ವಾಕ್‌ಸ್ವಾತಂತ್ರ್ಯ, ಸೇನೆಯ ಅತಿ ವೈಭವೀಕರಣ, ಮಾಧ್ಯಮಗಳು ಮತ್ತು ಮೋದಿ ಸರಕಾರ
ಭಾಗ-1
ಕರ್ನಾಟಕವೂ ಸೇರಿದಂತೆ ದೇಶದುದ್ದಗಲಕ್ಕೂ ಸಂಘ ಪರಿವಾರದ ಕಾಲಾಳು ಪಡೆಗಳ ಅಟ್ಟಹಾಸ ಮೇರೆ ಮೀರುತ್ತಿರುವುದಕ್ಕೆ ಮೋದಿ ಸರಕಾರದ ಪ್ರೋತ್ಸಾಹ, ಬೆಂಬಲ ಮತ್ತು ಕೃಪಾದೃಷ್ಟಿಗಳೇ ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಭಾರತದಲ್ಲಿ ಇಂದು ಇರುವಂಥಾ ಇಷ್ಟೊಂದು ದೊಡ್ಡ ಪ್ರಮಾಣದ ಅಸಹಿಷ್ಣುತೆಯ ವಾತಾವರಣ ಹಿಂದೆಂದೂ ಇರಲಿಲ್ಲ. 75ರ ತುರ್ತು ಪರಿಸ್ಥಿತಿ ಇದರ ಮುಂದೆ ನಿಸ್ತೇಜವಾಗಿಬಿಡುತ್ತದೆ. ಇವತ್ತಿನ ಅಘೋಷಿತ ತುರ್ತು ಪರಿಸ್ಥಿತಿ ಹೇಗಿದೆ ಎಂದರೆ ಸಂಘಪರಿವಾರದ ಗೂಂಡಾ ಪಡೆಗಳ ಒತ್ತಡಕ್ಕೆ ಮಣಿದರೆ ಸರಿ, ಇಲ್ಲವಾದರೆ ಮೂಗೊತ್ತಿ ಬಾಯ್ಬಿಡಿಸಲಾಗುತ್ತದೆ. ಇತ್ತೀಚೆಗೆ ಇಂತಹ ಒಂದು ತುಂಡು ಸಂಘಟನೆಯ ಪೋಕರಿಗಳು ಸೇರಿ ಮುಂಬೈನಲ್ಲಿ ನಡೆಯುತ್ತಿದ್ದ, ರಿಲಯನ್ಸ್ ಜಿಯೊ ಪ್ರಾಯೋಜಿತ, ‘ಮಾಮಿ’ ಸಿನೆಮಾ ಮೇಳದಲ್ಲಿ ಜಾಗೊ ಹುವಾ ಸವೇರಾ ಎಂಬ ಪಾಕಿಸ್ತಾನಿ ಸಿನೆಮಾವನ್ನು ಪ್ರದರ್ಶಿಸಕೂಡದೆಂದು ಪ್ರತಿಭಟನೆ ನಡೆಸಿದರು. ರಿಲಯನ್ಸ್ ಜಿಯೊ ಮಾಲಕನಾದ ಮುಕೇಶ್ ಅಂಬಾನಿ ಮೋದಿಯ ನಿಕಟವರ್ತಿ ಎಂದ ಮೇಲೆ ಕೇಳಬೇಕೆ. ಮೇಳದ ಸಂಘಟಕರು ಯಾವುದೇ ದೂರು ನೀಡಲು ಹೋಗದೆ ಅಥವಾ ಮಾತುಕತೆಗೆ ಮುಂದಾಗದೆ ಪ್ರದರ್ಶನವನ್ನು ಒಡನೆಯೇ ರದ್ದುಗೊಳಿಸಿದರು!
ಸದ್ಯ ವಿವಾದದ ಸುಳಿಯಲ್ಲಿರುವ ಇನ್ನೊಂದು ಸಿನೆಮಾ ಯೆ ದಿಲ್ ಹೈ ಮುಷ್ಕಿಲ್‌ನಲ್ಲಿ ಪಾಕಿಸ್ತಾನಿ ನಟ ಫವಾದ್ ಖಾನ್‌ನನ್ನು ಬಳಸಿಕೊಳ್ಳಲು ಕರಣ್ ಜೋಹರ್ ನಿರ್ಧರಿಸಿದುದು ಎರಡು ವರ್ಷಗಳ ಹಿಂದೆ ಇದೇ ಮೋದಿ ಪಾಕಿಸ್ತಾನದೊಂದಿಗೆ ಸಂಬಂಧಗಳನ್ನು ವೃದ್ಧಿಸಬೇಕೆಂದು ಹೇಳುತ್ತಿದ್ದ ಕಾಲದಲ್ಲಿ. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಂಬ ಮತ್ತೊಂದು ತುಂಡು ಪಡೆ ಸಿನೆಮಾ ಪ್ರದರ್ಶನವನ್ನು ಬಲಪ್ರಯೋಗದ ಮೂಲಕ ನಿಲ್ಲಿಸುವೆವು ಎಂದು ಬೆದರಿಕೆ ಹಾಕತೊಡಗಿತು. ಇತ್ತೀಚಿನ ವರ್ತಮಾನಗಳ ಪ್ರಕಾರ ನವನಿರ್ಮಾಣ ಸೇನೆ, ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಮತ್ತು ತಯಾರಕರ ನಡುವೆ ಸಂಧಾನ ಮಾತುಕತೆಗಳಾದ ಬಳಿಕ ಕೈಗೊಂಡ ತೀರ್ಮಾನ ಏನೆಂದರೆ ಪಾಕಿಸ್ತಾನಿ ನಟರನ್ನು ಬಳಸಿಕೊಂಡಿರುವ ತಯಾರಕರು ಸೇನಾ ಕಲ್ಯಾಣ ನಿಧಿಗೆ ಐದು ಕೋಟಿ ರೂಪಾಯಿಗಳನ್ನು ನೀಡಲೊಪ್ಪಿದರೆ ಸಿನೆಮಾ ಪ್ರದರ್ಶಿಸ ಬಹುದಂತೆೆ! ಈ ಡೀಲ್‌ನಲ್ಲಿ ಇನ್ನೂ ಯಾರ್ಯಾರಿಗೆ ಪಾಲಿದೆಯೊ ಗೊತ್ತಿಲ್ಲ! ಚಿತ್ರಪ್ರದರ್ಶನಕ್ಕೆ ಸೆನ್ಸಾರ್ ಮಂಡಳಿಯಿಂದ ಅನುಮತಿ, ಕೇಂದ್ರ ಗೃಹಸಚಿವರಿಂದ ಭರವಸೆ ದೊರೆತ ಬಳಿಕವೂ ಮುಖ್ಯಮಂತ್ರಿಯೊಬ್ಬ ಈ ಸಂವಿಧಾನ ವಿರೋಧಿ ಗೂಂಡಾ ಪಡೆ ಪರವಾಗಿ ಇಂತಹ ನೀಚಮಟ್ಟದ ವ್ಯವಹಾರಕ್ಕಿಳಿದಿರುವುದನ್ನು ಏನೆನ್ನಬೇಕು? ಇದಕ್ಕೆ ಈಗಾಗಲೇ ಸೇನಾ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವುದು ಸಹಜವೆ ಆಗಿದೆ. ಏಕೆಂದರೆ ಖಂಡಿತಾ ಈ ರೀತಿ ಸುಲಿಗೆ ಮಾಡಿದ ಹಣವನ್ನು ತೆಗೆದುಕೊಳ್ಳ ಲು ಸ್ವಾಭಿಮಾನವಿರುವ ಯಾವನೇ ಯೋಧ ಒಪ್ಪಲಾರ. ಪ್ರತಿರೋಧಗಳ ನಡುವೆಯೂ ಸೇನೆ ಸಮ್ಮತಿಸಿತೆಂದಾದರೆ ಕೇಸರೀಕರಣ ಅರ್ಥಾತ್ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಕ್ರಿಯೆ ಮತ್ತೊಂದು ಸೋಪಾನ ಏರಿತೆಂದರ್ಥ.
ಸುಮಾರು ಒಂದೆರಡು ವಾರಗಳ ಹಿಂದೆ ಇನ್ನೊಂದು ವಿಲಕ್ಷಣ ಘಟನೆ ನಡೆಯಿತು. ಯುಪಿಎ ಸರಕಾರದಲ್ಲಿ ಹಲವಾರು ವರ್ಷಗಳ ಕಾಲ ಅರ್ಥ ಹಾಗೂ ಗೃಹಸಚಿವರಾಗಿದ್ದ, ಭಾರತದ ಅತ್ಯುತ್ತಮ ಲಾಯರ್‌ಗಳಲ್ಲೊಬ್ಬರೆಂದು ಗುರುತಿಸಲ್ಪಟ್ಟಿರುವ ಪಿ.ಚಿದಂಬರಂ ಜೊತೆ ಸಂದರ್ಶನ ನಡೆಸಿದ ಎನ್‌ಡಿಟಿವಿ, ಬಳಿಕ ಕೊನೆಗಳಿಗೆಯಲ್ಲಿ ಪ್ರಸಾರವನ್ನು ರದ್ದುಗೊಳಿಸಿತು. ರದ್ದತಿಗೆ ಕಾರಣವನ್ನು ಎನ್‌ಡಿಟಿವಿ ಕೊಟ್ಟಿರುವ ಸಮಜಾಯಿಷಿಯೆ ಪರೋಕ್ಷವಾಗಿ ಸೂಚಿಸುತ್ತದೆ: ‘‘ನಮಗೆ ಸಂಪಾದಕೀಯ ಮತ್ತು ಪತ್ರಿಕಾವೃತ್ತಿಯ ನಿಯತ್ತನ್ನು ಉಳಿಸಿಕೊಳ್ಳುವುದು ಮುಖ್ಯ. ನಮ್ಮ ಅಭಿಪ್ರಾಯದಲ್ಲಿ ನಿರ್ದಿಷ್ಟ ದಾಳಿಗಳ ಬಗ್ಗೆ ಪುರಾವೆ ಇಲ್ಲದೆ ರಾಜಕೀಯ ಕೆಸರೆರಚಾಟ ನಡೆಸುವುದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುತ್ತದೆ. ಸಾರ್ವಜನಿಕ ಚರ್ಚೆಯ ಹೆಸರಲ್ಲಿ ಹೊರಬೀಳುತ್ತಿರುವ ಬಾಲಿಶ ಹೇಳಿಕೆಗಳನ್ನೆಲ್ಲಾ ಪ್ರಸಾರ ಮಾಡಬೇಕಾಗಿದೆ ಎಂದು ನಾವು ಭಾವಿಸುವುದಿಲ್ಲ.’’ ಅಂದರೆ ಇಂಗ್ಲಿಷ್ ಟಿವಿ ವಾಹಿನಿಗಳಲ್ಲಿ ಸ್ವಲ್ಪಮಟ್ಟಿಗೆ ನಿಷ್ಪಕ್ಷಪಾತಿ, ಪ್ರಗತಿಪರ ಎಂದೆನಿಸಿದ್ದ ಎನ್‌ಡಿಟಿವಿ ಸಹಿತ ಮೋದಿ ಸರಕಾರಕ್ಕೆ ತಲೆಬಾಗಿ ಮಂಡಿಯೂರಿರುವ ಮಾಧ್ಯಮಗಳ ಸಾಲಿಗೆ ಸೇರಿಬಿಟ್ಟಿದೆ ಎಂದಾಯಿತು. ಇದರ ಹಿಂದೆ ಕೂಡಾ ಹತ್ತಾರು ಚಾನಲ್‌ಗಳ ಒಡೆಯನಾದ ಮುಕೇಶ್ ಅಂಬಾನಿಯ ಕೈವಾಡ ಇರುವಂತಿದೆ. ಏಕೆಂದರೆ 2008ರಲ್ಲಿ ಎನ್‌ಡಿಟಿವಿ ಆರ್ಥಿಕ ದುಸ್ಥಿತಿಯಲ್ಲಿದ್ದಾಗ ಜೀವಾನಿಲ ನೀಡಿ ಅದನ್ನು ಮೇಲಕ್ಕೆತ್ತಿದ್ದೇ ಅಂಬಾನಿ ಎನ್ನಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ; ಸೇನೆಯ ಅತಿ ವೈಭವೀಕರಣ
ಫ್ಯಾಶಿಸ್ಟ್ ಪ್ರಭುತ್ವವೊಂದು ಮೊತ್ತಮೊದಲಿಗೆ ಮಾಡುವ ಕೆಲಸವೆಂದರೆ ಕಲೆ, ಸಂಸ್ಕೃತಿ, ಶಿಕ್ಷಣ ಕ್ಷೇತ್ರಗಳ ಜತೆಗೆ ಪ್ರಜಾಸತ್ತೆಯ ನಾನಾ ಅಂಗಗಳಾದ ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ, ಪೊಲೀಸ್, ಗುಪ್ತಚರ ವಿಭಾಗ, ಸೇನೆ ಮುಂತಾದುವುಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು. ಅದೇ ವೇಳೆ ಪ್ರಗತಿಪರ, ಸಮಾಜಮುಖಿ ಹೋರಾಟಗಾರರನ್ನು ಬಗ್ಗುಬಡಿಯಲು ವಿವಿಧ ಕುತಂತ್ರಗಳನ್ನು ಪ್ರಯೋಗಿಸಲಾಗುತ್ತದೆ. 2014ರ ಮೇ ತಿಂಗಳಿನಿಂದ ಇದನ್ನೆ ಮಾಡುತ್ತಿರುವ ಹಿಂದೂ ರಾಷ್ಟ್ರವಾದಿಗಳು ಈಗಾಗಲೆ ಅನೇಕ ಸಂಘಸಂಸ್ಥೆಗಳನ್ನು ತಮ್ಮ ಕಪಿಮುಷ್ಟಿಯೊಳಗೆ ಇರಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ಆಯೋಗದಂತಹ ಪ್ರಮುಖ ಸಂಸ್ಥೆಗೆ ಭಾರತದ ಪ್ರತಿನಿಧಿಯಾಗಿ ಓರ್ವ ಅನನುಭವಿ ಆರೆಸ್ಸೆಸಿಗನನ್ನು ನೇಮಕ ಮಾಡಲಾಗಿರುವುದು ಇತ್ತೀಚಿನ ಬೆಳವಣಿಗೆೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಕ್ಕೆ ಬಂದರೆ ಮೋದಿ ಸರಕಾರದಡಿ ನಿರ್ಬಂಧಗಳು ದಿನೇ ದಿನೇ ಹೆಚ್ಚುತ್ತಿರುವುದನ್ನು ಕಾಣಬಹುದು. ಜ್ವಲಂತ ಸಮಸ್ಯೆಗಳ ಕುರಿತ ಸಂವಾದ ಕಾರ್ಯಕ್ರಮಗಳಿಗೆ ಎಬಿವಿಪಿ, ವಿಹಿಂಪ, ಬಜರಂಗ ದಳ ಮೊದಲಾದ ಪದಾತಿ ದಳಗಳಿಂದ ಬಲಪ್ರಯೋಗದ ಮೂಲಕ ತಡೆಯೊಡ್ಡಲಾಗುತ್ತಿದೆ. ಉರಿ ದಾಳಿಯ ಬಳಿಕವಂತೂ ರಾಷ್ಟ್ರೀಯತೆ, ದೇಶಪ್ರೇಮ, ದೇಶದ್ರೋಹ ಇತ್ಯಾದಿ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಅನಗತ್ಯ, ಅನಾರೋಗ್ಯಕರ, ಕೆಳಮಟ್ಟದ ಚರ್ಚೆಗಳು ಪ್ರಾರಂಭವಾಗಿವೆ. ದೇಶಪ್ರೇಮದ ಬದಲಾದ ವ್ಯಾಖ್ಯಾನಗಳ ವಾತಾವರಣದಲ್ಲಿ ಸೇನೆಯನ್ನು ಕಣ್ಮುಚ್ಚಿಕೊಂಡು ಹೊಗಳದವರು, ವೈಭವೀಕರಿಸದವರೆಲ್ಲ ದೇಶದ್ರೋಹಿಗಳು ಎಂದಾಗಿದೆ. ಸೇನಾಪಡೆಗಳ ವಿಶೇಷಾಧಿಕಾರ ಕಾಯ್ದೆಯ ದುರ್ಬಳಕೆ, ರೇಪ್, ಇನಾಮಿಗಾಗಿ ಎನ್‌ಕೌಂಟರ್ ಮೊದಲಾದ ದುಷ್ಕೃತ್ಯಗಳನ್ನು ಪ್ರಶ್ನಿಸುವುದು ದೇಶದ್ರೋಹವೆಂದು ಬಿಂಬಿಸಲಾಗುತ್ತಿದೆ. ಅಸಲಿಗೆ ವಿಷಯ ಏನೆಂದರೆ ಹಿಂದೂ ರಾಷ್ಟ್ರ ಎಂಬ ಫ್ಯಾಶಿಸ್ಟ್, ಸರ್ವಾಧಿಕಾರಿ ಪ್ರಭುತ್ವದ ಸ್ಥಾಪನೆ ಹಾಗೂ ಮುಂದುವರಿಕೆಗೆ ಸೇನೆಯ ಬೆಂಬಲ ಬೇಕೇ ಬೇಕು. ಅದಿಲ್ಲವಾದರೆ ಮುಂದೊಂದು ದಿನ ಸರಕಾರದ ವಿರುದ್ಧ ದಂಗೆಯೇಳಲಿರುವ ಜನರನ್ನು ನಿಯಂತ್ರಿಸುವುದು ಅಸಾಧ್ಯ. ಸೇನೆಯನ್ನು ಕೇಸರೀಕರಣಗೊಳಿಸುವ ಯತ್ನದ ಭಾಗವಾಗಿ ತುತ್ತೂರಿ ಮಾಧ್ಯಮಗಳ ಮುಖಾಂತರ ಸೇನೆಯನ್ನು, ಸೈನಿಕರನ್ನು ಅತಿಯಾಗಿ ವೈಭವೀಕರಿಸುವುದರ ಹಿಂದಿನ ಗುಟ್ಟು ಇದೇ ಆಗಿದೆ.
ಆರೆಸ್ಸೆಸ್ ಮುಖ್ಯಸ್ಥರು ಆತ್ಮರತಿ, ಪ್ರಚಾರದ ತೆವಲು ಮತ್ತು ಸರ್ವಾಧಿಕಾರಿ ಪ್ರವೃತ್ತಿಗಳುಳ್ಳ ನರೇಂದ್ರ ಮೋದಿಯನ್ನೆ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿರುವುದರ ಹಿಂದೆ ನಿರ್ದಿಷ್ಟ ಲೆಕ್ಕಾಚಾರಗಳಿವೆ. ಇಂತಹ ವ್ಯಕ್ತಿಗೆ ಅತಿಮಾನುಷನ ಇಮೇಜು ನೀಡುವ ಮೂಲಕ ಭಾರತದ ಅನಭಿಷಿಕ್ತ ದೊರೆಯಾಗಿ ದೇಶವನ್ನಾಳಲು ಆತನಿಗಿಂತ ಸಮರ್ಥರು ಇನ್ಯಾರೂ ಇಲ್ಲವೆಂಬ ಭಾವನೆಯನ್ನು ಬಿತ್ತುವುದು ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ನಿರ್ಮಾಣದ ಅಜೆಂಡಾದ ಒಂದು ಅತಿಮುಖ್ಯ ಅಂಶವಾಗಿದೆ. ಆದುದರಿಂದಲೆ ಮೋದಿಯ ಸುತ್ತ ನಾನಾ ಕಟ್ಟುಕತೆಗಳನ್ನು ಹೆಣೆಯಲಾಗುತ್ತಿದೆ.