇ ಕರೆಯುತ್ತಿದ್ದೆ. ಅವರ ಮಡದಿ ವಾಗ್ದೇವಿಯಮ್ಮ ನನಗೆ ಬೆಳ್ಳಿ ಲೋಟದಲ್ಲಿ ಹಾಲು ಕೊಡುತ್ತಿದ್ದರಂತೆ. ಮುಂದೆ ನಾನು ಅವರಲ್ಲಿ ಸಂಸ್ಕೃತ ಕಲಿಯಲು ಹೋದಾಗಲೂ ಬೆಳ್ಳಿ ಲೋಟದಲ್ಲಿ ಹಾಲು ಕೊಡುತ್ತಿದ್ದರು. ನಾನು ಹಾಲು ಕುಡಿದ ಲೋಟ ತೊಳೆದು ಕೊಟ್ಟ ನೆನಪು ಇಲ್ಲ. ಬ್ರಾಹ್ಮಣರ ಮನೆಯಲ್ಲಿ ನಾನು ಒಬ್ಬಳೇ ಆಗಿ ಉಪಾಹಾರ ಸ್ವೀಕರಿಸಿದ ಸಂದರ್ಭ ಇದೇ ಮೊದಲು. ಮುಂದೆ ನಾನು ದೊಡ್ಡವಳಾದಂತೆ ನನ್ನ ಅನೇಕ ಸ್ನೇಹಿತೆಯರ ಮನೆಯಿಂದ ಈ ಸಂಪ್ರದಾಯ ದೂರವಾಗಿತ್ತು ಎನ್ನುವುದು ಸಂತೋಷದ ವಿಚಾರ. ಬಹುಶಃ ನಾವು ಚಿಕ್ಕವರಿರುವಾಗ ಬ್ರಾಹ್ಮಣರ ಮತ್ತು ಅಬ್ರಾಹ್ಮಣರ ನಡುವೆ ಹೊಕ್ಕು ಬಳಕೆ ಇಲ್ಲದುದು ಇದೇ ಕಾರಣಕ್ಕಾಗಿರಬೇಕು. ಪರಿಚಯ, ಸ್ನೇಹ, ಸಲುಗೆ ಹೆಚ್ಚಾದರೆ ಅವರ ಮಡಿವಂತಿಕೆ ಅಡ್ಡಿಯಾಗಿರುವುದರಿಂದ ಅವರು ನಮ್ಮಲ್ಲಿ ಹೆಚ್ಚು ಆತ್ಮೀಯತೆಯನ್ನು ಬೆಳೆಸಿಕೊಳ್ಳಲಾಗುತ್ತಿರಲಿಲ್ಲ ಎಂದು ನನ್ನ ಭಾವನೆ.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News